ರಾಬಿ ಗ್ರೇವಾಲ್ ನಿರ್ದೇಶನದ, ಪ್ರಭಲೀನ್ ಸಂಧು ರಚಿಸಿದ ಮತ್ತು ಆಲ್ಮೈಟಿ ಮೋಶನ್ ಪಿಕ್ಚರ್ ನಿರ್ಮಿಸಿದ ಹಿಂದಿ ಡಾಕ್ಯುಡ್ರಾಮಾ ಸರಣಿ ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ, ಗೋವಾದಲ್ಲಿ ನಡೆದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ನಲ್ಲಿ 2026 ರ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿಯನ್ನು ಇಂದು ರಾತ್ರಿ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಈ ವರ್ಷ ಸ್ವೀಕರಿಸಲಾದ ಒಟ್ಟು 46 ಪ್ರವೇಶಗಳಲ್ಲಿ ವಿವಿಧ ಭಾರತೀಯ ಭಾಷೆಗಳಿಗೆ ಸೇರಿದ ಐದು ಅಂತಿಮ ಆಯ್ಕೆಗಳ ಪೈಕಿ ಈ ಸರಣಿಯನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಪಟ್ಟಿಯಲ್ಲಿದ್ದ ಇತರ ಸರಣಿಗಳೆಂದರೆ: ಚಂದ್ರಕಾಂತ್ ಲತಾ ಗಾಯಕ್ವಾಡ್ ನಿರ್ದೇಶನದ 'ದೇವ್ ಖೇಲ್' (ಮರಾಠಿ), ರುಚಿರ್ ಅರುಣ್ ನಿರ್ದೇಶನದ 'ಮುಸಾಫಿರ್ ಕೆಫೆ' (ಹಿಂದಿ), ದೇವಾ ಕಟ್ಟಾ ನಿರ್ದೇಶನದ 'ಮಾಯಾ ಸಭಾ' (ತೆಲುಗು) ಮತ್ತು ಹಿಮಾಂಕ್ ಗೌರ್ ನಿರ್ದೇಶನದ 'ಆದರ್ಶ ಬಾಲ್ ವಿದ್ಯಾಲಯ' (ಹಿಂದಿ).

ಜ್ಯೂರಿ ಪರವಾಗಿ ಮಾತನಾಡಿದ ಅಧ್ಯಕ್ಷರಾದ ಶ್ರೀ ಜಮ್ನಂದಾಸ್ ಮಜೆಥಿಯಾ, ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ, ಅಂತಿಮ ಐದು ನಾಮನಿರ್ದೇಶಿತರನ್ನು ಗುರುತಿಸುವ ಮೊದಲು 12 ಪ್ರವೇಶಗಳನ್ನು ಆರಂಭದಲ್ಲಿ ಅಂತಿಮಗೊಳಿಸಲಾಯಿತು ಎಂದು ಹೇಳಿದರು. ಜ್ಯೂರಿ ಭಾರತೀಯರ ಹೃದಯವನ್ನು ಸ್ಪರ್ಶಿಸುವ, ರಾಷ್ಟ್ರದ ಆತ್ಮವನ್ನು ಪ್ರತಿಬಿಂಬಿಸುವ ಮತ್ತು ಪ್ರೇಕ್ಷಕರನ್ನು ಪ್ರೇರೇಪಿಸುವ ಕಥೆಗಳನ್ನು ಹುಡುಕುತ್ತದೆ ಎಂದು ಅವರು ಹೇಳಿದರು. ಕುಟುಂಬಗಳು ಒಟ್ಟಿಗೆ ಆನಂದಿಸಬಹುದಾದ ವಿಷಯವಾಗಿ ವೆಬ್ ಸರಣಿಗಳ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಬಿಂಬಿಸಿದ ಅವರು, ನಾಮನಿರ್ದೇಶಿತರಲ್ಲಿ ಪ್ರತಿನಿಧಿಸಲಾದ ವೈವಿಧ್ಯಮಯ ಕಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತೀರ್ಪುಗಾರರ ಸಮಿತಿ ಈ ವಿಜೇತ ಸರಣಿಯನ್ನು ದೇಶೀಯ ಉದ್ಯಮ ಮತ್ತು ಭಾರತದ ಕೈಗಾರಿಕಾ ಸಾಧನೆಗಳನ್ನು ಆಚರಿಸುವ ಮೂಲಕ ಗುರುತಿಸಿ, ಗಮನಿಸಿತು: "ಯಶಸ್ಸಿನ ಕಥೆಗಳು ಹೇಳಲು ಮತ್ತು ಆಚರಿಸಲು ಅರ್ಹವಾಗಿವೆ. ಕೈಗಾರಿಕಾ ಸಾಧನೆಗಳು ವಿಶೇಷವಾಗಿ ಉದ್ಯಮ, ಸ್ಥೈರ್ಯ ಮತ್ತು ದೃಷ್ಟಿಕೋನದ ಶಕ್ತಿಶಾಲಿ ಪಾಠಗಳನ್ನು ನೀಡುತ್ತವೆ. ಈ ಸರಣಿ ಆ ಆತ್ಮವನ್ನು ಸುಂದರವಾಗಿ ಹಿಡಿದಿಟ್ಟುಕೊಂಡು, ಭಾರತದಾದ್ಯಂತ ಕನಸುಗಳು ಮತ್ತು ಆಶಯಗಳು ಸಾಕಾರವಾಗುವ ಇನ್ನಷ್ಟು ಕಥನಗಳಿಗೆ ದಾರಿ ಮಾಡಿಕೊಡುತ್ತದೆ. ಇವು ತಲೆಮಾರಿಗೆ ನೀಡುವ ಪ್ರೇರಣೆಗಾಗಿ ನೋಡಲು, ಹಂಚಿಕೊಳ್ಳಲು ಮತ್ತು ಆಚರಿಸಲು ಅರ್ಹವಾದ ಕಥೆಗಳು," ಎಂದು ತಿಳಿಸಿದೆ.

ಡಿಜಿಟಲ್ ಕಥನದ ವಿಸ್ತಾರಗೊಳ್ಳುತ್ತಿರುವ ಪರಿಸರವನ್ನು ಗುರುತಿಸಲು 2023ರಲ್ಲಿ 54ನೇ ಐಎಫ್ಎಫ್ಐ ನಲ್ಲಿ ಸ್ಥಾಪಿಸಲಾದ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಗೆ ಪ್ರಮಾಣಪತ್ರ ಮತ್ತು 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ನಿರ್ದೇಶಕ, ಸೃಷ್ಟಿಕರ್ತ ಮತ್ತು ನಿರ್ಮಾಪಕರ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ.
2026 ರ ಜೂನ್ ನಲ್ಲಿ ಅಮೆಜಾನ್ ಎಂಎಕ್ಸ್ ಪ್ಲೇಯರ್ ನಲ್ಲಿ ಬಿಡುಗಡೆಯಾದ ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ ಆರು ಎಪಿಸೋಡ್ ಗಳ ಹಿಂದಿ ಡಾಕ್ಯುಡ್ರಾಮಾ ಆಗಿದ್ದು, ಭಾರತದ ಪ್ರಮುಖ ಗ್ರಾಹಕ ಬ್ರ್ಯಾಂಡ್ ಗಳಲ್ಲಿ ಒಂದರ ಏರಿಕೆಯನ್ನು ದಾಖಲಿಸುತ್ತದೆ. ವಿನಯ್ ಕಾಮತ್ ಅವರ ಪುಸ್ತಕ ಟೈಟನ್: ಇನ್ಸೈಡ್ ಇಂಡಿಯಾಸ್ ಮೋಸ್ಟ್ ಸಕ್ಸೆಸ್ ಕಂಸ್ಯೂಮರ್ ಬ್ರ್ಯಾಂಡ್ ನಿಂದ ರೂಪಾಂತರಗೊಂಡ ಈ ಸರಣಿಯಲ್ಲಿ ಜಿಮ್ ಸರ್ಭ್ ಜೆರ್ಕ್ಸಸ್, ದೇಸಾಯಿ ಪಾತ್ರದಲ್ಲಿ ಮತ್ತು ನಾಸೀರುದ್ದೀನ್ ಶಾ ಜೆಆರ್ ಡಿ ಟಾಟಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪ್ರಶಸ್ತಿ 57ನೇ ಐಎಫ್ಎಫ್ಐ ಸಮಾರೋಪ ಸಮಾರಂಭದ ಪ್ರಮುಖ ಕ್ಷಣಗಳಲ್ಲಿ ಒಂದಾಗಿತ್ತು. ಇದು ಒಂಬತ್ತು ದಿನಗಳ ಅಂತಾರಾಷ್ಟ್ರೀಯ ಸಿನೆಮಾ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಮುಕ್ತಾಯಗೊಳಿಸಿತು.
ಪ್ರಶಸ್ತಿಗಾಗಿ ಜ್ಯೂರಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****