• Skip to Content
  • Sitemap
  • Advance Search
Economy

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ, ಜಿಡಿಪಿ ಮುನ್ನೋಟ ಉಜ್ವಲ

प्रविष्टि तिथि: 01 OCT 2025 15:16 PM

  • ಆರ್‌ಬಿಐ ರೆಪೊ ದರವನ್ನು 5.50 ಪ್ರತಿಶತದಲ್ಲಿ ಯಥಾಸ್ಥಿತಿಯಲ್ಲಿರಿಸಿ, ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ.
  • ಆರ್‌ಬಿಐ ಭಾರತದ 2025-26 ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಅಂದಾಜು ಶೇ. 6.5 ರಿಂದ ಶೇ.6.8ಕ್ಕೆ ಪರಿಷ್ಕರಿಸಿ ಹೆಚ್ಚಿಸಿದೆ.
  • ಆರ್‌ಬಿಐ  2025-26 ರ ಹಣಕಾಸು ವರ್ಷಕ್ಕೆ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ಮುನ್ಸೂಚನೆಯನ್ನು ಹಿಂದಿನ ಶೇ.3.1 ರಿಂದ ಶೇ.2.6ಕ್ಕೆ ಇಳಿಸಿದೆ.
  • ಭಾರತದ ಪ್ರಸಕ್ತ ಖಾತೆ ಕೊರತೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕ್ಯೂ ಒಂದು ವರ್ಷದ ಹಿಂದಿನ ಶೇ. 0.9 ರಿಂದ ಜಿಡಿಪಿಯ ಶೇ. 0.2 ಕ್ಕೆ ಇಳಿಕೆಯಾಗಿದೆ.
  • 2025-26ರ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ (ಸೆಪ್ಟೆಂಬರ್ 26 ರವರೆಗೆ) ಅವಧಿಯಲ್ಲಿ ಭಾರತೀಯ ಇಕ್ವಿಟಿ ಮಾರುಕಟ್ಟೆಗಳು ಏರುಮುಖವಾಗಿಯೇ ಉಳಿದಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯ 57ನೇ ಸಭೆಯ ನಂತರ (ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1, 2025 ರವರೆಗೆ ನಡೆಯಿತು) ತನ್ನ ಹಣಕಾಸು ನೀತಿ ವರದಿಯನ್ನು (ಅಕ್ಟೋಬರ್ 2025) ಬಿಡುಗಡೆ ಮಾಡಿದೆ. ಆರ್‌ಬಿಐ ರೆಪೊ ದರವನ್ನು ಶೇ.5.50 ರಲ್ಲಿ ಬದಲಾವಣೆ ಮಾಡದೆ, ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ. ಇದು ಆರ್ಥಿಕ ಚಲನಶೀಲತೆಯನ್ನು ಬೆಂಬಲಿಸುವ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವ ಸಮತೋಲಿತ ವಿಧಾನವನ್ನು ಸೂಚಿಸುತ್ತದೆ. ಈ ವರದಿಯು, ದೃಢವಾದ ದೇಶೀಯ ಬೇಡಿಕೆ, ಬೆಂಬಲಿಸುವ ಆರ್ಥಿಕ ಪರಿಸ್ಥಿತಿಗಳು ಮತ್ತು ಸ್ಥಿರವಾದ ಬಾಹ್ಯ ವಲಯವನ್ನು ಮತ್ತಷ್ಟು ಉಲ್ಲೇಖಿಸುತ್ತದೆ, ಇದು ಭಾರತೀಯ ಆರ್ಥಿಕತೆಯ ಬಗ್ಗೆ ಎಚ್ಚರಿಕೆಯ ಆಶಾವಾದದ ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ.

ಮುಂದಿದೆ ಬಲಿಷ್ಠ ಬೆಳವಣಿಗೆ

  • ಆರ್‌ಬಿಐ ಭಾರತದ 2025-26 ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಅಂದಾಜು ಶೇ.6.5 ರಿಂದ ಶೇ. 6.8ಕ್ಕೆ ಪರಿಷ್ಕರಿಸಿ ಹೆಚ್ಚಿಸಿದೆ.
  • ಬಲವಾದ ಬಳಕೆ, ಹೂಡಿಕೆಗಳು ಮತ್ತು ಸರ್ಕಾರದ ವೆಚ್ಚಗಳಿಂದಾಗಿ ದೇಶೀಯ ಬೆಳವಣಿಗೆಯು ಉತ್ತಮ ಪ್ರದರ್ಶನ ನೀಡುತ್ತಿದೆ. ಇದರ ಜೊತೆಗೆ ಉತ್ತಮ ಮಳೆ, ಜಿಎಸ್‌ಟಿ 2.0 (GST 2.0), ಉತ್ತಮ ಸಾಲದ ಹರಿವು ಮತ್ತು ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯದ ಬಳಕೆಯಂತಹ ಪೂರಕ ಅಂಶಗಳು ಈ ಸಕಾರಾತ್ಮಕ ಮುನ್ನೋಟವನ್ನು ಉಳಿಸಿಕೊಂಡಿವೆ.
  • ಬಲವಾದ ಹೂಡಿಕೆ ಮತ್ತು ಬಳಕೆಯಿಂದಾಗಿ ಭಾರತದ ವಾಸ್ತವ ಜಿಡಿಪಿ 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಶೇ.7.8 ರಷ್ಟು ಬೆಳೆದಿದೆ. ಇದು ಹಿಂದಿನ ತ್ರೈಮಾಸಿಕದ ಶೇ 7.4ಕ್ಕಿಂತ ಹೆಚ್ಚಿದ್ದು, ಏಳು ತ್ರೈಮಾಸಿಕಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯಾಗಿದೆ.
  • 2025-26ರ ಹಣಕಾಸು ವರ್ಷದ ಬೆಳವಣಿಗೆಯನ್ನು ಶೇ.6.8 ದಷ್ಟು ಎಂದು ಅಂದಾಜಿಸಲಾಗಿದೆ (ಮೊದಲ ತ್ರೈಮಾಸಿಕ: 7.8%, ಎರಡನೇ ತ್ರೈಮಾಸಿಕ: 7.0%, ಮೂರನೇ ತ್ರೈಮಾಸಿಕ: 6.4%, ನಾಲ್ಕನೇ ತ್ರೈಮಾಸಿಕ: 6.2%).ಇನ್ನು, ಸಾಮಾನ್ಯ ಮುಂಗಾರು (monsoon) ಮತ್ತು ಸ್ಥಿರ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡರೆ, 2026-27ರ ಹಣಕಾಸು ವರ್ಷದ ಬೆಳವಣಿಗೆಯನ್ನು ಶೇ.6.6 ರಷ್ಟು ಎಂದು ಅಂದಾಜಿಸಲಾಗಿದೆ.
  • ಮುಂದಿನ ವರ್ಷದ ಬಗ್ಗೆ ಗ್ರಾಹಕರ ಆಶಾವಾದವು (ಭವಿಷ್ಯದ ನಿರೀಕ್ಷೆಗಳ ಸೂಚ್ಯಂಕದಿಂದ ಅಳೆಯಲಾಗುತ್ತದೆ) ಮತ್ತಷ್ಟು ಬಲಗೊಂಡಿದೆ. ಇದು ನಗರ ಮತ್ತು ಗ್ರಾಮೀಣ ಎರಡೂ ಕುಟುಂಬಗಳಲ್ಲಿ ಆಶಾವಾದಿ ವಲಯದಲ್ಲಿ ಉಳಿದಿದೆ.

ಜಾಗತಿಕ ಏಜೆನ್ಸಿಗಳಿಂದ ಬೆಳವಣಿಗೆಗೆ ಮರುದೃಢೀಕರಣ

ಹಲವಾರು ಜಾಗತಿಕ ಸಂಸ್ಥೆಗಳು ಭಾರತದ ಬಲಿಷ್ಠ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ಸೂಚಿಸಿವೆ. ಇದು ಜಾಗತಿಕ ಅನಿಶ್ಚಿತತೆಗಳ ನಡುವೆಯೂ ದೇಶದ ದೃಢತೆಯನ್ನು ಸೂಚಿಸುತ್ತದೆ. ಐಎಂಎಫ್ (FY26: 6.4%), ಫಿಚ್ (FY26: 6.9%, FY27: 6.3%), ಎಸ್&ಪಿ ಗ್ಲೋಬಲ್ (FY26: 6.5%), ವಿಶ್ವಸಂಸ್ಥೆ (FY26: 6.3%, FY27: 6.4%), ಸಿಐಐ (FY26: 6.4-6.7%) ಮತ್ತು ಒಇಸಿಡಿ (FY26: 6.7%) ಸಂಸ್ಥೆಗಳು ದೃಢವಾದ ದೇಶೀಯ ಬೇಡಿಕೆ, ಹೆಚ್ಚುತ್ತಿರುವ ಹೂಡಿಕೆಗಳು ಮತ್ತು ಸ್ಥಿರವಾದ ಬಾಹ್ಯ ವಲಯವನ್ನು ಪ್ರಮುಖ ಪ್ರೇರಕ ಶಕ್ತಿಗಳಾಗಿ ಗುರುತಿಸಿವೆ. ಬಲವಾದ ನೀತಿ ಬೆಂಬಲ, ರಚನಾತ್ಮಕ ಸುಧಾರಣೆಗಳು ಮತ್ತು ಚುರುಕಾದ ಸೇವಾ ವಲಯವು ಈ ಸಕಾರಾತ್ಮಕ ಬೆಳವಣಿಗೆಯ ಮುನ್ನೋಟವನ್ನು ಮತ್ತಷ್ಟು ಬಲಪಡಿಸುತ್ತಿವೆ. ಈ ಅಂದಾಜುಗಳು ಜಾಗತಿಕ ಸವಾಲುಗಳ ನಡುವೆಯೂ ಭಾರತವು ಉನ್ನತ ಬೆಳವಣಿಗೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯದ ಬಗ್ಗೆ ವ್ಯಾಪಕ ವಿಶ್ವಾಸವನ್ನು ಉಲ್ಲೇಖಿಸಿವೆ.

ಬೆಲೆಗಳು ಸ್ಥಿರವಾಗಿವೆ

ಆರ್‌ಬಿಐ 2025-26 ರ ಹಣಕಾಸು ವರ್ಷಕ್ಕೆ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ಮುನ್ಸೂಚನೆಯನ್ನು ಶೇ.3.1 ರಿಂದ ಶೇ.2.6ಕ್ಕೆ ಇಳಿಸಿದೆ.

ಮುಖ್ಯ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವು ಸತತ ಒಂಬತ್ತು ತಿಂಗಳವರೆಗೆ ಇಳಿಕೆಯಾಗಿ, ಜುಲೈ 2025 ರಲ್ಲಿ 8 ವರ್ಷಗಳ ಕನಿಷ್ಠ ಮಟ್ಟವಾದ 1.6 ಪ್ರತಿಶತವನ್ನು ತಲುಪಿತು. ನಂತರ ಆಗಸ್ಟ್‌ನಲ್ಲಿ 2.1 ಪ್ರತಿಶತಕ್ಕೆ ಸ್ವಲ್ಪ ಏರಿದರೂ ಸಹ, ಇದು ಆರ್‌ಬಿಐನ ಹಣದುಬ್ಬರದ ಗುರಿಯ ವ್ಯಾಪ್ತಿಯೊಳಗೆ ಉಳಿದಿದೆ.

ಹಿಂದೆ ಹಣದುಬ್ಬರವನ್ನು ಶೇ.3.8 (ನಾಲ್ಕನೇ ತ್ರೈಮಾಸಿಕ, 2024-25 ಹಣಕಾಸು ವರ್ಷ) ಮತ್ತು ಶೇ.3.6 (ಮೊದಲ ತ್ರೈಮಾಸಿಕ, 2025-26 ಹಣಕಾಸು ವರ್ಷ) ಎಂದು ಅಂದಾಜಿಸಲಾಗಿತ್ತು. ಆದರೆ, ವಾಸ್ತವಿಕ ಫಲಿತಾಂಶಗಳು 90 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿವೆ.ಈ ಇಳಿಕೆಯು ಸಿಪಿಐ ಸರಣಿಯಲ್ಲಿಯೇ ಅತ್ಯಂತ ದೀರ್ಘಾವಧಿಯಾದ, ಒಂಬತ್ತು ತಿಂಗಳುಗಳ ಕಾಲದ ತೀವ್ರ ಮತ್ತು ಸುದೀರ್ಘವಾದ ಶೇ.10.5ರಷ್ಟು ಆಹಾರ ಬೆಲೆಗಳ ಕುಸಿತದಿಂದಾಗಿದೆ.

ಸಮಶೀತೋಷ್ಣ ಬೇಸಿಗೆಯ ತಾಪಮಾನವು ಕಾಲೋಚಿತ ಬೆಲೆ ಒತ್ತಡಗಳನ್ನು ಮತ್ತಷ್ಟು ಕಡಿಮೆಗೊಳಿಸಿತು. ಇದರಿಂದ 2025-26 ರ ಹಣಕಾಸು ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕಗಳಲ್ಲಿ (Q1 ಮತ್ತು Q2) ವಾಸ್ತವಿಕ ಹಣದುಬ್ಬರವು ನಿರೀಕ್ಷೆಗಿಂತ ಕಡಿಮೆಯಾಗಿದೆ.

ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬಂದ ಜಿಎಸ್‌ಟಿ ದರಗಳ ತೆರಿಗೆಗಳನ್ನು ಸರಳಗೊಳಿಸಿದೆ ಮತ್ತು ಗ್ರಾಹಕರ ಬೆಲೆಗಳನ್ನು ಕಡಿಮೆ ಮಾಡಿದೆ. ಇದು ಉತ್ಪನ್ನಗಳ ಗುಂಪುಗಳಾದ್ಯಂತ ಸಿಪಿಐ ಬುಟ್ಟಿಯ ಸುಮಾರು ಶೇ.11.4 ರಷ್ಟು ನೇರವಾಗಿ ಪರಿಣಾಮ ಬೀರಿದೆ.

ಜಾಗತಿಕ ಬೇಡಿಕೆ ಸ್ಥಿರವಾಗಿದೆ

ಬಲವಾದ ಸೇವಾ ರಫ್ತುಗಳು ಮತ್ತು 35.3 ಬಿಲಿಯನ್ ಯುಎಸ್ ಡಾಲರ್‌ಗಳ ಬಲಿಷ್ಠ ರವಾನೆಗಳಿಂದಾಗಿ, ಭಾರತದ ಪ್ರಸಕ್ತ ಖಾತೆ ಕೊರತೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಜಿಡಿಪಿಯ ಶೇ. 0.2ಕ್ಕೆ ಇಳಿಕೆಯಾಗಿದೆ. ಇದು ಒಂದು ವರ್ಷದ ಹಿಂದಿನ ಶೇ.0.9ಕ್ಕಿಂತ ಕಡಿಮೆಯಾಗಿದೆ. ಈ ರವಾನೆಗಳ ಬಲದಿಂದ ಭಾರತವು ಖಾಸಗಿ ರವಾನೆಗಳನ್ನು ಪಡೆಯುವ ವಿಶ್ವದ ಅತಿದೊಡ್ಡ ದೇಶವಾಗಿ ಉಳಿದಿದೆ.

ಜಾಗತಿಕ ವ್ಯಾಪಾರದ ಅನಿಶ್ಚಿತತೆಯ ನಡುವೆಯೂ, ಭಾರತದ ಸರಕುಗಳ ರಫ್ತು ಶೇ.2.5ರಷ್ಟು (ಏಪ್ರಿಲ್–ಆಗಸ್ಟ್ 2025) ಏರಿಕೆ ಕಂಡಿದ್ದರೆ, ಆಮದು ಶೇ.2.1ರಷ್ಟು ಬೆಳೆದಿದೆ. ಸೇವಾ ರಫ್ತುಗಳು ಎರಡು-ಅಂಕಿಯ ಬೆಳವಣಿಗೆಯನ್ನು ಮುಂದುವರೆಸಿದವು. 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಸರಕು ಮತ್ತು ಸೇವೆಗಳ ವಾಸ್ತವಿಕ ರಫ್ತು ಮತ್ತು ಆಮದು ಕ್ರಮವಾಗಿ ಶೇ.6.3 ಮತ್ತು ಶೇ 10.9 ರಷ್ಟು ಬೆಳೆದವು.

ಏಪ್ರಿಲ್-ಜುಲೈ 2025 ರ ಅವಧಿಯಲ್ಲಿ, ಒಟ್ಟು ವಿದೇಶಿ ನೇರ ಬಂಡವಾಳ ಹರಿವು 37.7 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ಪ್ರಬಲವಾಗಿತ್ತು. ಇದು ಭಾರತವು ಆದ್ಯತೆಯ ಹೂಡಿಕೆ ತಾಣವಾಗಿ ನಿರಂತರವಾಗಿ ಆಕರ್ಷಣೆ ಹೊಂದಿರುವುದನ್ನು ಸೂಚಿಸುತ್ತದೆ.ಸಿಂಗಾಪುರ, ಯುಎಸ್, ಮಾರಿಷಸ್, ಯುಎಇ, ಮತ್ತು ನೆದರ್ಲ್ಯಾಂಡ್ಸ್‌ನಿಂದಾಗಿ ನಿವ್ವಳ ಒಳಹರಿವು 10.8 ಬಿಲಿಯನ್ ಯುಎಸ್ ಡಾಲರ್‌ಗೆ ಏರಿದೆ. ಈ ದೇಶಗಳು ಒಟ್ಟಾಗಿ ಒಟ್ಟು ಎಫ್‌ಡಿಐನಲ್ಲಿ ಶೇ.76ರಷ್ಟು ಕೊಡುಗೆ ನೀಡಿವೆ.

ದ್ರವ್ಯತೆ ಮತ್ತು ಸ್ಥಿರತೆ

2025-26 ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೆ (ಸೆಪ್ಟೆಂಬರ್ 26 ರವರೆಗೆ), ವ್ಯಾಪಾರ ನೀತಿಯ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಅಲ್ಪಾವಧಿಯ ಏರಿಳಿತಗಳಿದ್ದರೂ, ಭಾರತೀಯ ಷೇರು ಮಾರುಕಟ್ಟೆಗಳು ಏರುಗತಿಯಲ್ಲಿಯೇ ಮುಂದುವರೆದಿವೆ.

2025-26 ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ (ಸೆಪ್ಟೆಂಬರ್ 26, 2025 ರವರೆಗೆ), ಬಿಎಸ್‌ಇ ಸೆನ್ಸೆಕ್ಸ್ 3.9 ಪ್ರತಿಶತದಷ್ಟು ಏರಿಕೆ ಕಂಡಿದೆ. 2025-26ರ ಅವಧಿಯಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 7.7 ಪ್ರತಿಶತ ಮತ್ತು 12.1 ಪ್ರತಿಶತದಷ್ಟು ಗಳಿಸುವುದರೊಂದಿಗೆ, ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಮಾನದಂಡವನ್ನು ಮೀರಿಸಿದವು.

ಜಾಗತಿಕ ಅಸ್ಥಿರತೆಯ ನಡುವೆ ಭಾರತೀಯ ರೂಪಾಯಿಯು ಏರಿಳಿತವನ್ನು (ಎರಡು-ಮಾರ್ಗದ ಚಲನೆ) ತೋರಿಸಿದರೂ, ಇದು ಅತಿ ಕಡಿಮೆ ಅಸ್ಥಿರತೆಯನ್ನು ಹೊಂದಿರುವ ಹೊರಹೊಮ್ಮುತ್ತಿರುವ ಮಾರುಕಟ್ಟೆ ಕರೆನ್ಸಿಗಳಲ್ಲಿ ಒಂದಾಗಿ ಉಳಿದಿದೆ. ಕುಗ್ಗಿದ ಪ್ರಸಕ್ತ ಖಾತೆ ಕೊರತೆ, ಸ್ಥಿರ ಸೇವಾ ರಫ್ತುಗಳು, ಬಲಿಷ್ಠ ಹಣ ರವಾನೆ ಮತ್ತು ಉತ್ತಮ ವಿದೇಶಿ ವಿನಿಮಯ ಸಂಗ್ರಹ ಸೇರಿದಂತೆ ಬಲವಾದ ಆಧಾರಭೂತ ಅಂಶಗಳು ರೂಪಾಯಿಯ ಸ್ಥಿರತೆಗೆ ಬೆಂಬಲ ನೀಡಿದವು.

ಉಪಸಂಹಾರ

ಬಲವಾದ ಬಳಕೆ ಹೂಡಿಕೆ ಮತ್ತು ಸರ್ಕಾರದ ವೆಚ್ಚಗಳ ಬೆಂಬಲದೊಂದಿಗೆ, 2025-26ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಭಾರತದ ಆರ್ಥಿಕತೆಯು ದೃಢವಾಗಿ ಉಳಿದಿದೆ. ಅನುಕೂಲಕರ ಆಹಾರ ಬೆಲೆಗಳು ಮತ್ತು ಜಿಎಸ್‌ಟಿ ಸುಧಾರಣೆಗಳ ಸಹಾಯದಿಂದ ಹಣದುಬ್ಬರವು ನಿರೀಕ್ಷೆಗಿಂತ ಕಡಿಮೆಯಾಗಿದೆ. ಉತ್ತಮವಾಗಿ ಸಮತೋಲಿತ ಬಾಹ್ಯ ವಲಯದ ಕಾರ್ಯಕ್ಷಮತೆ, ಸ್ಥಿರವಾದ ಹಣದ ಹರಿವು ಮತ್ತು ಆರೋಗ್ಯಕರ ಹಣಕಾಸು ಮಾರುಕಟ್ಟೆಗಳು ಒಟ್ಟಾರೆ ಸ್ಥೂಲ ಆರ್ಥಿಕ ಸ್ಥಿರತೆಗೆ ಆಧಾರವಾಗಿವೆ.

Reference:

RBI

https://rbidocs.rbi.org.in/rdocs/Publications/PDFs/MPR011020257F52BDBF1F184AE0A627BD9CEB1580FB.PDF

IMF

https://www.imf.org/en/Countries/IND

News on Air

https://www.newsonair.gov.in/fitch-ratings-upgrades-indias-economic-growth-forecast-to-6-9/

S&P Global

https://www.spglobal.com/en/research-insights/special-reports/india-forward/shifting-horizons/how-indian-economic-growth-realigns-with-shifting-global-trends

PIB Headquarters

https://www.pib.gov.in/PressNoteDetails.aspx?NoteId=155121&ModuleId=3

DD News

https://ddnews.gov.in/en/indias-gdp-growth-projected-at-6-4-6-7-for-fy26-cii/

OECD

https://www.oecd.org/en/publications/oecd-economic-outlook-interim-report-september-2025_67b10c01-en.html

Click here to see pdf

 

*****

(तथ्य सामग्री आईडी: 150398) आगंतुक पटल : 54


Provide suggestions / comments
इस विश्लेषक को इन भाषाओं में पढ़ें : English , हिन्दी , Urdu , Odia
Link mygov.in
National Portal Of India
STQC Certificate