ಪ್ರಕಟಣಾ ದಿನಾಂಕ:
08 NOV 2026 2:53PM by PIB Bengaluru
ಭಾರತ ಮಾತಾ ಕೀ ಜೈ.
ಭಾರತ ಮಾತಾ ಕೀ ಜೈ.
ಭಾರತ ಮಾತಾ ಕೀ ಜೈ.
ನನ್ನ ಪ್ರಿಯ ದೇಶವಾಸಿಗಳೇ,
ಇಂದು ದೇಶಾದ್ಯಂತ ಮತ್ತು ವಿಶ್ವಾದ್ಯಂತದ ಮೂಲೆಮೂಲೆಗಳಲ್ಲಿರುವ ಕೋಟ್ಯಂತರ ಭಾರತೀಯರು ಬೆಳಕಿನ ಪವಿತ್ರ ಹಬ್ಬ ದೀಪಾವಳಿ ಆಚರಿಸುತ್ತಿದ್ದಾರೆ. ಜನರು ತಮ್ಮ ಮನೆಗಳನ್ನು ತಲುಪಲು ದೂರದ ಸ್ಥಳಗಳಿಂದ ಪ್ರಯಾಣಿಸುತ್ತಿದ್ದಾರೆ. ಇದು ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಸೇರುವ ಹಾಗೂ ಅವರೊಂದಿಗೆ ಸಮಯ ಕಳೆಯುವ ಒಂದು ಬೆಳಕಿನ ಹಬ್ಬವಾಗಿದೆ. ದೀಪಾವಳಿ ಆಚರಿಸಲು ನಾನು ಸಹ ನಿಮ್ಮ ಜತೆ ಇದ್ದೇನೆ. ಗಡಿಯಲ್ಲಿರಲಿ ಅಥವಾ ದೇಶದ ಒಳಗಿರಲಿ, ರಾಷ್ಟ್ರವನ್ನು ರಕ್ಷಿಸುವ, ದೇಶದ ಕಾವಲು ಕಾಯುವ, ಭಾರತ ಮಾತೆಯ ಧೀರ ಪುತ್ರ, ಪುತ್ರಿಯರಾದ ನೀವೆಲ್ಲರೂ ನನ್ನವರೇ, ನನ್ನ ಕುಟುಂಬದ ಭಾಗವೇ ಆಗಿದ್ದೀರಿ. ಹಿಮಾಲಯದ ಮಡಿಲಲ್ಲಿರುವ ಕಾರ್ಗಿಲ್ನಿಂದ ಹಿಡಿದು ಲೆಪ್ಚಾವರೆಗೆ, ಸಮುದ್ರ ತೀರದ ಸರ್ ಕ್ರೀಕ್ನಿಂದ ಹಿಡಿದು ಸಾಗರದ ಮಡಿಲಲ್ಲಿರುವ ಐಎನ್ಎಸ್ ವಿಕ್ರಾಂತ್ವರೆಗೆ - ನಮ್ಮ ಧೀರ ಯೋಧರೊಂದಿಗೆ ಕಳೆದ ಪ್ರತಿಯೊಂದು ದೀಪಾವಳಿಯೂ ನನಗೆ ಸ್ಮರಣೀಯವಾಗಿದೆ.
ನನ್ನ ಶೌರ್ಯವಂತ ಯೋಧರೆ,
ಈ ಬಾರಿ ನಾನು ಬಸ್ತಾರ್ನ ಅರಣ್ಯಗಳಲ್ಲಿ ನಿಮ್ಮೆಲ್ಲರೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದೇನೆ. ಇದು ಒಂದು ಕಾಲದಲ್ಲಿ ನಕ್ಸಲೀಯ ಭಯೋತ್ಪಾದನೆಯ ಹಿಡಿತದಲ್ಲಿದ್ದ ಭೂಮಿ. ಆದರೆ ನಿಮ್ಮ ತ್ಯಾಗ, ಸಮರ್ಪಣಾ ಭಾವ ಮತ್ತು ದೃಢ ಸಂಕಲ್ಪದ ಫಲವಾಗಿ, ಇದೇ ಭೂಮಿ ಇಂದು ನಕ್ಸಲೀಯ ಭಯೋತ್ಪಾದನೆಯ ಪಿಡುಗಿನಿಂದ ಮುಕ್ತಗೊಂಡಿದ್ದು, ಅಭಿವೃದ್ಧಿಯ ಹೊಸ ಪಯಣ ಆರಂಭಿಸಿದೆ.
ಸ್ನೇಹಿತರೆ,
2026ರ ಈ ದೀಪಾವಳಿ ನಿಜಕ್ಕೂ ವಿಶೇಷವಾಗಿದೆ. ಸುಮಾರು 40-50 ವರ್ಷಗಳ ನಂತರ, ನಿಮ್ಮೆಲ್ಲರಿಗೂ ಇಂತಹದೊಂದು ದೀಪಾವಳಿ ಬಂದಿದೆ. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯ ವಿರುದ್ಧ ದೇಶವು ನಡೆಸಿದ ದಶಕಗಳ ಸುದೀರ್ಘ ಹೋರಾಟದಲ್ಲಿ ಜಯ ಗಳಿಸಿದ ನಂತರ ಬಂದಿರುವ ಮೊದಲ ದೀಪಾವಳಿ ಇದಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲೀಯ ಚಟುವಟಿಕೆಗಳಿಂದ ಮುಕ್ತವಾಗಿರುವ ಮೊದಲ ದೀಪಾವಳಿ ಇದಾಗಿದೆ. ಕೋಟ್ಯಂತರ ನಾಗರಿಕರು ನಕ್ಸಲ್ ಭಯದಿಂದ ಹೊರಬಂದಿರುವ ಮೊದಲ ದೀಪಾವಳಿ ಇದಾಗಿದೆ. ಇದೊಂದು ಅಸಾಧಾರಣ ಸಾಧನೆ. ಈ ಸಾಧನೆಯ ಬಹುದೊಡ್ಡ ಶ್ರೇಯಸ್ಸು ನಿಮಗೆ ಸಲ್ಲುತ್ತದೆ; ನಿಮ್ಮಂತಹ ಲಕ್ಷಾಂತರ ಧೀರ ಸಿಬ್ಬಂದಿಗೆ, ನಮ್ಮ ಸೈನಿಕರಿಗೆ, ದೇಶದ ಪುತ್ರ, ಪುತ್ರಿಯರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಸಲ್ಲುತ್ತದೆ. ಆದ್ದರಿಂದಲೇ, ಇಂದು ನಾನು ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದೇನೆ. ಅಲ್ಲದೆ, 140 ಕೋಟಿ ಭಾರತೀಯರ ಪರವಾಗಿ, ನಿಮ್ಮ ತ್ಯಾಗ, ಸಮರ್ಪಣೆ ಮತ್ತು ಸೇವಾ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ.
ಸ್ನೇಹಿತರೆ,
ನಮ್ಮ ದೂರದೃಷ್ಟಿಯುಳ್ಳ ಪೂರ್ವಜರು ಹೀಗೆ ಹೇಳಿದ್ದಾರೆ - “ಅಭ್ಯಂತರಂ ಭಯಂ ರಕ್ಷ್ಯಮ್, ಅಸಾರಂ ಬಾಹ್ಯತೋ ಭಯಮ್”. ಇದರರ್ಥ, ಒಂದು ರಾಷ್ಟ್ರದ ಆಂತರಿಕ ಭದ್ರತೆ ಬಲವಾಗಿದ್ದಾಗ, ಬಾಹ್ಯ ಶತ್ರುಗಳು ಹೆಚ್ಚಿನ ಹಾನಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಆಂತರಿಕ ಭದ್ರತೆ ದುರ್ಬಲಗೊಂಡಾಗ, ಬಾಹ್ಯ ಶತ್ರುಗಳು ಕೂಡ ತಲೆ ಎತ್ತಲು ಪ್ರಾರಂಭಿಸುತ್ತಾರೆ. ಆದ್ದರಿಂದ, ನಮ್ಮ ಸಶಸ್ತ್ರ ಪಡೆಗಳು ಗಡಿಯಲ್ಲಿ ನಿರ್ವಹಿಸುವ ಪಾತ್ರವನ್ನೇ, ದೇಶದ ಒಳಗೆ ನೀವೆಲ್ಲರೂ ನಿರ್ವಹಿಸುತ್ತಿದ್ದೀರಿ. ರಾಷ್ಟ್ರದ ಏಕತೆ ಮತ್ತು ಅಖಂಡತೆಗಾಗಿ ನೀವು ಅಸಂಖ್ಯಾತ ತ್ಯಾಗಗಳನ್ನು ಮಾಡಿದ್ದೀರಿ. ನೀವು ಅಪಾರವಾದ ಸಮರ್ಪಣಾ ಭಾವ ತೋರಿದ್ದೀರಿ. ಆಂತರಿಕ ಭದ್ರತೆ ಕಾಪಾಡುವಲ್ಲಿ ತೊಡಗಿರುವ ನಮ್ಮ ಸಿಆರ್ಪಿಎಫ್, ಕೋಬ್ರಾ, ಬಿಎಸ್ಎಫ್, ಐಟಿಬಿಪಿ, ಎಸ್ಎಸ್ಬಿ, ಐಆರ್ಬಿ ಪಡೆಗಳು, ರಾಜ್ಯ ಪೊಲೀಸ್ ಸಿಬ್ಬಂದಿ, ಬಸ್ತಾರ್ ಫೈಟರ್ಸ್ನಂತಹ ವಿಶೇಷ ಪಡೆಗಳ ಕಮಾಂಡೊಗಳು ಮತ್ತು ನಮ್ಮ ಮಹಿಳಾ ಹೋರಾಟಗಾರ್ತಿಯರು - ಹೀಗೆ ನಿಮ್ಮೆಲ್ಲರ ಸೇವೆಗೆ ಈ ರಾಷ್ಟ್ರವು ಚಿರಋಣಿಯಾಗಿದೆ. ಕೋಟ್ಯಂತರ ನಾಗರಿಕರಿಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ. ಕೃತಜ್ಞತೆ ಮತ್ತು ವಾತ್ಸಲ್ಯದ ಭಾವನೆಯೊಂದಿಗೆ, ನೀವು ಎಲ್ಲೇ ಇದ್ದು ಕಾವಲು ಕಾಯುತ್ತಿರಲಿ, ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ದೀಪಾವಳಿ ಶುಭಾಶಯಗಳನ್ನು ಸಲ್ಲಿಸುತ್ತೇನೆ. ದೇಶದ ರಕ್ಷಣೆಗಾಗಿ ಗಡಿಯಲ್ಲಿ ನಿಯೋಜಿತರಾಗಿರುವ ನಮ್ಮ ಸೈನಿಕರಿಗೂ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಮಾವೋವಾದಿ ಭಯೋತ್ಪಾದನೆ ಮತ್ತು ನಕ್ಸಲರ ವಿರುದ್ಧದ ಈ ಹೋರಾಟ ಸುಲಭವಾಗಿರಲಿಲ್ಲ. ದೇಶದ ಸುಮಾರು 20 ರಾಜ್ಯಗಳ 230ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲ್ ಚಟುವಟಿಕೆಗಳಿಂದ ಬಾಧಿತವಾಗಿದ್ದ ಕಾಲವೊಂದಿತ್ತು. ಸೂರ್ಯಾಸ್ತದ ನಂತರ, ಈ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗುತ್ತಿತ್ತು. ಮನೆಯಿಂದ ಹೊರಗೆ ಕಾಲಿಡುವುದೂ ಅಸಾಧ್ಯವಾಗಿತ್ತು. ಈ ನಕ್ಸಲರು ಜನರ ಮತದಾನದ ಹಕ್ಕು ಕಸಿದುಕೊಂಡಿದ್ದರು. ಬಿಹಾರ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಂತಹ ದೇಶದ ಬಹುದೊಡ್ಡ ಭಾಗವು ಎಡಪಂಥೀಯ ಉಗ್ರವಾದದ ಪ್ರಭಾವಕ್ಕೆ ಒಳಗಾಗಿತ್ತು. ಸಾವಿರಾರು ಹಳ್ಳಿಗಳು ಮತ್ತು ಕೋಟ್ಯಂತರ ಜನರು ಇದರ ಸಂಕೋಲೆಯಲ್ಲಿ ಸಿಲುಕಿದ್ದರು. ಒಂದೇ ವರ್ಷದಲ್ಲಿ ಸುಮಾರು 2 ಸಾವಿರ ನಕ್ಸಲ್ ದಾಳಿಗಳು ನಡೆದಿದ್ದವು. ನೆನಪಿಸಿಕೊಳ್ಳಿ, 2010ರಲ್ಲಿ ದಂತೇವಾಡದಲ್ಲಿ ನಕ್ಸಲರೊಂದಿಗಿನ ಸಂಘರ್ಷದಲ್ಲಿ ಸಿಆರ್ಪಿಎಫ್ನ 76 ಯೋಧರು ಹುತಾತ್ಮರಾದರು. ಅದೇ ವರ್ಷ, ದಂತೇವಾಡದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 44 ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡರು. ನಮ್ಮ ವೀರ ಯೋಧರ ರಕ್ತದಿಂದ ಈ ಭೂಮಿ ಪವಿತ್ರಗೊಂಡಿತು. ಆದರೆ, ಅರಮನೆಗಳಲ್ಲಿ ವಾಸಿಸುತ್ತಿದ್ದ ಆ 'ವಿಶೇಷ ಸೌಲಭ್ಯ ಪಡೆದ' ನಾಯಕರಿಂದ ದುಃಖದ ಒಂದು ಕೂಗು ಕೂಡ ಕೇಳಿಬರಲಿಲ್ಲ. ಅವರ ಕಣ್ಣುಗಳಿಂದ ಒಂದು ಹನಿ ಕಣ್ಣೀರೂ ಬರಲಿಲ್ಲ. ಇಂತಹ ದಾಳಿಗಳು ಪದೇಪದೆ ಸಂಭವಿಸಿದವು. ಈ ದುಷ್ಟಚಕ್ರವು ದಶಕಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ, ಕೇವಲ ಛತ್ತೀಸ್ಗಢವೊಂದರಲ್ಲೇ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದರು. ಐಇಡಿ ಸ್ಫೋಟಗಳಲ್ಲಿ ಅನೇಕ ಸೈನಿಕರು ತಮ್ಮ ಕೈಕಾಲುಗಳನ್ನು ಕಳೆದುಕೊಂಡರು. 2004ರಿಂದ 2013ರ ವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಪ್ರತಿ ವರ್ಷ ಹತ್ಯೆಗೀಡಾದ ನಕ್ಸಲರ ಸಂಖ್ಯೆಗಿಂತ, ಹುತಾತ್ಮರಾದ ನಮ್ಮ ವೀರ ಸೈನಿಕರ ಸಂಖ್ಯೆಯೇ ಹೆಚ್ಚಿತ್ತು. ನಕ್ಸಲ್ ಸಂಘಟನೆಗಳ ನಾಯಕರು ಇದನ್ನು ತಮ್ಮ ಗೆಲುವು ಎಂದು ಪರಿಗಣಿಸಿ ಸಂಭ್ರಮಿಸಿದರು. ದುರದೃಷ್ಟವಶಾತ್, ಅಂದಿನ ಸರ್ಕಾರಗಳು ನಕ್ಸಲಿಸಂ ಅನ್ನು 'ಗುಣಪಡಿಸಲಾಗದ ಕಾಯಿಲೆ' ಎಂದು ಒಪ್ಪಿಕೊಂಡು, ಅದನ್ನು ಹಾಗೆಯೇ ನಿರ್ಲಕ್ಷ್ಯ ಮಾಡಿದವು. ನನ್ನ ಬುಡಕಟ್ಟು ಸಮುದಾಯದ ಕುಟುಂಬಗಳನ್ನು ಅವರ ವಿಧಿಯ ಪಾಲಿಗೆ ಬಿಡಲಾಗಿತ್ತು. ಇದು ಹೀಗೆಯೇ ಅನಂತ ಕಾಲದವರೆಗೆ ಮುಂದುವರಿದಿತ್ತು. ಗುಂಡಿನ ದಾಳಿಗಳು ನಡೆಯುತ್ತಲೇ ಇರುತ್ತವೆ ಸೈನಿಕರು ಸಾಯುತ್ತಲೇ ಇರುತ್ತಾರೆ. ಅಮಾಯಕ ನಾಗರಿಕರು ನರಳುತ್ತಲೇ ಇರುತ್ತಾರೆ ಎಂಬ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲಾಗಿತ್ತು.
ಸ್ನೇಹಿತರೆ,
"ಎಲ್ಲವೂ ಹೀಗೆಯೇ ಮುಂದುವರಿಯುತ್ತದೆ" ಎಂಬ ಮನೋಭಾವದಿಂದ ಯಾವುದೇ ರಾಷ್ಟ್ರ ಮುನ್ನಡೆಯಲು ಸಾಧ್ಯವಿಲ್ಲ. ಒಂದು ರಾಷ್ಟ್ರವನ್ನು ಮುನ್ನಡೆಸಬೇಕಾದರೆ, ದೃಢ ನಿಶ್ಚಯ, ಧೈರ್ಯ ಮತ್ತು ಸ್ಪಷ್ಟ ಕಾರ್ಯತಂತ್ರದೊಂದಿಗೆ ಅದರ ಶತ್ರುಗಳನ್ನು ಮಟ್ಟ ಹಾಕಲೇಬೇಕು. ಈ ಕಾರ್ಯಕ್ಕಾಗಿ ದೇಶದಲ್ಲಿ ಕೊರತೆಯಿದ್ದ ರಾಜಕೀಯ ಇಚ್ಛಾಶಕ್ತಿಯನ್ನು 2014ರಲ್ಲಿ ಮರುಸ್ಥಾಪಿಸಲಾಯಿತು. ನೀವು ಈ 'ಪ್ರಧಾನ್ ಸೇವಕ'ನಿಗೆ ಭಾರತ ಮಾತೆಯ ಸೇವೆ ಮಾಡಲು ಅವಕಾಶ ನೀಡಿದಿರಿ. 2014ರ ನಂತರ, ಪರಿಸ್ಥಿತಿ ಮತ್ತು ಅಂಕಿಅಂಶಗಳು ಎರಡೂ ಬದಲಾಗತೊಡಗಿದ್ದನ್ನು ನಾವು ಕಂಡೆವು. ವರ್ಷಗಟ್ಟಲೆ, ನಕ್ಸಲರ ಸಂಖ್ಯೆಗೆ ಹೋಲಿಸಿದರೆ ಎಷ್ಟು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡರು ಎಂಬ ವಿಷಯದ ಸುತ್ತಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ 47 ವರ್ಷಗಳ ನಂತರ, ಕಳೆದ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ, ಕರ್ತವ್ಯ ನಿರ್ವಹಿಸುವಾಗ ಒಬ್ಬ ಸಿಆರ್ಪಿಎಫ್ ಯೋಧನೂ ತನ್ನ ಪ್ರಾಣ ಕಳೆದುಕೊಂಡಿಲ್ಲ. ಇದು ದೇಶದ ಸರಿಯಾದ ನೀತಿಗಳು ಮತ್ತು ದೃಢ ಸಂಕಲ್ಪದ ಗೆಲುವು. ಇದು ನಿಮ್ಮ ಶೌರ್ಯ, ನಿಮ್ಮ ಧೈರ್ಯ ಮತ್ತು ನಿಮ್ಮ ಸಂಯಮದ ಗೆಲುವು. ನಾನು ಮತ್ತೆ ಹೇಳುತ್ತೇನೆ, ಇದು ನಿಮ್ಮ ಶೌರ್ಯ, ನಿಮ್ಮ ಧೈರ್ಯ ಮತ್ತು ನಿಮ್ಮ ಸಂಯಮದ ಗೆಲುವು.
ಭಾರತ ಮಾತಾ ಕೀ ಜೈ.
ಭಾರತ ಮಾತಾ ಕೀ ಜೈ.
ಈ ವೀರ ಯೋಧರಿಗೆ ಜಯವಾಗಲಿ.
ನಮ್ಮ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲೂ ದೃಢವಾಗಿ ನಿಂತರು. ಇದು ಅವರ ಕರ್ತವ್ಯ ನಿಷ್ಠೆಯ ಗೆಲುವು.
ಸ್ನೇಹಿತರೆ,
ಯಶಸ್ಸಿಗೆ ಸರಿಯಾದ ಉದ್ದೇಶಗಳು ಮತ್ತು ಸರಿಯಾದ ನೀತಿಗಳ ಅಗತ್ಯವಿರುತ್ತದೆ. ರಾಷ್ಟ್ರೀಯ ಭದ್ರತೆಗಾಗಿ ನಾವು ಒಂದರ ನಂತರ ಒಂದರಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡೆವು. ಇಂತಹ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು, ಅವುಗಳಲ್ಲಿ ಹಲವು ಇನ್ನೂ ಸಾರ್ವಜನಿಕರಿಗೆ ತಿಳಿದಿಲ್ಲ. ಈ ನಿರ್ಧಾರಗಳು ಮತ್ತು ಪ್ರಯತ್ನಗಳ ಮೂಲಕ, ನಕ್ಸಲರು ಮತ್ತು ಪ್ರತ್ಯೇಕತಾವಾದಿಗಳ ಹಣಕಾಸು ಜಾಲಗಳಿಗೆ ಭಾರಿ ಪೆಟ್ಟು ನೀಡಲಾಯಿತು. ನಕಲಿ ಕರೆನ್ಸಿ ಜಾಲ ನಾಶಪಡಿಸಲಾಯಿತು. ಇದು ಅವರ ಆರ್ಥಿಕ ಬೆನ್ನೆಲುಬನ್ನು ಮುರಿಯುವುದಲ್ಲದೆ, ಅವರ ಸಂಪೂರ್ಣ ಪೂರೈಕೆ ಸರಪಳಿಯನ್ನೇ ಕಡಿದುಹಾಕಿತು. ಪರಿಣಾಮವಾಗಿ, ಶಸ್ತ್ರಾಸ್ತ್ರಗಳ ಪೂರೈಕೆ ನಿಂತುಹೋಯಿತು. ನಕ್ಸಲರ ಚಲನವಲನ ಹಾಗೂ ಹೊಸಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು.
ಸ್ನೇಹಿತರೆ,
ಹಿಂದಿನ ಸರ್ಕಾರಗಳು ನೆಲ ಮಟ್ಟದಲ್ಲಿ ಹೋರಾಡುತ್ತಿದ್ದ ಭದ್ರತಾ ಪಡೆಗಳ ಕೈಗಳನ್ನು ಕಟ್ಟಿಹಾಕಿದ್ದವು. ನಕ್ಸಲ್ ದಾಳಿಗಳು ನಡೆಯುತ್ತಲೇ ಇದ್ದವು, ಆದರೆ ನಿರ್ಣಾಯಕವಾಗಿ ಪ್ರತಿದಾಳಿ ನಡೆಸುವ ಸ್ವಾತಂತ್ರ್ಯ ಭದ್ರತಾ ಪಡೆಗಳಿಗೆ ಇರಲಿಲ್ಲ. ನಾವು ಭದ್ರತಾ ಪಡೆಗಳಿಗೆ ಅಗತ್ಯವಾದ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದೆವು. ಸರ್ಕಾರ ಮತ್ತು ವ್ಯವಸ್ಥೆಯೊಳಗೆ ಕುಳಿತ ಕೆಲವರಿಂದ ಎಡಪಂಥೀಯ ಉಗ್ರವಾದಕ್ಕೆ ಸಿಗುತ್ತಿದ್ದ ಬೆಂಬಲವನ್ನು ತಡೆಯಲು ಕೂಡ ನಾವು ಕೆಲಸ ಮಾಡಿದೆವು.
ಸ್ನೇಹಿತರೆ,
ನಾವು ಬಹುದೊಡ್ಡ ಗುರಿ ಹೊಂದಿದ್ದೆವು. ಯಾವುದೇ ತಾಯಿಯ ಮಡಿಲು ಬರಿದಾಗಬಾರದು, ಯಾವುದೇ ಕುಟುಂಬ ವಿನಾಶದ ಸುಳಿಗೆ ಸಿಲುಕಬಾರದು, ಯಾವುದೇ ಮಗು ಶಸ್ತ್ರಾಸ್ತ್ರ ಹಿಡಿದು ಹಿಂಸೆಯ ಹಾದಿ ತುಳಿಯಬಾರದು, ಯಾವುದೇ ಯುವಕನ ಭವಿಷ್ಯ ಹಾಳಾಗಬಾರದು ಎಂಬುದು ನಮ್ಮ ಗುರಿಯಾಗಿತ್ತು. ಆದ್ದರಿಂದ ಈ ಗುರಿ ಸಾಧಿಸುವವರೆಗೂ ನಾವು ದೃಢ ಸಂಕಲ್ಪದಿಂದ ಕೆಲಸ ಮಾಡಿದೆವು. ಯಾವುದೇ ಪ್ರಚಾರವಿರಲಿಲ್ಲ, ಯಾವುದೇ ಪ್ರದರ್ಶನವಿರಲಿಲ್ಲ. ಅತ್ಯಂತ ಸಂವೇದನಾಶೀಲತೆಯಿಂದ ಕೆಲಸ ಮಾಡಿ, ನಾವು ಮಾವೋವಾದಿ ಭಯೋತ್ಪಾದನೆಯ ಬೆನ್ನೆಲುಬು ಮುರಿದುಹಾಕಿದೆವು. ಸೇವಾ ಮನೋಭಾವದಿಂದ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರ ಜೀವನ ಬದಲಾಯಿಸಿದೆವು. ಇದೇ ಕಾರಣಕ್ಕಾಗಿ, ನಕ್ಸಲಿಸಂನಿಂದ ಬಳಲುತ್ತಿದ್ದ ಜನರು ಕೂಡ ಸರ್ಕಾರ ಮತ್ತು ಭದ್ರತಾ ಪಡೆಗಳೊಂದಿಗೆ ದೃಢವಾಗಿ ನಿಂತರು. ಈ ಮಹತ್ತರವಾದ ಗೆಲುವಿಗೆ ಅಪಾರ ಕೊಡುಗೆ ನೀಡಿದ ನಾಗರಿಕರು ಇಂದಿಗೂ ಇಲ್ಲಿದ್ದಾರೆ. ಅವರೆಲ್ಲರಿಗೂ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ನಾವು 'ರಾಷ್ಟ್ರವೇ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಿದಾಗ, ದೇಶದ ಶಾಂತಿ ಮತ್ತು ಭದ್ರತೆ ಖಾತಿಯಾಗುತ್ತದೆ, ರಾಷ್ಟ್ರವು ಅಭಿವೃದ್ಧಿಯ ಹೊಸ ಶಿಖರಗಳನ್ನು ತಲುಪುತ್ತದೆ, ಪ್ರತಿಯೊಬ್ಬ ಬಡ ಹಾಗೂ ವಂಚಿತ ನಾಗರಿಕನೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶ ಹೆಚ್ಚಾಗುತ್ತದೆ. ಆದ್ದರಿಂದ, ಕಳೆದ 12 ವರ್ಷಗಳಲ್ಲಿ, ದೇಶವು ನಕ್ಸಲಿಸಂ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಗೆದ್ದಿರುವುದು ಮಾತ್ರವಲ್ಲದೆ, ಬಡತನದ ವಿರುದ್ಧದ ದೊಡ್ಡ ಹೋರಾಟದಲ್ಲೂ ಜಯ ಸಾಧಿಸಿದೆ.
ಸ್ನೇಹಿತರೆ,
ಈ ವರ್ಷ ದೀಪಾವಳಿಗೂ ಸ್ವಲ್ಪ ಮೊದಲು, ದೇಶಾದ್ಯಂತ ಮತ್ತು ವಿಶ್ವಾದ್ಯಂತ ಚರ್ಚೆಯಾಗುತ್ತಿರುವ ಒಂದು ಸುದ್ದಿ ಹೊರಬಂದಿದೆ. ಕೆಲವು ದಿನಗಳ ಹಿಂದೆ ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ, ಭಾರತದಲ್ಲಿ ಕಳೆದ 12 ವರ್ಷಗಳಲ್ಲಿ 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ. ಬಡತನ ನಿರ್ಮೂಲನೆಯ ಕುರಿತಾದ ದಶಕಗಳ ಘೋಷಣೆಗಳಿಂದ ಸಾಧಿಸಲು ಸಾಧ್ಯವಾಗದ್ದನ್ನು, ಈ ದೇಶ ಕೇವಲ 12 ವರ್ಷಗಳಲ್ಲಿ ಸಾಧಿಸಿ ತೋರಿಸಿದೆ. ಇದೊಂದು ಎಂತಹ ದೊಡ್ಡ ಸಾಧನೆ ಎಂದು ಒಮ್ಮೆ ಊಹಿಸಿ ನೋಡಿ. ಇದು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಯೋಚಿಸಿ.
ಸ್ನೇಹಿತರೆ,
ದೀಪಾವಳಿ ಸಮಯದಲ್ಲಿ ನಾವು ರಂಗೋಲಿ ಬಿಡಿಸುತ್ತೇವೆ. ಆರಂಭದಲ್ಲಿ ಕೆಲವು ಗೆರೆಗಳನ್ನು ಎಳೆದಾಗ, ಆ ವಿನ್ಯಾಸಗಳು ಚಿಕ್ಕದಾಗಿ ಮತ್ತು ಪ್ರತ್ಯೇಕವಾಗಿ ಕಾಣುತ್ತವೆ. ಆದರೆ, ಒಂದೊಂದಾಗಿ ಭಾಗಗಳು ಸೇರಿಕೊಳ್ಳುತ್ತಾ ಹೋದಂತೆ, ಒಂದು ಸುಂದರವಾದ ಮತ್ತು ಸಂಪೂರ್ಣ ಚಿತ್ರ ರೂಪುಗೊಳ್ಳುತ್ತದೆ. ಕಳೆದ 12 ವರ್ಷಗಳಲ್ಲಿ ಭಾರತದಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆದಿದೆ. ನಾವು ಕಲ್ಯಾಣ ಯೋಜನೆಗಳ ಒಂದು 'ರಂಗೋಲಿ' ರಚಿಸಿದ್ದೇವೆ, ಇದು ಬಡವರನ್ನು ನಿರಂತರವಾಗಿ ಸಬಲೀಕರಣಗೊಳಿಸಿದೆ. 'ಜನ್ ಧನ್ ಯೋಜನೆ'ಯ ಮೂಲಕ ಕೋಟ್ಯಂತರ ಜನರು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಗೊಂಡರು. 'ಪ್ರಧಾನ ಮಂತ್ರಿ ಆವಾಸ್ ಯೋಜನೆ'ಯ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಕಾಯಂ ಪಕ್ಕಾ ಮನೆಗಳು ಸಿಕ್ಕವು. 'ಮುದ್ರಾ ಯೋಜನೆ'ಯ ಅಡಿ, ಯಾವುದೇ ಆಸ್ತಿ ಅಡಮಾನವಿಲ್ಲದೆ ಸಾಲಗಳನ್ನು ಒದಗಿಸಲಾಯಿತು. 'ಸ್ವನಿಧಿ ಯೋಜನೆ'ಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಸಿಕ್ಕಿತು, ತಮ್ಮ ವ್ಯವಹಾರ ವಿಸ್ತರಿಸಲು ಅವಕಾಶಗಳು ದೊರೆತವು. 'ಆಯುಷ್ಮಾನ್ ಭಾರತ್' ಅಡಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಯಿತು. ಕೋಟ್ಯಂತರ ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳು ಲಭ್ಯವಾದವು. ಮಕ್ಕಳ ಶಿಕ್ಷಣಕ್ಕಾಗಿ ನೀತಿಗಳನ್ನು ರೂಪಿಸಲಾಯಿತು. ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಬಡ ಕುಟುಂಬಕ್ಕೂ ಉಚಿತ ಔಷಧ, ಉಚಿತ ಶಿಕ್ಷಣ ಮತ್ತು ಅಡುಗೆಗೆ ಅಗತ್ಯವಾದ ಆಹಾರ ಧಾನ್ಯ ಸಿಗುವುದನ್ನು ನಾವು ಖಚಿತಪಡಿಸಿದೆವು. ಅಷ್ಟೇ ಅಲ್ಲ, 'ಸ್ವಚ್ಛ ಭಾರತ್ ಮಿಷನ್' ಮತ್ತು 'ಹರ್ ಘರ್ ಜಲ್'(ಪ್ರತಿ ಮನೆಗೂ ನೀರು)ನಂತಹ ಯೋಜನೆಗಳು ದೈನಂದಿನ ಜೀವನದ ಅನೇಕ ಮೂಲಭೂತ ಸಮಸ್ಯೆಗಳನ್ನು ನಿವಾರಿಸಿದವು. ಇದರ ಪರಿಣಾಮವಾಗಿ, ಇಂದು ಕೋಟ್ಯಂತರ ಜನರು ಬಡತನದಿಂದ ಹೊರಬಂದಿದ್ದಾರೆ. ಒಂದು ಕಾಲದಲ್ಲಿ ಬಡತನವನ್ನೇ ಪರಂಪರೆಯಾಗಿ ಪಡೆದಿದ್ದ ಕುಟುಂಬಗಳು, ಈಗ ಉತ್ತಮ ಭವಿಷ್ಯದ ಅಡಿಪಾಯವನ್ನು ತಮ್ಮ ಮುಂದಿನ ಪೀಳಿಗೆಗೆ ನೀಡುತ್ತಿವೆ. ತಮ್ಮ ಇಡೀ ಜೀವನವನ್ನು ಆತಂಕದಲ್ಲಿಯೇ ಕಳೆದ ಕುಟುಂಬಗಳು, ಈಗ ಸರ್ಕಾರದ ಮೇಲಿನ ನಂಬಿಕೆ ಮತ್ತು ತಮ್ಮಲ್ಲಿ ತಾವು ಇಟ್ಟುಕೊಂಡಿರುವ ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿವೆ.
ಸ್ನೇಹಿತರೆ,
ಬಡತನದ ವಿರುದ್ಧದ ಈ ಗೆಲುವಿನ ಒಂದು ಪ್ರಮುಖ ಅಡಿಪಾಯವೇ ನಕ್ಸಲ್ ಪೀಡಿತ ಸಮಸ್ಯೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ದೇಶ ನಡೆಸಿದ ಹೋರಾಟದೊಂದಿಗೆ ಬೆಸೆದುಕೊಂಡಿದೆ. ಬಸ್ತಾರ್ನ ಜನರಿಗೆ ಮತ್ತು ನಿಮೆಲ್ಲರಿಗೂ ತಿಳಿದಿರುವಂತೆ, ನಕ್ಸಲರು ಎಲ್ಲಿ ಪ್ರಭಾವ ಹೊಂದಿದ್ದರೋ, ಅಲ್ಲಿ ಅವರ ಮೊದಲ ಕಾರ್ಯಸೂಚಿ ಎಂದರೆ ಅಭಿವೃದ್ಧಿ ತಡೆಯುವುದು ಮತ್ತು ಸಾಮಾನ್ಯ ಜನರ ಜೀವನಕ್ಕೆ ಹಾನಿ ಮಾಡುವುದೇ ಆಗಿತ್ತು. ಮಕ್ಕಳ ಶಾಲೆಗಳು ಕಾರ್ಯ ನಿರ್ವಹಿಸಲು ಅವರು ಬಿಡುತ್ತಿರಲಿಲ್ಲ, ಬದಲಾಗಿ ಅವುಗಳಿಗೆ ಬೆಂಕಿ ಹಚ್ಚುತ್ತಿದ್ದರು. ರೋಗಿಗಳಿಗಾಗಿ ಆಸ್ಪತ್ರೆಗಳನ್ನು ನಿರ್ಮಿಸಲು ಬಿಡುತ್ತಿರಲಿಲ್ಲ, ವೈದ್ಯರು ಅಲ್ಲಿಗೆ ಪ್ರವೇಶಿಸದಂತೆ ತಡೆಯುತ್ತಿದ್ದರು. ಜೀವ ಉಳಿಸಲು ಸಹಾಯ ಮಾಡುವ ಮೆಡಿಕಲ್ ಸ್ಟೋರ್ ಗಳಂತಹ ಸೌಲಭ್ಯಗಳಿಗೂ ಅವರು ಅವಕಾಶ ನೀಡುತ್ತಿರಲಿಲ್ಲ. ಈ ನಕ್ಸಲರು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವುದನ್ನೂ ತಡೆದರು. ಮೊಬೈಲ್ ಟವರ್ಗಳನ್ನು ಅಳವಡಿಸಲು ಅವರು ಬಿಡಲಿಲ್ಲ. ರೈಲ್ವೆ ಹಳಿಗಳನ್ನು ಬಾಂಬ್ಗಳಿಂದ ಸ್ಫೋಟಿಸುವುದು, ಕೈಗಾರಿಕೆಗಳು ಹಾಗೂ ವ್ಯವಹಾರಗಳು ನಡೆಯದಂತೆ ಹೇಗೆ ತಡೆಯುತ್ತಿದ್ದರು ಎಂಬುದನ್ನು ನೀವು ಅನೇಕ ವರ್ಷಗಳಿಂದ ನೋಡಿದ್ದೀರಿ. ಇದರ ಪರಿಣಾಮವಾಗಿ, ಲಕ್ಷಾಂತರ ಬಡ ಮತ್ತು ನಿರಪರಾಧಿ ನಾಗರಿಕರು, ನನ್ನ ಸಹೋದರ ಸಹೋದರಿಯರು ಹಾಗೂ ಯುವ ಸಹೋದರ ಸಹೋದರಿಯರು ಅವಕಾಶಗಳಿಂದ ವಂಚಿತರಾದರು. ಅವರ ಜೀವನವು ಬಡತನದ ಸುಳಿಯಿಂದ ಎಂದಿಗೂ ಹೊರಬರಲಿಲ್ಲ. ಆದ್ದರಿಂದ, ನಾವು ನಕ್ಸಲಿಸಂ ವಿರುದ್ಧ ಹೋರಾಟ ಆರಂಭಿಸಿದಾಗ, ಅದೇ ಸಮಯದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಅಭಿಯಾನಗಳನ್ನು ಕೈಗೊಂಡೆವು. ಎಡಪಂಥೀಯ ಉಗ್ರವಾದದಿಂದ ಬಾಧಿತವಾದ ಪ್ರದೇಶಗಳಲ್ಲಿ, ಸಂಪೂರ್ಣ ಭದ್ರತಾ ವ್ಯವಸ್ಥೆಗಳೊಂದಿಗೆ 15,000 ಕಿಲೋಮೀಟರ್ಗಿಂತಲೂ ಹೆಚ್ಚು ರಸ್ತೆಗಳನ್ನು ನಿರ್ಮಿಸಿದೆವು. ಈ ಪ್ರದೇಶಗಳಲ್ಲಿ 9,500ಕ್ಕೂ ಹೆಚ್ಚು ಮೊಬೈಲ್ ಟವರ್ಗಳನ್ನು ಅಳವಡಿಸಲಾಯಿತು. ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಸುಮಾರು 175 ಏಕಲವ್ಯ ಶಾಲೆಗಳನ್ನು ತೆರೆಯಲಾಯಿತು. ಯುವಜನರನ್ನು ಉದ್ಯೋಗಾವಕಾಶಗಳೊಂದಿಗೆ ಜೋಡಿಸಲು ಸುಮಾರು 50 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಸುಮಾರು 50 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಸಾವಿರಾರು ಅಂಚೆ ಕಚೇರಿಗಳು, ಬ್ಯಾಂಕ್ ಶಾಖೆಗಳು ಮತ್ತು ಎಟಿಎಂಗಳನ್ನು ತೆರೆಯಲಾಯಿತು. ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ 'ಪ್ರಧಾನ ಮಂತ್ರಿ ಜನ್ಮನ್ ಯೋಜನೆ' ಆರಂಭಿಸಲಾಯಿತು. ಇದರ ಮೂಲಕ, ನೀರು, ವಿದ್ಯುತ್ ಮತ್ತು ರಸ್ತೆಗಳಂತಹ ಸೌಲಭ್ಯಗಳು ಸಾವಿರಾರು ದೂರದ ಹಳ್ಳಿಗಳನ್ನು ಮೊದಲ ಬಾರಿಗೆ ತಲುಪಿದವು. ಅಷ್ಟೇ ಅಲ್ಲದೆ, ಶರಣಾದ ನಕ್ಸಲರಿಗೂ ಅವಕಾಶ ಕಲ್ಪಿಸಲಾಯಿತು. ಅವರ ಪುನರ್ವಸತಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು.
ಸ್ನೇಹಿತರೆ,
'ಸಬ್ಕಾ ಸಾಥ್, ಸಬ್ಕಾ ವಿಕಾಸ್'(ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ) ಅಭಿಯಾನವು ಬಡತನದ ವಿರುದ್ಧದ ದೇಶದ ಹೋರಾಟಕ್ಕೆ ಹೊಸ ಚೈತನ್ಯ ಮತ್ತು ಹೊಸ ಆತ್ಮವಿಶ್ವಾಸ ನೀಡಿದೆ. ಇದೇ ಕಾರಣಕ್ಕಾಗಿ, ಒಂದು ಕಡೆ 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದರೆ, ಮತ್ತೊಂದೆಡೆ ದೇಶದಲ್ಲಿ ನಕ್ಸಲೀಯ ಹಿಂಸಾಚಾರವೂ ಕೊನೆಗೊಂಡಿದೆ. ಬಸ್ತಾರ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇಂದು ಅಲ್ಲಿ 'ಬಸ್ತಾರ್ ಒಲಿಂಪಿಕ್ಸ್' ನಡೆಯುತ್ತಿದೆ. ಮಕ್ಕಳು ಈಗ ಬಂದೂಕುಗಳನ್ನು ಹಿಡಿಯುತ್ತಿಲ್ಲ, ಬದಲಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಸ್ನೇಹಿತರೆ,
ಈ ಸಾಧನೆಗಳ ನಡುವೆ, ನಾವು ಇನ್ನೊಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ನಕ್ಸಲೀಯರನ್ನು ನಿರ್ಮೂಲನೆ ಮಾಡಲಾಗಿದೆ, ಆದರೆ ಅಪಾಯ ಸಂಪೂರ್ಣವಾಗಿ ಮಾಯವಾಗಿಲ್ಲ. ಸಶಸ್ತ್ರ ನಕ್ಸಲೀಯರು ಕಾಡುಗಳಿಂದ ಕಣ್ಮರೆಯಾಗಿದ್ದರೂ, 'ಬೌದ್ಧಿಕ ನಕ್ಸಲೀಯರು' ಅನೇಕ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಇಂದಿಗೂ ಅವರು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ. ಇಂತಹ ಬೌದ್ಧಿಕ ನಕ್ಸಲೀಯರು ಹಲವಾರು ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳಲ್ಲಿ ನುಸುಳಿದ್ದಾರೆ. ನಾವು ಅವರನ್ನು ಗುರುತಿಸಿ, ಸೋಲಿಸಿ, ರಾಷ್ಟ್ರವನ್ನು ಸುರಕ್ಷಿತವಾಗಿರಿಸಬೇಕು.
ಸ್ನೇಹಿತರೆ,
ಇಂದಿನ ಸಾಧನೆಗಳು ನಮಗೆ ಸ್ಫೂರ್ತಿ ನೀಡುತ್ತವೆ, ಆದರೆ ಇದು ಪಯಣದ ಅಂತ್ಯವಲ್ಲ. ನಾನು ಮತ್ತೆ ಹೇಳುತ್ತೇನೆ, ಇದು ಪಯಣದ ಅಂತ್ಯವಲ್ಲ. ಈ ಗೆಲುವುಗಳು ಮತ್ತು ಯಶಸ್ಸುಗಳು ಒಂದು ಹೊಸ ಹಾರಾಟಕ್ಕೆ ವೇದಿಕೆಯಾಗಿವೆ. ಈ ಹಾರಾಟವು ರಾಷ್ಟ್ರದ ಕನಸುಗಳನ್ನು ಹೊತ್ತು ಸಾಗಲಿದೆ, ನಮ್ಮ ಪೀಳಿಗೆಗಳು ಶತಮಾನಗಳಿಂದ ಕಂಡ ಕನಸುಗಳಿವು. ಸ್ವಾತಂತ್ರ್ಯಕ್ಕಾಗಿ ಅಪಾರ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳಿವು. ದೇಶದ ಗಡಿಯಲ್ಲಿ 'ಭಾರತ ಮಾತೆ'ಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಸೈನಿಕರ ಕನಸುಗಳಿವು. ನಕ್ಸಲಿಸಂ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಧೀರರ ಕನಸುಗಳಿವು. ಪ್ರತಿದಿನವೂ ನೀವು ಈ ಭಾವನೆಯೊಂದಿಗೆ ಬದುಕುತ್ತೀರಿ: "ತಾಯೇ, ನಿನ್ನ ಕೀರ್ತಿ ಶಾಶ್ವತವಾಗಿರಲಿ. ನಾವು ಇನ್ನು ಕೆಲವೇ ದಿನಗಳು ಬದುಕಿರಲಿ ಅಥವಾ ಇಲ್ಲದಿರಲಿ, ತಾಯೇ, ನಿನ್ನ ಕೀರ್ತಿ ಮಾತ್ರ ಶಾಶ್ವತವಾಗಿರಲಿ." ಈಗ ನಿಮ್ಮ ಈ ಮನೋಭಾವವು ಹೊಸ ಆತ್ಮವಿಶ್ವಾಸವಾಗಿ ಪರಿವರ್ತನೆಗೊಳ್ಳುವ ಸಮಯ ಬಂದಿದೆ. ಈಗ ರಾಷ್ಟ್ರಕ್ಕಾಗಿ ಬದುಕುವ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಮಯ ಇದಾಗಿದೆ.
ಸ್ನೇಹಿತರೆ,
ನಮ್ಮ ರಾಷ್ಟ್ರವು ಯಾವುದೇ ಸಂಕಲ್ಪ ಕೈಗೊಂಡರೂ, ಅದನ್ನು ಪೂರೈಸುವ ಸಾಮರ್ಥ್ಯವೂ ಅದಕ್ಕಿದೆ. ನಾವು ಕಾಶ್ಮೀರದಿಂದ 370ನೇ ವಿಧಿ ತೆಗೆದುಹಾಕುವುದಾಗಿ ಭರವಸೆ ನೀಡಿದ್ದೆವು, ಆ ಭರವಸೆಯನ್ನು ಈಡೇರಿಸಿದೆವು. ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದೆವು, ಆ ಭರವಸೆಯನ್ನು ಈಡೇರಿಸಿದೆವು. ಲಸಿಕಾ ಅಭಿಯಾನ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಭರವಸೆ ನೀಡಿದ್ದೆವು, ಆ ಭರವಸೆಯನ್ನು ಈಡೇರಿಸಿದೆವು. ಆದ್ದರಿಂದ, ಇಂದು ನಾವು ಬಡತನ ನಿರ್ಮೂಲನೆಯ ಬಗ್ಗೆ, ಮಾದಕ ವಸ್ತು ಮುಕ್ತ ಭಾರತದ ಬಗ್ಗೆ, ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಹಾಗೂ ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಾಗ, ಈ ಗುರಿಗಳನ್ನು ಕೂಡ ಖಂಡಿತವಾಗಿಯೂ ಸಾಧಿಸುತ್ತೇವೆ. ಈ ಕನಸುಗಳು ನಮ್ಮ ಕಣ್ಣ ಮುಂದೆಯೇ ನನಸಾಗುವುದನ್ನು ನಾವು ಕಾಣಬೇಕು. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ನನ್ನ ದೇಶದ ಯುವಶಕ್ತಿಯ ಮೇಲೆ ನನಗೆ ನಂಬಿಕೆಯಿದೆ. ನನ್ನ ದೇಶದ ಜನರ ಮೇಲೆ ನನಗೆ ನಂಬಿಕೆಯಿದೆ. ದೇಶವು ಖಂಡಿತವಾಗಿಯೂ ಈ ಗುರಿಗಳನ್ನು ತಲುಪುತ್ತದೆ. ನಿಮ್ಮ ತ್ಯಾಗ ಮತ್ತು ಕಠಿಣ ಪರಿಶ್ರಮವು 'ಅಭಿವೃದ್ಧಿ ಹೊಂದಿದ ಭಾರತ' ಎಂಬ ಭವ್ಯ ಕಟ್ಟಡಕ್ಕೆ ಬಲಿಷ್ಠ ಅಡಿಪಾಯವಾಗಲಿದೆ. ಈ ನಂಬಿಕೆಯೊಂದಿಗೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.
ಭಾರತ ಮಾತಾ ಕೀ ಜೈ.
ಭಾರತ ಮಾತಾ ಕೀ ಜೈ.
ಭಾರತ ಮಾತಾ ಕೀ ಜೈ.
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****