Infrastructure
ಅಮೃತ್ ಭಾರತ್ ಎಕ್ಸ್‌ಪ್ರೆಸ್: ಕೈಗೆಟುಕುವ ದೀರ್ಘ-ದೂರ ರೈಲು ಪ್ರಯಾಣವನ್ನು ಪರಿವರ್ತಿಸುವುದು
Posted On:
17 JAN 2026 5:16PM
|
ಪ್ರಮುಖ ಮಾರ್ಗಸೂಚಿಗಳು
- ಡಿಸೆಂಬರ್ 2023 ರಿಂದ 30 ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈಗ 9 ಹೊಸ ಸೇವೆಗಳನ್ನು ಸೇರಿಸುವ ಮೂಲಕ ದೇಶಾದ್ಯಂತ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
- ಸಾಮಾನ್ಯ ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲು, ಹವಾನಿಯಂತ್ರಿತವಲ್ಲದ (Non-AC) ಸ್ಲೀಪರ್ ಪ್ರಯಾಣಕ್ಕೆ 1,000 ಕಿ.ಮೀ ಗೆ ಅಂದಾಜು ₹500 ದರ ನಿಗದಿಪಡಿಸಲಾಗಿದೆ ಮತ್ತು ಇದರಲ್ಲಿ ಯಾವುದೇ ಡೈನಾಮಿಕ್ ಪ್ರೈಸಿಂಗ್ (ಬದಲಾಗುವ ದರ) ಇರುವುದಿಲ್ಲ.
- ಹೊಸ ಮಾರ್ಗಗಳು ಈಶಾನ್ಯ, ಪೂರ್ವ, ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತವನ್ನು ಪರಸ್ಪರ ಜೋಡಿಸುತ್ತವೆ; ಅಷ್ಟೇ ಅಲ್ಲದೆ ಗಡಿ ಪ್ರದೇಶಗಳು, ಪ್ರಮುಖ ನಗರಗಳು ಮತ್ತು ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುತ್ತವೆ.
- ಸುಧಾರಿತ ರೈಲ್ವೆ ಸಂಪರ್ಕವು ವಿವಿಧ ಪ್ರದೇಶಗಳಲ್ಲಿ ಉದ್ಯೋಗಾವಕಾಶ, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಲಭ್ಯತೆಗೆ ಹೆಚ್ಚಿನ ಬೆಂಬಲ ನೀಡುತ್ತದೆ.
|
ಸಾಮಾನ್ಯ ಪ್ರಯಾಣಿಕರ ಸಂಚಾರದ ಸಬಲೀಕರಣ
ಭಾರತದ ಸಾಮಾಜಿಕ ಮತ್ತು ಆರ್ಥಿಕ ಚೌಕಟ್ಟಿನಲ್ಲಿ ರೈಲ್ವೆಯು ದೀರ್ಘಕಾಲದಿಂದಲೂ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಇದು ತಲೆಮಾರುಗಳಿಂದ ಪ್ರಯಾಣಿಕರನ್ನು ವಿಶಾಲವಾದ ದೂರ ಮತ್ತು ವೈವಿಧ್ಯಮಯ ಭೂಪ್ರದೇಶಗಳಾದ್ಯಂತ ಹೊತ್ತೊಯ್ದಿದೆ. ಕೈಗೆಟುಕುವ ದರದ ಸಮೂಹ ಸಾರಿಗೆಯ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯು ಜನರು, ಮಾರುಕಟ್ಟೆಗಳು ಮತ್ತು ಅವಕಾಶಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶೇಷವಾಗಿ ರೈಲು ಪ್ರಯಾಣವು ಕೇವಲ ಆಯ್ಕೆಯಲ್ಲದೆ, ದೈನಂದಿನ ಅನಿವಾರ್ಯತೆಯಾಗಿರುವವರಿಗೆ ಇದು ಬಹಳ ಮುಖ್ಯವಾಗಿದೆ. ಭಾರತದ ಮೊದಲ ರೈಲು ಪ್ರಯಾಣದ ಸುಮಾರು ಎರಡು ಶತಮಾನಗಳ ನಂತರವೂ, ಭಾರತೀಯ ರೈಲ್ವೆಯು ಲಕ್ಷಾಂತರ ಜನರ ಸಂಚಾರ ವ್ಯವಸ್ಥೆಯನ್ನು ಬದಲಿಸುತ್ತಿದೆ. ಈ ಹಿಂದೆ ಕೇವಲ ಪ್ರೀಮಿಯಂ ಸೇವೆಗಳಿಗೆ ಮಾತ್ರ ಸೀಮಿತವಾಗಿದ್ದ ಸೌಕರ್ಯ, ಅನುಕೂಲತೆ ಮತ್ತು ವಿಶ್ವಾಸಾರ್ಹತೆಯನ್ನು ವಿಸ್ತರಿಸುವ ಮೂಲಕ, ಭಾರತೀಯ ರೈಲ್ವೆಯು ಸ್ಥಿರವಾಗಿ ಹೆಚ್ಚು ಸಮಗ್ರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಿದೆ. ಇಲ್ಲಿ ಸುರಕ್ಷತೆ ಮತ್ತು ಪ್ರಯಾಣಿಕ ಸ್ನೇಹಿ ಧೋರಣೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.
ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸಾಮಾನ್ಯ ಪ್ರಯಾಣಿಕರ ಪಾಲಿಗೆ ಒಂದು ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ. ಇದನ್ನು 'ಅಮೃತ ಕಾಲ'ದ ಪ್ರಮುಖ ಉಪಕ್ರಮವಾಗಿ ಪರಿಚಯಿಸಲಾಯಿತು. ಡಿಸೆಂಬರ್ 2023 ರಲ್ಲಿ ಚಾಲನೆ ನೀಡಿದ ನಂತರ, ಈಗಾಗಲೇ 30 ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾರಂಭ ಮಾಡಿವೆ ಮತ್ತು ಇನ್ನೂ 9 ಹೆಚ್ಚುವರಿ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಈ ಮಾರ್ಗಗಳು ಈಶಾನ್ಯ ಮತ್ತು ಉಪ-ಹಿಮಾಲಯನ್ ಪ್ರದೇಶಗಳನ್ನು ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದ ಪ್ರಮುಖ ಸ್ಥಳಗಳೊಂದಿಗೆ ಜೋಡಿಸುವ ಮೂಲಕ ಸಂಪರ್ಕವನ್ನು ಬಲಪಡಿಸುತ್ತವೆ. ಇದು ಎಲ್ಲರಿಗೂ ಕೈಗೆಟುಕುವ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು ಒದಗಿಸುವ ದೇಶದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್: ಉದ್ದೇಶ ಮತ್ತು ಆಶಯ
ಅಮೃತ್ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯು ಪರಿಚಯಿಸಿರುವ ಒಂದು ಆಧುನಿಕ, ಹವಾನಿಯಂತ್ರಿತವಲ್ಲದ, ಸುದೀರ್ಘ ಪ್ರಯಾಣದ ಸ್ಲೀಪರ್ ಕ್ಲಾಸ್ ರೈಲು ಸೇವೆಯಾಗಿದ್ದು, ಇದು ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಗುರಿ ಹೊಂದಿದೆ. ಹಬ್ಬದ ಸಮಯ ಮತ್ತು ಹೆಚ್ಚಿನ ವಲಸೆ ಇರುವ ಅವಧಿಯಲ್ಲಿ ಕಂಡುಬರುವ ಪ್ರಯಾಣಿಕರ ಅತಿಯಾದ ಒತ್ತಡವನ್ನು ನಿಭಾಯಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. 1,000 ಕಿಲೋಮೀಟರ್‌ಗೆ ಅಂದಾಜು ₹500 ದರವನ್ನು ಹೊಂದಿರುವ ಈ ಸೇವೆಯು, ಕಡಿಮೆ ಮತ್ತು ಮಧ್ಯಮ ದೂರದ ಪ್ರಯಾಣಕ್ಕೂ ಪ್ರಮಾಣಾನುಗುಣವಾಗಿ ಕಡಿಮೆ ಬೆಲೆಯನ್ನು ಹೊಂದಿದೆ. ಅಲ್ಲದೆ, ಈ ಸೇವೆಯು ಯಾವುದೇ ಬದಲಾಗುವ ದರಗಳಿಲ್ಲದ ಸರಳ ಮತ್ತು ಪಾರದರ್ಶಕ ದರ ರಚನೆಯನ್ನು ಅನುಸರಿಸುತ್ತದೆ. ದೂರ ಮತ್ತು ಅವಕಾಶಗಳ ಕೊರತೆಯಿಂದ ಬೇರ್ಪಟ್ಟ ಪ್ರದೇಶಗಳನ್ನು ಬೆಸೆಯಲು, ಅಮೃತ್ ಭಾರತ್ ಎಕ್ಸ್‌ಪ್ರೆಸ್ ಉದ್ಯೋಗ, ಶಿಕ್ಷಣ ಮತ್ತು ಕೌಟುಂಬಿಕ ಅಗತ್ಯಗಳಿಗಾಗಿ ಕೈಗೊಳ್ಳುವ ಪ್ರಯಾಣಕ್ಕೆ ಬೆಂಬಲ ನೀಡುತ್ತದೆ. ಇದು ದೇಶಾದ್ಯಂತ ಕೈಗೆಟುಕುವ ದರದ ದೂರಸಂಪರ್ಕವನ್ನು ವಿಸ್ತರಿಸುವ ಭಾರತದ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ.
ಅಮೃತ್ ಭಾರತ್ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ಇವುಗಳಲ್ಲಿ 11 ಸಾಮಾನ್ಯ ದರ್ಜೆಯ ಬೋಗಿಗಳು, 8 ಸ್ಲೀಪರ್ ಕ್ಲಾಸ್ ಬೋಗಿಗಳು, 1 ಪ್ಯಾಂಟ್ರಿ ಕಾರ್, ಮತ್ತು ವಿಕಲಚೇತನ ಸ್ನೇಹಿ ವಿಭಾಗಗಳನ್ನು ಹೊಂದಿರುವ 2 ಸೆಕೆಂಡ್ ಕ್ಲಾಸ್-ಕಮ್-ಲಗೇಜ್-ಕಮ್-ಗಾರ್ಡ್ ವ್ಯಾನ್‌ಗಳಿವೆ. ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಿ ತಯಾರಿಸಲಾದ ಈ ರೈಲುಗಳು, ನಾನ್-ಎಸಿ ವಿಭಾಗದ ಪ್ರಯಾಣಿಕರಿಗೆ ಆಧುನಿಕ, ಆರಾಮದಾಯಕ ಮತ್ತು ಉತ್ತಮ ಗುಣಮಟ್ಟದ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿವೆ.

ವ್ಯಾಪ್ತಿಯ ವಿಸ್ತರಣೆ: ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು
ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪರಿಚಯವು ಈ ಜಾಲದ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ. ಈ ಹೊಸ ಸೇವೆಗಳು ದೂರದ ಪ್ರಯಾಣದ ಸಂಪರ್ಕವನ್ನು ಬಲಪಡಿಸುವ ಮತ್ತು ದೇಶದ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿವೆ.
ಭಾರತದ ಈಶಾನ್ಯದ ಅಷ್ಟಲಕ್ಷ್ಮಿ: ಕಾಮಾಖ್ಯ-ರೋಹ್ಟಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಿಂದ ಹೊಸ ಶಕ್ತಿ
ಅಸ್ಸಾಂನ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾದ ಕಾಮಾಖ್ಯವನ್ನು ಹರಿಯಾಣದ ರೋಹ್ಟಕ್ ಜೊತೆಗೆ ಸಂಪರ್ಕಿಸುವ ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್, ಈಶಾನ್ಯ ಮತ್ತು ಉತ್ತರ ಭಾರತದ ನಡುವಿನ ಸುದೀರ್ಘ ಪ್ರಯಾಣದ ಸಂಪರ್ಕವನ್ನು ಬಲಪಡಿಸುತ್ತದೆ.
· ಸೇವೆ ಮತ್ತು ವ್ಯಾಪ್ತಿ: ಇದು ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ ರಾಜ್ಯಗಳಾದ್ಯಂತ ವಾರಕ್ಕೊಮ್ಮೆ ಸಂಚರಿಸುವ ಸೇವೆಯಾಗಿದ್ದು, ಕೈಗೆಟುಕುವ ದರದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
· ರೈಲು ಸಮಯ (ಹೊರಡುವಿಕೆ): ಪ್ರತಿ ಶುಕ್ರವಾರ ರಾತ್ರಿ 10:00 ಗಂಟೆಗೆ ಕಾಮಾಖ್ಯದಿಂದ ಹೊರಟು, ಭಾನುವಾರ ಮಧ್ಯಾಹ್ನ 2:45 ಕ್ಕೆ ರೋಹ್ಟಕ್ ತಲುಪುತ್ತದೆ.
· ರೈಲು ಸಮಯ (ಮರಳಿ ಬರುವಿಕೆ): ಹಿಂದಿರುಗುವ ಪ್ರಯಾಣವು ಭಾನುವಾರ ರಾತ್ರಿ 10:10 ಕ್ಕೆ ರೋಹ್ಟಕ್‌ನಿಂದ ಪ್ರಾರಂಭವಾಗಿ, ಮಂಗಳವಾರ ಮಧ್ಯಾಹ್ನ 12:15 ಕ್ಕೆ ಕಾಮಾಖ್ಯವನ್ನು ತಲುಪುತ್ತದೆ.
· ಪ್ರಾದೇಶಿಕ ಮತ್ತು ಪ್ರವಾಸೋದ್ಯಮ ಪ್ರಯೋಜನ: ಈ ರೈಲು ಆರು ರಾಜ್ಯಗಳ ಹಲವಾರು ಜಿಲ್ಲೆಗಳಿಗೆ ಸೇವೆಯನ್ನು ನೀಡುತ್ತದೆ ಮತ್ತು ಕಾಮಾಖ್ಯ ದೇವಸ್ಥಾನ ಹಾಗೂ ವಾರಣಾಸಿಯ ಗಂಗಾ ಘಾಟ್‌ಗಳಂತಹ ಪ್ರಮುಖ ಸ್ಥಳಗಳ ಸಮೀಪ ಹಾದುಹೋಗುವ ಮೂಲಕ ಪ್ರವಾಸೋದ್ಯಮ, ಸಂಪರ್ಕ ಮತ್ತು ಪ್ರಾದೇಶಿಕ ಬಾಂಧವ್ಯವನ್ನು ವೃದ್ಧಿಸುತ್ತದೆ.
ದಿಬ್ರೂಗಢ-ಲಕ್ನೋ ಅಮೃತ್ ಭಾರತ್ ಎಕ್ಸ್‌ಪ್ರೆಸ್: 'ಪೂರ್ವೋದಯದಿಂದ ಭಾರತ ಉದಯ' ದೃಷ್ಟಿಕೋನಕ್ಕೆ ಬಲ
ದಿಬ್ರೂಗಢ-ಲಕ್ನೋ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಈಶಾನ್ಯ ಪ್ರದೇಶ ಮತ್ತು ಉತ್ತರ ಭಾರತದ ನಡುವೆ ಒಂದು ಪ್ರಮುಖ ರೈಲ್ವೆ ಸಂಪರ್ಕವನ್ನು ಕಲ್ಪಿಸುತ್ತದೆ.

- ಪ್ರಾರಂಭ ಮತ್ತು ಸಂಪರ್ಕ: ಇದು ಅಸ್ಸಾಂನ ದಿಬ್ರೂಗಢದಿಂದ ಪ್ರಾರಂಭವಾಗಿ ನಾಗಾಲ್ಯಾಂಡ್‌ನ ದಿಮಾಪುರ್ ಮೂಲಕ ಹಾದುಹೋಗುತ್ತದೆ, ಹೀಗೆ ಗಡಿ ಮತ್ತು ಮುಂಚೂಣಿ ಪ್ರದೇಶಗಳನ್ನು ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ.
- ಪ್ರಮುಖ ಪ್ರವಾಸಿ ತಾಣಗಳು: ಈ ರೈಲು ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಕಾಮಾಖ್ಯ ದೇವಸ್ಥಾನ, ವಿಕ್ರಮಶಿಲಾ ಮಹಾವಿಹಾರ, ಅಯೋಧ್ಯೆ ಮತ್ತು ಲಕ್ನೋದಂತಹ ಪ್ರಮುಖ ಸ್ಥಳಗಳ ಸಮೀಪ ಹಾದುಹೋಗುತ್ತದೆ.
- ಆರ್ಥಿಕ ಪ್ರಯೋಜನಗಳು: ಪುಣ್ಯಕ್ಷೇತ್ರಗಳು ಮತ್ತು ಪ್ರಮುಖ ನಗರಗಳನ್ನು ಬೆಸೆಯುವ ಮೂಲಕ ಈ ಸೇವೆಯು ಪ್ರವಾಸೋದ್ಯಮ, ಸ್ಥಳೀಯ ವ್ಯಾಪಾರ, ಸಣ್ಣ ಉದ್ಯಮಗಳು ಮತ್ತು ಉದ್ಯೋಗಕ್ಕಾಗಿ ಜನರ ಸಂಚಾರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿರೀಕ್ಷೆಯಿದೆ.

ನ್ಯೂ ಜಲ್ಪೈಗುರಿ-ನಾಗರ್‌ಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್: ಡೂವಾರ್ಸ್‌ನಿಂದ ನೀಲಗಿರಿಯವರೆಗೆ
ಪೂರ್ವ ಹಿಮಾಲಯದ ತಪ್ಪಲನ್ನು ದೇಶದ ದಕ್ಷಿಣದ ತುದಿಯೊಂದಿಗೆ ಬೆಸೆಯುವ ಈ ಸೇವೆಯು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸುದೀರ್ಘ ಪ್ರಯಾಣದ ಸಂಪರ್ಕವನ್ನು ಬಲಪಡಿಸುತ್ತದೆ.
- ಪ್ರಮುಖ ಸಂಪರ್ಕ: ಇದು ಭೂತಾನ್ ಮತ್ತು ಬಾಂಗ್ಲಾದೇಶದ ಗಡಿ ಭಾಗದ ಪ್ರಮುಖ ಕೇಂದ್ರವಾದ ನ್ಯೂ ಜಲ್ಪೈಗುರಿಯನ್ನು, ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್‌ಗೆ ಸಂಪರ್ಕಿಸುತ್ತದೆ.
- ವ್ಯೂಹಾತ್ಮಕ ಕಾರ್ಯಾಚರಣೆ: ಗಡಿ ಪ್ರದೇಶಗಳು, ಬಂದರುಗಳು, ಕೈಗಾರಿಕಾ ವಲಯಗಳು ಮತ್ತು ಒಳನಾಡು ಪ್ರದೇಶಗಳನ್ನು ಬೆಸೆಯುವ ಈ ರೈಲು, ಅತ್ಯಂತ ಆಯಕಟ್ಟಿನ ಮತ್ತು ಪ್ರಮುಖವಾದ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುತ್ತದೆ.
- ಪ್ರವಾಸೋದ್ಯಮ ಮತ್ತು ಅಭಿವೃದ್ಧಿ: ಇದು ಡಾರ್ಜಿಲಿಂಗ್-ಡೂವಾರ್ಸ್, ವಿಶಾಖಪಟ್ಟಣಂನ ಸಮುದ್ರ ತೀರಗಳು, ಮಧುರೈ (ಮೀನಾಕ್ಷಿ ದೇವಸ್ಥಾನ) ಮತ್ತು ಕೊಯಮತ್ತೂರಿನಂತಹ ಪ್ರಮುಖ ಪ್ರವಾಸಿ ತಾಣಗಳ ಸಮೀಪ ಹಾದುಹೋಗುವ ಮೂಲಕ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.
ನ್ಯೂ ಜಲ್ಪೈಗುರಿ-ತಿರುಚಿರಾಪಳ್ಳಿ ಅಮೃತ್ ಭಾರತ್ ಎಕ್ಸ್‌ಪ್ರೆಸ್: ಡಾರ್ಜಿಲಿಂಗ್ ತಪ್ಪಲಿನಿಂದ ಶಿಕ್ಷಣ ಕಾಶಿಯವರೆಗೆ
ಈ ಸೇವೆಯು ಈಶಾನ್ಯ ಭಾರತದ ಹೆಬ್ಬಾಗಿಲಿನಿಂದ ತಮಿಳುನಾಡಿನ ಶಿಕ್ಷಣ ಮತ್ತು ದೇವಾಲಯಗಳ ಕೇಂದ್ರದವರೆಗೆ ಸುದೀರ್ಘ ರೈಲ್ವೆ ಕಾರ್ಯಾಚರಣೆಯ ಮಾರ್ಗವನ್ನು ಸೃಷ್ಟಿಸುತ್ತದೆ.
- ಪ್ರಾರಂಭ ಮತ್ತು ಸಂಪರ್ಕ: ಇದು ವ್ಯೂಹಾತ್ಮಕವಾಗಿ ಪ್ರಮುಖವಾದ ಗಡಿ ಪ್ರದೇಶದ ನಿಲ್ದಾಣವಾದ ನ್ಯೂ ಜಲ್ಪೈಗುರಿಯಿಂದ ಪ್ರಾರಂಭವಾಗಿ, ಅದನ್ನು ತಿರುಚಿರಾಪಳ್ಳಿಯೊಂದಿಗೆ ಸಂಪರ್ಕಿಸುತ್ತದೆ.
- ಪ್ರಮುಖ ನಿಲ್ದಾಣಗಳು: ಈ ರೈಲು ಆಗ್ರಾ, ಪ್ರಯಾಗ್‌ರಾಜ್, ಭುವನೇಶ್ವರ, ಕಾವೇರಿ ಮುಖಜ ಭೂಮಿ, ತಂಜಾವೂರು ಮತ್ತು ಚೆನ್ನೈನಂತಹ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುತ್ತದೆ.
- ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನ: ಇದು ಮಾರುಕಟ್ಟೆಗಳು, ಪ್ರವಾಸಿ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗ ಕೇಂದ್ರಗಳಿಗೆ ಸಂಪರ್ಕವನ್ನು ಬಲಪಡಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.


ಅಲಿಪುರದುಆರ್ – ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್:
ಭೂತಾನ್ ಸಮೀಪದ ಅಲಿಪುರದುಆರ್ ಅನ್ನು ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದೊಂದಿಗೆ ಸಂಪರ್ಕಿಸುವ ವಾರದ ಸೇವೆ ಇದಾಗಿದೆ.
- ರೈಲು ಸಮಯ:
- ಪ್ರತಿ ಸೋಮವಾರ ರಾತ್ರಿ 10:25 ಕ್ಕೆ ಅಲಿಪುರದುಆರ್‌ನಿಂದ ಹೊರಡುತ್ತದೆ. ಶನಿವಾರ ಬೆಳಿಗ್ಗೆ 8:50 ಕ್ಕೆ ಬೆಂಗಳೂರಿನಿಂದ ಮರಳಿ ಪ್ರಯಾಣ ಬೆಳೆಸುತ್ತದೆ.
- ಇದು ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಹಲವಾರು ಜಿಲ್ಲೆಗಳಿಗೆ ಸೇವೆ ನೀಡುವ ಮೂಲಕ ಪ್ರವಾಸೋದ್ಯಮ ಮತ್ತು ಆರ್ಥಿಕ ಏಕೀಕರಣವನ್ನು ಉತ್ತೇಜಿಸುತ್ತದೆ.
ಅಲಿಪುರದುಆರ್ - ಮುಂಬೈ (ಪನ್ವೇಲ್) ಅಮೃತ್ ಭಾರತ್ ಎಕ್ಸ್‌ಪ್ರೆಸ್: ಮುಂಬೈ ಮಹಾನಗರಕ್ಕೆ ಈಶಾನ್ಯದ ಹೆಬ್ಬಾಗಿಲು
ಉತ್ತರ ಬಂಗಾಳದ ಗಡಿ ಪ್ರದೇಶವನ್ನು ಮುಂಬೈ ಉಪನಗರ ಪ್ರದೇಶದೊಂದಿಗೆ ಸಂಪರ್ಕಿಸುವ ಒಂದು ಪ್ರಮುಖ ಪೂರ್ವ-ಪಶ್ಚಿಮ ರೈಲ್ವೆ ಕಾರ್ಯಾಚರಣೆಯ ಮಾರ್ಗ ಇದಾಗಿದೆ.
- ಇದು ಅಲಿಪುರದುಆರ್ ಮತ್ತು ಪನ್ವೇಲ್ ನಡುವೆ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೂಲಕ ಸಂಚರಿಸುವ ವಾರದ ಸೇವೆಯಾಗಿದೆ.
- ರೈಲು ಸಮಯ:
- ಅಲಿಪುರದುಆರ್‌ನಿಂದ ಪ್ರತಿ ಗುರುವಾರ ಮುಂಜಾನೆ ಹೊರಟು ಶನಿವಾರ ಸಂಜೆ ಪನ್ವೇಲ್ ತಲುಪುತ್ತದೆ. ಮರಳಿ ಬರುವ ಪ್ರಯಾಣವು ಸೋಮವಾರ ಪನ್ವೇಲ್‌ನಿಂದ ಪ್ರಾರಂಭವಾಗಿ ಬುಧವಾರ ಅಲಿಪುರದುಆರ್‌ನಲ್ಲಿ ಮುಕ್ತಾಯಗೊಳ್ಳುತ್ತದೆ.
- ಇದು ಡಾರ್ಜಿಲಿಂಗ್, ತ್ರಿವೇಣಿ ಸಂಗಮ, ಚಿತ್ರಕೂಟ ಧಾಮ ಮತ್ತು ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗದಂತಹ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುತ್ತದೆ.

ಸಂತ್ರಗಾಚಿ-ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್: ಪೂರ್ವ-ದಕ್ಷಿಣ ರೈಲ್ವೆ ಸಂಪರ್ಕದ ಬಲವರ್ಧನೆ

ಸಂತ್ರಗಾಚಿ-ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್:
- ಪೂರ್ವ ಮತ್ತು ದಕ್ಷಿಣದ ನಡುವಿನ ರೈಲ್ವೆ ಸಂಪರ್ಕವನ್ನು ಬಲಪಡಿಸುವ ಈ ಸೇವೆಯು, ಪೂರ್ವ ಭಾರತವನ್ನು ದಕ್ಷಿಣದ ಮಹಾನಗರ ಮತ್ತು ಉಪನಗರ ಪ್ರದೇಶಗಳೊಂದಿಗೆ ಬೆಸೆಯುತ್ತದೆ.
- ಇದು ಕೋಲ್ಕತ್ತಾ ಸಮೀಪದ ಸಂತ್ರಗಾಚಿಯನ್ನು ಚೆನ್ನೈನ ಉಪನಗರ ಕೇಂದ್ರವಾದ ತಾಂಬರಂನೊಂದಿಗೆ ಸಂಪರ್ಕಿಸುತ್ತದೆ.
- ಶಿಕ್ಷಣ, ಆರೋಗ್ಯ ಮತ್ತು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುವ ಮೂಲಕ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಜಿಲ್ಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ.
- ಇದು ಜಗನ್ನಾಥ ದೇವಸ್ಥಾನ, ಕೊನಾರ್ಕ್ ಸೂರ್ಯ ದೇವಾಲಯ (ಯುನೆಸ್ಕೊ ತಾಣ) ಮತ್ತು ಮಹಾಬಲಿಪುರಂನ ಶೋರ್ ಟೆಂಪಲ್ (ಯುನೆಸ್ಕೊ ತಾಣ) ನಂತಹ ಪ್ರಮುಖ ಸ್ಥಳಗಳ ಸಮೀಪ ಹಾದುಹೋಗುವ ಮೂಲಕ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ.
ಹೌರಾ - ಆನಂದ್ ವಿಹಾರ್ ಅಮೃತ್ ಭಾರತ್ ಎಕ್ಸ್‌ಪ್ರೆಸ್: ಪೂರ್ವ ಭಾರತವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಬೆಸೆಯುವುದು
ಈ ಸೇವೆಯು ಪೂರ್ವ ಭಾರತ ಮತ್ತು ರಾಷ್ಟ್ರ ರಾಜಧಾನಿ ವಲಯದ ನಡುವೆ ವೇಗವಾದ ಮತ್ತು ವಿಶ್ವಾಸಾರ್ಹವಾದ ರೈಲ್ವೆ ಸಂಪರ್ಕವನ್ನು ಒದಗಿಸುತ್ತದೆ.
- ಇದು ಹೌರಾ ಮತ್ತು ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ನಡುವೆ ಸಂಚರಿಸುವ ವಾರದ ಸೇವೆಯಾಗಿದೆ.
- ರೈಲು ಸಮಯ:
- ಪ್ರತಿ ಗುರುವಾರ ರಾತ್ರಿ 11:10 ಕ್ಕೆ ಹೌರಾದಿಂದ ಹೊರಟು, ಶನಿವಾರ ಮುಂಜಾನೆ 2:50 ಕ್ಕೆ ಆನಂದ್ ವಿಹಾರ್ ತಲುಪುತ್ತದೆ. ಮರಳಿ ಬರುವ ಪ್ರಯಾಣವು ಶನಿವಾರ ಮುಂಜಾನೆ 5:15 ಕ್ಕೆ ಆನಂದ್ ವಿಹಾರ್‌ನಿಂದ ಹೊರಟು, ಭಾನುವಾರ ಬೆಳಿಗ್ಗೆ 10:50 ಕ್ಕೆ ಹೌರಾ ತಲುಪುತ್ತದೆ.
- ಇದು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಪ್ರಮುಖ ಜಿಲ್ಲೆಗಳಿಗೆ ಸೇವೆ ನೀಡುವ ಮೂಲಕ ಉದ್ಯೋಗ ಮತ್ತು ಆಡಳಿತಾತ್ಮಕ ಕೇಂದ್ರಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ.

ಕೋಲ್ಕತ್ತಾ (ಸೀಲ್ದಾ) - ಬನಾರಸ್ ಅಮೃತ್ ಭಾರತ್ ಎಕ್ಸ್‌ಪ್ರೆಸ್: ನಂಬಿಕೆಗಳ ಸಮ್ಮಿಲನ - ಜ್ಯೋತಿರ್ಲಿಂಗದಿಂದ ಗುರುದ್ವಾರ ಘಾಟ್‌ಗಳವರೆಗೆ

ಸಂಪರ್ಕದ ವೃದ್ಧಿ: ಇದು ಪೂರ್ವ ಭಾರತ ಮತ್ತು ದೇಶದ ಅತ್ಯಂತ ಮಹತ್ವದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾದ ವಾರಣಾಸಿಯ ನಡುವೆ ಸಂಪರ್ಕವನ್ನು ಬಲಪಡಿಸುತ್ತದೆ.
- ದೈನಂದಿನ ಸೇವೆ: ಇದು ಕೋಲ್ಕತ್ತಾದ ಸೀಲ್ದಾ ಮತ್ತು ಬನಾರಸ್ ನಡುವೆ ಸಂಚರಿಸುವ ದೈನಂದಿನ ರೈಲು ಸೇವೆಯಾಗಿದೆ.
- ರೈಲು ಸಮಯ:
- ಪ್ರತಿ ದಿನ ಸಂಜೆ 7:30 ಕ್ಕೆ ಸೀಲ್ದಾದಿಂದ ಹೊರಟು, ಮರುದಿನ ಬೆಳಿಗ್ಗೆ 7:20 ಕ್ಕೆ ಬನಾರಸ್ ತಲುಪುತ್ತದೆ.
- ಮರಳಿ ಬರುವ ಪ್ರಯಾಣವು ರಾತ್ರಿ 10:10 ಕ್ಕೆ ಬನಾರಸ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 9:55 ಕ್ಕೆ ಸೀಲ್ದಾ ತಲುಪುತ್ತದೆ.
· ಧಾರ್ಮಿಕ ಪ್ರವಾಸೋದ್ಯಮ: ಈ ರೈಲು ವೈದ್ಯನಾಥ ಧಾಮ ಜ್ಯೋತಿರ್ಲಿಂಗ, ತಖ್ತ್ ಶ್ರೀ ಪಟ್ನಾ ಸಾಹಿಬ್, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಸಾರನಾಥದಂತಹ ಪುಣ್ಯಕ್ಷೇತ್ರಗಳ ಸಮೀಪ ಹಾದುಹೋಗುವ ಮೂಲಕ ಧಾರ್ಮಿಕ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

ಉಪಸಂಹಾರ
ಅಮೃತ್ ಭಾರತ್ ಎಕ್ಸ್‌ಪ್ರೆಸ್, ಸಮಗ್ರ ಮತ್ತು ವ್ಯಾಪ್ತಿಯ ಮೇಲೆ ಸ್ಪಷ್ಟ ಗಮನಹರಿಸುವ ಮೂಲಕ ಭಾರತದ ಸುದೀರ್ಘ ಪ್ರಯಾಣದ ರೈಲ್ವೆ ಜಾಲವನ್ನು ಬಲಪಡಿಸುವತ್ತ ಇಟ್ಟಿರುವ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಕೈಗೆಟುಕುವ ದರ, ವಿಶಾಲವಾದ ಭೌಗೋಳಿಕ ವ್ಯಾಪ್ತಿ ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸವನ್ನು ಸಂಯೋಜಿಸುವ ಮೂಲಕ, ಇದು ಆರ್ಥಿಕ ಏಕೀಕರಣ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ನಿರ್ಣಾಯಕವಾಗಿರುವ ಪ್ರದೇಶಗಳಾದ್ಯಂತ ಸಂಚಾರದ ಅಗತ್ಯತೆಗಳನ್ನು ಪೂರೈಸುತ್ತದೆ. ರೈಲ್ವೆ ಜಾಲವು ವಿಸ್ತರಿಸುತ್ತಾ ಹೋದಂತೆ, ದೇಶಾದ್ಯಂತ ಜನರು, ಪ್ರದೇಶಗಳು ಮತ್ತು ಅವಕಾಶಗಳನ್ನು ಬೆಸೆಯುವಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸುದೀರ್ಘ ಕಾಲದವರೆಗೆ ಪ್ರಮುಖ ಪಾತ್ರ ವಹಿಸಲಿದೆ.
References
Ministry of Railways
https://www.pib.gov.in/PressReleseDetail.aspx?PRID=2214291®=3&lang=1
https://www.pib.gov.in/PressReleseDetail.aspx?PRID=2150183®=3&lang=1
******
(Explainer ID: 156975)
आगंतुक पटल : 12
Provide suggestions / comments