ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 2 ರಂದು ‘ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ- 2026’ ಅನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಶೃಂಗಸಭೆಯ ಧ್ಯೇಯವಾಕ್ಯ - 'ಹೂಡಿಕೆಮಾಡಿ. ಆವಿಷ್ಕರಿಸಿ. ಪ್ರೇರೇಪಿಸಿ.'

130ಕ್ಕೂ ಹೆಚ್ಚು ದೇಶಗಳು, 9 ದೇಶಗಳ ಪಾಲುದಾರರು ಮತ್ತು 40 ಸಚಿವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಿರುವ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಪ್ರಕಟಣಾ ದಿನಾಂಕ: 01 NOV 2026 5:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 2 ರಂದು ಸಂಜೆ 4:30 ರ ಸುಮಾರಿಗೆ ನವದೆಹಲಿಯ ಭಾರತ್ ಮಂಟಪದಲ್ಲಿ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಾಲ್ಕು ದಿನಗಳ ಈ ಶೃಂಗಸಭೆಯು 2026ರ ನವೆಂಬರ್ 2 ರಿಂದ 5ರವರೆಗೆ ನಡೆಯಲಿದೆ. ಶೃಂಗಸಭೆಯ ಧ್ಯೇಯವಾಕ್ಯ: 'ಹೂಡಿಕೆ ಮಾಡಿ. ಆವಿಷ್ಕರಿಸಿ.ಪ್ರೇರೇಪಿಸಿ' ಎಂಬುದಾಗಿದೆ.

‘ಭಾರತ್ ಆರ್‌ಇ-2026’ ಶೃಂಗಸಭೆಯಲ್ಲಿ 40ಕ್ಕೂ ಹೆಚ್ಚು ಸಚಿವರು, ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಸಂಸ್ಥೆಗಳು ಮತ್ತು ಉದ್ಯಮದ ನಾಯಕರು ಸೇರಿದಂತೆ 130ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ಶುದ್ಧ ಇಂಧನ ಹೂಡಿಕೆ, ಉದ್ಯಮದ ತೊಡಗಿಸಿಕೊಳ್ಳುವಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಬ್ರಿಟಾನ್ ಪಾಲುದಾರ ದೇಶಗಳಾಗಿ ಭಾಗವಹಿಸಲಿವೆ.

ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು - ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ದೆಹಲಿ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ - ತಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಹೂಡಿಕೆ ಅವಕಾಶಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲಿವೆ.

ಈ ಶೃಂಗಸಭೆಯು ‘ಅಂತಾರಾಷ್ಟ್ರೀಯ ಸೌರ ಒಕ್ಕೂಟದ’ (ಐಎಸ್‌ಎ) 9ನೇ ಅಸೆಂಬ್ಲಿ ಅಧಿವೇಶನ ಮತ್ತು ಹಸಿರು ಜಲಜನಕದ 4ನೇ ಅಂತಾರಾಷ್ಟ್ರೀಯ ಸಮ್ಮೇಳನದ (ಐಸಿಜಿಎಚ್‌) ಜೊತೆಯಲ್ಲೇ ನಡೆಯಲಿದೆ. ‘ಭಾರತ್ ಆರ್‌ಇ’ ಶೃಂಗಸಭೆಯು ಶುದ್ಧ ಇಂಧನ ವಲಯದಾದ್ಯಂತ ಹೂಡಿಕೆ, ಉದ್ಯಮ ಮತ್ತು ತಂತ್ರಜ್ಞಾನದ ಪಾಲುದಾರಿಕೆಗಳ ಮೇಲೆ ಗಮನ ಕೇಂದ್ರೀಕರಿಸಿದರೆ, ‘ಐಎಸ್‌ಎ’  ಅಧಿವೇಶನವು ಹಣಕಾಸು ಮತ್ತು ಸಾಂಸ್ಥಿಕ ಸಾಮರ್ಥ್ಯ ಸೇರಿದಂತೆ ಸೌರಶಕ್ತಿಯಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಮುನ್ನಡೆಸುತ್ತದೆ. ಹಸಿರು ಜಲಜನಕ ತಂತ್ರಜ್ಞಾನಗಳು, ಹೂಡಿಕೆ ಮತ್ತು ಪ್ರಮಾಣವನ್ನು ಹೆಚ್ಚಿಸುವತ್ತ ‘ಐಸಿಜಿಎಚ್’ ಗಮನಹರಿಸುತ್ತದೆ. ಈ ಮೂರು ವೇದಿಕೆಗಳು ಒಟ್ಟಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತವೆ ಮತ್ತು ಶುದ್ಧ ಇಂಧನ ನಿಯೋಜನೆಯನ್ನು ವೇಗಗೊಳಿಸುತ್ತವೆ.

ಭಾರತದ ಪ್ರಮುಖ ನವೀಕರಿಸಬಹುದಾದ ಇಂಧನ ಹೂಡಿಕೆ ಶೃಂಗಸಭೆಯಾದ ‘ಆರ್‌ಇ-ಇನ್ವೆಸ್ಟ್‌’ನ ಪರಂಪರೆಯನ್ನು ಆಧರಿಸಿ, ‘ಭಾರತ್ ಆರ್‌ಇ’-2026 ಶೃಂಗಸಭೆಯು ಶುದ್ಧ ಇಂಧನ ವಲಯದಾದ್ಯಂತ ಜಾಗತಿಕ ತೊಡಗಿಸಿಕೊಳ್ಳುವಿಕೆಗಾಗಿ ವಿಸ್ತೃತ ವೇದಿಕೆಯನ್ನು ಒದಒದಗಿಸುತ್ತದೆ. ಹೂಡಿಕೆ, ಪಾಲುದಾರಿಕೆಗಳು ಮತ್ತು ಯೋಜನಾ ಅಭಿವೃದ್ಧಿಯನ್ನು ಉತ್ತೇಜಿಸಲು ವ್ಯವಹಾರ-ವ್ಯವಹಾರ (ಬಿ2ಬಿ), ವ್ಯವಹಾರ-ಸರ್ಕಾರ (ಬಿ2ಜಿ) ಮತ್ತು ಸರ್ಕಾರ-ಸರ್ಕಾರದ (ಜಿ2ಜಿ) ತೊಡಗಿಸಿಕೊಳ್ಳುವಿಕೆಗಳ ಜೊತೆಗೆ, ಶೃಂಗಸಭೆಯಲ್ಲಿ ಸಮಗ್ರ ಅಧಿವೇಶನಗಳು, ಮಂತ್ರಿಗಳ ಚರ್ಚೆಗಳು, ಸಿಇಒ ದುಂಡುಮೇಜಿನ ಸಭೆಗಳು ಹಾಗೂ ದೇಶ ಮತ್ತು ರಾಜ್ಯಗಳ ಅಧಿವೇಶನಗಳನ್ನು ಆಯೋಜಿಸಲಾಗುತ್ತದೆ. ಸೌರ ಮತ್ತು ಪವನ ಶಕ್ತಿ, ಹಸಿರು ಜಲಜನಕ, ಇಂಧನ ಶೇಖರಣೆ ಮತ್ತು ಇತರ ಉದಯೋನ್ಮುಖ ಕ್ಷೇತ್ರಗಳಾದ್ಯಂತ ಸುಧಾರಿತ ತಂತ್ರಜ್ಞಾನಗಳು, ಭಾರತೀಯ ಉತ್ಪಾದನಾ ಸಾಮರ್ಥ್ಯಗಳು ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಪ್ರದರ್ಶಿಸುವ 400 ಕ್ಕೂ ಹೆಚ್ಚು ಪ್ರದರ್ಶಕರು ಈ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿದ್ದಾರೆ. 

 

*****


(ಪ್ರಕಟಣೆ ಐ.ಡಿ.: 2331248) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: Odia , Assamese , English , Urdu , Marathi , हिन्दी , Manipuri , Gujarati , Tamil