ಸಂವಹನ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ ದೂರಸಂಪರ್ಕ ನವೋದ್ಯಮಗಳು ಮತ್ತು ಎಂಎಸ್‌ಎಂಇಗಳ ಸಮಾವೇಶ 2026: ದೇಶೀಯ ದೂರಸಂಪರ್ಕ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬಲಪಡಿಸಲು ಕರೆ


ಕಳೆದ ಒಂದು ದಶಕದಲ್ಲಿ ಭಾರತವು ತಂತ್ರಜ್ಞಾನದ ಗ್ರಾಹಕ ರಾಷ್ಟ್ರದಿಂದ ತಂತ್ರಜ್ಞಾನವನ್ನು ಸೃಷ್ಟಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದಕ್ಕೆ ದೂರಸಂಪರ್ಕ ಕ್ಷೇತ್ರವೇ ಅತ್ಯಂತ ಪ್ರಬಲ ಉದಾಹರಣೆಯಾಗಿದೆ: ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ

ದೇಶೀಯ ದೂರಸಂಪರ್ಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ತ್ವರಿತಗೊಳಿಸಲು ನವೋದ್ಯಮಗಳು, ಎಂಎಸ್‌ಎಂಇಗಳು, ಹೂಡಿಕೆದಾರರು ಮತ್ತು ಉದ್ಯಮ ವಲಯದ ನಾಯಕರನ್ನು ಒಂದೇ ವೇದಿಕೆಗೆ ತಂದ ಸಮಾವೇಶ

ದೇಶೀಯ ದೂರಸಂಪರ್ಕ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ ದೂರಸಂಪರ್ಕ ಇಲಾಖೆ

ಪ್ರಕಟಣಾ ದಿನಾಂಕ: 24 NOV 2026 5:12PM by PIB Bengaluru

ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು ನವದೆಹಲಿಯ ಭಾರತ್ ಮಂಟಪಂನ ಲೀಡರ್ಸ್ ಲೌಂಜ್‌ನಲ್ಲಿ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆ ಆಯೋಜಿಸಿದ್ದ ದೂರಸಂಪರ್ಕ ನವೋದ್ಯಮಗಳು ಮತ್ತು ಎಂಎಸ್‌ಎಂಇಗಳ ಸಮಾವೇಶ 2026ರ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ದೂರಸಂಪರ್ಕ ನಾವೀನ್ಯತೆಯನ್ನು ಬಲಪಡಿಸುವುದು, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಹಾಗೂ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕೆ ಅನುಕೂಲ ಕಲ್ಪಿಸುವ ಸರ್ಕಾರದ ಬದ್ಧತೆಯನ್ನು ಈ ಸಮಾವೇಶವು ಪುನರುಚ್ಚರಿಸಿತು.

ದೂರಸಂಪರ್ಕ ಕ್ಷೇತ್ರದ ನವೋದ್ಯಮಗಳು, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು), ಉದ್ಯಮ ವಲಯದ ನಾಯಕರು, ಹೂಡಿಕೆದಾರರು, ಶೈಕ್ಷಣಿಕ ವಲಯದ ಪ್ರತಿನಿಧಿಗಳು ಹಾಗೂ ಸರ್ಕಾರಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಒಂದೇ ವೇದಿಕೆಯಲ್ಲಿ ಒಗ್ಗೂಡಿದರು. ದೇಶೀಯ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸುವುದು, ದೇಶೀಯ ನಾವೀನ್ಯಕಾರರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸುವುದು ಹಾಗೂ ಭಾರತೀಯ ದೂರಸಂಪರ್ಕ ತಂತ್ರಜ್ಞಾನಗಳನ್ನು ಇನ್ನಷ್ಟು ವಿಸ್ತರಿಸುವ ಅವಕಾಶಗಳನ್ನು ಅನ್ವೇಷಿಸುವುದು ಈ ಸಮಾವೇಶದ ಉದ್ದೇಶವಾಗಿತ್ತು.

ನೀತಿ ಆಯೋಗದ ಡಿಸ್ಟಿಂಗ್ವಿಸ್ಡ್‌ ಫೆಲೋ ಹಾಗೂ ನೀತಿ ಫ್ರಾಂಟಿಯರ್ ಟೆಕ್ ಹಬ್‌ನ ಮುಖ್ಯ ವಾಸ್ತುಶಿಲ್ಪಿ ಶ್ರೀಮತಿ ದೇಬ್ಜಾನಿ ಘೋಷ್ ಅವರು ಸಮಾವೇಶದ ಅಧಿವೇಶನದಲ್ಲಿ ಮುಖ್ಯ ಭಾಷಣ ಮಾಡಿದರು. ನಾವೀನ್ಯತೆಯನ್ನು ಪೋಷಿಸುವುದು, ವಿವಿಧ ಪಾಲುದಾರರ ನಡುವಿನ ಸಹಯೋಗವನ್ನು ಬಲಪಡಿಸುವುದು ಹಾಗೂ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಗೆ ಪೂರಕವಾದ ವ್ಯವಸ್ಥೆಯನ್ನು ರೂಪಿಸುವ ಮಹತ್ವವನ್ನು ಅವರು ತಮ್ಮ ಭಾಷಣದಲ್ಲಿ ಒತ್ತಿಹೇಳಿದರು.

ದೂರಸಂಪರ್ಕ ತಂತ್ರಜ್ಞಾನ ವ್ಯವಸ್ಥೆಯ ಐದು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಾದ ರೇಡಿಯೊ ಆಕ್ಸೆಸ್ ನೆಟ್‌ವರ್ಕ್ (ಆರ್‌ಎಎನ್) ಮತ್ತು ಕೋರ್, ಅಪ್ಲಿಕೇಷನ್‌ಗಳು, ಚಿಪ್‌ಸೆಟ್‌ಗಳು, ಭದ್ರತೆ ಮತ್ತು ಮಾನದಂಡಗಳಿಗೆ ಸಂಬಂಧಿಸಿದಂತೆ ಈ ಸಮಾವೇಶದಲ್ಲಿ ಪ್ರಾತ್ಯಕ್ಷಿಕೆಗಳು ಹಾಗೂ ಚರ್ಚೆಗಳು ನಡೆದವು. ಪ್ರತಿಯೊಂದು ವಿಷಯಾಧಾರಿತ ಗುಂಪಿನಲ್ಲೂ ಸಂಬಂಧಪಟ್ಟ ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿ, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಗೆ ಬೆಂಬಲ ನೀಡಲು ಹಾಗೂ ಒಟ್ಟಾರೆ ದೂರಸಂಪರ್ಕ ನಾವೀನ್ಯತಾ ವ್ಯವಸ್ಥೆಯನ್ನು ಬಲಪಡಿಸಲು ಇಲಾಖೆ ಕೈಗೊಳ್ಳುತ್ತಿರುವ ವಿವಿಧ ಸರ್ಕಾರಿ ಉಪಕ್ರಮಗಳು, ನೀತಿ ಕ್ರಮಗಳು ಮತ್ತು ಪೂರಕ ಚೌಕಟ್ಟುಗಳ ಕುರಿತು ಮಾಹಿತಿ ನೀಡಿದರು. ಇದರ ಜೊತೆಗೆ, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳು ಸ್ಥಾಪಿಸಿದ್ದ 11 ಪ್ರದರ್ಶನ ಮಳಿಗೆಗಳೂ ಸಮಾವೇಶದ ಭಾಗವಾಗಿದ್ದವು. ನೀತಿ ನಿರೂಪಕರು, ಉದ್ಯಮ ವಲಯದ ನಾಯಕರು, ಹೂಡಿಕೆದಾರರು ಮತ್ತು ಇತರ ಪಾಲುದಾರರ ಮುಂದೆ ತಮ್ಮ ನವೀನ ದೇಶೀಯ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲು ಈ ಮಳಿಗೆಗಳು ಅವಕಾಶ ಕಲ್ಪಿಸಿದವು.

ಕೇಂದ್ರ ಸಚಿವರು ಟಿಸಿಒಇ ಇಂಡಿಯಾ ಆಯೋಜಿಸಿದ್ದ ಉದಯೋನ್ಮುಖ ತಂತ್ರಜ್ಞಾನಗಳ ಹ್ಯಾಕಥಾನ್ 2026 (ETH 2026) ವಿಜೇತರನ್ನು ಸನ್ಮಾನಿಸಿದರು. ಈ ಹ್ಯಾಕಥಾನ್‌ಗೆ ಒಂಬತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ 2,870ಕ್ಕೂ ಹೆಚ್ಚು ನೋಂದಣಿಗಳು ಮತ್ತು 620 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿದ್ಯಾರ್ಥಿಗಳು, ನವೋದ್ಯಮಗಳು, ಕಂಪನಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದವು. ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ ವಿಜೇತರಿಗೆ ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ದೇಶೀಯ ವಿನ್ಯಾಸದ ಟೈರ್-ಪ್ರೆಷರ್ ಸೆನ್ಸರ್ ಸಿಸ್ಟಮ್-ಆನ್-ಚಿಪ್ ಆದ VAAYUಗಾಗಿ ಎಂಟ್ರಾ ಇನ್ನೋವೇಶನ್ಸ್ ಎಲ್ಎಲ್‌ಪಿ ಮೊದಲ ಬಹುಮಾನವನ್ನು ಪಡೆಯಿತು; ಆಪ್ಟಿಕಲ್ ಪ್ಯಾಚ್ ಪ್ಯಾನೆಲ್‌ಗಳ ಮೂಲಕ ಫೈಬರ್ ಸಂಪರ್ಕಗಳನ್ನು ದೂರದಿಂದಲೇ ಒದಗಿಸಲು ನೆರವಾಗುವ ರೊಬೊಟಿಕ್ ಪರಿಹಾರವಾದ ಕೇಬಲ್‌ಸ್ಮಿತ್‌ಗಾಗಿ ಡಾನಿಯನ್ಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದ್ವಿತೀಯ ಬಹುಮಾನ ಪಡೆಯಿತು. ಖಾಸಗಿ 5ಜಿ ನೆಟ್‌ವರ್ಕ್‌ಗಳಿಗಾಗಿ ಭದ್ರತಾ ಎಂಜಿನ್ ಆಗಿರುವ ಕವಚ್ ಪರಿಹಾರಕ್ಕಾಗಿ ಐಐಟಿ ಬಾಂಬೆ (ಟೀಮ್‌ ದೃಷ್ಟಿ) ಮತ್ತು ಡ್ರೋನ್‌ಗಳಿಗಾಗಿ ಜ್ಯಾಮಿಂಗ್ ದಾಳಿಗಳನ್ನು ತಡೆಯುವ ಸಂವಹನ ಪರಿಹಾರವಾದ ವಜ್ರಲಿಂಕ್‌ಗಾಗಿ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ (ಟೀಮ್‌ ರುದ್ರ) ಜಂಟಿಯಾಗಿ ತೃತೀಯ ಬಹುಮಾನ ಗಳಿಸಿದವು.

ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಕಳೆದ ಒಂದು ದಶಕದಲ್ಲಿ ಭಾರತದ ಉದ್ಯಮಶೀಲತಾ ಶಕ್ತಿಯು ಮತ್ತೆ ಪುಟಿದೆದ್ದಿರುವುದನ್ನು ಇಂದು ಕಣ್ತುಂಬಿಕೊಳ್ಳುತ್ತಿರುವುದು ಅತ್ಯಂತ ಉತ್ಸಾಹದ ಅನುಭವವಾಗಿದೆ” ಎಂದು ಹೇಳಿದರು. ನಮ್ಮ ದೇಶವು ಯಾವಾಗಲೂ ನಾವೀನ್ಯತೆ, ತಂತ್ರಜ್ಞಾನ, ವಿಜ್ಞಾನ ಮತ್ತು ಉದ್ಯಮಶೀಲತೆಯ ತವರೂರಾಗಿದೆ. ಸಾವಿರಾರು ವರ್ಷಗಳಿಂದ ಮಾನವಕುಲದ ಪ್ರಗತಿಗೆ ಭಾರತ ಕೊಡುಗೆ ನೀಡುತ್ತಾ ಬಂದಿದೆ. ಕಳೆದ ಒಂದು ದಶಕದಲ್ಲಿ ಭಾರತವು ತಂತ್ರಜ್ಞಾನದ ಗ್ರಾಹಕದಿಂದ ತಂತ್ರಜ್ಞಾನವನ್ನು ಸೃಷ್ಟಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇಂದು ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಮತ್ತು ಮಾರುಕಟ್ಟೆಯಾಗಿ ಬೆಳೆದಿದೆ. 2014ರಲ್ಲಿ ಕೆಲವು ನೂರು ನವೋದ್ಯಮಗಳನ್ನು ಹೊಂದಿದ್ದ ನಮ್ಮ ದೇಶದಲ್ಲಿ ಈಗ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳಿವೆ. ಗೌರವಾನ್ವಿತ ಪ್ರಧಾನಮಂತ್ರಿಯವರು ಕೈಗೊಂಡ ಹಲವು ತ್ವರಿತ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಅವರುಹೇಳಿದರು.

“ಭಾರತವು ತಂತ್ರಜ್ಞಾನವನ್ನು ಸೃಷ್ಟಿಸುವ ರಾಷ್ಟ್ರವಾಗಿ ಹೊರಹೊಮ್ಮಿರುವುದಕ್ಕೆ ದೂರಸಂಪರ್ಕ ಕ್ಷೇತ್ರವೇ ಅತ್ಯಂತ ಪ್ರಬಲ ಉದಾಹರಣೆಯಾಗಿದೆ. ತಂತ್ರಜ್ಞಾನವನ್ನು ಪರೀಕ್ಷಿಸುವ ಸಾಮರ್ಥ್ಯ ಮತ್ತು ಪ್ರಮಾಣದಲ್ಲಿನ ಬೆಳವಣಿಗೆಯೇ ಇದಕ್ಕೆ ಸಾಕ್ಷಿ. ಒಂದು ಕಾಲದಲ್ಲಿ ಕೇವಲ 25 ಕೋಟಿ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿದ್ದ ನಮ್ಮ ದೇಶದಲ್ಲಿ ಇಂದು 110 ಕೋಟಿ ಇಂಟರ್ನೆಟ್ ಸಂಪರ್ಕಗಳಿವೆ. ಬ್ರಾಡ್‌ಬ್ಯಾಂಡ್ ಸಂಪರ್ಕಗಳ ಸಂಖ್ಯೆ 6 ಕೋಟಿಯಿಂದ 104 ಕೋಟಿಗೆ ಏರಿಕೆಯಾಗಿದೆ. ಎರಡಂಕಿಯ ಬೆಳವಣಿಗೆ ದರದಲ್ಲಿ ಮುನ್ನಡೆಯುತ್ತಿರುವ ವಿಶ್ವದ ಏಕೈಕ ದೂರಸಂಪರ್ಕ ಜಾಲ ಮಾರುಕಟ್ಟೆ ನಮ್ಮದಾಗಿದೆ” ಎಂದು ಸಚಿವರು ಹೇಳಿದರು.

ದೇಶೀಯ ದೂರಸಂಪರ್ಕ ನಾವೀನ್ಯತಾ ವ್ಯವಸ್ಥೆಯನ್ನು ಬಲಪಡಿಸಲು ದೂರಸಂಪರ್ಕ ಇಲಾಖೆಯು ಹಲವು ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಟಿಡಿಎಫ್‌), ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನ ಯೋಜನೆ (ಟಿಡಿಐಪಿ) ಹಾಗೂ 100 5ಜಿ ಯೂಸ್ ಕೇಸ್ ಲ್ಯಾಬ್‌ಗಳು ಸೇರಿವೆ. ಈ ಉಪಕ್ರಮಗಳು ಸಂಶೋಧನೆ ಮತ್ತು ಅಭಿವೃದ್ಧಿ, ಜಾಗತಿಕ ಮಾನದಂಡಗಳ ರೂಪಿಸುವಿಕೆ, ಉತ್ಪನ್ನಗಳ ಮೌಲ್ಯಮಾಪನ ಮತ್ತು ಅನುಷ್ಠಾನಕ್ಕೆ ಬೆಂಬಲ ನೀಡುತ್ತವೆ. ಈ ಉಪಕ್ರಮಗಳಿಗೆ ಪೂರಕವಾಗಿ, ದೂರಸಂಪರ್ಕ ಕಾಯಿದೆ, 2023ರ ಅಡಿಯಲ್ಲಿ ಕ್ಯಾಪ್ಟಿವ್ ನಾನ್-ಪಬ್ಲಿಕ್ ನೆಟ್‌ವರ್ಕ್‌ಗಳು (ಸಿಎನ್‌ಪಿಎನ್‌) ಮತ್ತು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಚೌಕಟ್ಟುಗಳು, ಎಂಟರ್‌ಪ್ರೈಸ್ ನೆಟ್‌ವರ್ಕ್‌ಗಳು ಮತ್ತು ನವೀನ ಟೆಲಿಕಾಂ ತಂತ್ರಜ್ಞಾನಗಳ ನೇರ ಪರೀಕ್ಷೆಗೆ ಪೂರಕವಾದ ನೀತಿ ವಾತಾವರಣವನ್ನು ಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಸಮಾವೇಶದಲ್ಲಿ ಕ್ಯಾಪ್ಟಿವ್ ಟೆಲಿಕಮ್ಯುನಿಕೇಷನ್ ಸರ್ವೀಸಸ್ ಮತ್ತು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಕುರಿತು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಈ ಅಧಿವೇಶನಗಳಲ್ಲಿ ದೂರಸಂಪರ್ಕ ಇಲಾಖೆಯ ಪ್ರತಿನಿಧಿಗಳು ಸಂಬಂಧಪಟ್ಟ ನಿಯಂತ್ರಕ ಚೌಕಟ್ಟುಗಳು ಮತ್ತು ಅವುಗಳಲ್ಲಿನ ನಿಬಂಧನೆಗಳ ಕುರಿತು ಭಾಗವಹಿಸಿದವರಿಗೆ ಮಾಹಿತಿ ನೀಡಿದರು. ಎರಿಕ್ಸನ್ ಸಂಸ್ಥೆಯು ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಜಾಗತಿಕ ದೃಷ್ಟಿಕೋನಗಳು ಮತ್ತು ಉದ್ಯಮ ವಲಯದ ಅನುಭವಗಳನ್ನು ಹಂಚಿಕೊಂಡಿತು. ಈ ಅಧಿವೇಶನಗಳು ಬಳಕೆದಾರ ಸಂಸ್ಥೆಗಳು, ಉದ್ಯಮ ಪ್ರತಿನಿಧಿಗಳು, ನವೋದ್ಯಮಗಳು ಮತ್ತು ಇತರ ಪಾಲುದಾರರ ನಡುವೆ ಸಂವಾದಕ್ಕೂ ವೇದಿಕೆಯಾದವು. ಈ ಚೌಕಟ್ಟುಗಳಿಂದ ಉದ್ಭವಿಸುವ ಸಂಭಾವ್ಯ ಬಳಕೆಗಳು, ಅನುಷ್ಠಾನದ ಅಗತ್ಯತೆಗಳು ಮತ್ತು ಅವಕಾಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಇದು ನೆರವಾಯಿತು.

ನವೋದ್ಯಮಗಳು, ಎಂಎಸ್‌ಎಂಇಗಳು, ಶೈಕ್ಷಣಿಕ ವಲಯ, ಹೂಡಿಕೆದಾರರು ಮತ್ತು ಉದ್ಯಮ ವಲಯದ ನಡುವಿನ ಸಹಯೋಗವನ್ನು ಉತ್ತೇಜಿಸುವುದು, ದೇಶೀಯ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವುದು ಹಾಗೂ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಪೂರಕ ವಾತಾವರಣವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಈ ಸಮಾವೇಶದ ಮೂಲಕ ದೂರಸಂಪರ್ಕ ಇಲಾಖೆಯು ಪುನರುಚ್ಚರಿಸಿತು. ಇದು ವಿಕಸಿತ ಭಾರತ@2047ರ ದೂರದೃಷ್ಟಿಗೆ ಅನುಗುಣವಾಗಿದೆ.

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa

 

*****

 

 


(ಪ್ರಕಟಣೆ ಐ.ಡಿ.: 2340877) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati