• Skip to Content
  • Sitemap
  • Advance Search
Farmer's Welfare

ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ: ಸುಸ್ಥಿರ ಕೃಷಿಗೆ ಪ್ರಮುಖ ಪೂರಕ

ಉತ್ಪಾದಕತೆ, ಮಣ್ಣಿನ ಆರೋಗ್ಯ ಮತ್ತು ಪರಿಸರ ಕಾಳಜಿಯ ಸಮನ್ವಯ

Posted On: 31 JAN 2026 10:25AM

ಪ್ರಮುಖ ಮಾರ್ಗಸೂಚಿಗಳು

  • ಸಮತೋಲಿತ ರಸಗೊಬ್ಬರ ಬಳಕೆ ಎಂದರೆ ಬೆಳೆಯ ಅವಶ್ಯಕತೆ, ಮಣ್ಣಿನ ಫಲವತ್ತತೆ ಮತ್ತು ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಎಲ್ಲಾ ಅಗತ್ಯ ಲಘು ಮತ್ತು ಅಧಿಕ ಪೋಷಕಾಂಶಗಳನ್ನು ಸೂಕ್ತ ಪ್ರಮಾಣ, ಸಮಯ ಮತ್ತು ವಿಧಾನಗಳಲ್ಲಿ ಒದಗಿಸುವುದಾಗಿದೆ.
  • ಭಾರತ ಸರ್ಕಾರವು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ಪೋಷಕಾಂಶ ಆಧಾರಿತ ಸಬ್ಸಿಡಿ, ಬೇವಿನ ಲೇಪಿತ ಯೂರಿಯಾ, ಕಸ್ಟಮೈಸ್ಡ್ ಮತ್ತು ಫೋರ್ಟಿಫೈಡ್ ರಸಗೊಬ್ಬರಗಳು ಹಾಗೂ ನ್ಯಾನೋ ರಸಗೊಬ್ಬರಗಳಂತಹ ಹಲವು ಉಪಕ್ರಮಗಳ ಮೂಲಕ ರಸಗೊಬ್ಬರಗಳ ಸಮತೋಲಿತ ಬಳಕೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ.
  • ಪುನರುತ್ಪಾದಕ ಕೃಷಿಯು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮೂಲಕ ಮತ್ತು ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಸಮತೋಲಿತ ರಸಗೊಬ್ಬರ ಬಳಕೆಯನ್ನು ಬಲಪಡಿಸುತ್ತದೆ. ಇದು ಪೋಷಕಾಂಶಗಳ ವ್ಯರ್ಥವನ್ನು ಕಡಿಮೆ ಮಾಡಿ ದೀರ್ಘಕಾಲದ ಉತ್ಪಾದಕತೆಯನ್ನು ಕಾಪಾಡುತ್ತದೆ.
  • ಮಣ್ಣಿನ ಪರೀಕ್ಷೆಯ ಆಧಾರಿತ ಶಿಫಾರಸುಗಳು, ಕಸ್ಟಮೈಸ್ಡ್ ರಸಗೊಬ್ಬರಗಳು ಮತ್ತು ಸಮಗ್ರ ಪೋಷಕಾಂಶ ನಿರ್ವಹಣಾ ವಿಧಾನಗಳು ರಸಗೊಬ್ಬರಗಳನ್ನು ಹೆಚ್ಚು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಲು ಅನುವು ಮಾಡಿಕೊಡುತ್ತವೆ.

ಪೀಠಿಕೆ: ಸಮತೋಲಿತ ರಸಗೊಬ್ಬರ ಬಳಕೆಯ ತರ್ಕಬದ್ಧತೆ

ಭಾರತದ ಕೃಷಿ ಇತಿಹಾಸದಲ್ಲಿ ಹಸಿರು ಕ್ರಾಂತಿಯು ಒಂದು ನಿರ್ಣಾಯಕ ತಿರುವನ್ನು ನೀಡಿತು. 1960 ರ ದಶಕದ ಮಧ್ಯಭಾಗದಲ್ಲಿ, ವಿಸ್ತರಿಸಿದ ನೀರಾವರಿ ಮತ್ತು ರಾಸಾಯನಿಕ ರಸಗೊಬ್ಬರಗಳ ಬೆಂಬಲದೊಂದಿಗೆ ಪರಿಚಯಿಸಲಾದ ರಸಗೊಬ್ಬರ-ಪ್ರತಿಕ್ರಿಯಾತ್ಮಕ ಅಧಿಕ ಇಳುವರಿ ತಳಿಗಳು (HYVs - ಭತ್ತ ಮತ್ತು ಗೋಧಿ), ದೇಶವನ್ನು "ಕೈಯಿಂದ ಬಾಯಿಗೆ" ಎನ್ನುವ ಪರಿಸ್ಥಿತಿಯಿಂದ ಸ್ವಾವಲಂಬನೆಗೆ ಮತ್ತು ಅಂತಿಮವಾಗಿ ಆಹಾರ ರಫ್ತು ಮಾಡುವ ರಾಷ್ಟ್ರವಾಗಿ ಪರಿವರ್ತಿಸಿದವು. ಆಹಾರ ಧಾನ್ಯ ಉತ್ಪಾದನೆಯಲ್ಲಿನ ಈ ಕ್ಷಿಪ್ರ ಹೆಚ್ಚಳವು ಕೇವಲ ರಾಷ್ಟ್ರೀಯ ಆಹಾರ ಭದ್ರತೆಯನ್ನು ಖಚಿತಪಡಿಸುವುದಲ್ಲದೆ, ಹಸಿವನ್ನು ಗಣನೀಯವಾಗಿ ಕಡಿಮೆ ಮಾಡಿತು ಮತ್ತು ಗ್ರಾಮೀಣ ಜೀವನೋಪಾಯವನ್ನು ಸುಧಾರಿಸಿತು. ಇದು ಭಾರತವನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿಯಾಗಿ ನಿಲ್ಲಿಸಿತು.

ಆದಾಗ್ಯೂ, ಈ ಉತ್ಪಾದಕತೆಯ ಲಾಭಗಳಿಗೆ ಕಾರಣವಾದ ತೀವ್ರ ಕೃಷಿ ಪದ್ಧತಿಯು ಕ್ರಮೇಣ ತನ್ನ ಮಿತಿಗಳನ್ನು ಬಹಿರಂಗಪಡಿಸಿತು. ನಿರಂತರ ಬೇಸಾಯ, ಸಾರಜನಕಯುಕ್ತ ರಸಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಸಾವಯವ ಗೊಬ್ಬರಗಳ ಬಳಕೆಯ ಇಳಿಕೆಯು ಪೋಷಕಾಂಶಗಳ ಅಸಮತೋಲನ ಮತ್ತು ಮಣ್ಣಿನ ಆರೋಗ್ಯದ ನಿರಂತರ ಕ್ಷೀಣತೆಗೆ ಕಾರಣವಾಯಿತು. ಅತಿಯಾದ ಮತ್ತು ಅಸಮತೋಲಿತ ರಸಗೊಬ್ಬರ ಬಳಕೆಯು ದ್ವಿತೀಯಕ ಮತ್ತು ಲಘು ಪೋಷಕಾಂಶಗಳ ಸವಕಳಿಯನ್ನು ವೇಗಗೊಳಿಸಿತು, ಮಣ್ಣಿನ ರಚನೆಯನ್ನು ಹಾಳುಮಾಡಿತು ಮತ್ತು ನೀರಿನ ಹರಿವು ಹಾಗೂ ಸೋರುವಿಕೆಯ ಮೂಲಕ ಪೋಷಕಾಂಶಗಳ ನಷ್ಟವನ್ನು ಹೆಚ್ಚಿಸಿತು.

ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆಯು ಬೆಳೆಯ ಬೆಳವಣಿಗೆ ಮತ್ತು ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

  • ಸಸ್ಯದ ಚಯಾಪಚಯ ಕ್ರಿಯೆಗಳಿಗೆ ಅಡ್ಡಿಪಡಿಸುವ ಮೂಲಕ,
  • ಕೀಟಗಳು ಮತ್ತು ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುವ ಮೂಲಕ, ಮತ್ತು
  • ಉತ್ಪನ್ನದ ಗುಣಮಟ್ಟವನ್ನು ಕಡಿಮೆ ಮಾಡುವ ಮೂಲಕ (ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ).

ಅಸಮತೋಲಿತ ರಸಗೊಬ್ಬರ ಬಳಕೆಯು ಕೇವಲ ಮಣ್ಣಿನ ಗುಣಮಟ್ಟದ ಕುಸಿತಕ್ಕೆ ಮಾತ್ರವಲ್ಲದೆ, ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಈ ಪ್ರಕ್ರಿಯೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ಸಂಭಾವ್ಯ ಆರೋಗ್ಯದ ಅಪಾಯಗಳನ್ನು ತಂದೊಡ್ಡುತ್ತವೆ. ಈ ಪ್ರತಿಕೂಲ ಪರಿಣಾಮಗಳು ಪಶುಸಂಗೋಪನಾ ವಲಯಕ್ಕೂ ವ್ಯಾಪಿಸುತ್ತವೆ; ಏಕೆಂದರೆ ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ಬೆಳೆದ ಬೆಳೆಗಳು ಪಶು ಆಹಾರ ಮತ್ತು ಮೇವಿಗೆ ಅಗತ್ಯವಾದ ಖನಿಜಗಳನ್ನು ಹೊಂದಿರುವುದಿಲ್ಲ. ಇದರಿಂದಾಗಿ ಪ್ರಾಣಿಗಳ ಆರೋಗ್ಯ ಹದಗೆಡುತ್ತದೆ ಮತ್ತು ಉತ್ಪಾದಕತೆ ಕುಂಠಿತಗೊಳ್ಳುತ್ತದೆ. ಪರಿಣಾಮವಾಗಿ, ಪೋಷಕಾಂಶಗಳ ಅಸಮತೋಲನವು ಸಮಗ್ರ ಬೆಳೆ-ಜಾನುವಾರು ಉತ್ಪಾದನಾ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆ ಮತ್ತು ದಕ್ಷತೆಗೆ ದೊಡ್ಡ ಅಡ್ಡಿಯಾಗಿದೆ.

ಆದ್ದರಿಂದ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ವೈಜ್ಞಾನಿಕವಾಗಿ ಸರಿಯಾದ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಕೃಷಿ ಉತ್ಪಾದನೆಯ ಸುಸ್ಥಿರತೆಗೆ ಮೂಲಭೂತವಾಗಿದೆ. ಮಣ್ಣಿನ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳಿಂದ ನಿರ್ಧರಿಸಲ್ಪಡುವ ಮಣ್ಣಿನ ಫಲವತ್ತತೆಯು ಪೋಷಕಾಂಶಗಳ ಸಮರ್ಥ ಬಳಕೆ, ಆರ್ಥಿಕ ಕಾರ್ಯಸಾಧ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಅಡಿಪಾಯವಾಗಿದೆ.

ಅಸಮತೋಲಿತ ರಸಗೊಬ್ಬರ ಬಳಕೆಯಿಂದ ಉದ್ಭವಿಸುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯು  ‘ದೀರ್ಘಕಾಲೀನ ರಸಗೊಬ್ಬರ ಪ್ರಯೋಗಗಳ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ’ಯನ್ನು  ಪ್ರಾರಂಭಿಸಿತು. ವೈವಿಧ್ಯಮಯ ಕೃಷಿ-ಪರಿಸರ ವಲಯಗಳು ಮತ್ತು ಬೆಳೆ ಪದ್ಧತಿಗಳಲ್ಲಿ ಜಾರಿಗೆ ತರಲಾದ ಈ ಅಧ್ಯಯನವು, ನಿರಂತರ ರಸಗೊಬ್ಬರ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಉತ್ಪಾದಕತೆ ಮತ್ತು ಕೃಷಿ ವ್ಯವಸ್ಥೆಯ ಸುಸ್ಥಿರತೆಯ ಮೇಲೆ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ರೂಪಿಸಲಾಗಿದೆ. ಈ ಅಧ್ಯಯನವು ಪೋಷಕಾಂಶಗಳ ಸವಕಳಿ, ಮಣ್ಣಿನ ಗುಣಮಟ್ಟದ ಕುಸಿತ ಮತ್ತು ವೈಜ್ಞಾನಿಕ ರಸಗೊಬ್ಬರ ನಿರ್ವಹಣೆಯ ಅಗತ್ಯತೆಯ ಬಗ್ಗೆ ಬಲವಾದ ಪ್ರಾಯೋಗಿಕ ಪುರಾವೆಗಳನ್ನು ಒದಗಿಸಿದೆ. ಇದು ಸರ್ಕಾರದ ನೀತಿ ನಿರೂಪಣೆಗೆ ಅಗತ್ಯ ಮಾಹಿತಿಯನ್ನು ಒದಗಿಸುವುದಲ್ಲದೆ, ಪರಿಸರದ ಆರೋಗ್ಯವನ್ನು ರಕ್ಷಿಸುವುದರ ಜೊತೆಗೆ ಹೆಚ್ಚಿನ ಇಳುವರಿ ನೀಡುವ ಕೃಷಿಯನ್ನು ಮುಂದುವರಿಸಲು ಪೋಷಕಾಂಶಗಳ ಸಮರ್ಪಕ ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸಿದೆ. ಈ ನಿಟ್ಟಿನಲ್ಲಿ, ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು ಮತ್ತು ಕಾಪಾಡಿಕೊಳ್ಳಲು ಭಾರತ ಸರ್ಕಾರವು ಸಮತೋಲಿತ ರಸಗೊಬ್ಬರ ಬಳಕೆಯನ್ನು ಒಂದು ಪ್ರಮುಖ ಕಾರ್ಯತಂತ್ರವಾಗಿ ಸಕ್ರಿಯವಾಗಿ ಉತ್ತೇಜಿಸುತ್ತಿದೆ, ತನ್ಮೂಲಕ ಸುಸ್ಥಿರ ಕೃಷಿ ಉತ್ಪಾದಕತೆಯನ್ನು ಬೆಂಬಲಿಸುತ್ತಿದೆ.

ರಸಗೊಬ್ಬರಗಳು ಎಂದರೆ ಏನು? ಸಸ್ಯಗಳಿಗೆ ಅಗತ್ಯವಾದ ಒಂದು ಅಥವಾ ಅದಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ಒದಗಿಸಲು ಮಣ್ಣಿಗೆ ಸೇರಿಸಲಾಗುವ ನೈಸರ್ಗಿಕ ಅಥವಾ ಸಂಶ್ಲೇಷಿತ ಮೂಲದ ಯಾವುದೇ ವಸ್ತುವನ್ನು ರಸಗೊಬ್ಬರ ಎಂದು ಕರೆಯಲಾಗುತ್ತದೆ.

ರಸಗೊಬ್ಬರಗಳನ್ನು ವಿಶಾಲವಾಗಿ ಅಜೈವಿಕ ಮತ್ತು ಸಾವಯವ ರಸಗೊಬ್ಬರಗಳೆಂದು ವರ್ಗೀಕರಿಸಲಾಗಿದೆ:

  • ಅಜೈವಿಕ ರಸಗೊಬ್ಬರಗಳು: ಇವು ರಾಸಾಯನಿಕ ಸಂಯುಕ್ತಗಳಿಂದ ತಯಾರಿಸಲ್ಪಟ್ಟ ಗೊಬ್ಬರಗಳಾಗಿವೆ. ಇವು ನಿರ್ದಿಷ್ಟ ಪೋಷಕಾಂಶಗಳನ್ನು ಸಾಂದ್ರೀಕೃತ ರೂಪದಲ್ಲಿ ಹೊಂದಿರುತ್ತವೆ, ಇದರಿಂದಾಗಿ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನಿಖರವಾಗಿ ಮತ್ತು ತಕ್ಷಣವೇ ಒದಗಿಸಲು ಸಾಧ್ಯವಾಗುತ್ತದೆ.
  • ಸಾವಯವ ರಸಗೊಬ್ಬರಗಳು: ಇವುಗಳನ್ನು ಕಂಪೋಸ್ಟ್, ಪ್ರಾಣಿಜನ್ಯ ಗೊಬ್ಬರ (ಸಗಣಿ ಇತ್ಯಾದಿ), ಬೆಳೆಗಳ ಉಳಿಕೆಗಳು, ಸಮುದ್ರದ ಪಾಚಿ ಮತ್ತು ಎಲುಬಿನ ಪುಡಿಯಂತಹ ನೈಸರ್ಗಿಕ ಮೂಲಗಳಿಂದ ಪಡೆಯಲಾಗುತ್ತದೆ. ಇವು ಪೋಷಕಾಂಶಗಳನ್ನು ಸಮತೋಲಿತ ರೂಪದಲ್ಲಿ ನಿಧಾನವಾಗಿ ಪೂರೈಸುವುದಲ್ಲದೆ, ಮಣ್ಣಿನ ರಚನೆ, ಸಾವಯವ ಅಂಶ ಮತ್ತು ಜೈವಿಕ ಚಟುವಟಿಕೆಯನ್ನು ಸುಧಾರಿಸುತ್ತವೆ. ಇವುಗಳಲ್ಲಿ ಪ್ರಾಣಿಜನ್ಯ ಉಪ ಉತ್ಪನ್ನಗಳಾದ ರಕ್ತದ ಪುಡಿ, ಗರಿಗಳ ಪುಡಿ ಮತ್ತು ಗೊರಸು ಅಥವಾ ಕೊಂಬಿನ ಪುಡಿಗಳೂ ಸೇರಿವೆ.

ಸಮತೋಲಿತ ರಸಗೊಬ್ಬರ ಬಳಕೆ: ಸುಸ್ಥಿರ ಕೃಷಿಗೆ ಒಂದು ಪ್ರಮುಖ ಕೀಲಿ ಕೈ

ಸಮತೋಲಿತ ಪೋಷಕಾಂಶ ನಿರ್ವಹಣೆಯು, ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಗರಿಷ್ಠಗೊಳಿಸುವ ಮೂಲಕ ಮತ್ತು ಅವುಗಳ ವ್ಯರ್ಥವನ್ನು ಕನಿಷ್ಠಗೊಳಿಸುವ ಮೂಲಕ ರಸಗೊಬ್ಬರ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ಇದು ಪೋಷಕಾಂಶಗಳ ನಡುವೆ ಪರಸ್ಪರ ಪೂರಕ ಕ್ರಿಯೆಗಳನ್ನು ಉತ್ತೇಜಿಸಿ ಸಸ್ಯಗಳ ಬೆಳವಣಿಗೆ, ಬೆಳೆ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಉತ್ತಮಗೊಳಿಸುತ್ತದೆ. ಇದು ಮಣ್ಣಿನ ಸಾವಯವ ಅಂಶ ಮತ್ತು ಜೈವಿಕ ಆರೋಗ್ಯ ಸೇರಿದಂತೆ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ.

ಸಮರ್ಪಕ ಪೋಷಕಾಂಶಗಳನ್ನು ಒದಗಿಸುವ ಮೂಲಕ, ಇದು ನಿರೀಕ್ಷಿತ ಇಳುವರಿ ಮತ್ತು ಪ್ರಸ್ತುತ ದೊರೆಯುತ್ತಿರುವ ಇಳುವರಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಅಸಮತೋಲಿತ ರಸಗೊಬ್ಬರ ಬಳಕೆಯಿಂದ ಉಂಟಾಗುವ ಪೋಷಕಾಂಶಗಳ ಸೋರಿಕೆ ನೀರಿನಲ್ಲಿ ಹರಿದು ಹೋಗುವಿಕೆ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯಂತಹ ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ತಗ್ಗಿಸುತ್ತದೆ.

ಸಮತೋಲಿತ ರಸಗೊಬ್ಬರ ಬಳಕೆಯ ವೈಜ್ಞಾನಿಕ ಅಡಿಪಾಯವನ್ನು ಜಸ್ಟಸ್ ವಾನ್ ಲೀಬಿಗ್ ಅವರ 'ಕನಿಷ್ಠದ ನಿಯಮ'ಕ್ಕೆ ಗುರುತಿಸಬಹುದು. ಈ ನಿಯಮದ ಪ್ರಕಾರ, ಇತರ ಪೋಷಕಾಂಶಗಳು ಎಷ್ಟೇ ಹೇರಳವಾಗಿದ್ದರೂ ಸಹ, ಅತ್ಯಂತ ಕೊರತೆಯಿರುವ ಪೋಷಕಾಂಶವು ಬೆಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇತರ ಅಗತ್ಯ ಪೋಷಕಾಂಶಗಳ ಕೊರತೆಯಿದ್ದಾಗ, ಕೇವಲ ಒಂದು ಪೋಷಕಾಂಶವನ್ನು ಅತಿಯಾಗಿ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಈ ತತ್ವವು ಒತ್ತಿಹೇಳುತ್ತದೆ.

ಆದ್ದರಿಂದ, ಸಮತೋಲಿತ ರಸಗೊಬ್ಬರ ಬಳಕೆ ಎಂದರೆ ಬೆಳೆಯ ಅವಶ್ಯಕತೆ, ಮಣ್ಣಿನ ಫಲವತ್ತತೆಯ ಸ್ಥಿತಿ ಮತ್ತು ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಎಲ್ಲಾ ಅಗತ್ಯ ಸಸ್ಯ ಪೋಷಕಾಂಶಗಳನ್ನು (ಅಧಿಕ ಮತ್ತು ಲಘು ಪೋಷಕಾಂಶಗಳು) ಸೂಕ್ತ ಪ್ರಮಾಣ, ಅನುಪಾತ, ಸಮಯ ಮತ್ತು ವಿಧಾನಗಳಲ್ಲಿ ಒದಗಿಸುವುದಾಗಿದೆ. ಇದು ಕೇವಲ ಸಾರಜನಕ (N), ರಂಜಕ (P) ಮತ್ತು ಪೊಟ್ಯಾಸಿಯಮ್ (K) ಅನ್ನು ಬಳಸುವ ಸಾಂಪ್ರದಾಯಿಕ ಪದ್ಧತಿಯನ್ನು ಮೀರಿ, ಸಮಗ್ರ ಪೋಷಕಾಂಶ ನಿರ್ವಹಣಾ ವಿಧಾನವನ್ನು ಒಳಗೊಂಡಿದೆ.

ಸಮತೋಲಿತ ರಸಗೊಬ್ಬರ ಬಳಕೆಯ ಪ್ರಯೋಜನಗಳು

ಸಮತೋಲಿತ ರಸಗೊಬ್ಬರ ಬಳಕೆಯು ಸುಸ್ಥಿರ ಕೃಷಿಯ ಒಂದು ಮೂಲಭೂತ ಸ್ತಂಭವಾಗಿದ್ದು, ವ್ಯಾಪಕವಾದ ಕೃಷಿ ಸಂಬಂಧಿತ, ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ನೀಡುತ್ತದೆ:

  • ಹೆಚ್ಚಿನ ಬೆಳೆ ಉತ್ಪಾದಕತೆ: ಸಮತೋಲಿತ ಪೋಷಕಾಂಶಗಳ ಪೂರೈಕೆಯು ಬೆಳೆಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಇಳುವರಿ ಗಣನೀಯವಾಗಿ ಹೆಚ್ಚಾಗುತ್ತದೆ.
  • ಅಧಿಕ ಇಳುವರಿ ತಳಿಗಳ ಅತ್ಯುತ್ತಮ ಪ್ರದರ್ಶನ: ಸುಧಾರಿತ ಬೆಳೆ ತಳಿಗಳ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಸಮತೋಲಿತ ಪೋಷಕಾಂಶ ನಿರ್ವಹಣೆ ಬಹಳ ಮುಖ್ಯ.
  • ಸುಧಾರಿತ ಪೋಷಕಾಂಶ ಬಳಕೆಯ ದಕ್ಷತೆ: ಲಘು ಪೋಷಕಾಂಶಗಳ ಲಭ್ಯತೆಯು ಅಧಿಕ ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಪೋಷಕಾಂಶಗಳ ವ್ಯರ್ಥವನ್ನು ಕಡಿಮೆ ಮಾಡುತ್ತದೆ.
  • ಉತ್ತಮ ಬೆಳೆ ಗುಣಮಟ್ಟ ಮತ್ತು ಒತ್ತಡ ನಿರೋಧಕ ಶಕ್ತಿ: ಸರಿಯಾದ ಪೋಷಕಾಂಶ ಪಡೆದ ಸಸ್ಯಗಳು ರೋಗ ನಿರೋಧಕ ಶಕ್ತಿ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಮಾನವನ ಬಳಕೆ ಮತ್ತು ಪ್ರಾಣಿಗಳ ಆಹಾರಕ್ಕಾಗಿ ಉತ್ತಮ ಗುಣಮಟ್ಟದ ಇಳುವರಿಯನ್ನು ನೀಡುತ್ತದೆ.
  • ಮಣ್ಣಿನ ಆರೋಗ್ಯ ಮತ್ತು ಸುಸ್ಥಿರತೆಯ ಸುಧಾರಣೆ: ಸಮತೋಲಿತ ರಸಗೊಬ್ಬರ ಬಳಕೆಯು ಮಣ್ಣಿನ ಫಲವತ್ತತೆ, ಸೂಕ್ಷ್ಮಜೀವಿಗಳ ಚಟುವಟಿಕೆ, ಮಣ್ಣಿನ ರಚನೆ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಪರಿಸರ ಅಪಾಯಗಳ ಕಡಿತ: ಬೆಳೆಯ ಬೇಡಿಕೆಗೆ ಅನುಗುಣವಾಗಿ ಪೋಷಕಾಂಶಗಳನ್ನು ಒದಗಿಸುವುದರಿಂದ ಪೋಷಕಾಂಶಗಳು ನೀರಿನಲ್ಲಿ ಹರಿದು ಹೋಗುವುದು, ಸೋರುವುದು ಮತ್ತು ಜಲ ಮಾಲಿನ್ಯವಾಗುವುದನ್ನು ತಡೆಯಬಹುದು.
  • ವೆಚ್ಚ-ಪರಿಣಾಮಕಾರಿ ಕೃಷಿ: ಸಮತೋಲಿತ ಪೋಷಕಾಂಶ ನಿರ್ವಹಣೆಯು ರೈತರು ರಸಗೊಬ್ಬರಗಳನ್ನು ಅತ್ಯಂತ ದಕ್ಷತೆಯಿಂದ ಬಳಸಲು ಸಹಾಯ ಮಾಡುತ್ತದೆ. ಇದು ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಮೂಲಕ ಲಾಭವನ್ನು ಹೆಚ್ಚಿಸುತ್ತದೆ, ಇದು ದೀರ್ಘಾವಧಿಯಲ್ಲಿ ಅತ್ಯಂತ ಆರ್ಥಿಕವಾದ ವಿಧಾನವಾಗಿದೆ.

A diagram showing the components of plant nutrientsAI-generated content may be incorrect.

ಸಮತೋಲಿತ ರಸಗೊಬ್ಬರ ಬಳಕೆಯ ಪ್ರಕ್ರಿಯೆ: ಮಣ್ಣಿನಿಂದ ಪರಿಹಾರದವರೆಗೆ

ಸಮತೋಲಿತ ರಸಗೊಬ್ಬರ ಬಳಕೆಯನ್ನು ಸಾಧಿಸಲು ವಿಜ್ಞಾನ, ನೀತಿ, ತಂತ್ರಜ್ಞಾನ ಮತ್ತು ರೈತರ ಪಾಲ್ಗೊಳ್ಳುವಿಕೆಯನ್ನು ಒಳಗೊಂಡ ಬಹುಮುಖಿ ಕಾರ್ಯತಂತ್ರದ ಅಗತ್ಯವಿದೆ. ಭಾರತೀಯ ಕೃಷಿಯಲ್ಲಿ ಸುಸ್ಥಿರ ಪೋಷಕಾಂಶ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮಗಳು ನಿರ್ಣಾಯಕವಾಗಿವೆ:

1. ಸಮಗ್ರ ಪೋಷಕಾಂಶ ನಿರ್ವಹಣೆ

ಇದು ಸಮತೋಲಿತ ರಸಗೊಬ್ಬರ ಬಳಕೆಯ ಒಂದು ಪ್ರಮುಖ ಕಾರ್ಯತಂತ್ರವಾಗಿದೆ. ಸಾವಯವ ಗೊಬ್ಬರಗಳು, ರಾಸಾಯನಿಕ ರಸಗೊಬ್ಬರಗಳು ಮತ್ತು ಜೈವಿಕ ಮೂಲಗಳನ್ನು ವಿವೇಕಯುತವಾಗಿ ಸಂಯೋಜಿಸುವ ಮೂಲಕ ಇದು ಪೋಷಕಾಂಶಗಳ ಸಮರ್ಥ ಮತ್ತು ಆರ್ಥಿಕ ಬಳಕೆಯನ್ನು ಖಚಿತಪಡಿಸುತ್ತದೆ. ಬೆಳೆಗಳ ಸಂಪೂರ್ಣ ಪೋಷಕಾಂಶದ ಅಗತ್ಯಗಳನ್ನು ಕೇವಲ ರಾಸಾಯನಿಕ ಅಥವಾ ಕೇವಲ ಸಾವಯವ ಮೂಲಗಳಿಂದ ಪೂರೈಸಲು ಸಾಧ್ಯವಿಲ್ಲ ಎಂದು INM ಗುರುತಿಸುತ್ತದೆ. ಇದು ಈ ಕೆಳಗಿನವುಗಳ ಸಮಗ್ರ ಬಳಕೆಯನ್ನು ಉತ್ತೇಜಿಸುತ್ತದೆ:

  • ರಾಸಾಯನಿಕ ರಸಗೊಬ್ಬರಗಳು: ಅಗತ್ಯ ಪೋಷಕಾಂಶಗಳನ್ನು  ಒದಗಿಸಲು.
  • ಸಾವಯವ ಪದಾರ್ಥಗಳು: ಕಂಪೋಸ್ಟ್, ಕೊಟ್ಟಿಗೆ ಗೊಬ್ಬರ ಮತ್ತು ಧೈಂಚಾದಂತಹ ಹಸಿರು ಎಲೆ ಗೊಬ್ಬರಗಳನ್ನು ಬಳಸಿ ಮಣ್ಣಿನ ರಚನೆ ಮತ್ತು ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುವುದು.
  • ಬೆಳೆ ಪರಿವರ್ತನೆ ಮತ್ತು ತ್ಯಾಜ್ಯ ನಿರ್ವಹಣೆ: ಬೆಳೆ ವೈವಿಧ್ಯತೆಯನ್ನು ಹೆಚ್ಚಿಸುವುದು ಮತ್ತು ಕೀಟಗಳ ಚಕ್ರವನ್ನು ತಡೆಯುವುದು.

2. ತಂತ್ರಜ್ಞಾನದ ಮೂಲಕ ಕಸ್ಟಮೈಸ್ಡ್ ರಸಗೊಬ್ಬರಗಳು

ನಿರ್ದಿಷ್ಟ ಬೆಳೆ ಮತ್ತು ಮಣ್ಣಿನ ಅಗತ್ಯಕ್ಕೆ ಅನುಗುಣವಾಗಿ ಇವುಗಳನ್ನು ತಯಾರಿಸಲಾಗುತ್ತದೆ. ಸ್ಥಳೀಯ ಮಣ್ಣಿನ ಕೊರತೆಯನ್ನು ಆಧರಿಸಿ ಸತು, ಬೋರಾನ್ ಮತ್ತು ಗಂಧಕದಂತಹ ಲಘು ಪೋಷಕಾಂಶಗಳನ್ನು ಯೂರಿಯಾ ಅಥವಾ ಡಿಎಪಿ ಜೊತೆಗೆ ಬೆರೆಸಿ ಬಳಸುವುದರಿಂದ ರಸಗೊಬ್ಬರದ ದಕ್ಷತೆ ಹೆಚ್ಚುತ್ತದೆ.

3. ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಶಿಫಾರಸುಗಳು

ಮಣ್ಣಿನಲ್ಲಿ ಪೋಷಕಾಂಶಗಳ ಮಟ್ಟವನ್ನು (ಕಡಿಮೆ, ಮಧ್ಯಮ ಅಥವಾ ಹೆಚ್ಚು) ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ಗೊಬ್ಬರ ನೀಡುವ ವಿಧಾನವಿದು. ಮಣ್ಣಿನ ಆರೋಗ್ಯ ಕಾರ್ಡ್ ಯೋಜನ ಈ ನಿಟ್ಟಿನಲ್ಲಿ ರೈತರಿಗೆ ತಮ್ಮ ಹೊಲದ ಮಣ್ಣಿನ ದತ್ತಾಂಶವನ್ನು ಒದಗಿಸಿ, ನಿಖರವಾಗಿ ಗೊಬ್ಬರ ಬಳಸಲು ನೆರವಾಗುತ್ತಿದೆ.

4. ಮಣ್ಣಿನ ಪರೀಕ್ಷೆ ಮತ್ತು ಬೆಳೆ ಪ್ರತಿಕ್ರಿಯೆ ವಿಧಾನ

ಈ ವಿಧಾನವು ರಸಗೊಬ್ಬರ ಬಳಕೆಯನ್ನು ನೇರವಾಗಿ ಬೆಳೆ ಇಳುವರಿಯ ಗುರಿಯೊಂದಿಗೆ ಜೋಡಿಸುತ್ತದೆ. ಮಣ್ಣಿನ ಸ್ಥಿತಿ ಮತ್ತು ಹವಾಮಾನವನ್ನು ಗಮನಿಸಿ, ನಿರೀಕ್ಷಿತ ಇಳುವರಿ ಪಡೆಯಲು ಬೇಕಾದ ನಿಖರ ಪ್ರಮಾಣದ ಗೊಬ್ಬರವನ್ನು ಇದು ಲೆಕ್ಕಹಾಕುತ್ತದೆ.

5. ರೋಗನಿರ್ಣಯ ಮತ್ತು ಶಿಫಾರಸು ಸಮಗ್ರ ವ್ಯವಸ್ಥೆ

ಈ ವಿಧಾನವು ಪೋಷಕಾಂಶಗಳ ಸಂಪೂರ್ಣ ಮೌಲ್ಯದ ಬದಲು, ಸಸ್ಯದ ಅಂಗಾಂಶಗಳಲ್ಲಿನ ಪೋಷಕಾಂಶಗಳ ಅನುಪಾತವನ್ನು (ಉದಾಹರಣೆಗೆ N/P ಅಥವಾ N/K) ವಿಶ್ಲೇಷಿಸುತ್ತದೆ. ದೀರ್ಘಕಾಲದ ಬೆಳೆಗಳಲ್ಲಿ (ಉದಾ: ಗೋಧಿ, ಸೋಯಾಬೀನ್) ಪೋಷಕಾಂಶಗಳ ಅಸಮತೋಲನ ಕಂಡುಬಂದಾಗ 'ಟಾಪ್ ಡ್ರೆಸ್ಸಿಂಗ್' (ಮೇಲುಗೊಬ್ಬರ) ಮೂಲಕ ಸರಿಪಡಿಸಲು ಇದು ಸಹಕಾರಿ.

6. ಸ್ಥಳ-ನಿರ್ದಿಷ್ಟ ಪೋಷಕಾಂಶ ನಿರ್ವಹಣೆ

ಒಂದೇ ಹೊಲದ ವಿವಿಧ ಭಾಗಗಳಲ್ಲಿರುವ ಮಣ್ಣಿನ ವೈವಿಧ್ಯತೆಗೆ ಅನುಗುಣವಾಗಿ ಗೊಬ್ಬರ ನೀಡುವುದು ಇದರ ಉದ್ದೇಶ. ಇದು ಮೂರು ಹಂತಗಳನ್ನು ಒಳಗೊಂಡಿದೆ:

  1. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಾಸ್ತವಿಕ ಇಳುವರಿ ಗುರಿಯನ್ನು ನಿಗದಿಪಡಿಸುವುದು.
  2. ಮಣ್ಣು ಮತ್ತು ಸಾವಯವ ಮೂಲಗಳಿಂದ ಲಭ್ಯವಿರುವ ಪೋಷಕಾಂಶಗಳನ್ನು ಅಂದಾಜು ಮಾಡುವುದು.
  3. ಬಾಕಿ ಇರುವ ಕೊರತೆಯನ್ನು ನೀಗಿಸಲು ಮಾತ್ರ ರಸಗೊಬ್ಬರಗಳನ್ನು ಬಳಸುವುದು.

ಈ ವಿಧಾನವು ಮೂರು ಹಂತಗಳನ್ನು ಅನುಸರಿಸುತ್ತದೆ:

  1. ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ವಾಸ್ತವಿಕ ಇಳುವರಿ ಗುರಿಯನ್ನು ನಿಗದಿಪಡಿಸುವುದು.
  2. ಮಣ್ಣು ಮತ್ತು ಸಾವಯವ ಮೂಲಗಳಿಂದ ಲಭ್ಯವಿರುವ ಸ್ಥಳೀಯ ಪೋಷಕಾಂಶಗಳ ಪೂರೈಕೆಯನ್ನು ಅಂದಾಜು ಮಾಡುವುದು.
  3. ಉಳಿದ ಕೊರತೆಯನ್ನು ನೀಗಿಸಲು ಮಾತ್ರ ರಸಗೊಬ್ಬರಗಳನ್ನು ಬಳಸುವುದು.
  4. ಪುನರುತ್ಪಾದಕ ಕೃಷಿ: ಸಮತೋಲಿತ ರಸಗೊಬ್ಬರ ಬಳಕೆಗೆ ಒಂದು ಪೂರಕ ವಿಧಾನ

ಪುನರುತ್ಪಾದಕ ಕೃಷಿಯು

ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸುವ ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ಸಮಗ್ರ ಕೃಷಿ ವಿಧಾನವಾಗಿದೆ. ಮಣ್ಣಿನ ಅಗೆಯುವಿಕೆಯನ್ನು ಕಡಿಮೆ ಮಾಡುವುದು, ಬೆಳೆ ಪರಿವರ್ತನೆಯನ್ನು ಉತ್ತೇಜಿಸುವುದು, ಹೊದಿಕೆ ಬೆಳೆಗಳನ್ನು ಬೆಳೆಸುವುದು ಮತ್ತು ಅರಣ್ಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇದರ ಪ್ರಮುಖ ಪದ್ಧತಿಗಳಾಗಿವೆ.

ಮಣ್ಣಿನ ರಚನೆಯನ್ನು ಸುಧಾರಿಸುವ ಮೂಲಕ ಮತ್ತು ಸಾವಯವ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ಪುನರುತ್ಪಾದಕ ಪದ್ಧತಿಗಳು ಪೋಷಕಾಂಶಗಳು ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದು ಬೆಳೆಗಳು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಪೋಷಕಾಂಶಗಳ ವ್ಯರ್ಥವಾಗುವುದು ಕಡಿಮೆಯಾಗುತ್ತದೆ, ಪದೇ ಪದೇ ರಸಗೊಬ್ಬರ ಬಳಸುವ ಅಗತ್ಯತೆ ತಗ್ಗುತ್ತದೆ ಮತ್ತು ಪೋಷಕಾಂಶಗಳ ದಕ್ಷ ಬಳಕೆ ಸಾಧ್ಯವಾಗುತ್ತದೆ. ಭಾರತೀಯ ಸಂದರ್ಭದಲ್ಲಿ, ಹನಿ ನೀರಾವರಿ, ನಿಖರ ಯಾಂತ್ರೀಕರಣ, ನೈಸರ್ಗಿಕ ಕೃಷಿ, ಹೊದಿಕೆ ಬೆಳೆ ಬೆಳೆಯುವುದು, ಮಲ್ಚಿಂಗ್ (ಹೊದಿಕೆ) ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳು ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ಪುನರುತ್ಪಾದಕ ವಿಧಾನಗಳಾಗಿವೆ.

ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುವ ಸರ್ಕಾರದ ಉಪಕ್ರಮಗಳು

ಮಣ್ಣಿನ ಆರೋಗ್ಯವನ್ನು ಸುಧಾರಿಸಲು, ಬೆಳೆ ಉತ್ಪಾದಕತೆಯನ್ನು ಕಾಪಾಡಿಕೊಳ್ಳಲು ಮತ್ತು ಪರಿಸರ ಮಾಲಿನ್ಯವನ್ನು ತಗ್ಗಿಸಲು ಸಮತೋಲಿತ ರಸಗೊಬ್ಬರ ಬಳಕೆಯ ಪ್ರಾಮುಖ್ಯತೆಯನ್ನು ಗುರುತಿಸಿರುವ ಭಾರತ ಸರ್ಕಾರವು, ಕೃಷಿ ವಲಯದಾದ್ಯಂತ ಇದನ್ನು ಉತ್ತೇಜಿಸಲು ಹಲವಾರು ಸಕ್ರಿಯ ಉಪಕ್ರಮಗಳನ್ನು ಕೈಗೊಂಡಿದೆ.

ಮಣ್ಣಿನ ಆರೋಗ್ಯ ಕಾರ್ಡ್

 2015 ರಲ್ಲಿ ಪ್ರಾರಂಭಿಸಲಾದ ಮಣ್ಣಿನ ಆರೋಗ್ಯ ಕಾರ್ಡ್  ಯೋಜನೆಯು ರೈತರಿಗೆ ವೈಜ್ಞಾನಿಕ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಪ್ರತಿಯೊಂದು ಜಮೀನಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಸಿದ್ಧಪಡಿಸಿದ ರೋಗನಿರ್ಣಯ ವರದಿಯನ್ನು ಒದಗಿಸುತ್ತದೆ. ಈ ಕಾರ್ಡ್ ಮಣ್ಣಿನ ಆರೋಗ್ಯವನ್ನು 12 ಪ್ರಮುಖ ನಿಯತಾಂಕಗಳ ಅಡಿಯಲ್ಲಿ ಮೌಲ್ಯಮಾಪನ ಮಾಡುತ್ತದೆ. ಅವುಗಳೆಂದರೆ: ಅಧಿಕ ಪೋಷಕಾಂಶಗಳು: ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಗಂಧಕ; ಲಘು ಪೋಷಕಾಂಶಗಳು: ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಬೋರಾನ್; ಹಾಗೂ ಮಣ್ಣಿನ ಪ್ರತಿಕ್ರಿಯೆ, ವಿದ್ಯುತ್ ವಾಹಕತೆ ಮತ್ತು ಸಾವಯವ ಇಂಗಾಲದ ಅಂತಹ ಮಣ್ಣಿನ ನಿರ್ಣಾಯಕ ಗುಣಲಕ್ಷಣಗಳು.

ಪ್ರತಿ ಎರಡು ವರ್ಷಕ್ಕೊಮ್ಮೆ ನೀಡಲಾಗುವ ಮಣ್ಣಿನ ಆರೋಗ್ಯ ಕಾರ್ಡ್ ರೈತರಿಗೆ ಅವರ ಮಣ್ಣಿನ ಪೋಷಕಾಂಶದ ಸ್ಥಿತಿ ಮತ್ತು ಭೌತ-ರಾಸಾಯನಿಕ ಪರಿಸ್ಥಿತಿಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ನೀಡುತ್ತದೆ. ಇದು ರಾಸಾಯನಿಕ ರಸಗೊಬ್ಬರಗಳು, ಜೈವಿಕ ಗೊಬ್ಬರಗಳು, ಸಾವಯವ ಪರಿಕರಗಳು ಮತ್ತು ಮಣ್ಣಿನ ಸಂಸ್ಕರಣೆಗಳ ಸೂಕ್ತ ಬಳಕೆಯ ಬಗ್ಗೆ ಬೆಳೆ-ಆಧಾರಿತ ಶಿಫಾರಸುಗಳನ್ನು ನೀಡುವ ಮೂಲಕ ರೈತರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ದೀರ್ಘಕಾಲದ ಮಣ್ಣಿನ ಆರೋಗ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಜುಲೈ 2025 ರ ವೇಳೆಗೆ, ಈ ಯೋಜನೆಯು 93,000 ಕ್ಕೂ ಹೆಚ್ಚು ರೈತ ತರಬೇತಿ ಕಾರ್ಯಕ್ರಮಗಳು, ಸುಮಾರು 6.8 ಲಕ್ಷ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು ಮತ್ತು ಸಾವಿರಾರು ಜಾಗೃತಿ ಅಭಿಯಾನಗಳನ್ನು ಒದಗಿಸಿದೆ. ನವೆಂಬರ್ 2025 ರ ಮಧ್ಯದ ವೇಳೆಗೆ, ದೇಶಾದ್ಯಂತ 25.55 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ, ಇದು ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸುವಲ್ಲಿ ಈ ಯೋಜನೆಯ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ.

ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆ

 ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆಯು ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಗಂಧಕದಂತಹ ಅಗತ್ಯ ಪೋಷಕಾಂಶಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸುತ್ತದೆ. ಇದು ರೈತರು ಕೇವಲ ಒಂದು ರಸಗೊಬ್ಬರದ ಮೇಲೆ ಅತಿಯಾಗಿ ಅವಲಂಬಿತವಾಗುವುದನ್ನು ತಪ್ಪಿಸಲು ಮತ್ತು ಬೆಳೆ ಉತ್ಪಾದಕತೆಯನ್ನು ಸುಧಾರಿಸುವ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯಡಿ, ಸರ್ಕಾರವು ಡಿಎಪಿ (DAP) ಸೇರಿದಂತೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳ ಮೇಲೆ ನಿಗದಿತ ಸಬ್ಸಿಡಿಯನ್ನು ನೀಡುತ್ತದೆ. ಸಬ್ಸಿಡಿ ದರಗಳನ್ನು ಪ್ರತಿ ರಸಗೊಬ್ಬರದ ಪೋಷಕಾಂಶದ ಅಂಶಕ್ಕೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ ಮತ್ತು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. ರಬಿ 2025-26 ಗಾಗಿ ಅನುಮೋದಿಸಲಾದ NBS ದರಗಳು ಅಕ್ಟೋಬರ್ 1, 2025 ರಿಂದ ಮಾರ್ಚ್ 31, 2026 ರವರೆಗೆ ಅನ್ವಯವಾಗುತ್ತವೆ. 2022-23 ಮತ್ತು 2024-25 ರ ನಡುವೆ, ಸ್ವದೇಶಿ ಮತ್ತು ಆಮದು ಮಾಡಿದ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳಿಗಾಗಿ ₹2.04 ಲಕ್ಷ ಕೋಟಿಗೂ ಹೆಚ್ಚು ಸಬ್ಸಿಡಿಯನ್ನು ಮೀಸಲಿಡಲಾಗಿದೆ.

ಬೇವಿನ ಲೇಪಿತ ಯೂರಿಯಾ

 ದೇಶೀಯವಾಗಿ ಉತ್ಪಾದಿಸುವ ಎಲ್ಲಾ ಯೂರಿಯಾ ಮೇಲೆ 100 ಪ್ರತಿಶತ ಬೇವಿನ ಲೇಪನವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಸರಿದೂಗಿಸಲು ರಸಗೊಬ್ಬರ ತಯಾರಕರು ಗರಿಷ್ಠ ಚಿಲ್ಲರೆ ಬೆಲೆಯ ಮೇಲೆ ಶೇಕಡಾ 5 ರಷ್ಟು ಹೆಚ್ಚುವರಿಯಾಗಿ ವಿಧಿಸಲು ಅನುಮತಿ ನೀಡಿದೆ. ಈ ಅಗತ್ಯತೆಯನ್ನು ದೇಶೀಯವಾಗಿ ತಯಾರಿಸಿದ ಯೂರಿಯಾಗೆ ಸೆಪ್ಟೆಂಬರ್ 2015 ರಿಂದ ಮತ್ತು ಆಮದು ಮಾಡಿದ ಯೂರಿಯಾಗೆ ಡಿಸೆಂಬರ್ 2015 ರಿಂದ ಜಾರಿಗೆ ತರಲಾಯಿತು, ಇದರ ಪರಿಣಾಮವಾಗಿ ರಾಷ್ಟ್ರೀಯ ಯೂರಿಯಾ ಪೂರೈಕೆಯು ಸಂಪೂರ್ಣವಾಗಿ ಬೇವಿನ ಲೇಪಿತ ರೂಪಕ್ಕೆ ಪರಿವರ್ತಿತವಾಯಿತು.

ಬೇವಿನ ಲೇಪಿತ ಯೂರಿಯಾವು ಬೇವಿನ ಎಣ್ಣೆಯಿಂದ ಸಂಸ್ಕರಿಸಲ್ಪಟ್ಟ ಸಾಮಾನ್ಯ ಯೂರಿಯಾ ಆಗಿದೆ. ಇದು 'ನೈಟ್ರೀಕರಣ ಪ್ರತಿಬಂಧಕ'ವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಣ್ಣಿನಲ್ಲಿ ಸಾರಜನಕ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ಬೆಳೆಯ ಬೇಡಿಕೆಗೆ ಅನುಗುಣವಾಗಿ ಪೋಷಕಾಂಶಗಳು ಲಭ್ಯವಾಗುತ್ತವೆ. ಇದು ಸಾರಜನಕ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ, ಪೋಷಕಾಂಶಗಳ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಸಗೊಬ್ಬರದ ಅತಿಯಾದ ಬಳಕೆಯನ್ನು ತಡೆಯುತ್ತದೆ. ಇದು ರೈತರು ಯೂರಿಯಾ ಬಳಕೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ, ಬೇವಿನ ಲೇಪಿತ ಯೂರಿಯಾದ ಅಳವಡಿಕೆಯು ಮಣ್ಣಿನ ಆರೋಗ್ಯದ ಸುಧಾರಣೆ ಮತ್ತು ಕೃಷಿ ಉತ್ಪಾದನಾ ವ್ಯವಸ್ಥೆಗಳಲ್ಲಿ ಹೆಚ್ಚಿನ ದಕ್ಷತೆಗೆ ಕೊಡುಗೆ ನೀಡುತ್ತದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ

 2015 ರಲ್ಲಿ ಪ್ರಾರಂಭಿಸಲಾದ ಪರಂಪರಾಗತ ಕೃಷಿ ವಿಕಾಸ ಯೋಜನೆಯು ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹31,500 ಆರ್ಥಿಕ ನೆರವು ನೀಡುವ ಮೂಲಕ ಸಾವಯವ ಕೃಷಿಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು ಕಂಪೋಸ್ಟ್, ಜೈವಿಕ ಗೊಬ್ಬರಗಳು ಮತ್ತು ಸಾವಯವ ಪದಾರ್ಥಗಳ ಬಳಕೆಯನ್ನೂ ಒಳಗೊಂಡಂತೆ, ಸುಸ್ಥಿರ ಮಣ್ಣಿನ ಫಲವತ್ತತೆಯ ವಿಧಾನಗಳೊಂದಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಸಂಯೋಜಿಸುವ ಮೂಲಕ ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಬೆಂಬಲಿಸುತ್ತದೆ. 31ನೇ ಅಕ್ಟೋಬರ್ 2025 ರ ಹೊತ್ತಿಗೆ, ಈ ಯೋಜನೆಯ ಆರಂಭದಿಂದಲೂ ಒಟ್ಟು 16.90 ಲಕ್ಷ ಹೆಕ್ಟೇರ್ ಪ್ರದೇಶವನ್ನು PKVY ಅಡಿಯಲ್ಲಿ ತರಲಾಗಿದೆ.

ಪಿಎಂ-ಪ್ರಣಾಮ್ (PM-PRANAM - ತಾಯಿ ಭೂಮಿಯ ಪುನಃಸ್ಥಾಪನೆ, ಜಾಗೃತಿ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನ ಮಂತ್ರಿ ಕಾರ್ಯಕ್ರಮ)

 ಪಿಎಂ-ಪ್ರಣಾಮ್ ಯೋಜನೆಯು ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಮತೋಲಿತ ಪೋಷಕಾಂಶಗಳ ಅನ್ವಯವನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಈ ಯೋಜನೆಯು ಸಾವಯವ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಕಂಪೋಸ್ಟ್‌ನಂತಹ ಪರಿಸರ ಸ್ನೇಹಿ ಪರ್ಯಾಯಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ. ನೀಡಲಾದ ಹಣಕಾಸಿನ ವರ್ಷದಲ್ಲಿ ರಾಸಾಯನಿಕ ರಸಗೊಬ್ಬರಗಳ (ಯೂರಿಯಾ, ಡಿಎಪಿ, ಎನ್‌ಪಿಕೆ ಮತ್ತು ಎಂಒಪಿ) ಬಳಕೆಯನ್ನು ಹಿಂದಿನ ಮೂರು ವರ್ಷಗಳ ಸರಾಸರಿ ಬಳಕೆಗೆ ಹೋಲಿಸಿದರೆ ಕಡಿಮೆ ಮಾಡುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉತ್ತೇಜನ ನೀಡುವ ನಿಬಂಧನೆಯನ್ನು ಈ ಯೋಜನೆ ಹೊಂದಿದೆ. ಸಾಧಿಸಿದ ರಸಗೊಬ್ಬರ ಸಬ್ಸಿಡಿ ಉಳಿತಾಯದ 50 ಪ್ರತಿಶತಕ್ಕೆ ಸಮಾನವಾದ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಹಣಕಾಸು ವರ್ಷ 2023-24 ರ ಅವಧಿಯಲ್ಲಿ, 14 ರಾಜ್ಯಗಳು ಹಿಂದಿನ 3 ಹಣಕಾಸು ವರ್ಷಗಳ ಸರಾಸರಿಗೆ ಹೋಲಿಸಿದರೆ ರಾಸಾಯನಿಕ ರಸಗೊಬ್ಬರ ಬಳಕೆಯಲ್ಲಿ 15.14 ಲಕ್ಷ ಮೆಟ್ರಿಕ್ ಟನ್ ಕಡಿತವನ್ನು ದಾಖಲಿಸಿವೆ.

ನ್ಯಾನೋ ರಸಗೊಬ್ಬರಗಳ ಉತ್ತೇಜನ

ನ್ಯಾನೋ ರಸಗೊಬ್ಬರಗಳು ಸಸ್ಯದ ಪೋಷಕಾಂಶಗಳಾಗಿದ್ದು, ಇವುಗಳನ್ನು ನ್ಯಾನೊಮೆಟೀರಿಯಲ್ಸ್ ಎಂದು ಕರೆಯಲಾಗುವ ಅತಿ ಸಣ್ಣ ಕಣಗಳಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಇದು ಪೋಷಕಾಂಶಗಳು ನಿಧಾನವಾಗಿ ಬಿಡುಗಡೆಯಾಗಲು ಮತ್ತು ಬೆಳೆಗಳು ಅತ್ಯಂತ ದಕ್ಷತೆಯಿಂದ, ಕನಿಷ್ಠ ವ್ಯರ್ಥದೊಂದಿಗೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇವುಗಳ ಬಳಕೆಯನ್ನು ಉತ್ತೇಜಿಸಲು, ರಸಗೊಬ್ಬರ ಇಲಾಖೆಯು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ:

  • ಕಾರ್ಯಾಗಾರಗಳು, ವೆಬಿನಾರ್‌ಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ಬೀದಿ ನಾಟಕಗಳು ಮತ್ತು ಪ್ರಾದೇಶಿಕ ಚಲನಚಿತ್ರಗಳ ಮೂಲಕ ಜಾಗೃತಿ ಅಭಿಯಾನಗಳು.
  • ದೇಶಾದ್ಯಂತ ಇರುವ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡೈಅಮೋನಿಯಂ ಫಾಸ್ಫೇಟ್ (DAP) ಲಭ್ಯತೆ.
  • ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾಸಿಕ ರಸಗೊಬ್ಬರ ಪೂರೈಕೆ ಯೋಜನೆಯಲ್ಲಿ ನ್ಯಾನೋ ಯೂರಿಯಾ ಸಂಯೋಜನೆ.
  • ನ್ಯಾನೋ ತಳಿಗಳು ಸೇರಿದಂತೆ ಸಮತೋಲಿತ ರಸಗೊಬ್ಬರ ಬಳಕೆಯ ದೇಶವ್ಯಾಪಿ ಪ್ರಚಾರ.
  • ಕ್ಷೇತ್ರ ಪ್ರಾತ್ಯಕ್ಷಿಕೆಗಳು ಮತ್ತು ಸಂಘಟಿತ ರೈತ ಸಂವಾದಗಳ ಬೆಂಬಲದೊಂದಿಗೆ, ಎಲ್ಲಾ 15 ಕೃಷಿ-ಹವಾಮಾನ ವಲಯಗಳಲ್ಲಿ ನ್ಯಾನೋ ಡೈಅಮೋನಿಯಂ ಫಾಸ್ಫೇಟ್ (DAP) ಅಳವಡಿಕೆಯನ್ನು ಉತ್ತೇಜಿಸಲು "ಮಹಾ ಅಭಿಯಾನ" ಸಂಘಟನೆ.
  • ತರಬೇತಿ ಪಡೆದ ಗ್ರಾಮ ಮಟ್ಟದ ಉದ್ಯಮಿಗಳ ನೆರವಿನೊಂದಿಗೆ, ದಕ್ಷ ಮತ್ತು ವೆಚ್ಚ-ಪರಿಣಾಮಕಾರಿ ಬಳಕೆಗೆ ಅನುವು ಮಾಡಿಕೊಡಲು ಡ್ರೋನ್-ಆಧಾರಿತ ಸಿಂಪಡಣೆ ಮತ್ತು ಬ್ಯಾಟರಿ ಚಾಲಿತ ಸ್ಪ್ರೇಯರ್‌ಗಳ ಉತ್ತೇಜನ.
  • ನ್ಯಾನೋ-ರಸಗೊಬ್ಬರಗಳ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಹೆಚ್ಚಿಸಲು ರಸಗೊಬ್ಬರ ಕಂಪನಿಗಳಿಗೆ ಪ್ರೋತ್ಸಾಹ.

ಕಸ್ಟಮೈಸ್ಡ್ ಮತ್ತು ಫೋರ್ಟಿಫೈಡ್ ರಸಗೊಬ್ಬರಗಳ ಅಭಿವೃದ್ಧಿ

 ಪೋಷಕಾಂಶಗಳ ಅಗತ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಿದ ಫೋರ್ಟಿಫೈಡ್ (ಪೋಷಕಾಂಶ ವರ್ಧಿತ), ಮಣ್ಣು-, ಬೆಳೆ-, ಮತ್ತು ಪ್ರದೇಶ-ನಿರ್ದಿಷ್ಟ ರಸಗೊಬ್ಬರಗಳ ಅಳವಡಿಕೆಯನ್ನು ಸರ್ಕಾರವು ಉತ್ತೇಜಿಸುತ್ತಿದೆ. ಪೋಷಕಾಂಶ ಆಧಾರಿತ ಸಬ್ಸಿಡಿ ನೀತಿಯ ಅಡಿಯಲ್ಲಿ, ಬೋರಾನ್ ಮತ್ತು ಸತುವಿನಂತಹ ಲಘು ಪೋಷಕಾಂಶಗಳೊಂದಿಗೆ ಫೋರ್ಟಿಫೈಡ್ ಮಾಡಿದ ಅಥವಾ ಲೇಪಿತವಾದ ಸಬ್ಸಿಡಿ ಸಹಿತ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರ ರೂಪಾಂತರಗಳು ಸಬ್ಸಿಡಿ ನೆರವಿಗೆ ಅರ್ಹವಾಗಿವೆ. ಹೆಚ್ಚುವರಿಯಾಗಿ, ಪ್ರಾಥಮಿಕ ಪೋಷಕಾಂಶಗಳ ಜೊತೆಗೆ ಇವುಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಸಮತೋಲಿತ ಪೋಷಕಾಂಶ ಅನ್ವಯವನ್ನು ಉತ್ತೇಜಿಸಲು ಈ ಫೋರ್ಟಿಫೈಡ್ ಅಥವಾ ಲೇಪಿತ ರಸಗೊಬ್ಬರಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ಹೆಚ್ಚುವರಿ ಸಬ್ಸಿಡಿಯನ್ನು ನೀಡಲಾಗುತ್ತದೆ.

ರಸಗೊಬ್ಬರ ಪೂರೈಕೆ ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಜಾರಿ ಕ್ರಮಗಳು ಭಾರತ ಸರ್ಕಾರದ ರಸಗೊಬ್ಬರ ಇಲಾಖೆಯು, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯೊಂದಿಗೆ ನಿಕಟ ಸಮನ್ವಯದೊಂದಿಗೆ, ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ರಸಗೊಬ್ಬರ ಪೂರೈಕೆ ಸರಪಳಿಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು 2025-26ರ ಖಾರಿಫ್ ಮತ್ತು ಪ್ರಸ್ತುತ ನಡೆಯುತ್ತಿರುವ ರಬಿ ಹಂಗಾಮಿನಲ್ಲಿ (ಏಪ್ರಿಲ್ - ಜನವರಿ ಮಧ್ಯದವರೆಗೆ, 26) ಸಮಗ್ರ ಜಾರಿ ಅಭಿಯಾನವನ್ನು ಕೈಗೊಂಡಿದೆ.

ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ, ರಸಗೊಬ್ಬರಗಳ ಅಕ್ರಮ ವರ್ಗಾವಣೆ ಮತ್ತು ದುರುಪಯೋಗವನ್ನು ತಡೆಗಟ್ಟಲು ತಪಾಸಣೆ, ದಾಳಿ ಮತ್ತು ಕಾನೂನು ಕ್ರಮಗಳು ಸೇರಿದಂತೆ ವ್ಯಾಪಕ ಜಾರಿ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ಅಭಿಯಾನದ ಭಾಗವಾಗಿ, 14,692 ಶೋ-ಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ, 6,373 ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ ಮತ್ತು 766 ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಾಗಿದೆ. ಈ ಪೂರ್ವಭಾವಿ ಮತ್ತು ಕಠಿಣ ಕ್ರಮಗಳು ರಸಗೊಬ್ಬರಗಳ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸುತ್ತವೆ, ಮಾರುಕಟ್ಟೆ ಶಿಸ್ತನ್ನು ಬಲಪಡಿಸುತ್ತವೆ ಮತ್ತು ದೇಶಾದ್ಯಂತ ರಸಗೊಬ್ಬರ ವಿತರಣಾ ವ್ಯವಸ್ಥೆಗಳ ಪಾರದರ್ಶಕತೆಯನ್ನು ಕಾಪಾಡುತ್ತವೆ.

ಉಪಸಂಹಾರ

ಮಣ್ಣಿನ ಸವಕಳಿ, ಪೋಷಕಾಂಶಗಳ ಅಸಮತೋಲನ ಮತ್ತು ಪರಿಸರದ ಒತ್ತಡದಂತಹ ಉದಯೋನ್ಮುಖ ಸವಾಲುಗಳನ್ನು ಎದುರಿಸುವ ಜೊತೆಗೆ ಕೃಷಿ ಉತ್ಪಾದಕತೆಯನ್ನು ಕಾಪಾಡಿಕೊಳ್ಳುವ ಭಾರತದ ಕಾರ್ಯತಂತ್ರದಲ್ಲಿ ಸಮತೋಲಿತ ರಸಗೊಬ್ಬರ ಬಳಕೆಯು ಕೇಂದ್ರಬಿಂದುವಾಗಿದೆ. ಅಸಮತೋಲಿತ ರಸಗೊಬ್ಬರ ಬಳಕೆಯಿಂದ ಉಂಟಾಗುವ ಅಪಾಯಗಳನ್ನು ಗುರುತಿಸಿರುವ ಸರ್ಕಾರವು, ವೈಜ್ಞಾನಿಕ ಮತ್ತು ರೈತ-ಕೇಂದ್ರಿತ ಮಧ್ಯಸ್ಥಿಕೆಗಳ ಮೂಲಕ ಪೋಷಕಾಂಶಗಳ ಅಸಮತೋಲನವನ್ನು ಸರಿಪಡಿಸಲು ಮತ್ತು ರಸಗೊಬ್ಬರ ಬಳಕೆಯ ದಕ್ಷತೆಯನ್ನು ಸುಧಾರಿಸಲು ಪೂರ್ವಭಾವಿ ಹಾಗೂ ಸಂಘಟಿತ ಕ್ರಮಗಳನ್ನು ಕೈಗೊಂಡಿದೆ.

ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯಡಿ ಮಣ್ಣಿನ ಪರೀಕ್ಷೆ ಆಧಾರಿತ ಶಿಫಾರಸುಗಳು, ಪೋಷಕಾಂಶ ಆಧಾರಿತ ಸಬ್ಸಿಡಿ, ಸಮಗ್ರ ಪೋಷಕಾಂಶ ನಿರ್ವಹಣೆಯ ಉತ್ತೇಜನ, ಕಸ್ಟಮೈಸ್ಡ್ ಮತ್ತು ಫೋರ್ಟಿಫೈಡ್ ರಸಗೊಬ್ಬರಗಳ ಪ್ರೋತ್ಸಾಹ ಮತ್ತು ನ್ಯಾನೋ ರಸಗೊಬ್ಬರಗಳಂತಹ ನವೀನ ಪರಿಕರಗಳ ಅಳವಡಿಕೆಯು ಪೋಷಕಾಂಶಗಳ ಅಸಮತೋಲನವನ್ನು ಪರಿಹರಿಸಲು ಮತ್ತು ರಸಗೊಬ್ಬರ ಬಳಕೆಯ ದಕ್ಷತೆಯನ್ನು ಸುಧಾರಿಸಲು ಕೈಗೊಂಡ ತೀವ್ರ ನೀತಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ. ಒಟ್ಟಾರೆಯಾಗಿ, ಈ ಮಧ್ಯಸ್ಥಿಕೆಗಳು ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು, ಪರಿಕರಗಳ ಬಳಕೆಯನ್ನು ಉತ್ತಮಗೊಳಿಸಲು ಮತ್ತು ಕೃಷಿ ವಲಯದ ದೀರ್ಘಕಾಲೀನ ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆಯನ್ನು ಬಲಪಡಿಸಲು ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸುತ್ತದೆ.

 

******

 

(Explainer ID: 157150) आगंतुक पटल : 7
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Telugu , Malayalam
Link mygov.in
National Portal Of India
STQC Certificate