Social Welfare
ಭಾರತ ಪರ್ವ 2026
ಭಾರತದ ಪರಂಪರೆಯ ಜೀವಂತ ವೈವಿಧ್ಯ
Posted On:
31 JAN 2026 3:57PM
ಗಣರಾಜ್ಯದ ಹೃದಯಭಾಗದಲ್ಲಿ ಸಂಸ್ಕೃತಿಯ ಹಬ್ಬ
ಭಾರತದ 77ನೇ ಗಣರಾಜ್ಯೋತ್ಸವದ ಪರೇಡ್‌ನ ಸದ್ದು ಜನವರಿಯ ತಂಪಾದ ಹವೆಯಲ್ಲಿ ಮರೆಯಾಗುತ್ತಿದ್ದಂತೆ, ದೆಹಲಿಯ ಐತಿಹಾಸಿಕ ಕೆಂಪು ಕೋಟೆಯು ರಾಷ್ಟ್ರದ ಆತ್ಮವನ್ನು ಬಿಂಬಿಸುವ ಜೀವಂತ ಕ್ಯಾನ್ವಾಸ್ ಆಗಿ ಮಾರ್ಪಟ್ಟಿತು.

ಪ್ರವಾಸೋದ್ಯಮ ಸಚಿವಾಲಯವು ಆಯೋಜಿಸಿದ ಆರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಉತ್ಸವವಾದ 'ಭಾರತ್ ಪರ್ವ 2026', ಜನವರಿ 26 ರಂದು ಪ್ರಾರಂಭವಾಗಿ ಜನವರಿ 31 ರವರೆಗೆ ನಡೆಯಿತು. 2016 ರಿಂದ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವು, ಭಾರತದ ವೈವಿಧ್ಯಮಯ ಪರಂಪರೆಯ ಸುಂದರ ಲೋಕದಲ್ಲಿ ಮುಳುಗೇಳಲು ಪ್ರವಾಸಿಗರನ್ನು ಆಹ್ವಾನಿಸುತ್ತದೆ.
ದೆಹಲಿಯ ಕೆಂಪು ಕೋಟೆಯ ಮುಂಭಾಗದ ಜ್ಞಾನ ಪಥ್ ಮತ್ತು ಲಾನ್‌ಗಳಲ್ಲಿ ನಡೆಯುವ ಈ ಉತ್ಸವವು "ಏಕ್ ಭಾರತ್, ಶ್ರೇಷ್ಠ ಭಾರತ್" ಮತ್ತು "ದೇಖೋ ಅಪ್ನಾ ದೇಶ್" ಎಂಬ ರಾಷ್ಟ್ರೀಯ ಉಪಕ್ರಮಗಳನ್ನು ಉತ್ತೇಜಿಸುತ್ತದೆ.


ವಂದೇ ಮಾತರಂಗೆ 150 ವರ್ಷಗಳ ಸಂಭ್ರಮ
ಈ ವರ್ಷದ ಭಾರತ್ ಪರ್ವಕ್ಕೆ ವಿಶೇಷ ಮಹತ್ವವಿತ್ತು. ಇದು ಕೇವಲ ಗಣರಾಜ್ಯೋತ್ಸವದ ಸಂಭ್ರಮವಷ್ಟೇ ಅಲ್ಲದೆ, 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವದ ನೆನಪನ್ನೂ ಹೊತ್ತು ತಂದಿತ್ತು. ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆ ಮೊದಲು 1875ರಲ್ಲಿ ಪ್ರಕಟವಾಗಿತ್ತು. ಈ ವರ್ಷದ ಥೀಮ್ ಆಧುನಿಕ ಭಾರತಕ್ಕೆ ಜನ್ಮ ನೀಡಿದ ಕ್ರಾಂತಿಕಾರಿ ಮನೋಭಾವ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿತು.



ಭಾರತದ ಪಯಣ: ಒಂದೊಂದೇ ಮಳಿಗೆಯ ಅನಾವರಣ
ಉತ್ಸವದ ಮೈದಾನದಾದ್ಯಂತ, ಭಾರತದ ವೈವಿಧ್ಯತೆಯು ಹಂತ ಹಂತವಾಗಿ ಸಾಕ್ಷಾತ್ಕಾರಗೊಳ್ಳುತ್ತಿತ್ತು.
ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು: ಚಲಿಸುವ ಕಥಾನಕಗಳು
ಜನೆವರಿ 26 ರಂದು 'ಕರ್ತವ್ಯ ಪಥ'ದಲ್ಲಿ ಸಾಗಿದ ದೃಶ್ಯ ವೈಭವಗಳನ್ನು ಹತ್ತಿರದಿಂದ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಿದ 41 ಸ್ತಬ್ಧಚಿತ್ರಗಳ ಪ್ರದರ್ಶನವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು.
ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ಪ್ರತಿನಿಧಿಸುವ ಈ ಸ್ತಬ್ಧಚಿತ್ರಗಳು ಸಾಂಸ್ಕೃತಿಕ ಪರಂಪರೆ, ಪರಿಸರ ಜಾಗೃತಿ, ನಾವೀನ್ಯತೆ ಮತ್ತು ಸಾಮಾಜಿಕ ಪ್ರಗತಿಯಂತಹ ವಿವಿಧ ವಿಷಯಗಳನ್ನು ಬಿಂಬಿಸಿದವು. ಇವುಗಳನ್ನು ಹತ್ತಿರದಿಂದ ನೋಡಿದಾಗ, ಅವುಗಳಲ್ಲಿ ಅಡಗಿದ್ದ ಕಲಾಕುಶಲತೆ ಮತ್ತು ಸಾಂಕೇತಿಕ ಅರ್ಥಗಳು ಅದ್ಭುತವಾಗಿ ತೆರೆದುಕೊಂಡವು.



ಸಾಂಸ್ಕೃತಿಕ ಪ್ರದರ್ಶನಗಳು: ವೇದಿಕೆಯ ಮೇಲೆ ಅನಾವರಣಗೊಂಡ ಪರಂಪರೆ



ಹಲವಾರು ವೇದಿಕೆಗಳಾದ್ಯಂತ ನಡೆದ 48 ಸಾಂಸ್ಕೃತಿಕ ಪ್ರದರ್ಶನಗಳು ಜಾನಪದ ಮತ್ತು ಶಾಸ್ತ್ರೀಯ ಸಂಪ್ರದಾಯಗಳಿಗೆ ಮರುಜೀವ ನೀಡಿದವು. ವಿವಿಧ ರಾಜ್ಯಗಳ ಕಲಾತಂಡಗಳು, ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಹೆಸರಾಂತ ಕಲಾವಿದರು ಪ್ರಸ್ತುತಪಡಿಸಿದ ನೃತ್ಯ ಪ್ರಕಾರಗಳು, ಸಂಗೀತ ಮೇಳಗಳು ಮತ್ತು ನಾಟಕಗಳು ಪ್ರತಿ ಸಂಜೆಯೂ ಲಯ ಮತ್ತು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿದವು. ಇವುಗಳಿಗೆ ಪೂರಕವಾಗಿ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಬ್ಯಾಂಡ್ ತಂಡಗಳಿಂದ 22 ಪ್ರದರ್ಶನಗಳು ನಡೆದವು. ಅವರ ಸಂಗೀತವು ವಾತಾವರಣದಲ್ಲಿ ಸ್ಫೂರ್ತಿದಾಯಕ ದೇಶಭಕ್ತಿಯ ಮನೋಭಾವವನ್ನು ತುಂಬಿತು.
ಪ್ರಾದೇಶಿಕ ರುಚಿಗಳ ಸಂಗಮ
ಆಹಾರವಿಲ್ಲದ ಭಾರತದ ಪಯಣ ಅಪೂರ್ಣ. ಭಾರತ್ ಪರ್ವದ ಬೃಹತ್ ಆಹಾರ ಮೇಳವು ದೇಶದ 'ಪಾಕಶಾಲೆಯ ನಕ್ಷೆ'ಯಂತೆ ಕಾರ್ಯನಿರ್ವಹಿಸಿತು. 60ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದ ಈ ಆವರಣವು, ಸಾಂಪ್ರದಾಯಿಕ ಪದ್ಧತಿ ಮತ್ತು ಸ್ಥಳೀಯ ಪದಾರ್ಥಗಳನ್ನು ಬಳಸಿ ತಯಾರಿಸಿದ ಪ್ರಾದೇಶಿಕ ಖಾದ್ಯಗಳನ್ನು ಪ್ರದರ್ಶಿಸಿತು; ಇಲ್ಲಿ ಅನೇಕ ಕಡೆ ನೇರ ಅಡುಗೆ ಪ್ರಾತ್ಯಕ್ಷಿಕೆಗಳೂ ನಡೆದವು. ಸಿರಿಧಾನ್ಯ ಆಧಾರಿತ ಖಾದ್ಯಗಳು ಮತ್ತು ಬುಡಕಟ್ಟು ಆಹಾರ ಪದ್ಧತಿಗಳಿಂದ ಹಿಡಿದು, ಪ್ರಸಿದ್ಧ ಪ್ರಾದೇಶಿಕ ರುಚಿಗಳವರೆಗೆ ಪ್ರತಿಯೊಂದೂ ಸಹ ಅಲ್ಲಿನ ಭೌಗೋಳಿಕತೆ, ಹವಾಮಾನ ಮತ್ತು ಸಂಸ್ಕೃತಿಯು ಭಾರತದ ವೈವಿಧ್ಯಮಯ ಆಹಾರ ಪದ್ಧತಿಯನ್ನು ಹೇಗೆ ರೂಪಿಸಿದೆ ಎಂಬುದನ್ನು ಪ್ರತಿಬಿಂಬಿಸಿದವು.
ಸಂದರ್ಶಕರಿಗೆ ಈ ಅನುಭವ ಕೇವಲ ಆಹಾರ ಸೇವನೆಗೆ ಸೀಮಿತವಾಗದೆ, ನಮ್ಮ ಪಾಕಶಾಲೆಯ ಪರಂಪರೆ, ಸುಸ್ಥಿರತೆ ಮತ್ತು ಪ್ರಾದೇಶಿಕ ಅನನ್ಯತೆಯ ಬಗ್ಗೆ ಕಲಿಸುವ ಒಂದು ಪಾಠವಾಗಿ ಮಾರ್ಪಟ್ಟಿತು.


ಕೆಂಪು ಕೋಟೆಯಲ್ಲಿ ಫ್ರಾನ್ಸ್ ಮತ್ತು ಜಾರ್ಖಂಡ್ ಸಂಗಮ
ಭಾರತ್ ಪರ್ವದ ಸಾಂಸ್ಕೃತಿಕ ವಿನಿಮಯದ ಉದ್ದೇಶವು ಸಾಕಾರಗೊಂಡ ಸುಂದರ ಕ್ಷಣವೊಂದರಲ್ಲಿ, ಫ್ರಾನ್ಸ್‌ನ ಪ್ರವಾಸಿಗರೊಬ್ಬರು ಮೊದಲ ಬಾರಿಗೆ ಜಾರ್ಖಂಡ್‌ನ ಆಹಾರ ಪದ್ಧತಿಯನ್ನು ಪರಿಚಯಿಸಿಕೊಂಡರು.
ಆ ಪ್ರವಾಸಿಗರು ರಾಂಚಿಯ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು, ಶೆಫ್ ಹರೇ ಕೃಷ್ಣ ಚೌಧರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಧುಸ್ಕಾ' ಮತ್ತು 'ಆಲೂ ಚನಾ' ಅಂತಹ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು.
ಜಾರ್ಖಂಡ್ ಅಡುಗೆಯ "ರುಚಿ, ಸರಳತೆ ಮತ್ತು ವಿಶಿಷ್ಟತೆ" ಆ ಸಂದರ್ಶಕರ ಮನ ಗೆದ್ದಿತು. ಈ ಆಹಾರ ಪದ್ಧತಿಯು ಸ್ಥಳೀಯ ಸಂಸ್ಕೃತಿ ಮತ್ತು ಸುಸ್ಥಿರ ಆಹಾರ ಪದ್ಧತಿಯೊಂದಿಗೆ ಹೊಂದಿರುವ ಗಾಢವಾದ ಸಂಬಂಧವನ್ನು ಅವರು ಮೆಚ್ಚಿಕೊಂಡರು. ಈ ಆಹಾರದ ಮಳಿಗೆಯು ಬುಡಕಟ್ಟು ಸಂಪ್ರದಾಯಗಳು, ಗ್ರಾಮೀಣ ಪದ್ಧತಿಗಳು ಮತ್ತು ಸಿರಿಧಾನ್ಯ ಆಧಾರಿತ ಸುಸ್ಥಿರ ಪಾಕಪದ್ಧತಿಯಲ್ಲಿ ಬೇರೂರಿರುವ ಜಾರ್ಖಂಡ್‌ನ ಶ್ರೀಮಂತ ಆಹಾರ ಪರಂಪರೆಯನ್ನು ಪರಿಚಯಿಸಿತು.

ಕಲೆ, ನೇಕಾರಿಕೆ ಮತ್ತು ಸಮುದಾಯ
ಆಹಾರ ಮೇಳದಷ್ಟೇ ಆಕರ್ಷಕವಾಗಿದ್ದ ಮತ್ತೊಂದು ವಿಭಾಗವೆಂದರೆ ಬೃಹತ್ ಕರಕುಶಲ ಮತ್ತು ಕೈಮಗ್ಗ ಬಜಾರ್. ವಿವಿಧ ರಾಜ್ಯಗಳು, ಕೇಂದ್ರ ಸಚಿವಾಲಯಗಳು, ಹ್ಯಾಂಡಿಕ್ರಾಫ್ಟ್ಸ್ ಮತ್ತು ಹ್ಯಾಂಡ್ಲೂಮ್ಸ್ ವಿಭಾಗಗಳು ಹಾಗೂ ಟ್ರೈಫೆಡ್ (TRIFED) ವತಿಯಿಂದ ಆಯೋಜಿಸಲಾಗಿದ್ದ ಈ ಬಜಾರ್‌ನಲ್ಲಿ 102ಕ್ಕೂ ಹೆಚ್ಚು ಮಳಿಗೆಗಳಿದ್ದವು. ಇಲ್ಲಿ ಸಂದರ್ಶಕರು ಕೈಯಿಂದ ನೇಯ್ದ ವಸ್ತ್ರಗಳು, ಲೋಹದ ಕೆಲಸಗಳು, ಮರದ ಕೆತ್ತನೆಗಳು, ವರ್ಣಚಿತ್ರಗಳು ಮತ್ತು ಆಭರಣಗಳನ್ನು ಕಂಡು ಆನಂದಿಸಿದರು. ಪ್ರತಿಯೊಂದು ಕಲಾಕೃತಿಯೂ ತಲೆಮಾರುಗಳ ಕೌಶಲ ಮತ್ತು ಸಾಂಸ್ಕೃತಿಕ ನೆನಪುಗಳನ್ನು ಹೊತ್ತು ತಂದಿದ್ದವು.
ಇದರೊಂದಿಗೆ, 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಮಳಿಗೆಗಳು ಹಾಗೂ 24 ಕೇಂದ್ರ ಸಚಿವಾಲಯದ ಮಳಿಗೆಗಳು ಪ್ರಾದೇಶಿಕ ಪ್ರವಾಸಿ ತಾಣಗಳು, ಸಾಂಸ್ಕೃತಿಕ ವಲಯಗಳು ಮತ್ತು ಸಾರ್ವಜನಿಕ ಉಪಕ್ರಮಗಳನ್ನು ಪ್ರದರ್ಶಿಸಿದವು. ಈ ಮಳಿಗೆಗಳು ಕೇವಲ ಮಾಹಿತಿಯನ್ನಷ್ಟೇ ನೀಡದೆ, ಕಥೆಗಳನ್ನು ಹೇಳುವ ಮೂಲಕ ಮತ್ತು ಸಂವಾದಾತ್ಮಕ (interactive) ದೃಶ್ಯ ಪ್ರದರ್ಶನಗಳ ಮೂಲಕ ಭಾರತದ ವೈವಿಧ್ಯಮಯ ಭೂಪ್ರದೇಶಗಳು ಹಾಗೂ ಸರ್ಕಾರದ ಆಡಳಿತಾತ್ಮಕ ಪ್ರಯತ್ನಗಳನ್ನು ಜನರಿಗೆ ಪರಿಚಯಿಸಿದವು.




ಸಹಭಾಗಿತ್ವವನ್ನು ಆಹ್ವಾನಿಸುವ ಸಂಸ್ಕೃತಿ
ಭಾರತ್ ಪರ್ವವನ್ನು ಸಂವಾದಾತ್ಮಕವಾಗಿ ರೂಪಿಸಲಾಗಿದ್ದು, ಈ ವರ್ಷದ ಆವೃತ್ತಿಯು ಎಲ್ಲಾ ವಯೋಮಾನದ ಸಂದರ್ಶಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿತು. ಮಕ್ಕಳ ವಲಯಗಳು (Children's zones), ಸಾಂಸ್ಕೃತಿಕ ರಸಪ್ರಶ್ನೆಗಳು, ನುಕ್ಕಡ್ ನಾಟಕ್‌ಗಳು (ಬೀದಿ ನಾಟಕಗಳು) ಮತ್ತು ವಿವಿಧ ಚಟುವಟಿಕೆಗಳು ಸಂದರ್ಶಕರು ಕೇವಲ ಮೂಕಪ್ರೇಕ್ಷಕರಾಗಿ ಉಳಿಯದಂತೆ ನೋಡಿಕೊಂಡವು. ಬದಲಾಗಿ, ಅವರು ಸಂಸ್ಕೃತಿಯನ್ನು ಕೇವಲ ನೋಡುವುದಕ್ಕಿಂತ ಹೆಚ್ಚಾಗಿ, ಅದನ್ನು ಅನುಭವಿಸುವ ಮತ್ತು ಹಂಚಿಕೊಳ್ಳುವ ಮೂಲಕ ತೊಡಗಿಸಿಕೊಂಡರು. ಈ ವಿಧಾನವು ತಲೆಮಾರುಗಳ ನಡುವೆ ಸಾಂಸ್ಕೃತಿಕ ಅರಿವನ್ನು ಬೆಳೆಸುವ ಉತ್ಸವದ ಪ್ರಮುಖ ಉದ್ದೇಶದೊಂದಿಗೆ ಸುಂದರವಾಗಿ ಹೊಂದಿಕೊಂಡಿತು.

ಡಿಜಿಟಲ್ ಪ್ರದರ್ಶನಗಳು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗ್ಯಾಲರಿಗಳು ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡಿದವು. ಇದು ಪರಂಪರೆಯ ಆಳ ಮತ್ತು ಗಾಂಭೀರ್ಯಕ್ಕೆ ಧಕ್ಕೆಯಾಗದಂತೆ, ಯುವ ಪೀಳಿಗೆಗೆ ಅದನ್ನು ಸುಲಭವಾಗಿ ತಲುಪುವಂತೆ ಮಾಡಿದವು.
ಭಾರತ್ ಪರ್ವ 2026ರಲ್ಲಿ, ನಜಾಫ್‌ಗಢದ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರವು ಸಿಪಿಆರ್ (CPR) ಪ್ರಾತ್ಯಕ್ಷಿಕೆಗಳು, ಆಯುರ್ವೇದ ಮತ್ತು ಮುನ್ನೆಚ್ಚರಿಕೆ ಆರೋಗ್ಯ ಸಲಹೆಗಳು, ರಸಪ್ರಶ್ನೆಗಳು ಮತ್ತು "ನಿಮ್ಮ ಆಶಾ (ASHA) ಕಾರ್ಯಕರ್ತರನ್ನು ತಿಳಿಯಿರಿ" ಎಂಬ ವಿಶೇಷ ವಿಭಾಗದ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿಯನ್ನು ಮೂಡಿಸಿತು. ಇದೇ ವೇಳೆ, ರಾಷ್ಟ್ರೀಯ ವಿಜ್ಞಾನ ಕೇಂದ್ರದ ಸಂವಾದಾತ್ಮಕ ವಿಜ್ಞಾನ ಪ್ರದರ್ಶನವು ಪ್ರಾಯೋಗಿಕ ಪರೀಕ್ಷೆಗಳು ಮತ್ತು ಡಿಜಿಟಲ್ ಪರದೆಗಳ ಮೂಲಕ ಜನಸಮೂಹವನ್ನು ಸೆಳೆಯಿತು, ವಿಜ್ಞಾನವನ್ನು ಸರಳವಾಗಿ ಮತ್ತು ಆಕರ್ಷಕವಾಗಿ ಜನರಿಗೆ ತಲುಪಿಸಿತು.




ನೆಲದ ಧ್ವನಿಗಳು
ಟ್ರೈಫೆಡ್ (TRIFED) ಬೆಂಬಲಿತ ಮಳಿಗೆಯೊಂದರಲ್ಲಿ, 26 ವರ್ಷದ ರಿಕ್ಸ್‌ರಾಂಗ್ ಡಿ. ಮೊಮಿನ್ ತನ್ನ ಉತ್ಪನ್ನಗಳ ಹಿಂದೆ ಶಾಂತವಾಗಿ ಆದರೆ ಆತ್ಮವಿಶ್ವಾಸದಿಂದ ನಿಂತಿದ್ದರು. ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯ ತುರಾ ಮೂಲದವರಾದ ಇವರು, ಸಮುದಾಯದ ಜ್ಞಾನದಲ್ಲಿ ಬೇರೂರಿರುವ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಹೊಸ ಪೀಳಿಗೆಯ ಬುಡಕಟ್ಟು ಉದ್ಯಮಿಗಳನ್ನು ಪ್ರತಿನಿಧಿಸುತ್ತಿದ್ದರು.
ಮೊಮಿನ್ ಹೇಳುವಂತೆ, "ಚಹಾ ಎಂಬುದು ಕೇವಲ ಒಂದು ಉತ್ಪನ್ನವಲ್ಲ, ಅದು ಮೇಘಾಲಯದ ಬುಡಕಟ್ಟು ಸಮುದಾಯಗಳ ದೈನಂದಿನ ಜೀವನದ ಭಾಗವಾಗಿದೆ; ಇದು ಅರಣ್ಯ ಸಂಪ್ರದಾಯಗಳು ಮತ್ತು ಸಾಮೂಹಿಕ ಶ್ರಮದಿಂದ ರೂಪುಗೊಂಡಿದೆ." ಭಾರತ್ ಪರ್ವದಲ್ಲಿ ಭಾಗವಹಿಸಿದ್ದು ಅವರಿಗೆ ತಮ್ಮ ಊರಿನಲ್ಲಿ ಅಪರೂಪಕ್ಕೆ ಸಿಗುವಂತಹ ಒಂದು ದೊಡ್ಡ ಅವಕಾಶವನ್ನು ನೀಡಿತು, ಅದುವೇ 'ಗುರುತಿಸುವಿಕೆ' (Visibility).
ಇಂತಹ ವೇದಿಕೆಗಳು ದೂರದ ಪ್ರದೇಶಗಳ ಯುವ ಮತ್ತು ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಧ್ವನಿಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು, ತಮ್ಮದೇ ಆದ ಕಥೆಗಳನ್ನು ಜಗತ್ತಿಗೆ ಹೇಳಲು ಮತ್ತು ಪರಂಪರೆ ಆಧಾರಿತ ಜೀವನೋಪಾಯದಲ್ಲಿ ಗೌರವ ಹಾಗೂ ಅವಕಾಶಗಳನ್ನು ಕಂಡುಕೊಳ್ಳಲು ನೆರವಾಗುತ್ತವೆ.

ಡೆನ್ಮಾರ್ಕ್‌ನ 59 ವರ್ಷದ ಹೃದ್ರೋಗ ತಜ್ಞರಾದ ಜೇಕಬ್ ಮೊಯೆಲ್ಲರ್ ಅವರಿಗೆ ಈ ಉತ್ಸವವು ಅನಿರೀಕ್ಷಿತವಾಗಿ ಎದುರಾಯಿತು. ಭಾರತಕ್ಕೆ ಬಂದು ಕೇವಲ ಎಂಟು ಗಂಟೆಗಳಷ್ಟೇ ಆಗಿದ್ದ ಅವರು, ಹಳೆಯ ದೆಹಲಿಯ ಕೆಂಪು ಕೋಟೆಯನ್ನು ನೋಡಲು ಬಂದಾಗ 'ಭಾರತ್ ಪರ್ವ'ದ ಸಂಭ್ರಮದ ನಡುವೆ ತಮ್ಮನ್ನು ತಾವು ಕಂಡುಕೊಂಡರು.

ತಾವು "ಅತಿ ಸಣ್ಣ ದೇಶದಿಂದ" ಬಂದಿರುವುದಾಗಿ ಹೇಳಿಕೊಂಡ ಅವರಿಗೆ, ಈ ಉತ್ಸವದ ವ್ಯಾಪ್ತಿಯು ಬೆರಗುಗೊಳಿಸುವಂತಿತ್ತು, ಆದರೆ ಅದು ಅವರಿಗೆ ಬಹಳ ಸಕಾರಾತ್ಮಕವಾಗಿ ಕಂಡಿತು. ಮುಖ್ಯ ವೇದಿಕೆಯಲ್ಲಿ ನಡೆಯುತ್ತಿದ್ದ ಪ್ರದರ್ಶನಗಳು ಮೊದಲು ಅವರ ಗಮನ ಸೆಳೆದವು. ಆಹಾರದ ಮಳಿಗೆಗಳನ್ನು ಅನ್ವೇಷಿಸಲು ಉತ್ಸುಕರಾಗಿದ್ದ ಅವರು, ತಮ್ಮ ಸುತ್ತಲಿದ್ದ ವೈವಿಧ್ಯತೆಯನ್ನು ಕುತೂಹಲ ಮತ್ತು ಮೆಚ್ಚುಗೆಯಿಂದ ಆಸ್ವಾದಿಸಿದರು.
ದೆಹಲಿಯ ನಿವಾಸಿಯಾದ 26 ವರ್ಷದ ಆರ್ಯನ್ ಕರಣ್ ಸಿಂಗ್ ಅವರಿಗೆ ಭಾರತ್ ಪರ್ವವು ಪರಿಚಿತ ಹಾಗೂ ಸಂಪೂರ್ಣ ಹೊಸದಾದ ಅನುಭವವನ್ನು ನೀಡಿತು. ಅವರು ಇನ್‌ಸ್ಟಾಗ್ರಾಮ್ ಮೂಲಕ ಈ ಉತ್ಸವದ ಬಗ್ಗೆ ತಿಳಿದುಕೊಂಡಿದ್ದರು, ಆದರೆ ಕೆಂಪು ಕೋಟೆಯ ಮೈದಾನಕ್ಕೆ ಕಾಲಿಡುತ್ತಿದ್ದಂತೆಯೇ ಅವರ ಕುತೂಹಲವು ವಿಸ್ಮಯವಾಗಿ ಬದಲಾಯಿತು. ತಮ್ಮ ಇಡೀ ಜೀವನವನ್ನು ರಾಜಧಾನಿಯಲ್ಲೇ ಕಳೆದಿದ್ದರೂ, ಈ ಉತ್ಸವವು ಹಲವಾರು ರಾಜ್ಯಗಳ ಸಂಸ್ಕೃತಿಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ತಮಗೆ ಅವಕಾಶ ಮಾಡಿಕೊಟ್ಟಿತು ಎಂದು ಆರ್ಯನ್ ಹೇಳಿದರು; ಇಷ್ಟು ಜೀವಂತಿಕೆಯ ಅನುಭವ ಅವರಿಗೆ ಈ ಮೊದಲು ಎಂದೂ ಆಗಿರಲಿಲ್ಲ.

ಅವರನ್ನು ಅತಿ ಹೆಚ್ಚು ಆಕರ್ಷಿಸಿದ್ದು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳ ಪ್ರದರ್ಶನ. "ನಾನು ಜನೆವರಿ 26ರ ಪೆರೇಡ್ ಅನ್ನು ಎಂದಿಗೂ ನೋಡಿರಲಿಲ್ಲ," ಎಂದು ಹೇಳಿದ ಅವರು, "ಆದರೆ ಇಲ್ಲಿ ಕೆಂಪು ಕೋಟೆಯ ಹಿನ್ನೆಲೆಯಲ್ಲಿ ಈ ಸ್ತಬ್ಧಚಿತ್ರಗಳನ್ನು ನೋಡುತ್ತಿದ್ದರೆ ನನ್ನಲ್ಲಿ ದೇಶಭಕ್ತಿಯ ಭಾವನೆ ಉಕ್ಕಿ ಬರುತ್ತಿದೆ," ಎಂದರು. ರಾಜ್ಯಗಳ ಮಳಿಗೆಗಳಲ್ಲಿ 'ಲಾಫಿಂಗ್' ಮತ್ತು 'ಫಿಲ್ಟರ್ ಕಾಫಿ'ಯನ್ನು ಸವಿಯುತ್ತಾ, ಅವರು ಭಾರತದ ವೈವಿಧ್ಯತೆಯನ್ನು ಕೇವಲ ಒಂದು ಕಲ್ಪನೆಯಾಗಿ ಅಲ್ಲದೆ, ಕಣ್ಣೆದುರಿನ ವಾಸ್ತವವಾಗಿ ಸಂಭ್ರಮಿಸಿದರು. ಆ ಕ್ಷಣಗಳು ಅವರಿಗೆ ಭಾವನಾತ್ಮಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಹತ್ತಿರವಾದವು.
ಗಣರಾಜ್ಯದ ಪ್ರತಿಬಿಂಬವಾಗಿ ಒಂದು ಉತ್ಸವ
ಮೂಲತಃ, ವಾರ್ಷಿಕ ಭಾರತ ಪರ್ವವು ಭಾರತದ ಶಕ್ತಿಯು ಕೇವಲ ಅದರ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ಅದರ ಜನರು ಮತ್ತು ಅವರ ಸಂಪ್ರದಾಯಗಳಲ್ಲಿದೆ ಎಂಬುದನ್ನು ನೆನಪಿಸುವ ವೇದಿಕೆಯಾಗಿದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿರುವ ಕೆಂಪು ಕೋಟೆಯ ಹಿನ್ನೆಲೆಯಲ್ಲಿ, ಈ ಉತ್ಸವವು ಸ್ವತಃ ಗಣರಾಜ್ಯದ ಒಂದು ಜೀವಂತ ಅಭಿವ್ಯಕ್ತಿಯಾಗಿ ಮಾರ್ಪಟ್ಟಿದೆ.
ಭಾರತ ಪರ್ವವು ಸಂದರ್ಶಕರಿಗೆ 'ಭಾರತ' ಎಂಬ ಪರಿಕಲ್ಪನೆಯೊಳಗೆ ಪಯಣಿಸಲು, ದೇಶದ ಅನೇಕ ಧ್ವನಿಗಳನ್ನು ಆಲಿಸಲು ಮತ್ತು ನಮ್ಮ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯೊಂದಿಗೆ ಹೊಸ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಜನವರಿ 31, 2026 ರಂದು ನಡೆದ ಸಮಾರೋಪ ಸಮಾರಂಭಕ್ಕೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಈ ವೇದಿಕೆಯ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು. ಭಾರತ್ ಪರ್ವ 2026 ಮುಕ್ತಾಯಗೊಳ್ಳುತ್ತಿದ್ದಂತೆ, ಅದು ಸಂದರ್ಶಕರಿಗೆ ಕೇವಲ ನೆನಪುಗಳನ್ನಷ್ಟೇ ನೀಡಲಿಲ್ಲ; ಬದಲಾಗಿ ಅನೇಕ ಧ್ವನಿಗಳು, ಸಂಪ್ರದಾಯಗಳು ಮತ್ತು ಸಾಮೂಹಿಕ ಹೆಮ್ಮೆಯಿಂದ ರೂಪುಗೊಂಡ 'ಭಾರತ'ದ ಕಲ್ಪನೆಯೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಿತು.
******
(Explainer ID: 157149)
आगंतुक पटल : 9
Provide suggestions / comments