ಪ್ರಕಟಣಾ ದಿನಾಂಕ:
25 NOV 2026 6:26PM by PIB Bengaluru
ಸಂವಿಧಾನ ಸಭೆಯು 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥ 2026ರ ನವೆಂಬರ್ 26ರಂದು 'ಸಂವಿಧಾನ ದಿನ' ಆಚರಿಸಲಾಗುತ್ತದೆ. ಭಾರತದ ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ, 2015ನೇ ಇಸವಿಯಿಂದ ಈ ದಿನವನ್ನು 'ಸಂವಿಧಾನ ದಿನ'ವನ್ನಾಗಿ ಆಚರಿಸಲಾಗುತ್ತಿದೆ.
ಈ ಆಚರಣೆಗಳ ಭಾಗವಾಗಿ, ಸಂಸದೀಯ ವ್ಯವಹಾರಗಳ ಸಚಿವಾಲಯವು ‘ಮೈಗೌ’ ಪೋರ್ಟಲ್ ಮೂಲಕ, ಸಂವಿಧಾನದ ಪೀಠಿಕೆಯನ್ನು 23 ಭಾಷೆಗಳಲ್ಲಿ (22 ಅನುಸೂಚಿತ ಭಾಷೆಗಳು ಮತ್ತು ಇಂಗ್ಲಿಷ್) ಆನ್ಲೈನ್ ನಲ್ಲಿ ಓದುವ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಉಪಕ್ರಮವು ದೇಶಾದ್ಯಂತದ ನಾಗರಿಕರು ಪೀಠಿಕೆಯನ್ನು ಓದಲು ಹಾಗೂ ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳು ಮತ್ತು ಮೌಲ್ಯಗಳ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಅವಕಾಶ ಕಲ್ಪಿಸಿದೆ.
ಸಾರ್ವಜನಿಕರು, ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳು ಈ ಕೆಳಗಿನ ವೇದಿಕೆಯ ಮೂಲಕ ಈ ಉಪಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗಿದೆ.
ಮೈಗೌ: https://pledge.mygov.in/constitution-day-2026/ , ಪ್ರಸ್ತಾವನೆಯನ್ನು ಓದಿ, ಪ್ರಮಾಣಪತ್ರವನ್ನು ಪಡೆಯಿರಿ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.
ಯುವಜನರ ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸಲು, 2026ರ ನವೆಂಬರ್ 18ರಿಂದ 26ರವರೆಗೆ ‘ಮೈಗೌ' ಮತ್ತು ‘ಮೈಭಾರತ್’ ಪೋರ್ಟಲ್ಗಳ ಮೂಲಕ 'ಸಂವಿಧಾನ ರಸಪ್ರಶ್ನೆ'ಯನ್ನು ಆಯೋಜಿಸಲಾಗಿದೆ. ಹಾಗೆಯೇ, 2026ರ ನವೆಂಬರ್ 24ರಿಂದ 26ರವರೆಗೆ ದೇಶದ ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 786 ಜಿಲ್ಲೆಗಳಲ್ಲಿ 'ವಿಕಸಿತ ಭಾರತ ಯುವ ಸಂವಾದ' ಏರ್ಪಾಡಾಗಿದೆ.
ಈ ದಿನಾಚರಣೆ ಪ್ರಯುಕ್ತ, ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹಾಗೂ ಅವುಗಳ ಅಧೀನದಲ್ಲಿರುವ ಕ್ಷೇತ್ರ ಘಟಕಗಳು, ಸಂಪರ್ಕಿತ ಮತ್ತು ಅಧೀನ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ವತಿಯಿಂದ ದೇಶಾದ್ಯಂತ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸಂವಿಧಾನ ಪೀಠಿಕೆಯ ಸಾಮೂಹಿಕ ಪಠಣ, ವಿಚಾರ ಸಂಕಿರಣಗಳು, ವೆಬಿನಾರ್ ಗಳು, ರಸಪ್ರಶ್ನೆಗಳು, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು, ಪೋಸ್ಟರ್ ತಯಾರಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು, ನಡಿಗೆ, ಓಟ ಮತ್ತಿತರ ಸಮುದಾಯ ಪಾಲ್ಗೊಳ್ಳುವಿಕೆಯ ಚಟುವಟಿಕೆಗಳು ಈ ಪೈಕಿ ಸೇರಿವೆ.
ಸಂವಿಧಾನದ ರಚನೆ ಮತ್ತು ಅದರ ಪ್ರಮುಖ ಗುಣಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಲು, ವಿಶೇಷ ಬೆಳಗಿನ ಸಭೆಗಳು, ಚರ್ಚೆಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲು ಶಿಕ್ಷಣ ಸಂಸ್ಥೆಗಳನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ.
ನಾಗರಿಕರು, ಯುವಜನರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ, ಈ ಸಂಭ್ರಮಾಚರಣೆಗಳನ್ನು ತಳಮಟ್ಟದವರೆಗೂ ವಿಸ್ತರಿಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಸಂವಿಧಾನ ಮತ್ತು ಅದರ ಮಹತ್ವದ ಬಗೆಗಿನ ಅರಿವನ್ನು ಉತ್ತೇಜಿಸಲು ಡಿಜಿಟಲ್ ವೇದಿಕೆಗಳು ಮತ್ತು ಸಮುದಾಯ ಆಧಾರಿತ ಉಪಕ್ರಮಗಳ ಮೂಲಕ ವಿವಿಧ ಜಾಗೃತಿ ಮತ್ತು ಪ್ರಚಾರ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.
ಸಂವಿಧಾನ ದಿನವು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸಲು ಮತ್ತು ಅದರ ಆದರ್ಶಗಳಿಗೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರ್ ದೃಢೀಕರಿಸಲು ಒಂದು ಅವಕಾಶ ಒದಗಿಸಿದೆ. ರಾಷ್ಟ್ರದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವುದು, ಸಂವಿಧಾನದ ಅರಿವನ್ನು ಬಲಪಡಿಸುವುದು ಮತ್ತು ಜವಾಬ್ದಾರಿಯುತ ಪೌರತ್ವವನ್ನು ಉತ್ತೇಜಿಸುವುದು ಈ ದಿನದ ಆಶಯವಾಗಿದೆ.
ನಾಗರಿಕರು, ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿಗಳು ಸಂವಿಧಾನದ ದಿನದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಲು ಮತ್ತು ಭಾರತದ ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಒಟ್ಟುಗೂಡಲು ಹುರಿದುಂಬಿಸಲಾಗುತ್ತಿದೆ.
*****