ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಪಿಎಂ ಸ್ವನಿಧಿ ಸಮ್ಮಾನ್ ಪ್ರಶಸ್ತಿಗಳು 2026': ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಬಲವರ್ಧನೆಯಲ್ಲಿ ಶ್ರೇಷ್ಠತೆಗೆ ಮನ್ನಣೆ

ಪ್ರಕಟಣಾ ದಿನಾಂಕ: 19 NOV 2026 11:06AM by PIB Bengaluru

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂ ಒ ಎಚ್ ಯು ಎ) ನಗರಾಭಿವೃದ್ಧಿ ಇಲಾಖೆಯು 2026ರ ನವೆಂಬರ್ 20ರಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 'ಸ್ವನಿಧಿ ಸಮ್ಮಾನ್ ಪ್ರಶಸ್ತಿಗಳು 2026' ಅನ್ನು ಆಯೋಜಿಸಲಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದು, ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ತೋಖಾನ್ ಸಾಹು ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಒಟ್ಟು 52 ಪ್ರಶಸ್ತಿಗಳು ಮತ್ತು 5 ವಿಶೇಷ ಮನ್ನಣೆಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಬಲವರ್ಧನೆಯಲ್ಲಿ ಹಾಗೂ ಆರ್ಥಿಕ ಸೇರ್ಪಡೆ, ಡಿಜಿಟಲ್ ಅಳವಡಿಕೆ ಮತ್ತು ಸಾಮಾಜಿಕ ಭದ್ರತೆಯನ್ನು ಉತ್ತೇಜಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು (ಯುಎಲ್ ಬಿಗಳು), ಸಾಲ ನೀಡುವ ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳು ನೀಡಿರುವ ಅತ್ಯುತ್ತಮ ಕೊಡುಗೆಗಳನ್ನು ಗೌರವಿಸಲಿದೆ. ಈ ಯೋಜನೆಯೊಂದಿಗೆ ಸಂಬಂಧ ಹೊಂದಿರುವ ವಿವಿಧ ಪಾಲುದಾರರನ್ನು ಪ್ರತಿನಿಧಿಸುವ ಸುಮಾರು 600 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ಕೆಳಗಿನ ವಿಭಾಗಗಳಲ್ಲಿನ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ:

  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು: 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 27 ಪ್ರಶಸ್ತಿಗಳು
  • ನಗರ ಸ್ಥಳೀಯ ಸಂಸ್ಥೆಗಳು: 21 ಪ್ರಶಸ್ತಿಗಳು
  • ಪ್ರಮುಖ ಸಾಲ ನೀಡುವ ಸಂಸ್ಥೆಗಳು: 4 ಪ್ರಶಸ್ತಿಗಳು
  • ಪ್ರಮುಖ ಪಾಲುದಾರರು: 5 ವಿಶೇಷ ಮನ್ನಣೆಗಳು

ಯೋಜನೆಯ ಸಂಕ್ಷಿಪ್ತ ವಿವರ

2020ರ ಜೂನ್ 1 ರಂದು ಪಿಎಂ ಸ್ವನಿಧಿ ಆರಂಭವಾದಾಗಿನಿಂದ ಸುಮಾರು 81 ಲಕ್ಷ ಬೀದಿ ವ್ಯಾಪಾರಿಗಳಿಗೆ ಸುಮಾರು 20,000 ಕೋಟಿ ರೂ. ಮೊತ್ತದ 1.21 ಕೋಟಿಗೂ ಅಧಿಕ ಸಾಲಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. 2025ರ ಆಗಸ್ಟ್ ನಲ್ಲಿ, ಸರ್ಕಾರವು ಯೋಜನೆಯನ್ನು ಪುನರ್ ರಚಿಸಿತು ಮತ್ತು ಅದರ ಅನುಷ್ಠಾನವನ್ನು 2030ರ ಮಾರ್ಚ್ ವರೆಗೆ ವಿಸ್ತರಿಸಿತು, ಅದರ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಆರ್ಥಿಕ ಸೇರ್ಪಡೆ ಹೆಚ್ಚಿಸಲು ಪ್ರಮುಖ ಸುಧಾರಣೆಗಳನ್ನು ಪರಿಚಯಿಸಿತು. ಅವುಗಳಲ್ಲಿ ಈ ಕೆಳಗಿನ ಅಂಶಗಳು ಸೇರಿವೆ:

  • ಬೀದಿ ವ್ಯಾಪಾರಿಗಳ ವಿಕಸಿಸುತ್ತಿರುವ ಸಾಲದ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ಮೂರು ಸಾಲದ ಹಂತಗಳಲ್ಲಿ ವರ್ಧಿತ ಸಾಲದ ಮೊತ್ತಗಳು.
  • ತಮ್ಮ ಎರಡನೇ ಕಂತಿನ ಸಾಲವನ್ನು ಮರುಪಾವತಿಸಿದ ಅರ್ಹ ಫಲಾನುಭವಿಗಳಿಗೆ 30,000  ರೂ. ವರೆಗಿನ ಕ್ರೆಡಿಟ್ ಮಿತಿಯೊಂದಿಗೆ UPI-ಸಂಯೋಜಿತ ರುಪೇ ಕ್ರೆಡಿಟ್ ಕಾರ್ಡ್ ಪರಿಚಯ.
  • ಜನಗಣತಿ ಪಟ್ಟಣಗಳು ಮತ್ತು ಅರೆ-ನಗರ ಪ್ರದೇಶಗಳನ್ನು ಸೇರಿಸಲು ಶಾಸನಬದ್ಧ ಪಟ್ಟಣಗಳನ್ನು ಮೀರಿ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆ.

ಸಾಲ ನೆರವನ್ನು ಮೀರಿ, ಯೋಜನೆಯು “ಸ್ವನಿಧಿಯಿಂದ ಸಂಮೃದ್ಧಿ’’ (SWANidhi se Samriddhi) ಮೂಲಕ ಬೀದಿ ವ್ಯಾಪಾರಿ ಕುಟುಂಬಗಳ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಉತ್ತೇಜಿಸುತ್ತದೆ. 52 ಲಕ್ಷಕ್ಕೂ ಅಧಿಕ ಫಲಾನುಭವಿ ಕುಟುಂಬಗಳ ಸಾಮಾಜಿಕ-ಆರ್ಥಿಕ ಪ್ರೊಫೈಲ್ ಪೂರ್ಣಗೊಂಡಿದ್ದು, ಇದರ ಪರಿಣಾಮವಾಗಿ ಎಂಟು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಅಡಿಯಲ್ಲಿ 1.62 ಕೋಟಿಗೂ ಅಧಿಕ ಅನುಮೋದನೆಗಳು ದೊರೆತಿವೆ. ಈ ಯೋಜನೆಯು 50 ಬೀದಿ ಆಹಾರ ಕೇಂದ್ರಗಳ ಅಭಿವೃದ್ಧಿ ಮತ್ತು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ತರಬೇತಿ ಸೇರಿದಂತೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ ಬೀದಿ ಮಾರಾಟ ಪರಿಸರ ವ್ಯವಸ್ಥೆ ಬಲವರ್ಧನೆಗೊಳಿಸುತ್ತಿದೆ.

 

*****


(ಪ್ರಕಟಣೆ ಐ.ಡಿ.: 2338369) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , हिन्दी , Nepali , Gujarati , Tamil