ಪ್ರಕಟಣಾ ದಿನಾಂಕ:
04 NOV 2026 11:30AM by PIB Bengaluru
ಭಾರತೀಯ ರೈಲ್ವೆಯು ಅಕ್ಟೋಬರ್ 2026 ರಲ್ಲಿಯೂ ತನ್ನ ಸದೃಢ ಕಾರ್ಯಾಚರಣಾ ಸಾಮರ್ಥ್ಯವನ್ನು ಮುಂದುವರಿಸಿದ್ದು, ಸರಕು ಸಾಗಣೆಯಲ್ಲಿ ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ. ಸರಕು ಸಾಗಣೆಯ ಪ್ರಮಾಣದಲ್ಲಿನ ಹೆಚ್ಚಳ ಮತ್ತು ಅದರಿಂದ ಲಭಿಸಿದ ಆದಾಯವು, ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲು ಹಾಗೂ ದೇಶದ ಲಾಜಿಸ್ಟಿಕ್ಸ್ (ಸರಕು ಸಾಗಣೆ ಮತ್ತು ಪೂರೈಕೆ ಸರಣಿ) ವಲಯವನ್ನು ಬಲಪಡಿಸಲು ಭಾರತೀಯ ರೈಲ್ವೆ ನಡೆಸುತ್ತಿರುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ.
ಸರಕು ಸಾಗಣೆಯಲ್ಲಿ ಗಣನೀಯ ಬೆಳವಣಿಗೆ ದಾಖಲು
ಭಾರತೀಯ ರೈಲ್ವೆಯು ಅಕ್ಟೋಬರ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಸರಕು ಸಾಗಣೆ ದಾಖಲಿಸಿದೆ. ಈ ತಿಂಗಳಲ್ಲಿ 145.07 ದಶಲಕ್ಷ ಟನ್ ಸರಕುಗಳನ್ನು ಸಾಗಿಸಲಾಗಿದ್ದು, ಇದು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಸಾಗಿಸಲಾದ 133.93 ದಶಲಕ್ಷ ಟನ್‌ಗಳಿಗೆ ಹೋಲಿಸಿದರೆ ಶೇಕಡಾ 8.32 ರಷ್ಟು ಬೆಳವಣಿಗೆ ಸೂಚಿಸುತ್ತದೆ.
ಈ ತಿಂಗಳಲ್ಲಿ ಹಲವು ಪ್ರಮುಖ ಸರಕುಗಳ ಸಾಗಣೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಆಹಾರ ಧಾನ್ಯಗಳ ಸಾಗಣೆಯು ಶೇಕಡ 26.3 ರಷ್ಟು, ದೇಶೀಯ ಕಲ್ಲಿದ್ದಲು ಶೇಕಡ 16.0 ರಷ್ಟು, ಇತರ ಸರಕುಗಳು ಶೇಕಡ 11.0 ರಷ್ಟು, ಕ್ಲಿಂಕರ್ ಶೇಕಡ 10.4 ರಷ್ಟು, ದೇಶೀಯ ಕಂಟೈನರ್‌ಗಳು ಶೇಕಡ 6.3 ರಷ್ಟು, ಕಬ್ಬಿಣದ ಅದಿರು ಶೇಕಡ 5.0 ರಷ್ಟು, ಖನಿಜ ತೈಲ ಶೇಕಡ 1.9 ರಷ್ಟು ಮತ್ತು ಸಿದ್ಧ ಉಕ್ಕು ಶೇಕಡ 0.5 ರಷ್ಟು ಏರಿಕೆಯಾಗಿವೆ.
ವಿದ್ಯುತ್ ಸ್ಥಾವರಗಳ ಹೆಚ್ಚಿದ ಬೇಡಿಕೆಯನ್ನು ಪೂರೈಸಲು, ಭಾರತೀಯ ರೈಲ್ವೆಯು ದೇಶೀಯ ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸಿದೆ. ಅಕ್ಟೋಬರ್ 2026 ರಲ್ಲಿ ಪ್ರತಿದಿನ ಸರಾಸರಿ 469.8 ರೇಕ್‌ಗಳ (ರೈಲು ಬೋಗಿಗಳ ಗುಂಪು) ಮೂಲಕ ಕಲ್ಲಿದ್ದಲನ್ನು ಸಾಗಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಪ್ರತಿದಿನ ಸರಾಸರಿ 393.2 ರೇಕ್‌ಗಳನ್ನು ಸಾಗಿಸಲಾಗಿತ್ತು; ಅಂದರೆ, ಇದರಲ್ಲಿ ಶೇಕಡ 19.5 ರಷ್ಟು ಬೆಳವಣಿಗೆ ದಾಖಲಾಗಿದೆ.
ಅಕ್ಟೋಬರ್ 2026 ರಲ್ಲಿನ ಈ ಉತ್ತಮ ಸಾಧನೆಯು, 2026-27ರ ಆರ್ಥಿಕ ವರ್ಷದ ಮೊದಲ ಏಳು ತಿಂಗಳುಗಳಲ್ಲಿ (ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ) ದಾಖಲಾದ ಬೆಳವಣಿಗೆಯ ಮುಂದುವರಿಕೆಯಾಗಿದೆ. ಈ ಅವಧಿಯಲ್ಲಿ, ಭಾರತೀಯ ರೈಲ್ವೆಯು ಒಟ್ಟು 978.78 ದಶಲಕ್ಷ ಟನ್ ಸರಕುಗಳನ್ನು ಸಾಗಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 935.10 ದಶಲಕ್ಷ ಟನ್ ಸರಕುಗಳನ್ನು ಸಾಗಿಸಲಾಗಿತ್ತು, ಅಂದರೆ ಈ ಅವಧಿಯಲ್ಲಿ ಶೇಕಡ 4.67 ರಷ್ಟು ಬೆಳವಣಿಗೆ ಕಂಡುಬಂದಿದೆ.
ಪ್ರಯಾಣಿಕರ ದಟ್ಟಣೆಯೂ ಮುಂದುವರಿಕೆ
ಪ್ರಯಾಣಿಕರ ಸಂಚಾರವೂ ಅಕ್ಟೋಬರ್ 2026ರಲ್ಲಿ ಸ್ಥಿರ ಬೆಳವಣಿಗೆಯನ್ನು ಕಂಡಿತು. ಭಾರತೀಯ ರೈಲ್ವೆಗಳು 64.72 ಕೋಟಿ ಪ್ರಯಾಣಿಕರನ್ನು ಸಾಗಿಸಿದವು, ಕಳೆದ ವರ್ಷ ಇದೇ ಅವಧಿಯಲ್ಲಿ 63.52 ಕೋಟಿ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು..
ಏಪ್ರಿಲ್-ಅಕ್ಟೋಬರ್ 2026ರಲ್ಲಿ, ಭಾರತೀಯ ರೈಲ್ವೆಯಲ್ಲಿ 443.8 ಕೋಟಿ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಕಳೆದ ವರ್ಷ ಇದೇ ಅವಧಿಯಲ್ಲಿ 431.4 ಕೋಟಿ ಪ್ರಯಾಣಿಕರರು ಪ್ರಯಾಣ ಮಾಡಿದ್ದರು. ಉಪನಗರವಲ್ಲದ ವಿಭಾಗವು ಶೇ. 4.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದರೆ, ಉಪನಗರ ವಿಭಾಗವು ಶೇ. 1.7 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ಸರಕು ಸಾಗಣೆಯಲ್ಲಿನ ಬೆಳವಣಿಗೆಯು ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವ ಮತ್ತು ಭಾರತದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾಮರ್ಥ್ಯ ವರ್ಧನೆ ಮತ್ತು ಸುಧಾರಿತ ಕಾರ್ಯಾಚರಣೆಯ ದಕ್ಷತೆಯ ಮೂಲಕ, ಭಾರತೀಯ ರೈಲ್ವೆ ತನ್ನ ಸಾರಿಗೆ ಜಾಲವನ್ನು ವೃದ್ಧಿಸುವುದನ್ನು ಮುಂದುವರೆಸಿದೆ.
*****