ಆಯುಷ್
azadi ka amrit mahotsav

‘ಪ್ರಕೃತಿ ಚಿಕಿತ್ಸೆ, ಸ್ವಸ್ಥ ಭಾರತ’ ಆಶಯದೊಂದಿಗೆ ದೇಶಾದ್ಯಂತ 9ನೇ ಪ್ರಕೃತಿ ಚಿಕಿತ್ಸಾ ದಿನ ಆಚರಣೆ


ಕರ್ನಾಟಕದ ನಾಗಮಂಗಲದ ಸಿಆರ್‌ಐವೈಎನ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಆಚರಣೆಯಲ್ಲಿ ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯ ಉತ್ತೇಜನದಲ್ಲಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯ ಮಹತ್ವಕ್ಕೆ ಒತ್ತು ನೀಡಲಾಯಿತು

ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ಪ್ರಕೃತಿ ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನಶೈಲಿ ಅತ್ಯಗತ್ಯ: ಶ್ರೀ ಪ್ರತಾಪ್‌ರಾವ್ ಜಾಧವ್

ಪ್ರಕೃತಿ ಚಿಕಿತ್ಸೆಯನ್ನು ಮುನ್ನಡೆಸುವಲ್ಲಿ ವೈಜ್ಞಾನಿಕ ಸಂಶೋಧನೆ, ಆರೋಗ್ಯ ಜಾಗೃತಿ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಪ್ರಮುಖವಾಗಿವೆ: ಆಯುಷ್ ಸಚಿವಾಲಯದ ಕಾರ್ಯದರ್ಶಿ

ರೆಜೆನ್-ಬೀಟಾ ಮಧುಮೇಹ ಜೀವನಶೈಲಿ ಪ್ರಯೋಗ, ನೇಚರ್ ಕ್ಯೂರ್ 360 ಮತ್ತು ಪ್ರಮುಖ ಸಂಶೋಧನಾ ಪ್ರಕಟಣೆಗಳ ಬಿಡುಗಡೆ

ಪ್ರಕಟಣಾ ದಿನಾಂಕ: 18 NOV 2026 3:37PM by PIB Bengaluru

‘ಪ್ರಕೃತಿ ಚಿಕಿತ್ಸೆ, ಸ್ವಸ್ಥ ಭಾರತ’ ಎಂಬ ಆಶಯದೊಂದಿಗೆ ಇಂದು ದೇಶಾದ್ಯಂತ 9ನೇ ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸಲಾಯಿತು. ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ಸಮಗ್ರ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಪ್ರಕೃತಿ ಆಧಾರಿತ ಆರೋಗ್ಯ ರಕ್ಷಣೆಯ ಮಹತ್ವವನ್ನು ಈ ಆಚರಣೆಯು ಸಾರಿ ಹೇಳಿತು. ಆಯುಷ್ ಸಚಿವಾಲಯದ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿಯು (ಸಿಸಿಆರ್‌ಐವೈಎನ್) ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ (ಎನ್‌ಐಎನ್‌) ಸಹಯೋಗದೊಂದಿಗೆ ಕರ್ನಾಟಕದ ನಾಗಮಂಗಲದಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯಲ್ಲಿ (ಸಿಆರ್‌ಐವೈಎನ್) ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕೇಂದ್ರ ಆಯುಷ್ (ಸ್ವತಂತ್ರ ಹೊಣೆಗಾರಿಕೆ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೇಚಾ ಅವರು ಕಾರ್ಯಕ್ರಮದಲ್ಲಿ ವಿಡಿಯೊ ಸಂದೇಶಗಳ ಮೂಲಕ ತಮ್ಮ ಶುಭಾಶಯಗಳನ್ನು ತಿಳಿಸಿದರು.

ತಮ್ಮ ಸಂದೇಶದಲ್ಲಿ ಶ್ರೀ ಪ್ರತಾಪ್‌ರಾವ್ ಜಾಧವ್ ಅವರು ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಬಲಪಡಿಸುವಲ್ಲಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಒತ್ತಿಹೇಳಿದರು.

ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸ್ವಸ್ಥ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಶ್ರೀ ಜಾಧವ್ ಅವರು ನಾಗರಿಕರಿಗೆ ಕರೆ ನೀಡಿದರು. ಪ್ರಕೃತಿ ಚಿಕಿತ್ಸೆಯನ್ನು ಉತ್ತೇಜಿಸುವಲ್ಲಿ ಮತ್ತು ಈ ಚಿಕಿತ್ಸಾ ಪದ್ಧತಿಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ವೈದ್ಯರು, ಸಂಶೋಧಕರು, ಸಂಸ್ಥೆಗಳು ಹಾಗೂ ಇತರ ಪಾಲುದಾರರು ಮಾಡುತ್ತಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ವೈದ್ಯ ರಾಜೇಶ್ ಕೋಟೇಚಾ ಅವರು ತಮ್ಮ ಸಂದೇಶದಲ್ಲಿ ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ, ಆರೋಗ್ಯಕರ ಜೀವನಶೈಲಿಯ ಉತ್ತೇಜನ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರವನ್ನು ಒತ್ತಿಹೇಳಿದರು. ಪ್ರಕೃತಿ ಚಿಕಿತ್ಸೆಯನ್ನು ಮುನ್ನಡೆಸುವಲ್ಲಿ ವೈಜ್ಞಾನಿಕ ಸಂಶೋಧನೆ, ಆರೋಗ್ಯ ಜಾಗೃತಿ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಅವರು ವಿವರಿಸಿದರು. ಅಲ್ಲದೆ, ನಾಗರಿಕರು ವೈಜ್ಞಾನಿಕ ತಿಳಿವಳಿಕೆಯನ್ನು ಆಧರಿಸಿದ ಮತ್ತು ಸುಸ್ಥಿರ ಆರೋಗ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕರ್ನಾಟಕ ಸರ್ಕಾರದ ಜಲಸಂಪನ್ಮೂಲ (ಬೃಹತ್‌ ಮತ್ತು ಮಧ್ಯಮ ನೀರಾವರಿ) ಸಚಿವರು ಹಾಗೂ ನಾಗಮಂಗಲ ಕ್ಷೇತ್ರದ ಶಾಸಕರಾದ ಶ್ರೀ ಎನ್. ಚೆಲುವರಾಯಸ್ವಾಮಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಅಲರ್ಮೇಲ್‌ಮಂಗೈ ಡಿ. ಅವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಎನ್. ಚೆಲುವರಾಯಸ್ವಾಮಿ ಅವರು, ನಾಗಮಂಗಲದಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯ (ಸಿಆರ್‌ಐವೈಎನ್) ಸ್ಥಾಪನೆ ಹಾಗೂ ಅಭಿವೃದ್ಧಿಯನ್ನು ಶ್ಲಾಘಿಸಿದರು. ಈ ಪ್ರದೇಶದ ಆರೋಗ್ಯ ಅಗತ್ಯಗಳನ್ನು ಪೂರೈಸುವಲ್ಲಿ ಸಂಸ್ಥೆ ಹೊಂದಿರುವ ಸಾಮರ್ಥ್ಯವನ್ನು ಅವರು ಉಲ್ಲೇಖಿಸಿದರು. ಸಂಸ್ಥೆಯ ಸೌಲಭ್ಯಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆಂದು ಅವರು ಒತ್ತಿಹೇಳಿದರು. ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಜನರು ಪ್ರಕೃತಿ ಚಿಕಿತ್ಸೆ ಆಧಾರಿತ ಆರೋಗ್ಯ ಸೇವೆಗಳ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಸಂಸ್ಥೆಯ ಮತ್ತಷ್ಟು ಅಭಿವೃದ್ಧಿಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಕರ್ನಾಟಕದಲ್ಲಿ ಆಯುಷ್ ಸಚಿವಾಲಯದ ಯೋಜನೆಗಳು ಮತ್ತು ಭಾರತ ಸರ್ಕಾರದ ಇತರ ಉಪಕ್ರಮಗಳ ಅನುಷ್ಠಾನಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಸಿದ್ಧರಿರುವುದಾಗಿಯೂ ಅವರು ತಿಳಿಸಿದರು.

ಶ್ರೀಮತಿ ಅಲರ್ಮೇಲ್‌ಮಂಗೈ ಡಿ. ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚುತ್ತಿರುವ ಮನ್ನಣೆ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ಎದುರಿಸುವಲ್ಲಿ ರೋಗ ತಡೆಗಟ್ಟುವಲ್ಲಿ ಅವುಗಳ ಪ್ರಸ್ತುತತೆಯನ್ನು ವಿವರಿಸಿದರು. ಕರ್ನಾಟಕದ ನಾಗಮಂಗಲ ಮತ್ತು ಹರಿಯಾಣದ ಝಜ್ಜರ್‌ನಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಗಳು ಹಾಗೂ ದೆಹಲಿಯ ರೋಹಿಣಿಯಲ್ಲಿರುವ ಸೌಲಭ್ಯಗಳು ಸೇರಿದಂತೆ ಸಿಸಿಆರ್‌ವೈಎನ್‌ನ ಸಂಶೋಧನಾ ಮೂಲಸೌಕರ್ಯ ವಿಸ್ತರಣೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಶಿಕ್ಷಣ, ಸಂಶೋಧನೆ, ತರಬೇತಿ, ಚಿಕಿತ್ಸಾ ಸೇವೆಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ (ಎನ್‌ಐಎನ್) ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಸಿಸಿಆರ್‌ವೈಎನ್‌ನ ನಿರ್ದೇಶಕರಾದ ಪ್ರೊ. (ಡಾ.) ಜ್ಯೋತಿ ಕೇಶ್ವಾನಿ ಅವರು ಸ್ವಾಗತ ಭಾಷಣದಲ್ಲಿ ಪ್ರಕೃತಿ ಚಿಕಿತ್ಸಾ ದಿನದ ಮಹತ್ವ ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಸಂಶೋಧನೆ, ಸಾಂಸ್ಥಿಕ ಅಭಿವೃದ್ಧಿ ಮತ್ತು ಉತ್ತೇಜನದಲ್ಲಿ ಮಂಡಳಿ ವಹಿಸುತ್ತಿರುವ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಿಸಿಆರ್‌ವೈಎನ್ ಮತ್ತು ಪುಣೆಯ ಎನ್‌ಐಎನ್ ವತಿಯಿಂದ ಹಲವು ಸಂಶೋಧನಾ ಪ್ರಕಟಣೆಗಳು, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಉಪಕ್ರಮಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳಲ್ಲಿ ನಾಗಮಂಗಲ ಮತ್ತು ಝಜ್ಜರ್‌ನ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಗಳ ಕುರಿತ ಸಾಕ್ಷ್ಯಚಿತ್ರಗಳು, ಇಂಡಿಯನ್ ಜರ್ನಲ್ ಆಫ್ ಯೋಗಾ ಆ್ಯಂಡ್ ನ್ಯಾಚುರೋಪತಿ (ಸಂಪುಟ 1, ಸಂಚಿಕೆ 3), ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತ ಪುಸ್ತಕ, ಇಂಟರ್ನ್‌ಗಳ ಕೈಪಿಡಿ ಹಾಗೂ ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದ ಜೀವನಶೈಲಿ ಮಧ್ಯಸ್ಥಿಕೆಗಳ ಕುರಿತ ವೈದ್ಯಕೀಯ ಪ್ರಯೋಗವಾದ ‘ರೆಜೆನ್-ಬೀಟಾ’ ಸೇರಿವೆ. ಪುಣೆಯ ಎನ್‌ಐಎನ್ ವತಿಯಿಂದ ʼನೇಚರ್ ಕ್ಯೂರ್ 360: ಸುಸ್ಥಿರ ಆರೋಗ್ಯಕರ ಭವಿಷ್ಯದತ್ತ ಸಮುದಾಯ ಆರೋಗ್ಯ ಉಪಕ್ರಮʼ ಮತ್ತು ʼದಿ ಫ್ಯಾಮಿಲಿ ಡಾಕ್ಟರ್ʼ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ನೈಸರ್ಗಿಕ ಸಂಪನ್ಮೂಲಗಳು, ಆರೋಗ್ಯಕರ ಜೀವನಶೈಲಿ ಮತ್ತು ಪ್ರಕೃತಿ ಆಧಾರಿತ ಆರೋಗ್ಯ ರಕ್ಷಣೆ ಪದ್ಧತಿಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರಕೃತಿ ಚಿಕಿತ್ಸಾ ಆಹಾರ ಮೇಳ ಮತ್ತು ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಿಸಿಆರ್‌ವೈಎನ್‌ನ ನಿರ್ದೇಶಕಿ ಪ್ರೊ. (ಡಾ.) ಜ್ಯೋತಿ ಕೇಶ್ವಾನಿ, ಪುಣೆಯ ಎನ್‌ಐಎನ್‌ನ ನಿರ್ದೇಶಕಿ ಪ್ರೊ. (ಡಾ.) ಗೀತಾ ಬಿ. ಶೆಟ್ಟಿ ಮತ್ತು ಆಯುಷ್ ಸಚಿವಾಲಯದ ನಾಗಮಂಗಲದ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ. ವಾದಿರಾಜ ಎಚ್.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

9ನೇ ಪ್ರಕೃತಿ ಚಿಕಿತ್ಸಾ ದಿನದ ಆಚರಣೆಯು ರೋಗ ತಡೆಗಟ್ಟುವ ಮತ್ತು ಆರೋಗ್ಯ ಉತ್ತೇಜಕ ಸೇವೆಯನ್ನು ಬಲಪಡಿಸುವಲ್ಲಿ ಸಂಶೋಧನೆ ಆಧಾರಿತ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಮತ್ತೊಮ್ಮೆ ದೃಢಪಡಿಸಿತು. ಸಂಶೋಧನೆ, ಸಾಂಸ್ಥಿಕ ಅಭಿವೃದ್ಧಿ, ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ನಿರಂತರ ಪ್ರಯತ್ನಗಳ ಮೂಲಕ ಆಯುಷ್ ಸಚಿವಾಲಯವು ಸಮಗ್ರ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ ಆರೋಗ್ಯಕರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2337927) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: Nepali , Urdu , English , हिन्दी , Gujarati