ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜಯಂತಿಯ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ರಾಷ್ಟ್ರೀಯ ಏಕತಾ ದಿನದಂದು, ನಾವು ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸುತ್ತೇವೆ ಮತ್ತು ರಾಷ್ಟ್ರೀಯ ಏಕತೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುತ್ತೇವೆ: ಪ್ರಧಾನಮಂತ್ರಿ

ಸರ್ದಾರ್ ಪಟೇಲ್ ಅವರು ರಾಷ್ಟ್ರದ ಏಕತೆಯನ್ನು ರೂಪಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ: ಪ್ರಧಾನಮಂತ್ರಿ

ದೇಶದಲ್ಲಿ ನಕ್ಸಲಿಸಂನ್ನು  ದಮನಿಸಲಾಗುತ್ತಿದೆ: ಪ್ರಧಾನಮಂತ್ರಿ

ಭಾರತ ಇಂದು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತ ಮತ್ತು ದೃಢ ನಿಶ್ಚಯವನ್ನು ಹೊಂದಿದೆ, ಇದಕ್ಕೆ ಪ್ರಮುಖ ಕಾರಣವೆಂದರೆ ಅದರ ಜನರ ಆತ್ಮವಿಶ್ವಾಸ ಹೆಚ್ಚುತ್ತಿರುವುದು: ಪ್ರಧಾನಮಂತ್ರಿ

ವಿಶ್ವಬ್ಯಾಂಕ್ ವರದಿಯ ಪ್ರಕಾರ, 2024 ರವರೆಗಿನ 10 ರಿಂದ 12 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ: ಪ್ರಧಾನಮಂತ್ರಿ

ನಾವು ಮಾಡುವ ಪ್ರತಿಯೊಂದು ಸಂಕಲ್ಪವೂ 2047ರ ವೇಳೆಗೆ ಬಲಿಷ್ಠ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವ ಪ್ರಯತ್ನದಿಂದ ಪ್ರೇರಿತವಾಗಿರಬೇಕು: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 31 OCT 2026 9:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಏಕ್ತಾ ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮ ದಿನಾಚರಣೆಯ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿದ್ದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಂಪ್ರದಾಯಿಕ ಬೆಳಗಿನ ಕಾರ್ಯಕ್ರಮ ಪಟ್ಟಿಯನ್ನು ಸಂಜೆಯ ಕಾರ್ಯಕ್ರಮವಾಗಿ ಬದಲಾಯಿಸಿದ್ದನ್ನು ಉಲ್ಲೇಖಿಸಿದರು. ಹಿಂದಿನ ಸಂಜೆ ಭಾರತ್ ಪರ್ವ್ ಪೆವಿಲಿಯನ್ನಲ್ಲಿ ನಡೆದ ಭವ್ಯ ಪ್ರದರ್ಶನವನ್ನು ಸ್ಮರಿಸಿದರು. ಬೆಳಗಿನ ಏಕತಾ ಓಟದಲ್ಲಿ ಏಕತೆಯನ್ನು ಎತ್ತಿಹಿಡಿಯಲು ನಿರ್ಧರಿಸಿದ ಲಕ್ಷಾಂತರ ನಾಗರಿಕರು ಭಾಗವಹಿಸಿದ್ದನ್ನೂ ಸ್ಮರಿಸಿದರು.

ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು ನಿರ್ಮಿಸುವಲ್ಲಿ ಸಾಮೂಹಿಕ ರಾಷ್ಟ್ರವ್ಯಾಪಿ ಭಾಗವಹಿಸುವಿಕೆ, ಸ್ಥಳದ ವಿಶಿಷ್ಟ ಸೆಳೆತ ಮತ್ತು ಏಕತಾ ದಿನದ ಸ್ಫೂರ್ತಿದಾಯಕ ಶಕ್ತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸ್ಮಾರಕಕ್ಕೆ ಭೇಟಿ ನೀಡುವುದರಿಂದ  ಭಾರತೀಯ ಪ್ರಜೆಯಲ್ಲಿ ಮೂಡುವ   ಹೆಮ್ಮೆಯನ್ನು ಪ್ರಸ್ತಾಪಿಸಿದರಲ್ಲದೆ  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆಯೂ ಹೃದಯ ಆಳವಾದ ಕೃತಜ್ಞತೆಯಿಂದ ತುಂಬುತ್ತದೆ ಎಂದೂ ಹೇಳಿದರು. "ಸ್ವಾತಂತ್ರ್ಯದ ನಂತರ, ಅವರು 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿದರು ಮತ್ತು ಈ ರಾಷ್ಟ್ರವನ್ನು ಕಬ್ಬಿಣದಂತಹ  ದೃಢನಿಶ್ಚಯದಿಂದ ಏಕತೆಯ ಎಳೆಯಲ್ಲಿ ಹೆಣೆದರು" ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ಸ್ವಾತಂತ್ರ್ಯವು ರಾಷ್ಟ್ರಕ್ಕೆ ತನ್ನದೇ ಆದ ಭವಿಷ್ಯದ ಹಣೆಬರಹವನ್ನು ರೂಪಿಸಲು ಅಧಿಕಾರ ನೀಡುತ್ತದೆ ಮತ್ತು ಸಾರ್ವಜನಿಕ ಉತ್ತರದಾಯಿತ್ವ/ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಗಣರಾಜ್ಯವು ಸಾಂವಿಧಾನಿಕ ಮಿತಿಯೊಳಗೆ ನಿರ್ಧಾರಗಳನ್ನು ಕೈಗೊಳ್ಳಲು ನಿರ್ದೇಶಿಸುತ್ತದೆ ಎಂದು ವಿವರಿಸಿದ ಪ್ರಧಾನಮಂತ್ರಿ, ಏಕತೆಯು ಒಂದು ರಾಷ್ಟ್ರವಾಗಿ ಒಟ್ಟಾಗಿ ಮುನ್ನಡೆಯಲು ಪ್ರಮುಖ ಶಕ್ತಿಯನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. "ಆದ್ದರಿಂದ, ನಮ್ಮ ದೇಶದಲ್ಲಿ ಈಗ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಏಕತಾ ದಿನ, ಎಲ್ಲಾ ಮೂರು ರಾಷ್ಟ್ರೀಯ ಹಬ್ಬಗಳನ್ನು ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ಪೊಲೀಸರು ಮತ್ತು ಭದ್ರತಾ ಪಡೆಗಳ ಶೌರ್ಯಕ್ಕೆ ಸಮರ್ಪಿತವಾದ ಈ ವರ್ಷದ ರಾಷ್ಟ್ರೀಯ ಏಕತಾ ಪರೇಡ್ ಮತ್ತು ಭಾರತದ ಪರಂಪರೆ ಹಾಗು ಆಕಾಂಕ್ಷೆಗಳನ್ನು ಪ್ರದರ್ಶಿಸುವ ಸ್ತಬ್ಧಚಿತ್ರಗಳ ಮೂಲಕ ಏಕ್ತಾ ನಗರದಲ್ಲಿ ರಾಷ್ಟ್ರೀಯ ಏಕತೆಯ ಭವ್ಯ ದೃಶ್ಯವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಏಕತಾ ದಿನವು ಕೇವಲ ಔಪಚಾರಿಕ ಕಾರ್ಯಕ್ರಮಗಳನ್ನು ಮೀರಿ ಸಾರ್ವಜನಿಕ ಭಾಗವಹಿಸುವಿಕೆಯಿಂದ ಪ್ರೇರಿತವಾದ ಸಾರ್ವಜನಿಕ ಹೆಮ್ಮೆಯ ಆಚರಣೆಯಾಗಿ ವಿಕಸನಗೊಂಡಿದೆ ಎಂದು ಹೇಳಿದರು. "ಈ ಸಂದರ್ಭದಲ್ಲಿ, ನಾನು ರಾಷ್ಟ್ರೀಯ ಏಕತಾ ದಿನದಂದು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾದಗಳಿಗೆ ಪೂಜ್ಯ ಭಾವದ ಗೌರವದಿಂದ ನಮಸ್ಕರಿಸುತ್ತೇನೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು

ಸರ್ದಾರ್ ಪಟೇಲ್ ಅವರನ್ನು ಅತ್ಯುನ್ನತ ಐತಿಹಾಸಿಕ ವ್ಯಕ್ತಿ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಅವರಿಲ್ಲದೆ ಆಧುನಿಕ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ರಾಷ್ಟ್ರದ ಪ್ರಸ್ತುತ ಭೌಗೋಳಿಕ ಮತ್ತು ರಾಜಕೀಯ ಸ್ವರೂಪವನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. "ವಿಭಜನೆಯ ನಂತರವೂ, ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಭಾರತವನ್ನು ಸುರಕ್ಷಿತವಾಗಿರಿಸಿದ್ದು ಸರ್ದಾರ್ ಪಟೇಲ್" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಭಾರತದ ಗುಣ ಸ್ವಭಾವ ಮತ್ತು ಪ್ರಜ್ಞೆಯನ್ನು ಆಳವಾಗಿ ಅರ್ಥಮಾಡಿಕೊಂಡಿದ್ದರಿಂದ ಸರ್ದಾರ್ ಪಟೇಲ್ ಯಶಸ್ವಿಯಾದರು ಎಂದು ಹೇಳಿದ ಪ್ರಧಾನಮಂತ್ರಿ, ನಾಯಕರು ವೈವಿಧ್ಯತೆಯನ್ನು ಅಡ್ಡಿಯಾಗಿ ಗುರುತಿಸಲಿಲ್ಲ, ಬದಲು ಸಹಸ್ರಮಾನಗಳಿಂದ ಭಾರತೀಯ ನಾಗರಿಕತೆಯನ್ನು ಉಳಿಸಿಕೊಂಡಿರುವ ರಾಷ್ಟ್ರೀಯ ಏಕತೆಯ ನಿಜವಾದ ಅಡಿಪಾಯ ಎಂದು ಗುರುತಿಸಿದರು ಎಂದು ವಿವರಿಸಿದರು. "ಈ ಶಕ್ತಿಯಿಂದ, ನಾವು ಪ್ರಗತಿ ಮತ್ತು ಸಮೃದ್ಧಿಯ ಉತ್ತುಂಗವನ್ನು ಮುಟ್ಟಿದ್ದೇವೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸರ್ದಾರ್ ಪಟೇಲ್ ಅವರು ದೇಶವನ್ನು ಭೌಗೋಳಿಕವಾಗಿ ಮತ್ತು ಭಾವನಾತ್ಮಕವಾಗಿ ಒಂದುಗೂಡಿಸುವ ಮೂಲಕ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದರು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಚಾಲನೆ ನೀಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಿದರು. "ಗುಜರಾತ್ನ ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಮೂಲಕ, ಅವರು ರಾಷ್ಟ್ರದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಚಾಲನೆ ನೀಡಿದರು" ಎಂದೂ ಶ್ರೀ ಮೋದಿ ನುಡಿದರು.

ಈ ವರ್ಷ ಸೋಮನಾಥ ದೇವಾಲಯದ ಪುನರ್ನಿರ್ಮಾಣದ 75ನೇ ವಾರ್ಷಿಕೋತ್ಸವ ಸಂದರ್ಭವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ದಬ್ಬಾಳಿಕೆಕೋರರನ್ನು ಧಿಕ್ಕರಿಸಿ ಸಾವಿರ ವರ್ಷಗಳ ಕಾಲ ಹೆಮ್ಮೆಯಿಂದ ಹಾರಾಡುತ್ತಿರುವ ದೇವಾಲಯದ ಧ್ವಜವು ದೇಶಾದ್ಯಂತ ನಡೆಯುತ್ತಿರುವ ಸೋಮನಾಥ ಸ್ವಾಭಿಮಾನ್ ಪರ್ವಕ್ಕೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು. "ಮತ್ತು ಈ ವರ್ಷ ದೇಶವು ಈ ಹಬ್ಬವನ್ನು ಅದೇ ಉತ್ಸಾಹದಿಂದ ಆಚರಿಸುತ್ತಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ರಾಷ್ಟ್ರೀಯ ಏಕತೆ, ಭಾರತದ  ಜಾಗತಿಕ ಸ್ಥಾನಮಾನದಲ್ಲಿ ವರ್ಧನೆ, ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಕಾಶಿ ವಿಶ್ವನಾಥದಿಂದ ರಾಮ ಮಂದಿರದವರೆಗೆ ವ್ಯಾಪಿಸಿರುವ ಸಾಂಸ್ಕೃತಿಕ ಪುನರುಜ್ಜೀವನದ ಭವ್ಯ ಸಮಾರಂಭಗಳನ್ನು ಜೋಡಿಸಿದ ಪ್ರಧಾನಮಂತ್ರಿಯವರು, ಸರ್ದಾರ್ ಪಟೇಲ್ ಅವರ ಕಲ್ಪನೆಯ ಹಾದಿಯಲ್ಲಿ ರಾಷ್ಟ್ರವು ಮುನ್ನಡೆಯುತ್ತಿದೆ ಎಂದು ಹೇಳಿದರು. "ಇದಕ್ಕಾಗಿ, ಈ ದೇಶವು ಅವರಿಗೆ ಸದಾ ಋಣಿಯಾಗಿರುತ್ತದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಎರಡು ವರ್ಷಗಳ ರಾಷ್ಟ್ರವ್ಯಾಪಿ ಆಚರಣೆಯಲ್ಲಿ ದೇಶವು ಪ್ರಮುಖ ಪ್ರತಿಜ್ಞೆಗಳನ್ನು ತೆಗೆದುಕೊಂಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ, ಅವರ 151ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆ ನಿರ್ಣಯಗಳು ಗಮನಾರ್ಹವಾಗಿ ಅಲ್ಪಾವಧಿಯಲ್ಲಿ ಈಡೇರಿವೆ ಎಂದು ತೃಪ್ತಿ ವ್ಯಕ್ತಪಡಿಸಿದರು. "ಈ ಎರಡು ವರ್ಷಗಳಲ್ಲಿ, ದೇಶವು ಹಲವಾರು ಅಭೂತಪೂರ್ವ ಮೈಲಿಗಲ್ಲುಗಳನ್ನು ಸಾಧಿಸಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಸರ್ದಾರ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಡಿದ ಗಂಭೀರ ಪ್ರತಿಜ್ಞೆಯನ್ನು ರಾಷ್ಟ್ರಕ್ಕೆ ನೆನಪಿಸಿದ ಪ್ರಧಾನಮಂತ್ರಿ, ಒಂದು ವರ್ಷದೊಳಗೆ ಎಡಪಂಥೀಯ ಉಗ್ರವಾದದ ಬೆನ್ನೆಲುಬು ಮುರಿಯಲಾಗಿದೆ, 2015 ರಲ್ಲಿದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 126 ರಿಂದ ಮಾರ್ಚ್ 2026ರ ವೇಳೆಗೆ ಶೂನ್ಯಕ್ಕೆ ಇಳಿದಿದೆ ಎಂದು ಘೋಷಿಸಿದರು. ದಶಕಗಳ ರಕ್ತಪಾತದಿಂದ ಬಳಲುತ್ತಿರುವ ಪ್ರದೇಶಗಳು ಈಗ ರಸ್ತೆಗಳು, ಮೊಬೈಲ್ ಜಾಲಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿವೆ ಎಂದು ಅವರು ಒತ್ತಿ ಹೇಳಿದರು. "ಒಂದು ಕಾಲದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದ ಯುವಜನರಿಗೆ, ಶಿಕ್ಷಣ, ಉದ್ಯೋಗ ಮತ್ತು ಮುನ್ನಡೆಯಲು ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಏಕತಾ ದಿನಾಚರಣೆಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಈ ಹಿಂದೆ ನಕ್ಸಲ್ ಪೀಡಿತವಾಗಿದ್ದ ಪ್ರದೇಶಗಳ ಕುಟುಂಬಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು ಅವರಿಗೆ ಭವ್ಯ ಭವಿಷ್ಯವನ್ನು ಕೋರಿದರಲ್ಲದೆ, ಶಾಂತಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು. "ದೇಶದ ಈ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸಲು ಸರ್ವೋಚ್ಚ ತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರಿಗೆ ಇಂದು ನಾನು ನಮಸ್ಕರಿಸುತ್ತೇನೆ" ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು

ಸ್ಪಷ್ಟವಾದ ರಾಷ್ಟ್ರೀಯ ಸಾಧನೆಗಳು ಮತ್ತು ಸೂಕ್ಷ್ಮ ಆಡಳಿತದಿಂದ ಹುಟ್ಟಿದ ಸಾರ್ವಜನಿಕ ವಿಶ್ವಾಸದಿಂದಾಗಿ ಭಾರತವು ಇಂದು ಸುರಕ್ಷಿತ ಮತ್ತು ಹೆಚ್ಚು ದೃಢನಿಶ್ಚಯವನ್ನು ಹೊಂದಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯೋತ್ತರದಲ್ಲಿ  ದಶಕಗಳ ಕಾಲ ಟೊಳ್ಳು ಘೋಷಣೆಯಾದ ಗರೀಬಿ ಹಠಾವೋ ಎಂದು ಜಪಿಸುವವರು ತಮ್ಮನ್ನು ಶ್ರೀಮಂತಗೊಳಿಸಿಕೊಂಡರು ಎಂದೂ ಹೇಳಿದರು. ಈಗ  ಬಡತನ ನಿವಾರಣೆಯಲ್ಲಿ ಸಾಧಿಸಿದ ಐತಿಹಾಸಿಕ ಮೈಲಿಗಲ್ಲನ್ನು ಅವರು ಎತ್ತಿ ತೋರಿಸಿದರು. 2024ಕ್ಕೆ ಮುಂಚಿನ 10 ರಿಂದ 12 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಬಹಿರಂಗಪಡಿಸಿದ ಇತ್ತೀಚಿನ ವಿಶ್ವಬ್ಯಾಂಕ್ ವರದಿಯನ್ನು ಅವರು ಉಲ್ಲೇಖಿಸಿದರು. "ಅಂದರೆ, ಈ ಹಿಂದೆ 100 ರಲ್ಲಿ 27 ಜನರು ತೀವ್ರ ಬಡತನದ ಹಿಡಿತದಲ್ಲಿದ್ದರು, ಇಂದು ಈ ಸಂಖ್ಯೆ 3ಕ್ಕಿಂತ ಕಡಿಮೆಯಿದೆ" ಎಂದು ಶ್ರೀ ಮೋದಿ ಹೇಳಿದರು.

ಕಳೆದ 12 ವರ್ಷಗಳಲ್ಲಿ ಸೋರಿಕೆ ಮುಕ್ತ ನೇರ ಲಾಭ ವರ್ಗಾವಣೆ, ಉಚಿತ ಪಡಿತರ, ಉಚಿತ ಆರೋಗ್ಯ ರಕ್ಷಣೆ, ಕೋಟ್ಯಂತರ ಪಕ್ಕಾ ಮನೆಗಳು, ಶೌಚಾಲಯಗಳು, ಹೊಗೆ ಮುಕ್ತ ಅಡುಗೆಮನೆಗಳು ಮತ್ತು ವ್ಯಾಪಕ ವಿಮಾ ರಕ್ಷಣೆಯ ಮೂಲಕ ಬಡವರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಜಾಗತಿಕವಾಗಿ ಮೆಚ್ಚುಗೆ ಪಡೆದ ಈ ಸಾಧನೆಯನ್ನು ಸಾಧಿಸಲಾಗಿದೆ ಎಂದು ವಿವರಿಸಿದ ಪ್ರಧಾನಮಂತ್ರಿ, ಸಾಮಾಜಿಕ ಭದ್ರತಾ ವ್ಯಾಪ್ತಿಯು 2014 ಕ್ಕಿಂತ ಮೊದಲು 25 ಕೋಟಿಗೂ ಕಡಿಮೆ ಇದ್ದದ್ದು ಇಂದು ಸುಮಾರು 100 ಕೋಟಿ ನಾಗರಿಕರಿಗೆ ವಿಸ್ತರಿಸಿದೆ ಎಂದು ಗಮನಸೆಳೆದರು. ರಾಷ್ಟ್ರವು ಸರ್ದಾರ್ ಪಟೇಲ್  ಅವರಿಗೆ ಗೌರವ ಸಲ್ಲಿಸುತ್ತಿರುವಾಗ ಸರ್ದಾರ್ ಪಟೇಲ್ ಅವರ ಆಶೀರ್ವಾದವನ್ನು ಕೋರಿದ ಅವರು, ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪವನ್ನು ಪುನರುಚ್ಚರಿಸಿದರು. "ಇಂತಹ ಪ್ರಯತ್ನಗಳಿಂದ ನಾವು ದೇಶದಿಂದ ಬಡತನವನ್ನು ತೊಡೆದುಹಾಕುತ್ತೇವೆ ಮತ್ತು ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುತ್ತೇವೆ" ಎಂದು ಪ್ರಧಾನಮಂತ್ರಿ ಮೋದಿ ತಮ್ಮ ನಿಶ್ಚಯವನ್ನು ಪ್ರತಿಪಾದಿಸಿದರು.

ಯುದ್ಧಗಳು, ಆರ್ಥಿಕ ಸಂಕಷ್ಟಗಳು, ಸಂಪನ್ಮೂಲ ಬಿಕ್ಕಟ್ಟು ಮತ್ತು ಮುರಿದ ಪೂರೈಕೆ ಸರಪಳಿಗಳಿಂದ ಗುರುತಿಸಲ್ಪಟ್ಟ ದಶಕಗಳಲ್ಲಿ ಅತ್ಯಂತ ಪ್ರಕ್ಷುಬ್ಧ ಜಾಗತಿಕ ಯುಗದಲ್ಲಿ ರಾಷ್ಟ್ರೀಯ ಏಕತೆಯು ಸ್ಥಿರತೆ ಮತ್ತು ಯಶಸ್ಸನ್ನು ಖಾತರಿಪಡಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರತಿ ಜಾಗತಿಕ ಬಿರುಗಾಳಿಯನ್ನು ಎದುರಿಸಲು ಭಾರತೀಯರ ಒಗ್ಗಟ್ಟು ದೇಶದ ಶಕ್ತಿಯ ದೊಡ್ಡ ಆಧಾರಸ್ತಂಭವಾಗಿ ಉಳಿದಿದೆ ಎಂದು ಹೇಳಿದರು. ಇತ್ತೀಚಿನ ಅಂತರರಾಷ್ಟ್ರೀಯ ಇಂಧನ ಬಿಕ್ಕಟ್ಟು ಹಲವಾರು ರಾಷ್ಟ್ರಗಳಲ್ಲಿ ಇಂಧನ ಪಡಿತರ ವ್ಯವಸ್ಥೆಗೆ ದಾರಿ ಮಾಡಿದೆ ಮತ್ತು ಜನತೆಯ ನಡುವೆ ಗಂಭೀರ ಅಶಾಂತಿಗೆ ಕಾರಣವಾಗಿದೆ, ಭಾರತ ವಿರೋಧಿ ಶಕ್ತಿಗಳು ಸಕ್ರಿಯವಾಗಿ ತೈಲ ಆಮದು ಮಾಡಿಕೊಳ್ಳುವ ಭಾರತಕ್ಕೆ ತೀವ್ರ ಸಂಕಷ್ಟದ ಮುನ್ಸೂಚನೆಗಳನ್ನು ನೀಡಿದೆ ಎಂದು ಹೇಳಿದ  ಅವರು, ನಾಗರಿಕರನ್ನು ಆಘಾತದಿಂದ ರಕ್ಷಿಸಿದ ರಾಜತಾಂತ್ರಿಕ ಚುರುಕುತನ ಮತ್ತು ಸಾರ್ವಜನಿಕ ಒಗ್ಗಟ್ಟು ಎರಡನ್ನೂ ಶ್ಲಾಘಿಸಿದರು.

ಒಂದು ದಶಕಕ್ಕೂ ಹೆಚ್ಚು ಕಾಲ ರಾಜಕೀಯ ಹತಾಶೆಯ ನಂತರ ಪಿತೂರಿಗಳನ್ನು ರೂಪಿಸಲು, ನಾಗರಿಕರನ್ನು ಪರಸ್ಪರ ವಿರುದ್ಧ ನಿಲ್ಲಿಸಲು ಮತ್ತು ವದಂತಿಗಳನ್ನು ಹರಡಲು ಮತ್ತು ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಸಾಮಾಜಿಕ ಮಾಧ್ಯಮಗಳನ್ನು ಅಸ್ತ್ರವಾಗಿ ಬಳಸಲು ಬಹಿರಂಗವಾಗಿ ಹೊರಬಂದಿರುವ ವಿಭಜಕ ಶಕ್ತಿಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿಯವರು, ರಹಸ್ಯ ವಿದೇಶಿ ಸಭೆಗಳು, ಭಾರತ ವಿರೋಧಿ ಶಕ್ತಿಗಳ ಬಾಹ್ಯ ಬೆಂಬಲ ಮತ್ತು ರಾಷ್ಟ್ರದ ಶತ್ರುಗಳನ್ನು ಪ್ರತಿಧ್ವನಿಸುವ ವಾದಸರಣಿಯನ್ನು  ಗುರುತಿಸುವಂತೆ ನಾಗರಿಕರಿಗೆ ಮನವಿ ಮಾಡಿದರು. "ನಾವು ದೂರದ ಪ್ರದೇಶಗಳಲ್ಲಿ ನಕ್ಸಲಿಸಂ ಅನ್ನು ಕೊನೆಗೊಳಿಸಿದ್ದೇವೆ, ಆದರೆ ಸೈದ್ಧಾಂತಿಕ ಉಗ್ರಗಾಮಿಗಳ ಅಪಾಯ ಇನ್ನೂ ದೇಶದ ಮೇಲೆ  ಇದೆ ಮತ್ತು ದೇಶವು ಅಂತಹ ಘಟಕ ಶಕ್ತಿಗಳ ವಿರುದ್ಧ ಸದಾ ಜಾಗರೂಕರಾಗಿರಬೇಕು" ಎಂದು ಶ್ರೀ ಮೋದಿ ಎಚ್ಚರಿಸಿದರು.

ರಾಷ್ಟ್ರೀಯ ಏಕತೆಯ ಭವ್ಯ ಧ್ಯೇಯ ಮತ್ತು ಬಲಿಷ್ಠ ಹಾಗು ಸಮರ್ಥ ಭಾರತದತ್ತ ಪ್ರಯಾಣವು ತೊಂದರೆಗಳನ್ನು ಲೆಕ್ಕಿಸದೆ ಅಡೆತಡೆಯಿಲ್ಲದೆ ಮುಂದುವರಿಯಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಗಡಿಗಳನ್ನು ಸಂಪೂರ್ಣವಾಗಿ ಭದ್ರಪಡಿಸುವುದು, ಒಳನುಸುಳುವಿಕೆ ಮತ್ತು ಜನಸಂಖ್ಯಾ ಬದಲಾವಣೆಗಳನ್ನು ನಿಲ್ಲಿಸುವುದು ಮತ್ತು ಜಾತ್ಯತೀತ ನಾಗರಿಕ ಸಂಹಿತೆಯತ್ತ ಮುನ್ನಡೆಯುವ ಮುಂದಿನ ಪ್ರಮುಖ ರಾಷ್ಟ್ರೀಯ ಆದ್ಯತೆಗಳನ್ನು ವಿವರಿಸಿದರು. ಪ್ರಮುಖ ನಿರ್ಣಯಗಳು ಮತ್ತು ದಿಟ್ಟ ನಿರ್ಧಾರಗಳು ಅನಿವಾರ್ಯವಾಗಿ ಅಡೆತಡೆಗಳು ಮತ್ತು ಬಿರುಗಾಳಿಗಳನ್ನು ಎದುರಿಸುತ್ತವೆ ಎಂದು ಒಪ್ಪಿಕೊಂಡ ಅವರು, ಏಕ್ ಭಾರತ್, ಶ್ರೇಷ್ಠ ಭಾರತ್ ಮತ್ತು ವಿಕಸಿತ ಭಾರತದ ಅಚಲ ಸಂಕಲ್ಪಗಳಿಂದ ರಾಷ್ಟ್ರವು ವಿಚಲಿತವಾಗುವುದಿಲ್ಲ, ಪ್ರತಿ ಉಸಿರು ಮತ್ತು ಹೃದಯ ಬಡಿತದೊಂದಿಗೆ 2047 ರ ಗುರಿಯತ್ತ ದಣಿವರಿಯದೆ ಕೆಲಸ ಮಾಡುತ್ತದೆ ಎಂದು ಘೋಷಿಸಿದರು.  ಹಬ್ಬದ ಶುಭಾಶಯ ಹೇಳುವುದಕ್ಕೆ ಮತ್ತು ಭಾರತ್ ಮಾತಾಕೀ ಜೈ ಘೋಷಣೆಗೆ ಮೊದಲು ಅವರು "ನಾವು ಕಠಿಣ ಪರಿಶ್ರಮದ ಉತ್ತುಂಗವನ್ನು ತಲುಪುತ್ತೇವೆ, ನಾವು ಬಿರುಗಾಳಿಗಳನ್ನು ದೃಢವಾಗಿ ಎದುರಿಸುತ್ತೇವೆ, ಆದರೆ ನಮ್ಮ ದೃಷ್ಟಿ ಒಂದೇ ಗುರಿಯ ಮೇಲೆ ಉಳಿಯುತ್ತದೆ, 2047 ರ ವೇಳೆಗೆ ಬಲವಾದ ಮತ್ತು ಸಮರ್ಥ ಭಾರತವನ್ನು ನಿರ್ಮಿಸುವುದು ಆ ಗುರಿ!" ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

 

*****


(ಪ್ರಕಟಣೆ ಐ.ಡಿ.: 2331146) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Manipuri , Gujarati , Malayalam