Social Welfare
ಬಜೆಟ್ 2026-27 ಸರಣಿ
ಭಾರತವನ್ನು ಜಾಗತಿಕ ಬಯೋಫಾರ್ಮಾ ಕೇಂದ್ರವನ್ನಾಗಿ ಪರಿವರ್ತಿಸುವುದು
Posted On:
02 FEB 2026 2:32PM
|
ಪ್ರಮುಖ ಮಾರ್ಗಸೂಚಿಗಳು
- ಕೇಂದ್ರ ಬಜೆಟ್ 2026–27ರಲ್ಲಿ ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಐದು ವರ್ಷಗಳ ಅವಧಿಗೆ 10,000 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆಯು, ಭಾರತದ ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
- ಈ ಉಪಕ್ರಮವು ಭಾರತವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರುವ ಬಯೋಫಾರ್ಮಾ ಉದ್ಯಮವನ್ನಾಗಿ ಪರಿವರ್ತಿಸುವ ಮತ್ತು ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ಮಾರುಕಟ್ಟೆಯಲ್ಲಿ ಶೇಕಡಾ 5 ರಷ್ಟು ಪಾಲನ್ನು ಹೊಂದುವ ಗುರಿಗೆ ಪೂರಕವಾಗಿದೆ.
- ಕಳೆದ ಕೆಲವು ವರ್ಷಗಳಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಬಯೋಫಾರ್ಮಾ ಮಿಷನ್ ಮತ್ತು ಇತರ ಯೋಜನೆಗಳು ಸಹ ಇದೇ ಗುರಿಯನ್ನು ತಲುಪಲು ಕಾರ್ಯನಿರ್ವಹಿಸುತ್ತಿವೆ.
|
ಪೀಠಿಕೆ
ಕೇಂದ್ರ ಬಜೆಟ್ 2026-27 ಭಾರತದ ಆರೋಗ್ಯ ಮತ್ತು ಉತ್ಪಾದನಾ ಕಾರ್ಯತಂತ್ರದಲ್ಲಿ ಬಯೋಫಾರ್ಮಾ ಮತ್ತು ಬಯೋಲಾಜಿಕ್ ಔಷಧಗಳನ್ನು ಕೇಂದ್ರಬಿಂದುವಾಗಿಸುವ ಮೂಲಕ, ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ದೃಷ್ಟಿಕೋನದಲ್ಲಿ ಒಂದು ನಿರ್ಣಾಯಕ ಬದಲಾವಣೆಯನ್ನು ಗುರುತಿಸಿದೆ. ಇದು ಭಾರತವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರುವ ಬಯೋಫಾರ್ಮಾ ಉದ್ಯಮವನ್ನಾಗಿ ಪರಿವರ್ತಿಸುವ ಮತ್ತು ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ಮಾರುಕಟ್ಟೆಯಲ್ಲಿ ಶೇಕಡಾ 5 ರಷ್ಟು ಪಾಲನ್ನು ಹೊಂದುವ ಭಾರತ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿದೆ.
ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಹೊರೆ ಮತ್ತು ಬಯೋಲಾಜಿಕ್ಸ್ ಹಾಗೂ ಬಯೋಸಿಮಿಲರ್‌ಗಳ ಮೇಲೆ ಜಾಗತಿಕ ಅವಲಂಬನೆ ಹೆಚ್ಚುತ್ತಿರುವುದನ್ನು ಮನಗಂಡಿರುವ ಈ ಬಜೆಟ್, ಬಯೋಫಾರ್ಮಾವನ್ನು ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮೌಲ್ಯಯುತ ಹಾಗೂ ಭವಿಷ್ಯದ ಪ್ರಮುಖ ವಿಭಾಗವೆಂದು ಗುರುತಿಸಿದೆ.
ಬಯೋಫಾರ್ಮಾವು ಮಾನವ ಜೀವಕೋಶಗಳು, ಶಿಲೀಂಧ್ರಗಳು ಅಥವಾ ಸೂಕ್ಷ್ಮಜೀವಿಗಳಂತಹ ಜೈವಿಕ ಜೀವಿಗಳ ಮೂಲಕ ಚಿಕಿತ್ಸೆಗಳ ಉತ್ಪಾದನೆ, ತಯಾರಿಕೆ ಅಥವಾ ಹೊರತೆಗೆಯುವಿಕೆಯನ್ನು ಒಳಗೊಂಡಿರುತ್ತದೆ. ಲಸಿಕೆಗಳು, ಆಂಟಿಬಾಡಿ ಚಿಕಿತ್ಸೆಗಳು, ಜೀನ್ ಥೆರಪಿಗಳು (ಜೀನ್ ಚಿಕಿತ್ಸೆ), ಸೆಲ್ ಇಂಪ್ಲಾಂಟ್‌ಗಳು, ಆಧುನಿಕ ಇನ್ಸುಲಿನ್ ಮತ್ತು ರಿಕಾಂಬಿನೆಂಟ್ ಪ್ರೋಟೀನ್ ಔಷಧಗಳು ಬಯೋಫಾರ್ಮಾಸ್ಯುಟಿಕಲ್ಸ್‌ಗಳಿಗೆ ಕೆಲವು ಉದಾಹರಣೆಗಳಾಗಿವೆ.
ಕೇಂದ್ರ ಬಜೆಟ್ 2025-26: ಬಯೋಫಾರ್ಮಾ ಶಕ್ತಿ ಉಪಕ್ರಮ
ಬಯೋಫಾರ್ಮಾ ವಲಯಕ್ಕೆ ಸಂಬಂಧಿಸಿದ ಪ್ರಮುಖ ಬಜೆಟ್ ಘೋಷಣೆಗಳು:
- ಐದು ವರ್ಷಗಳ ಅವಧಿಗೆ 10,000 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಮೀಸಲಾದ ರಾಷ್ಟ್ರೀಯ ಉಪಕ್ರಮವಾದ 'ಬಯೋಫಾರ್ಮಾ ಶಕ್ತಿ' ಅನ್ನು ಪ್ರಾರಂಭಿಸಲಾಗಿದೆ. ಇದು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಿಗಾಗಿ ಭಾರತದ ಸಮಗ್ರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವನ್ನು ಹೆಚ್ಚಿನ ಮೌಲ್ಯದ ಬಯೋಫಾರ್ಮಾಸ್ಯುಟಿಕಲ್ ಉತ್ಪನ್ನಗಳು ಮತ್ತು ಔಷಧಿಗಳ ದೇಶೀಯ ಅಭಿವೃದ್ಧಿ ಹಾಗೂ ತಯಾರಿಕೆಯನ್ನು ಬೆಂಬಲಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಬಯೋಲಾಜಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
- ಮೂರು ಹೊಸ ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಏಳು ಎನ್‌ಐಪಿಆರ್ ಗಳ ಉನ್ನತೀಕರಣದ ಮೂಲಕ ಬಯೋಫಾರ್ಮಾ-ಕೇಂದ್ರಿತ ಜಾಲವನ್ನು ವಿಸ್ತರಿಸುವುದು ಮತ್ತು ಬಲಪಡಿಸುವುದು. ಬಯೋಫಾರ್ಮಾ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ನಿಯಂತ್ರಣದಲ್ಲಿ ಉನ್ನತ ಪರಿಣತಿ ಹೊಂದಿರುವ ಮಾನವ ಸಂಪನ್ಮೂಲದ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
- ದೇಶಾದ್ಯಂತ 1,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ಕ್ಲಿನಿಕಲ್ ಟ್ರಯಲ್ (ವೈದ್ಯಕೀಯ ಪರೀಕ್ಷೆ) ಸೈಟ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯೊಂದಿಗೆ ಬೃಹತ್ ಪ್ರಮಾಣದ ವೈದ್ಯಕೀಯ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು. ಇದು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಿಗಾಗಿ ಸುಧಾರಿತ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸಲು ಭಾರತದ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಇದು ನಾವೀನ್ಯತೆಯನ್ನು ವೇಗಗೊಳಿಸುತ್ತದೆ ಮತ್ತು ನೈತಿಕ, ಉತ್ತಮ ಗುಣಮಟ್ಟದ ಹಾಗೂ ಸಮರ್ಥ ಕ್ಲಿನಿಕಲ್ ಪರೀಕ್ಷೆಗಳಿಗಾಗಿ ಭಾರತವನ್ನು ಜಾಗತಿಕವಾಗಿ ನೆಚ್ಚಿನ ತಾಣವನ್ನಾಗಿ ರೂಪಿಸುತ್ತದೆ.
- ಬಯೋಲಾಜಿಕ್ಸ್‌ಗಳಿಗಾಗಿ ನಿಯಂತ್ರಣ ಚೌಕಟ್ಟನ್ನು ಬಲಪಡಿಸುವುದು. ಇದರಲ್ಲಿ ವಿಶೇಷ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸೇರಿಸಿಕೊಳ್ಳುವ ಮೂಲಕ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದೆ. ನಿಯಂತ್ರಕ ದಕ್ಷತೆಯನ್ನು ಸುಧಾರಿಸುವುದು, ಅನುಮೋದನೆ ನೀಡುವ ಸಮಯವನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಹೊಂದಿಸುವುದು ಮತ್ತು ಸಂಕೀರ್ಣ ಬಯೋಫಾರ್ಮಾಸ್ಯುಟಿಕಲ್ ಉತ್ಪನ್ನಗಳ ತ್ವರಿತ ಮೌಲ್ಯಮಾಪನವನ್ನು ಸಕ್ರಿಯಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಇದು ಏಕೆ ಮುಖ್ಯ?
ಈ ಬಜೆಟ್ ಉತ್ಪಾದನಾ ಪ್ರಮಾಣ, ಪರಿಣಿತ ಮಾನವ ಸಂಪನ್ಮೂಲ, ಕ್ಲಿನಿಕಲ್ ಸಂಶೋಧನಾ ಸಾಮರ್ಥ್ಯ ಮತ್ತು ನಿಯಂತ್ರಕ ವಿಶ್ವಾಸಾರ್ಹತೆಯನ್ನು ಒಂದೇ ಚೌಕಟ್ಟಿನಲ್ಲಿ ಬೆಸೆದಿದೆ. ಇದು ಭಾರತವನ್ನು ಕೇವಲ ಕಡಿಮೆ ವೆಚ್ಚದ ಜೆನೆರಿಕ್ ಔಷಧಿಗಳ ತಯಾರಕ ರಾಷ್ಟ್ರ ಎಂಬ ಸ್ಥಾನದಿಂದ, ಉತ್ತಮ ಗುಣಮಟ್ಟದ ಹಾಗೂ ನಾವೀನ್ಯತೆ ಆಧಾರಿತ ಬಯೋಫಾರ್ಮಾಸ್ಯುಟಿಕಲ್ ಉತ್ಪನ್ನಗಳ ಜಾಗತಿಕ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಸ್ಪಷ್ಟ ಉದ್ದೇಶವನ್ನು ಸೂಚಿಸುತ್ತದೆ.
ಬಜೆಟ್‌ನ ಈ ಉತ್ತೇಜನವು ಜಾಗತಿಕ ಬಯೋಫಾರ್ಮಾ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಭಾರತಕ್ಕೆ ಭದ್ರ ಬುನಾದಿಯನ್ನು ಒದಗಿಸುವುದಲ್ಲದೆ, ದೇಶೀಯವಾಗಿ ಸುಧಾರಿತ ಮತ್ತು ಕೈಗೆಟುಕುವ ಬೆಲೆಯ ಬಯೋಲಾಜಿಕ್ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡುತ್ತದೆ.
ಬಯೋಫಾರ್ಮಾ ಎಂದರೇನು?
ಇತ್ತೀಚಿನ ವರ್ಷಗಳಲ್ಲಿ, ಔಷಧಗಳು ಸಾಂಪ್ರದಾಯಿಕ ರಾಸಾಯನಿಕ ಮಾದರಿಗಳಿಂದ ಜೀವವಿಜ್ಞಾನವನ್ನೇ ಬಳಸಿ ಅಭಿವೃದ್ಧಿಪಡಿಸುವ ಚಿಕಿತ್ಸಾ ಪದ್ಧತಿಗಳತ್ತ ಹೆಚ್ಚು ವಾಲುತ್ತಿವೆ. ಈ ಬದಲಾವಣೆಯು ಬಯೋಫಾರ್ಮಾವನ್ನು ಆಧುನಿಕ ಆರೋಗ್ಯ ರಕ್ಷಣೆಯ ಮುಂಚೂಣಿಗೆ ತಂದಿದೆ. ಬಯೋಫಾರ್ಮಾ ಅಥವಾ ಬಯೋಫಾರ್ಮಾಸ್ಯುಟಿಕಲ್ಸ್ ಎನ್ನುವುದು ಕೇವಲ ರಾಸಾಯನಿಕ ಸಂಶ್ಲೇಷಣೆಯನ್ನು ಅವಲಂಬಿಸದೆ, ಜೀವಂತ ಜೈವಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಔಷಧಿಗಳನ್ನು ಅಭಿವೃದ್ಧಿಪಡಿಸುವ ಮತ್ತು ತಯಾರಿಸುವ ಔಷಧೀಯ ಉದ್ಯಮದ ಭಾಗವಾಗಿದೆ.

ಸರಳವಾಗಿ ಹೇಳುವುದಾದರೆ, ಬಯೋಫಾರ್ಮಾ ಔಷಧಗಳನ್ನು ಜೀವಕೋಶಗಳು, ಸೂಕ್ಷ್ಮಜೀವಿಗಳು ಅಥವಾ ಇತರ ಜೈವಿಕ ಪದಾರ್ಥಗಳೊಂದಿಗೆ ಕೆಲಸ ಮಾಡುವ ಮೂಲಕ ತಯಾರಿಸಲಾಗುತ್ತದೆ. ಇವುಗಳಲ್ಲಿ ಮಾನವ ಅಥವಾ ಪ್ರಾಣಿಗಳ ಜೀವಕೋಶಗಳು, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಅಥವಾ ಚಿಕಿತ್ಸಕ ವಸ್ತುಗಳನ್ನು ಬೆಳೆಸಲು ಅಥವಾ ಉತ್ಪಾದಿಸಲು ಬಳಸುವ ಅಂತಹುದೇ ಜೈವಿಕ ವೇದಿಕೆಗಳು ಸೇರಿರಬಹುದು. ಜೈವಿಕ ತಂತ್ರಜ್ಞಾನ ಆಧಾರಿತ ಸಂಶೋಧನಾ ವಿಧಾನಗಳನ್ನು ಬಳಸಿಕೊಂಡು, ಈ ಜೀವಂತ ವ್ಯವಸ್ಥೆಗಳು ರೋಗಗಳನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಅಥವಾ ಚಿಕಿತ್ಸೆ ನೀಡುವ ಔಷಧಿಗಳನ್ನು ಉತ್ಪಾದಿಸುವಂತೆ ಮಾರ್ಗದರ್ಶನ ನೀಡಲಾಗುತ್ತದೆ. ಇವು ಜೈವಿಕ ಪ್ರಕ್ರಿಯೆಗಳ ಮೂಲಕ ಸೃಷ್ಟಿಯಾಗುವುದರಿಂದ, ಬಯೋಫಾರ್ಮಾ ಉತ್ಪನ್ನಗಳು ಹೆಚ್ಚಾಗಿ ಸಾಂಪ್ರದಾಯಿಕ ಔಷಧಿಗಳಿಗಿಂತ ಹೆಚ್ಚು ಸಂಕೀರ್ಣ ಮತ್ತು ನಿರ್ದಿಷ್ಟ ಗುರಿಯನ್ನು ಹೊಂದಿದ್ದು, ಜೈವಿಕ ಪಥಗಳೊಂದಿಗೆ ಹೆಚ್ಚು ನಿಖರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತವೆ.
ಲಸಿಕೆಗಳು, ಚಿಕಿತ್ಸಕ ಪ್ರೋಟೀನ್‌ಗಳು, ಬಯೋಸಿಮಿಲರ್‌ಗಳು ಮತ್ತು ಇತರ ಸುಧಾರಿತ ಬಯೋಲಾಜಿಕ್ ಚಿಕಿತ್ಸೆಗಳು ಸೇರಿದಂತೆ ಇಂದು ವ್ಯಾಪಕವಾಗಿ ಬಳಸಲಾಗುವ ಕೆಲವು ಆಧುನಿಕ ಔಷಧಗಳು ಬಯೋಫಾರ್ಮಾ ಅಡಿಯಲ್ಲಿ ಬರುತ್ತವೆ. ಈ ಉತ್ಪನ್ನಗಳು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಮತ್ತು ವೈದ್ಯಕೀಯ ಆರೈಕೆಯಲ್ಲಿ, ವಿಶೇಷವಾಗಿ ಸಾಂಕ್ರಾಮಿಕ ರೋಗಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ಸಾಂಪ್ರದಾಯಿಕ ಔಷಧಗಳು ಕಡಿಮೆ ಪರಿಣಾಮಕಾರಿಯಾಗಿರುವ ಅಸ್ವಸ್ಥತೆಗಳಿಗೆ ಅತ್ಯಗತ್ಯವಾಗಿವೆ. ಈ ಉದ್ಯಮದ ಅಭಿವೃದ್ಧಿಗಾಗಿ ಭಾರತ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ವಿಕಸನಗೊಳ್ಳುತ್ತಿರುವ ಈ ಬಯೋಫಾರ್ಮಾ ಪರಿಸರ ವ್ಯವಸ್ಥೆ ಮತ್ತು ಉದ್ದೇಶಿತ ನೀತಿ ಬೆಂಬಲವು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಬಯೋಫಾರ್ಮಾ ಕೇಂದ್ರವಾಗಿ ಹೊರಹೊಮ್ಮುವಂತೆ ಮಾಡುವ ಅಡಿಪಾಯವನ್ನು ಬಲಪಡಿಸುತ್ತಿವೆ.
ಭಾರತದ ಬಯೋಫಾರ್ಮಾ ವಲಯವನ್ನು ಬಲಪಡಿಸಲು ಸರ್ಕಾರದ ಉಪಕ್ರಮಗಳು
ಭಾರತೀಯ ಔಷಧ ಉದ್ಯಮವು ಈಗ ಕೇವಲ ಕಡಿಮೆ ವೆಚ್ಚದ ಜೆನೆರಿಕ್ ಔಷಧಿಗಳನ್ನು ತಯಾರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಬಯೋಫಾರ್ಮಾಸ್ಯುಟಿಕಲ್ಸ್ ಮತ್ತು ಬಯೋಸಿಮಿಲರ್‌ಗಳಂತಹ ಸಂಕೀರ್ಣ, ಹೆಚ್ಚಿನ ಮೌಲ್ಯದ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದೆ. ದೇಶವು ಕೈಗೆಟುಕುವ ಬೆಲೆಯ, ಉತ್ತಮ ಗುಣಮಟ್ಟದ ಔಷಧಿಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ್ದು, ಉತ್ಪಾದನಾ ಪ್ರಮಾಣದಲ್ಲಿ 3ನೇ ಸ್ಥಾನವನ್ನು ಮತ್ತು ಮೌಲ್ಯದಲ್ಲಿ 14ನೇ ಸ್ಥಾನವನ್ನು ಹೊಂದಿದೆ.
ಕಳೆದ ಹಲವಾರು ವರ್ಷಗಳಲ್ಲಿ, ಭಾರತ ಸರ್ಕಾರವು ಸಂಶೋಧನೆ ಮತ್ತು ಆರಂಭಿಕ ಹಂತದ ಉತ್ಪನ್ನ ಅಭಿವೃದ್ಧಿಯಿಂದ ಹಿಡಿದು ಉತ್ಪಾದನೆ, ನಾವೀನ್ಯತೆ ಮತ್ತು ವಾಣಿಜ್ಯೀಕರಣದವರೆಗೆ ಸಮಗ್ರ ಪೂರೈಕೆ ಸರಪಳಿಯಾದ್ಯಂತ ಬಯೋಫಾರ್ಮಾಸ್ಯುಟಿಕಲ್ ವಲಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹಲವಾರು ನೀತಿ ಉಪಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿದೆ.

ಸರ್ಕಾರ, ಶೈಕ್ಷಣಿಕ ವಲಯ, ಉದ್ದಿಮೆಗಳು ಮತ್ತು ಸ್ಟಾರ್ಟ್-ಅಪ್‌ಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವಿವಿಧ ಉಪಕ್ರಮಗಳು ಗಮನಹರಿಸುತ್ತಿವೆ. ಹಂಚಿಕೆಯ ಮೂಲಸೌಕರ್ಯಗಳನ್ನು ನಿರ್ಮಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಇವುಗಳ ಗುರಿಯಾಗಿದ್ದು, ಭಾರತವನ್ನು ಜಾಗತಿಕ ಬಯೋಫಾರ್ಮಾ ಮತ್ತು ಜೈವಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ.
ರಾಷ್ಟ್ರೀಯ ಬಯೋಫಾರ್ಮಾ ಮಿಷನ್– “ಇನ್ನೋವೇಟ್ ಇನ್ ಇಂಡಿಯಾ” ರಾಷ್ಟ್ರೀಯ ಬಯೋಫಾರ್ಮಾ ಮಿಷನ್ – ಇನ್ನೋವೇಟ್ ಇನ್ ಇಂಡಿಯಾ ಅನ್ನು 2017ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು. ಇದರ ಉದ್ದೇಶವು 2025ರ ವೇಳೆಗೆ ಭಾರತವನ್ನು 100 ಬಿಲಿಯನ್ ಡಾಲರ್ ಮೌಲ್ಯದ ಮುಂಚೂಣಿಯ ಜಾಗತಿಕ ಬಯೋಟೆಕ್ ಉದ್ಯಮವನ್ನಾಗಿ ಪರಿವರ್ತಿಸುವುದು ಮತ್ತು ಜಾಗತಿಕ ಫಾರ್ಮಾಸ್ಯುಟಿಕಲ್ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಪಾಲನ್ನು ಹೊಂದುವುದಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 1,500 ಕೋಟಿ ರೂಪಾಯಿಗಳು. ಇದು ವಿಶ್ವಬ್ಯಾಂಕ್‌ನಿಂದ ಸಹ-ಧನಸಹಾಯವನ್ನು ಪಡೆದಿದೆ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿರುವ 'ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್' ಮೂಲಕ ಜಾರಿಗೊಳಿಸಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕಾಯಿಲೆಗಳ ಹೊರೆಯನ್ನು ಎದುರಿಸಲು ಹೊಸ ಲಸಿಕೆಗಳು, ಬಯೋ-ಥೆರಪಿಟಿಕ್ಸ್, ರೋಗನಿರ್ಣಯ ಉಪಕರಣಗಳು ಮತ್ತು ವೈದ್ಯಕೀಯ ಸಾಧನಗಳ ಅಭಿವೃದ್ಧಿಗೆ ಈ ಮಿಷನ್ ಗಮನಹರಿಸುತ್ತದೆ. ಔಷಧಿಗಳನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಕೂಡ ಈ ಮಿಷನ್‌ನ ಗುರಿಯಾಗಿದೆ.
ಎನ್‌ಬಿಎಂ ಪ್ರಸ್ತುತ 101 ಯೋಜನೆಗಳನ್ನು ಬೆಂಬಲಿಸುತ್ತಿದ್ದು, ಇದರಲ್ಲಿ 150ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು 30 ಎಂಎಎಸ್‌ಎಂಇಗಳು ಪಾಲ್ಗೊಂಡಿವೆ. ಇದು 304 ವಿಜ್ಞಾನಿಗಳು ಮತ್ತು ಸಂಶೋಧಕರು ಸೇರಿದಂತೆ ಒಟ್ಟು 1,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಹೆಚ್ಚುವರಿಯಾಗಿ, 10,000 ಜೀನೋಮ್‌ಗಳ ಸೀಕ್ವೆನ್ಸಿಂಗ್ ಒಳಗೊಂಡಿರುವ 'ಜೀನೋಮ್ ಇಂಡಿಯಾ ಕಾರ್ಯಕ್ರಮ'ವು ಭವಿಷ್ಯದ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯತಂತ್ರಗಳನ್ನು (ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಎರಡರಲ್ಲೂ) ರೂಪಿಸುವ ನಿರೀಕ್ಷೆಯಿದೆ.
ಇದು ಉದ್ದಿಮೆಗಳು, ಶೈಕ್ಷಣಿಕ ವಲಯ ಮತ್ತು ಸರ್ಕಾರವನ್ನು ಒಗ್ಗೂಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಹ್ಯೂಮನ್ ಪ್ಯಾಪಿಲೋಮವೈರಸ್ ಮತ್ತು ಡೆಂಗ್ಯೂಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಕ್ಯಾನ್ಸರ್, ಮಧುಮೇಹ ಮತ್ತು ರುಮಟಾಯ್ಡ್ ಸಂಧಿವಾತಕ್ಕೆ ಬಯೋಸಿಮಿಲರ್‌ಗಳನ್ನು ಅಭಿವೃದ್ಧಿಪಡಿಸುವುದು, ಜೊತೆಗೆ ವೈದ್ಯಕೀಯ ಸಾಧನಗಳು ಮತ್ತು ರೋಗನಿರ್ಣಯ ಉಪಕರಣಗಳ ಅಭಿವೃದ್ಧಿ ಈ ಮಿಷನ್‌ನ ಆರಂಭಿಕ ಆದ್ಯತೆಗಳಾಗಿವೆ.
ಭಾರತದ ಆರೋಗ್ಯ ನಾವೀನ್ಯತೆ ಪರಿಸರ ವ್ಯವಸ್ಥೆಯ ವೇಗವರ್ಧಕವಾಗಿ ಎನ್‌ಬಿಎಂ
ವೈಜ್ಞಾನಿಕ ನಾವೀನ್ಯತೆಯನ್ನು ಕೈಗೆಟುಕುವ ಆರೋಗ್ಯ ಪರಿಹಾರಗಳಾಗಿ ಪರಿವರ್ತಿಸುತ್ತಿರುವ ಹೊಸ ತಲೆಮಾರಿನ ಬಯೋಟೆಕ್ ಉದ್ಯಮಿಗಳ ಉದಯವು ಈ ಮಿಷನ್‌ನ ಪ್ರಮುಖ ಫಲಿತಾಂಶವಾಗಿದೆ.
ಇದಕ್ಕೊಂದು ಉದಾಹರಣೆ ಎಂದರೆ ಅರ್ಜುನ್ ಅರುಣಾಚಲಂ. ಇವರ ಬೆಂಗಳೂರು ಮೂಲದ ಸ್ಟಾರ್ಟ್-ಅಪ್ 'ವೋಕ್ಸೆಲ್ ಗ್ರಿಡ್ಸ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್', ಜಾಗತಿಕ ಗುಣಮಟ್ಟಕ್ಕೆ ಸರಿಸಾಟಿಯಾದ ಎಂಆರ್ಐ ಸ್ಕ್ಯಾನರ್ ಅನ್ನು ಆಮದು ಮಾಡಿದ ಯಂತ್ರಗಳ ಬೆಲೆಯ ಅತ್ಯಲ್ಪ ಭಾಗದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತಂದಿದೆ. ಈ ಹಗುರವಾದ ಮತ್ತು ಇಂಧನ ದಕ್ಷತೆಯ ಸ್ಕ್ಯಾನರ್‌ಗಳು ಈಗಾಗಲೇ ಮುಂಬೈ ಮತ್ತು ಅಸ್ಸಾಂನ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಬಳಕೆಯಲ್ಲಿದ್ದು, ಸುಧಾರಿತ ರೋಗನಿರ್ಣಯದ ಲಭ್ಯತೆಯನ್ನು ಉತ್ತಮಗೊಳಿಸಿವೆ. ಈ ಮಿಷನ್‌ಗೆ ಆರಂಭಿಕ ಧನಸಹಾಯವು ಟಾಟಾ ಟ್ರಸ್ಟ್ಸ್‌ನಿಂದ ಲಭಿಸಿತ್ತು. ಆದರೆ ಇವರಿಗೆ ಅತ್ಯಂತ ಅಗತ್ಯವಾಗಿದ್ದ 12.4 ಕೋಟಿ ರೂಪಾಯಿಗಳ ಧನಸಹಾಯವು ಬಿಐಆರ್‌ಎಸಿ ನಿಂದ ದೊರೆಯಿತು.

ಅದೇ ರೀತಿ, ಚೆನ್ನೈ ಮೂಲದ 'ಲೆವಿಮ್ ಲೈಫ್‌ಟೆಕ್ ಪ್ರೈವೇಟ್ ಲಿಮಿಟೆಡ್'ನ ಜತಿನ್ ವಿಮಲ್ ಅವರು ಟೈಪ್ 2 ಮಧುಮೇಹಕ್ಕಾಗಿ ಭಾರತದ ಮೊದಲ 'ಲಿರಾಗ್ಲುಟೈಡ್' ಬಯೋಸಿಮಿಲರ್ ಅನ್ನು ತಯಾರಿಸಿದ್ದಾರೆ. ಇದರ ಬೆಲೆ ಆಮದು ಮಾಡಿಕೊಂಡ ಔಷಧದ ಬೆಲೆಗಿಂತ ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆ ಇದೆ. ಈ ಮಿಷನ್ ಅವರ ಕ್ಲಿನಿಕಲ್ ಪರೀಕ್ಷಾ ವೆಚ್ಚದ ಶೇಕಡಾ 85 ರಷ್ಟನ್ನು ಭರಿಸಿದೆ.
ಈ ಮಿಷನ್ ಬೆಂಬಲಿತ ಖಾಸಗಿ ಸಂಸ್ಥೆಗಳು ಯುಟಿಐ, ನ್ಯುಮೋನಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ಮತ್ತು ಹೆಪಟೈಟಿಸ್ ಇ ಅಂತಹ ಕಾಯಿಲೆಗಳಿಗೆ ಪ್ರತಿಜೀವಕಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಡಿಎನ್‌ಎ ಆಧಾರಿತ ಕೋವಿಡ್-19 ಲಸಿಕೆ 'ZyCoV-D' ಗೂ ಈ ಮಿಷನ್ ಬೆಂಬಲ ನೀಡಿತ್ತು.
ರಾಷ್ಟ್ರೀಯ ಬಯೋಫಾರ್ಮಾ ಮಿಷನ್, 2014 ರಿಂದ ಈವರೆಗೆ ಆರಂಭವಾಗಿರುವ ಸುಮಾರು 10,000 ಜೈವಿಕ-ಆಧಾರಿತ ಸ್ಟಾರ್ಟ್-ಅಪ್‌ಗಳಲ್ಲಿ ಹಲವು ಸಂಸ್ಥೆಗಳಿಗೆ ಆರಂಭಿಕ ಹಂತದ ಧನಸಹಾಯವನ್ನು ನೀಡಿದೆ. ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಸುಮಾರು 100 ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಿದೆ.
7,000 ಕ್ಕೂ ಹೆಚ್ಚು ಪಾಲ್ಗೊಳ್ಳುವವರಿಗೆ (ಅದರಲ್ಲಿ ಶೇಕಡಾ 45 ರಷ್ಟು ಮಹಿಳೆಯರು) ಜಾಗತಿಕ ನಿಯಂತ್ರಣ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ತರಬೇತಿ ನೀಡಲಾಗಿದೆ; ಏಳು ಪ್ರಾದೇಶಿಕ ತಂತ್ರಜ್ಞಾನ ವರ್ಗಾವಣೆ ಕಚೇರಿಗಳು 850ಕ್ಕೂ ಹೆಚ್ಚು ಐಪಿ ಫೈಲಿಂಗ್‌ಗಳನ್ನು ಮತ್ತು ಸುಮಾರು 120 ತಂತ್ರಜ್ಞಾನ ವರ್ಗಾವಣೆಗಳನ್ನು ನಿರ್ವಹಿಸಿವೆ.
ಕ್ಯಾನ್ಸರ್, ಸಂಧಿವಾತ, ಮಧುಮೇಹ ಮತ್ತು ನೇತ್ರವಿಜ್ಞಾನದ ಕ್ಷೇತ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, NBM ಸುಮಾರು 8 ಲಕ್ಷ ಸ್ವಯಂಸೇವಕರ ದತ್ತಸಂಚಯದ ಬೆಂಬಲದೊಂದಿಗೆ ಕ್ಲಿನಿಕಲ್ ಟ್ರಯಲ್ ಸೈಟ್‌ಗಳನ್ನು ಸ್ಥಾಪಿಸಿದೆ.
"1.1 ಟ್ರಿಲಿಯನ್ ಡಾಲರ್ ಮೌಲ್ಯದ ಜಾಗತಿಕ ಫಾರ್ಮಾ ಉದ್ಯಮದಲ್ಲಿ ತನ್ನ ಛಾಪು ಮೂಡಿಸಲು ಭಾರತಕ್ಕೆ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಎರಡೂ ಇದೆ" ಎಂದು ಎನ್‌ಬಿಎಂ ನ ನಿರ್ದೇಶಕ ಡಾ. ರಾಜ್ ಕೆ. ಶಿರುಮಲ್ಲ ಹೇಳಿದ್ದಾರೆ.
BIRAC ನೇತೃತ್ವದ ಬಯೋಟೆಕ್ ನಾವೀನ್ಯತೆ ಬೆಂಬಲ ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ 2012 ರಲ್ಲಿ ಸ್ಥಾಪನೆಯಾದ BIRAC, ಧನಸಹಾಯ ಯೋಜನೆಗಳು, ಇನ್ಕ್ಯುಬೇಶನ್ ಮೂಲಸೌಕರ್ಯ ಮತ್ತು ಮಾರ್ಗದರ್ಶನದ ಮೂಲಕ ನಾವೀನ್ಯತೆಯನ್ನು ಬೆಂಬಲಿಸುತ್ತದೆ. ದೇಶಾದ್ಯಂತ ಇದುವರೆಗೆ 95 ಬಯೋ-ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಕಾರ್ಯಕ್ರಮಗಳು ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿಗಳಿಗೆ ಅನುಗುಣವಾಗಿದ್ದು, ರಾಷ್ಟ್ರೀಯವಾಗಿ ಅಗತ್ಯವಿರುವ ಉತ್ಪನ್ನ ಅಭಿವೃದ್ಧಿಯ ಮೇಲೆ ಗಮನಹರಿಸುತ್ತವೆ.
ಪ್ರಮುಖ ಯೋಜನೆಗಳು:
- ಬಯೋಟೆಕ್ನಾಲಜಿ ಇಗ್ನಿಷನ್ ಗ್ರಾಂಟ್: ಆರಂಭಿಕ ಹಂತದ ಸ್ಟಾರ್ಟ್-ಅಪ್‌ಗಳನ್ನು ಬೆಂಬಲಿಸಲು 18 ತಿಂಗಳ ಅವಧಿಗೆ 50 ಲಕ್ಷ ರೂಪಾಯಿಗಳವರೆಗೆ ಧನಸಹಾಯ; ಸುಮಾರು 1,000 ನಾವೀನ್ಯಕಾರರಿಗೆ ಈವರೆಗೆ ಬೆಂಬಲ ನೀಡಲಾಗಿದೆ.
- SEED ಫಂಡ್ : 'ಪ್ರೂಫ್-ಆಫ್-ಕಾನ್ಸೆಪ್ಟ್' (ಪರಿಕಲ್ಪನೆಯ ಪುರಾವೆ) ಹಂತದ ಸ್ಟಾರ್ಟ್-ಅಪ್‌ಗಳಿಗೆ 30 ಲಕ್ಷ ರೂಪಾಯಿಗಳ ಇಕ್ವಿಟಿ ಬೆಂಬಲ.
- LEAP ಫಂಡ್ : ವಾಣಿಜ್ಯೀಕರಣಕ್ಕೆ ಸಿದ್ಧವಾಗಿರುವ ನಾವೀನ್ಯತೆಗಳಿಗೆ 100 ಲಕ್ಷ ರೂಪಾಯಿಗಳ ಇಕ್ವಿಟಿ ಬೆಂಬಲ.
- ಜನCARE – ಅಮೃತ್ ಗ್ರಾಂಡ್ ಚಾಲೆಂಜ್: ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಟೆಲಿಮೆಡಿಸಿನ್ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದ 89 ಡಿಜಿಟಲ್ ಆರೋಗ್ಯ ತಾಂತ್ರಿಕ ನಾವೀನ್ಯತೆಗಳಿಗೆ ಬೆಂಬಲ ನೀಡಲಾಗಿದೆ. ಇದು ವಿಶೇಷವಾಗಿ ಎರಡನೇ ಮತ್ತು ಮೂರನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳ ಮೇಲೆ ಗಮನಹರಿಸಿದೆ.
ಉತ್ಪಾದನೆ ಮತ್ತು ಕೈಗಾರಿಕಾ ಬಲವರ್ಧನೆಯ ಕ್ರಮಗಳು ದೇಶೀಯ ಔಷಧ ಮತ್ತು ಬಯೋಫಾರ್ಮಾ ಉತ್ಪಾದನೆಯನ್ನು ಬಲಪಡಿಸಲು, ಸರ್ಕಾರವು ಔಷಧಗಳಿಗಾಗಿ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ, ಔಷಧ ಉದ್ಯಮದ ಬಲವರ್ಧನೆ ಯೋಜನೆ ಮತ್ತು ಬಲ್ಕ್ ಡ್ರಗ್ ಪಾರ್ಕ್ಸ್ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಉಪಕ್ರಮಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಸಕ್ರಿಯ ಔಷಧೀಯ ಘಟಕಾಂಶಗಳು ಮತ್ತು ಮಧ್ಯವರ್ತಿಗಳಿಗಾಗಿ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಎಂಎಸ್‌ಎಂಇ ಸೌಲಭ್ಯಗಳನ್ನು 'ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಮಾನದಂಡಗಳಿಗೆ' ಅನುಗುಣವಾಗಿ ಮೇಲ್ದರ್ಜೆಗೇರಿಸುವುದು ಮತ್ತು ಔಷಧೀಯ ಕ್ಲಸ್ಟರ್‌ಗಳ ಒಳಗೆ ಹಂಚಿಕೆಯ ಮೂಲಸೌಕರ್ಯ ಸೌಲಭ್ಯಗಳನ್ನು ಸೃಷ್ಟಿಸುವುದರ ಮೇಲೆ ಗಮನಹರಿಸುತ್ತವೆ.
ಎಸ್‌ಪಿಐ ಯೋಜನೆಯು ಔಷಧೀಯ ಕ್ಲಸ್ಟರ್‌ಗಳಲ್ಲಿ ಸಾಮಾನ್ಯ ಸೌಲಭ್ಯಗಳಿಗೆ ನೆರವು, ಎಂಎಸ್‌ಎಂಇಗಳ ತಂತ್ರಜ್ಞಾನ ಉನ್ನತೀಕರಣಕ್ಕೆ ಬೆಂಬಲ ಮತ್ತು ಔಷಧಗಳು ಹಾಗೂ ವೈದ್ಯಕೀಯ ಸಾಧನಗಳ ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಒಳಗೊಂಡಿದೆ. ಪಿಎಲ್‌ಐ ಯೋಜನೆಗಳು ಮತ್ತು ಬಲ್ಕ್ ಡ್ರಗ್ ಪಾರ್ಕ್‌ಗಳ ಜೊತೆಗೆ, ಈ ಕ್ರಮಗಳು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು, ಗುಣಮಟ್ಟದ ಮಾನದಂಡಗಳನ್ನು ಸುಧಾರಿಸಲು ಮತ್ತು ದೇಶೀಯ ಹಾಗೂ ರಫ್ತು-ಆಧಾರಿತ ಔಷಧ ಉತ್ಪಾದನೆಯನ್ನು ಬೆಂಬಲಿಸಲು ಉದ್ದೇಶಿಸಿವೆ.
ಫಾರ್ಮಾ-ಮೆಡ್‌ಟೆಕ್‌ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಪ್ರೋತ್ಸಾಹ ಔಷಧ ಇಲಾಖೆಯು 2023 ರಲ್ಲಿ ₹5,000 ಕೋಟಿ ಅನುಮೋದಿತ ವೆಚ್ಚದೊಂದಿಗೆ ಪ್ರಾರಂಭಿಸಿದ ಪಿಆರ್‌ಐಪಿ ಯೋಜನೆಯು, ಭಾರತವನ್ನು ನಾವೀನ್ಯತೆ-ಚಾಲಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಫಾರ್ಮಾ-ಮೆಡ್‌ಟೆಕ್ ವಲಯವಾಗಿ ಪರಿವರ್ತಿಸಲು ಶ್ರಮಿಸುತ್ತದೆ. ಈ ಯೋಜನೆಯು ಹೊಸ ಔಷಧಗಳು, ಬಯೋಸಿಮಿಲರ್‌ಗಳು, ಸಂಕೀರ್ಣ ಜೆನೆರಿಕ್‌ಗಳು, ಪ್ರೆಸಿಷನ್ ಮೆಡಿಸಿನ್ (ನಿಖರ ಔಷಧ) ಮತ್ತು ನವೀನ ವೈದ್ಯಕೀಯ ಸಾಧನಗಳಲ್ಲಿ ಆರಂಭಿಕ ಮತ್ತು ಅಂತಿಮ ಹಂತದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಇದು ಎನ್‌ಐಪಿಇಆರ್‌ಗಳಲ್ಲಿನ 'ಸೆಂಟರ್ಸ್ ಆಫ್ ಎಕ್ಸಲೆನ್ಸ್' ಮೂಲಕ ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವಿನ ಸಹಯೋಗವನ್ನು ಪ್ರೋತ್ಸಾಹಿಸುತ್ತದೆ.
BioE3 ನೀತಿ ಮತ್ತು ಬಯೋ-ರೈಡ್ ಯೋಜನೆ BioE3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಯನ್ನು ಆಗಸ್ಟ್ 2024 ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು. ಈ ಯೋಜನೆಯು ಸುಸ್ಥಿರ 'ವಿಕಸಿತ ಭಾರತ'ಕ್ಕಾಗಿ ಜೈವಿಕ ಉತ್ಪಾದನೆ, ಬಯೋ-ಎಐ ಹಬ್‌ಗಳು ಮತ್ತು ಬಯೋಫೌಂಡ್ರಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದರ ಪ್ರಮುಖ ಲಕ್ಷಣಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಈ ವಲಯದಾದ್ಯಂತ ಉದ್ಯಮಶೀಲತೆಗೆ ನಾವೀನ್ಯತೆ-ಚಾಲಿತ ಬೆಂಬಲ ನೀಡುವುದು ಸೇರಿದೆ. ಈ ನಾವೀನ್ಯತೆಗಳು ಕಾಯಿಲೆಗಳು, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆಯಂತಹ ನಿರ್ಣಾಯಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲಿವೆ.
BioE3 ನೀತಿಯು ಈ ಕೆಳಗಿನ ಕಾರ್ಯತಂತ್ರದ/ವಿಷಯಾಧಾರಿತ ವಲಯಗಳ ಮೇಲೆ ಕೇಂದ್ರೀಕರಿಸುತ್ತದೆ:
- ಜೈವಿಕ ಆಧಾರಿತ ರಾಸಾಯನಿಕಗಳು, ಪಾಲಿಮರ್‌ಗಳು ಮತ್ತು ಕಿಣ್ವಗಳು
- ಕ್ರಿಯಾತ್ಮಕ ಆಹಾರಗಳು ಮತ್ತು ಸ್ಮಾರ್ಟ್ ಪ್ರೋಟೀನ್‌ಗಳು
- ಪ್ರೆಸಿಷನ್ ಬಯೋಥೆರಪಿಟಿಕ್ಸ್ (ನಿಖರ ಜೈವಿಕ ಚಿಕಿತ್ಸೆಗಳು)
- ಹವಾಮಾನ ಸ್ಥಿತಿಸ್ಥಾಪಕ ಕೃಷಿ
- ಇಂಗಾಲದ ಸಂಗ್ರಹಣೆ ಮತ್ತು ಅದರ ಬಳಕೆ
- ಸಾಗರ ಮತ್ತು ಬಾಹ್ಯಾಕಾಶ ಸಂಶೋಧನೆ
ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭಿಸಲಾದ ಬಯೋ-ರೈಡ್ ಯೋಜನೆಯು ಜೈವಿಕ ತಂತ್ರಜ್ಞಾನ ಇಲಾಖೆಯ ಎರಡು ಪ್ರಮುಖ ಯೋಜನೆಗಳನ್ನು ಒಂದೇ ಸೂರಿನಡಿ ವಿಲೀನಗೊಳಿಸಿದೆ: ಅದುವೇ 'ಬಯೋಟೆಕ್ನಾಲಜಿ ರಿಸರ್ಚ್ ಇನ್ನೋವೇಶನ್ ಅಂಡ್ ಎಂಟರ್‌ಪ್ರೆನರ್‌ಶಿಪ್ ಡೆವಲಪ್‌ಮೆಂಟ್'. ಇದರೊಂದಿಗೆ 'ಜೈವಿಕ ಉತ್ಪಾದನೆ ಮತ್ತು ಬಯೋಫೌಂಡ್ರಿ' ಎಂಬ ಹೊಸ ಅಂಶವನ್ನು ಸೇರಿಸಲಾಗಿದೆ. ಈ ಯೋಜನೆಯ ಒಟ್ಟು ವೆಚ್ಚವು ₹9,197 ಕೋಟಿಗಳಾಗಿದ್ದು, ಇದು 2021-22 ರಿಂದ 2025-26 ರವರೆಗಿನ 15 ನೇ ಹಣಕಾಸು ಆಯೋಗದ ಅವಧಿಯನ್ನು ಒಳಗೊಂಡಿದೆ. ಇತರ ಯೋಜನೆಗಳಂತೆಯೇ, ಇದು ಕೂಡ ಆರೋಗ್ಯ ರಕ್ಷಣೆ, ಕೃಷಿ, ಪರಿಸರ ಸುಸ್ಥಿರತೆ ಮತ್ತು ಸ್ವಚ್ಛ ಇಂಧನದಂತಹ ವಿವಿಧ ವಲಯಗಳಲ್ಲಿನ ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಜೈವಿಕ-ನಾವೀನ್ಯತೆಯನ್ನು ಬಳಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ಮೂರು ವಿಶಾಲವಾದ ಘಟಕಗಳನ್ನು ಹೊಂದಿದೆ:
- ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ
- ಕೈಗಾರಿಕಾ ಮತ್ತು ಉದ್ಯಮಶೀಲತೆ ಅಭಿವೃದ್ಧಿ
- ಜೈವಿಕ ಉತ್ಪಾದನೆ ಮತ್ತು ಬಯೋಫೌಂಡ್ರಿ
ಈ ಯೋಜನೆಯು ಜೈವಿಕ-ಉದ್ಯಮಶೀಲತೆಯನ್ನು ಉತ್ತೇಜಿಸಲು, ಅತ್ಯಾಧುನಿಕ ಸಂಶೋಧನೆಯನ್ನು ಬೆಂಬಲಿಸಲು, ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವಿನ ಸಹಯೋಗವನ್ನು ಸುಲಭಗೊಳಿಸಲು, ಸುಸ್ಥಿರ ಜೈವಿಕ ಉತ್ಪಾದನೆಯನ್ನು ಪ್ರೋತ್ಸಾಹಿಸಲು, ಸಂಶೋಧಕರಿಗೆ ಧನಸಹಾಯ ನೀಡಲು ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು, ಯುವ ಸಂಶೋಧಕರು ಹಾಗೂ ವಿಜ್ಞಾನಿಗಳಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ.
ಉಪಸಂಹಾರ
ಈ ಎಲ್ಲಾ ಕ್ರಮಗಳು ಸಂಶೋಧನೆ, ನಾವೀನ್ಯತೆ, ಉತ್ಪಾದನೆ ಮತ್ತು ಉದ್ಯಮಶೀಲತೆಯನ್ನು ಒಳಗೊಂಡಂತೆ ಭಾರತದಲ್ಲಿ ಸ್ಥಿತಿಸ್ಥಾಪಕ ಬಯೋಫಾರ್ಮಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರವು ಕೈಗೊಂಡಿರುವ ಉದ್ದೇಶಪೂರ್ವಕ ಮತ್ತು ಸಂಘಟಿತ ನೀತಿ ವಿಧಾನವನ್ನು ಸೂಚಿಸುತ್ತವೆ. ಭಾರತದ ಕಾಯಿಲೆಗಳ ಹೊರೆಯು ಮಧುಮೇಹ, ಕ್ಯಾನ್ಸರ್ ಮತ್ತು ಆಟೋಇಮ್ಯೂನ್ ಅಸ್ವಸ್ಥತೆಗಳಂತಹ ಸಾಂಕ್ರಾಮಿಕವಲ್ಲದ ಸ್ಥಿತಿಗಳತ್ತ ವಾಲುತ್ತಿರುವುದರಿಂದ, ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಬಯೋಲಾಜಿಕ್ ಚಿಕಿತ್ಸೆಗಳ ಲಭ್ಯತೆಯು ಅತ್ಯಗತ್ಯವಾಗಿದೆ.
ಆದ್ದರಿಂದ, ಕೇಂದ್ರ ಬಜೆಟ್ 2026-27ರಲ್ಲಿ ಘೋಷಿಸಲಾದ ಬಯೋಫಾರ್ಮಾ ಶಕ್ತಿ ಯೋಜನೆಯು ಈ ನಿಟ್ಟಿನಲ್ಲಿ ಒಂದು ಪ್ರಮುಖ ನೀತಿ ಹಸ್ತಕ್ಷೇಪವನ್ನು ಪ್ರತಿನಿಧಿಸುತ್ತದೆ. ಐದು ವರ್ಷಗಳ ಅವಧಿಗೆ ₹10,000 ಕೋಟಿ ವೆಚ್ಚದ ಬೆಂಬಲದೊಂದಿಗೆ, ಈ ಯೋಜನೆಯನ್ನು ಕಾರ್ಯಪಡೆ ಅಭಿವೃದ್ಧಿ, ದೇಶವ್ಯಾಪಿ ಕ್ಲಿನಿಕಲ್ ಟ್ರಯಲ್ ಮೂಲಸೌಕರ್ಯ ಮತ್ತು ವರ್ಧಿತ ನಿಯಂತ್ರಕ ಸಾಮರ್ಥ್ಯದಲ್ಲಿ ಉದ್ದೇಶಿತ ಹೂಡಿಕೆಗಳ ಮೂಲಕ ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಪುನರುಚ್ಚರಿಸುತ್ತದೆ.
(Explainer ID: 157151)
आगंतुक पटल : 11
Provide suggestions / comments