ಪ್ರಕಟಣಾ ದಿನಾಂಕ:
02 NOV 2026 4:50PM by PIB Bengaluru
“ಬದಲಾಗುತ್ತಿರುವ ಜಗತ್ತಿನಲ್ಲಿ ಆಹಾರ, ಮೇವು, ಇಂಧನ ಮತ್ತು ಸುಸ್ಥಿರತೆಗಾಗಿ ಮೆಕ್ಕೆಜೋಳ ಕ್ರಾಂತಿ” ಎಂಬ ಶೀರ್ಷಿಕೆಯಡಿಯ ಮೊದಲ ಅಂತಾರಾಷ್ಟ್ರೀಯ ಮೆಕ್ಕೆಜೋಳ ಸಮ್ಮೇಳನವು ಇಂದು ಹೈದರಾಬಾದ್ನ ಜೆಡಿ ಕನ್ವೆನ್ಷನ್ ಸೆಂಟರ್ನಲ್ಲಿ ಪ್ರಾರಂಭವಾಯಿತು. ಮೆಕ್ಕೆಜೋಳ ಸಂಶೋಧನೆ, ಉತ್ಪಾದಕತೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಯನ್ನು ಮುನ್ನಡೆಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ವಿಜ್ಞಾನಿಗಳು, ನೀತಿ ನಿರೂಪಕರು, ಕೃಷಿ ಸಂಸ್ಥೆಗಳು ಮತ್ತು ಉದ್ಯಮದ ಪಾಲುದಾರರನ್ನು ಈ ಸಮ್ಮೇಳನವು ಒಂದೆಡೆ ತಂದಿತು.

ಹೆಚ್ಚಿನ ಇಳುವರಿ ನೀಡುವ ತಳಿಗಳು ಮತ್ತು ತಳಿ ಸಂಕರಗಳು (hybrids), ಸುಧಾರಿತ ಪೌಷ್ಟಿಕಾಂಶದ ಗುಣಮಟ್ಟ, ಸಮರ್ಥ ಸಂಪನ್ಮೂಲ ಬಳಕೆ, ಯಾಂತ್ರೀಕರಣ, ಬಲವಾದ ಬಿತ್ತನೆ ಬೀಜ ವ್ಯವಸ್ಥೆಗಳು ಹಾಗೂ ಆಹಾರ, ಮೇವು ಮತ್ತು ಇಂಧನ ಭದ್ರತೆಯಲ್ಲಿ ಮೆಕ್ಕೆಜೋಳದ ಬೆಳೆಯುತ್ತಿರುವ ಪಾತ್ರವನ್ನು ಸಮ್ಮೇಳನವು ಪ್ರಧಾನವಾಗಿ ಬಿಂಬಿಸಿತು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಡಿಎಆರ್ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್ ಅವರು, ಕಳೆದ ದಶಕದಲ್ಲಿ ಗಮನಾರ್ಹ ಉತ್ಪಾದಕತೆಯ ಗಳಿಕೆಯೊಂದಿಗೆ ಭಾರತದ ಮೆಕ್ಕೆಜೋಳ ಉತ್ಪಾದನೆಯು ಸುಮಾರು 55 ಮಿಲಿಯನ್ ಟನ್ಗಳನ್ನು ತಲುಪಿರುವುದಕ್ಕೆ ಮೆಕ್ಕೆಜೋಳ ಸಂಶೋಧನಾ ಸಮುದಾಯವನ್ನು ಅಭಿನಂದಿಸಿದರು. ತಾಂತ್ರಿಕ ಆವಿಷ್ಕಾರ, ಸುಧಾರಿತ ಬೆಳೆ ನಿರ್ವಹಣೆ ಮತ್ತು ಸಮರ್ಥ ಸಂಪನ್ಮೂಲ ಬಳಕೆಯ ಮೂಲಕ ಉತ್ಪಾದಕತೆಯನ್ನು ಮತ್ತಷ್ಟು 1.5 ಪಟ್ಟು ಹೆಚ್ಚಿಸುವುದರ ಜೊತೆಗೆ, ಮುಂಬರುವ ದಶಕದಲ್ಲಿ ಉತ್ಪಾದನೆಯನ್ನು 75 ಮಿಲಿಯನ್ ಟನ್ಗಳಿಗೆ ಹೆಚ್ಚಿಸಲು ಅವರು ಕರೆ ನೀಡಿದರು.

ರೈತರನ್ನು ಕೇಂದ್ರಬಿಂದುವನ್ನಾಗಿಸುವ ಮೂಲಕ ಸಾಂಪ್ರದಾಯಿಕ 4F ದೃಷ್ಟಿಕೋನವನ್ನು (ಆಹಾರ-Food, ಮೇವು-Feed, ದಾಸಟು-Fodder ಮತ್ತು ಇಂಧನ-Fuel) 5F ಗೆ ವಿಸ್ತರಿಸುವುದರ ಕುರಿತು ಒತ್ತಿ ಹೇಳಿದ ಡಾ. ಜಾಟ್ ಅವರು, ಸಂಶೋಧನೆ ಮತ್ತು ವಿಸ್ತರಣೆಯು ಹೆಚ್ಚಿನ ಕೃಷಿ ಲಾಭದಾಯಕತೆ ಮತ್ತು ಸುಧಾರಿತ ಜೀವನೋಪಾಯವಾಗಿ ಪರಿವರ್ತನೆಯಾಗಬೇಕು ಎಂದು ಒತ್ತಿ ಹೇಳಿದರು. ಇಳುವರಿ ಅಂತರವನ್ನು, ವಿಶೇಷವಾಗಿ ಬೆಳೆ ನಿರ್ವಹಣೆಯಿಂದ ಉಂಟಾಗುವ ಅಂತರವನ್ನು ಸರಿದೂಗಿಸಲು ಹಾಗೂ ಇತರ ಪ್ರಮುಖ ಬೆಳೆಗಳಿಗೆ, ವಿಶೇಷವಾಗಿ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳಿಗೆ ಧಕ್ಕೆಯಾಗದಂತೆ ವಿವಿಧ ಋತುಗಳು ಮತ್ತು ಕೃಷಿ-ಪರಿಸರ ವಲಯಗಳಾದ್ಯಂತ ಮೆಕ್ಕೆಜೋಳವನ್ನು ಕಾರ್ಯತಂತ್ರವಾಗಿ ಗುರಿಯಾಗಿಸಲು ಸಿಸ್ಟಮ್ಸ್-ಸೈನ್ಸ್ ವಿಧಾನವನ್ನು ಅವರು ಪ್ರತಿಪಾದಿಸಿದರು. ಬಲವಾದ ಬಿತ್ತನೆ ಬೀಜ ವ್ಯವಸ್ಥೆಯ ಬೆಂಬಲದೊಂದಿಗೆ ಕೈಗೆಟುಕುವ ದರದ, ಗುಣಮಟ್ಟದ ಬಿತ್ತನೆ ಬೀಜಗಳನ್ನು, ವಿಶೇಷವಾಗಿ ಸಾರ್ವಜನಿಕ ವಲಯದ ತಳಿ ಸಂಕರಗಳನ್ನು ಒದಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಐಸಿಎಆರ್ (ICAR) ಉಪಮಹಾನಿರ್ದೇಶಕರು (ಬೆಳೆ ವಿಜ್ಞಾನ) ಡಾ. ಡಿ.ಕೆ. ಯಾದವ್ ಅವರು ಮೆಕ್ಕೆಜೋಳವನ್ನು ಆಹಾರ, ಪೌಷ್ಟಿಕಾಂಶ ಮತ್ತು ಇಂಧನ ಭದ್ರತೆಯ ಮಾದರಿ ಬೆಳೆ ಎಂದು ಬಣ್ಣಿಸಿದರು. 329 ಮೆಕ್ಕೆಜೋಳದ ತಳಿ ಸಂಕರಗಳ ಅಭಿವೃದ್ಧಿ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಮೆಕ್ಕೆಜೋಳ ಸಂಶೋಧನೆ ಮತ್ತು ವಿಸ್ತರಣೆಯಲ್ಲಿನ ಪ್ರಗತಿಯನ್ನು ಒಪ್ಪಿಕೊಂಡ ಅವರು, ಮೆಕ್ಕೆಜೋಳದ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯನ್ನು ಬಲಪಡಿಸಲು ಕರೆ ನೀಡಿದರು. ಹೆಚ್ಚಿನ ಇಳುವರಿ, ಸುಧಾರಿತ ಪೌಷ್ಟಿಕಾಂಶದ ಗುಣಮಟ್ಟ ಮತ್ತು ಜೈವಿಕ ಹಾಗೂ ಅಜೈವಿಕ ಒತ್ತಡಗಳಿಗೆ ನಿರೋಧಕ ಶಕ್ತಿಗಾಗಿ ತಳಿ ಅಭಿವೃದ್ಧಿಯ ಜೊತೆಗೆ ಇನ್ಪುಟ್-ಬಳಕೆಯ ದಕ್ಷತೆ, ಯಾಂತ್ರೀಕರಣ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ವಲಯದ ತಳಿ ಸಂಕರ ಬೀಜ ಉತ್ಪಾದನೆಯನ್ನು ಬಲಪಡಿಸುವುದರ ಕುರಿತು ಅವರು ಒತ್ತಿ ಹೇಳಿದರು. ಎಥನಾಲ್ ಕಚ್ಚಾ ಸಾಮಗ್ರಿಯಾಗಿ ಮೆಕ್ಕೆಜೋಳದ ಸಾಮರ್ಥ್ಯವನ್ನು ಸಾಕಾರಗೊಳಿಸಲು ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳ ನಡುವಿನ ಸಹಯೋಗದ ಅಗತ್ಯದ ಬಗ್ಗೆ ಅವರು ಒತ್ತಿಹೇಳಿದರು.
ಪದ್ಮಶ್ರೀ ಡಾ. ಎಸ್. ವಾಸಲ್, ಪ್ರಖ್ಯಾತ ಮೆಕ್ಕೆಜೋಳ ವಿಜ್ಞಾನಿ ಮತ್ತು ಸಿಐಎಮ್ಎಮ್ವೈಟಿಯೊಂದಿಗೆ ಸಂಯೋಜಿತವಾಗಿರುವ ವಿಶ್ವ ಆಹಾರ ಪ್ರಶಸ್ತಿ ಪುರಸ್ಕೃತರು, ರೈತರ ಅಗತ್ಯಗಳಿಗೆ ಸೂಕ್ತವಾದ ಸುಧಾರಿತ ತಳಿಗಳು ಮತ್ತು ತಳಿ ಸಂಕರಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಸರಳ, ವೆಚ್ಚ-ರಹಿತ ತಳಿ ಅಭಿವೃದ್ಧಿ ವಿಧಾನಗಳನ್ನು ಪ್ರತಿಪಾದಿಸಿದರು.
ಪದ್ಮಭೂಷಣ ಡಾ. ಆರ್.ಎಸ್. ಪರೋಡಾ, ಡಿಎಆರ್ಇ ಮಾಜಿ ಕಾರ್ಯದರ್ಶಿ ಹಾಗೂ ಐಸಿಎಆರ್ ಮಾಜಿ ಮಹಾನಿರ್ದೇಶಕರು ಮತ್ತು ಮುಖ್ಯ ಅತಿಥಿಗಳು, ಕೃಷಿ ಮತ್ತು ಸಂಬಂಧಿತ ವಲಯಗಳ ವಿಕಸಿತಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಸಂಶೋಧನಾ ಆದ್ಯತೆಗಳನ್ನು ಸಂಯೋಜಿಸುವ ಮಹತ್ವದ ಕುರಿತು ಒತ್ತಿ ಹೇಳಿದರು. ಸುಧಾರಿತ ತಳಿ ಅಭಿವೃದ್ಧಿ ತಂತ್ರಗಳ ಹೆಚ್ಚಿನ ಬಳಕೆ, ವ್ಯವಸ್ಥಿತ ಜರ್ಮ್ ಪ್ಲಾಸಂ ಸಂರಕ್ಷಣೆ ಮತ್ತು ಬಳಕೆ, ಬಲವಾದ ಮೆಕ್ಕೆಜೋಳ ಮೌಲ್ಯ ಸರಪಳಿಗಳು ಹಾಗೂ ಆಹಾರ ಮತ್ತು ಮೇವಿಗಾಗಿ ಮೆಕ್ಕೆಜೋಳದ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಅಫ್ಲಾಟಾಕ್ಸಿನ್ ನಿರ್ವಹಣೆಗೆ ಅವರು ಕರೆ ನೀಡಿದರು.

ಅದಕ್ಕೂ ಮುನ್ನ, ಭಾರತೀಯ ಮೆಕ್ಕೆಜೋಳ ತಂತ್ರಜ್ಞರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಸ್. ಜಾಟ್ ಅವರು ಗಣ್ಯರನ್ನು ಸ್ವಾಗತಿಸಿದರು ಮತ್ತು ಭಾರತದ ಕೃಷಿ ರೂಪಾಂತರದಲ್ಲಿ ಮೆಕ್ಕೆಜೋಳದ ಕಾರ್ಯತಂತ್ರದ ಮಹತ್ವವನ್ನು ಎತ್ತಿಹಿಡಿದರು. ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಸಂಶೋಧನಾ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ನೀತಿ ನಿರೂಪಕರು ಮತ್ತು ಉದ್ಯಮಗಳ ನಡುವೆ ಬಲವಾದ ಸಹಯೋಗಕ್ಕೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಮೆಕ್ಕೆಜೋಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪ್ರಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
ಇಳುವರಿ ಅಂತರವನ್ನು ಸರಿದೂಗಿಸಲು, ಬಿತ್ತನೆ ಬೀಜಗಳ ಲಭ್ಯತೆಯನ್ನು ಸುಧಾರಿಸಲು, ತಳಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಲಪಡಿಸಲು, ಪೌಷ್ಟಿಕಾಂಶದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಮೆಕ್ಕೆಜೋಳ ಮೌಲ್ಯ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಸಹಭಾಗಿತ್ವದ, ರೈತ-ಕೇಂದ್ರಿತ ಸಂಶೋಧನೆಯ ಮಹತ್ವದ ಮೇಲೆ ಈ ಸಮ್ಮೇಳನವು ಪ್ರಧಾನವಾಗಿ ಬೆಳಕುಚೆಲ್ಲಿತು. ನವೆಂಬರ್ 2 ರಿಂದ 4, 2026 ರವರೆಗೆ ಹೈದರಾಬಾದ್ನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಭಾರತದಲ್ಲಿ ಉತ್ಪಾದಕ, ಲಾಭದಾಯಕ ಮತ್ತು ಸುಸ್ಥಿರ ಮೆಕ್ಕೆಜೋಳ ವಲಯಕ್ಕೆ ನೀಲನಕ್ಷೆಯನ್ನು ರೂಪಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
*****