ಪ್ರಕಟಣಾ ದಿನಾಂಕ:
03 NOV 2026 1:08PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ನವೆಂಬರ್ 3, 2026 ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ 'ಭಾರತೀಯ ರಕ್ಷಣಾ ಪಡೆಗಳ ಆಧುನೀಕರಣ' ಕುರಿತ ರಕ್ಷಣಾ ಸಚಿವಾಲಯದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದಯೋನ್ಮುಖ ಭದ್ರತಾ ಸವಾಲುಗಳು, ಯುದ್ಧದ ಮಾದರಿಗಳು, ತಾಂತ್ರಿಕ ಪ್ರಗತಿಗಳು ಹಾಗೂ ಭವಿಷ್ಯಕ್ಕೆ ಸಿದ್ಧವಾದ, ತಾಂತ್ರಿಕವಾಗಿ ಸಶಕ್ತವಾದ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಚುರುಕಾದ ಸೇನೆಯನ್ನು ನಿರ್ಮಿಸುವ ಅಗತ್ಯತೆಯ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆಗಳು ನಡೆದವು. ಸಭೆಯಿಂದ ಹೊರಹೊಮ್ಮಿದ ಪ್ರಮುಖ ಆದ್ಯತೆಯ ಕ್ಷೇತ್ರಗಳು ಇಂತಿವೆ:
· ಸಾಮರ್ಥ್ಯ ವೃದ್ಧಿ ಮತ್ತು ಪಡೆಗಳ ಆಧುನೀಕರಣ: ಯುದ್ಧದ ಪರಿಣಾಮಕಾರಿತ್ವ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ಹೆಚ್ಚಿಸಲು ಮುಂದಿನ ಪೀಳಿಗೆಯ ವೇದಿಕೆಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳ ಸೇರ್ಪಡೆಯನ್ನು ವೇಗಗೊಳಿಸುವುದು.
· ಜಂಟಿ ವ್ಯವಸ್ಥೆ ಮತ್ತು ಸಂಯೋಜನೆ: ತ್ರಿವಿಧ ಸೇವೆಗಳ ಸಂಯೋಜನೆ, ಜಂಟಿ ಕಾರ್ಯಾಚರಣೆಯ ಯೋಜನೆ ಹಾಗೂ ವಿವಿಧ ಕ್ಷೇತ್ರಗಳಾದ್ಯಂತ ಸಾಮರ್ಥ್ಯಗಳ ಸಿನರ್ಜೈಸ್ಡ್ ಬಳಕೆಯನ್ನು ಬಲಪಡಿಸುವುದು.
· ದೇಶೀಯ ರಕ್ಷಣಾ ಉತ್ಪಾದನೆ: ದೇಶೀಯ ಉದ್ಯಮ, ಸ್ಟಾರ್ಟ್ಅಪ್ಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ದೇಶೀಯ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯ ಮೂಲಕ 'ಮೇಕ್-ಇನ್-ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ'ಕ್ಕೆ ಮತ್ತಷ್ಟು ಉತ್ತೇಜನ ನೀಡುವುದು.
· ಉದಯೋನ್ಮುಖ ಮತ್ತು ಪರಿವರ್ತನಾತ್ಮಕ ತಂತ್ರಜ್ಞಾನಗಳು: ಭವಿಷ್ಯದ ಸಂಘರ್ಷಗಳ ಸ್ವರೂಪಕ್ಕೆ ಸಿದ್ಧರಾಗಲು ಕೃತಕ ಬುದ್ಧಿಮತ್ತೆ , ಸ್ವಾಯತ್ತ ವ್ಯವಸ್ಥೆಗಳು, ಚಾಲಕರಹಿತ ವೇದಿಕೆಗಳು, ಸೈಬರ್, ಬಾಹ್ಯಾಕಾಶ, ಎಲೆಕ್ಟ್ರಾನಿಕ್ ಯುದ್ಧ ಮತ್ತು ಸುಧಾರಿತ ಸಂವಹನಗಳನ್ನು ಬಳಸಿಕೊಳ್ಳುವುದು.
· ರಕ್ಷಣಾ ಸಂಶೋಧನೆ ಮತ್ತು ಆವಿಷ್ಕಾರ: ಆವಿಷ್ಕಾರದಿಂದ ಕಾರ್ಯಾಚರಣೆಯ ಸಾಮರ್ಥ್ಯಕ್ಕೆ ಪರಿವರ್ತನೆಯಾಗುವುದನ್ನು ವೇಗಗೊಳಿಸಲು ರಕ್ಷಣಾ ಪಡೆಗಳು, ಡಿಆರ್ಡಿಒ, ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುವುದು.
· ಸಂಪನ್ಮೂಲ ಅತ್ಯುತ್ತಮ ಬಳಕೆ ಮತ್ತು ಅನುಷ್ಠಾನ: ಆಧುನೀಕರಣ ಉಪಕ್ರಮಗಳು ಸ್ಪಷ್ಟ ಕಾರ್ಯಾಚರಣೆಯ ಫಲಿತಾಂಶಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಆದ್ಯತೆಗಳು, ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಅಳೆಯಬಹುದಾದ ಮೈಲಿಗಲ್ಲುಗಳನ್ನು ಸ್ಥಾಪಿಸುವುದು.
ಇಂದಿನ ಮತ್ತು ಮುಂಬರುವ ಸವಾಲುಗಳಿಗೆ ರಕ್ಷಣಾ ಪಡೆಗಳು ಸದಾ ಸಿದ್ಧವಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದ ರಕ್ಷಣಾ ಸಚಿವರು, ತಂತ್ರಜ್ಞಾನ ಚಾಲಿತ ಆಧುನಿಕ ಯುದ್ಧದ ವಿಕಸಿತಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ಸೇನೆಯನ್ನು ಸಜ್ಜುಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ‘ಬಜೆಟ್, ಬಂಡವಾಳ ಸ್ವಾಧೀನ ಮತ್ತು ಸ್ವಾವಲಂಬನೆ’, ‘ತಂತ್ರಜ್ಞಾನ’ ಮತ್ತು ‘ಮಾನವ ಸಂಪನ್ಮೂಲ’ ಎಂಬ ಮೂರು ಪ್ರಮುಖ ಆಯಾಮಗಳಾದ್ಯಂತ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದರು. ಆಧುನೀಕರಣದ ಅಗತ್ಯಗಳನ್ನು ಪೂರೈಸಲು ಬಜೆಟ್ ಬೆಂಬಲ ಮತ್ತು ಬಂಡವಾಳ ಸ್ವಾಧೀನದ ಮೇಲೆ ಸರ್ಕಾರವು ನೀಡಿರುವ ನಿರಂತರ ಗಮನವನ್ನು ಅವರು ಎತ್ತಿಹಿಡಿದರು. ಸೂಕ್ತ ಆರ್ಥಿಕ ಸಂಪನ್ಮೂಲಗಳು, ಪರಿಣಾಮಕಾರಿ ಬಳಕೆ ಮತ್ತು ಸೇವೆಗಳ ನಿರ್ಣಾಯಕ ಅಗತ್ಯಗಳ ಆದ್ಯತೆಯೊಂದಿಗೆ ಸಂಯೋಜನೆಗೊಳ್ಳುವುದು ಸೇನಾ ಪಡೆಯ ಸಾಮರ್ಥ್ಯಗಳನ್ನು ಬಲಪಡಿಸಲು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
_20261103130957_016ae5.jpeg)
ಹಣಕಾಸು ವರ್ಷ (FY) 2026-27 ರ ರಕ್ಷಣಾ ಬಜೆಟ್ ಅನ್ನು ದಾಖಲೆಯ ₹7.85 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ತಿಳಿಸಿದರು, ಇದರಲ್ಲಿ ಆಧುನೀಕರಣ ಮತ್ತು ಬಂಡವಾಳ ಸಂಗ್ರಹಣೆಗೆ ಮೀಸಲಿಟ್ಟ ₹2.19 ಲಕ್ಷ ಕೋಟಿ ಬಂಡವಾಳ ವೆಚ್ಚವೂ ಸೇರಿದೆ. ಇದು ದೇಶೀಯ ರಕ್ಷಣಾ ಉದ್ಯಮಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಜೊತೆಗೆ ರಕ್ಷಣಾ ಪಡೆಗಳ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸ್ವಾವಲಂಬನೆಯ ಬಗ್ಗೆ ಮಾತನಾಡಿದ ರಕ್ಷಣಾ ಸಚಿವರು, ರಕ್ಷಣಾ ಉತ್ಪಾದನೆಯು ಹಣಕಾಸು ವರ್ಷ 2014-15 ರಲ್ಲಿ ₹46,429 ಕೋಟಿಯಿಂದ ಹಣಕಾಸು ವರ್ಷ 2025-26 ರಲ್ಲಿ ದಾಖಲೆಯ ₹1.78 ಲಕ್ಷ ಕೋಟಿಗೆ ಏರಿಕೆಯಾಗಿದೆ ಹಾಗೂ 2014 ರಲ್ಲಿ ₹2,000 ಕೋಟಿಗಿಂತ ಕಡಿಮೆಯಿದ್ದ ರಕ್ಷಣಾ ರಫ್ತು ಸುಮಾರು ₹40,000 ಕೋಟಿಗೆ ಬೆಳೆದಿದೆ ಎಂದು ಹೇಳಿದರು. "ನಾವು 2029 ರ ವೇಳೆಗೆ ₹3 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು ₹50,000 ಕೋಟಿ ಮೌಲ್ಯದ ರಕ್ಷಣಾ ರಫ್ತು ಸಾಧಿಸುವ ಗುರಿಯನ್ನು ಹೊಂದಿದ್ದೇವೆ" ಎಂದೂ ಅವರು ತಿಳಿಸಿದರು.
_20261103131006_4066da.jpeg)
ಆಧುನಿಕ ಯುದ್ಧದಲ್ಲಿ ತಂತ್ರಜ್ಞಾನದ ಪರಿವರ್ತನಾತ್ಮಕ ಪಾತ್ರಡಾ ಕುರಿತು ಶ್ರೀ ರಾಜನಾಥ್ ಸಿಂಗ್ ಅವರು ಒತ್ತಿ ಹೇಳಿದರು, ತಾಂತ್ರಿಕ ಪ್ರಗತಿಯು ಸಂಘರ್ಷಗಳ ಬದಲಾಗುತ್ತಿರುವ ಸ್ವರೂಪದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದರು. ಸುಧಾರಿತ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಡಿಆರ್ಡಿಒ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಅವರು ಶ್ಲಾಘಿಸಿದರು. ರಕ್ಷಣಾ ವ್ಯವಸ್ಥೆಯಲ್ಲಿ ಎಂಎಸ್ಎಂಇ ಗಳಿಂದ ಹಿಡಿದು ಬೃಹತ್ ಕಾರ್ಪೊರೇಷನ್ಗಳವರೆಗಿನ ಸಂಸ್ಥೆಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಲು ಸರ್ಕಾರವು ಖಾಸಗಿ ವಲಯಕ್ಕೆ ಸಮಾನ ಅವಕಾಶವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಇದನ್ನು 'ಸಮಗ್ರ ರಾಷ್ಟ್ರ' ವಿಧಾನ ಎಂದು ಬಣ್ಣಿಸಿದ ಅವರು, ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಖಾಸಗಿ ಉದ್ಯಮದ ಬೆಳೆಯುತ್ತಿರುವ ಕೊಡುಗೆಗೆ ತೃಪ್ತಿ ವ್ಯಕ್ತಪಡಿಸಿದರು.
ಮಾನವ ಸಂಪನ್ಮೂಲದ ಮಹತ್ವವದ ಬಗ್ಗೆ ಒತ್ತಿ ಹೇಳಿದ ರಕ್ಷಣಾ ಸಚಿವರು, ಸೇನಾ ಶಕ್ತಿಯನ್ನು ಕೇವಲ ತಂತ್ರಜ್ಞಾನ ಮತ್ತು ಆರ್ಥಿಕ ಸಂಪನ್ಮೂಲಗಳಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ, ಬದಲಾಗಿ ಸಿಬ್ಬಂದಿಯ ಸಾಮರ್ಥ್ಯ ಮತ್ತು ಸಿದ್ಧತೆಯಿಂದಲೂ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. " ಯುದ್ಧ ಪದ್ಧತಿಗಳು ವೇಗವಾಗಿ ಬದಲಾಗುತ್ತಿರುವುದರಿಂದ, ನಮ್ಮ ರಕ್ಷಣಾ ಪಡೆಗಳು ಆಧುನಿಕ ಯುದ್ಧದ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಸಜ್ಜಾಗಿರುವುದು ಅತ್ಯಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮೂರೂ ಸೇನಾ ವಿಭಾಗಗಳು, ತಮ್ಮ ರಚನೆಗಳು ಮತ್ತು ಸಂಘಟನಾ ಸ್ವರೂಪಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಾ ಬಂದಿವೆ. ಭಾರತೀಯ ಸೇನೆಯ ಹೊಸ ಸಂಘಟನಾ ಸ್ವರೂಪಗಳಾದ 'ಅಸನಿ', 'ಭೈರವ್' ಮತ್ತು 'ಶಕ್ತಿಬಾನ್' ಪ್ಲಾಟೂನ್ಗಳು ಸಮಕಾಲೀನ ಕಾರ್ಯಾಚರಣೆಯ ಅಗತ್ಯಗಳನ್ನು ಪರಿಹರಿಸುವಲ್ಲಿ ಮತ್ತು ಯುದ್ಧಭೂಮಿಯ ಬದಲಾಗುತ್ತಿರುವ ಶಕ್ತಿಗೆ ಹೊಂದಿಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗುತ್ತಿವೆ," ಎಂದು ಅವರು ಹೇಳಿದರು.
_20261103131018_bcaa28.jpeg)
ಆಧುನೀಕರಣ ಎಂದರೆ ಕೇವಲ ಹೊಸ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಇದು ರಕ್ಷಣಾ ಪಡೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸುವುದು ಮತ್ತು ದೀರ್ಘಾವಧಿಗೆ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿರುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಯ ಸನ್ನಿವೇಶದಲ್ಲಿ 'ಸ್ವಾವಲಂಬಿ ಭಾರತ'ದ ಮಹತ್ವವಡಾ ಕುರಿತು ಒತ್ತಿ ಹೇಳಿದ ಅವರು, ತಾಂತ್ರಿಕ ಅಭಿವೃದ್ಧಿಯನ್ನು ಸೇನಾ ಅಗತ್ಯಗಳೊಂದಿಗೆ ಸಂಯೋಜಿಸುವ, ಭಾರತೀಯ ಉದ್ಯಮದ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮತ್ತು ವಿದೇಶಿ ಮೂಲಗಳ ಮೇಲಿನ ದೇಶದ ಕಾರ್ಯತಂತ್ರದ ಅವಲಂಬನೆಯನ್ನು ಕಡಿಮೆ ಮಾಡುವ ಬಲವಾದ ದೇಶೀಯ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮುಖ್ಯ ಗಮನವಾಗಿದೆ ಎಂದು ತಿಳಿಸಿದರು. ಕಾರ್ಯಾಚರಣೆಯ ಸ್ವಾಯತ್ತತೆ ಮತ್ತು ದೇಶೀಯ ತಾಂತ್ರಿಕ ಸಾಮರ್ಥ್ಯಗಳು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಅತ್ಯಗತ್ಯ ಎಂದು ಅವರು ಹೇಳಿದರು.
_20261103131027_ebe239.jpeg)
ಆಧುನೀಕರಣವು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ವಿಕಸಿತಗೊಳ್ಳುತ್ತಿರುವ ತಂತ್ರಜ್ಞಾನಗಳು, ಬದಲಾಗುತ್ತಿರುವ ಭದ್ರತಾ ಸವಾಲುಗಳು ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಸ್ಪಂದಿಸಲು ಕಾರ್ಯಾಚರಣೆಯ ಸಿದ್ಧತೆಯನ್ನು ಹೆಚ್ಚಿಸಲು ನಿರಂತರ ಶ್ರಮದ ಅಗತ್ಯವಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು. ರಕ್ಷಣಾ ಪಡೆಗಳು ಕಾರ್ಯಾಚರಣೆಯ ದೃಷ್ಟಿಯಿಂದ ಪರಿಣಾಮಕಾರಿಯಾಗಿ ಮತ್ತು ಸ್ವಾವಲಂಬಿಯಾಗಿ ಉಳಿಯಲು ಅನುವು ಮಾಡಿಕೊಡುವ ದೀರ್ಘಕಾಲೀನ ಸಾಮರ್ಥ್ಯಗಳನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ, ದೇಶೀಯ ತಂತ್ರಜ್ಞಾನಗಳು, ಹೆಚ್ಚಿನ ಕೈಗಾರಿಕಾ ಭಾಗವಹಿಸುವಿಕೆ ಮತ್ತು ಆವಿಷ್ಕಾರಗಳ ನಿರಂತರ ಪ್ರೋತ್ಸಾಹಕ್ಕೆ ಅವರು ಕರೆ ನೀಡಿದರು.
_20261103131039_057222.jpeg)
ರಾಜ್ಯಸಭೆ ಮತ್ತು ಲೋಕಸಭೆ ಉಭಯ ಸದನಗಳ ಸಂಸದರಿಂದ ಮಹತ್ವದ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು. ಅವರ ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ಒಳನೋಟಗಳು ಸಲಹಾ ಪ್ರಕ್ರಿಯೆಯನ್ನು ಶ್ರೀಮಂತಗೊಳಿಸಿದವು, ಪ್ರಮುಖ ಶಾಸಕಾಂಗ, ಕಾರ್ಯತಂತ್ರ ಮತ್ತು ರಾಷ್ಟ್ರೀಯ ದೃಷ್ಟಿಕೋನಗಳನ್ನು ತಂದವು. ನಿರ್ಣಾಯಕ ಸಾಮರ್ಥ್ಯಗಳಿಗೆ ಆದ್ಯತೆ ನೀಡುವುದು, ಪಾಲುದಾರರ ನಡುವೆ ಸಮನ್ವಯವನ್ನು ಬಲಪಡಿಸುವುದು, ಸಂಗ್ರಹಣೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಮತ್ತು ನಿರ್ದಿಷ್ಟಪಡಿಸಿದ ಉದ್ದೇಶಗಳ ವಿರುದ್ಧ ಪ್ರಗತಿಯನ್ನು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡುವುದರ ಕುರಿತು ಒತ್ತಿ ಹೇಳುವ ಮೂಲಕ ಚರ್ಚೆಗಳು ಕ್ರಿಯೆಯ ಸ್ಪಷ್ಟ ನೀಲನಕ್ಷೆಯಾಗಿ ಪರಿವರ್ತನೆಯಾದವು.
ಉದ್ದೇಶವನ್ನು ಅನುಷ್ಠಾನಕ್ಕೆ ತರುವ ಅಗತ್ಯದ ಬಗ್ಗೆ ಒತ್ತಿಹೇಳುತ್ತಾ, ಆಧುನಿಕೀಕರಣಕ್ಕೆ ರಚನಾತ್ಮಕ ಮತ್ತು ಹಂತ ಹಂತದ ವಿಧಾನದ ಮಹತ್ವವನ್ನು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಸಾಂಪ್ರದಾಯಿಕ, ಉಪ-ಸಾಂಪ್ರದಾಯಿಕ ಮತ್ತು ಬಹು-ಕ್ಷೇತ್ರಗಳ ಭದ್ರತಾ ಸವಾಲುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಸಾಮರ್ಥ್ಯವಿರುವ ಸೇನೆಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
ರಕ್ಷಣಾ ಸಹಾಯಕ ಸಚಿವರಾದ ಶ್ರೀ ಸಂಜಯ್ ಸೇಠ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್, ಕಾರ್ಯದರ್ಶಿ (ಮಾಜಿ ಸೈನಿಕರ ಕಲ್ಯಾಣ) ಶ್ರೀಮತಿ ಸುಕೃತಿ ಲಿಖಿ, ಕಾರ್ಯದರ್ಶಿ (ರಕ್ಷಣಾ ಹಣಕಾಸು) ಶ್ರೀ ವಿಶ್ವಜಿತ್ ಸಹಾಯ್ ಮತ್ತು ಇತರ ಹಿರಿಯ ನಾಗರಿಕ ಹಾಗೂ ಮಿಲಿಟರಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
*****