Economy
ಉದ್ಯಮ-ಸಜ್ಜಿತ ಭಾರತದ ನಿರ್ಮಾಣ
प्रविष्टि तिथि:
13 AUG 2026 16:55 PM
ಉದ್ಯಮ ಸುಲಭಗೊಳಿಸುವಿಕೆಗೆ ಉತ್ತೇಜನ, ಉದ್ಯಮಗಳ ಸಬಲೀಕರಣ
ಉದ್ಯಮ-ನೇತೃತ್ವದ ಬೆಳವಣಿಗೆಗೆ ಬೆಂಬಲ
ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸ್ವಾವಲಂಬಿ, ಚೇತರಿಕೆಯ ಸಾಮರ್ಥ್ಯವಿರುವ ಮತ್ತು ಬೆಳೆಯುತ್ತಿರುವ ಅರ್ಥವ್ಯವಸ್ಥೆಯ ಬಲವಾದ ಅಡಿಪಾಯವನ್ನು ದೇಶವು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ನಿಯಮಾವಳಿಗಳ ಅನುಸರಣೆಯ ಹೊರೆಗಳನ್ನು ಕಡಿಮೆ ಮಾಡುವುದು, ಪಾರದರ್ಶಕತೆಯನ್ನು ಹೆಚ್ಚಿಸುವುದು, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಮತ್ತು ಎಲ್ಲಾ ಗಾತ್ರದ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರ್ಕಾರವು ಹಲವು ಸುಧಾರಣೆಗಳನ್ನು ತಂದಿದೆ.
ಈ ಪ್ರಯತ್ನಗಳು ಡಿಜಿಟಲ್ ಏಕ-ಗವಾಕ್ಷಿ (ಏಕ ಗವಾಕ್ಷಿ/ಸಿಂಗಲ್-ವಿಂಡೋ) ವ್ಯವಸ್ಥೆಗಳು, ಸರಳೀಕೃತ ನೋಂದಣಿ ಪ್ರಕ್ರಿಯೆಗಳು, ವ್ಯಾಪಕ ಮಾರುಕಟ್ಟೆ ಪ್ರವೇಶ, ಹಣಕಾಸಿನ ಸುಲಭ ಲಭ್ಯತೆ ಮತ್ತು ನಂಬಿಕೆ ಆಧಾರಿತ ನಿಯಂತ್ರಣಗಳ ಮೂಲಕ 'ಉದ್ಯಮ ಮಾಡುವುದನ್ನು ಸುಲಭಗೊಳಿಸಲು' ಉತ್ತೇಜನ ನೀಡುತ್ತಿವೆ.
ಭಾರತದ ಉದ್ಯಮ ವಾತಾವರಣದ ಸುಧಾರಣೆ
ಡಿಜಿಟಲ್ ಏಕ-ಗವಾಕ್ಷಿ ಮಂಜೂರಾತಿಗಳಿಂದ ಹಿಡಿದು ದೊಡ್ಡ ಪ್ರಮಾಣದ ನಿಯಂತ್ರಣಗಳ ಸರಳೀಕರಣದವರೆಗೆ, ಈ ಎಲ್ಲಾ ಸುಧಾರಣೆಗಳ ಮುಖ್ಯ ಗಮನವು ಮುಂದೆ ಕಾಣಬಹುದಾದ ಮತ್ತು ಪ್ರೋತ್ಸಾಹಕ-ಆಧಾರಿತ ಉದ್ಯಮ ವಾತಾವರಣವನ್ನು ಸೃಷ್ಟಿಸುವುದಾಗಿದೆ.
- ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (NSWS): ಇದು ಡಿಜಿಟಲ್ ಏಕ-ಗವಾಕ್ಷಿ ವೇದಿಕೆಯಾಗಿದ್ದು, ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ಅನುಮೋದನೆಗಳನ್ನು ಗುರುತಿಸಲು ಮತ್ತು ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡುತ್ತದೆ. ಈ ವ್ಯವಸ್ಥೆಯು 32 ಕೇಂದ್ರ ಸಚಿವಾಲಯಗಳು ಮತ್ತು 34 ರಾಜ್ಯಗಳಲ್ಲಿ ಅನುಮೋದನೆಗಳನ್ನು ಒಂದೇ ಕಡೆ ಸಂಯೋಜಿಸುತ್ತದೆ. ಇದು 686 ಕ್ಕೂ ಹೆಚ್ಚು ಕೇಂದ್ರ ಮತ್ತು 7,498 ರಾಜ್ಯ ಅನುಮೋದನೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. 2021 ರಲ್ಲಿ ಪ್ರಾರಂಭವಾದಾಗಿನಿಂದ, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ 8.29 ಲಕ್ಷಕ್ಕೂ ಹೆಚ್ಚು ಅನುಮೋದನೆಗಳನ್ನು ನೀಡಿದೆ (ನವೆಂಬರ್, 2025 ರವರೆಗೆ).
- ಸ್ಟಾರ್ಟ್‌ಅಪ್ ಇಂಡಿಯಾ (2016): ಈ ಉಪಕ್ರಮವು ಉದ್ಯಮಿಗಳನ್ನು ಬೆಂಬಲಿಸಲು ಮತ್ತು ಬಲವಾದ ಸ್ಟಾರ್ಟ್‌ಅಪ್ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಭಾರತವನ್ನು ಕೆಲಸ ಹುಡುಕುವವರ ರಾಷ್ಟ್ರವನ್ನಾಗಿ ಮಾಡುವ ಬದಲು ಉದ್ಯೋಗ ಸೃಷ್ಟಿಕರ್ತರ ರಾಷ್ಟ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತದೆ. DPIIT-ಗುರುತಿಸಲ್ಪಟ್ಟ ಸ್ಟಾರ್ಟ್‌ಅಪ್‌ಗಳು 2016 ರಲ್ಲಿ 502 ರಷ್ಟಿದ್ದು, 12 ಆಗಸ್ಟ್ 2026 ರ ವೇಳೆಗೆ 2.47 ಲಕ್ಷಕ್ಕೂ ಹೆಚ್ಚು ತಲುಪಿವೆ.

- SPICe+ ಫಾರ್ಮ್ (2020): ಈ ವೆಬ್-ಆಧಾರಿತ ಫಾರ್ಮ್ 3 ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ 11 ಸೇವೆಗಳನ್ನು ಸಂಯೋಜಿಸುತ್ತದೆ. ಈ ಫಾರ್ಮ್ ಹೆಸರು ಕಾಯ್ದಿರಿಸುವಿಕೆ, ಕಂಪನಿ ನೋಂದಣಿ, DIN ಹಂಚಿಕೆ, ಪಾನ್ ವಿತರಣೆ, TAN ವಿತರಣೆ, ಇಪಿಎಫ್ಒ ನೋಂದಣಿ, ಇಎಸ್ಐಸಿ ನೋಂದಣಿ, ವೃತ್ತಿ ತೆರಿಗೆ ನೋಂದಣಿ, ಬ್ಯಾಂಕ್ ಖಾತೆ ತೆರೆಯುವಿಕೆ, GSTIN ಹಂಚಿಕೆ ಮತ್ತು ದೆಹಲಿಯಲ್ಲಿ ನೋಂದಾಯಿಸಲ್ಪಡುವ ಎಲ್ಲಾ ಹೊಸ ಕಂಪನಿಗಳಿಗೆ ಅಂಗಡಿಗಳು ಮತ್ತು ಸಂಸ್ಥೆಗಳ ಮೊದಲ ಬಾರಿಯ ನೋಂದಣಿ ಸೇರಿದಂತೆ 10 ಅತ್ಯಗತ್ಯ ಪ್ರಕ್ರಿಯೆಗಳನ್ನು ಸಂಯೋಜಿಸುತ್ತದೆ. ಇದರಿಂದಾಗಿ, ಇದು ಕಾರ್ಯವಿಧಾನದ ಹೊರೆಯನ್ನು ಕಡಿಮೆ ಮಾಡುತ್ತದೆ, ಸಮಯವನ್ನು ಉಳಿಸುತ್ತದೆ ಮತ್ತು ಉದ್ಯಮಗಳಿಗೆ ಅನುಸರಣಾ ವೆಚ್ಚವನ್ನು ತಗ್ಗಿಸುತ್ತದೆ.
- MCA21 V3: MCA21 ಯೋಜನೆಯು ಭವಿಷ್ಯದ ಆಲೋಚನೆಯ, ಕೃತಕ ಬುದ್ಧಿಮತ್ತೆ-ಚಾಲಿತ ಉಪಕ್ರಮವಾಗಿದ್ದು, ಭಾರತದ ಕಾರ್ಪೊರೇಟ್ ವಲಯದಲ್ಲಿ ಪಾರದರ್ಶಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಕಂಪನಿಗಳು ಮತ್ತು ನಿಯಮಿತ ಹೊಣೆಗಾರಿಕೆಯ ಸಹಭಾಗಿತ್ವಗಳ (LLPs) ಸಂಪೂರ್ಣ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳಿಗೆ ಈ ವೇದಿಕೆಯನ್ನು ಬಳಸಲಾಗುತ್ತದೆ. 2021 ಮತ್ತು 2025 ರ ನಡುವೆ, ಇದು 3.84 ಕೋಟಿ ಸಲ್ಲಿಕೆಗಳನ್ನು ಸಂಸ್ಕರಿಸಿದೆ, ಇದರಲ್ಲಿ 3.33 ಕೋಟಿ 'ಸ್ಟ್ರೈಟ್ ಥ್ರೂ ಪ್ರೊಸೆಸ್' ಮೂಲಕ ಅನುಮೋದನೆಗೊಂಡಿವೆ.
- ಉದ್ಯಮ್ ನೋಂದಣಿ (2020): ಇದು ಎಂಎಸ್ಎಂಇಗಳಿಗೆ ಉಚಿತ, ಕಾಗದರಹಿತ ಮತ್ತು ಸ್ವಯಂ-ಘೋಷಣೆ ಆಧಾರಿತ ವ್ಯವಸ್ಥೆಯನ್ನು ಒದಗಿಸುತ್ತದೆ. ಉದ್ಯಮ್ ಪೋರ್ಟಲ್‌ನಲ್ಲಿ ಎಂಎಸ್ಎಂಇ ನೋಂದಣಿಗಳು ಅಕ್ಟೋಬರ್ 2020 ರಲ್ಲಿ 0.10 ಲಕ್ಷದಿಂದ 13 ಆಗಸ್ಟ್ 2026 ರ ವೇಳೆಗೆ 9.27 ಲಕ್ಷಕ್ಕೂ ಅಧಿಕವಾಗಿ ಹೆಚ್ಚಾಗಿವೆ.
- ಬಿಸಿನೆಸ್ ರಿಫಾರ್ಮ್ ಆಕ್ಷನ್ ಪ್ಲಾನ್ (BRAP): 2015 ರಲ್ಲಿ ಪ್ರಾರಂಭವಾದ BRAP, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಮಗಳನ್ನು ಸರಳೀಕರಿಸುವ ಮೂಲಕ ಮತ್ತು ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಉದ್ಯಮ ಸುಲಭಗೊಳಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಏಕ-ಗವಾಕ್ಷಿ ಮಂಜೂರಾತಿಗಳು, ಭೂಮಿ, ಕಾರ್ಮಿಕ, ತಪಾಸಣೆ, ತೆರಿಗೆ, ಪರಿಸರ ಅನುಮೋದನೆಗಳು ಮತ್ತು ಇತರ ಸುಧಾರಣೆಗಳನ್ನು ಒಳಗೊಂಡಿದೆ.
ಉದ್ಯಮದ ಬೆಳವಣಿಗೆಗೆ ಹಣಕಾಸಿನ ಸೌಲಭ್ಯ
ಸಾಲದ ಗ್ಯಾರಂಟಿಗಳು, ಡಿಜಿಟಲ್ ಸಾಲ ಸೌಲಭ್ಯ ಮತ್ತು ಬಾಕಿ ಸ್ವೀಕೃತಿಗಳ ಹಣಕಾಸು ಒದಗಿಸುವಿಕೆಯು ವಿಶೇಷವಾಗಿ ಎಂಎಸ್ಎಂಇಗಳಿಗೆ ಸಾಂಸ್ಥಿಕ ಹಣಕಾಸಿನ ಪ್ರವೇಶವನ್ನು ವಿಸ್ತರಿಸುತ್ತಿವೆ.
- ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY): PMMY (2015) ಹಣಕಾಸಿನ ಲಭ್ಯತೆಯಲ್ಲಿನ ಅಂತರವನ್ನು ಕಡಿಮೆ ಮಾಡುತ್ತದೆ, ಕಾರ್ಪೊರೇಟ್-ಯೇತರ ಮತ್ತು ಕೃಷಿಯೇತರ ಆದಾಯ ಸೃಷ್ಟಿಸುವ ಚಟುವಟಿಕೆಗಳನ್ನು ಬೆಂಬಲಿಸಲು ₹20 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲಗಳನ್ನು ಒದಗಿಸುತ್ತದೆ. 27 ಮಾರ್ಚ್ 2026 ರ ವೇಳೆಗೆ, ಈ ಯೋಜನೆಯು ತನ್ನ ಆರಂಭದಿಂದಲೂ 57.79 ಕೋಟಿ ಸಾಲಗಳ ಮೂಲಕ ₹40.07 ಲಕ್ಷ ಕೋಟಿ ಮೌಲ್ಯದ ಸಾಲಗಳನ್ನು ಮಂಜೂರು ಮಾಡಿದೆ.
- ಸಾಲ ಭರವಸೆ ಯೋಜನೆ: ಯಾವುದೇ ಭದ್ರತೆ ಅಥವಾ ಮೂರನೇ ವ್ಯಕ್ತಿಯ ಗ್ಯಾರಂಟಿ ಇಲ್ಲದೆ ಎಂಎಸ್ಇ ಗಳಿಗೆ ಸಾಲ ಪಡೆಯಲು ಅನುವು ಮಾಡಿಕೊಡುತ್ತದೆ, ಇದು ₹10 ಕೋಟಿವರೆಗಿನ ಸಾಲ ಸೌಲಭ್ಯಗಳಿಗೆ ಬೆಂಬಲ ನೀಡುತ್ತದೆ. ಮಾರ್ಚ್ 2026 ರ ವೇಳೆಗೆ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸಾಲ ಭರವಸೆ ನಿಧಿ ಟ್ರಸ್ಟ್ (CGTMSE) ಒಟ್ಟು ₹13.67 ಲಕ್ಷ ಕೋಟಿ ಮೌಲ್ಯದ ರಕ್ಷಣೆಯನ್ನು ಅನುಮೋದಿಸಿದ್ದು, 1.41 ಕೋಟಿ ಗ್ಯಾರಂಟಿಗಳಿಗೆ ಪ್ರಯೋಜನ ನೀಡಿದೆ.
- ಕ್ರೆಡಿಟ್ ಅಸೆಸ್‌ಮೆಂಟ್ ಮಾಡೆಲ್ (CAM): 2025 ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಪ್ರಾರಂಭಿಸಿದ CAM, ಸ್ವಯಂಚಾಲಿತ ಎಂಎಸ್ಎಂಇ ಸಾಲ ಮೌಲ್ಯಮಾಪನಕ್ಕಾಗಿ ಡಿಜಿಟಲ್ ರೂಪದಲ್ಲಿ ಪಡೆದ ಮತ್ತು ಪರಿಶೀಲಿಸಬಹುದಾದ ಡೇಟಾವನ್ನು ಬಳಸುತ್ತದೆ. ಏಪ್ರಿಲ್ ಮತ್ತು ಡಿಸೆಂಬರ್ 2025 ರ ನಡುವೆ, ಈ ಮಾದರಿಯ ಅಡಿಯಲ್ಲಿ ₹52,300 ಕೋಟಿಗೂ ಹೆಚ್ಚು ಮೌಲ್ಯದ 3.96 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ.
- TReDS (ಟ್ರೇಡ್ ರಿಸೀವೇಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್): TReDS ಎಂಬುದು ಡಿಜಿಟಲ್ ವೇದಿಕೆಯಾಗಿದ್ದು, ಇದು ವಿವಿಧ ಹಣಕಾಸುದಾರರ ಮೂಲಕ ಎಂಎಸ್ಎಂಇಗಳ ವ್ಯಾಪಾರ ಬಾಕಿಗಳ ಹಣಕಾಸು ಮತ್ತು ರಿಯಾಯಿತಿಯನ್ನು ಸುಲಭಗೊಳಿಸುತ್ತದೆ. ಕೇಂದ್ರ ಬಜೆಟ್ 2026–27 TReDS ಅನ್ನು ಬಲಪಡಿಸುವ ಕ್ರಮಗಳನ್ನು ಪ್ರಸ್ತಾಪಿಸಿದೆ, ಇದರಲ್ಲಿ ಇನ್‌ವಾಯ್ಸ್ ರಿಯಾಯಿತಿಗಾಗಿ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮದ ವಹಿವಾಟುಗಳಿಗೆ ಇದರ ಬಳಕೆ ಸೇರಿದೆ. ಇನ್‌ವಾಯ್ಸ್ ಡಿಸ್ಕೌಂಟಿಂಗ್ 2021-22 ರಲ್ಲಿ ₹40,000 ಕೋಟಿಯಿಂದ 2025-26 ರಲ್ಲಿ ₹3.47 ಲಕ್ಷ ಕೋಟಿಗೆ ಹೆಚ್ಚಾಗುವುದರೊಂದಿಗೆ ಈ ವೇದಿಕೆಯು ಬಲವಾಗಿ ಬೆಳೆದಿದೆ.
ಅನುಸರಣೆಯಿಂದ ನಂಬಿಕೆ-ಆಧಾರಿತ ಆಡಳಿತದತ್ತ
ಭಾರತದ ನಿಯಂತ್ರಣ ಸುಧಾರಣೆಗಳು ಕೇವಲ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವುದನ್ನು ಮೀರಿ, ಅನಗತ್ಯ ಅಗತ್ಯತೆಗಳನ್ನು ಕಡಿಮೆ ಮಾಡುವತ್ತ, ಸಣ್ಣ ಅಪರಾಧಗಳನ್ನು ಅಪರಾಧಮುಕ್ತಗೊಳಿಸುವತ್ತ ಮತ್ತು ಉದ್ಯಮಗಳಿಗೆ ಹೆಚ್ಚಿನ ನಿಶ್ಚಿತತೆಯನ್ನು ಸೃಷ್ಟಿಸುವತ್ತ ಸಾಗುತ್ತಿವೆ.
- ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2026: 23 ಸಚಿವಾಲಯಗಳನ್ನು ಒಳಗೊಂಡಂತೆ 79 ಕೇಂದ್ರ ಕಾಯ್ದೆಗಳಲ್ಲಿನ 717 ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸುತ್ತದೆ ಮತ್ತು 784 ನಿಬಂಧನೆಗಳನ್ನು ತಿದ್ದುಪಡಿ ಮಾಡುತ್ತದೆ. ಸಣ್ಣ ಮತ್ತು ತಾಂತ್ರಿಕ ಅಪರಾಧಗಳಿಗೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಕಡಿಮೆ ಮಾಡುವ ಮೂಲಕ ಇದು ನಂಬಿಕೆ ಆಧಾರಿತ ಆಡಳಿತವನ್ನು ಬಲಪಡಿಸುತ್ತದೆ.
- ನಿಯಂತ್ರಣ ಅನುಸರಣೆ ಹೊರೆ: ಈ ಉಪಕ್ರಮವು ಅನುಸರಣಾ ವೆಚ್ಚವನ್ನು ತಗ್ಗಿಸಲು ಮತ್ತು ಉದ್ಯಮ ಸುಲಭಗೊಳಿಸುವಿಕೆಯನ್ನು ಬಲಪಡಿಸಲು ನಿಯಮಗಳನ್ನು ಸರಳೀಕರಿಸುತ್ತದೆ ಮತ್ತು ಅನಗತ್ಯ ಅಗತ್ಯತೆಗಳನ್ನು ಕಡಿಮೆ ಮಾಡುತ್ತದೆ. ನವೆಂಬರ್ 2025 ರ ವೇಳೆಗೆ 47,000ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ, ಇದರಲ್ಲಿ 16,108 ಸರಳೀಕೃತ, 22,287 ಡಿಜಿಟಲೀಕರಿಸಿದ, 4,458 ಅಪರಾಧಮುಕ್ತಗೊಳಿಸಿದ ಮತ್ತು 4,270 ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ.
- ಜಿ.ಎಸ್.ಟಿ 2.0: 2017ರಲ್ಲಿ ಪರಿಚಯಿಸಲಾದ ಜಿ.ಎಸ್.ಟಿ, ಬಹು ಪರೋಕ್ಷ ತೆರಿಗೆಗಳ ಬದಲಿಗೆ ಏಕೀಕೃತ ರಾಷ್ಟ್ರೀಯ ತೆರಿಗೆ ಚೌಕಟ್ಟನ್ನು ತಂದಿತು. ಸೆಪ್ಟೆಂಬರ್ 2025ರಲ್ಲಿ ಘೋಷಿಸಲಾದ ಸುಧಾರಣೆಗಳು ದರಗಳನ್ನು ಮತ್ತಷ್ಟು ಸರಳೀಕರಿಸಿದವು ಮತ್ತು ಸರಳೀಕೃತ ಎರಡು-ದರ ರಚನೆಯತ್ತ ಸಾಗಿದವು, ಇದರಿಂದ ಅನುಸರಣೆ ಮತ್ತು ವಹಿವಾಟು ವೆಚ್ಚಗಳು ಕಡಿಮೆಯಾದವು. ನೋಂದಾಯಿತ ತೆರಿಗೆದಾರರು 2017ರಲ್ಲಿ ಸುಮಾರು 60 ಲಕ್ಷದಿಂದ 31 ಜುಲೈ 2026ರ ವೇಳೆಗೆ 1.68 ಕೋಟಿಗೂ ಹೆಚ್ಚು ತಲುಪಿದ್ದು, ಆರ್ಥಿಕತೆಯ ಆಳವಾದ ಸಾಂಸ್ಥಿಕೀಕರಣವನ್ನು ಪ್ರತಿಬಿಂಬಿಸುತ್ತದೆ.
- ಫೇಸ್‌ಲೆಸ್ ಅಸೆಸ್‌ಮೆಂಟ್ ಯೋಜನೆ: ಈ ಯೋಜನೆಯು ತೆರಿಗೆದಾರ ಮತ್ತು ತೆರಿಗೆ ಅಧಿಕಾರಿಗಳ ನಡುವಿನ ಪ್ರತ್ಯಕ್ಷ ಭೇಟಿಯನ್ನು ಇಲ್ಲವಾಗಿಸುತ್ತದೆ. ಸ್ವಯಂಚಾಲಿತ ಪ್ರಕರಣಗಳ ಆಯ್ಕೆ, ಯಾದೃಚ್ಛಿಕ ಹಂಚಿಕೆ ಮತ್ತು ತೆರಿಗೆದಾರರ ಸಂಪರ್ಕಕ್ಕಾಗಿ ಕೇಂದ್ರ ಘಟಕ ಇರುವ ಕಾರಣ ಹಲವು ಬಾರಿ ಅಲೆದಾಡುವುದು ಮತ್ತು ಕಾಯುವ ಸಮಯ ಕಡಿಮೆಯಾಗುತ್ತದೆ. ಈ ವಿಧಾನವು ಪ್ರಮಾಣಿತ, ವಸ್ತುನಿಷ್ಠ ಮತ್ತು ಸುಸಂಗತ ತೆರಿಗೆ ಮೌಲ್ಯಮಾಪನಗಳನ್ನು ಪ್ರೋತ್ಸಾಹಿಸುತ್ತದೆ, ತೆರಿಗೆ ಅನುಸರಣೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸುತ್ತದೆ.
ಭಾರತೀಯ ಉದ್ಯಮಗಳಿಗೆ ಮಾರುಕಟ್ಟೆಗಳ ವಿಸ್ತರಣೆ
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಉದ್ಯಮಗಳಿಗೆ ಹೊಸ ಮಾರುಕಟ್ಟೆಗಳನ್ನು ಮುಕ್ತಗೊಳಿಸುತ್ತಿದೆ. ಲಾಜಿಸ್ಟಿಕ್ಸ್ ಮತ್ತು ಬಹು-ಮಾದರಿ ಸಂಪರ್ಕದಲ್ಲಿನ ಉದ್ಯಮಗಳು ಸರಕುಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸಾಗಿಸಲು ಸಹಾಯ ಮಾಡುತ್ತಿವೆ.
- ಸರ್ಕಾರಿ ಇ-ಮಾರುಕಟ್ಟೆ (GeM) (2016): GeM ಸಾರ್ವಜನಿಕ ಸಂಗ್ರಹಣೆಯನ್ನು ಡಿಜಿಟಲೀಕರಣಗೊಳಿಸುತ್ತದೆ ಮತ್ತು ವಿವಿಧ ಉದ್ಯಮಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತದೆ. 6 ಆಗಸ್ಟ್ 2026 ರ ವೇಳೆಗೆ, GeM 1.37 ಲಕ್ಷಕ್ಕೂ ಹೆಚ್ಚು ಸರ್ಕಾರಿ ಖರೀದಿ ಸಂಸ್ಥೆಗಳನ್ನು ಸುಮಾರು 25 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರೊಂದಿಗೆ ಸಂಪರ್ಕಿಸುತ್ತದೆ. ಇದು ಒಟ್ಟಾರೆಯಾಗಿ ₹20 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಸಂಗ್ರಹಣೆಯನ್ನು ಸುಲಭಗೊಳಿಸಿದೆ. 2025–26 ರಲ್ಲಿ, 75 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಪೂರೈಸಲಾಗಿದೆ.

- ಪಿಎಂ ಗತಿಶಕ್ತಿ (2021): ಇದು ಏಕೀಕೃತ ಡಿಜಿಟಲ್ ವೇದಿಕೆಯ ಮೂಲಕ ಸಮಗ್ರ ಮೂಲಸೌಕರ್ಯ ಯೋಜನೆ ಮತ್ತು ಬಹು-ಮಾದರಿ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ಈ ವೇದಿಕೆಯು 3,291 ಡೇಟಾ ಪದರಗಳೊಂದಿಗೆ 58 ಸಚಿವಾಲಯಗಳು/ಇಲಾಖೆಗಳು ಮತ್ತು 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಂದೇ ಸೂರಿನಡಿ ತರುತ್ತದೆ. ಫೆಬ್ರವರಿ 2026 ರ ವೇಳೆಗೆ, ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ₹16.10 ಲಕ್ಷ ಕೋಟಿ ಮೌಲ್ಯದ 352 ಯೋಜನೆಗಳನ್ನು ಮೌಲ್ಯಮಾಪನ ಮಾಡಿದ್ದು, 201 ಯೋಜನೆಗಳು ಮಂಜೂರಾಗಿವೆ ಮತ್ತು ಅವುಗಳಲ್ಲಿ 167 ಯೋಜನೆಗಳು ಅನುಷ್ಠಾನದಲ್ಲಿವೆ. ಈ ಉಪಕ್ರಮವು ಉದ್ಯಮಗಳಿಗೆ ಸೂಕ್ತವಾದ ಸ್ಥಳಗಳನ್ನು ಗುರುತಿಸಲು, ಹೂಡಿಕೆಗಳನ್ನು ಯೋಜಿಸಲು ಮತ್ತು ಸುಲಭವಾಗಿ ಬಹು-ಮಾದರಿ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಪಡೆಯಲು ಸಹಾಯ ಮಾಡುತ್ತದೆ, ಉದ್ಯಮ ಸುಲಭಗೊಳಿಸುವಿಕೆಯನ್ನು ಬಲಪಡಿಸುತ್ತದೆ.
- ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ (2022): ಇದು ಮುಕ್ತ ಡಿಜಿಟಲ್ ವಾಣಿಜ್ಯ ಜಾಲಗಳನ್ನು ಉತ್ತೇಜಿಸುತ್ತದೆ ಮತ್ತು ಪ್ರತ್ಯೇಕ ವೇದಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು 616 ಕ್ಕೂ ಹೆಚ್ಚು ನಗರಗಳಲ್ಲಿ 7.64 ಲಕ್ಷಕ್ಕೂ ಹೆಚ್ಚು ಮಾರಾಟಗಾರರನ್ನು ಹೊಂದಿದ್ದು, ವ್ಯಾಪಕ ಮತ್ತು ಹೆಚ್ಚು ಒಳಗೊಳ್ಳುವ ಮಾರುಕಟ್ಟೆ ಪ್ರವೇಶವನ್ನು ಬೆಂಬಲಿಸುತ್ತದೆ.
ಭಾರತದ ಜಾಗತಿಕ ಉದ್ಯಮದ ಹಾದಿಯನ್ನು ಬಲಪಡಿಸುವುದು
ಉತ್ಪನ್ನಗಳ ರಫ್ತು ಉತ್ತೇಜನವನ್ನು ಉತ್ತಮ ಲಾಜಿಸ್ಟಿಕ್ಸ್, ಡಿಜಿಟಲ್ ವ್ಯಾಪಾರ ಸೌಲಭ್ಯ ಮತ್ತು ಬಲವಾದ ದೇಶೀಯ ಉತ್ಪಾದನಾ ಸಾಮರ್ಥ್ಯಗಳೊಂದಿಗೆ ಸಂಯೋಜಿಸುವ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ.
- ರಫ್ತು ಪ್ರೋತ್ಸಾಹನಾ ಮಿಷನ್ (2025): ಈ ಮಿಷನ್ ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ರೂಪಿಸಲಾಗಿದೆ, ಇದರಲ್ಲಿ ಎಂಎಸ್ಎಂಇಗಳು, ಮೊದಲ ಬಾರಿಗೆ ರಫ್ತು ಮಾಡುವವರು, ಶ್ರಮದಾಯಕ ವಲಯಗಳು ಮತ್ತು ಆಂತರಿಕ ಹಾಗೂ ಕಡಿಮೆ ರಫ್ತು ಹೊಂದಿರುವ ಪ್ರದೇಶಗಳ ರಫ್ತುದಾರರ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಹಣಕಾಸು ಮತ್ತು ಹಣಕಾಸೇತರ ಬೆಂಬಲವನ್ನು ಒಂದೇ ಚೌಕಟ್ಟಿನ ಅಡಿಯಲ್ಲಿ ತರುವ ಮೂಲಕ, ಈ ಮಿಷನ್ ರಫ್ತು ಮಾಡಲು ಇರುವ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುತ್ತದೆ.
- ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್: ಎಂಎಸ್ಎಂಇ ಗಳು ಸೇರಿದಂತೆ ರಫ್ತುದಾರರಿಗೆ ವ್ಯಾಪಾರ ಮಾಹಿತಿ, ಮಾರುಕಟ್ಟೆ ಅವಕಾಶಗಳು ಮತ್ತು ಜಾಗತಿಕ ಖರೀದಿದಾರರ ಸಂಪರ್ಕವನ್ನು ಒದಗಿಸುತ್ತದೆ. ಇದು 20 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ದಾಟಿದ್ದು, ಆಗಸ್ಟ್ 2026 ರ ವೇಳೆಗೆ 40 ಲಕ್ಷಕ್ಕೂ ಹೆಚ್ಚು 'ಒರಿಜಿನ್ ಪ್ರಮಾಣಪತ್ರಗಳನ್ನು' ವಿತರಿಸಲಾಗಿದೆ.
- ICEGATE (ಇಂಡಿಯನ್ ಕಸ್ಟಮ್ಸ್ ಎಲೆಕ್ಟ್ರಾನಿಕ್ ಗೇಟ್‌ವೇ): ICEGATE ಎಲೆಕ್ಟ್ರಾನಿಕ್ ಸಲ್ಲಿಕೆ, ಸುಂಕ ಪಾವತಿ, ದಾಖಲೆ ತಿದ್ದುಪಡಿಗಳು, ಪ್ರಶ್ನೆಗಳ ಪರಿಹಾರ ಮತ್ತು ಮರುಪಾವತಿ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ, ಗಡಿಪಾರಿನ ವ್ಯಾಪಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಬಿಲ್ಸ್ ಆಫ್ ಎಂಟ್ರಿ ಸಲ್ಲಿಕೆಗಳು ಏಪ್ರಿಲ್ 2020 ರಲ್ಲಿ 1.43 ಲಕ್ಷದಿಂದ ಜೂನ್ 2026 ರಲ್ಲಿ 6.14 ಲಕ್ಷಕ್ಕೂ ಹೆಚ್ಚಾಗಿದ್ದು, ಡಿಜಿಟಲ್ ಕಸ್ಟಮ್ಸ್ ಪ್ರಕ್ರಿಯೆ ಮತ್ತು ವ್ಯಾಪಾರ ಚಟುವಟಿಕೆಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಬೆಂಬಲಿತ ಉದ್ಯಮ ವ್ಯವಸ್ಥೆಯ ಸೃಷ್ಟಿ
ಭಾರತದ ಉದ್ಯಮ ಸುಲಭಗೊಳಿಸುವಿಕೆಯ ಪ್ರಯಾಣವು ಪ್ರತ್ಯೇಕ ಪ್ರಕ್ರಿಯೆಗಳನ್ನು ಸರಳೀಕರಿಸುವುದರಿಂದ ಹಿಡಿದು ಹೆಚ್ಚು ಸ್ಪಂದಿಸುವ ಮತ್ತು ಉದ್ಯಮ-ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸುವತ್ತ ವಿಕಸನಗೊಳ್ಳುತ್ತಿದೆ. ಬಲವಾದ ಡಿಜಿಟಲ್ ಮೂಲಸೌಕರ್ಯ, ಮಾರುಕಟ್ಟೆಗಳು ಮತ್ತು ಹಣಕಾಸಿನ ವ್ಯಾಪಕ ಲಭ್ಯತೆ ಮತ್ತು ಹೆಚ್ಚಿನ ನಿಯಂತ್ರಣ ನಿಶ್ಚಿತತೆಯೊಂದಿಗೆ, ಉದ್ಯಮಗಳು ಅವಕಾಶಗಳನ್ನು ಬಳಸಿಕೊಳ್ಳಲು, ಸುಸ್ಥಿರವಾಗಿ ಬೆಳೆಯಲು ಮತ್ತು ಜಾಗತಿಕವಾಗಿ ಸ್ಪರ್ಧಿಸಲು ಉತ್ತಮ ಸ್ಥಾನದಲ್ಲಿವೆ.
References
Ministry of Commerce & Industry
https://www.pib.gov.in/PressReleaseIframePage.aspx?PRID=2090097®=3&lang=2
https://www.pib.gov.in/PressReleasePage.aspx?PRID=2154136®=3&lang=2
https://www.pib.gov.in/PressReleaseDetail.aspx?PRID=2204665®=1&lang=1
https://www.pib.gov.in/PressReleasePage.aspx?PRID=2253019®=3&lang=2
https://www.startupindia.gov.in/content/sih/en/about-startup-india-initiative.html
https://www.pib.gov.in/PressReleasePage.aspx?PRID=2201280®=3&lang=2
https://www.pib.gov.in/PressReleasePage.aspx?PRID=2168993®=3&lang=2
https://www.pib.gov.in/PressReleasePage.aspx?PRID=2244401®=3&lang=1
https://www.pib.gov.in/PressReleasePage.aspx?PRID=2246226®=3&lang=2
Ministry Of Finance
https://www.pib.gov.in/PressReleasePage.aspx?PRID=2216047®=3&lang=2
https://www.icegate.gov.in/services/statistics-reports
https://www.pib.gov.in/PressReleasePage.aspx?PRID=1643250®=3&lang=2
Ministry of Corporate Affairs
https://www.pib.gov.in/PressReleasePage.aspx?PRID=2099226®=3&lang=2
https://www.pib.gov.in/PressReleasePage.aspx?PRID=1656755®=3&lang=2
MSME
https://udyamregistration.gov.in/
PIB Archives
https://www.pib.gov.in/FactsheetDetails.aspx?id=150812&NoteId=150812&ModuleId=16®=48&lang=1
https://www.pib.gov.in/PressReleasePage.aspx?PRID=2236804®=3&lang=1
https://www.pib.gov.in/PressReleasePage.aspx?PRID=2269961®=48&lang=2
https://www.pib.gov.in/PressNoteDetails.aspx?NoteId=154772&ModuleId=3®=3&lang=2
https://static.pib.gov.in/WriteReadData/specificdocs/documents/2026/apr/doc202648842601.pdf
https://www.pib.gov.in/PressReleasePage.aspx?PRID=2236804®=3&lang=1
https://www.pib.gov.in/PressReleasePage.aspx?PRID=2232079®=3&lang=1
Click here to see Pdf
*****
(तथ्य सामग्री आईडी: 150915)
आगंतुक पटल : 12
Provide suggestions / comments