ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ನಂಬಿಕೆ, ಸೇವೆ ಮತ್ತು ಕಾರ್ಮಿಕರ ಮೇಲಿನ ಬದ್ಧತೆಯ ಆಧಾರದ ಮೇಲೆ ‘ಇಪಿಎಫ್ಒ’ನ 74 ವರ್ಷಗಳ ಪಯಣ: ಡಾ. ಮನ್ಸುಖ್ ಮಾಂಡವಿಯಾ


"ಸೇವೆಯೇ ನಮ್ಮ ಸಂಸ್ಕಾರ": ನಾವೀನ್ಯತೆಯ ಕೇಂದ್ರದಲ್ಲಿ ಕಾರ್ಮಿಕರ ಕಲ್ಯಾಣವನ್ನು ಇರಿಸುವಂತೆ ಇಪಿಎಫ್ಒ ಅಧಿಕಾರಿಗಳನ್ನು ಒತ್ತಾಯಿಸಿದ ಡಾ. ಮನ್ಸುಖ್ ಮಾಂಡವಿಯಾ

ವಾಟ್ಸಾಪ್ ಮೂಲಕ ಇಪಿಎಫ್ಒ ಸೇವೆಗಳಿಗೆ ಚಾಲನೆ ನೀಡಿದ ಡಾ. ಮಾಂಡವಿಯಾ

ಅರ್ಹ ನಿಷ್ಕ್ರಿಯ ಇಪಿಎಫ್ ಖಾತೆಗಳ ಸ್ವಯಂಚಾಲಿತ ಇತ್ಯರ್ಥಕ್ಕೆ ಚಾಲನೆ; 5 ಕೋಟಿ ರೂ. ಒಳಗೊಂಡಿರುವ ಒಂದು ಲಕ್ಷ ಖಾತೆಗಳಿಗೆ ವಿಸ್ತರಿಸಿದ ಪ್ರಯೋಜನಗಳು

ಇಪಿಎಫ್ಒ ನ 74ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ರೂಪಾಂತರ, ಸಹಾನುಭೂತಿ ಮತ್ತು ನಾಗರಿಕ-ಕೇಂದ್ರಿತ ಆಡಳಿತದ ಪಯಣದ ಅನಾವರಣ

ಪ್ರಕಟಣಾ ದಿನಾಂಕ: 01 NOV 2026 3:09PM by PIB Bengaluru

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಇಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ತನ್ನ 74ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಇದು ಕೇವಲ ಶಾಸನಬದ್ಧ ಭವಿಷ್ಯ ನಿಧಿ ಸಂಸ್ಥೆಯಿಂದ, ತಂತ್ರಜ್ಞಾನ-ಆಧಾರಿತ ಸೇವಾ ವಿತರಣೆ, ಆಡಳಿತದಲ್ಲಿ ಸಹಾನುಭೂತಿ ಮತ್ತು ಲಕ್ಷಾಂತರ ಕಾರ್ಮಿಕರು ಹಾಗೂ ಪಿಂಚಣಿದಾರರ ಕಲ್ಯಾಣಕ್ಕಾಗಿ ನವೀಕೃತ ಬದ್ಧತೆಯೊಂದಿಗೆ ಭಾರತದ ಅಗ್ರಗಣ್ಯ ಸಾಮಾಜಿಕ ಭದ್ರತಾ ಸಂಸ್ಥೆಯಾಗುವವರೆಗಿನ ಪಯಣವನ್ನು ಗುರುತಿಸುತ್ತದೆ.

ಈ ಆಚರಣೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವರು ಹಾಗೂ ಕೇಂದ್ರೀಯ ಧರ್ಮದರ್ಶಿಗಳ ಮಂಡಳಿಯ (ಇಪಿಎಫ್‌) ಅಧ್ಯಕ್ಷರಾದ ಡಾ. ಮನ್ಸುಖ್ ಮಾಂಡವಿಯಾ ವಹಿಸಿದ್ದರು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂದ್ರ ಭೂಷಣ್ ಕುಮಾರ್, ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಶ್ರೀ ರಮೇಶ್ ಕೃಷ್ಣಮೂರ್ತಿ, ಕೇಂದ್ರೀಯ ಧರ್ಮದರ್ಶಿಗಳ ಮಂಡಳಿಯ ಸದಸ್ಯರು, ಕಾರ್ಮಿಕರು, ಉದ್ಯೋಗದಾತರು ಮತ್ತು ಇತರ ಪಾಲುದಾರರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು, ತನ್ನ 74 ವರ್ಷಗಳ ಪಯಣದಲ್ಲಿ ಇಪಿಎಫ್ಒ ದೇಶದ ಕಾರ್ಮಿಕ ವರ್ಗದ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಬಣ್ಣಿಸಿದರು. 8 ಕೋಟಿಗೂ ಹೆಚ್ಚು ಸದಸ್ಯರ ಕೊಡುಗೆಗಳ ಮೂಲಕ ಸಂಗ್ರಹವಾಗಿರುವ 32 ಲಕ್ಷ ಕೋಟಿ ರೂ. ಮೂಲಧನದಲ್ಲಿ ಸಂಸ್ಥೆಯ ಮೇಲಿರುವ ನಂಬಿಕೆ ಪ್ರತಿಫಲಿಸುತ್ತದೆ, ಇದು ಇಪಿಎಫ್ಒ ಸಿಬ್ಬಂದಿಯ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಾಧ್ಯವಾಗಿದೆ ಎಂದು ಅವರು ಗಮನಸೆಳೆದರು.

ಸಾಮಾಜಿಕ ಭದ್ರತೆಯು ಮಾನವ ಸಂವೇದನಾಶೀಲತೆಯಿಂದ ಮುನ್ನಡೆಯಬೇಕು ಎಂದು ಒತ್ತಿಹೇಳಿದ ಡಾ. ಮಾಂಡವಿಯಾ, ಕಾರ್ಮಿಕರ ಪ್ರತಿಯೊಂದು ಕಾಳಜಿ ಮತ್ತು ಕುಂದುಕೊರತೆಗಳನ್ನು ಸಹಾನುಭೂತಿಯಿಂದ ಪರಿಹರಿಸಬೇಕು, ಪ್ರತಿಯೊಬ್ಬ ಕಾರ್ಮಿಕನನ್ನು ರಾಷ್ಟ್ರ-ನಿರ್ಮಾತೃವಿಗೆ ತಕ್ಕ ಗೌರವ ಮತ್ತು ಘನತೆಯಿಂದ ನೋಡಬೇಕು ಎಂದು ಒತ್ತಿ ಹೇಳಿದರು. 'ಸಿಐಟಿಇಎಸ್’2.01 ನಂತಹ ತಾಂತ್ರಿಕ ರೂಪಾಂತರಗಳ ಹಿಂದಿನ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಕಟ್ಟಕಡೆಯ ಹಂತದವರೆಗೆ ಕಾರ್ಮಿಕರ ಕಲ್ಯಾಣದತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂಪಿಸಿದ 'ಪಂಚ ಪ್ರಾಣ್' ನಿಂದ ಸ್ಫೂರ್ತಿ ಪಡೆಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. "ಸೇವೆಯೇ ನಮ್ಮ ಸಂಸ್ಕಾರ" ಎಂದು ಡಾ. ಮಾಂಡವಿಯಾ ಒತ್ತಿಹೇಳಿದರು ಮತ್ತು ವಿಕಸಿತ ಭಾರತದ ಗುರಿಯನ್ನು ಸಾಧಿಸುವತ್ತ ಕೊಡುಗೆ ನೀಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿದರು.

ಇಪಿಎಫ್ಒನ 75 ನೇ ವರ್ಷಕ್ಕೆ ಮುಂಚಿತವಾಗಿ, ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ ಹೊಂದಿಕೊಳ್ಳುವುದು, ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಮತ್ತು ಪ್ರಕ್ರಿಯೆಗಳನ್ನು ವಿಕಸನಗೊಳಿಸುವುದು ಮುಂತಾದ ಕ್ಷೇತ್ರಗಳಾದ್ಯಂತ ಕಾರ್ಮಿಕರ ಕೇಂದ್ರಿತ ಆವಿಷ್ಕಾರಗಳತ್ತ ಗಮನ ಹರಿಸುವಂತೆ ಕೇಂದ್ರ ಸಚಿವರು ಅಧಿಕಾರಿಗಳನ್ನು ಒತ್ತಾಯಿಸಿದರು. ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದರು ಮತ್ತು ಎಲ್ಲಾ ಇಪಿಎಫ್ಒ ಅಧಿಕಾರಿಗಳು, ಸದಸ್ಯರು ಮತ್ತು ಫಲಾನುಭವಿಗಳ ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡಲಿ ಎಂದು ಹಾರೈಸಿದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಡಾ. ಚಂದ್ರ ಭೂಷಣ್ ಕುಮಾರ್ ಅವರು ಮಾತನಾಡಿ, ಏಳು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರದ ಸೇವೆಯಲ್ಲಿರುವ ಇಪಿಎಫ್ಒ, ಭಾರತದ ಸಾಮಾಜಿಕ ಭದ್ರತಾ ಚೌಕಟ್ಟಿಗೆ ಅಡಿಪಾಯ ಹಾಕಿದೆ ಮತ್ತು ಅದನ್ನು ಬಲಪಡಿಸಿದೆ, ಮುಂಬರುವ ಪೀಳಿಗೆಗೆ ಮಾದರಿಯನ್ನು ಸೃಷ್ಟಿಸಿದೆ ಎಂದು ತಿಳಿಸಿದರು. ಸಾಮಾಜಿಕ ರಕ್ಷಣೆ ಮತ್ತು ಕಾರ್ಮಿಕ ಸುಧಾರಣೆಗಳು ಸಂಘಟಿತ ವಲಯಕ್ಕೆ ಮಾತ್ರವಲ್ಲದೆ, ಅಸಂಘಟಿತ ವಲಯದ ಕಾರ್ಮಿಕರನ್ನೂ ಕಟ್ಟಕಡೆಯ ಹಂತದವರೆಗೆ ತಲುಪಬೇಕು ಎಂದು ಅವರು ಒತ್ತಿಹೇಳಿದರು, ಸಾಂಸ್ಥಿಕ ಪ್ರಕ್ರಿಯೆಗಳ ಮೂಲಕ ಇದನ್ನು ಹೇಗೆ ಸಾಧಿಸುವುದು ಎಂಬುದಕ್ಕೆ ಇಪಿಎಫ್ಒ ಉದಾಹರಣೆಯಾಗಿದೆ ಎಂದು ಅವರು ಗಮನಿಸಿದರು. ನಾವು ಎಷ್ಟು ದೂರ ಬಂದಿದ್ದೇವೆ ಮತ್ತು ಇನ್ನೂ ಎಷ್ಟು ದೂರ ಹೋಗಬೇಕಾಗಿದೆ ಎಂಬುದನ್ನು ಪ್ರತಿಬಿಂಬಿಸಲು ಈ ದಿನವು ಅವಕಾಶ ಒದಗಿಸುತ್ತದೆ ಎಂದು ಹೇಳಿದ ಅವರು, ಸುಧಾರಣೆಯು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ಡಿಜಿಟಲ್ ಯುಗದಲ್ಲಿ ಸಾಮಾನ್ಯ ಮನುಷ್ಯನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಿರಂತರ ವಿಕಸನದ ಅಗತ್ಯವಿದೆ ಎಂದು ಒತ್ತಿ ಹೇಳಿದರು. ವಿಕಸಿತ ಭಾರತ್ @2047 ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳು ಮುಂದುವರಿಯುತ್ತಿರುವುದರಿಂದ ಫಲಾನುಭವಿಗಳಿಗೆ ಪ್ರವೇಶ ಮತ್ತು ಸುಲಭ ಜೀವನಕ್ಕೆ ಆದ್ಯತೆ ನೀಡಿ, ತಮ್ಮ ಮನಸ್ಥಿತಿ ಮತ್ತು ದೃಷ್ಟಿಕೋನವನ್ನು ಹೊಂದಿಕೊಳ್ಳುವಂತೆ ಅವರು ಈ ಸುಧಾರಣೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ನೀಡಿದರು.

ಕೇಂದ್ರ ಭವಿಷ್ಯ ನಿಧಿ ಆಯುಕ್ತರು ತಮ್ಮ ಭಾಷಣದಲ್ಲಿ,  1952ರ ಸ್ಥಾಪಕ ಬದ್ಧತೆಯಿಂದ ಸುಮಾರು 8 ಕೋಟಿ ಕೊಡುಗೆದಾರ ಸದಸ್ಯರು ಮತ್ತು 85 ಲಕ್ಷ ಪಿಂಚಣಿದಾರರಿಗೆ ಸೇವೆ ಸಲ್ಲಿಸುವ ರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆಯಾಗಿ ಅದರ ಪ್ರಸ್ತುತ ಪಾತ್ರದವರೆಗೆ ಇಪಿಎಫ್ಒದ 74 ವರ್ಷಗಳ ಪ್ರಯಾಣವನ್ನು ಪ್ರತಿಬಿಂಬಿಸಿದರು. ಸಂಸ್ಥೆಯು ಗಮನಾರ್ಹ ತಾಂತ್ರಿಕ ಮತ್ತು ಆಡಳಿತಾತ್ಮಕ ಪರಿವರ್ತನೆಗೆ ಒಳಗಾಗಿದೆ ಮತ್ತು ಅವರ ಪ್ರಯತ್ನಗಳು ಸೇವಾ ವಿತರಣೆಯನ್ನು ಉಳಿಸಿಕೊಂಡಿವೆ ಎಂದು ಅವರು ದೇಶಾದ್ಯಂತ ಅಧಿಕಾರಿಗಳು ಮತ್ತು ಉದ್ಯೋಗಿಗಳ ಕೊಡುಗೆಯನ್ನು ಶ್ಲಾಘಿಸಿದರು. ಇಪಿಎಫ್ಒವನ್ನು ಹೆಚ್ಚು ಪ್ರವೇಶಿಸಬಹುದಾದ, ವಿಶ್ವಾಸಾರ್ಹ ಮತ್ತು ಮಾನವೀಯವಾಗಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಪ್ರತಿ ಕ್ಲೈಮ್ ಇತ್ಯರ್ಥ, ಪ್ರತಿ ಪಿಂಚಣಿ ಮತ್ತು ಕಷ್ಟದ ಸಮಯದಲ್ಲಿ ಪ್ರತಿ ಕುಟುಂಬವನ್ನು ಬೆಂಬಲಿಸುವ ಮೂಲಕ ಸಾಂಸ್ಥಿಕ ನಂಬಿಕೆಯನ್ನು ನಿರ್ಮಿಸಲಾಗುತ್ತದೆ ಎಂದು ಒತ್ತಿ ಹೇಳಿದರು.

ತಮ್ಮ ಭಾಷಣದಲ್ಲಿ, ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರು, 1952 ರ ಸ್ಥಾಪನಾ ಬದ್ಧತೆಯಿಂದ ಪ್ರಸ್ತುತ ಸುಮಾರು 8 ಕೋಟಿ ಸದಸ್ಯರು ಮತ್ತು 85 ಲಕ್ಷ ಪಿಂಚಣಿದಾರರಿಗೆ ಸೇವೆ ಸಲ್ಲಿಸುತ್ತಿರುವ, ಮತ್ತು ಸುಮಾರು 32 ಲಕ್ಷ ಕೋಟಿ ರೂ. ನಿವೃತ್ತಿ ನಿಧಿಯನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆಯಾಗಿ ಇಪಿಎಫ್ಒ ನ 74 ವರ್ಷಗಳ ಪಯಣವನ್ನು ಮೆಲುಕು ಹಾಕಿದರು. ಸಂಸ್ಥೆಯು ತಾಂತ್ರಿಕ ಮತ್ತು ಆಡಳಿತಾತ್ಮಕ ರೂಪಾಂತರಕ್ಕೆ ಒಳಗಾಗುತ್ತಿರುವಾಗ, ಸೇವಾ ವಿತರಣೆಯನ್ನು ಕಾಯ್ದುಕೊಂಡಿರುವ ಅಧಿಕಾರಿಗಳು ಮತ್ತು ಉದ್ಯೋಗಿಗಳ ಕೊಡುಗೆಯನ್ನು ಅವರು ಸ್ಮರಿಸಿದರು.ಇಪಿಎಫ್ಒ ಅನ್ನು ಹೆಚ್ಚು ಪ್ರವೇಶಿಸಬಹುದಾದ ಮತ್ತು ಮಾನವೀಯವಾಗಿಸುವ ಅಗತ್ಯವನ್ನು ಎತ್ತಿ ತೋರಿಸಿದ ಅವರು, ಇತ್ಯರ್ಥಪಡಿಸಿದ ಪ್ರತಿಯೊಂದು ಕ್ಲೈಮ್, ನೀಡಲಾದ ಪ್ರತಿ ಪಿಂಚಣಿ ಮತ್ತು ಬೆಂಬಲಿಸುವ ಪ್ರತಿ ಕುಟುಂಬದ ಮೂಲಕ ಸಾಂಸ್ಥಿಕ ನಂಬಿಕೆಯನ್ನು ನಿರ್ಮಿಸಲಾಗುತ್ತದೆ ಎಂದು ಒತ್ತಿ ಹೇಳಿದರು. ಇಪಿಎಫ್ಒದ ಯಶಸ್ಸಿನ ಅಂತಿಮ ಅಳತೆಗೋಲು ಅದರ ಸದಸ್ಯರು ಮತ್ತು ಪಿಂಚಣಿದಾರರು ಅನುಭವಿಸುವ ವಿಶ್ವಾಸ ಮತ್ತು ಭದ್ರತೆಯಾಗಿರಬೇಕು ಎಂದು ಅವರು ಪುನರುಚ್ಚರಿಸಿದರು.

'ಸಿಐಟಿಇಎಸ್' 2.01 ಮೂಲಕ ಇಪಿಎಫ್ಒನ ತಾಂತ್ರಿಕ ರೂಪಾಂತರದ ಪರಿಣಾಮವನ್ನು ಸಹ ಪ್ರದರ್ಶಿಸಲಾಯಿತು. ಕ್ಲೈಮ್ ಇತ್ಯರ್ಥದಲ್ಲಿ ಗಮನಾರ್ಹ ಸುಧಾರಣೆಯನ್ನು ಎತ್ತಿ ತೋರಿಸಲಾಯಿತು, ಸರಾಸರಿ ಇತ್ಯರ್ಥದ ಸಮಯವು ಅಕ್ಟೋಬರ್ 2026 ರಲ್ಲಿ 2.57 ದಿನಗಳಿಗೆ ಇಳಿದಿದೆ. ಸದಸ್ಯರಿಗೆ ಭವಿಷ್ಯ ನಿಧಿ ಉಳಿತಾಯದ ಲಭ್ಯತೆಯನ್ನು ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿಸಲು ಸಂಸ್ಥೆಯ ನಿರಂತರ ಪ್ರಯತ್ನಗಳನ್ನು ಈ ಸುಧಾರಣೆಯು ಪ್ರತಿಬಿಂಬಿಸುತ್ತದೆ.

ಪ್ರಮುಖ ಉಪಕ್ರಮಗಳು ಮತ್ತು ಇಪಿಎಫ್ ಚಂದಾದಾರರು ಮತ್ತು ಉದ್ಯೋಗದಾತರಿಗೆ ಅವುಗಳ ಪ್ರಯೋಜನಗಳು

1. ವಾಟ್ಸಾಪ್ ಮೂಲಕ ಇಪಿಎಫ್ಒ ಸೇವೆಗಳು

ಇಪಿಎಫ್ ಚಂದಾದಾರರು ತಮ್ಮ ಪಿಎಫ್ ಬ್ಯಾಲೆನ್ಸ್, ಇತ್ತೀಚಿನ ಐದು ವಹಿವಾಟುಗಳು ಮತ್ತು ಪಾಸ್‌ಬುಕ್ ಮಾಹಿತಿಯನ್ನು ಇಪಿಎಫ್ಒನ ಪರಿಶೀಲಿಸಿದ ವಾಟ್ಸಾಪ್ ಸೇವೆಯ ಮೂಲಕ ಪ್ರವೇಶಿಸಲು ಸಾಧ್ಯವಾಗುತ್ತದೆ. ಜೊತೆಗೆ ವೈಯಕ್ತಿಕಗೊಳಿಸಿದ ಮಾರ್ಗದರ್ಶನ ಮತ್ತು ಪಿಎಂವಿಬಿಆರ್‌ವೈ-ಸಂಬಂಧಿತ ಅವಶ್ಯಕತೆಗಳನ್ನು ಪೂರೈಸಲು ಸಹಾಯವನ್ನು ಪಡೆಯಬಹುದು. ಇದು ಪರಿಚಿತ ಮೊಬೈಲ್ ವೇದಿಕೆ ಮೂಲಕ ದಿನನಿತ್ಯದ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಮತ್ತು ಇಪಿಎಫ್ಒ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

2. ಅರ್ಹ ನಿಷ್ಕ್ರಿಯ ಇಪಿಎಫ್ ಖಾತೆಗಳ ಸ್ವಯಂಚಾಲಿತ ಇತ್ಯರ್ಥದ ಆರಂಭ

ಆಧಾರ್-ಪರಿಶೀಲಿಸಿದ ನಿಷ್ಕ್ರಿಯ ಇಪಿಎಫ್ ಖಾತೆಗಳನ್ನು ಹೊಂದಿರುವ ಮತ್ತು ₹1,000 ವರೆಗಿನ ಬ್ಯಾಲೆನ್ಸ್ ಹೊಂದಿರುವ ಚಂದಾದಾರರು ವೈಯಕ್ತಿಕ ಕ್ಲೈಮ್‌ಗಳನ್ನು ಸಲ್ಲಿಸುವ ಅಗತ್ಯವಿಲ್ಲ. ನಿಗದಿತ ಗುರುತು ಮತ್ತು ಬ್ಯಾಂಕ್ ಪರಿಶೀಲನೆಯ ನಂತರ ಇಪಿಎಫ್ಒ ಸ್ವಯಂಚಾಲಿತವಾಗಿ ಇತ್ಯರ್ಥವನ್ನು ಪ್ರಾರಂಭಿಸುತ್ತದೆ, ಅರ್ಹ ಬಾಕಿಗಳನ್ನು ಸರಿಯಾದ ಫಲಾನುಭವಿಗಳಿಗೆ ವರ್ಗಾಯಿಸಲು ಅನುಕೂಲ ಮಾಡಿಕೊಡುತ್ತದೆ. ₹5 ಕೋಟಿ ಒಳಗೊಂಡಿರುವ ಸುಮಾರು ಒಂದು ಲಕ್ಷ ಖಾತೆಗಳಿಗೆ ಇದರಿಂದ ಪ್ರಯೋಜನವಾಗುವ ನಿರೀಕ್ಷೆಯಿದೆ.

ಪ್ರಕಟಣೆಗಳ ಬಿಡುಗಡೆ ಮತ್ತು ಉತ್ಕೃಷ್ಟತೆಯ ಗುರುತಿಸುವಿಕೆ

ಜ್ಞಾನ ಸೃಷ್ಟಿ, ಸಾಂಸ್ಥಿಕ ಕಲಿಕೆ, ಕಾನೂನು ಜಾಗೃತಿ ಮತ್ತು ಸಹಾನುಭೂತಿಯ ಆಡಳಿತಕ್ಕೆ ಇಪಿಎಫ್ಒದ ಬದ್ಧತೆಯನ್ನು ಪ್ರತಿಬಿಂಬಿಸುವ ಏಳು ಪ್ರಕಟಣೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು:

1. ಇಪಿಎಫ್ಒ ರಾಜ್ಯ ಪ್ರೊಫೈಲ್ 2026: ಇಪಿಎಫ್ಒನ ಭೌಗೋಳಿಕ ಉಪಸ್ಥಿತಿ, ರಾಜ್ಯವಾರು ವ್ಯಾಪ್ತಿ, ಸದಸ್ಯತ್ವ, ಸಂಸ್ಥೆಗಳು, ಹಕ್ಕುಗಳು ಮತ್ತು ಪಿಂಚಣಿದಾರರ ಅಂಕಿ-ಅಂಶಗಳನ್ನು ಇದು ಪ್ರಸ್ತುತಪಡಿಸುತ್ತದೆ.

2. ತೀರ್ಪುಗಳ ಸಂಕಲನ 2026: ಮಾಹಿತಿಯುಕ್ತ ಮತ್ತು ಸ್ಥಿರವಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸಾಮಾಜಿಕ ಭದ್ರತಾ ಶಾಸನದ ಪ್ರಮುಖ ನ್ಯಾಯಾಂಗ ಘೋಷಣೆಗಳನ್ನು ಸಂಗ್ರಹಿಸುತ್ತದೆ.

3. ಕೇಂದ್ರ ನಿಧಿ - ಹಿಂದಿ ನಿಯತಕಾಲಿಕೆ 2026-27:  ಇಪಿಎಫ್ಒ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಾಹಿತ್ಯಿಕ ಮತ್ತು ಸೃಜನಶೀಲ ಕೊಡುಗೆಗಳನ್ನು ಪ್ರದರ್ಶಿಸುತ್ತದೆ ಮತ್ತು ಹಿಂದಿಯನ್ನು ಉತ್ತೇಜಿಸುತ್ತದೆ.

4. ಡೆಸ್ಕ್‌ನಿಂದ ಆಚೆಗೆ, ಸಾಧಾರಣದಿಂದ ಆಚೆಗೆ: ಇಪಿಎಫ್ಒ ಸಿಬ್ಬಂದಿಯ ವೈವಿಧ್ಯಮಯ ಪ್ರತಿಭೆ ಮತ್ತು ಸಾಧನೆಗಳನ್ನು ಅವರ ವೃತ್ತಿಪರ ಜವಾಬ್ದಾರಿಗಳನ್ನು ಮೀರಿ ಆಚರಿಸುತ್ತದೆ.

5. ಆಡಳಿತವನ್ನು ಮರುರೂಪಿಸುವುದು-ಉತ್ಕೃಷ್ಟತೆಗಾಗಿ ಪ್ರವಚನ (ಆರ್‌ಜಿಡಿಇ): ನೈತಿಕ ನಾಯಕತ್ವ, ಸಹಾನುಭೂತಿಯ ಆಡಳಿತ ಮತ್ತು ಸಾಂಸ್ಥಿಕ ರೂಪಾಂತರದ ಬಗ್ಗೆ 'ಪಿಡಿಯುಎನ್ಎಎಸ್ಎಸ್' ಪ್ರಾರಂಭಿಸಿದ ಸಂವಾದ ಸರಣಿಯ ಒಳನೋಟಗಳನ್ನು ದಾಖಲಿಸುತ್ತದೆ.

6. ಶಾಸನ ವಿಧಿಯಲ್ಲಿ ಕರುಣೆ(ಆಡಳಿತದಲ್ಲಿ ಸಹಾನುಭೂತಿ): 62 ಪ್ರಾದೇಶಿಕ  ಕಚೇರಿಗಳಿಂದ 83 ನಿಜ ಜೀವನದ ಕೇಸ್ ಸ್ಟಡಿಗಳನ್ನು ಪ್ರಸ್ತುತಪಡಿಸುತ್ತದೆ, ಸದಸ್ಯರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಸಹಾನುಭೂತಿ ಮತ್ತು ನವೀನ ವಿಧಾನಗಳನ್ನು ಪ್ರದರ್ಶಿಸುತ್ತದೆ.

7. ಇಂಡಿಯನ್ ಜರ್ನಲ್ ಆಫ್ ಸೋಷಿಯಲ್ ಸೆಕ್ಯುರಿಟಿ - ಸಂಪುಟ 1, 2026: ಸಾಮಾಜಿಕ ಭದ್ರತೆ, ಕಾರ್ಮಿಕ ಮಾರುಕಟ್ಟೆಗಳು, ಡಿಜಿಟಲ್ ರೂಪಾಂತರ ಮತ್ತು ಪಿಂಚಣಿ ಆಡಳಿತದಲ್ಲಿನ ಸಮಕಾಲೀನ ವಿಷಯಗಳ ಕುರಿತು ಇಪಿಎಫ್ಒ ಅಧಿಕಾರಿಗಳ ಸಂಶೋಧನಾ ಕೊಡುಗೆಗಳನ್ನು ಒಳಗೊಂಡಿದೆ.

 

ಪ್ರಾದೇಶಿಕ ಕಚೇರಿಗಳು, ವಲಯ ಕಚೇರಿಗಳು, ವೈಯಕ್ತಿಕ ಅಧಿಕಾರಿಗಳು ಮತ್ತು ಉದ್ಯೋಗಿಗಳ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು 'ಭವಿಷ್ಯ ನಿಧಿ ಪ್ರಶಸ್ತಿಗಳು-2026’ ಅನ್ನು ನೀಡಲಾಯಿತು. ಪ್ರಶಸ್ತಿಗಳು ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ಷಮತೆ, ಕುಂದುಕೊರತೆ ನಿರ್ವಹಣೆ, ಪಿಂಚಣಿ ಸೇವೆಗಳು, ಮರಣ ಹಕ್ಕು ಇತ್ಯರ್ಥ ಮತ್ತು ಪ್ರಯಾಸ್, ಪಿಎಂವಿಬಿಆರ್‌ವೈ ಅನುಷ್ಠಾನ, ತಾಂತ್ರಿಕ ನಾವೀನ್ಯತೆ, ತರಬೇತಿ, ಪ್ರಚಾರ, ಸ್ವಚ್ಛತೆ, ವಿನಾಯಿತಿ ಪಡೆದ ಸಂಸ್ಥೆಗಳು ಮತ್ತು ಕ್ರೀಡೆಗಳಲ್ಲಿ ಶ್ರೇಷ್ಠತೆಯನ್ನು ಒಳಗೊಂಡಿವೆ. ಸೇವಾ ವಿತರಣೆ ಮತ್ತು ಸಾಂಸ್ಥಿಕ ಉತ್ಕೃಷ್ಟತೆಯನ್ನು ಬಲಪಡಿಸುವಲ್ಲಿ ಇಪಿಎಫ್ಒ ಕಾರ್ಯಪಡೆಯ ಸಮರ್ಪಣೆ, ನಾವೀನ್ಯತೆ ಮತ್ತು ಬದ್ಧತೆಯನ್ನು ಈ ಪ್ರಶಸ್ತಿಗಳು ಗುರುತಿಸಿವೆ. 

74ನೇ ಸಂಸ್ಥಾಪನಾ ದಿನವು ನಾಯಕತ್ವದ ಭಾಷಣಗಳಿಂದ ಹೊರಹೊಮ್ಮುವ ಸಾಮಾನ್ಯ ದೃಷ್ಟಿಕೋನವನ್ನು ಪುನರುಚ್ಚರಿಸಿತು: ಇಪಿಎಫ್ಒನ ರೂಪಾಂತರವು ಅಂತಿಮವಾಗಿ ಪ್ರತಿಯೊಬ್ಬ ಕಾರ್ಮಿಕ ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಭದ್ರತೆ, ಘನತೆ ಮತ್ತು ವಿಶ್ವಾಸವಾಗಿ ಬದಲಾಗಬೇಕು. ಸಂಸ್ಥೆಯು ಮುಂದುವರಿಯುತ್ತಿದ್ದಂತೆ, ತಾಂತ್ರಿಕ ಪ್ರಗತಿಯನ್ನು ಮಾನವ ಸಂವೇದನೆಯೊಂದಿಗೆ ಸಂಯೋಜಿಸುವ, ವಿಶ್ವಾಸಾರ್ಹ ಸೇವೆಯೊಂದಿಗೆ ವ್ಯಾಪಕ ಸಾಮಾಜಿಕ ಭದ್ರತೆ ವ್ಯಾಪ್ತಿ ಮತ್ತು ಆಡಳಿತದಲ್ಲಿ ಸಹಾನುಭೂತಿಯೊಂದಿಗೆ ಸಾಂಸ್ಥಿಕ ದಕ್ಷತೆಯನ್ನು ಸಂಯೋಜಿಸುವ ಅದರ ಪ್ರಯತ್ನ ಮುಂದುವರಿಯಲಿದೆ.

ಇಪಿಎಫ್ಒ ನ ಪಯಣ ಕೇವಲ ಸಾಂಸ್ಥಿಕ ಬೆಳವಣಿಗೆಯ ಕಥೆಯಲ್ಲ; ಇದು ಕಾರ್ಮಿಕರ ವರ್ಷಗಳ ಶ್ರಮದ ಫಲವು ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆ, ಘನತೆ ಮತ್ತು ಮನಸ್ಸಿನ ಶಾಂತಿಯಾಗಿ ಮಾರ್ಪಡುವುದನ್ನು ಖಚಿತಪಡಿಸುವ ನಿರಂತರ ಬದ್ಧತೆಯಾಗಿದೆ.

 

*****

 


(ಪ್ರಕಟಣೆ ಐ.ಡಿ.: 2331183) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Khasi , Urdu , हिन्दी , Tamil