Farmer's Welfare
ಭಾರತದ ಸಕ್ಕರೆ ಉದ್ಯಮ
प्रविष्टि तिथि:
26 AUG 2026 14:03 PM
ವಲಯ, ಮೌಲ್ಯ ಸರಣಿ ಮತ್ತು ಇತ್ತೀಚಿನ ಬೆಲೆ ಏರಿಕೆಯನ್ನು ಅರ್ಥೈಸಿಕೊಳ್ಳುವುದು
ಭಾರತದ ಸಕ್ಕರೆ ಉದ್ಯಮ ಒಂದು ನೋಟದಲ್ಲಿ
ಭಾರತದ ಸಕ್ಕರೆ ಉದ್ಯಮವು ಒಂದು ಪ್ರಮುಖ ಕೃಷಿ, ಕೈಗಾರಿಕಾ ಮತ್ತು ಗ್ರಾಮೀಣ ಜೀವನೋಪಾಯದ ವ್ಯವಸ್ಥೆಯಾಗಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಕ ದೇಶವಾಗಿದೆ. ಕಬ್ಬು ವಲಯವು ಸುಮಾರು 5 ಕೋಟಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳು ಹಾಗೂ ಅದರ ಸಂಬಂಧಿತ ಉದ್ಯಮಗಳಲ್ಲಿನ ಸುಮಾರು 5 ಲಕ್ಷ ಕಾರ್ಮಿಕರಿಗೆ ಬೆಂಬಲ ನೀಡುತ್ತದೆ.
- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮೂರನೇ ಮುಂಗಡ ಉತ್ಪಾದನಾ ಅಂದಾಜಿನ ಪ್ರಕಾರ, ಭಾರತದ ಕಬ್ಬಿನ ಉತ್ಪಾದನೆಯು 2025-26 ರಲ್ಲಿ 500 Mಎಂಟಿ ಗೆ ತಲುಪಿದೆ. ಇದು 2015-16 ರಲ್ಲಿದ್ದ 348.44 ಎಂಎಂಟಿ ಉತ್ಪಾದನೆಗೆ ಹೋಲಿಸಿದರೆ, ಕಳೆದ 10 ವರ್ಷಗಳಲ್ಲಿ ಸುಮಾರು ಶೇಕಡಾ 43.5 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

- ಕಬ್ಬು ಬೇಸಾಯದ ವಿಸ್ತೀರ್ಣವು ಸಹ 2015-16 ರಲ್ಲಿದ್ದ 49.27 ಲಕ್ಷ ಹೆಕ್ಟೇರ್‌ಗಳಿಂದ 2025-26 ರಲ್ಲಿ 58.87 ಲಕ್ಷ ಹೆಕ್ಟೇರ್‌ಗಳಿಗೆ ಹೆಚ್ಚಾಗಿದೆ.
- ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಭಾರತದಲ್ಲಿ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.
- ಭಾರತವು 2016-17 ರಲ್ಲಿ 0.47 ಲಕ್ಷ ಎಂಟಿ ಸಕ್ಕರೆಯನ್ನು ರಫ್ತು ಮಾಡಿದ್ದರೆ, 2025-26 ರಲ್ಲಿ 8 ಲಕ್ಷ ಎಂಟಿ ಸಕ್ಕರೆಯನ್ನು ರಫ್ತು ಮಾಡಿದೆ.

- ಸರ್ಕಾರವು 2026-27 ರ ಸಕ್ಕರೆ ಋತುವಿಗೆ (ಅಕ್ಟೋಬರ್ - ಸೆಪ್ಟೆಂಬರ್) ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಕ್ವಿಂಟಲ್‌ಗೆ ₹365 ಎಂದು ನಿಗದಿಪಡಿಸಿದೆ. ಇದು ಶೇಕಡಾ 10.25 ರ ಮೂಲ ಚೇತರಿಕೆ ದರವನ್ನು ಒದಗಿಸುತ್ತದೆ. ಈ ಬೆಲೆಯು 2016-17 ರ ಸಕ್ಕರೆ ಋತುವಿನ ಎಫ್‌ಆರ್‌ಪಿ ಗಿಂತ ₹135 ಹೆಚ್ಚಾಗಿದೆ; ಆಗ ಶೇಕಡಾ 9.5 ರ ಮೂಲ ಚೇತರಿಕೆ ದರದೊಂದಿಗೆ ಕ್ವಿಂಟಲ್‌ಗೆ ₹230 ಎಂದು ನಿಗದಿಪಡಿಸಲಾಗಿತ್ತು.
- ಭಾರತೀಯ ಸಕ್ಕರೆಯ ಪ್ರಮುಖ ರಫ್ತು ತಾಣಗಳಲ್ಲಿ ಶ್ರೀಲಂಕಾ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾ ಸೇರಿವೆ.
- ಸಾಕಷ್ಟು ಪ್ರಮಾಣದ ಸಕ್ಕರೆ ಕಾಯ್ದಿರಿಸಿದ ದಾಸ್ತಾನು ಲಭ್ಯವಿದ್ದು, 2025-26 ರಲ್ಲಿ ಸಕ್ಕರೆ ಉತ್ಪಾದನೆಯು ಸಾಕಷ್ಟಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಎಥನಾಲ್ ಸಮ್ಮಿಶ್ರಣವನ್ನು ಉತ್ತೇಜಿಸುವಲ್ಲಿ ಭಾರತೀಯ ಸಕ್ಕರೆ ಉದ್ಯಮದ ಪಾತ್ರ
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಇಂಧನ ಭದ್ರತೆಯನ್ನು ಹೆಚ್ಚಿಸುವುದು ಪೆಟ್ರೋಲ್‌ನೊಂದಿಗೆ ಎಥನಾಲ್ ಮಿಶ್ರಣ ಮಾಡುವ ಮುಖ್ಯ ಉದ್ದೇಶವಾಗಿದೆ. ಈ ಕ್ರಮವು ಸುಸ್ಥಿರ ಇಂಧನ ಪರ್ಯಾಯಗಳಿಗಾಗಿ ಸರ್ಕಾರದ ಪ್ರಯತ್ನಕ್ಕೆ ಪೂರಕವಾಗಿದೆ. ಈ ಉಪಕ್ರಮವು ರೈತರಿಗೆ ಸ್ಥಿರ ಆದಾಯವನ್ನು ಒದಗಿಸುವ ಮೂಲಕ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಅವರಿಗೆ ಬೆಂಬಲ ನೀಡುತ್ತದೆ. ಆದರೆ, ಎಥನಾಲ್ ಸಮ್ಮಿಶ್ರಣದಿಂದಾಗಿ ದೇಶೀಯ ಬಳಕೆಯ ಸಕ್ಕರೆಗೆ ಕೊರತೆಯಾಗುತ್ತದೆ ಎಂದರ್ಥವಲ್ಲ.
- ಎಥನಾಲ್ ಉತ್ಪಾದನೆಗೆ ಬಳಸಲಾಗುವ ಸಕ್ಕರೆಯ ಪಾಲು 2022-23 ರಲ್ಲಿ ಶೇಕಡಾ 12 ರಷ್ಟಿದ್ದುದು 2025-26 ರಲ್ಲಿ ಸುಮಾರು ಶೇಕಡಾ 9 ಕ್ಕೆ ಇಳಿಕೆಯಾಗಿದೆ.
- ಅದಲ್ಲದೆ, ದೇಶದಲ್ಲಿ ಉತ್ಪಾದನೆಯಾಗುವ ಎಥನಾಲ್‌ನ ಪೈಕಿ ಸುಮಾರು ಮುಕ್ಕಾಲು ಭಾಗವು ಈಗ ಧಾನ್ಯಗಳಿಂದ, ಮುಖ್ಯವಾಗಿ ಮೆಕ್ಕೆಜೋಳದಿಂದ ಬರುತ್ತದೆ.
ವಾಸ್ತವವಾಗಿ, ಎಥನಾಲ್ ಯೋಜನೆಯು ಕಬ್ಬು ಬೆಳೆಗಾರರಿಗೆ ಸಹಾಯ ಮಾಡಿದೆ ಮತ್ತು ಸಕ್ಕರೆ ಕಾರ್ಖಾನೆಗಳನ್ನು ಬಲಪಡಿಸಿದೆ:
- ಭಾರತವು ವಾರ್ಷಿಕವಾಗಿ ಸರಾಸರಿ ಸುಮಾರು 300-340 ಲಕ್ಷ ಎಂಟಿ ಸಕ್ಕರೆಯನ್ನು ಉತ್ಪಾದಿಸುತ್ತದೆ.
- ಭಾರತದ ದೇಶೀಯ ಸಕ್ಕರೆ ಬಳಕೆ ವಾರ್ಷಿಕವಾಗಿ ಸುಮಾರು 280-290 ಲಕ್ಷ ಎಂಟಿ ಆಗಿದೆ.
- ಅಧಿಕ ಉತ್ಪಾದನೆಯ ವರ್ಷಗಳಲ್ಲಿ, ಹೆಚ್ಚುವರಿ ದಾಸ್ತಾನು ಸಕ್ಕರೆ ಕಾರ್ಖಾನೆಗಳ ಹಣವನ್ನು ಸ್ಥಗಿತಗೊಳಿಸುತ್ತದೆ (ಬ್ಲಾಕ್ ಮಾಡುತ್ತದೆ) ಮತ್ತು ಕಬ್ಬು ಬೆಳೆಗಾರರಿಗೆ ಪಾವತಿಗಳನ್ನು ವಿಳಂಬಗೊಳಿಸುತ್ತದೆ. ಹೆಚ್ಚುವರಿ ಸಕ್ಕರೆಯನ್ನು ಎಥನಾಲ್ ಕಡೆಗೆ ತಿರುಗಿಸುವುದು ಈ ರಚನಾತ್ಮಕ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ.
- ಆಗಸ್ಟ್ 20, 2026 ರ ಹೊತ್ತಿಗೆ, 2025-26 ರ ಸಕ್ಕರೆ ಋತುವಿನ ಕಬ್ಬಿನ ಬಾಕಿ ಶೇಕಡಾ 97 ರಷ್ಟನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ.
- ಸಕ್ಕರೆ ಕಾರ್ಖಾನೆಗಳ ಸುಧಾರಿತ ಆರ್ಥಿಕ ಸ್ಥಿತಿಯು ಸರ್ಕಾರದ ಬೆಂಬಲದ ಮೇಲಿನ ಅವುಗಳ ಅವಲಂಬನೆಯನ್ನು ಕಡಿಮೆ ಮಾಡಿದೆ.
- ಇದರೊಂದಿಗೆ, ಗ್ರಾಹಕರಿಗೆ ಸಕ್ಕರೆಯ ಚಿಲ್ಲರೆ ಬೆಲೆಗಳು ಸಹ ವ್ಯಾಪಕವಾಗಿ ಸ್ಥಿರವಾಗಿದ್ದು, ಆಗಸ್ಟ್ 2024 ಮತ್ತು ಜುಲೈ 2026 ರ ನಡುವೆ ವಾರ್ಷಿಕವಾಗಿ ಸುಮಾರು 3% ನಷ್ಟು ಮಾತ್ರ ಹೆಚ್ಚಾಗಿವೆ.
ಪ್ರಸ್ತುತ ಸಕ್ಕರೆ ಬೆಲೆ ಏರಿಕೆಯ ವಿಶ್ಲೇಷಣೆ
ಸಕ್ಕರೆ ಬೆಲೆಯು ಇತ್ತೀಚಿನ ವಾರಗಳಲ್ಲಿ ಜುಲೈ 20, 2026 ರಂದು ಕೆಜಿಗೆ ₹48.18 ಇ ದ್ದದ್ದು, ಆಗಸ್ಟ್ 20, 2026 ರ ವೇಳೆಗೆ ಕೆಜಿಗೆ ₹55.70 ಕ್ಕೆ ಏರಿಕೆಯಾಗಿದೆ. ಇದು ಒಂದು ತಿಂಗಳೊಳಗೆ ಸುಮಾರು 15.6% ಏರಿಕೆಯನ್ನು ತೋರಿಸುತ್ತದೆ. ಆದರೆ, ದೀರ್ಘಾವಧಿಯ ಪ್ರವೃತ್ತಿಯಿಂದ ಈ ಇತ್ತೀಚಿನ ಬದಲಾವಣೆಯನ್ನು ಪ್ರತ್ಯೇಕಿಸಿ ನೋಡುವುದು ಅಗತ್ಯವಾಗಿದೆ: ಮುಂಚಿತವಾಗಿ ಉಲ್ಲೇಖಿಸಿದಂತೆ, ಆಗಸ್ಟ್ 2024 ಮತ್ತು ಜುಲೈ 2026 ರ ನಡುವೆ ಸಕ್ಕರೆ ಬೆಲೆಗಳು ವಾರ್ಷಿಕವಾಗಿ ಸುಮಾರು 3% ನಷ್ಟು ಮಾತ್ರ ಹೆಚ್ಚಾಗಿದ್ದವು. ಪ್ರಸ್ತುತ ಬೆಲೆ ಏರಿಕೆಯು ಬೆಲೆಯ ದೀರ್ಘಾವಧಿಯ ಪ್ರವೃತ್ತಿಯ ಬದಲಾವಣೆಗಿಂತ ಹೆಚ್ಚಾಗಿ, (ಅಲ್ಪಾವಧಿಯ) ಪೂರೈಕೆ ಮತ್ತು ಮಾರುಕಟ್ಟೆಯ ಅಂಶಗಳನ್ನು ಪ್ರತಿಫಲಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಸಕ್ಕರೆ ಬೆಲೆಯಲ್ಲಿನ ಪ್ರಸ್ತುತ ಏರಿಕೆಗೆ ಹಲವು ಕಾರಣಗಳ ಸಂಯೋಜನೆ ಕಾರಣವಾಗಿದೆ, ಅವುಗಳೆಂದರೆ:
- ನಿರೀಕ್ಷೆಗಿಂತ ಕಡಿಮೆ ದೇಶೀಯ ಉತ್ಪಾದನೆ,
- ಹಬ್ಬದ ಋತುವಿನ ಮುನ್ನ ಹೆಚ್ಚಿದ ಬೇಡಿಕೆ,
- ಹವಾಮಾನ ವೈಪರೀತ್ಯದಿಂದ ಕಬ್ಬಿನ ಬೆಳೆಗೆ ಉಂಟಾದ ಹಾನಿ,
- ಜಾಗತಿಕ ಸಕ್ಕರೆ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚುತ್ತಿರುವ ಬೆಲೆಗಳು, ಮತ್ತು
- ಉದ್ಯಮದ ಕೆಲವು ವಿಭಾಗಗಳಿಂದ ನಡೆಯುತ್ತಿರುವ ಊಹಾಟ ಮತ್ತು ಸಂಗ್ರಹಣೆ.
ಪ್ರಸ್ತುತ ಋತುವಿನಲ್ಲಿ ಸಕ್ಕರೆ ಉತ್ಪಾದನೆಯು ಆರಂಭಿಕ ಅಂದಾಜು ಸುಮಾರು 343 ಎಲ್‌ಎಂಟಿ ಗೆ ಹೋಲಿಸಿದರೆ ಸುಮಾರು 306 ಎಲ್‌ಎಂಟಿ ತಲುಪುವ ನಿರೀಕ್ಷೆಯಿದೆ. ಉತ್ಪಾದನೆಯು ಎರಡು ಕಾರಣಗಳಿಂದ ಪ್ರಭಾವಿತಗೊಂಡಿದೆ: ಕೆಂಪು ಕೊಳೆ ರೋಗ ಮತ್ತು ಸುಳಿ ಕೊರೆಕ ರೋಗ, ಹಾಗೂ ಅಧಿಕ ಮಳೆಯಿಂದ ಉಂಟಾದ ಜಲಾವೃತ ಸ್ಥಿತಿ. ಆದಾಗ್ಯೂ, ಅಂದಾಜಿಗಿಂತ ಕಡಿಮೆ ಉತ್ಪಾದನೆಯ ಹೊರತಾಗಿಯೂ, ದೇಶೀಯ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ. ಹೊಸ ಕಬ್ಬು ನುರಿಸುವ ಋತುವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ.
ಸಕ್ಕರೆ ಪೂರೈಕೆಯಲ್ಲಿನ ಅಭಾವವು ಜಾಗತಿಕ ವಿದ್ಯಮಾನವಾಗಿದ್ದು, ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. 2026-27 ರ ಜಾಗತಿಕ ಸಕ್ಕರೆ ಕೊರತೆಯು ಸುಮಾರು 33 ಲಕ್ಷ ಎಂಟಿ ಎಂದು ಅಂದಾಜಿಸಲಾಗಿದೆ. ಪರಿಣಾಮವಾಗಿ, ಅಂತರರಾಷ್ಟ್ರೀಯ ಸಕ್ಕರೆ ಬೆಲೆಗಳು ಜೂನ್ 30, 2026 ರಂದು ಟನ್‌ಗೆ $474 ರಷ್ಟಿದ್ದುದ್ದು, ಆಗಸ್ಟ್ 20, 2026 ರ ವೇಳೆಗೆ ಟನ್‌ಗೆ $552 ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಇದು ಎರಡಕ್ಕಿಂತ ಕಡಿಮೆ ತಿಂಗಳುಗಳಲ್ಲಿ 16% ಕ್ಕಿಂತ ಹೆಚ್ಚಿನ ಏರಿಕೆಯನ್ನು ತೋರಿಸುತ್ತದೆ.
ಕೋಷ್ಟಕ 1: ಏರುತ್ತಿರುವ ಸಕ್ಕರೆ ಬೆಲೆಗಳ ಕುರಿತಾದ ಕಲ್ಪನೆ (ಮಿಥ್ಯ) ವಿರುದ್ಧ ಸತ್ಯ
|
ಕಲ್ಪನೆ
|
ಸತ್ಯ
|
|
ಎಥನಾಲ್ ಉತ್ಪಾದನೆಗೆ ಸಕ್ಕರೆಯನ್ನು ತಿರುಗಿಸಿರುವುದೇ ಸಕ್ಕರೆ ಬೆಲೆ ಏರಿಕೆಗೆ ಕಾರಣ.
|
ಎಥನಾಲ್ ಉತ್ಪಾದನೆಗೆ ಬಳಸಲಾದ ಸಕ್ಕರೆಯ ಪಾಲು 2022-23 ರಲ್ಲಿ ಶೇ. 12 ರಷ್ಟಿದ್ದುದ್ದು 2025-26 ರಲ್ಲಿ ಸುಮಾರು ಶೇ. 9 ಕ್ಕೆ ಇಳಿಕೆಯಾಗಿದೆ.
|
|
ಎಥನಾಲ್ ಗ್ರಾಹಕರಿಗೆ ಸಿಗಬೇಕಾದ ಸಕ್ಕರೆಯನ್ನು ಕಬಳಿಸುತ್ತಿದೆ.
|
ಭಾರತದ ಎಥನಾಲ್‌ನ ಸುಮಾರು ಮುಕ್ಕಾಲು ಭಾಗವು ಈಗ ಧಾನ್ಯಗಳಿಂದ, ಮುಖ್ಯವಾಗಿ ಮೆಕ್ಕೆಜೋಳದಿಂದ ಬರುತ್ತದೆ.
|
|
ಭಾರತವು ಸಕ್ಕರೆ ಅಭಾವವನ್ನು ಎದುರಿಸುತ್ತಿದೆ.
|
ಹೊಸ ಕಬ್ಬು ನುರಿಸುವ ಋತು ಪ್ರಾರಂಭವಾಗುವವರೆಗೆ ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ದಾಸ್ತಾನು ಲಭ್ಯವಿದೆ.
|
|
ಜಾಗತಿಕ ಸಕ್ಕರೆ ಬೆಲೆಗಳು ಸ್ಥಿರವಾಗಿ ಉಳಿದಿವೆ.
|
ಅಂತರರಾಷ್ಟ್ರೀಯ ಬೆಲೆಗಳು ಟನ್‌ಗೆ $474 ರಿಂದ $552 ಕ್ಕೆ ಏರಿಕೆಯಾಗಿದ್ದು, ಎರಡಕ್ಕಿಂತ ಕಡಿಮೆ ತಿಂಗಳಲ್ಲಿ 16% ಕ್ಕಿಂತ ಹೆಚ್ಚು ಹೆಚ್ಚಾಗಿದೆ.
|
|
ಭಾರತದ ಸಕ್ಕರೆ ಉತ್ಪಾದನೆ ಕುಸಿದುಬಿದ್ದಿದೆ.
|
ಪ್ರಸ್ತುತ ಉತ್ಪಾದನೆಯು 306 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ, ಇದು ಆರಂಭಿಕ ಅಂದಾಜು 343 ಎಲ್‌ಎಂಟಿ ಗಿಂತ ಕಡಿಮೆಯಾಗಿದೆ.
|
|
ಸಕ್ಕರೆ ಬೆಲೆಗಳು ನಿರಂತರವಾಗಿ ತೀವ್ರವಾಗಿ ಏರುತ್ತಿವೆ.
|
ಆಗಸ್ಟ್ 2024 ಮತ್ತು ಜುಲೈ 2026 ರ ನಡುವೆ ದೀರ್ಘಾವಧಿಯ ಬೆಲೆಗಳು ವಾರ್ಷಿಕವಾಗಿ ಸುಮಾರು 3% ನಷ್ಟು ಮಾತ್ರ ಹೆಚ್ಚಾಗಿವೆ. ಪ್ರಸ್ತುತ ಬೆಲೆ ಏರಿಕೆಯು ಅಲ್ಪಾವಧಿಯದ್ದಾಗಿದೆ.
|
ಕೆಲವು ಸಕ್ಕರೆ ಕಾರ್ಖಾನೆಗಳು ಮತ್ತು ವರ್ತಕರು ನಡೆಸುತ್ತಿರುವ ಊಹಾಪೋಹದ ವ್ಯಾಪಾರ ಮತ್ತು ಸಂಗ್ರಹಣೆಯು ಇತ್ತೀಚಿನ ಬೆಲೆ ಏರಿಕೆಗೆ ಕಾರಣವಾಗಿದೆ ಎಂಬುದನ್ನು ಸರ್ಕಾರ ಗಮನಿಸಿದೆ.
ಸಕ್ಕರೆ ಕಪ್ಪುಮಾರುಕಟ್ಟೆ ನಿಯಂತ್ರಿಸಲು ಮತ್ತು ಪೂರೈಕೆ ಹೆಚ್ಚಿಸಲು ಸರ್ಕಾರದ ಪ್ರಯತ್ನಗಳು
ಸಕ್ಕರೆಯ ಅಲ್ಪಾವಧಿಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಪ್ರಸ್ತುತ ನಡೆಯುತ್ತಿರುವ ಸಕ್ಕರೆ ಕಪ್ಪುಮಾರುಕಟ್ಟೆಯನ್ನು ತಡೆಯಲು ಸರ್ಕಾರವು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:
- ಆಗಸ್ಟ್ 1, 2026 ರಿಂದ ನವೆಂಬರ್ 30, 2026 ರವರೆಗೆ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳ ಮೇಲೆ 400 ಟನ್‌ಗಳ ದಾಸ್ತಾನು ಮಿತಿಯನ್ನು ಹೇರಲಾಗಿದೆ.
- ಸೆಪ್ಟೆಂಬರ್ 1, 2026 ರಿಂದ ಜಾರಿಗೆ ಬರುವಂತೆ, ಸಗಟು ಗ್ರಾಹಕರು 15 ದಿನಗಳ ಬಳಕೆಗೆ ಮೀರಿದ ಸಕ್ಕರೆ ದಾಸ್ತಾನನ್ನು ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ.
- ಅಕ್ರಮ ಸಂಗ್ರಹಣೆ ಮತ್ತು ಕೃತಕ ಅಭಾವವನ್ನು ತಪಾಸಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜಂಟಿ ತಂಡಗಳು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನಿನ ಭೌತಿಕ ಪರಿಶೀಲನೆಯನ್ನು ನಡೆಸುತ್ತಿವೆ.
- ಮುನ್ನೆಚ್ಚರಿಕೆಯ ಕ್ರಮವಾಗಿ, ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರವು 10 ಲಕ್ಷ ಎಂಟಿ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿಸಲು ನಿರ್ಧರಿಸಿದೆ.
- ಅಕ್ಟೋಬರ್ 15, 2026 ರಿಂದ ಕಬ್ಬು ನುರಿಸುವಿಕೆಯನ್ನು ಪ್ರಾರಂಭಿಸಲು ರಾಜ್ಯಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಲಹೆ ನೀಡಲಾಗಿದೆ. ಇದರಿಂದ ಅಕ್ಟೋಬರ್ ತಿಂಗಳ ಸಕ್ಕರೆ ಉತ್ಪಾದನೆಯು ಸಾಮಾನ್ಯ 3-4 ಲಕ್ಷ ಎಂಟಿ ಯಿಂದ 10 ಲಕ್ಷ ಎಂಟಿ ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಹಬ್ಬದ ಋತುವಿನಲ್ಲಿ ಸಕ್ಕರೆಯ ಲಭ್ಯತೆಯನ್ನು ಸುಧಾರಿಸುತ್ತದೆ.
ಪ್ರಸ್ತುತ ಬೆಲೆ ಏರಿಕೆಯ ಆಚೆಗಿನ ನೋಟ
ಭಾರತದ ಸಕ್ಕರೆ ವಲಯವು ರೈತರು, ಸಕ್ಕರೆ ಕಾರ್ಖಾನೆಗಳು, ಇಂಧನ ಉತ್ಪಾದನೆ ಮತ್ತು ಜಾಗತಿಕ ವ್ಯಾಪಾರವನ್ನು ಬೆಂಬಲಿಸುವ ವಿವಿಧೋದ್ದೇಶದ ಉದ್ಯಮವಾಗಿ ಬೆಳೆದಿದೆ. ಇತ್ತೀಚಿನ ಬೆಲೆ ಒತ್ತಡಗಳು ಕಡಿಮೆ ಉತ್ಪಾದನೆ, ಋತುಮಾನದ ಬೇಡಿಕೆ, ಜಾಗತಿಕ ಪೂರೈಕೆ ಪರಿಸ್ಥಿತಿಗಳು ಮತ್ತು ಮಾರುಕಟ್ಟೆಯ ಚಟುವಟಿಕೆಗಳನ್ನು ಪ್ರತಿಫಲಿಸುತ್ತವೆ. ಆದಾಗ್ಯೂ, ಈ ವಲಯದ ವ್ಯಾಪಕ ಬೆಳವಣಿಗೆ ಮತ್ತು ವೈವಿಧ್ಯೀಕರಣದ ಮುಂದೆ ಈ ಬೆಲೆ ಒತ್ತಡಗಳು ಹಂಗಾಮಿ (ತಾತ್ಕಾಲಿಕ) ಮಾತ್ರ. ಗ್ರಾಹಕರ ಹಿತಾಸಕ್ತಿ, ರೈತರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮತ್ತು ಉದ್ಯಮದ ಸ್ಥಿರತೆಯನ್ನು ಸಮತೋಲನಗೊಳಿಸುವುದು ಸರ್ಕಾರದ ಆದ್ಯತೆಯಾಗಿ ಉಳಿದಿದೆ.
References
Ministry of Agriculture & Farmers Welfare
https://dfpd.gov.in/sugar-policy/en
https://www.nfsm.gov.in/BriefNote/BN_Sugarcane.pdf
https://sansad.in/getFile/annex/241/Au1986.pdf?source=pqars
https://www.pib.gov.in/PressReleasePage.aspx?PRID=2258113®=3&lang=1
https://www.pib.gov.in/Pressreleaseshare.aspx?PRID=1555573®=48&lang=2
https://www.pib.gov.in/PressReleaseDetail.aspx?PRID=2302874®=48&lang=1
Ministry of Commerce & Industry
https://agriwelfare.gov.in/Documents/Time_Series_3rdAE_2025_26_En.pdf
https://agriexchange.apeda.gov.in/India/GenerateAPEDAProductReport/Index
https://www.ibef.org/blogs/from-fields-to-fuel-the-indian-sugar-industry-s-role-in-advancing-ethanol-blending
Ministry of Petroleum & Natural Gas
https://www.pib.gov.in/PressReleaseDetail.aspx?PRID=2249431®=3&lang=2
Ministry of Consumer Affairs, Food & Public Distribution
https://www.pib.gov.in/PressReleasePage.aspx?PRID=2302018&lang=1®=3
PIB Backgrounder
https://www.pib.gov.in/PressReleasePage.aspx?PRID=2245639®=3&lang=1
https://www.pib.gov.in/PressReleasePage.aspx?PRID=2248987®=3&lang=1
Click to see pdf
*****
(तथ्य सामग्री आईडी: 150980)
आगंतुक पटल : 83
Provide suggestions / comments