ಪ್ರಕಟಣಾ ದಿನಾಂಕ:
15 NOV 2026 11:52AM by PIB Bengaluru
ರಕ್ಷಣಾ ಸನ್ನದ್ಧತೆ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲು ದೇಶದ ವಿನಾಶರಹಿತ ಪರೀಕ್ಷಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು, ಭಾರತವನ್ನು ಕೇವಲ ಸುಧಾರಿತ ತಂತ್ರಜ್ಞಾನಗಳ ಬಳಕೆದಾರನನ್ನಾಗಿ ಮಾಡದೆ, ನಿರ್ಣಾಯಕ ಕ್ಷೇತ್ರಗಳಲ್ಲಿ ಅಭಿವೃದ್ಧಿಕಾರ, ನಾವೀನ್ಯಕಾರ ಮತ್ತು ಜಾಗತಿಕ ನಾಯಕನನ್ನಾಗಿ ಮಾಡಲು ಕರೆ ನೀಡಿದ್ದಾರೆ. 2026 ರ ನವೆಂಬರ್ 15 ರಂದು ವಿನಾಶರಹಿತ ಮೌಲ್ಯಮಾಪನ ಮತ್ತು ಸಕ್ರಿಯಗೊಳಿಸುವ ತಂತ್ರಜ್ಞಾನಗಳ 36 ನೇ ವಾರ್ಷಿಕ ಸಮ್ಮೇಳನ ಹಾಗೂ ಏರೋಸ್ಪೇಸ್ನಲ್ಲಿ ವಿನಾಶರಹಿತ ಪರೀಕ್ಷೆಯ 15 ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ವಿಶೇಷವಾಗಿ ಕಾರ್ಯತಂತ್ರದ ಅನ್ವಯಿಕೆಗಳಲ್ಲಿ ಸುಧಾರಿತ ತಪಾಸಣಾ ತಂತ್ರಜ್ಞಾನಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು, ಸ್ಥಿರವಾದ ಗುಣಮಟ್ಟದ ಭರವಸೆ ಪದ್ಧತಿಗಳನ್ನು ಉತ್ತೇಜಿಸುವುದು ಮತ್ತು ಪರೀಕ್ಷಾ ಫಲಿತಾಂಶಗಳ ನಿಖರತೆ, ವಿಶ್ವಾಸಾರ್ಹತೆ ಹಾಗೂ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಪ್ರತಿಪಾದಿಸಿದರು. ಕಾರ್ಯತಂತ್ರದ ಅನ್ವಯಿಕೆಗಳಲ್ಲಿ ಪರೀಕ್ಷಾ ಫಲಿತಾಂಶಗಳ ಸಮಗ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇರಲು ಸಾಧ್ಯವಿಲ್ಲ ಎಂದು ಅವರು ದೃಢವಾಗಿ ಹೇಳಿದರು.

"ನಾವು ಸುಧಾರಿತ ತಪಾಸಣಾ ತಂತ್ರಜ್ಞಾನಗಳು, ವಿಶೇಷ ಸೆನ್ಸರ್ಗಳು, ಮೌಲ್ಯಮಾಪನ ಉಪಕರಣಗಳು ಮತ್ತು ಸಂಬಂಧಿತ ಸಾಫ್ಟ್ವೇರ್ಗಳಲ್ಲಿ ನಮ್ಮ ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಬೇಕು. ತಾಂತ್ರಿಕ ಅವಲಂಬನೆಗಳನ್ನು ತಗ್ಗಿಸಲು ಮತ್ತು ನಿರ್ಣಾಯಕ ರಕ್ಷಣಾ ಪೂರೈಕೆ ಸರಪಳಿಗಳನ್ನು ಭದ್ರಪಡಿಸಲು ಈ ಕ್ಷೇತ್ರಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಇಡೀ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯಾದ್ಯಂತ ನಾವು ಸ್ಥಿರವಾದ ಗುಣಮಟ್ಟದ ಭರವಸೆ ಪದ್ಧತಿಗಳನ್ನು ಉತ್ತೇಜಿಸಬೇಕು. ಈ ಪ್ರಯತ್ನದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಉತ್ಪಾದಕರು, ಸ್ಟಾರ್ಟ್ಅಪ್ಗಳು ಮತ್ತು ಎಂಎಸ್ಎಂಇಗಳು (MSMEs) ಪ್ರಮುಖ ಪಾತ್ರ ವಹಿಸಬೇಕಾಗಿದೆ. ತಪಾಸಣಾ ಫಲಿತಾಂಶಗಳು ನಿಖರ, ವಿಶ್ವಾಸಾರ್ಹ ಮತ್ತು ಪತ್ತೆಹಚ್ಚಬಹುದಾದಂತಿರಬೇಕು ಹಾಗೂ ಅರ್ಹ ವೃತ್ತಿಪರರ ಮೌಲ್ಯಮಾಪನದೊಂದಿಗೆ ದೃಢವಾದ ಕಾರ್ಯವಿಧಾನಗಳು ಮತ್ತು ಸೂಕ್ತ ಮಾನದಂಡಗಳನ್ನು ಆಧರಿಸಿರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು," ಎಂದು ರಕ್ಷಣಾ ಸಚಿವರು ಹೇಳಿದರು.
ವಸ್ತುಗಳು, ಬಿಡಿಭಾಗಗಳು ಮತ್ತು ರಚನೆಗಳಿಗೆ ಯಾವುದೇ ಹಾನಿಯಾಗದಂತೆ ಅವುಗಳ ಸಮಗ್ರತೆಯನ್ನು ಪರೀಕ್ಷಿಸಲು ಎನ್ಡಿಟಿ (NDT) ತಂತ್ರಜ್ಞಾನಗಳು ಅನುವು ಮಾಡಿಕೊಡುತ್ತವೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ಈ ಪರಿಕಲ್ಪನೆಯನ್ನು ವಿವರಿಸುತ್ತಾ, ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಯಿಲ್ಲದೆ ಮಾನವ ದೇಹವನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇಗಳು ಹೇಗೆ ಸಹಾಯ ಮಾಡುತ್ತವೆಯೋ, ಹಾಗೆಯೇ ಎನ್ಡಿಟಿ ತಂತ್ರಗಳು ನಿರ್ಣಾಯಕ ಬಿಡಿಭಾಗಗಳನ್ನು ಬಿಚ್ಚದೆ ಅಥವಾ ಹಾನಿಗೊಳಿಸದೆ ಅವುಗಳಲ್ಲಿನ ಆಂತರಿಕ ದೋಷಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತವೆ ಎಂದು ಅವರು ತಿಳಿಸಿದರು.
ಭಾರತೀಯ ರಕ್ಷಣಾ ವ್ಯವಸ್ಥೆಗಳು ಹೆಚ್ಚು ಹೆಚ್ಚು ಅತ್ಯಾಧುನಿಕವಾಗುತ್ತಿರುವುದರಿಂದ, ಪ್ರತಿಯೊಂದು ನಿರ್ಣಾಯಕ ವಸ್ತು, ಬಿಡಿಭಾಗ, ಜೋಡಣೆ ಮತ್ತು ಉತ್ಪಾದನಾ ಪ್ರಕ್ರಿಯೆಯು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಅತ್ಯುನ್ನತ ಮಾನದಂಡಗಳನ್ನು ಪೂರೈಸಬೇಕು ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದರು. "ಅಡಗಿರುವ ದೋಷಗಳು ಕಾರ್ಯಾಚರಣೆಯ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು, ನಿರ್ವಹಣಾ ಅಗತ್ಯಗಳನ್ನು ಹೆಚ್ಚಿಸಬಹುದು, ಉಪಕರಣಗಳ ಸೇವಾ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಕಾರ್ಯಾಚರಣೆಯ ಯಶಸ್ಸಿಗೆ ಅಪಾಯವನ್ನುಂಟುಮಾಡಬಹುದು. ಕೇವಲ ದೋಷಗಳನ್ನು ಗುರುತಿಸುವ ಸಂಸ್ಕೃತಿಯನ್ನು ಮೀರಿ, ಉತ್ಪಾದನಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಗುಣಮಟ್ಟವನ್ನು ಅಳವಡಿಸುವ ಮೂಲಕ ಅವುಗಳನ್ನು ಸಕ್ರಿಯವಾಗಿ ತಡೆಗಟ್ಟುವತ್ತ ನಾವು ಸಾಗಬೇಕಾಗಿದೆ," ಎಂದು ಅವರು ಹೇಳಿದರು.
_20261115115358_744afe.jpeg)
ರಾಷ್ಟ್ರದ ಪ್ರಗತಿಯು ಕೇವಲ ಅದು ಅಭಿವೃದ್ಧಿಪಡಿಸುವ ತಂತ್ರಜ್ಞಾನಗಳ ಮೇಲೆ ಮಾತ್ರವಲ್ಲದೆ, ಅದು ನಿರ್ಮಿಸುವ ವ್ಯವಸ್ಥೆಗಳ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಭದ್ರತೆಯ ಮೇಲೂ ಅವಲಂಬಿತವಾಗಿರುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ಕ್ಷಿಪಣಿಗಳು, ವಿಮಾನಗಳು, ನೌಕಾ ವೇದಿಕೆಗಳು ಮತ್ತು ಬಾಹ್ಯಾಕಾಶ ನೌಕೆಗಳು ಸೇರಿದಂತೆ ರಕ್ಷಣಾ ಅನ್ವಯಿಕೆಗಳಲ್ಲಿ, ಗುಣಮಟ್ಟವು ಕೇವಲ ಉತ್ಪಾದನಾ ಅಗತ್ಯವಲ್ಲ, ಬದಲಾಗಿ ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಭದ್ರತೆಯ ಅತ್ಯಗತ್ಯ ಅಂಶವಾಗಿದೆ ಎಂದು ಅವರು ತಿಳಿಸಿದರು.
ಈ ವಲಯದ ಕಾರ್ಯತಂತ್ರದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ರಕ್ಷಣಾ ಸಚಿವರು, ತಾಂತ್ರಿಕ ನಾಯಕತ್ವವನ್ನು ಸಾಧಿಸಲು ಆಕಾಂಕ್ಷಿಸುವ ದೇಶಕ್ಕೆ ಎನ್ಡಿಟಿಯ ಮಹತ್ವವನ್ನು ಎಷ್ಟು ಹೇಳಿದರೂ ಸಾಲದು ಎಂದು ಹೇಳಿದರು. ರಕ್ಷಣಾ ವಲಯದಲ್ಲಿ ಭಾರತದ ಆತ್ಮನಿರ್ಭರತೆಯ ಅನ್ವೇಷಣೆಯು ಕೇವಲ ಆರ್ಥಿಕ ಉದ್ದೇಶವಲ್ಲ, ಬದಲಾಗಿ ಕಾರ್ಯತಂತ್ರದ ಅಗತ್ಯವೂ ಆಗಿದೆ ಎಂದು ಅವರು ದೃಢಪಡಿಸಿದರು.
ಭಾರತದ ಬೆಳೆಯುತ್ತಿರುವ ದೇಶೀಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಎತ್ತಿಹಿಡಿದ ಶ್ರೀ ರಾಜನಾಥ್ ಸಿಂಗ್ ಅವರು, ಕ್ಷಿಪಣಿ ಅಭಿವೃದ್ಧಿ, ನೌಕಾ ವೇದಿಕೆಗಳು, ಏರೋಸ್ಪೇಸ್ ಎಂಜಿನಿಯರಿಂಗ್, ರಾಡಾರ್ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಅನ್ವಯಿಕೆಗಳಲ್ಲಿನ ಸಾಧನೆಗಳನ್ನು ರಾಷ್ಟ್ರದ ವಿಸ್ತರಿಸುತ್ತಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಾಮರ್ಥ್ಯಗಳ ಪ್ರತಿಫಲನಗಳಾಗಿ ಉಲ್ಲೇಖಿಸಿದರು. ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸೇರ್ಪಡೆಯನ್ನು ಆತ್ಮನಿರ್ಭರ ಭಾರತ ಪಯಣದ ಪ್ರಮುಖ ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.
ನಾವೀನ್ಯತೆಯ ವ್ಯಾಪಕ ಮಹತ್ವದ ಕುರಿತು ಮಾತನಾಡಿದ ರಕ್ಷಣಾ ಸಚಿವರು, ಇದು ವೈಜ್ಞಾನಿಕ ಆವಿಷ್ಕಾರಗಳು ಮತ್ತು ಹೊಸ ಸಂಶೋಧನೆಗಳನ್ನು ಮೀರಿ, ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳ ನಿರಂತರ ಸುಧಾರಣೆ, ಮೇಲ್ದರ್ಜೆಗೇರಿಸುವಿಕೆ ಹಾಗೂ ವರ್ಧನೆಯನ್ನು ಒಳಗೊಂಡಿದೆ ಎಂದು ಹೇಳಿದರು. ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ನೀತಿ ಉಪಕ್ರಮಗಳ ಮೂಲಕ ರಕ್ಷಣಾ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಸಾಧಿಸಿದ ಪ್ರಗತಿಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆಗಳು (iDEX) ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಧಿ ನವೀನ ಚಿಂತನೆ, ತಾಂತ್ರಿಕ ಅಭಿವೃದ್ಧಿ ಮತ್ತು ಪ್ರಯೋಗಗಳನ್ನು ಪ್ರೋತ್ಸಾಹಿಸಿದ ಪ್ರಮುಖ ಉಪಕ್ರಮಗಳಾಗಿದ್ದು, ಭಾರತದ ರಕ್ಷಣಾ ಪರಿಸರ ವ್ಯವಸ್ಥೆಗೆ ಹೊಸ ದಿಕ್ಕನ್ನು ನೀಡಿವೆ ಎಂದು ಅವರು ತಿಳಿಸಿದರು.
_20261115115406_1655cd.jpeg)
ಕ್ಷಿಪ್ರವಾಗಿ ಬದಲಾಗುತ್ತಿರುವ ಜಾಗತಿಕ ಭದ್ರತಾ ಪರಿಸರಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮಹತ್ವವನ್ನು ಒತ್ತಿ ಹೇಳಿದ ಶ್ರೀ ರಾಜನಾಥ್ ಸಿಂಗ್ ಅವರು, ದೇಶೀಯ ಶಸ್ತ್ರಾಸ್ತ್ರಗಳು, ವೇದಿಕೆಗಳು ಮತ್ತು ಪೂರಕ ವ್ಯವಸ್ಥೆಗಳು ಎಲ್ಲಾ ಸಮಯದಲ್ಲೂ ಅತ್ಯುನ್ನತ ಮಟ್ಟದ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ನೀಡಬೇಕು ಎಂದು ಹೇಳಿದರು. ಎನ್ಡಿಟಿ ವಲಯದೊಂದಿಗೆ ಸಂಬಂಧ ಹೊಂದಿರುವ ವೃತ್ತಿಪರರು ತಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ಮೇಲ್ದರ್ಜೆಗೇರಿಸಿಕೊಳ್ಳಬೇಕು ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ವಿಕಸನಗೊಳ್ಳುತ್ತಿರುವ ಭದ್ರತಾ ಅಗತ್ಯಗಳಿಗೆ ಅನುಗುಣವಾಗಿ ನಾವೀನ್ಯತೆಯ ಸ್ಫೂರ್ತಿಯನ್ನು ಜೀವಂತವಾಗಿರಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ವಿನಾಶರಹಿತ ಮೌಲ್ಯಮಾಪನ ಕ್ಷೇತ್ರದಲ್ಲಿ ನಡೆಯುತ್ತಿರುವ ತಾಂತ್ರಿಕ ರೂಪಾಂತರದ ಕುರಿತು ಮಾತನಾಡಿದ ರಕ್ಷಣಾ ಸಚಿವರು, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ರೊಬೊಟಿಕ್ಸ್, ಸುಧಾರಿತ ಸೆನ್ಸರ್ಗಳು, ಡಿಜಿಟಲ್ ಟ್ವಿನ್ಸ್ ಮತ್ತು ಪ್ರಿಡಿಕ್ಟಿವ್ ಅನಾಲಿಟಿಕ್ಸ್ ತಪಾಸಣೆ ಮತ್ತು ರಚನಾತ್ಮಕ ಆರೋಗ್ಯ ಮೇಲ್ವಿಚಾರಣೆಯ ಸಾಧ್ಯತೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಿವೆ ಎಂದು ಒತ್ತಿ ಹೇಳಿದರು. ಈ ತಂತ್ರಜ್ಞಾನಗಳು ತಪಾಸಣೆಯ ವೇಗ ಮತ್ತು ಸ್ಥಿರತೆಯನ್ನು ಸುಧಾರಿಸಬಹುದು, ಸಂಕೀರ್ಣ ದತ್ತಾಂಶದ ವಿಶ್ಲೇಷಣೆಯನ್ನು ಸುಗಮಗೊಳಿಸಬಹುದು ಮತ್ತು ಸಾಂಪ್ರದಾಯಿಕ ವಿಧಾನಗಳ ಮೂಲಕ ಸುಲಭವಾಗಿ ಪತ್ತೆಹಚ್ಚಲಾಗದ ಮಾದರಿಗಳನ್ನು ಗುರುತಿಸಬಹುದು ಎಂದು ಅವರು ಹೇಳಿದರು.
ತಪಾಸಣಾ ಪ್ರಕ್ರಿಯೆಗಳನ್ನು ಹೆಚ್ಚು ನಿಖರ, ಸಮರ್ಥ ಮತ್ತು ಉದಯೋನ್ಮುಖ ಕೈಗಾರಿಕಾ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡಲು ಸ್ಥಾಪಿತ ತಪಾಸಣಾ ತಂತ್ರಗಳನ್ನು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಬುದ್ಧಿವಂತಿಕೆಯಿಂದ ಸಂಯೋಜಿಸುವುದರಲ್ಲಿ ಭವಿಷ್ಯವಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಕೇವಲ ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದನ್ನು ಮೀರಿ, ತನ್ನ ಕಾರ್ಯತಂತ್ರದ ಮತ್ತು ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ದೇಶೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಭಾರತಕ್ಕೆ ಕರೆ ನೀಡಿದರು. ಸಂಶೋಧನೆ, ಸುಧಾರಿತ ಉಪಕರಣಗಳು, ಸಾಫ್ಟ್ವೇರ್ ಮತ್ತು ಕೌಶಲ್ಯಪೂರ್ಣ ಮಾನವಶಕ್ತಿಯಲ್ಲಿನ ಹೂಡಿಕೆಯು ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಭಾರತೀಯ ತಂತ್ರಜ್ಞಾನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಸರ್ಕಾರ, ಉದ್ಯಮ, ಶೈಕ್ಷಣಿಕ ವಲಯ ಮತ್ತು ಸಂಶೋಧನಾ ಪ್ರಯೋಗಾಲಯಗಳು ಒಟ್ಟಾಗಿ ಕೆಲಸ ಮಾಡಿದಾಗ ನಾವೀನ್ಯತೆಯು ಪ್ರವರ್ಧಮಾನಕ್ಕೆ ಬರುತ್ತದೆ ಎಂದು ರಕ್ಷಣಾ ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತಾಂತ್ರಿಕ ಪ್ರಗತಿ ಮತ್ತು ಕಾರ್ಯತಂತ್ರದ ಸ್ವಾವಲಂಬನೆಯ ಸಾಮಾನ್ಯ ಉದ್ದೇಶಕ್ಕಾಗಿ ಎಲ್ಲಾ ಪಾಲುದಾರರು ಒಟ್ಟಾಗಿ ಶ್ರಮಿಸುವ 'ಸಂಪೂರ್ಣ-ಸರ್ಕಾರ' ಮತ್ತು 'ಸಂಪೂರ್ಣ-ಪರಿಸರ ವ್ಯವಸ್ಥೆ' ವಿಧಾನಕ್ಕೆ ಅವರು ಕರೆ ನೀಡಿದರು.
_20261115115413_357301.jpeg)
ತೆಲಂಗಾಣದ ಹೈದರಾಬಾದ್ನಲ್ಲಿ 'ಇಂಡಿಯನ್ ಸೊಸೈಟಿ ಫಾರ್ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್' ಆಯೋಜಿಸಿರುವ ಮೂರು ದಿನಗಳ ಈ ಸಮ್ಮೇಳನವು ಎನ್ಡಿಟಿಯಲ್ಲಿನ ಇತ್ತೀಚಿನ ಪ್ರಗತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಅನ್ವಯಿಕೆಗಳ ಕುರಿತು ಸಮಾಲೋಚನೆ ನಡೆಸಲು 2,000 ಕ್ಕೂ ಹೆಚ್ಚು ವೃತ್ತಿಪರರು, ಸಂಶೋಧಕರು, ಉದ್ಯಮ ತಜ್ಞರು ಮತ್ತು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿದೆ. ಇದು ಎನ್ಡಿಟಿ ಸಾಮರ್ಥ್ಯಗಳನ್ನು ಬಲಪಡಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ರಕ್ಷಣೆ ಹಾಗೂ ಏರೋಸ್ಪೇಸ್ ಸೇರಿದಂತೆ ವಿವಿಧ ವಲಯಗಳಲ್ಲಿ ಅತ್ಯಾಧುನಿಕ ತಪಾಸಣೆ ಮತ್ತು ಮೌಲ್ಯಮಾಪನ ತಂತ್ರಜ್ಞಾನಗಳ ಅಳವಡಿಕೆಯನ್ನು ಮುನ್ನಡೆಸುವತ್ತ ಗಮನಹರಿಸಿ, ಉದ್ಯಮ, ಶೈಕ್ಷಣಿಕ ವಲಯ ಮತ್ತು ಸಂಶೋಧನಾ ಸಂಸ್ಥೆಗಳ ಪಾಲುದಾರರ ನಡುವೆ ಜ್ಞಾನ ವಿನಿಮಯ, ತಾಂತ್ರಿಕ ಚರ್ಚೆಗಳು ಮತ್ತು ಸಹಯೋಗಕ್ಕೆ ವೇದಿಕೆಯನ್ನು ಒದಗಿಸಿದೆ.
*****