ಇಂಧನ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ಎರಡು ದಿನಗಳ ಇಂಧನ ಸಚಿವರ ಸಮ್ಮೇಳನ ಆರಂಭ


ಮುಂದಿನ ಎರಡು ದಶಕಗಳಲ್ಲಿ ಇಂಧನ ವಲಯದಲ್ಲಿ ₹200 ಲಕ್ಷ ಕೋಟಿ ಹೂಡಿಕೆಗೆ ಅವಕಾಶ

ಈ ಅವಕಾಶವನ್ನು ಸಾಕಾರಗೊಳಿಸಲು ಎಲ್ಲ ಪಾಲುದಾರರ ಸಾಮೂಹಿಕ ಪ್ರಯತ್ನ ಅಗತ್ಯ: ಶ್ರೀ ಮನೋಹರ್ ಲಾಲ್

ಪ್ರಕಟಣಾ ದಿನಾಂಕ: 27 NOV 2026 12:40PM by PIB Bengaluru

ಎರಡು ದಿನಗಳ ಇಂಧನ ಸಚಿವರ ಸಮ್ಮೇಳನವು ಇಂದು ನವದೆಹಲಿಯಲ್ಲಿ ಆರಂಭವಾಯಿತು. 2026ರ ನವೆಂಬರ್ 27 ಮತ್ತು 28ರಂದು ನಡೆಯುತ್ತಿರುವ ಈ ಸಮ್ಮೇಳನದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಇಂಧನ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ವಿದ್ಯುತ್ ನಿಯಂತ್ರಣ ಪ್ರಾಧಿಕಾರಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕೇಂದ್ರ ವಿದ್ಯುತ್ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಈ ಹಿಂದೆ ಇದೇ ರೀತಿಯ ರಾಷ್ಟ್ರೀಯ ಮಟ್ಟದ ಸಮ್ಮೇಳನವು 2024ರಲ್ಲಿ ನಡೆದಿತ್ತು.

ಭಾರತದ ಇಂಧನ ವಲಯದ ಪ್ರಮುಖ ನೀತಿ ಆದ್ಯತೆಗಳು ಮತ್ತು ಅನುಷ್ಠಾನದ ಸವಾಲುಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆಸಲು ಈ ಸಮ್ಮೇಳನ ವೇದಿಕೆ ಒದಗಿಸುತ್ತದೆ. ಇಂಧನ ಭದ್ರತೆಯನ್ನು ಬಲಪಡಿಸುವುದು, ವಿದ್ಯುತ್ ಮೂಲಸೌಕರ್ಯವನ್ನು ಸುಧಾರಿಸುವುದು ಮತ್ತು ವಲಯದ ಸುಧಾರಣೆಗಳಿಗೆ ವೇಗ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಇಲ್ಲಿ ಚರ್ಚಿಸಲಾಗುತ್ತಿದೆ.

ಭಾಗವಹಿಸಿರುವ ರಾಜ್ಯಗಳ ಇಂಧನ ಸಚಿವರು ಮತ್ತು ಇತರ ಗಣ್ಯರನ್ನು ಸ್ವಾಗತಿಸಿದ ಶ್ರೀ ಮನೋಹರ್ ಲಾಲ್ ಅವರು, ಇಂಧನ ವಲಯದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಿದರು. ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು, ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ವ್ಯವಸ್ಥೆಯೊಂದಿಗೆ ಸಂಯೋಜಿಸುವುದು ಮತ್ತು ರಾಷ್ಟ್ರೀಯ ವಿದ್ಯುತ್ ಗ್ರಿಡ್ ಅನ್ನು ಬಲಪಡಿಸುವುದರಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ನಮ್ಮ ಮುಂದಿನ ಹಂತದ ಪಯಣದಲ್ಲಿ ವಿದ್ಯುತ್ ವಲಯದ ಯೋಜನೆ ರೂಪಿಸುವಿಕೆಯಲ್ಲಿ ಹೆಚ್ಚು ಸಮಗ್ರವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ಅಂದರೆ, ವಿದ್ಯುತ್ ಉತ್ಪಾದನೆ, ಸಂಗ್ರಹಣೆ, ಪ್ರಸರಣ ಮತ್ತು ವಿತರಣೆಯನ್ನು ಒಂದೇ ವ್ಯವಸ್ಥೆಯ ಪರಸ್ಪರ ಸಂಬಂಧಿತ ಘಟಕಗಳಾಗಿ ಪರಿಗಣಿಸಿ ಯೋಜನೆ ರೂಪಿಸಬೇಕಿದೆ ಎಂದು ಅವರು ತಿಳಿಸಿದರು. ಗ್ರಾಹಕರಿಗೆ ಗಣನೀಯ ಪ್ರಯೋಜನಗಳನ್ನು ಒದಗಿಸುವ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವಂತೆ ರಾಜ್ಯಗಳಿಗೆ ಅವರು ಒತ್ತಾಯಿಸಿದರು. ರಾಜ್ಯಗಳ ಸಹಯೋಗ ಮತ್ತು ಇಂಧನ ಸಚಿವಾಲಯದ ಉಪಕ್ರಮಗಳ ಮೂಲಕ, ದೀರ್ಘಕಾಲದ ಬಳಿಕ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) ಲಾಭದಾಯಕ ಸ್ಥಿತಿಗೆ ಬಂದಿವೆ ಎಂದೂ ಸಚಿವರು ತಿಳಿಸಿದರು.

ಮುಂದಿನ ಎರಡು ದಶಕಗಳಲ್ಲಿ ದೇಶದ ಇಂಧನ ವಲಯವು ₹200 ಲಕ್ಷ ಕೋಟಿ ಹೂಡಿಕೆಯ ಅವಕಾಶವನ್ನು ಒದಗಿಸಲಿದೆ ಎಂದು ಸಚಿವರು ಹೇಳಿದರು. ಈ ಅವಕಾಶವನ್ನು ಸಾಕಾರಗೊಳಿಸಲು ಎಲ್ಲ ಪಾಲುದಾರರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಈ ಗುರಿ ಸಾಧಿಸಲು ಖಾಸಗಿ ವಲಯದ ಸಹಯೋಗದೊಂದಿಗೆ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

2024-25ನೇ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ವಿದ್ಯುತ್ ವಿತರಣಾ ಕಂಪನಿಗಳು ತೆರಿಗೆ ಪಾವತಿಸಿದ ನಂತರದ ಲಾಭ (ಪಿಎಟಿ) ದಾಖಲಿಸಿರುವುದಕ್ಕಾಗಿ ಶ್ರೀ ಮನೋಹರ್ ಲಾಲ್ ಅವರು ರಾಜ್ಯಗಳು ಮತ್ತು ಡಿಸ್ಕಾಂಗಳನ್ನು ಅಭಿನಂದಿಸಿದರು. ಡಿಸ್ಕಾಂಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಲಾಭದಾಯಕ ಸ್ಥಿತಿ ಮುಂದುವರಿಯಲು ಅಗತ್ಯವಾದ ನೀತಿ, ಕಾರ್ಯಾಚರಣೆ ಮತ್ತು ನಿಯಂತ್ರಣ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಸಹಕಾರಿಯಾಗಬೇಕು ಎಂದು ಅವರು ಹೇಳಿದರು.

ಸಮ್ಮೇಳನದ ಪ್ರಮುಖ ಕಾರ್ಯಸೂಚಿಯನ್ನು ವಿವರಿಸಿದ ಅವರು, ಸಂಪನ್ಮೂಲಗಳ ಸಮರ್ಪಕ ಲಭ್ಯತೆ (ಆರ್‌ಎ) ಯೋಜನೆಗಳ ಅನುಷ್ಠಾನ, ಇಂಧನ ಸಂಗ್ರಹಣಾ ವ್ಯವಸ್ಥೆಗಳ ಅಳವಡಿಕೆಗೆ ವೇಗ ನೀಡುವುದು, ಅಂತಾರಾಜ್ಯ ಮತ್ತು ರಾಜ್ಯದೊಳಗಿನ ವಿದ್ಯುತ್ ಪ್ರಸರಣಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕಾಂ) ಆರ್ಥಿಕ ಕಾರ್ಯಸಾಧ್ಯತೆ, ಪರಿಷ್ಕೃತ ವಿತರಣಾ ವಲಯ ಯೋಜನೆಯ (ಆರ್‌ಡಿಎಸ್‌ಎಸ್) ಅನುಷ್ಠಾನ ಹಾಗೂ ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಳಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಇಂಧನ ಸಚಿವಾಲಯ, ರಾಜ್ಯಗಳು ಮತ್ತು ಇತರ ಪಾಲುದಾರರ ನಡುವೆ ಸಂವಾದ ಹಾಗೂ ಸಮಗ್ರ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು. ಸ್ಮಾರ್ಟ್ ಮೀಟರ್ ಅಳವಡಿಕೆ, ಫೀಡರ್‌ಗಳ ಪ್ರತ್ಯೇಕೀಕರಣ ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಆರ್‌ಡಿಎಸ್‌ಎಸ್ ಅಡಿಯಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ವಿದ್ಯುತ್ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ತಮ್ಮ ಭಾಷಣದಲ್ಲಿ, ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನದ ಸಂದರ್ಭದಲ್ಲಿ ಎದುರಿಸುವ ತೊಂದರೆಗಳು, ನಿಯಂತ್ರಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಅಥವಾ ಹಸ್ತಕ್ಷೇಪದ ಅಗತ್ಯವಿರುವ ಕ್ಷೇತ್ರಗಳು ಸೇರಿದಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಕೋರಿದರು. ನಮ್ಮ ಸಾಮೂಹಿಕ ಗಮನವು ನೀತಿ ರೂಪಿಸುವಿಕೆಯಿಂದ ಪರಿಣಾಮಕಾರಿ ಅನುಷ್ಠಾನದತ್ತ, ಮೂಲಸೌಕರ್ಯ ನಿರ್ಮಾಣದಿಂದ ನಿಖರ ಫಲಿತಾಂಶಗಳತ್ತ ಹಾಗೂ ಪ್ರತ್ಯೇಕ ಉಪಕ್ರಮಗಳಿಂದ ಸಮಗ್ರ ಮತ್ತು ಸುಸ್ಥಿರ ಇಂಧನ ವಲಯದತ್ತ ಸಾಗುವುದರ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಸಚಿವರು ಹೇಳಿದರು.

ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಅಗರ್ವಾಲ್ ಅವರು, ವಿಕಸಿತ ಭಾರತ @2047ರ ಗುರಿ ಸಾಧನೆಗಾಗಿ ಇಂಧನ ಭದ್ರತೆಯನ್ನು ಮೀರಿ ನೈಜ ಇಂಧನ ಸ್ವಾವಲಂಬನೆಯತ್ತ ಸಾಗಬೇಕು ಎಂಬುದು ಪ್ರಧಾನಮಂತ್ರಿಯವರಿಂದ ದೊರೆತಿರುವ ಪ್ರಮುಖ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು. ಕಳೆದ ವರ್ಷವು ದಾಖಲೆಯ ಬೆಳವಣಿಗೆಯ ವರ್ಷವಾಗಿತ್ತು ಎಂದು ಹೇಳಿದ ಅವರು, ಭಾರತದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಈಗ ಸುಮಾರು 563 ಗಿಗಾವ್ಯಾಟ್‌ಗಳಷ್ಟಿದ್ದು, ಅದರಲ್ಲಿ ಶೇ.55ಕ್ಕೂ ಹೆಚ್ಚು ಸಾಮರ್ಥ್ಯವು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಬಂದಿದೆ ಎಂದು ತಿಳಿಸಿದರು. ಕಳೆದ 12 ತಿಂಗಳುಗಳಲ್ಲಿ ಸುಮಾರು 60 ಗಿಗಾವ್ಯಾಟ್‌ಗಳಷ್ಟು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲಾಗಿದ್ದು, ಅದರಲ್ಲಿ ಶೇ.87ರಷ್ಟು ಸಾಮರ್ಥ್ಯವು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಬಂದಿದೆ ಎಂದರು.

ನವೆಂಬರ್ 28ರಂದು ನಡೆಯಲಿರುವ ಫೋರಮ್ ಆಫ್ ರೆಗ್ಯುಲೇಟರ್ಸ್ ಮತ್ತು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳ (ಎಸ್‌ಇಆರ್‌ಸಿಗಳು) ಜೊತೆಗಿನ ಜಂಟಿ ಅಧಿವೇಶನ ಪ್ರಮುಖ ಕಾರ್ಯಕ್ರಮವಾಗಿದೆ. ಇದರಲ್ಲಿ ರಾಜ್ಯಗಳ ಇಂಧನ ಸಚಿವರು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳ ಅಧ್ಯಕ್ಷರು, ರಾಜ್ಯಗಳ ಇಂಧನ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಸಚಿವಾಲಯದ ಅಧಿಕಾರಿಗಳು ಭಾಗವಹಿಸಿ, ಇಂಧನ ವಲಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಹ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

 

*****

 


(ಪ್ರಕಟಣೆ ಐ.ಡಿ.: 2342577) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR