ಪ್ರಕಟಣಾ ದಿನಾಂಕ:
19 NOV 2026 4:54PM by PIB Bengaluru
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು, ಭಾರತ ಮತ್ತು ಅಮೆರಿಕದ ನಡುವಿನ ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ತಾಂತ್ರಿಕ ಸಹಕಾರವನ್ನು ವಿಸ್ತರಿಸಲು ಬಲವಾದ ಅಡಿಪಾಯವನ್ನು ಒದಗಿಸುತ್ತವೆ ಎಂದು ಪ್ರತಿಪಾದಿಸಿದರು. ಪ್ರಜಾಸತ್ತಾತ್ಮಕ ಸಂಸ್ಥೆಗಳು, ಸ್ಥಿರ ನೀತಿಗಳು, ಸ್ವತಂತ್ರ ನ್ಯಾಯಾಂಗ ಮತ್ತು ಪಾಲುದಾರರೊಂದಿಗೆ ನಿರಂತರ ಸಂವಾದ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುತ್ತವೆ ಹಾಗೂ ಆರ್ಥಿಕ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
23ನೇ ಇಂಡೋ-ಯುಎಸ್ ಆರ್ಥಿಕ ಶೃಂಗಸಭೆ 2026 ನ್ನು ಉದ್ದೇಶಿಸಿ ಶ್ರೀ ಬಿರ್ಲಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಭಾರತ ಮತ್ತು ಅಮೆರಿಕವನ್ನು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳೆಂದು ಬಣ್ಣಿಸಿದ ಅವರು, ಬಲವಾದ ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವ ಸಂಸ್ಥೆಗಳು ಸ್ಥಿರ ಮತ್ತು ಸ್ಪಂದಿಸುವ ನೀತಿ ನಿರೂಪಣೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು. ಪ್ರಜಾಪ್ರಭುತ್ವವು ವೈವಿಧ್ಯಮಯ ಧ್ವನಿಗಳಿಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ನೀತಿಗಳು ಹಾಗು ಕಾನೂನುಗಳನ್ನು ರೂಪಿಸುವಾಗ ಉದ್ಯಮ, ವ್ಯಾಪಾರ, ಕೃಷಿ, ತಂತ್ರಜ್ಞಾನ, ವಿದ್ಯಾರ್ಥಿಗಳು ಮತ್ತು ಇತರ ಪಾಲುದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಭಾರತದ ಪ್ರಜಾಪ್ರಭುತ್ವ ಚೌಕಟ್ಟಿನ ಪ್ರಮುಖ ಸ್ತಂಭಗಳಾಗಿ ವೈಯಕ್ತಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಕಾನೂನಿನ ಮುಂದೆ ಸಮಾನತೆ ಮತ್ತು ಸ್ವತಂತ್ರ ನ್ಯಾಯಾಂಗವನ್ನು ಅವರು ಎತ್ತಿ ತೋರಿಸಿದರು. ಸ್ಥಿರ ನೀತಿ ಪರಿಸರ, ಊಹಿಸಬಹುದಾದ ತೆರಿಗೆ ನೀತಿಗಳು ಮತ್ತು ಉದ್ಯಮ ಹಾಗು ನೀತಿ ನಿರೂಪಕರ ನಡುವಿನ ನಿಯಮಿತ ತೊಡಗಿಸಿಕೊಳ್ಳುವಿಕೆಯು ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ ಎಂಬುದರತ್ತ ಅವರು ಗಮನ ಸೆಳೆದರು.
1968 ರಲ್ಲಿ ಸ್ಥಾಪನೆಯಾದಾಗಿನಿಂದ ಎರಡೂ ದೇಶಗಳ ನಡುವೆ ಆರ್ಥಿಕ ಸಂಬಂಧವನ್ನು ಉತ್ತೇಜಿಸುವಲ್ಲಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನೀಡಿದ ಕೊಡುಗೆಯನ್ನು ಶ್ರೀ ಬಿರ್ಲಾ ಶ್ಲಾಘಿಸಿದರು. ಸಂವಾದವನ್ನು ಸುಗಮಗೊಳಿಸುವುದು, ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವುದು, ತಂತ್ರಜ್ಞಾನ ಪಾಲುದಾರಿಕೆಗಳನ್ನು ಪ್ರೋತ್ಸಾಹಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಲ್ಲಿ ಅದು ಸತತ ವಹಿಸಿದ ನಾಯಕತ್ವವನ್ನು ಅವರು ಶ್ಲಾಘಿಸಿದರು. ಭಾರತದ ಬೆಳೆಯುತ್ತಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳ ಸಮೂಹ ಈ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಗಣನೀಯ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನಿಕಟ ಸಹಯೋಗಕ್ಕೆ ಕರೆ ನೀಡಿದ ಶ್ರೀ ಬಿರ್ಲಾ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸಲು ವಿಶ್ವವಿದ್ಯಾಲಯಗಳು, ಐಐಟಿಗಳು, ಐಐಐಟಿಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಇತರ ತಾಂತ್ರಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ವ್ಯವಹಾರೋದ್ಯಮಗಳನ್ನು ಒತ್ತಾಯಿಸಿದರು. ಪ್ರಪಂಚದಾದ್ಯಂತ ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸುವಲ್ಲಿ ಸಂಶೋಧನೆಯಲ್ಲಿ ಉದ್ಯಮದ ಹೂಡಿಕೆ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಗಮನಿಸಿದರು. ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಬಲವಾದ ಪಾಲುದಾರಿಕೆಯು ಭಾರತವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಉದಯೋನ್ಮುಖ ವಲಯಗಳಲ್ಲಿ ನಾಯಕತ್ವವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಔಷಧ ವಲಯದ ಕುರಿತು ಪ್ರಸ್ತಾಪಿಸುತ್ತಾ, ಭಾರತೀಯ ಔಷಧಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಆಫ್ರಿಕನ್ ರಾಷ್ಟ್ರಗಳಲ್ಲಿ ವ್ಯಾಪಕ ಮನ್ನಣೆಯನ್ನು ಪಡೆದಿವೆ ಎಂಬ ಅಂಶದತ್ತ ಶ್ರೀ ಬಿರ್ಲಾ ಗಮನಸೆಳೆದರು. ಉದಯೋನ್ಮುಖ ಆರೋಗ್ಯ ಅಗತ್ಯಗಳನ್ನು ಪೂರೈಸಲು ಔಷಧೀಯ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೃತಕ ಬುದ್ಧಿಮತ್ತೆ (AI) ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯು ನಾವೀನ್ಯತೆಗೆ ಮಹತ್ವದ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬನೆಯತ್ತ ಸಾಧಿಸುತ್ತಿರುವ ಪ್ರಗತಿಯನ್ನು ಹಾಗೂ ರಕ್ಷಣಾ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯಗಳನ್ನು ಅವರು ಉಲ್ಲೇಖಿಸಿದರು.
ಭಾರತದ ಯುವ ಜನಸಂಖ್ಯೆಯನ್ನು ಒಂದು ಪ್ರಮುಖ ಶಕ್ತಿ ಎಂದು ಬಣ್ಣಿಸಿದ ಶ್ರೀ ಬಿರ್ಲಾ ಅವರು, ಯುವ ಭಾರತೀಯರ ಆಲೋಚನೆಗಳು, ಕೌಶಲ್ಯಗಳು ಮತ್ತು ನವೀನ ಸಾಮರ್ಥ್ಯಗಳು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿವೆ ಎಂದು ಹೇಳಿದರು. ಭಾರತದ ವಿಸ್ತರಿಸುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಅನೇಕ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಂಡಿದೆ ಎಂದು ಅವರು ಉಲ್ಲೇಖಿಸಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಕೂಡ ಹೂಡಿಕೆ, ತಾಂತ್ರಿಕ ಸಹಕಾರ ಮತ್ತು ಉದ್ಯೋಗ ಸೃಷ್ಟಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತವೆ. ಭಾರತ ಮತ್ತು ಅಮೆರಿಕದ ಉದ್ಯಮಗಳು ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಂಡು ಪಾಲುದಾರಿಕೆಗಳನ್ನು ಬೆಳೆಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವಕಾಶಗಳನ್ನು ವಿಸ್ತರಿಸಿಕೊಳ್ಳಬೇಕೆಂದು ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದರು.
ಇಂಧನ ಸಹಕಾರದ ಕುರಿತು ಮಾತನಾಡಿದ ಶ್ರೀ ಬಿರ್ಲಾ ಅವರು, ಕೈಗಾರಿಕಾ ಬೆಳವಣಿಗೆ, ಡೇಟಾ ಸೆಂಟರ್ಗಳ ವಿಸ್ತರಣೆ ಮತ್ತು ತಂತ್ರಜ್ಞಾನದಲ್ಲಿನ ಹೂಡಿಕೆಗಳು ಇಂಧನ ಬೇಡಿಕೆಯನ್ನು ಹೆಚ್ಚಿಸುತ್ತಿವೆ ಎಂಬ ಅಂಶದತ್ತ ಗಮನಸೆಳೆದರು. ಕೈಗಾರಿಕಾ ಅಭಿವೃದ್ಧಿಯು ಪರಿಸರ ಜವಾಬ್ದಾರಿಯೊಂದಿಗೆ ಸಾಗಬೇಕು ಎಂದು ಅವರು ಒತ್ತಿ ಹೇಳಿದರು ಹಾಗೂ ಸ್ವಚ್ಛ ಮತ್ತು ಹಸಿರು ಇಂಧನವನ್ನು ಉತ್ತೇಜಿಸಲು ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ಉಲ್ಲೇಖಿಸಿದರು. ಉದ್ಯಮ ವಲಯ, ವಿಜ್ಞಾನಿಗಳು ಮತ್ತು ಸಂಶೋಧಕರ ನಡುವೆ ಹೆಚ್ಚಿನ ಸಹಯೋಗವಿದ್ದಲ್ಲಿ, ಅದು ಇಂಧನ ತಂತ್ರಜ್ಞಾನಗಳಲ್ಲಿನ ನಾವೀನ್ಯತೆಯನ್ನು ವೇಗಗೊಳಿಸಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಒಂದು ದೇಶದಲ್ಲಿ ನಡೆಯುವ ಬೆಳವಣಿಗೆಗಳು ಪ್ರಪಂಚದಾದ್ಯಂತದ ಆರ್ಥಿಕತೆಗಳು ಮತ್ತು ಸಮಾಜಗಳ ಮೇಲೆ ಹೆಚ್ಚೆಚ್ಚು ಪ್ರಭಾವ ಬೀರುತ್ತವೆ ಎಂಬುದರತ್ತಲೂ ಶ್ರೀ ಬಿರ್ಲಾ ಗಮನಸೆಳೆದರು. ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ಮಹತ್ವವನ್ನು ಒತ್ತಿಹೇಳಿದ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತವು ಸದಾ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಪಾದಿಸಿಕೊಂಡು ಬಂದಿದೆ ಎಂದು ಹೇಳಿದರು. 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಎಂಬ ತತ್ತ್ವದಿಂದ ಪ್ರೇರಿತವಾದ ಭಾರತವು, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಲ್ಯಾಣವನ್ನು ಸಾಧಿಸಲು ದೇಶಗಳು ಪರಸ್ಪರ ಗೌರವದ ಭಾವನೆಯೊಂದಿಗೆ ಒಗ್ಗೂಡಿ ಕೆಲಸ ಮಾಡಬೇಕು ಎಂದು ನಂಬುತ್ತದೆ.
ಈ ಶೃಂಗಸಭೆಯ ಚರ್ಚೆಗಳು ಉದ್ಯಮ, ವ್ಯಾಪಾರ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಹೊಸ ಆಲೋಚನೆಗಳನ್ನು ಮೂಡಿಸಲಿವೆ ಎಂಬ ವಿಶ್ವಾಸವನ್ನು ಶ್ರೀ ಬಿರ್ಲಾ ವ್ಯಕ್ತಪಡಿಸಿದರು. ಆರ್ಥಿಕ ಅಭಿವೃದ್ಧಿಯು ಎಲ್ಲರನ್ನೂ ಒಳಗೊಂಡಿರಬೇಕು, ಸಮಾನ ಅವಕಾಶಗಳನ್ನು ಖಾತ್ರಿಪಡಿಸಬೇಕು ಮತ್ತು ಸಾಮಾಜಿಕ ಕಲ್ಯಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು. ಎಲ್ಲರನ್ನೂ ಒಳಗೊಂಡ ಸಮೃದ್ಧಿ ಮತ್ತು ಮಾನವ ಕಲ್ಯಾಣ ಅಂತಾರಾಷ್ಟ್ರೀಯ ಸಹಕಾರದ ಮಾರ್ಗದರ್ಶಿ ಉದ್ದೇಶಗಳಾಗಿರಬೇಕು ಎಂದು ಅವರು ಹೇಳಿದರು.
*****