ಪ್ರಕಟಣಾ ದಿನಾಂಕ:
02 NOV 2026 4:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗಳನ್ನು ('ಎಫ್.ಆರ್.ಆರ್. ಒ') ವಿಸ್ತರಿಸುವ ಮೂಲಕ ವಿದೇಶಿ ಪ್ರಜೆಗಳ ನಿರ್ವಹಣೆಗಾಗಿ ಸಾಂಸ್ಥಿಕ ಚೌಕಟ್ಟನ್ನು ಸರ್ಕಾರ ಬಲಪಡಿಸುತ್ತಿದೆ.
ಪ್ರವಾಸೋದ್ಯಮ, ವೈದ್ಯಕೀಯ ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಮತ್ತು ಎಲ್ಲಾ ರಾಜ್ಯಗಳಲ್ಲಿ 'ಎಫ್.ಆರ್.ಆರ್.ಒ' ಗಳನ್ನು ನೇಮಿಸುವ ಅಗತ್ಯವಿದೆ. ಇದು ಸೇವಾ ಲಭ್ಯತೆಯನ್ನು ಖಚಿತಪಡಿಸುತ್ತದೆ, ನಿಯಂತ್ರಕ ಅನುಸರಣೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತವನ್ನು ಆಕರ್ಷಕ ತಾಣವಾಗಿ ಉತ್ತೇಜಿಸುತ್ತದೆ. ಈ ಅಗತ್ಯವನ್ನು ಗುರುತಿಸಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2027 ರ ವೇಳೆಗೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ 'ಎಫ್.ಆರ್.ಆರ್. ಒ' ಗಳನ್ನು ಸ್ಥಾಪಿಸಲು ನಿರ್ದೇಶನ ನೀಡಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮೇಲಿನ ನಿರ್ದೇಶನಗಳ ಅನುಸಾರವಾಗಿ, 2025 ರಿಂದ ಐದು ರಾಜ್ಯಗಳ ರಾಜಧಾನಿಗಳಲ್ಲಿ ಐದು ಹೊಸ 'ಎಫ್.ಆರ್.ಆರ್.ಒ' ಗಳನ್ನು ಸ್ಥಾಪಿಸಲಾಗಿದೆ. 2025ರಲ್ಲಿ ಜೈಪುರ, ಚಂಡೀಗಢ ಮತ್ತು ಗುವಾಹಟಿಯಲ್ಲಿ ಮೂರು 'ಎಫ್.ಆರ್.ಆರ್.ಒ' ಕಚೇರಿಗಳನ್ನು ಸ್ಥಾಪಿಸಲಾಯಿತು. ಈ ಮೊದಲು, ಇವುಗಳು ಕ್ರಮವಾಗಿ ದೆಹಲಿ, ಅಮೃತಸರ ಮತ್ತು ಕೋಲ್ಕತ್ತಾದಲ್ಲಿರುವ 'ಎಫ್.ಆರ್.ಆರ್. ಒ' ಕಚೇರಿಗಳ ವ್ಯಾಪ್ತಿಯಲ್ಲಿದ್ದವು.
ಈ ವರ್ಷ ರಾಜ್ಯಗಳ ರಾಜಧಾನಿಗಳಲ್ಲಿ ಎರಡು ಹೊಸ 'ಎಫ್.ಆರ್.ಆರ್. ಒ' ಕಚೇರಿಗಳನ್ನು ಸ್ಥಾಪಿಸಲಾಗಿದೆ, ಅವುಗಳೆಂದರೆ ಐಜ್ವಾಲ್ (ಮಿಜೋರಾಂ) ಮತ್ತು ಅಮರಾವತಿ (ಆಂಧ್ರಪ್ರದೇಶ). ಈ ಹಿಂದೆ, ಐಜ್ವಾಲ್ ಕೋಲ್ಕತ್ತಾ 'ಎಫ್.ಆರ್.ಆರ್.ಒ' ವ್ಯಾಪ್ತಿಯಲ್ಲಿತ್ತು, ಆದರೆ ಅಮರಾವತಿಯು ಹೈದರಾಬಾದ್ 'ಎಫ್.ಆರ್.ಆರ್.ಒ' ವ್ಯಾಪ್ತಿಯಲ್ಲಿತ್ತು. ಇತ್ತೀಚೆಗೆ ಕೊಹಿಮಾ (ನಾಗಾಲ್ಯಾಂಡ್), ಅಗರ್ತಲಾ (ತ್ರಿಪುರಾ) ಮತ್ತು ಭುವನೇಶ್ವರ (ಒಡಿಶಾ) ಎಂಬ ಮೂರು ಹೊಸ 'ಎಫ್.ಆರ್.ಆರ್.ಒ' ಕಚೇರಿಗಳನ್ನು ಅಧಿಸೂಚಿಸಲಾಗಿದೆ. ಈ ಹಿಂದೆ, ಕೊಹಿಮಾ ಮತ್ತು ಅಗರ್ತಲಾ ಕೋಲ್ಕತ್ತಾ 'ಎಫ್.ಆರ್.ಆರ್.ಒ' ವ್ಯಾಪ್ತಿಯಲ್ಲಿತ್ತು, ಆದರೆ ಭುವನೇಶ್ವರವು ಹೈದರಾಬಾದ್ 'ಎಫ್.ಆರ್.ಆರ್. ಒ' ವ್ಯಾಪ್ತಿಯಲ್ಲಿತ್ತು.
ದೇಶದಲ್ಲಿ 'ಎಫ್.ಆರ್.ಆರ್. ಒ' ಕಚೇರಿಗಳ ಒಟ್ಟು ಸಂಖ್ಯೆ ಈಗ ಇಪ್ಪತ್ತಕ್ಕೆ (20) ಏರಿದೆ, ಅವುಗಳೆಂದರೆ: ಅಹಮದಾಬಾದ್, ಅಮರಾವತಿ, ಅಮೃತಸರ, ಐಜ್ವಾಲ್, ಅಗರ್ತಲಾ, ಬೆಂಗಳೂರು, ಭುವನೇಶ್ವರ, ಕ್ಯಾಲಿಕಟ್, ಚೆನ್ನೈ, ಕೊಚ್ಚಿನ್, ಚಂಡೀಗಢ, ದೆಹಲಿ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಕೊಹಿಮಾ, ಕೋಝಿಕ್ಕೋಡ್, ಲಕ್ನೋ, ಮುಂಬೈ ಮತ್ತು ತಿರುವನಂತಪುರಂ.
ಉಳಿದ ರಾಜ್ಯಗಳಾದ ಬಿಹಾರ, ಗೋವಾ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯಗಳಲ್ಲಿ 'ಎಫ್.ಆರ್.ಆರ್.ಒ' ಗಳನ್ನು ಸ್ಥಾಪಿಸುವ ವಿಷಯವನ್ನು ಭಾರತ ಸರ್ಕಾರವು ಮುಂದುವರಿಸುತ್ತಿದೆ. ಇದು ಭಾರತಕ್ಕೆ ಭೇಟಿ ನೀಡುವ ವಿದೇಶಿಯರಿಗೆ ವೀಸಾ ವಿಸ್ತರಣೆ, ಪರಿವರ್ತನೆ, ವಲಸೆ ಅನುಸರಣೆ ಮತ್ತು ಕಾನೂನು ಸುರಕ್ಷತೆಯಂತಹ ವಿವಿಧ ಕಾನ್ಸುಲರ್ ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ವಿಸ್ತರಣೆಯು ಸ್ಥಳೀಯ-ಮಟ್ಟದ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುತ್ತದೆ, ರಾಜ್ಯ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸುಧಾರಿಸುತ್ತದೆ, ಕಾನೂನುಬದ್ಧ ವಿದೇಶಿ ಸಂದರ್ಶಕರಿಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ವಲಸೆ ಕಾನೂನು ಮತ್ತು ರಾಷ್ಟ್ರೀಯ ಭದ್ರತಾ ಅಗತ್ಯತೆಗಳ ಪರಿಣಾಮಕಾರಿ ಅನುಷ್ಠಾನವನ್ನು ಬಲಪಡಿಸುತ್ತದೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗಳ ('ಎಫ್.ಆರ್.ಆರ್.ಒ') ವಿಸ್ತರಣೆಯು ಭಾರತದಲ್ಲಿ ವಿದೇಶಿಯರ ಕಾನೂನುಬದ್ಧ ಪ್ರಯಾಣ ಮತ್ತು ವಾಸ್ತವ್ಯವನ್ನು ಸುಗಮಗೊಳಿಸುವ ಮತ್ತು ವಲಸೆ ಕಾನೂನುಗಳು ಹಾಗೂ ಭದ್ರತಾ ಅವಶ್ಯಕತೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಎರಡು ಉದ್ದೇಶಗಳನ್ನು ಹೊಂದಿದೆ. ವಲಸೆ ಮತ್ತು ವಿದೇಶಿಯರಿಗೆ ಸಂಬಂಧಿಸಿದ ನಾಲ್ಕು ಹಿಂದಿನ ಕಾನೂನುಗಳನ್ನು ಕ್ರೋಢೀಕರಿಸಿದ ವಲಸೆ ಮತ್ತು ವಿದೇಶಿಯರ ಕಾಯಿದೆ, 2025, ವಿದೇಶಿ ಪ್ರಜೆಗಳ ಪ್ರವೇಶ, ವಾಸ್ತವ್ಯ, ಚಲನೆ ಮತ್ತು ನಿರ್ಗಮನವನ್ನು ನಿಯಂತ್ರಿಸಲು ಏಕೀಕೃತ ಶಾಸನಬದ್ಧ ಚೌಕಟ್ಟನ್ನು ಒದಗಿಸುತ್ತದೆ. ಈ ಕಾಯಿದೆಯ ಪ್ರಕಾರ, ಪ್ರಧಾನವಾಗಿ ವಲಸೆ ಕಾರ್ಯವನ್ನು ನಿರ್ವಹಿಸುವ ವಲಸೆ ಬ್ಯೂರೋಗೆ, ಅದರ ಕರ್ತವ್ಯಗಳ ನಿರ್ವಹಣೆಯಲ್ಲಿ, ಭಾರತದ ಕೇಂದ್ರ ಸರ್ಕಾರವು ಅಧಿಕಾರ ನೀಡುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ('ಎಫ್.ಆರ್.ಆರ್. ಒ') ನೆರವು ನೀಡುತ್ತಾರೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯು ಭಾರತಕ್ಕೆ ಭೇಟಿ ನೀಡುವ ಅಥವಾ ಇಲ್ಲಿ ವಾಸಿಸುವ ವಿದೇಶಿ ಪ್ರಜೆಗಳ ಕಾನೂನುಬದ್ಧ ವಾಸ್ತವ್ಯವನ್ನು ನಿಯಂತ್ರಿಸುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ಸುಗಮಗೊಳಿಸುತ್ತದೆ. ಇದು ಅರ್ಹ ವರ್ಗದ ವಿದೇಶಿಯರಿಗೆ ಆಗಮನದ ನಂತರದ ನೋಂದಣಿಯನ್ನು ನಿರ್ವಹಿಸುತ್ತದೆ ಮತ್ತು ನೋಂದಣಿಯ ಮೇಲೆ ನೋಂದಣಿ ಪ್ರಮಾಣಪತ್ರ (ಆರ್.ಸಿ)/ವಸತಿ ಪರವಾನಗಿಯನ್ನು ನೀಡುತ್ತದೆ. ಇದು ವಿದೇಶಿಯರ ವಿವರಗಳಲ್ಲಿನ ಬದಲಾವಣೆಗಳನ್ನು, ಅಂದರೆ ವಸತಿ ವಿಳಾಸ, ಪಾಸ್ಪೋರ್ಟ್ ವಿವರಗಳು ಅಥವಾ ದೇಶದೊಳಗಿನ ಪ್ರಯಾಣ ಯೋಜನೆಗಳನ್ನು ದಾಖಲಿಸುತ್ತದೆ ಮತ್ತು ಸಂರಕ್ಷಿತ ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಲು ಅನುಮತಿಯನ್ನು ನೀಡುತ್ತದೆ. ವೀಸಾಗಳ ಅವಧಿ ಮುಗಿದ, ಅವಧಿಗಿಂತ ಹೆಚ್ಚು ಕಾಲ ಉಳಿದುಕೊಂಡಿರುವ ಅಥವಾ ಭಾರತದಿಂದ ಹೊರಡುವ ಮೊದಲು ಔಪಚಾರಿಕ ಕ್ಲಿಯರೆನ್ಸ್ ಅಗತ್ಯವಿರುವ ವಿದೇಶಿಯರಿಗೆ ನಿರ್ಗಮನ ಪರವಾನಗಿಗಳನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ, 'ಎಫ್.ಆರ್.ಆರ್.ಒ' ಭಾರತೀಯ ವಲಸೆ ಕಾನೂನುಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ, ಅವಧಿ ಮೀರಿ ವಾಸ್ತವ್ಯ ಮತ್ತು ವೀಸಾ ಉಲ್ಲಂಘನೆ ಪ್ರಕರಣಗಳನ್ನು ನಿಭಾಯಿಸುತ್ತದೆ ಮತ್ತು ಅಗತ್ಯವಿರುವಲ್ಲಿ ಕಾನೂನು ಕ್ರಮ ಅಥವಾ ದಂಡವನ್ನು ಸಮನ್ವಯಗೊಳಿಸುತ್ತದೆ.
*****