ಪ್ರಕಟಣಾ ದಿನಾಂಕ:
26 NOV 2026 4:31PM by PIB Bengaluru
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸಕಾಂಗ ಇಲಾಖೆಯು ಸಂವಿಧಾನ ದಿನ 2026ರ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಭಾರತದ ಸಂವಿಧಾನದ ಪರಿಷ್ಕೃತ ಆವೃತ್ತಿಯನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಯಿತು. ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಹಾಗೂ ಶಾಸಕಾಂಗ ಇಲಾಖೆ ಮತ್ತು ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಮಣಿ ಅವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನದ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಉಪರಾಷ್ಟ್ರಪತಿ ಮತ್ತು ಸಚಿವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಉಪಕ್ರಮದ ಮಹತ್ವವನ್ನು ಸಾರುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಸಂವಿಧಾನವು ಕೇವಲ ಒಂದು ಪ್ರಕಟಣೆಯಲ್ಲ; ಅದು ಭಾರತದ ಜನರ ಹೋರಾಟ, ಸಮರ್ಪಣೆ, ಸಾಂಸ್ಕೃತಿಕ ಪರಂಪರೆ, ಭಾಷಾ ಹೆಮ್ಮೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ನಿರಂತರ ಸಂಕೇತವಾಗಿದೆ ಎಂಬುದನ್ನು ಈ ಚಿತ್ರ ಬಿಂಬಿಸಿತು. ಅಲ್ಲದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಭರವಸೆ ನೀಡುವ ಮಹತ್ವದ ದಾಖಲೆಯಾಗಿ ಸಂವಿಧಾನವನ್ನು ಪರಿಚಯಿಸಿತು.
ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರು ಕನಸು ಕಂಡಿದ್ದ ಎಲ್ಲರನ್ನೂ ಒಳಗೊಳ್ಳುವ, ಸಮಾನತೆ ಮತ್ತು ನ್ಯಾಯವನ್ನು ಆಧರಿಸಿದ ಭಾರತದ ಪರಿಕಲ್ಪನೆಯನ್ನು ಈ ಚಿತ್ರ ಸ್ಮರಿಸಿತು. ಆ ಆಶಯವನ್ನು ಸಾಕಾರಗೊಳಿಸುವಲ್ಲಿ ಭಾರತೀಯ ಭಾಷೆಗಳು ವಹಿಸುವ ಮಹತ್ವದ ಪಾತ್ರವನ್ನೂ ಒತ್ತಿಹೇಳಿತು. ಗ್ರಾಮೀಣ ಪ್ರದೇಶಗಳ ಜನರು, ಬುಡಕಟ್ಟು ಸಮುದಾಯಗಳು ಮತ್ತು ಯುವಜನರಿಗೆ ಸಂವಿಧಾನವನ್ನು ಇನ್ನಷ್ಟು ಹತ್ತಿರವಾಗಿಸುವಲ್ಲಿ ಈ ಉಪಕ್ರಮ ನೆರವಾಗಲಿದೆ ಎಂಬುದನ್ನೂ ವಿವರಿಸಿತು. ಸಂವಿಧಾನವು ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಮಾತ್ರ ಸೀಮಿತವಾಗದೆ, ಪ್ರತಿಯೊಂದು ಹಳ್ಳಿ, ಪ್ರತಿಯೊಂದು ಮನೆ, ಪ್ರತಿಯೊಂದು ಶಾಲೆ ಮತ್ತು ಪ್ರತಿಯೊಬ್ಬ ನಾಗರಿಕನನ್ನೂ ತಲುಪಬೇಕು ಎಂಬ ಸಂಕಲ್ಪದೊಂದಿಗೆ ಕಿರುಚಿತ್ರ ಮುಕ್ತಾಯಗೊಂಡಿತು.

ಬಳಿಕ ಉಪರಾಷ್ಟ್ರಪತಿಯವರು ಭಾರತದ ಸಂವಿಧಾನದ ಪರಿಷ್ಕೃತ ಆವೃತ್ತಿಯನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿಯೂ ಬಿಡುಗಡೆ ಮಾಡಿದರು. ಸಾಂವಿಧಾನಿಕ ಅರಿವನ್ನು ಉತ್ತೇಜಿಸುವ ಹಾಗೂ ವಿವಿಧ ಭಾಷಾ ಹಿನ್ನೆಲೆಯ ನಾಗರಿಕರಿಗೆ ದೇಶದ ಪರಮೋಚ್ಚ ಕಾನೂನನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ತಮ್ಮ ವಿಶೇಷ ಭಾಷಣದಲ್ಲಿ ಉಪರಾಷ್ಟ್ರಪತಿಯವರು ಸಂವಿಧಾನದ ಶಾಶ್ವತ ಮಹತ್ವ ಹಾಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಅದು ವಹಿಸುವ ಪಾತ್ರವನ್ನು ಒತ್ತಿಹೇಳಿದರು. ಸಾಂವಿಧಾನಿಕ ಜ್ಞಾನವು ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು, ಸಂವಿಧಾನ ರಚನಾ ಸಭೆಯ ಸದಸ್ಯರೂ ಹಾಗೂ ಕರಡು ಸಮಿತಿಯ ಅಧ್ಯಕ್ಷರೂ ಆಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸ್ತಂಭಗಳ ಮೇಲೆ ನಿಂತಿರುವ ದೂರದೃಷ್ಟಿಯ ಸಂವಿಧಾನವನ್ನು ದೇಶಕ್ಕೆ ನೀಡುವಲ್ಲಿ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿದರು. ಸಂವಿಧಾನವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಡಿಪಾಯವಾಗಿದೆ ಎಂದು ಬಣ್ಣಿಸಿದ ಅವರು, ನಾಗರಿಕರಲ್ಲಿ ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಅದನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಡಾ. ರಾಜೀವ್ ಮಣಿ ಅವರು ಸ್ವಾಗತ ಭಾಷಣ ಮಾಡಿದರು. ಸಂವಿಧಾನ ದಿನದ ಮಹತ್ವ ಹಾಗೂ ಸಂವಿಧಾನ ಮತ್ತು ಇತರ ಕಾನೂನುಗಳನ್ನು ನಾಗರಿಕರಿಗೆ ಅವರವರ ಭಾಷೆಗಳಲ್ಲಿಯೇ ಲಭ್ಯವಾಗುವಂತೆ ಮಾಡಲು ಇಲಾಖೆ ಕೈಗೊಂಡಿರುವ ಪ್ರಯತ್ನಗಳ ಕುರಿತು ಅವರು ವಿವರಿಸಿದರು. ಈ ಮಹತ್ವದ ಸಂದರ್ಭವನ್ನು ಸಾಧ್ಯವಾಗಿಸಲು ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಅವರು, ಸಂವಿಧಾನ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಅದರ ಪರಿಷ್ಕೃತ ಆವೃತ್ತಿಯು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ ಎಲ್ಲ 22 ಭಾಷೆಗಳಲ್ಲಿಯೂ ಲಭ್ಯವಾಗುತ್ತಿರುವುದನ್ನು ವಿಶೇಷವಾಗಿ ಉಲ್ಲೇಖಿಸಿದರು.
ಭಾರತದ ಸಂವಿಧಾನದ ಪರಿಷ್ಕೃತ ಆವೃತ್ತಿಯನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿಯೂ ಬಿಡುಗಡೆ ಮಾಡಿರುವುದು, ಸಾಂವಿಧಾನಿಕ ಜ್ಞಾನವು ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ಮಾಡುವ, ಸಾಂವಿಧಾನಿಕ ಸಾಕ್ಷರತೆಯನ್ನು ಬಲಪಡಿಸುವ ಹಾಗೂ ಸಂವಿಧಾನದ ಆದರ್ಶಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ಹತ್ತಿರವಾಗಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****