ಪ್ರಕಟಣಾ ದಿನಾಂಕ:
11 NOV 2026 8:31PM by PIB Bengaluru
ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂಒಎಚ್ಯುಎ) ನಗರಾಭಿವೃದ್ಧಿ ಇಲಾಖೆ (ಡಿಒಯುಡಿ) ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಗಳು 2025-26ರ ಸಮಾರಂಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯಂತ ಸ್ವಚ್ಛ ನಗರಗಳನ್ನು ಗೌರವಿಸಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ವಿದ್ಯುತ್ ಸಚಿವ ಶ್ರೀ ಮನೋಹರ್ ಲಾಲ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ತೋಖನ್ ಸಾಹು ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು. ಈ ವರ್ಷ 5 ವಿಭಾಗಗಳ ಅಡಿಯಲ್ಲಿ ಒಟ್ಟು 60 ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅವುಗಳೆಂದರೆ:
- ಸ್ವಚ್ಛ ಶಹರ್ ಜೋಡಿ (ಎಸ್ಎಸ್ಜೆ)
- ಸೂಪರ್ ಸ್ವಚ್ಛ ಲೀಗ್ನ ಸ್ವಚ್ಛ ನಗರಗಳು
- 5 ಜನಸಂಖ್ಯಾ ವಿಭಾಗಗಳಲ್ಲಿನ ಸ್ವಚ್ಛ ನಗರಗಳು
- ಸ್ವಚ್ಛ ನದಿ ತೀತರದ ಪಟ್ಟಣ
- ಸ್ವಚ್ಛ ಕರಾವಳಿ ಪಟ್ಟಣ
- ಸ್ವಚ್ಛ ಹಿಮಾಲಯ ನಗರ
- ರಾಜ್ಯಮಟ್ಟದ ಪ್ರಥಮ ಸ್ವಚ್ಛ ನಗರ

ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, ಸ್ವಚ್ಛತೆಯನ್ನು ಯಾವುದೇ ಒಂದು ಸಂಸ್ಥೆಯ ಪ್ರಯತ್ನದಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ; ಇದಕ್ಕೆ ಎಲ್ಲ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಒತ್ತಿಹೇಳಿದರು. ನಾಗರಿಕರ ಪಾಲ್ಗೊಳ್ಳುವಿಕೆ, ನಡವಳಿಕೆಯಲ್ಲಿನ ಬದಲಾವಣೆ, ಆಡಳಿತಾತ್ಮಕ ಹೊಣೆಗಾರಿಕೆ ಮತ್ತು ನಿರಂತರ ಸಾರ್ವಜನಿಕ ಸಹಭಾಗಿತ್ವದ ಮಹತ್ವವನ್ನು ಅವರು ಪ್ರತಿಪಾದಿಸಿದರು. ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವನ್ನು ಪ್ರಸ್ತಾಪಿಸಿದ ಅವರು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಂತಹ ವಿಷಯಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಹಾಗೂ ಮಕ್ಕಳು ಮತ್ತು ಯುವಜನರೊಂದಿಗೆ ನಿರಂತರ ಸಂವಾದ ನಡೆಸಬೇಕು ಎಂದು ಕರೆ ನೀಡಿದರು. ನಾಗರಿಕರು, ಸ್ಥಳೀಯ ಆಡಳಿತಗಳು ಮತ್ತು ನೈರ್ಮಲ್ಯ ಕಾರ್ಮಿಕರು ಒಗ್ಗೂಡಿ ಕೆಲಸ ಮಾಡಿದಾಗ ಹಾಗೂ ನೈರ್ಮಲ್ಯ ಕಾರ್ಮಿಕರು ಸ್ಥಳಮಟ್ಟದಲ್ಲಿ ನೀಡುವ ಸಲಹೆಗಳು ಮತ್ತು ನಾಗರಿಕರ ಪ್ರತಿಕ್ರಿಯೆಗಳಿಗೆ ಸೂಕ್ತ ಮಹತ್ವ ನೀಡಿದಾಗ ಮಾತ್ರ ನೈರ್ಮಲ್ಯ ಕ್ಷೇತ್ರದಲ್ಲಿ ಅರ್ಥಪೂರ್ಣ ಪ್ರಗತಿ ಸಾಧ್ಯ ಎಂದು ರಾಷ್ಟ್ರಪತಿಯವರು ಹೇಳಿದರು. ನಗರಗಳು ತಮ್ಮ ನವೀನ ಪ್ರಯೋಗಗಳನ್ನು ಹಂಚಿಕೊಳ್ಳಲು, ಪರಿಹಾರಗಳನ್ನು ಪರೀಕ್ಷಿಸಲು ಮತ್ತು ನಗರ ಸ್ವಚ್ಛತೆಯ ಉನ್ನತ ಮಾನದಂಡಗಳನ್ನು ಸಾಧಿಸಲು ಪರಸ್ಪರ ನೆರವಾಗಲು ಅವಕಾಶ ಕಲ್ಪಿಸುವ ಸಹಯೋಗದ ಕಲಿಕೆಯ ಹೊಸ ಆಯಾಮವಾಗಿ ‘ಸ್ವಚ್ಛ ಶಹರ್ ಜೋಡಿ’ ಉಪಕ್ರಮವನ್ನು ಅವರು ಶ್ಲಾಘಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸ್ವಚ್ಛ ಭಾರತ ಅಭಿಯಾನವು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ರೂಪುಗೊಂಡಿದ್ದು, ನಗರ ನೈರ್ಮಲ್ಯ ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದರ ಜೊತೆಗೆ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದರು. 2014ರಿಂದ ಈವರೆಗೆ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದ ಅವರು, ನಗರ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣೆಯ ಪ್ರಮಾಣವು ಶೇ.16ರಿಂದ ಶೇ.80ಕ್ಕೆ ಏರಿಕೆಯಾಗಿದೆ. ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವ್ಯಾಪ್ತಿಯು ಶೇ.44ರಿಂದ ಶೇ.96ಕ್ಕೂ ಅಧಿಕ ಮಟ್ಟಕ್ಕೆ ಹೆಚ್ಚಿದೆ ಎಂದು ತಿಳಿಸಿದರು. ದೀರ್ಘಕಾಲದಿಂದ ಸಂಗ್ರಹವಾಗಿದ್ದ ತ್ಯಾಜ್ಯದ ರಾಶಿಗಳನ್ನು ತೆರವುಗೊಳಿಸುವ ಮೂಲಕ ಸುಮಾರು 11,000 ಎಕರೆ ನಗರ ಭೂಮಿಯನ್ನು ಇತರ ಉತ್ಪಾದಕ ಚಟುವಟಿಕೆಗಳಿಗೆ ಮುಕ್ತಗೊಳಿಸಲಾಗಿದೆ ಎಂದೂ ಅವರು ಹೇಳಿದರು.
ತಮ್ಮ ತಮ್ಮ ರಾಜ್ಯಗಳಲ್ಲಿ ನಗರಗಳು ಮತ್ತು ಪಟ್ಟಣಗಳ ಶ್ರೇಯಾಂಕ ನಿರ್ಧರಿಸಲು ರಾಜ್ಯಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಗಳನ್ನು ಆಯೋಜಿಸುವಂತೆ ಸಚಿವರು ರಾಜ್ಯಗಳಿಗೆ ಕರೆ ನೀಡಿದರು. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ಬಿ) ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡುವುದರ ಜೊತೆಗೆ ಸಣ್ಣ ಪಟ್ಟಣಗಳು ತಮ್ಮ ಸ್ವಚ್ಛತಾ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಪ್ರೋತ್ಸಾಹ ದೊರೆಯಲಿದೆ ಎಂದು ಅವರು ಹೇಳಿದರು.
ಸ್ವಚ್ಛ ಸರ್ವೇಕ್ಷಣ್ನ ಹೆಚ್ಚುತ್ತಿರುವ ವ್ಯಾಪ್ತಿ ಮತ್ತು ಪ್ರಭಾವವನ್ನು ಪ್ರಸ್ತಾಪಿಸಿದ ಶ್ರೀ ಮನೋಹರ್ ಲಾಲ್ ಅವರು, 2016ರಲ್ಲಿ 73 ನಗರಗಳಿಂದ ಆರಂಭವಾದ ಈ ಸಮೀಕ್ಷೆಯು 2025-26ರ ವೇಳೆಗೆ 4,751 ನಗರಗಳಿಗೆ ವಿಸ್ತರಿಸಿದೆ ಎಂದು ತಿಳಿಸಿದರು. ಈ ವರ್ಷದ ಸಮೀಕ್ಷೆಯಲ್ಲಿ 2.70 ಕೋಟಿ ನಾಗರಿಕರು ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. 1,700ಕ್ಕೂ ಹೆಚ್ಚು ಸಣ್ಣ ನಗರಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದು, 350ಕ್ಕೂ ಹೆಚ್ಚು ನಗರಗಳು 500ಕ್ಕೂ ಅಧಿಕ ಸ್ಥಾನಗಳಷ್ಟು ಪ್ರಗತಿ ಸಾಧಿಸಿವೆ ಎಂದು ಅವರು ಮಾಹಿತಿ ನೀಡಿದರು. ನಡವಳಿಕೆಯಲ್ಲಿನ ಬದಲಾವಣೆಯ ಮಹತ್ವವನ್ನು ಒತ್ತಿಹೇಳಿದ ಸಚಿವರು, ಸ್ವಚ್ಛ ಸರ್ವೇಕ್ಷಣ್ನ ನೈಜ ಯಶಸ್ಸು ಕೇವಲ ಶ್ರೇಯಾಂಕ ಸುಧಾರಿಸುವುದರಲ್ಲಿ ಇಲ್ಲ; ಸ್ವಚ್ಛತೆಯನ್ನು ಶಾಶ್ವತ ಅಭ್ಯಾಸವನ್ನಾಗಿ ಮತ್ತು ಸಾಮೂಹಿಕ ಹೊಣೆಗಾರಿಕೆಯನ್ನಾಗಿ ರೂಪಿಸುವುದರಲ್ಲಿದೆ ಎಂದು ಹೇಳಿದರು. ಸ್ವಚ್ಛತಾ ಹೀ ಸೇವಾ 2026ರಲ್ಲಿ ಸುಮಾರು 2.10 ಕೋಟಿ ನಾಗರಿಕರು ಪಾಲ್ಗೊಂಡಿರುವುದು, 33,000ಕ್ಕೂ ಹೆಚ್ಚು ವಿಶೇಷ ಶಿಬಿರಗಳ ಮೂಲಕ ಸುಮಾರು 17 ಲಕ್ಷ ಸಫಾಯಿಮಿತ್ರರಿಗೆ ಪ್ರಯೋಜನ ಒದಗಿಸಿರುವುದು ಹಾಗೂ ಜ್ಞಾನ ಯಾತ್ರೆಗಳಲ್ಲಿ ಸುಮಾರು 4 ಲಕ್ಷ ಮಕ್ಕಳು ಭಾಗವಹಿಸಿರುವುದನ್ನೂ ಅವರು ಪ್ರಸ್ತಾಪಿಸಿದರು.

ನಗರ ನೈರ್ಮಲ್ಯ ಕ್ಷೇತ್ರದಲ್ಲಿ ಸಹಯೋಗವನ್ನು ಬಲಪಡಿಸಲು ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸಲು ಕೈಗೊಂಡಿರುವ ಹಲವು ಹೊಸ ಉಪಕ್ರಮಗಳ ಬಗ್ಗೆಯೂ ಸಚಿವರು ವಿವರಿಸಿದರು. ‘ಸ್ವಚ್ಛ ಶಹರ್ ಜೋಡಿ’ ಉಪಕ್ರಮದಡಿ ಜ್ಞಾನ ವಿನಿಮಯಕ್ಕೆ ಅನುಕೂಲ ಕಲ್ಪಿಸಲು ಮತ್ತು ನೈರ್ಮಲ್ಯ ಫಲಿತಾಂಶಗಳನ್ನು ಸುಧಾರಿಸಲು 70 ಮಾರ್ಗದರ್ಶಕ ನಗರಗಳನ್ನು 191 ಮಾರ್ಗದರ್ಶನ ಪಡೆಯುವ ನಗರಗಳೊಂದಿಗೆ ಜೋಡಿಸಲಾಗಿದೆ ಎಂದು ಅವರು ತಿಳಿಸಿದರು. ನದಿ ತೀರದ ಪಟ್ಟಣಗಳು, ಕರಾವಳಿ ಪಟ್ಟಣಗಳು ಮತ್ತು ಹಿಮಾಲಯ ನಗರಗಳಿಗಾಗಿ ವಿಶೇಷ ಪ್ರಶಸ್ತಿ ವಿಭಾಗಗಳನ್ನು ಪರಿಚಯಿಸಿರುವುದರ ಜೊತೆಗೆ, ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲು ಐದು ಜನಸಂಖ್ಯಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದನ್ನೂ ಅವರು ಉಲ್ಲೇಖಿಸಿದರು. ʼಪ್ರಗತಿ-50ʼ ಉಪಕ್ರಮದ ಕುರಿತು ಮಾತನಾಡಿದ ಶ್ರೀ ಮನೋಹರ್ ಲಾಲ್ ಅವರು, ತಂತ್ರಜ್ಞಾನ ಆಧಾರಿತ ಕ್ರಮಗಳು ಮತ್ತು ನಿರಂತರ ಮೇಲ್ವಿಚಾರಣೆಯ ಮೂಲಕ 50 ನಗರಗಳನ್ನು ಮಾದರಿ ಸ್ವಚ್ಛ ನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಪ್ರಶಸ್ತಿ ವಿಜೇತ ಎಲ್ಲ ನಗರಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಫಾಯಿಮಿತ್ರರನ್ನು ಅಭಿನಂದಿಸಿದ ಅವರು, ಸ್ವಚ್ಛತೆಯನ್ನು ನಗರ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಹಾಗೂ ಸ್ವಚ್ಛ ಮತ್ತು ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ನಗರಾಭಿವೃದ್ಧಿ ಇಲಾಖೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಸತೇಂದ್ರ ಸಿಂಗ್ ಅವರು, ಕಳೆದ ಒಂದು ದಶಕದಲ್ಲಿ ಸ್ವಚ್ಛ ಸರ್ವೇಕ್ಷಣೆ ನಗರ ನೈರ್ಮಲ್ಯ ಸೇವೆಗಳ ಮೌಲ್ಯಮಾಪನ ಮತ್ತು ಸುಧಾರಣೆಯನ್ನು ಬಲಪಡಿಸುವುದರ ಜೊತೆಗೆ, ಅಭಿಯಾನದಡಿ ಸ್ಥಳಮಟ್ಟದಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಲು ಹೇಗೆ ನೆರವಾಗಿದೆ ಎಂಬುದನ್ನು ವಿವರಿಸಿದರು. ಸ್ವಚ್ಛ ಸರ್ವೇಕ್ಷಣೆ ಕೇವಲ ಮೌಲ್ಯಮಾಪನ ಪ್ರಕ್ರಿಯೆಯಲ್ಲ; ಸ್ವಚ್ಛ ಭಾರತದ ಆಶಯಕ್ಕೆ ಬದ್ಧರಾಗಿರುವ ಲಕ್ಷಾಂತರ ಜನರ ಸಾಮೂಹಿಕ ಧ್ವನಿಯಾಗಿದೆ ಎಂದು ಕಾರ್ಯದರ್ಶಿ ತಿಳಿಸಿದರು. “ಸ್ವಚ್ಛತೆಯ ಉದ್ದೇಶವನ್ನು ಮುನ್ನಡೆಸುವಲ್ಲಿ ನಮ್ಮ ನಗರಗಳು ಮತ್ತು ನಾಗರಿಕರು ಮಾಡಿರುವ ಅಸಾಧಾರಣ ಪ್ರಯತ್ನಗಳನ್ನು ಇಂದು ಸಂಭ್ರಮಿಸುವ ದಿನವಾಗಿದೆ” ಎಂದು ಅವರು ಹೇಳಿದರು.

ಸ್ವಚ್ಛ ಸರ್ವೇಕ್ಷಣೆ 2025-26ರ ಫಲಿತಾಂಶಗಳು ದೇಶದ ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ವೇಗ ದೊರೆತಿರುವುದನ್ನು ಪ್ರತಿಬಿಂಬಿಸುತ್ತವೆ. 350ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಶ್ರೇಯಾಂಕದಲ್ಲಿ 500ಕ್ಕೂ ಅಧಿಕ ಸ್ಥಾನಗಳಷ್ಟು ಸುಧಾರಣೆ ಸಾಧಿಸಿವೆ. ಈ ಪರಿವರ್ತನೆಯಲ್ಲಿ ಸಣ್ಣ ನಗರಗಳು ಪ್ರಮುಖ ಪಾತ್ರ ವಹಿಸಿವೆ. 50,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ 1,700ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು 2024-25ಕ್ಕೆ ಹೋಲಿಸಿದರೆ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿವೆ. ಇದರಿಂದ ನಿರಂತರ ಪ್ರಯತ್ನಗಳು ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯು ಎಲ್ಲ ಗಾತ್ರದ ಪಟ್ಟಣಗಳಲ್ಲೂ ಸ್ವಚ್ಛತಾ ಆಂದೋಲನಕ್ಕೆ ವೇಗ ನೀಡುತ್ತಿರುವುದು ಸ್ಪಷ್ಟವಾಗಿದೆ.
ಸಹಯೋಗದ ಪ್ರಯತ್ನಗಳು ಮತ್ತು ಪರಸ್ಪರ ಕಲಿಕೆಯ ಮೂಲಕ ಶ್ರೇಷ್ಠ ಸಾಧನೆ ತೋರಿದ ಅಹಮದಾಬಾದ್ (ಮಾರ್ಗದರ್ಶಕ ನಗರ) ಮತ್ತು ಸನಂದ್ (ಮಾರ್ಗದರ್ಶನ ಪಡೆಯುವ ನಗರ), ಇಂದೋರ್ (ಮಾರ್ಗದರ್ಶಕ ನಗರ) ಮತ್ತು ದೇಪಾಲ್ಪುರ (ಮಾರ್ಗದರ್ಶನ ಪಡೆಯುವ ನಗರ), ತಿರುಪತಿ (ಮಾರ್ಗದರ್ಶಕ ನಗರ) ಮತ್ತು ಕುಪ್ಪಂ (ಮಾರ್ಗದರ್ಶನ ಪಡೆಯುವ ನಗರ) ನಗರಗಳು ‘ಸ್ವಚ್ಛ ಶಹರ್ ಜೋಡಿ’ ಪ್ರಶಸ್ತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಮಾರ್ಗದರ್ಶಕ ನಗರ (ಸ್ವಚ್ಛ ಸರ್ವೇಕ್ಷಣೆ 2024-25ರ ಪ್ರಶಸ್ತಿ ವಿಜೇತ ನಗರ) ಮತ್ತು ಅದರೊಂದಿಗೆ ಜೋಡಿಸಲಾದ ಮಾರ್ಗದರ್ಶನ ಪಡೆಯುವ ನಗರದ ಸಂಯೋಜಿತ ಅಂಕಗಳ ಆಧಾರದ ಮೇಲೆ ಅಗ್ರ ಮೂರು ಸ್ವಚ್ಛ ನಗರ ಜೋಡಿಗಳನ್ನು ಗುರುತಿಸಲಾಗಿದೆ. ಈ ಉಪಕ್ರಮದಡಿ ಎರಡೂ ನಗರಗಳ ಜಂಟಿ ಸಾಧನೆ ಮತ್ತು ಸಹಯೋಗದ ಪ್ರಯತ್ನಗಳನ್ನು ಇದು ಪ್ರತಿಬಿಂಬಿಸುತ್ತದೆ. ಆ ಮೂಲಕ ಒಟ್ಟಾರೆ ಸ್ವಚ್ಛತೆ ಮತ್ತು ಸೇವಾ ವಿತರಣೆಯಲ್ಲಿನ ಸುಧಾರಣೆಗಳ ಜೊತೆಗೆ ಮಾರ್ಗದರ್ಶನದ ಫಲಿತಾಂಶಗಳನ್ನೂ ಗುರುತಿಸಿ ಗೌರವಿಸಲಾಗುತ್ತದೆ. ಈ ಜೋಡಿ ಪ್ರಶಸ್ತಿಯ ಉದ್ದೇಶವೆಂದರೆ ಉತ್ತಮ ಸಾಧನೆ ತೋರಿದ ನಗರಗಳು ಕಡಿಮೆ ಅಂಕಗಳನ್ನು ಪಡೆದ ನಗರಗಳಿಗೆ ಮಾರ್ಗದರ್ಶನ ನೀಡಿ, ಅವುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುವುದಾಗಿದೆ. 2024-25ರ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ, ‘ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಕಲಿಸಬೇಕು’ (Each One – Teach One) ಎಂಬ ಆಶಯದೊಂದಿಗೆ ಈ ಉಪಕ್ರಮವನ್ನು ಆರಂಭಿಸಲಾಯಿತು. ಭಾರತದ ಪ್ರಾಚೀನ ಗುರು-ಶಿಷ್ಯ ಪರಂಪರೆಯಲ್ಲಿ ಬೇರೂರಿರುವ ಈ ಉಪಕ್ರಮದ ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ಜ್ಞಾನ, ಅನುಭವ ಮತ್ತು ಉತ್ತಮ ಅಭ್ಯಾಗಳನ್ನು ಹಂಚಿಕೊಳ್ಳಲಾಗುತ್ತದೆ. ಆ ಮೂಲಕ ನಗರಗಳ ಶ್ರೇಷ್ಠತೆ ಮತ್ತು ಸ್ವಚ್ಛತೆಯೆಡೆಗಿನ ಸಾಮೂಹಿಕ ಪಯಣವನ್ನು ಮುನ್ನಡೆಸುವ ಉದ್ದೇಶ ಹೊಂದಲಾಗಿದೆ.


ಮಹಾರಾಷ್ಟ್ರದ ನವೀ ಮುಂಬೈ, ಗುಜರಾತ್ನ ಸೂರತ್ ಮತ್ತು ಆಂಧ್ರಪ್ರದೇಶದ ವಿಜಯವಾಡ ನಗರಗಳು ‘ಸೂಪರ್ ಸ್ವಚ್ಛ ಲೀಗ್ನ ಸ್ವಚ್ಛ ನಗರಗಳು’ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ಸ್ವಚ್ಛ ನಗರಗಳ ಹೊಸ ಪೀಳಿಗೆಯ ಉದಯವನ್ನು ಸಾರುವಂತೆ, 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಜಿವಿಎಂಸಿ ವಿಶಾಖಪಟ್ಟಣಂ, ಜಬಲ್ಪುರ ಮತ್ತು ಲಖನೌ ನಗರಗಳು ದೇಶದ ಅಗ್ರ ಸ್ವಚ್ಛ ನಗರಗಳಾಗಿ ಹೊರಹೊಮ್ಮಿವೆ.


ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಗಳು 2025-26ರ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಬೆಟ್ಟಗುಡ್ಡ ಪ್ರದೇಶಗಳು ಮತ್ತು ಹಿಮಾಲಯದ ನಗರಗಳ ಜೊತೆಗೆ ನದಿ ತೀರದ ಹಾಗೂ ಕರಾವಳಿ ಪಟ್ಟಣಗಳನ್ನೂ ಒಳಗೊಳ್ಳಲಾಗಿದೆ. ಉತ್ತರಾಖಂಡದ ರುದ್ರಪುರ, ಜಮ್ಮು ಮತ್ತು ಕಾಶ್ಮೀರದ ಜಮ್ಮು ಹಾಗೂ ಶೋಪಿಯಾನ್ ನಗರಗಳನ್ನು ಅಗ್ರ ಮೂರು ಸ್ವಚ್ಛ ಹಿಮಾಲಯ ನಗರಗಳು ಎಂದು ಘೋಷಿಸಲಾಗಿದೆ. ನದಿ ತೀರಗಳು, ಕರಾವಳಿ ಪ್ರದೇಶಗಳು ಮತ್ತು ಜಲಮೂಲಗಳು ನಮ್ಮ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ. ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಮಾತ್ರವಲ್ಲದೆ, ಸಮುದಾಯಗಳ ಆರೋಗ್ಯ ಮತ್ತು ಜೀವನೋಪಾಯದ ದೃಷ್ಟಿಯಿಂದಲೂ ಅವುಗಳ ಸ್ವಚ್ಛತೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಸ್ವಚ್ಛ ನದಿ ತೀರದ ಪಟ್ಟಣ ವಿಭಾಗದಲ್ಲಿ ಮಧ್ಯಪ್ರದೇಶದ ರೇವಾ, ಛತ್ತೀಸಗಢದ ಬಿಲಾಸಪುರ ಮತ್ತು ಉತ್ತರ ಪ್ರದೇಶದ ವಾರಾಣಸಿ ನಗರಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಅದೇ ರೀತಿ, ಸ್ವಚ್ಛ ಕರಾವಳಿ ಪಟ್ಟಣ ವಿಭಾಗದ ಪ್ರಶಸ್ತಿಗಳು ಒಡಿಶಾದ ಪುರಿ, ಕೇರಳದ ಅಲಪ್ಪುಳ ಮತ್ತು ಮಹಾರಾಷ್ಟ್ರದ ರತ್ನಗಿರಿ ನಗರಗಳಿಗೆ ಲಭಿಸಿವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಶ್ರೇಷ್ಠ ಸಾಧನೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ 30 ಅತ್ಯುತ್ತಮ ಸಾಧನೆ ತೋರಿದ ನಗರಗಳಿಗೆ ‘ರಾಜ್ಯಮಟ್ಟದ ಪ್ರಥಮ ಸ್ವಚ್ಛ ನಗರ’ ಪ್ರಶಸ್ತಿ ನೀಡಲಾಗಿದೆ. ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಶಸ್ತಿಗಳಿಗಾಗಿ ಎರಡು ವಿಭಾಗಗಳಾಗಿ ವರ್ಗೀಕರಿಸಲಾಗಿದೆ: (i) 5ರವರೆಗೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವವು ಮತ್ತು (ii) 5ಕ್ಕಿಂತ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವವು.

ಸ್ವಚ್ಛ ಸರ್ವೇಕ್ಷಣ್ನ 10ನೇ ಆವೃತ್ತಿಯ ಭಾಗವಾಗಿ, 10 ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 43 ಮಾನದಂಡಗಳ ಆಧಾರದ ಮೇಲೆ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ಬಿ) ಮೌಲ್ಯಮಾಪನ ನಡೆಸಲಾಗಿದೆ. ಅವುಗಳಲ್ಲಿ ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಮತ್ತು ಸಾಗಣೆ, ಘನತ್ಯಾಜ್ಯ ನಿರ್ವಹಣೆ, ಕಣ್ಣಿಗೆ ಕಾಣುವ ಸ್ವಚ್ಛತೆ, ನೈರ್ಮಲ್ಯ ಸೌಲಭ್ಯಗಳ ಲಭ್ಯತೆ, ಕೆಸರು ಮತ್ತು ಮಲತ್ಯಾಜ್ಯ ತೆರವು ಸೇವೆಗಳ ಯಾಂತ್ರೀಕರಣ, ವ್ಯವಸ್ಥೆಯ ಬಲವರ್ಧನೆ ಮತ್ತು ಸಾಂಸ್ಥಿಕ ಮಾನದಂಡಗಳು, ಬಳಸಿದ ನೀರಿನ ನಿರ್ವಹಣೆ, ಸ್ವಚ್ಛತೆಯ ಕುರಿತ ಜಾಗೃತಿ ಮತ್ತು ಪ್ರಚಾರ, ನೈರ್ಮಲ್ಯ ಕಾರ್ಮಿಕರ ಒಟ್ಟಾರೆ ಕಲ್ಯಾಣ, ನಾಗರಿಕರ ಪ್ರತಿಕ್ರಿಯೆ ಮತ್ತು ಕುಂದುಕೊರತೆಗಳ ಪರಿಹಾರ ಮೊದಲಾದ ಪ್ರಮುಖ ಕ್ಷೇತ್ರಗಳು ಸೇರಿವೆ. ದೇಶಾದ್ಯಂತ 3,000ಕ್ಕೂ ಹೆಚ್ಚು ತರಬೇತಿ ಪಡೆದ ಮೌಲ್ಯಮಾಪಕರು ವ್ಯಾಪಕ ಸ್ಥಳಮಟ್ಟದ ಪರಿಶೀಲನೆಗಳನ್ನು ನಡೆಸಿದ್ದು, ಜಿಪಿಎಸ್ ಆಧಾರಿತ ನೈಜ ಸಮಯದ ಮೇಲ್ವಿಚಾರಣೆಯ ಮೂಲಕ ಈ ಪ್ರಕ್ರಿಯೆಗೆ ಬೆಂಬಲ ಒದಗಿಸಲಾಗಿದೆ. ದಾಖಲೆ ಮತ್ತು ಪುರಾವೆಗಳನ್ನು ಸಲ್ಲಿಸುವುದರಿಂದ ಹಿಡಿದು ಅವುಗಳ ಪರಿಶೀಲನೆಯವರೆಗೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾದ ಗುಣಮಟ್ಟದ ಭರವಸೆಯೊಂದಿಗೆ ನಡೆಸಲಾಗಿದೆ. ಇದರಿಂದ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ವಿಶ್ವಾಸಾರ್ಹತೆ ಮತ್ತು ಏಕರೂಪತೆಯನ್ನು ಖಚಿತಪಡಿಸಲಾಗಿದೆ.
*****