Infrastructure
ಎಂಎಂಡಿಆರ್ ತಿದ್ದುಪಡಿ ಮಸೂದೆ, 2026
प्रविष्टि तिथि:
13 AUG 2026 15:52 PM
ಖನಿಜ ತೆರಿಗೆಯಲ್ಲಿ ನಿಶ್ಚಿತತೆ ಮತ್ತು ಏಕರೂಪತೆ
ಖನಿಜ ನಿಯಮಗಳು: ಒಂದು ಅವಲೋಕನ
ಖನಿಜಗಳು ಬಲವಾದ ಭೂರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಅವು ಮೂಲಸೌಕರ್ಯ, ಡಿಜಿಟಲ್ ವ್ಯವಸ್ಥೆಗಳು, ಉತ್ಪಾದನೆ, ಇಂಧನ ಭದ್ರತೆ ಮತ್ತು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ. ಎಲ್ಲಾ ಪ್ರದೇಶಗಳಲ್ಲಿ ಸಮತೋಲಿತ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿಯು ಸಾರ್ವಜನಿಕ ಹಿತಾಸಕ್ತಿ ಮತ್ತು ದೀರ್ಘಕಾಲೀನ ಸಮೃದ್ಧಿಯನ್ನು ಮುನ್ನಡೆಸಲು ಪ್ರಮುಖ ಅಡಿಪಾಯವಾಗಿದೆ.
ಭಾರತದಲ್ಲಿ, ಗಣಿಗಾರಿಕೆಯನ್ನು ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ರ ಮೂಲಕ ನಿಯಂತ್ರಿಸಲಾಗುತ್ತದೆ. ವ್ಯಾಪಕ ಸಾರ್ವಜನಿಕ ಹಿತಾಸಕ್ತಿಗಾಗಿ, ಕೇಂದ್ರ ಸರ್ಕಾರವು ಈ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಗಣಿ ನಿಯಂತ್ರಣ ಮತ್ತು ಖನಿಜ ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ. ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026 ದೇಶಾದ್ಯಂತ ಖನಿಜ ವಲಯಕ್ಕೆ ಏಕರೂಪದ ಮತ್ತು ಸಮತೋಲಿತ ಆರ್ಥಿಕ ಚೌಕಟ್ಟನ್ನು ರಚಿಸಲು ಈ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರುತ್ತದೆ. ಇದು ಕೇಂದ್ರ ಸರ್ಕಾರವು ನಿಗದಿಪಡಿಸಿದ ಷರತ್ತುಗಳು/ನಿರ್ಬಂಧಗಳ ಹೊರತಾಗಿ, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಯ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸದಂತೆ ರಾಜ್ಯ ಸರ್ಕಾರಗಳನ್ನು ನಿರ್ಬಂಧಿಸುತ್ತದೆ. ಈ ಮಸೂದೆಯನ್ನು ಸಂಸತ್ತಿನ ಎರಡೂ ಮನೆಗಳು ಅಂಗೀಕರಿಸಿವೆ.
ತಿದ್ದುಪಡಿ ಏಕೆ ಅಗತ್ಯವಿದೆ
ಗಣಿಗಾರಿಕೆ ವಲಯದಲ್ಲಿನ ತೆರಿಗೆ ಮತ್ತು ಸುಂಕಗಳ ಪ್ರಸ್ತುತ ಚೌಕಟ್ಟಿನಿಂದ ಉದ್ಭವಿಸುವ ಕೆಳಗಿನ ಸವಾಲುಗಳನ್ನು ಎಂಎಂಡಿಆರ್ ತಿದ್ದುಪಡಿ ಮಸೂದೆ, 2026 ಬಗೆಹರಿಸುತ್ತದೆ:
- ಗಣಿಗಾರಿಕೆ ವಲಯದ ಮೇಲೆ ವಿಪರೀತ ತೆರಿಗೆ ಹೊರೆ.
- ಗಣಿಗಾರಿಕೆ ಕಾರ್ಯಾಚರಣೆಗಳು ಪ್ರಾರಂಭವಾದ ನಂತರವೂ ಅನಿರೀಕ್ಷಿತವಾಗಿ ತೆರಿಗೆಗಳು, ಸೆಸ್ ಮತ್ತು ಇತರೆ ಸುಂಕಗಳನ್ನು ವಿಧಿಸುವುದು.
- ಖನಿಜಗಳ ಉತ್ಪಾದನೆ ಅಥವಾ ರವಾನೆಯ ಮೇಲೆ ಸಾಲು ಸಾಲು ತೆರಿಗೆಗಳು, ಸೆಸ್ ಮತ್ತು ಇತರೆ ಸುಂಕಗಳು.
- ರಾಜ್ಯಗಳ ನಡುವೆ ತೆರಿಗೆಗಳು ಮತ್ತು ಇತರೆ ಸುಂಕಗಳ ದರಗಳಲ್ಲಿ ಏಕರೂಪತೆ ಇಲ್ಲದಿರುವುದು.
- ಪೂರ್ವಾಪರ ಅನ್ವಯವಾಗುವಂತೆ (ಹಳೆಯ ದಿನಾಂಕದಿಂದ) ತೆರಿಗೆಗಳು, ಸೆಸ್ ಅಥವಾ ಸುಂಕಗಳನ್ನು ವಿಧಿಸುವುದು.
ಈ ಸವಾಲುಗಳು ಗಣಿಗಾರಿಕೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿವೆ:
- ಅತಿಯಾದ ಆರ್ಥಿಕ ಹೊರೆಯು ಗಣಿಗಾರಿಕೆಯನ್ನು ವಾಣಿಜ್ಯಿಕವಾಗಿ ನಷ್ಟದಾಯಕವನ್ನಾಗಿ ಮಾಡಿತು, ಖನಿಜ ಹೊರತೆಗೆಯುವಿಕೆಯನ್ನು ನಿರುತ್ಸಾಹಗೊಳಿಸಿತು ಮತ್ತು ಕೆಲವು ಸಂದರ್ಭಗಳಲ್ಲಿ ಗಣಿಗಳ ಮುಚ್ಚುವಿಕೆಗೆ ಕಾರಣವಾಯಿತು.
- ಹೆಚ್ಚುವರಿ ಮತ್ತು ಅನಿರೀಕ್ಷಿತ ವೆಚ್ಚಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಗಣಿಗಾರಿಕೆ ನಿರ್ವಾಹಕರ ಮೇಲೆ ಅಸಮಾನವಾದ ಪರಿಣಾಮ ಬೀರಿದವು.
- ಹೆಚ್ಚಿನ ಮತ್ತು ಅಸಮಾನವಾದ ಸುಂಕಗಳು ಸ್ಥಳೀಯ ಪೂರೈಕೆ ಸರಪಳಿಗಳನ್ನು ತಪ್ಪಿಸಲು ಉದ್ಯಮಗಳನ್ನು ಪ್ರೇರೇಪಿಸಿದವು. ಇದು ದುರ್ಬಲ ಮಾರುಕಟ್ಟೆಗಳು, ಹೆಚ್ಚಿನ ಸಾರಿಗೆ ವೆಚ್ಚಗಳು ಮತ್ತು ಹೆಚ್ಚಿನ ಮಾಲಿನ್ಯವನ್ನು ಸೃಷ್ಟಿಸಿತು.
- ಸಾಕಷ್ಟು ಸ್ಥಳೀಯ ಖನಿಜ ಸಂಪನ್ಮೂಲಗಳಿದ್ದರೂ ಸಹ, ದುಬಾರಿ ದೇಶೀಯ ಪೂರೈಕೆಯಿಂದಾಗಿ ಖನಿಜಗಳ ಆಮದು ಹೆಚ್ಚಾಗುವ ಅಪಾಯವನ್ನು ತಂದೊಡ್ಡಿತು.
- ಬಹು ಹಂತದ ಮತ್ತು ಅಸಂಗತ ತೆರಿಗೆಗಳು ಒಂದರ ಮೇಲೊಂದರಂತೆ ಬೀಳುವ ತೆರಿಗೆ ಪರಿಣಾಮ (ಕ್ಯಾಸ್ಕೇಡಿಂಗ್ ಎಫೆಕ್ಟ್) ಮತ್ತು ಹೆಚ್ಚಿನ ಅನುಸರಣಾ ವೆಚ್ಚಗಳಿಗೆ ಕಾರಣವಾಗಿ, ಆರ್ಥಿಕ ಬೆಳವಣಿಗೆಯನ್ನು ಮಂದಗೊಳಿಸಿದವು.
- ಗಣಿಗಾರಿಕೆ ಹಂತದಲ್ಲೇ ವಿಧಿಸುವ ಅತಿಯಾದ ತೆರಿಗೆ ಹೊರೆಯು ಅಂತಿಮವಾಗಿ ಸರಕುಗಳು ಮತ್ತು ಸೇವೆಗಳ ವೆಚ್ಚವನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯ ನಾಗರಿಕರ ಜೀವನ ವೆಚ್ಚವನ್ನು ಹೆಚ್ಚಿಸುತ್ತದೆ.
- ಹಳೆಯ ದಿನಾಂಕಗಳಿಂದ ಪೂರ್ವಾಪರ ಅನ್ವಯವಾಗುವಂತೆ ತೆರಿಗೆ ವಿಧಿಸುವುದು ಕಾನೂನು ಅನಿಶ್ಚಿತತೆಯನ್ನು ಉಂಟುಮಾಡಿತು ಮತ್ತು ಹೂಡಿಕೆದಾರರ ನಂಬಿಕೆಯನ್ನು ಕುಸಿಯುವಂತೆ ಮಾಡಿತು.
|
ಖನಿಜ ಹೊರತೆಗೆಯುವಿಕೆಯ ಮೇಲಿನ ಯಾವುದೇ ಆರ್ಥಿಕ ಹೊರೆಯು ದೇಶಾದ್ಯಂತ ಏಕರೂಪದ ಮತ್ತು ಸಮತೋಲಿತ ಚೌಕಟ್ಟನ್ನು ಅನುಸರಿಸಬೇಕು. ವಿಧಿಸುವ ಸುಂಕಗಳು ಎಂದಿಗೂ ಗಣಿಗಾರಿಕೆಯ ಆರ್ಥಿಕ ಮೌಲ್ಯ ಅಥವಾ ಲಾಭದಾಯಕತೆಯನ್ನು ಮೀರಿಸಬಾರದು. ರಾಜ್ಯವು ನೈಸರ್ಗಿಕ ಸಂಪನ್ಮೂಲಗಳ ಟ್ರಸ್ಟಿಯಾಗಿ, ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಸಂಪನ್ಮೂಲ ಆಧಾರಿತ ಅಭಿವೃದ್ಧಿಯು ಕೇವಲ ಕೆಲವೇ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗದೆ, ಭಾರತದಾದ್ಯಂತ ಸಾಮರಸ್ಯದಿಂದ ಕೂಡಿದ ಮತ್ತು ಸಮತೋಲಿತ ಖನಿಜ ವೃದ್ಧಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು.
|
ಮಸೂದೆಯ ಪ್ರಮುಖ ನಿಬಂಧನೆಗಳು
ಈ ಮಸೂದೆಯು 1957ರ ಎಂಎಂಡಿಆರ್ ಕಾಯ್ದೆಗೆ ನಿರ್ದಿಷ್ಟ ತಿದ್ದುಪಡಿಗಳನ್ನು ತರುತ್ತದೆ. ಇದರ ಪ್ರಮುಖ ನಿಬಂಧನೆಗಳು ಈ ಕೆಳಗಿನಂತಿವೆ:
- ಖನಿಜಯುಕ್ತ ಭೂಮಿಯ ಮೇಲೆ ಕೇಂದ್ರದ ನಿಯಂತ್ರಣ: ಕೇಂದ್ರ ಸರ್ಕಾರವು ಈಗ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಖನಿಜಯುಕ್ತ ಭೂಮಿಯನ್ನೂ ನಿಯಂತ್ರಿಸುತ್ತದೆ. ಇಂತಹ ಭೂಮಿಯನ್ನು ಎಂಎಂಡಿಆರ್ ಕಾಯ್ದೆಯಡಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಗುರುತಿಸಲಾಗುತ್ತದೆ. ಗಣಿಗಳ ನಿಯಂತ್ರಣ ಮತ್ತು ಖನಿಜಗಳ ಅಭಿವೃದ್ಧಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ಘೋಷಿಸುವ ಪ್ರಸ್ತುತ ಇರುವ ನಿಬಂಧನೆಗೆ ಇದು ಹೆಚ್ಚುವರಿಯಾಗಿದೆ.
- ಹೊಸ ಸೆಕ್ಷನ್ 9D — ರಾಜ್ಯದ ಸುಂಕಗಳ ಮೇಲೆ ಮಿತಿಗಳು: ರಾಜ್ಯ ಸರ್ಕಾರವು ಖನಿಜ ಹಕ್ಕುಗಳು ಅಥವಾ ಖನಿಜಯುಕ್ತ ಭೂಮಿಯ ಮೇಲೆ ಯಾವುದೇ ಹೆಸರಿನಲ್ಲಿ ತೆರಿಗೆ, ಸೆಸ್ ಅಥವಾ ಇತರೆ ಸುಂಕಗಳನ್ನು ವಿಧಿಸುವಂತಿಲ್ಲ. ಇದು ಖನಿಜದ ಪ್ರಮಾಣ, ಖನಿಜದ ಮೌಲ್ಯ, ರಾಯಲ್ಟಿ ಅಥವಾ ಯಾವುದೇ ಇತರ ಆಧಾರದ ಮೇಲಿನ ಸುಂಕಗಳನ್ನು ಒಳಗೊಳ್ಳುತ್ತದೆ. ಇಂತಹ ಸುಂಕಗಳನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದ ಷರತ್ತುಗಳು ಅಥವಾ ನಿರ್ಬಂಧಗಳ ಪ್ರಕಾರ ಮಾತ್ರ ವಿಧಿಸಬಹುದು.
- ಹಿಂದಿನ ಸುಂಕಗಳ ಪರಿಗಣನೆ: ಈ ತಿದ್ದುಪಡಿ ಜಾರಿಗೆ ಬರುವ ಮೊದಲು ರಾಜ್ಯ ಸರ್ಕಾರವು ಪಾವತಿಸದ ಅಥವಾ ಸಂಗ್ರಹಿಸದ ಯಾವುದೇ ಸುಂಕವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ತಿದ್ದುಪಡಿ ಜಾರಿಗೆ ಬರುವ ಮೊದಲು ಈಗಾಗಲೇ ಠೇವಣಿ ಮಾಡಿದ ಅಥವಾ ವಸೂಲಿ ಮಾಡಿದ ಮೊತ್ತವನ್ನು ಮರುಪಾವತಿಸಲು (ರಿಫಂಡ್ ಮಾಡಲು) ಅವಕಾಶವಿರುವುದಿಲ್ಲ.
- ಸೆಕ್ಷನ್ 13 ರ ಅಡಿಯಲ್ಲಿ ನಿಯಮ ರಚನೆ ಅಧಿಕಾರ: ರಾಜ್ಯ ಸರ್ಕಾರಗಳು ಇಂತಹ ಸುಂಕಗಳನ್ನು ವಿಧಿಸಲು ಷರತ್ತುಗಳು ಅಥವಾ ನಿರ್ಬಂಧಗಳನ್ನು ನಿಗದಿಪಡಿಸುವ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವಂತೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 13 ಅನ್ನು ತಿದ್ದುಪಡಿ ಮಾಡಲಾಗಿದೆ.
ಮಸೂದೆಯ ಪ್ರಭಾವ
ಈ ಮಸೂದೆಯು ಖನಿಜ ವಲಯದ ಆರ್ಥಿಕ ವ್ಯವಸ್ಥೆಯಲ್ಲಿ ನಿಶ್ಚಿತತೆ, ಸ್ಥಿರತೆ ಮತ್ತು ಮುನ್ಸೂಚನೆ ನೀಡುವ ವಾತಾವರಣವನ್ನು ಒದಗಿಸಲು ಶ್ರಮಿಸುತ್ತದೆ. ಇದು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
|
ಮೊದಲು
|
ನಂತರ
|
|
ಖನಿಜಯುಕ್ತ ಭೂಮಿಗಳು ಕೇಂದ್ರದ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿದ್ದವು.
|
ಖನಿಜಯುಕ್ತ ಭೂಮಿಗಳನ್ನು ಕೇಂದ್ರದ ನಿಯಂತ್ರಣದ ವ್ಯಾಪ್ತಿಗೆ ತರಲಾಗಿದೆ.
|
|
ಪ್ರತಿಯೊಂದು ರಾಜ್ಯದಲ್ಲೂ ಗಣಿಗಾರಿಕೆಗೆ ವಿಭಿನ್ನ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು.
|
ಹೊಸ ಸೆಕ್ಷನ್ 9D ಅಡಿಯಲ್ಲಿ ಕೇಂದ್ರ-ನಿರ್ದೇಶಿತ ಏಕರೂಪದ ತೆರಿಗೆ ಚೌಕಟ್ಟು ಅನ್ವಯಿಸುತ್ತದೆ.
|
|
ಗಣಿಗಾರಿಕೆ ಕಾರ್ಯಾಚರಣೆ ಪ್ರಾರಂಭವಾದ ನಂತರವೂ ಹೊಸ ಸುಂಕಗಳನ್ನು ವಿಧಿಸಬಹುದಾಗಿತ್ತು.
|
ಕೇಂದ್ರ ಸರ್ಕಾರವು ನಿಗದಿಪಡಿಸಿದ ಷರತ್ತುಗಳನ್ನು ಹೊರತುಪಡಿಸಿ ರಾಜ್ಯಗಳು ಹೊಸ ಸುಂಕಗಳನ್ನು ವಿಧಿಸುವಂತಿಲ್ಲ.
|
|
ಹಳೆಯ ದಿನಾಂಕಗಳಿಂದ ಪೂರ್ವಾಪರ ಅನ್ವಯವಾಗುವಂತೆ ಯಾವಾಗ ಬೇಕಾದರೂ ತೆರಿಗೆ ಬೇಡಿಕೆಗಳನ್ನು ಎತ್ತಬಹುದಾಗಿತ್ತು.
|
ಬಾಕಿ ಇರುವ ಎಲ್ಲಾ ಪೂರ್ವಾಪರ ಅನ್ವಯಿತ ತೆರಿಗೆ ಬಾಕಿಗಳನ್ನು ಈಗ ಅಮಾನ್ಯಗೊಳಿಸಲಾಗಿದೆ.
|
|
ಅತಿ ಹೆಚ್ಚಿನ ಹೊರೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಗಣಿಗಾರಿಕೆದಾರರ ಮೇಲೆ ಬೀಳುತ್ತಿತ್ತು.
|
ಪ್ರತಿಯೊಬ್ಬ ಗಣಿಗಾರಿಕೆದಾರರಿಗೂ ಈಗ ನ್ಯಾಯಯುತ ಮತ್ತು ಸಮಾನವಾದ ವ್ಯವಸ್ಥೆಯ ಪ್ರಯೋಜನ ಸಿಗುತ್ತದೆ.
|
ಮುನ್ನಡೆಯ ಹಾದಿ
ಈ ಮಸೂದೆಯು ಭಾರತದ ಖನಿಜ ಆಡಳಿತವನ್ನು ಆಧುನೀಕರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಸ್ಥಿರ ಮತ್ತು ಏಕರೂಪದ ಆರ್ಥಿಕ ವ್ಯವಸ್ಥೆಯನ್ನು ಖಚಿತಪಡಿಸುವ ಮೂಲಕ, ಇದು ಖನಿಜ ಅನ್ವೇಷಣೆ, ನಿರ್ಣಾಯಕ ಖನಿಜ ಭದ್ರತೆ ಮತ್ತು ಸುಸ್ಥಿರ ಸಂಪನ್ಮೂಲ ಅಭಿವೃದ್ಧಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಗಳು 'ವಿಕಸಿತ ಭಾರತ'ದತ್ತ ಭಾರತದ ಪ್ರಯಾಣವನ್ನು ಮುನ್ನಡೆಸಲು ಸಹಾಯ ಮಾಡುತ್ತವೆ.
References:
Parliament of India:
https://sansad.in/ls/legislation/bills
Office of Union Minister for Coal and Mines:
https://x.com/KishanReddyOfc/status/2086816534840905747/photo/1
Click here to see PDF
*****
(तथ्य सामग्री आईडी: 150916)
आगंतुक पटल : 11
Provide suggestions / comments