ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

“ಇ-ಫೈಲಿಂಗ್ 3.0: ಫ್ರಮ್ ಪ್ರೋಸೆಸ್ ಟು ಪ್ರಾಕ್ಟೀಸ್” ಕುರಿತ ಕಾರ್ಯಾಗಾರ- ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಡಿಯಲ್ಲಿನ ಒಂದು ಉಪಕ್ರಮ


ಈ ಕಾರ್ಯಕ್ರಮದಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ), ಶ್ರೀ ಅರ್ಜುನ್ ರಾಮ್ ಮೇಘವಾಲ್ ಭಾಗಿ

ಪ್ರಕಟಣಾ ದಿನಾಂಕ: 03 NOV 2026 8:38AM by PIB Bengaluru

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯ ಇಲಾಖೆಯು, 2026ರ ನವೆಂಬರ್ 4ರಂದು (ಬುಧವಾರ) ಮಧ್ಯಾಹ್ನ 2:00 ಗಂಟೆಯಿಂದ ನವದೆಹಲಿಯ ಮೌಲಾನಾ ಆಜಾದ್ ರಸ್ತೆಯಲ್ಲಿರುವ ವಿಜ್ಞಾನ ಭವನದ ಹಾಲ್ ಸಂಖ್ಯೆ 5ರಲ್ಲಿ, “ಇ-ಫೈಲಿಂಗ್ 3.0: ಫ್ರಮ್ ಪ್ರೋಸೆಸ್ ಟು ಪ್ರಾಕ್ಟೀಸ್ ಕುರಿತು ಕಾರ್ಯಾಗಾರ ಆಯೋಜಿಸಿದೆ. ಈ ಕಾರ್ಯಾಗಾರವು ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಡಿಯಲ್ಲಿನ ಒಂದು ಉಪಕ್ರಮವಾಗಿದೆ. ಇದು ಸರ್ಕಾರಿ ಅಧಿಕಾರಿಗಳಿಗೆ ಇ-ಫೈಲಿಂಗ್ 3.0 ವೇದಿಕೆಯ ಬಗ್ಗೆ ಪರಿಚಯ ಮಾಡಿಕೊಡುವ ಗುರಿ ಹೊಂದಿದೆ ಮತ್ತು ಇದು ತಂತ್ರಜ್ಞಾನದ ಮೂಲಕ ನ್ಯಾಯ ಪಡೆಯುವ ಪ್ರಕ್ರಿಯೆ ಸರಳಗೊಳಿಸಲು ಇಲಾಖೆಯು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಸುಪ್ರೀಂ ಕೋರ್ಟ್‌ನ ಇ-ಸಮಿತಿ ಸದಸ್ಯರು ಕೂಡ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (NIC -) ವತಿಯಿಂದ ತಾಂತ್ರಿಕ ಗೋಷ್ಠಿಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಈ ಕೆಳಗಿನ ವಿಷಯಗಳು ಒಳಗೊಂಡಿರುತ್ತವೆ:

  • ಇ-ಕೋರ್ಟ್ಸ್ ಕಾರ್ಯನಿರ್ವಹಣೆ: ಇ-ಕೋರ್ಟ್ಸ್ ಯೋಜನೆಯಡಿ ಲಭ್ಯವಿರುವ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಅವಲೋಕನ;
  • eCourts Single Sign-On (SSO - ಏಕ ಪ್ರವೇಶ ವ್ಯವಸ್ಥೆ) ಮತ್ತು ಇ-ಕೋರ್ಟ್ಸ್ ಸೇವೆಗಳ ಮೊಬೈಲ್ ಆ್ಯಪ್; 
  • ಇ-ಫೈಲಿಂಗ್ 3.0: ಸರ್ಕಾರಿ ವಕೀಲರು ಮತ್ತು ಸರ್ಕಾರಿ ಇಲಾಖೆಗಳಿಗೆ ಲಭ್ಯವಿರುವ ಸೌಲಭ್ಯಗಳು ಸೇರಿದಂತೆ, ಇದರ ವೈಶಿಷ್ಟ್ಯಗಳು ಮತ್ತು ಕಾರ್ಯಗಳು; ಹಾಗೂ
  • ಭಾಗವಹಿಸುವ ಅಧಿಕಾರಿಗಳೊಂದಿಗೆ ಮುಕ್ತ ಚರ್ಚೆ.

ಇ-ಕೋರ್ಟ್ಸ್ ಯೋಜನೆಯ ಮೂರನೇ ಹಂತವು, ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ನ್ಯಾಯಾಲಯಗಳನ್ನು ಹಾಗೂ ನಾಗರಿಕ-ಕೇಂದ್ರಿತ ನ್ಯಾಯಾಂಗ ಇ-ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ಇದು ಎಲ್ಲಾ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ ವ್ಯವಸ್ಥೆ ಸಾರ್ವತ್ರಿಕವಾಗಿ ಅಳವಡಿಸಿಕೊಳ್ಳುವುದನ್ನು ಒಳಗೊಂಡಿದೆ. ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳು, ಅವುಗಳ ಅಧೀನ ಕಚೇರಿಗಳು, ಸ್ವಾಯತ್ತ ಮತ್ತು ನಿಯಂತ್ರಣ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳು (ಪಿ ಎಸ್ ಯುಗಳು) ನ್ಯಾಯಾಲಯಗಳಲ್ಲಿ ನಡೆಯುವ ಮೊಕದ್ದಮೆಗಳಲ್ಲಿ ದೊಡ್ಡ ಪಾಲನ್ನು ಹೊಂದಿವೆ. ಇವುಗಳು ‘ಇ-ಫೈಲಿಂಗ್’ ವ್ಯವಸ್ಥೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ ಕಾರ್ಯಕ್ಷಮತೆ ಸುಧಾರಿಸುತ್ತದೆ ಮತ್ತು ಭೌತಿಕ ನ್ಯಾಯಾಲಯ ಪ್ರಕ್ರಿಯೆಗಳ ಮೇಲಿನ ಅವಲಂಬನೆ ತಗ್ಗಿಸುತ್ತದೆ. ಈ ಕಾರ್ಯಾಗಾರವು, ನಿರ್ದಿಷ್ಟ ಉದ್ದೇಶ ಸಾಧಿಸಲು ಅಧಿಕಾರಿಗಳಿಗೆ ಅಗತ್ಯ ಪ್ರಾಯೋಗಿಕ ಜ್ಞಾನ ಒದಗಿಸುವ ಗುರಿ ಹೊಂದಿದೆ.

ಈ ಕಾರ್ಯಕ್ರಮವು ಡಿಜಿಟಲ್, ಕಾಗದರಹಿತ ಮತ್ತು ನಾಗರಿಕ-ಸ್ನೇಹಿ ನ್ಯಾಯ ವಿತರಣಾ ವ್ಯವಸ್ಥೆ ರೂಪಿಸಲು ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಸಾಂಸ್ಥಿಕ ಅಳವಡಿಕೆ ಬಲಪಡಿಸಲು ಭಾರತ ಸರ್ಕಾರಕ್ಕಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2332009) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: Nepali , English , Urdu , हिन्दी , Tamil