ಪ್ರಕಟಣಾ ದಿನಾಂಕ:
11 NOV 2026 3:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ನವದೆಹಲಿಯ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಸಂಕೀರ್ಣದಲ್ಲಿ ಯುಗೆ ಯುಗೀನ್ ಭಾರತ್ ಮ್ಯೂಸಿಯಂ (ವೈವೈಬಿಎಂ) ಅಭಿವೃದ್ಧಿಪಡಿಸಲು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಮೌಲ್ಯಮಾಪನ ಮಾಡಿದಂತೆ ಒಟ್ಟು ಅಂದಾಜು ₹3,230 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಿದೆ.
ಯೋಜನೆಯ ಪ್ರಮುಖ ವಿವರಗಳು
- ಯುಗೆ ಯುಗೀನ್ ಭಾರತ್ ಮ್ಯೂಸಿಯಂ ಭಾರತದ ನಾಗರಿಕತೆಯ ಪರಂಪರೆಯ ನಿರಂತರತೆ, ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪರಿಚಯಿಸುವ ಮಹತ್ವದ ನಾಗರಿಕತೆಯ ವಸ್ತುಸಂಗ್ರಹಾಲಯವಾಗಿ ರೂಪುಗೊಳ್ಳಲಿದೆ. ಭಾರತದ ಮೂರ್ತ ಮತ್ತು ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಮಗ್ರವಾಗಿ ನಿರೂಪಿಸುವ ಮೂಲಕ ಈ ಪರಂಪರೆಯ ವಿವಿಧ ಆಯಾಮಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
- ಐತಿಹಾಸಿಕ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಸಂಕೀರ್ಣಗಳ ವಾಸ್ತುಶಿಲ್ಪದ ಸ್ವರೂಪ ಹಾಗೂ ಪಾರಂಪರಿಕ ಮಹತ್ವವನ್ನು ಉಳಿಸಿಕೊಂಡೇ, ಅವುಗಳನ್ನು ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಗಳಾಗಿ ಪರಿವರ್ತಿಸುವ ಮೂಲಕ ಈ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ.
- ಸುಮಾರು 1,78,509 ಚದರ ಮೀಟರ್ಗಳ ಪ್ರಸ್ತಾವಿತ ನಿರ್ಮಿತ ಪ್ರದೇಶದಲ್ಲಿ ವ್ಯಾಪಿಸಿರುವ ಈ ವಸ್ತುಸಂಗ್ರಹಾಲಯದಲ್ಲಿ ಸಮಕಾಲೀನ ವಸ್ತುಸಂಗ್ರಹಾಲಯ ಪದ್ಧತಿಗಳು, ತಲ್ಲೀನಗೊಳಿಸುವ ತಂತ್ರಜ್ಞಾನಗಳು ಮತ್ತು ಸಂದರ್ಶಕರಿಗೆ ಆದ್ಯತೆ ನೀಡುವ ವಿವರಣಾ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಪ್ರಮುಖ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಯುಗೆ ಯುಗೀನ್ ಭಾರತ್ ಮ್ಯೂಸಿಯಂ, ವಿಶ್ವದಲ್ಲೇ ಅತಿ ದೊಡ್ಡ ಪ್ರದರ್ಶನ ಪ್ರದೇಶವನ್ನು ಹೊಂದಿರುವ ವಸ್ತುಸಂಗ್ರಹಾಲಯವಾಗಲಿದೆ.
- ವಿಷಯಾಧಾರಿತ ಗ್ಯಾಲರಿಗಳು, ಪ್ರದರ್ಶನಗಳು ಮತ್ತು ವಿವರಣಾ ನಿರೂಪಣೆಗಳ ಮೂಲಕ ಭಾರತದ ನಾಗರಿಕತೆಯ ಪಯಣವನ್ನು ಈ ವಸ್ತುಸಂಗ್ರಹಾಲಯವು ಪರಿಚಯಿಸಲಿದೆ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳು, ಜ್ಞಾನ ವ್ಯವಸ್ಥೆಗಳು, ಕಲಾತ್ಮಕ ಅಭಿವ್ಯಕ್ತಿಗಳು ಮತ್ತು ಪರಂಪರೆಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
- ಈ ಯೋಜನೆಯಡಿ ಗ್ಯಾಲರಿಗಳ ಅಭಿವೃದ್ಧಿ, ಕಲಾಕೃತಿಗಳ ಸಂಗ್ರಹಣೆ ಮತ್ತು ಸಂರಕ್ಷಣಾ ಸೌಲಭ್ಯಗಳು, ಸಂದರ್ಶಕರಿಗೆ ಅಗತ್ಯ ಸೌಲಭ್ಯಗಳು, ತಂತ್ರಜ್ಞಾನಗಳ ಅಳವಡಿಕೆ ಮತ್ತು ತಲ್ಲೀನಗೊಳಿಸುವ ಅನುಭವಗಳು, ಲ್ಯಾಂಡ್ಸ್ಕೇಪಿಂಗ್, ಸ್ಮಾರ್ಟ್ ಕಟ್ಟಡ ವ್ಯವಸ್ಥೆಗಳು ಹಾಗೂ ಸಂಬಂಧಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
- ವಸ್ತುಸಂಗ್ರಹಾಲಯಗಳ ಯೋಜನೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಪ್ರದರ್ಶನ ವಿನ್ಯಾಸ ಮತ್ತು ಸುಸ್ಥಿರ ಸಾಂಸ್ಕೃತಿಕ ನಿರ್ವಹಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಅತ್ಯುತ್ತಮ ಪದ್ಧತಿಗಳನ್ನು ಅನುಸರಿಸಿ ಈ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಪದ್ಧತಿಗಳನ್ನು ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಸಂದರ್ಭಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲಾಗುತ್ತದೆ.
ಹಿನ್ನೆಲೆ
ಯುಗೆ ಯುಗೀನ್ ಭಾರತ್ ಮ್ಯೂಸಿಯಂ ಸ್ಥಾಪನೆಯನ್ನು ಪ್ರಧಾನಮಂತ್ರಿಯವರು 18 ಮೇ 2023ರಂದು ಘೋಷಣೆಯನ್ನು.
ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿದ ನಂತರ ಐತಿಹಾಸಿಕ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಟ್ಟಡಗಳನ್ನು ಮಹತ್ವದ ಸಾರ್ವಜನಿಕ ಸಾಂಸ್ಕೃತಿಕ ಉದ್ದೇಶಕ್ಕಾಗಿ ಮರುಬಳಕೆ ಮಾಡಲು ವಿಶಿಷ್ಟ ಅವಕಾಶ ದೊರೆತಿದೆ. ಈ ಯೋಜನೆಯು ಈ ಪ್ರತಿಷ್ಠಿತ ಕಟ್ಟಡಗಳ ವಾಸ್ತುಶಿಲ್ಪದ ಸ್ವರೂಪ ಮತ್ತು ಪಾರಂಪರಿಕ ಮಹತ್ವವನ್ನು ಸಂರಕ್ಷಿಸುವುದರ ಜೊತೆಗೆ, ಅವುಗಳಿಗೆ ಹೊಸ ಸಾಂಸ್ಥಿಕ ಪಾತ್ರವನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ಈ ಪ್ರಸ್ತಾವನೆಯನ್ನು 27 ಜುಲೈ 2026ರಂದು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಮೌಲ್ಯಮಾಪನ ಮಾಡಿದ್ದು, ಮಂಡಳಿಯ ಶಿಫಾರಸುಗಳಿಗೆ ಸಂಸ್ಕೃತಿ ಸಚಿವಾಲಯವು ಸಮ್ಮತಿ ಸೂಚಿಸಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು
ಈ ಯೋಜನೆಯನ್ನು 2026-27ರಿಂದ 2030-31ರ ಹಣಕಾಸು ವರ್ಷದವರೆಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ. 'ಅಲಂಕಾರ' ವಿಷಯಾಧಾರಿತ ಮೊದಲ ಗ್ಯಾಲರಿಯನ್ನು 2027ರ ಕೊನೆಯ ಭಾಗದಲ್ಲಿ ನಾರ್ತ್ ಬ್ಲಾಕ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ನಿರೀಕ್ಷೆಯಿದೆ. ಹೆಚ್ಚಿನ ಗ್ಯಾಲರಿಗಳನ್ನು ಸೇರ್ಪಡೆಗೊಳಿಸಲು ಮಾಡ್ಯುಲರ್ ವಿಧಾನವನ್ನು ರೂಪಿಸಲಾಗುತ್ತಿದೆ. ವಸ್ತುಸಂಗ್ರಹಾಲಯದ ಪ್ರದರ್ಶನಗಳ ವಿಷಯವಸ್ತು ಮತ್ತು ಸಂಗ್ರಹಗಳ ವಿಶ್ಲೇಷಣೆ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಸಂಸ್ಕೃತಿ ಸಚಿವಾಲಯದ ಇತರ ವಸ್ತುಸಂಗ್ರಹಾಲಯಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) 52 ತಾಣ ವಸ್ತುಸಂಗ್ರಹಾಲಯಗಳು, ವಿವಿಧ ರಾಜ್ಯಗಳ ಇತರ ವಸ್ತುಸಂಗ್ರಹಾಲಯಗಳು ಹಾಗೂ ಖಾಸಗಿ ಸಂಗ್ರಹಗಳಿಂದ ಸುಮಾರು 18 ಲಕ್ಷ ವಸ್ತುಗಳನ್ನು ಯುಗೆ ಯುಗೀನ್ ಭಾರತ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲು ಗುರುತಿಸಲಾಗಿದೆ.
ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸಗಳು, ಗಣಿತ ಮತ್ತು ಖಗೋಳಶಾಸ್ತ್ರ, ಭಾಷೆಗಳು ಮತ್ತು ಲಿಪಿಗಳು, ಧರ್ಮ ಮತ್ತು ಆಧ್ಯಾತ್ಮಿಕತೆ ಹಾಗೂ 'ಭಾರತ್ ಕನೆಕ್ಟ್ಸ್ – ವ್ಯಾಪಾರ ಮತ್ತು ವಿಚಾರಗಳು' ಸೇರಿದಂತೆ ಹಲವು ವಿಷಯಗಳ ಆಧಾರದಲ್ಲಿ ಇತರ ಗ್ಯಾಲರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸಮನ್ವಯಿತ ಯೋಜನಾ ನಿರ್ವಹಣೆ, ವಿನ್ಯಾಸ ಮತ್ತು ತಾಂತ್ರಿಕ ಮೇಲ್ವಿಚಾರಣೆ, ಗುಣಮಟ್ಟದ ಭರವಸೆ ಹಾಗೂ ಕಾಲಕಾಲಕ್ಕೆ ನಡೆಸುವ ಪರಿಶೀಲನೆಗಳ ಮೂಲಕ ಯೋಜನೆಯ ಅನುಷ್ಠಾನವನ್ನು ಕೈಗೊಳ್ಳಲಾಗುತ್ತದೆ.
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮಗಳು
ಯುಗೆ ಯುಗೀನ್ ಭಾರತ್ ಮ್ಯೂಸಿಯಂನಿಂದ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಮಹತ್ವದ ಫಲಿತಾಂಶಗಳು ದೊರೆಯುವ ನಿರೀಕ್ಷೆಯಿದೆ.
- ನಾಗರಿಕತೆಯ ಪರಂಪರೆಯ ಸಂರಕ್ಷಣೆ: ಭಾರತದ ನಾಗರಿಕತೆಯ ವಿಕಸನ, ನಿರಂತರತೆ ಮತ್ತು ವೈವಿಧ್ಯತೆಯನ್ನು ಸಮಗ್ರವಾಗಿ ಪರಿಚಯಿಸಲು ಈ ವಸ್ತುಸಂಗ್ರಹಾಲಯವು ಸಾಂಸ್ಥಿಕ ವೇದಿಕೆಯನ್ನು ಒದಗಿಸಲಿದೆ. ಇದರ ಮೂಲಕ ಮೂರ್ತ ಮತ್ತು ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪ್ರಸರಣಕ್ಕೆ ಮತ್ತಷ್ಟು ಬಲ ದೊರೆಯಲಿದೆ.
- ಪಾರಂಪರಿಕ ಕಟ್ಟಡಗಳ ಹೊಂದಾಣಿಕೆಯ ಮರುಬಳಕೆ: ಐತಿಹಾಸಿಕ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಟ್ಟಡಗಳ ವಾಸ್ತುಶಿಲ್ಪದ ಸ್ವರೂಪ ಹಾಗೂ ಪಾರಂಪರಿಕ ಮಹತ್ವವನ್ನು ಉಳಿಸಿಕೊಂಡೇ, ಅವುಗಳಿಗೆ ಮಹತ್ವದ ಸಾರ್ವಜನಿಕ ಸಾಂಸ್ಕೃತಿಕ ಉದ್ದೇಶವನ್ನು ಕಲ್ಪಿಸಲಾಗುತ್ತದೆ.
- ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಅಂತರರಾಷ್ಟ್ರೀಯ ಸಂಪರ್ಕ: ಈ ವಸ್ತುಸಂಗ್ರಹಾಲಯವು ಪ್ರಮುಖ ಸಾಂಸ್ಕೃತಿಕ ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆಯಿದ್ದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಸಂದರ್ಶಕರನ್ನು ಆಕರ್ಷಿಸಲಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಅಸ್ತಿತ್ವ ಮತ್ತು ಮೃದು ಶಕ್ತಿ (ಸಾಫ್ಟ್ ಪವರ್) ಮತ್ತಷ್ಟು ಬಲಗೊಳ್ಳಲಿದೆ.
- ಶಿಕ್ಷಣ ಮತ್ತು ಸಂಶೋಧನೆ: ಸಾರ್ವಜನಿಕರ ಕಲಿಕೆ, ಶೈಕ್ಷಣಿಕ ಸಂಶೋಧನೆ, ಜ್ಞಾನ ವಿನಿಮಯ ಹಾಗೂ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಗಳು ಮತ್ತು ಜ್ಞಾನ ವ್ಯವಸ್ಥೆಗಳ ಕುರಿತು ತಿಳಿದುಕೊಳ್ಳಲು ಈ ವಸ್ತುಸಂಗ್ರಹಾಲಯವು ಅವಕಾಶಗಳನ್ನು ಒದಗಿಸಲಿದೆ.
- ಉದ್ಯೋಗ ಸೃಷ್ಟಿ: ನಿರ್ಮಾಣ ಮತ್ತು ಕಾರ್ಯಾಚರಣೆಯ ಹಂತಗಳಲ್ಲಿ ಈ ಯೋಜನೆಯಿಂದ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಕುಶಲಕರ್ಮಿಗಳು, ಕರಕುಶಲ ವೃತ್ತಿನಿರತರು, ಸಂಶೋಧಕರು, ವಸ್ತುಸಂಗ್ರಹಾಲಯ ತಜ್ಞರು, ವಿನ್ಯಾಸಕರು, ಕಲಾವಿದರು ಮತ್ತು ಇತರ ಸೃಜನಶೀಲ ವೃತ್ತಿಪರರಿಗೆ ಹೊಸ ಅವಕಾಶಗಳು ದೊರೆಯಲಿವೆ. ಇದರ ಜೊತೆಗೆ ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜೀವನೋಪಾಯಕ್ಕೂ ಬೆಂಬಲ ದೊರೆಯಲಿದೆ.
- ಮೇಕ್ ಇನ್ ಇಂಡಿಯಾಗೆ ಉತ್ತೇಜನ: ವ್ಯವಸ್ಥಿತ ಪೂರೈಕೆದಾರರ ಅಭಿವೃದ್ಧಿ ಉಪಕ್ರಮಗಳ ಮೂಲಕ, ವಿಶ್ವದರ್ಜೆಯ ವಸ್ತುಸಂಗ್ರಹಾಲಯಗಳಿಗೆ ಅಗತ್ಯವಾದ ಸಾಮಗ್ರಿಗಳು ಮತ್ತು ಉತ್ಪನ್ನಗಳ ದೇಶೀಯ ಉತ್ಪಾದನೆಯನ್ನು ಈ ಯೋಜನೆ ಉತ್ತೇಜಿಸಲಿದೆ. ಇದರಿಂದ ಭಾರತೀಯ ಕುಶಲಕರ್ಮಿಗಳು, ತಯಾರಕರು, ಸಂರಕ್ಷಣಾ ಕ್ಷೇತ್ರದ ವೃತ್ತಿಪರರು ಮತ್ತು ತಂತ್ರಜ್ಞಾನ ಪೂರೈಕೆದಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ.
- ಸಂದರ್ಶಕರಿಗೆ ಆದ್ಯತೆ ನೀಡುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಮೂಲಸೌಕರ್ಯ: ಸಮಕಾಲೀನ ವಸ್ತುಸಂಗ್ರಹಾಲಯ ತಂತ್ರಜ್ಞಾನಗಳು ಹಾಗೂ ಎಲ್ಲರಿಗೂ ಸುಲಭವಾಗಿ ಪ್ರವೇಶಿಸಲು ಮತ್ತು ಬಳಸಲು ಅನುಕೂಲವಾಗುವ ಸಂದರ್ಶಕರ ಸೌಲಭ್ಯಗಳು ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲಿವೆ. ಇದರಿಂದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರ ಒಟ್ಟಾರೆ ಅನುಭವವೂ ಉತ್ತಮಗೊಳ್ಳಲಿದೆ.
ವೆಚ್ಚದ ವಿವರಗಳು
ಸಂಬಂಧಪಟ್ಟ ಸಂಸ್ಥೆಗಳು ಕೈಗೊಂಡ ತಾಂತ್ರಿಕ ಮೌಲ್ಯಮಾಪನಗಳು ಸೇರಿದಂತೆ, ವಾಸ್ತುಶಿಲ್ಪ ಮತ್ತು ಪ್ರದರ್ಶನ ವಿನ್ಯಾಸ, ಎಂಜಿನಿಯರಿಂಗ್ ಹಾಗೂ ವಸ್ತುಸಂಗ್ರಹಾಲಯದ ಯೋಜನೆಗೆ ಸಂಬಂಧಿಸಿದ ಅಗತ್ಯತೆಗಳ ವಿವರವಾದ ಪರಿಶೀಲನೆಯ ಆಧಾರದ ಮೇಲೆ ಯೋಜನೆಯ ಒಟ್ಟು ಅಂದಾಜು ವೆಚ್ಚವನ್ನು ₹3,230 ಕೋಟಿ ಎಂದು ನಿಗದಿಪಡಿಸಲಾಗಿದೆ.
ಟಿಕೆಟ್ ಮಾರಾಟ, ಆಹಾರ ಮತ್ತು ಪಾನೀಯ ಸೌಲಭ್ಯಗಳು, ಕಾರ್ಯಕ್ರಮಗಳು ಮತ್ತು ಸ್ಥಳ ಬಾಡಿಗೆ, ಡಿಜಿಟಲ್ ಅನುಭವಗಳು, ಮಾರ್ಗದರ್ಶಿತ ಪ್ರವಾಸಗಳು, ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ ಇತರ ಸಂದರ್ಶಕ ಸೇವೆಗಳ ಮೂಲಕ ವಸ್ತುಸಂಗ್ರಹಾಲಯವು ನಿರಂತರ ಆದಾಯವನ್ನೂ ಗಳಿಸುವ ನಿರೀಕ್ಷೆಯಿದೆ. ವರ್ಷಕ್ಕೆ 1 ಕೋಟಿ ಸಂದರ್ಶಕರ ಭೇಟಿಯನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ವಸ್ತುಸಂಗ್ರಹಾಲಯವನ್ನು ಸಜ್ಜುಗೊಳಿಸಲಾಗುತ್ತಿದೆ.
ಫಲಾನುಭವಿಗಳ ಸಂಖ್ಯೆ
ಈ ವಸ್ತುಸಂಗ್ರಹಾಲಯವನ್ನು ರಾಷ್ಟ್ರೀಯ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಯಾಗಿ ರೂಪಿಸಲಾಗುತ್ತಿದ್ದು, ಸಾಮಾನ್ಯ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು, ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರು ಮತ್ತು ಇತರ ಸಂದರ್ಶಕರಿಗೆ ಸೇವೆ ಒದಗಿಸಲಿದೆ.
ಸಾರ್ವಜನಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿ, ಭಾರತದ ನಾಗರಿಕತೆಯ ಪರಂಪರೆಯನ್ನು ತಿಳಿದುಕೊಳ್ಳಲು, ಸಂಶೋಧನೆ ನಡೆಸಲು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಅದರ ಮಹತ್ವವನ್ನು ಅರಿಯಲು ಈ ವಸ್ತುಸಂಗ್ರಹಾಲಯವು ಅವಕಾಶಗಳನ್ನು ಒದಗಿಸಲಿದೆ. ಈ ಯೋಜನೆಗೆ ನಿರ್ದಿಷ್ಟ ಫಲಾನುಭವಿಗಳ ಸಂಖ್ಯೆ ಅನ್ವಯಿಸುವುದಿಲ್ಲ.
ಒಳಗೊಂಡಿರುವ ರಾಜ್ಯಗಳು / ಜಿಲ್ಲೆಗಳು
ಈ ವಸ್ತುಸಂಗ್ರಹಾಲಯವು ನವದೆಹಲಿಯ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ. ಇದರ ಭೌತಿಕ ಮೂಲಸೌಕರ್ಯವು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದರೂ, ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂದರ್ಶಕರಿಗೆ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಸೇವೆ ಒದಗಿಸುವ ಸಂಸ್ಥೆಯಾಗಿ ಇದನ್ನು ರೂಪಿಸಲಾಗಿದೆ.
*****