ಪ್ರಕಟಣಾ ದಿನಾಂಕ:
27 NOV 2026 1:58PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು 2026ರ ನವೆಂಬರ್ 28ರಿಂದ ಡಿಸೆಂಬರ್ 12ರವರೆಗೆ ವಾರಾಣಸಿಯಲ್ಲಿ ನಡೆಯಲಿರುವ ಕಾಶಿ ತಮಿಳು ಸಂಗಮಂ (ಕೆಟಿಎಸ್)ನ ಐದನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮಿಳುನಾಡು ಮತ್ತು ಕಾಶಿ ನಡುವಿನ ಶತಮಾನಗಳಷ್ಟು ಹಳೆಯದಾದ ಸಾಂಸ್ಕೃತಿಕ, ಭಾಷಿಕ ಮತ್ತು ನಾಗರಿಕತೆಯ ಸಂಬಂಧಗಳನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ 1,400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಿತವಾದ ಈ ಉಪಕ್ರಮವು ಎರಡು ಪ್ರದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ʼಏಕ ಭಾರತ ಶ್ರೇಷ್ಠ ಭಾರತʼ ಆಶಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ತಮಿಳು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ʼತಿರುಕ್ಕುರಳ್ʼನ ಕಾಲಾತೀತ ಜ್ಞಾನ ಮತ್ತು ನೈತಿಕ ಬೋಧನೆಗಳನ್ನು ಈ ಐದನೇ ಆವೃತ್ತಿಯಲ್ಲಿ ಸಂಭ್ರಮಿಸಲಾಗುವುದು.
ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಐಐಟಿ ಮದ್ರಾಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು), ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ (ಸಿಐಸಿಟಿ), ಉತ್ತರ ಪ್ರದೇಶ ಸರ್ಕಾರ ಹಾಗೂ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕೆಟಿಎಸ್ 5.0ರ ಧ್ಯೇಯವಾಕ್ಯ – “ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ ಕರೇನ್”
ಕಾಶಿ ತಮಿಳು ಸಂಗಮಂ 5.0ರ ಧ್ಯೇಯವಾಕ್ಯ “ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ ಕರೇನ್” ಎಂದರೆ “ತಿರುಕ್ಕುರಳ್ ಕಲಿಯೋಣ” ಎಂದರ್ಥ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ತಿರುಕ್ಕುರಳ್ನ ಕಾಲಾತೀತ ಜ್ಞಾನದ ಕುರಿತು ಅರಿವು ಮತ್ತು ತಿಳಿವಳಿಕೆಯನ್ನು ಬೆಳೆಸುವುದರ ಜೊತೆಗೆ, ಭಾರತದ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ನಿರಂತರ ಸಾಂಸ್ಕೃತಿಕ ಸಂಪ್ರದಾಯದ ಬಗ್ಗೆ ಗೌರವಭಾವವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಸಿದ್ಧ ತಮಿಳು ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರು ರಚಿಸಿರುವ ತಿರುಕ್ಕುರಳ್ ತಮಿಳು ಸಾಹಿತ್ಯದ ಅತ್ಯಂತ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಇದು ತಲೆಮಾರುಗಳಿಂದಲೂ ಜನರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ಇದರ 1,330 ದ್ವಿಪದಿಗಳು ನೈತಿಕತೆ, ಆಡಳಿತ, ಮಾನವ ಸಂಬಂಧಗಳು, ಸಹಾನುಭೂತಿ, ಶಿಸ್ತು ಮತ್ತು ಜವಾಬ್ದಾರಿಯುತ ಜೀವನದ ಕುರಿತು ತಿಳಿಸುತ್ತವೆ. ಈ ಕೃತಿಯನ್ನು ಅರಂ (ಸದ್ಗುಣ), ಪೊರುಳ್ (ಸಂಪತ್ತು) ಮತ್ತು ಇನ್ಬಂ (ಪ್ರೀತಿ) ಎಂಬ ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಸದಾಚಾರ, ಸಾಮಾಜಿಕ ಮತ್ತು ರಾಜಕೀಯ ಜೀವನ ಹಾಗೂ ಮಾನವ ಸಂಬಂಧಗಳ ತತ್ವಗಳು ಒಳಗೊಂಡಿವೆ.
ಪ್ರತಿನಿಧಿಗಳು ಮತ್ತು ಕಾರ್ಯಕ್ರಮದ ವಿವರ
ತಮಿಳುನಾಡಿನಿಂದ ಸುಮಾರು 1,400 ಮಂದಿ ಭಾಗವಹಿಸುವವರು ತಲಾ ಸುಮಾರು 200 ಜನರಿರುವ ಏಳು ಗುಂಪುಗಳಾಗಿ ಎಂಟು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಲ್ಲಿ ನಾಲ್ಕು ದಿನಗಳ ಪ್ರಯಾಣ ಮತ್ತು ನಾಲ್ಕು ದಿನಗಳ ಭೇಟಿಗಳು ಹಾಗೂ ವ್ಯವಸ್ಥಿತ ಕಾರ್ಯಕ್ರಮಗಳು ಸೇರಿವೆ. ಈ ಪ್ರವಾಸದ ವೇಳಾಪಟ್ಟಿಯಲ್ಲಿ ವಾರಾಣಸಿ, ಪ್ರಯಾಗ್ರಾಜ್ ಮತ್ತು ಅಯೋಧ್ಯೆ ಒಳಗೊಂಡಿದ್ದು, ಸಾಂಸ್ಕೃತಿಕ, ಶೈಕ್ಷಣಿಕ, ಕ್ಷೇತ್ರವಾರು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾಗವಹಿಸುವವರು ಏಳು ವರ್ಗಗಳಿಗೆ ಸೇರಿದವರಾಗಿರುತ್ತಾರೆ:
- ವಿದ್ಯಾರ್ಥಿಗಳು
- ಶಿಕ್ಷಕರು
- ಲೇಖಕರು ಮತ್ತು ಮಾಧ್ಯಮ ವೃತ್ತಿಪರರು
- ಕೃಷಿ ಮತ್ತು ಸಂಬಂಧಿತ ವಲಯಗಳ ಪ್ರತಿನಿಧಿಗಳು
- ವೃತ್ತಿಪರರು ಮತ್ತು ಕುಶಲಕರ್ಮಿಗಳು
- ಮಹಿಳೆಯರು
- ಆಧ್ಯಾತ್ಮಿಕ ನಾಯಕರು
ವಾರಾಣಸಿಯಲ್ಲಿ ತಂಗಿರುವ ಸಂದರ್ಭದಲ್ಲಿ ಪ್ರತಿನಿಧಿಗಳು ಕಾಶಿ ವಿಶ್ವನಾಥ ದೇವಾಲಯ, ರಾಮನಗರ ಕೋಟೆ ಮತ್ತು ಭಾರತ್ ಮಾತಾ ಮಂದಿರ ಸೇರಿದಂತೆ ಪ್ರಮುಖ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಗಂಗಾ ಆರತಿ, ಗಂಗಾ ಸ್ನಾನ, ಶೈಕ್ಷಣಿಕ ಅಧಿವೇಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಪ್ರವಾಸದ ಭಾಗವಾಗಿರುತ್ತವೆ. ಬಳಿಕ ಪ್ರತಿನಿಧಿಗಳು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮ ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ವಿಶೇಷ ತಮಿಳು ಪರಂಪರೆಯ ಪ್ರವಾಸದ ಭಾಗವಾಗಿ ಪ್ರತಿನಿಧಿಗಳು ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಪೂರ್ವಜರ ಮನೆ, ಕೇದಾರ ಘಾಟ್ ಮತ್ತು ಲಿಟಲ್ ತಮಿಳುನಾಡಿನಲ್ಲಿರುವ ಕಾಶಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಬಿಎಚ್ಯುನ ತಮಿಳು ವಿಭಾಗದಲ್ಲಿ ಶೈಕ್ಷಣಿಕ ಸಂವಾದವೂ ನಡೆಯಲಿದೆ.
ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಾರ್ಯಕ್ರಮ
ವಿವಿಧ ಶೈಕ್ಷಣಿಕ ವಿಭಾಗಗಳು ಮತ್ತು ಭಾಷಾ ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ತಿರುಕ್ಕುರಳ್ ಕುರಿತು ಹೆಚ್ಚಿನ ತಿಳಿವಳಿಕೆಯನ್ನು ಬೆಳೆಸುವ ಉದ್ದೇಶದಿಂದ ದೇಶಾದ್ಯಂತ 1,000 ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ವ್ಯವಸ್ಥಿತ ಅಧ್ಯಯನ, ಸಂಶೋಧನೆ ಮತ್ತು ಕ್ಯಾಂಪಸ್ ಆಧಾರಿತ ಚಟುವಟಿಕೆಗಳು ಇರಲಿವೆ.
- ಭಾಗವಹಿಸುವ ಪ್ರತಿಯೊಂದು ಸಂಸ್ಥೆಯು ತಿರುಕ್ಕುರಳ್ ಕುರಿತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸಿ, ಅರ್ಹತೆಯ ಆಧಾರದ ಮೇಲೆ ಒಬ್ಬ ವಿದ್ಯಾರ್ಥಿಯನ್ನು ನಾಮನಿರ್ದೇಶನ ಮಾಡಲಿದೆ.
- ಆಯ್ಕೆಯಾದ ವಿದ್ಯಾರ್ಥಿಗಳು 22 ಅನುಸೂಚಿತ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ ಆಯೋಜಿಸಲಾಗುವ ಆನ್ಲೈನ್ ಶೈಕ್ಷಣಿಕ ಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ಇದರ ನಂತರ ಸಿಐಸಿಟಿ ಒದಗಿಸುವ ಬಹುಭಾಷಾ ಅಧ್ಯಯನ ಸಾಮಗ್ರಿಗಳೊಂದಿಗೆ ಒಂದು ತಿಂಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. ಕಾರ್ಯಕ್ರಮದ ಮಾರ್ಗಸೂಚಿಗಳು ಮತ್ತು ನಿಗದಿತ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಷರತ್ತಿನ ಮೇರೆಗೆ ಅರ್ಹತೆ ಪಡೆದ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಯೂ 10,000 ರೂ.ಗಳ ಶಿಷ್ಯವೇತನ ಪಡೆಯಲು ಅರ್ಹರಾಗಿರುತ್ತಾರೆ.
- ಪ್ರತಿಯೊಬ್ಬ ವಿದ್ಯಾರ್ಥಿಯೂ ಅಧ್ಯಾಪಕರ ಮಾರ್ಗದರ್ಶನದಲ್ಲಿ 4ರಿಂದ 10 ಪುಟಗಳ ಲೇಖನ ಅಥವಾ ಸಂಶೋಧನಾ ಟಿಪ್ಪಣಿಯನ್ನು ಸಿದ್ಧಪಡಿಸಬೇಕು. ಅಲ್ಲದೆ, ತಮ್ಮ ಸಂಸ್ಥೆಯಲ್ಲಿ ತಿರುಕ್ಕುರಳ್ ಕುರಿತು ಒಂದು ಗಂಟೆಯ ಪ್ರಸ್ತುತಿಯನ್ನು ನೀಡಬೇಕು.
ಉತ್ತರ ಪ್ರದೇಶದ ಶಾಲೆಗಳಲ್ಲಿ ತಿರುಕ್ಕುರಳ್ ಬೋಧನೆ
ಸಂಗಮಂ ನಡೆಯುವ ಸಂದರ್ಭದಲ್ಲಿ ತಮಿಳುನಾಡಿನ 50 ಶಿಕ್ಷಕರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಶಾಲೆಗಳಲ್ಲಿ ತಿರುಕ್ಕುರಳ್ ಬೋಧಿಸಲಿದ್ದಾರೆ. ತಮಿಳುನಾಡಿನ ತಿರುಕ್ಕುರಳ್ ತಜ್ಞರೂ ವಾರಾಣಸಿಯ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಚಯಾತ್ಮಕ ಮಾಡ್ಯೂಲ್ಗಳು, ಸಂವಾದಾತ್ಮಕ ಅಧಿವೇಶನಗಳು ಮತ್ತು ರಸಪ್ರಶ್ನೆಗಳ ಮೂಲಕ ಅವರು ವಿದ್ಯಾರ್ಥಿಗಳಿಗೆ ಈ ಕೃತಿಯ ಮೂಲ ಮೌಲ್ಯಗಳನ್ನು ಪರಿಚಯಿಸಲಿದ್ದಾರೆ.
ಶಾಲೆಗಳಲ್ಲಿ ಓದುವ ಕಾರ್ಯಕ್ರಮಗಳು
ನ್ಯಾಷನಲ್ ಪುಸ್ತಕ ಟ್ರಸ್ಟ್, ರಾಷ್ಟ್ರೀಯ ಇ-ಪುಸ್ತಕಾಲಯದ ಸಹಯೋಗದೊಂದಿಗೆ ವಾರಾಣಸಿಯ ಶಾಲೆಗಳಲ್ಲಿ ಓದುವ ಹವ್ಯಾಸ, ಕಥೆ ಹೇಳುವಿಕೆ ಮತ್ತು ಸೃಜನಾತ್ಮಕ ಚಟುವಟಿಕೆಗಳ ಕುರಿತು ಸಂವಾದಾತ್ಮಕ ಅಧಿವೇಶನಗಳನ್ನು ನಡೆಸಲಿದೆ.
ಶೈಕ್ಷಣಿಕ ಚಟುವಟಿಕೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಪ್ರಾದೇಶಿಕ ಕರಕುಶಲ ವಸ್ತುಗಳ ಪ್ರದರ್ಶನಗಳು
ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಭಾರತೀಯ ಭಾಷಾ ಸಮಿತಿಯ ಸಹಭಾಗಿತ್ವದಲ್ಲಿ ತಿರುಕ್ಕುರಳ್ ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಿದೆ. ತಿರುಕ್ಕುರಳ್ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಿರುಚಿತ್ರಗಳ ಪ್ರದರ್ಶನಗಳನ್ನೂ ಏರ್ಪಡಿಸಲಾಗುವುದು. ಮುಖ್ಯ ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿನಿಧಿಗಳಿಗಾಗಿ ತಮಿಳುನಾಡು ಮತ್ತು ಉತ್ತರ ಪ್ರದೇಶದ ಕರಕುಶಲ ವಸ್ತುಗಳು ಹಾಗೂ ಕೈಮಗ್ಗ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಲಾಗುವುದು.
ಡಿಜಿಟಲ್ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು
ಕಾಶಿ ತಮಿಳು ಸಂಗಮಂ 5.0, ತಿರುಕ್ಕುರಳ್ನ ಬೋಧನೆಗಳನ್ನು ಭಾರತದಾದ್ಯಂತ ಹೆಚ್ಚಿನ ಜನರಿಗೆ ತಲುಪಿಸಲು ತಂತ್ರಜ್ಞಾನವನ್ನೂ ಬಳಸಿಕೊಳ್ಳಲಿದೆ. ಸಿಐಸಿಟಿಯ ಬಹುಭಾಷಾ ತಿರುಕ್ಕುರಳ್ ಆ್ಯಪ್ನಲ್ಲಿ 1,330 ದ್ವಿಪದಿಗಳನ್ನೂ 22 ಅನುಸೂಚಿತ ಭಾಷೆಗಳಲ್ಲಿನ ಅನುವಾದಗಳೊಂದಿಗೆ ಒದಗಿಸಲಾಗಿದೆ. ಈ ಆವೃತ್ತಿಗಾಗಿ ಸಿಐಸಿಟಿ ಹಮ್ಮಿಕೊಂಡಿರುವ ಕಾರ್ಯಕ್ರಮವುಲ್ಲಿ ಆಯ್ದ ದ್ವಿಪದಿಗಳ ಕುರಿತ ಕಿರು ಅನಿಮೇಟೆಡ್ ವೀಡಿಯೊಗಳು ಮತ್ತು ಚಲನಚಿತ್ರಗಳು ಹಾಗೂ ತಿರುಕ್ಕುರಳ್ ಆಡಿಯೊ ಪುಸ್ತಕಗಳನ್ನು ಒಳಗೊಂಡಿದೆ.
ಹೆಚ್ಚಿನ ವಿವರಗಳು ಮತ್ತು ಭಾಗವಹಿಸುವಿಕೆಗಾಗಿ ಭೇಟಿ ನೀಡಿ:
ತಿರುಕ್ಕುರಳ್ ಕುರಿತ MyGov ರಸಪ್ರಶ್ನೆಯಲ್ಲಿ ಭಾಗವಹಿಸಿ:
*****