ಪ್ರಕಟಣಾ ದಿನಾಂಕ:
03 NOV 2026 4:54PM by PIB Bengaluru
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಟಲ್ ವಯೋ ಅಭ್ಯುದಯ ಯೋಜನೆ (ಎವಿವೈಎವೈ) ಅಡಿಯಲ್ಲಿ ತಲೆಮಾರುಗಳ ನಡುವಿನ ಬಾಂಧವ್ಯವನ್ನು ಉತ್ತೇಜಿಸುವ ‘ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನ’ಕ್ಕೆ ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ ನೀಡಲಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಈ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ತಲೆಮಾರುಗಳ ನಡುವಿನ ಬಂಧವನ್ನು ಬಲಪಡಿಸುವ ಹಾಗೂ ಹಿರಿಯ ನಾಗರಿಕರ ಅನುಭವ, ಜ್ಞಾನ ಮತ್ತು ಕೊಡುಗೆಗಳನ್ನು ಗೌರವಿಸುವ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
ಈ ರಾಷ್ಟ್ರೀಯ ಅಭಿಯಾನವು ಹಿರಿಯ ನಾಗರಿಕರು ಮತ್ತು ಯುವ ಪೀಳಿಗೆಯ ನಡುವೆ ಅರ್ಥಪೂರ್ಣ ಹಾಗೂ ಸುಸ್ಥಿರ ಒಡನಾಟವನ್ನು ಸಾಂಸ್ಥಿಕಗೊಳಿಸುವ ಗುರಿ ಹೊಂದಿದೆ. ಈ ಮೂಲಕ ಪರಸ್ಪರ ಗೌರವ, ತಿಳುವಳಿಕೆ, ಒಡನಾಟ ಮತ್ತು ಹಂಚಿಕೆಯ ಜವಾಬ್ದಾರಿಯ ಮನೋಭಾವವನ್ನು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನವು ಕೇವಲ ಕಲ್ಯಾಣ ಅಭಿಯಾನವಲ್ಲ; ಬದಲಿಗೆ ತಲೆಮಾರುಗಳ ನಡುವಿನ ಬಾಂಧವ್ಯವನ್ನು ಸಾಂಸ್ಥಿಕಗೊಳಿಸುವ, ಹಿರಿಯ ನಾಗರಿಕರನ್ನು ಸಮಾಜದ ಕೊಡುಗೆದಾರರನ್ನಾಗಿ ಗುರುತಿಸುವ ಹಾಗೂ ಗೌರವಯುತ ವೃದ್ಧಾಪ್ಯದ ಉದ್ದೇಶಕ್ಕಾಗಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಸಜ್ಜುಗೊಳಿಸುವ ರಾಷ್ಟ್ರವ್ಯಾಪಿ ಸಾಮಾಜಿಕ ಆಂದೋಲನವಾಗಿದೆ ಎಂದು ಅವರು ಹೇಳಿದರು.
ಕುಟುಂಬಗಳು, ಶಿಕ್ಷಣ ಸಂಸ್ಥೆಗಳು, ಯುವ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿವಿಧ ತಲೆಮಾರುಗಳ ನಡುವೆ ಅರ್ಥಪೂರ್ಣ ಸಂವಹನ ಹಾಗೂ ಸಹಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸುವಂತೆ ಪ್ರೋತ್ಸಾಹಿಸುವ ಮೂಲಕ ಈ ಅಭಿಯಾನವನ್ನು ಸಮುದಾಯ ಆಧಾರಿತ ಆಂದೋಲನವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಿರಿಯ ನಾಗರಿಕರ ಜೀವನಾನುಭವ, ಜ್ಞಾನ, ಕೌಶಲ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಯುವ ಪೀಳಿಗೆ ಕಲಿಯಲು ಹಾಗೂ ಯುವಜನರ ಉತ್ಸಾಹ, ತಂತ್ರಜ್ಞಾನದ ಅರಿವು ಮತ್ತು ಸಮಕಾಲೀನ ದೃಷ್ಟಿಕೋನಗಳಿಂದ ಹಿರಿಯರು ಪ್ರಯೋಜನ ಪಡೆಯಲು ಪೂರಕ ವಾತಾವರಣವನ್ನು ನಿರ್ಮಿಸುವ ಮೂಲಕ, ಉದ್ಭವಿಸುತ್ತಿರುವ ಸವಾಲುಗಳಿಗೆ ಸ್ಪಂದಿಸುವುದು ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನದ ಉದ್ದೇಶವಾಗಿದೆ ಎಂದು ಸಚಿವಾಲಯದ ಅಧಿಕಾರಿ ಹೇಳಿದರು.

ಹಿರಿಯ ನಾಗರಿಕರನ್ನು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿ ಪರಿಗಣಿಸದೆ, ಸಮಾಜಕ್ಕೆ ಸಕ್ರಿಯ ಕೊಡುಗೆ ನೀಡುವವರು, ಮಾರ್ಗದರ್ಶಕರು ಹಾಗೂ ಜ್ಞಾನ, ಸಂಸ್ಕೃತಿ ಮತ್ತು ಸಾಮಾಜಿಕ ಅನುಭವದ ಅಮೂಲ್ಯ ಭಂಡಾರವೆಂದು ಈ ಉಪಕ್ರಮ ಗುರುತಿಸುತ್ತದೆ ಎಂದು ಅವರು ತಿಳಿಸಿದರು.
ಭಾರತವು ಮಹತ್ವದ ಜನಸಂಖ್ಯಾ ಪರಿವರ್ತನೆಯ ಹಂತದಲ್ಲಿದ್ದು, ಹಿರಿಯ ನಾಗರಿಕರ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅಧಿಕಾರಿ ತಿಳಿಸಿದರು. 60 ವರ್ಷ ಹಾಗೂ ಮೇಲ್ಪಟ್ಟವರ ಜನಸಂಖ್ಯೆಯು 2011ರಲ್ಲಿ ಸುಮಾರು 10 ಕೋಟಿಯಷ್ಟಿದ್ದು, 2036ರ ವೇಳೆಗೆ 23 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಶೇ. 8.4ರಿಂದ ಶೇ. 14.9ಕ್ಕೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಈ ಜನಸಂಖ್ಯಾ ಬದಲಾವಣೆಯ ಜೊತೆಗೆ ನಗರೀಕರಣ, ವಲಸೆ, ಕುಟುಂಬ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಮತ್ತು ಬದಲಾಗುತ್ತಿರುವ ಸಾಮಾಜಿಕ ಸ್ವರೂಪಗಳಿಂದಾಗಿ ಹಲವು ಸಂದರ್ಭಗಳಲ್ಲಿ ವಿವಿಧ ತಲೆಮಾರುಗಳ ನಡುವೆ ನಿಯಮಿತ ಒಡನಾಟಕ್ಕೆ ಇರುವ ಅವಕಾಶಗಳು ಕಡಿಮೆಯಾಗಿವೆ ಎಂದು ಅವರು ಹೇಳಿದರು.
ಈ ಬೆಳವಣಿಗೆಗಳು ಸಾಮಾಜಿಕ ಪ್ರತ್ಯೇಕತೆಯನ್ನು ನಿವಾರಿಸಲು, ಸಮುದಾಯ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸಲು ಹಾಗೂ ಹಿರಿಯ ನಾಗರಿಕರು ಸಮಾಜದೊಂದಿಗೆ ಸಕ್ರಿಯವಾಗಿ, ಗೌರವಯುತವಾಗಿ ಮತ್ತು ಅರ್ಥಪೂರ್ಣವಾಗಿ ಬೆಸೆದುಕೊಂಡಿರುವುದನ್ನು ಖಚಿತಪಡಿಸಲು ವ್ಯವಸ್ಥಿತ ಮತ್ತು ನಿರಂತರ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುತ್ತವೆ ಎಂದು ಅಧಿಕಾರಿ ತಿಳಿಸಿದರು.
ವಿವಿಧ ತಲೆಮಾರುಗಳ ನಡುವೆ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಮತ್ತು ಸಮುದಾಯದ ನಿಯಮಿತ ಪಾಲ್ಗೊಳ್ಳುವಿಕೆಯ ಮೂಲಕ ಅವುಗಳನ್ನು ನಿರಂತರವಾಗಿ ಮುಂದುವರಿಸಲು ಪ್ರಾಯೋಗಿಕ ಚೌಕಟ್ಟನ್ನು ಒದಗಿಸುವ ನವೀನ ‘5ಸಿ’ ಮಾದರಿಯನ್ನು ಆಧರಿಸಿ ಈ ಅಭಿಯಾನವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮಾದರಿಯಲ್ಲಿ ಸಂಪರ್ಕ, ಸಂವಾದ, ಸಹ-ಸೃಜನಶೀಲತೆ, ಕೊಡುಗೆ ಮತ್ತು ನಿರಂತರತೆ ಎಂಬ ಐದು ಅಂಶಗಳಿವೆ.
ಈ ಐದು ಅಂಶಗಳ ಉದ್ದೇಶ ಹೀಗಿದೆ: ಸಂಪರ್ಕ (Connect) – ಸಮುದಾಯ ವೇದಿಕೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ಹಿರಿಯ ನಾಗರಿಕರು ಹಾಗೂ ಯುವ ಪೀಳಿಗೆಯವರು ಪರಸ್ಪರ ಬೆರೆಯಲು ಅವಕಾಶಗಳನ್ನು ಸೃಷ್ಟಿಸುವುದು; ಸಂವಾದ (Converse) – ವಿವಿಧ ತಲೆಮಾರುಗಳ ನಡುವೆ ಮಾತುಕತೆ, ಕಥೆ ಹೇಳುವಿಕೆ, ಅನುಭವಗಳ ವಿನಿಮಯ ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವುದು; ಸಹ-ಸೃಜನಶೀಲತೆ (Co-create) – ಹಿರಿಯ ನಾಗರಿಕರು ಮತ್ತು ಯುವಜನರ ಪರಸ್ಪರ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಂಡು ಜಂಟಿ ಚಟುವಟಿಕೆಗಳು, ಸೃಜನಾತ್ಮಕ ಉಪಕ್ರಮಗಳು ಮತ್ತು ಸಹಯೋಗದ ಯೋಜನೆಗಳಿಗೆ ಅವಕಾಶ ಕಲ್ಪಿಸುವುದು; ಕೊಡುಗೆ (Contribute) – ಸಮುದಾಯದ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಎರಡೂ ತಲೆಮಾರುಗಳು ತಮ್ಮ ಜ್ಞಾನ, ಕೌಶಲ್ಯ, ಸಮಯ ಮತ್ತು ಸಾಮರ್ಥ್ಯಗಳನ್ನು ಕೊಡುಗೆಯಾಗಿ ನೀಡಲು ಅನುವು ಮಾಡಿಕೊಡುವುದು; ಮತ್ತು ನಿರಂತರತೆ (Continue) – ವಿವಿಧ ತಲೆಮಾರುಗಳ ನಡುವಿನ ಒಡನಾಟವು ಒಂದು ಬಾರಿಯ ಚಟುವಟಿಕೆಗಳಿಗೆ ಸೀಮಿತವಾಗದೆ, ನಿಯಮಿತವಾಗಿ, ನಿರಂತರವಾಗಿ ಮತ್ತು ಸಮುದಾಯದ ನೇತೃತ್ವದಲ್ಲಿ ನಡೆಯುವ ಅಭ್ಯಾಸವಾಗಿ ರೂಪುಗೊಳ್ಳುವುದನ್ನು ಖಚಿತಪಡಿಸುವುದು.
ಈ ಅಭಿಯಾನವನ್ನು 12 ವಿಷಯಾಧಾರಿತ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಇವುಗಳಲ್ಲಿ ‘30 ನಿಮಿಷ ಒಟ್ಟಿಗೆ’, ‘ನನಗೆ ಕಲಿಸಿ – ನಾನು ನಿಮಗೆ ಕಲಿಸುತ್ತೇನೆ’, ‘ನನ್ನ ಕಥೆ, ನನ್ನ ಭಾರತ’, ‘ಡಿಜಿಟಲ್ ದಾದಾ-ದಾದಿ / ಡಿಜಿಟಲ್ ಸಾಥಿ’, ‘ತಲೆಮಾರುಗಳ ಆರೋಗ್ಯ ಮತ್ತು ಕ್ಷೇಮ’ ಹಾಗೂ ‘ಸಿಲ್ವರ್ ಸ್ಕಿಲ್ಸ್ – ಮಾರ್ಗದರ್ಶಕರಾಗಿ ಹಿರಿಯರು’ ಸೇರಿದಂತೆ ವಿವಿಧ ಚಟುವಟಿಕೆಗಳು ಸೇರಿವೆ ಎಂದು ಅಧಿಕಾರಿ ಹೇಳಿದರು.
ಈ ವಿಷಯಾಧಾರಿತ ಚಟುವಟಿಕೆಗಳ ಮೂಲಕ ಒಡನಾಟ, ಮೌಖಿಕ ಇತಿಹಾಸ ಮತ್ತು ಸಾಂಸ್ಕೃತಿಕ ವಿನಿಮಯ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಜಾಗೃತಿ, ಕ್ಷೇಮ, ಕೌಶಲ್ಯ ಹಂಚಿಕೆ ಹಾಗೂ ಮಾರ್ಗದರ್ಶನವನ್ನು ಉತ್ತೇಜಿಸಲಾಗುವುದು ಎಂದು ಅವರು ತಿಳಿಸಿದರು.
ಹೆಚ್ಚುತ್ತಿರುವ ತಂತ್ರಜ್ಞಾನ ಆಧಾರಿತ ಪರಿಸರದಲ್ಲಿ ಹಿರಿಯ ನಾಗರಿಕರು ಡಿಜಿಟಲ್ ಸೇವೆಗಳನ್ನು ಬಳಸಲು ಮತ್ತು ಸಂಭಾವ್ಯ ಸೈಬರ್ ವಂಚನೆಗಳನ್ನು ಗುರುತಿಸಲು ಯುವಜನರು ನೆರವಾಗುವಂತೆ ಈ ಅಭಿಯಾನವು ಪ್ರೋತ್ಸಾಹಿಸಲಿದೆ. ಇದರಿಂದ ಹಿರಿಯ ನಾಗರಿಕರಲ್ಲಿ ಆತ್ಮವಿಶ್ವಾಸ ಮತ್ತು ಸುರಕ್ಷತೆಯ ಭಾವನೆ ಹೆಚ್ಚಲಿದೆ ಎಂದು ಅವರು ಹೇಳಿದರು.
ಈ ಅಭಿಯಾನದ ಚಾಲನಾ ಕಾರ್ಯಕ್ರಮದ ಪ್ರಮುಖ ಭಾಗವಾಗಿ ‘ವಯೋ ಸಾಥಿ’ (ಬೆಂಬಲ, ಜಾಗೃತಿ, ನೆರವು, ತರಬೇತಿ, ಆರೋಗ್ಯ ಮತ್ತು ಒಳಗೊಳ್ಳುವಿಕೆ) ಎಂಬ ಡಿಜಿಟಲ್ ಸೌಲಭ್ಯ ಹೊಂದಿರುವ ಸ್ವಯಂಸೇವಕರ ಉಪಕ್ರಮವನ್ನು ಪರಿಚಯಿಸಲಾಗುವುದು. ಹಿರಿಯ ನಾಗರಿಕರ ಕಲ್ಯಾಣ, ಘನತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಬೆಂಬಲ ನೀಡಲು ನಾಗರಿಕರು ಹಾಗೂ ಸಂಸ್ಥೆಗಳನ್ನು ಸಜ್ಜುಗೊಳಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿ ತಿಳಿಸಿದರು.
ತಳಮಟ್ಟದಲ್ಲಿ ಹಿರಿಯ ನಾಗರಿಕರಿಗೆ ನೆರವಾಗಲು ತಮ್ಮ ಸಮಯ, ಕೌಶಲ್ಯ ಮತ್ತು ಸಂಪನ್ಮೂಲಗಳನ್ನು ಕೊಡುಗೆಯಾಗಿ ನೀಡಬಲ್ಲ ಸ್ವಯಂಸೇವಕರ ರಾಷ್ಟ್ರವ್ಯಾಪಿ ಜಾಲವನ್ನು ಅಭಿವೃದ್ಧಿಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳು, ಯುವ ವೃತ್ತಿಪರರು, ಸಮುದಾಯ ಸ್ವಯಂಸೇವಕರು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಸಾಂಸ್ಥಿಕ ಪಾಲುದಾರರು ಸೇರಿದಂತೆ 18 ವರ್ಷ ಹಾಗೂ ಮೇಲ್ಪಟ್ಟ ಎಲ್ಲ ನಾಗರಿಕರು ಇದರಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದರು.
ಈ ಉಪಕ್ರಮದಡಿ ಸ್ವಯಂಸೇವಕರು ಹಿರಿಯ ನಾಗರಿಕರ ಸ್ನೇಹಿತರು, ಸಹಾಯಕರು, ಸಂಪರ್ಕ ಸೇತುವೆಗಳು ಮತ್ತು ಬೆಂಬಲಿಗರಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗುವುದು. ಸಂಬಂಧಿತ ಮಾಹಿತಿ, ಕಲ್ಯಾಣ ಸೇವೆಗಳು, ಸಮುದಾಯ ಚಟುವಟಿಕೆಗಳು, ಡಿಜಿಟಲ್ ನೆರವು ಮತ್ತು ಇತರ ಅಗತ್ಯ ಬೆಂಬಲಗಳನ್ನು ಪಡೆಯಲು ಅವರು ಹಿರಿಯ ನಾಗರಿಕರಿಗೆ ಸಹಕರಿಸಲಿದ್ದಾರೆ. ಈ ಚೌಕಟ್ಟು ಈಗಾಗಲೇ ಅಸ್ತಿತ್ವದಲ್ಲಿರುವ ಸಾಂಸ್ಥಿಕ ಮತ್ತು ಸಮುದಾಯ ಆಧಾರಿತ ಬೆಂಬಲ ವ್ಯವಸ್ಥೆಗಳಿಗೆ ಪೂರಕವಾಗಿ ಅವುಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಧಿಕಾರಿ ತಿಳಿಸಿದರು.
ಆಸಕ್ತ ನಾಗರಿಕರು ಹಿರಿಯ ನಾಗರಿಕರ ಕಲ್ಯಾಣ (SCW) ಸಮಾವೇಶ್ ಪೋರ್ಟಲ್ ಅಥವಾ ಜೀವನ್ ಆ್ಯಪ್ ಮೂಲಕ ವಯೋ ಸಾಥಿ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಬಹುದು ಎಂದು ಸಚಿವಾಲಯದ ಅಧಿಕಾರಿ ತಿಳಿಸಿದರು. ನೋಂದಾಯಿತ ಸ್ವಯಂಸೇವಕರಿಗೆ ಅವರ ಪಾಲ್ಗೊಳ್ಳುವಿಕೆ ಮತ್ತು ಕೊಡುಗೆಯನ್ನು ಗುರುತಿಸಿ ವಯೋ ಸಾಥಿ ಪ್ರಮಾಣಪತ್ರವನ್ನೂ ನೀಡಲಾಗುವುದು.
ಈ ಉಪಕ್ರಮದ ಮೂಲಕ ಹಿರಿಯ ನಾಗರಿಕರ ಕಲ್ಯಾಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಸ್ವಯಂಸೇವಾ ಸೇವೆಯನ್ನು ವ್ಯವಸ್ಥಿತ, ಸುಲಭವಾಗಿ ಲಭ್ಯವಾಗುವ ಮತ್ತು ವ್ಯಾಪಕವಾಗಿ ವಿಸ್ತರಿಸಬಹುದಾದ ಕಾರ್ಯವಿಧಾನವನ್ನಾಗಿ ರೂಪಿಸಲು ಸಚಿವಾಲಯ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರು ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನದ ಕೈಪಿಡಿಯನ್ನೂ ಬಿಡುಗಡೆ ಮಾಡಲಿದ್ದಾರೆ. ಅಭಿಯಾನದ ಉದ್ದೇಶಗಳು, ಅನುಷ್ಠಾನದ ಚೌಕಟ್ಟು, ವಿಷಯಾಧಾರಿತ ಚಟುವಟಿಕೆಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಕಾರ್ಯವಿಧಾನಗಳನ್ನು ವಿವರಿಸುವ ಈ ಕೈಪಿಡಿಯು ಅಭಿಯಾನಕ್ಕೆ ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸಲಿದೆ.
ದೇಶಾದ್ಯಂತ ಸಮನ್ವಯದೊಂದಿಗೆ ಅಭಿಯಾನವನ್ನು ಅನುಷ್ಠಾನಗೊಳಿಸಲು ಹಾಗೂ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅನುಕೂಲವಾಗುವಂತೆ ರಾಜ್ಯಗಳು, ಜಿಲ್ಲೆಗಳು ಮತ್ತು ಸಮುದಾಯ ಸಂಸ್ಥೆಗಳ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ಈ ಕೈಪಿಡಿಯಲ್ಲಿ ಸ್ಪಷ್ಟಪಡಿಸಲಾಗುವುದು. ವಿವಿಧ ಆಡಳಿತಾತ್ಮಕ ಮತ್ತು ಸಮುದಾಯ ಮಟ್ಟಗಳಲ್ಲಿ ಅಭಿಯಾನವನ್ನು ಅಳವಡಿಸಿಕೊಳ್ಳಲು ಹಾಗೂ ಶಿಕ್ಷಣ ಸಂಸ್ಥೆಗಳು, ಯುವ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಇತರ ಪಾಲುದಾರರು ಸಕ್ರಿಯವಾಗಿ ಭಾಗವಹಿಸಲು ಈ ಕೈಪಿಡಿ ನೆರವಾಗಲಿದೆ.
ಅಭಿಯಾನದ ಚಾಲನಾ ಕಾರ್ಯಕ್ರಮದ ಭಾಗವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಶ್ರೀ ರಾಮಚಂದ್ರ ಮಿಷನ್ (ಎಸ್ಆರ್ಸಿಎಂ) ಮತ್ತು ಜೋಧಪುರದ ಅಧ್ಯಾತ್ಮ ವಿಜ್ಞಾನ ಸತ್ಸಂಗ ಕೇಂದ್ರ (ಎವಿಎಸ್ಕೆ) ಗಳೊಂದಿಗೆ ಎರಡು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.
ಧ್ಯಾನ, ಯೋಗ ಮತ್ತು ಇತರ ಆರೋಗ್ಯ ಹಾಗೂ ಕ್ಷೇಮ ಆಧಾರಿತ ಕಾರ್ಯಕ್ರಮಗಳ ಮೂಲಕ ಹಿರಿಯ ನಾಗರಿಕರ ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವುದು ಈ ಸಹಭಾಗಿತ್ವಗಳ ಉದ್ದೇಶವಾಗಿದೆ. ಹಿರಿಯ ನಾಗರಿಕರ ಕಲ್ಯಾಣದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ವೃದ್ಧರ ಕಲ್ಯಾಣದ ಕಡೆಗೆ ಸಾಮೂಹಿಕ ಜವಾಬ್ದಾರಿಯ ಮನೋಭಾವ ಬೆಳೆಸಲು ಪ್ರತಿಜ್ಞಾ ಅಭಿಯಾನಗಳು ಮತ್ತು ವಾಕಥಾನ್ಗಳು ಸೇರಿದಂತೆ ಸಮುದಾಯ ಆಧಾರಿತ ಚಟುವಟಿಕೆಗಳು ಹಾಗೂ ಜಾಗೃತಿ ಉಪಕ್ರಮಗಳ ಮೂಲಕ ತಲೆಮಾರುಗಳ ನಡುವಿನ ಒಡನಾಟಕ್ಕೂ ಈ ಸಹಭಾಗಿತ್ವಗಳು ಬೆಂಬಲ ನೀಡಲಿವೆ.
ಹಿರಿಯ ನಾಗರಿಕರ ಕಲ್ಯಾಣ ಉಪಕ್ರಮಗಳ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಆರೋಗ್ಯಪೂರ್ಣ, ಸಕ್ರಿಯ ಮತ್ತು ಗೌರವಯುತ ವೃದ್ಧಾಪ್ಯವನ್ನು ಉತ್ತೇಜಿಸಲು ನಾಗರಿಕ ಸಮಾಜದ ಸಂಘಟನೆಗಳು ಮತ್ತು ಇತರ ಸಾಂಸ್ಥಿಕ ಪಾಲುದಾರರನ್ನು ತೊಡಗಿಸಿಕೊಳ್ಳುವ ಸಚಿವಾಲಯದ ಬದ್ಧತೆಯನ್ನು ಈ ಸಹಯೋಗಗಳು ಪ್ರತಿಬಿಂಬಿಸುತ್ತವೆ.
ವಿವಿಧ ತಲೆಮಾರುಗಳ ನಡುವಿನ ಬಾಂಧವ್ಯ ಮತ್ತು ಸಾಮೂಹಿಕ ಪಾಲ್ಗೊಳ್ಳುವಿಕೆಯ ಮೂಲಕ ಸಾಮಾಜಿಕ ಬಂಧವನ್ನು ಬಲಪಡಿಸುವ ವಿಶಾಲ ಪ್ರಯತ್ನದ ಭಾಗವಾಗಿ ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನ ರೂಪುಗೊಂಡಿದೆ. ಹಿರಿಯ ನಾಗರಿಕರು ಮತ್ತು ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ, ಅನುಭವ ಮತ್ತು ನವೀನತೆ ಪರಸ್ಪರ ಪೂರಕವಾಗಿರುವ, ಸಾಂಪ್ರದಾಯಿಕ ಜ್ಞಾನಕ್ಕೆ ಮನ್ನಣೆ ದೊರೆಯುವ ಹಾಗೂ ಹಿರಿಯರು ಸಮುದಾಯ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯುವ ಸಂಸ್ಕೃತಿಯನ್ನು ಬೆಳೆಸಲು ಈ ಅಭಿಯಾನ ಉದ್ದೇಶಿಸಿದೆ.
ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹಾಗೂ ವಯೋ ಸಾಥಿ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ನಾಗರಿಕರು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಯುವ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳ ಕಲ್ಯಾಣ ಸಂಘಗಳು ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಪಾಲುದಾರರಿಗೆ ಆಹ್ವಾನ ನೀಡಿದೆ.
ನಿರಂತರ ಸಾರ್ವಜನಿಕ ಪಾಲ್ಗೊಳ್ಳುವಿಕೆ, ಸಾಂಸ್ಥಿಕ ಸಹಭಾಗಿತ್ವ ಮತ್ತು ಸಮುದಾಯ ನೇತೃತ್ವದ ಉಪಕ್ರಮಗಳ ಮೂಲಕ ಹಿರಿಯ ನಾಗರಿಕರು ಘನತೆ, ಗೌರವ, ಭದ್ರತೆ, ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯಿಂದ ಕೂಡಿದ ಜೀವನ ನಡೆಸುವ ಹಾಗೂ ಯುವ ಪೀಳಿಗೆಯು ಹಿರಿಯರ ಕಡೆಗಿನ ತನ್ನ ಜವಾಬ್ದಾರಿಗಳ ಬಗ್ಗೆ ಆಳವಾದ ಅರಿವು ಬೆಳೆಸಿಕೊಳ್ಳುವ ಸಮಾಜವನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ.
ಹಿರಿಯ ನಾಗರಿಕರ ಕಲ್ಯಾಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಂದು ತಲೆಮಾರಿನ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿರುವ ಹಂಚಿಕೆಯ ಸಾಮಾಜಿಕ ಬದ್ಧತೆಯಾಗಿದೆ ಎಂಬ ತತ್ವವನ್ನು ಈ ಅಭಿಯಾನ ಮತ್ತಷ್ಟು ಬಲಪಡಿಸುತ್ತದೆ.
ಅಟಲ್ ವಯೋ ಅಭ್ಯುದಯ ಯೋಜನೆ (ಎವಿವೈಎವೈ) ಹಿರಿಯ ನಾಗರಿಕರ ಕಲ್ಯಾಣ, ಆರೈಕೆ, ರಕ್ಷಣೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ ಎಂಬುದು ಉಲ್ಲೇಖಾರ್ಹ. ಈ ಯೋಜನೆಯ ವಿವಿಧ ಉಪಕ್ರಮಗಳ ಮೂಲಕ ಹಿರಿಯರು ಆರೋಗ್ಯಪೂರ್ಣ, ಸಕ್ರಿಯ, ಗೌರವಯುತ ಮತ್ತು ಉತ್ಪಾದಕ ಜೀವನ ನಡೆಸಲು ಪೂರಕ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ, ಸೂಕ್ತ ಬೆಂಬಲ ಸೇವೆಗಳು ಮತ್ತು ಸಾಮಾಜಿಕ ಪಾಲ್ಗೊಳ್ಳುವಿಕೆಯ ಅವಕಾಶಗಳನ್ನು ಒದಗಿಸುವ ಗುರಿ ಹೊಂದಲಾಗಿದೆ.
*****