ಲೋಕಸಭಾ ಸಚಿವಾಲಯ
ಭಾರತದ ಸಂಸತ್ತು ಹಾಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರ ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯ
ತಿರುವನಂತಪುರಂ, ಕೇರಳಂ, 3-4 ನವೆಂಬರ್, 2026
ಪ್ರಕಟಣಾ ದಿನಾಂಕ:
04 NOV 2026 4:20PM by PIB Bengaluru
‘ಲೆಕ್ಕಪರಿಶೋಧನೆ, ಉತ್ತರದಾಯಿತ್ವ ಮತ್ತು ಉತ್ತಮ ಆಡಳಿತ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವಿಕಸನಗೊಳ್ಳುತ್ತಿರುವ ಪಾತ್ರ’ ಎಂಬ ವಿಷಯದ ಕುರಿತು ಸಮ್ಮೇಳನದ ಪೂರ್ಣ ಅಧಿವೇಶನದಲ್ಲಿ ನಡೆದ ಚರ್ಚೆಗಳನ್ನು ಪರಿಗಣಿಸಿ, ನಾವು ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳುತ್ತೇವೆ:
- ಸಾರ್ವಜನಿಕ ಬೊಕ್ಕಸವನ್ನು ರಕ್ಷಿಸುವ ಉದ್ದೇಶದಿಂದ, ವಿನಿಯೋಗಿಸಲಾದ ಸಾರ್ವಜನಿಕ ನಿಧಿಯು ಯಾವ ಉದ್ದೇಶ ಅಥವಾ ಸೇವೆಗಾಗಿ ನಿಗದಿಯಾಗಿದೆಯೋ ಅದೇ ಉದ್ದೇಶಕ್ಕೆ ಕಾನೂನುಬದ್ಧವಾಗಿ ಲಭ್ಯವಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ಕಟ್ಟುನಿಟ್ಟಿನ ಪರಿಶೀಲನಾ ಮಾನದಂಡಗಳನ್ನು ಎತ್ತಿಹಿಡಿಯುವುದು;
- ಡಿಜಿಟಲ್ ಪೋರ್ಟಲ್ ರಚಿಸುವ ಮೂಲಕ ಸಂಸತ್ತು ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ನಡುವೆ ನಿರಂತರವಾಗಿ ಪರಸ್ಪರ ಕಲಿಕೆ, ಉತ್ತಮ ಕಾರ್ಯವಿಧಾನಗಳ ವಿನಿಮಯ ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದ ನವೀನ ಕ್ರಮಗಳ ಹಂಚಿಕೆಗೆ ದೃಢವಾದ ವ್ಯವಸ್ಥೆಯನ್ನು ರೂಪಿಸುವುದು;
- ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಕ್ಕಪರಿಶೋಧನಾ ಆಕ್ಷೇಪಣೆಗಳು ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಶಿಫಾರಸುಗಳ ಕುರಿತು ಕೈಗೊಂಡ ಕ್ರಮಗಳ ಟಿಪ್ಪಣಿಗಳನ್ನು ಸಲ್ಲಿಸಲು ಏರೂಪದ ಕಾಲಮಿತಿಗಳನ್ನು ನಿಗದಿಪಡಿಸುವ ಸಂಬಂಧ ಕ್ರಿಯಾ ಯೋಜನೆಯನ್ನು ರೂಪಿಸುವುದು;
- ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳಲ್ಲಿ ಲೆಕ್ಕಪರಿಶೋಧನಾ ಆಕ್ಷೇಪಣೆಗಳ ಮೇಲ್ವಿಚಾರಣಾ ವ್ಯವಸ್ಥೆ (ಎಪಿಎಂಎಸ್)ಯಂತಹ ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆಯ ಅಭಿವೃದ್ಧಿಯನ್ನು ಖಚಿತಪಡಿಸುವುದು;
- ವಿಶೇಷ ತರಬೇತಿ ಸಂಸ್ಥೆಗಳ ಮೂಲಕ ನಿಯಮಿತ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಸಚಿವಾಲಯಗಳ ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಸಂಕೀರ್ಣ ತಾಂತ್ರಿಕ ಮತ್ತು ಹಣಕಾಸು ವಿಷಯಗಳನ್ನು ಪರಿಶೀಲಿಸಲು ಅಗತ್ಯವಾದ ವಿಶ್ಲೇಷಣಾ ಸಾಧನಗಳನ್ನು ಸಮಿತಿಯ ಸದಸ್ಯರಿಗೆ ಒದಗಿಸುವುದು;
- ಬಾಕಿ ಉಳಿದಿರುವ ಲೆಕ್ಕಪರಿಶೋಧನಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ಪ್ರತಿ ತಿಂಗಳು ಕನಿಷ್ಠ ಮೂರು ಸಭೆಗಳನ್ನು ನಡೆಸುವುದನ್ನು ಹಾಗೂ ಉಪಸಮಿತಿಗಳನ್ನು ರಚಿಸುವುದನ್ನು ಪರಿಗಣಿಸುವುದು;
- ಅತ್ಯಾಧುನಿಕ ಫೊರೆನ್ಸಿಕ್ ಸಾಧನಗಳ ಬಳಕೆ ಹಾಗೂ ತಕ್ಷಣದ ಶಾಸಕಾಂಗ ಮೇಲ್ವಿಚಾರಣೆ ಅಗತ್ಯವಿರುವ ಆಡಳಿತದ ಹೆಚ್ಚಿನ ಅಪಾಯದ ಕ್ಷೇತ್ರಗಳನ್ನು ಗುರುತಿಸುವ ನಿಟ್ಟಿನಲ್ಲಿ ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (C&AG) ಕಚೇರಿಯೊಂದಿಗಿನ ಸಹಯೋಗವನ್ನು ಬಲಪಡಿಸುವುದು; ಮತ್ತು
- ಶಾಸಕಾಂಗದ ನಿಗದಿತ ಪ್ರಕ್ರಿಯೆಯ ಸಮಗ್ರತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಂಡೇ ಡಿಜಿಟಲ್ ಪರಿಹಾರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.
2026ರ ನವೆಂಬರ್ 4ರಂದು ಕೇರಳಂನ ತಿರುವನಂತಪುರಂನಲ್ಲಿ ನಡೆದ ಈ ಸಮ್ಮೇಳನದಲ್ಲಿ ಸಂಸತ್ತು ಹಾಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಈ ನಿರ್ಣಯವನ್ನು ಅಂಗೀಕರಿಸಿದರು.
*****
(ಪ್ರಕಟಣೆ ಐ.ಡಿ.: 2332832)
ವಿಸಿಟರ್ ಕೌಂಟರ್ : 6