ಕೃಷಿ ಸಚಿವಾಲಯ
azadi ka amrit mahotsav

ನವೆಂಬರ್ 20ರಂದು ಭಾರತದ ಮೊಟ್ಟಮೊದಲ ದೇಶೀಯ ‘ಎಚ್5ಎನ್1’ (ಕ್ಲೇಡ್ 2.3.2.1a) ಕೋಳಿ ಜ್ವರ ಲಸಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಶ್ರೀ ಶಿವರಾಜ್ ಸಿಂಗ್ ಚೌಹಾಣ್


ಕೋಳಿ ರೋಗ ನಿಯಂತ್ರಣವನ್ನು ಬಲಪಡಿಸಲು ಸ್ವದೇಶಿ ‘ಎಚ್‌5ಎನ್‌1’ (H5N1) ಲಸಿಕೆಯನ್ನು ಅಭಿವೃದ್ಧಿಪಡಿಸಿದ ‘ಐಸಿಎಆರ್‌-ಎನ್‌ಐಎಚ್‌ಎಸ್‌ಎಡಿ’

ಪ್ರಕಟಣಾ ದಿನಾಂಕ: 18 NOV 2026 9:38AM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು 2026ರ ನವೆಂಬರ್ 20ರಂದು ಭೋಪಾಲ್‌ನ ‘ಐಸಿಎಆರ್- ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಸ್ಥೆ’ಯಲ್ಲಿ (ಐಸಿಎಆರ್‌-ಎನ್‌ಐಎಚ್‌ಎಸ್‌ಎಡಿ) ಭಾರತದ ಮೊದಲ ದೇಶೀಯ ನಿಷ್ಕ್ರಿಯಗೊಳಿಸಿದ ಎಚ್5ಎನ್1 (ಕ್ಲೇಡ್ 2.3.2.1a) ಹಕ್ಕಿಜ್ವರ (ಎಚ್‌ಪಿಎಐ) ಲಸಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭೋಪಾಲ್‌ನ ‘ಐಸಿಎಆರ್-ಎನ್‌ಐಹೆಚ್‌ಎಸ್‌ಎಡಿ’ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು, ‘ಕ್ಲೇಡ್ 2.3.2.1a’ನ ಎಚ್5ಎನ್1 ಎಚ್‌ಪಿಎಐ ವೈರಸ್ ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ಲಸಿಕೆಯಾಗಿದೆ.

ಹಿನ್ನೆಲೆ

ಸಾಮಾನ್ಯವಾಗಿ ‘ಬರ್ಡ್ ಫ್ಲೂ’ ಎಂದು ಕರೆಯಲಾಗುವ ಅತ್ಯಂತ ರೋಗಕಾರಕ ಪಕ್ಷಿ ಜ್ವರವು(ಎಚ್‌ಪಿಎಐ) ಕೋಳಿಗಳನ್ನು ಪ್ರಭಾವಿಸುವ ಗಂಭೀರ ರೋಗವಾಗಿದೆ. ಇದರ ಹರಡುವಿಕೆಯು ಅತ್ಯಂತ ಮಾರಣಾಂತಿಕವಾಗಿದ್ದು, ಇದು ಸೋಂಕಿತ ಕೋಳಿಗಳ ಸುಮಾರು ಶೇ.100ರಷ್ಟು ಮರಣಕ್ಕೆ ಕಾರಣವಾಗಬಹುದು. ಇದರಿಂದ ದೊಡ್ಡ ಪ್ರಮಾಣದಲ್ಲಿ ಕೋಳಿಗಳನ್ನು ಕೊಲ್ಲುಬೇಕಾಗುತ್ತದೆ. ಅಲ್ಲದೆ, ಕೋಳಿಗಳ ವ್ಯಾಪಾರಕ್ಕೂ ನಿರ್ಬಂಧ ಅನಿವಾರ್ಯವಾಗುತ್ತದೆ. ಇದರಿಂದ ಕೋಳಿ ಕೃಷಿಕರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ಈ ಪರಿಣಾಮವು ಕೋಳಿ ಫಾರಂಗಳಿಗೆ ಮಾತ್ರ ಸೀಮಿತವಲ್ಲ; ಇದು ಜಾಗತಿಕ ವ್ಯಾಪಾರ, ಕೋಳಿ ಉತ್ಪನ್ನಗಳ ಬೆಲೆಗಳು ಮತ್ತು ರೈತರ ಜೀವನೋಪಾಯದ ಮೇಲೂ ಪ್ರಭಾವ ಬೀರುತ್ತದೆ. 2006ರಲ್ಲಿ ಭಾರತದಲ್ಲಿ ಈ ರೋಗ ಮೊದಲ ಬಾರಿಗೆ ಪತ್ತೆಯಾದ ನಂತರ, ದೇಶದಲ್ಲಿ ಎಚ್‌5ಎಬ್‌1 ಮತ್ತು ಎಚ್‌5ಎನ್‌8 ಉಪಪ್ರಕಾರಗಳ 500ಕ್ಕೂ ಹೆಚ್ಚು ಸಾಮೂಹಿಕ ಹರಡುವಿಕೆಗಳು ವರದಿಯಾಗಿವೆ.

ಹಕ್ಕಿ ಜ್ವರದ ಹರಡುವಿಕೆಯು ಭಾರತದ ಜಿಡಿಪಿ ಬೆಳವಣಿಗೆಯನ್ನು 1.5 ಶೇಕಡವರೆಗೆ ಕಡಿಮೆ ಮಾಡಬಹುದು, ಮತ್ತು ರೋಗ ನಿಯಂತ್ರಣವಿಲ್ಲದೆ ಹರಡಿದರೆ ದೇಶದ ಕೋಳಿಗಳ ಸಂಖ್ಯೆಯ 20 ಶೇಕಡಕ್ಕೂ ಹೆಚ್ಚು ಅಪಾಯಕ್ಕೆ ಸಿಲುಕಬಹುದು. 2006 ರ ಹಕ್ಕಿಜ್ವರ ಹರಡುವಿಕೆಯಿಂದ ನೇರ ಮತ್ತು ಪರೋಕ್ಷವಾಗಿ ಅಂದಾಜು ರೂ. 2,200–3,000 ಕೋಟಿ ನಷ್ಟವಾಗಿತ್ತು. ಮಣಿಪುರದಲ್ಲಿ ಹರಡಿದ ರೋಗದಿಂದಾಗಿ ಆ ರಾಜ್ಯದ ಜಿಡಿಪಿಯಲ್ಲಿ ಶೇ.0.5ರಷ್ಟು ನಷ್ಟ ಸಂಭವಿಸಿತ್ತು. ಈ ಕಾಯಿಲೆಯು ಸಾರ್ವಜನಿಕ ಆರೋಗ್ಯದ ಕಾಳಜಿಯೂ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಪ್ರಕಾರ, 2003ರಿಂದ ಭಾರತ ಸೇರಿದಂತೆ 25 ದೇಶಗಳಲ್ಲಿ ಎಚ್5ಎನ್1 ಹಕ್ಕಿ ಜ್ವರದ 1,003 ಮಾನವ ಪ್ರಕರಣಗಳು ವರದಿಯಾಗಿದ್ದು, 479 ಸಾವುಗಳೂ ಇದರಲ್ಲಿ ಸೇರಿವೆ.

ವೈರಸ್‌ನ ಅಧ್ಯಯನಗಳ ಪ್ರಕಾರ, ‘ಕ್ಲೇಡ್ 2.3.2.1a’ ಎಂದು ಕರೆಯಲ್ಪಡುವ ‘ಎಚ್5ಎನ್1’ ತಳಿಯು ಕೋಳಿಗಳಲ್ಲಿ ಹೆಚ್ಚಿನ ಹಕ್ಕಿ ಜ್ವರ ಹರಡುವಿಕೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ, ಈ ತಳಿಯಿಂದ ಉಂಟಾಗುವ ಸೋಂಕುಗಳು ಮೂರು ಮಾನವ ಪ್ರಕರಣಗಳೊಂದಿಗೆ, ಸಸ್ತನಿಗಳು ಸೇರಿದಂತೆ ವಿವಿಧ ಪ್ರಾಣಿ ಪ್ರಭೇದಗಳಲ್ಲಿಯೂ ಪತ್ತೆಯಾಗಿವೆ. ಕೋಳಿ ಸಾಕಾಣಿಕೆದಾರರ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಮತ್ತು ಕೋಳಿಗಳಿಂದ ಇತರ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುವುದನ್ನು ತಡೆಯಲು ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ.

ಪ್ರಸ್ತುತ, ‘ಕ್ಲೇಡ್ 2.3.2.1a’ನ ಎಚ್5ಎನ್1 ವೈರಸ್ ವಿರುದ್ಧ ಯಾವುದೇ ನಿರ್ದಿಷ್ಟ ವಾಣಿಜ್ಯ ಲಸಿಕೆ ಲಭ್ಯವಿಲ್ಲ. ಆದ್ದರಿಂದ, ದೇಶೀಯ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಭಾರತಕ್ಕೆ ಮುಖ್ಯವಾಗಿದೆ. ‘ಐಸಿಎಆರ್-ಎನ್‌ಐಹೆಚ್‌ಎಸ್‌ಎಡಿ’ ಅಭಿವೃದ್ಧಿಪಡಿಸಿದ ಲಸಿಕೆಯು, ದೇಶದಲ್ಲಿ ಹರಡುತ್ತಿರುವ ‘ಕ್ಲೇಡ್ 2.3.2.1a’ ಎಚ್5ಎನ್1 ವೈರಸ್ ತಳಿಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ಮೂಲಕ ಈ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2337756) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Nepali , Marathi , Gujarati