ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರದಿಂದ ಮಧ್ಯಪ್ರದೇಶದಲ್ಲಿ ಬಂದೂಕು ಪೆಲೆಟ್ ಗಾಯಗಳಿಂದ ಚೀತಾ ಸಾವನ್ನಪ್ಪಿದ ಘಟನೆಯ ತನಿಖೆಗೆ ಉನ್ನತ ಮಟ್ಟದ ಕೇಂದ್ರ ತಂಡದ ನಿಯೋಜನೆ

ಪ್ರಕಟಣಾ ದಿನಾಂಕ: 28 OCT 2026 7:52AM by PIB Bengaluru

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ 19 ತಿಂಗಳ ಗಂಡು ಚೀತಾ (ಚಿರತೆ) (ಕೆಎನ್ ಜಿ22) ಬಂದೂಕು ಪೆಲೆಟ್ ಗಳಿಂದಾದ   ಗಾಯಗಳಿಂದ ಸಾವನ್ನಪ್ಪಿರುವುದನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಾಜೆಕ್ಟ್ ಚೀತಾ ಯೋಜನೆಯ ಅತ್ಯಂತ ಮಹತ್ವ ಮತ್ತು ಮರುಪರಿಚಯಿಸಲಾದ ಈ ದೊಡ್ಡ ಬೆಕ್ಕಿನ ಜಾತಿಗೆ ಅತ್ಯುನ್ನತ ಮಟ್ಟದ ರಕ್ಷಣೆ ಒದಗಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಈ ಘಟನೆಯ ಬಗ್ಗೆ ಸ್ಥಳದಲ್ಲೇ ತನಿಖೆ ನಡೆಸಲು ಉನ್ನತ ಮಟ್ಟದ ತಂಡವನ್ನು ನಿಯೋಜಿಸಿದೆ.

ಈ ಕೇಂದ್ರ ತಂಡದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ ಟಿ ಸಿ ಎ) ಅರಣ್ಯಗಳ ಇನ್ಸ್ಪೆಕ್ಟರ್ ಜನರಲ್, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ (ಡಬ್ಲ್ಯೂ ಸಿಸಿ ಬಿ) ಹೆಚ್ಚುವರಿ ನಿರ್ದೇಶಕರು ಮತ್ತು ಡಬ್ಲ್ಯೂ ಸಿಸಿ ಬಿ ಯ ಪ್ರಾದೇಶಿಕ ಉಪ ನಿರ್ದೇಶಕರು ಇದ್ದಾರೆ. ಚೀತಾದ ಸಾವಿಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸುವುದು, ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸುವುದು ಮತ್ತು ಈ ವಿಷಯದಲ್ಲಿ ಕಟ್ಟುನಿಟ್ಟಾದ ಹಾಗೂ ಶೀಘ್ರ ಕ್ರಮವನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರದೇಶ ಅರಣ್ಯ ಇಲಾಖೆಯೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಈ ತಂಡಕ್ಕೆ ವಹಿಸಲಾಗಿದೆ.

ನಿರ್ವಾ' ಹೆಸರಿನ ಚೀತಾದ ಮರಿಯಾಗಿದ್ದ ಈ ಚೀತಾವು ಅಕ್ಟೋಬರ್ 25, 2026ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಸಂರಕ್ಷಿತ ಪ್ರದೇಶದ ಹೊರಗಿನ ಮೊರೆನಾದ ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಮಧ್ಯಪ್ರದೇಶ ಅರಣ್ಯ ಇಲಾಖೆ ವರದಿ ಮಾಡಿದಂತೆ, ಅದನ್ನು ಅದೇ ದಿನ ಶಿಯೋಪುರ್ ಪ್ರಾದೇಶಿಕ ಅರಣ್ಯ ವಿಭಾಗದಿಂದ ರಕ್ಷಿಸಲಾಯಿತು ಮತ್ತು ಜಬಲ್ ಪುರದ ಪಶುವೈದ್ಯಕೀಯ ಕೇಂದ್ರದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಹಾಗೂ ತೀವ್ರ ನಿಗಾ ಚಿಕಿತ್ಸೆಯನ್ನು ನೀಡಲಾಯಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಅದರ ದೇಹದಿಂದ ಐದು ಬಂದೂಕಿನ ಪೆಲೆಟ್ ಗಳನ್ನು ಹೊರತೆಗೆಯಲಾಯಿತು.  ಚಿಕಿತ್ಸೆಯ ಹೊರತಾಗಿಯೂ, ಚಿರತೆಯು ಅಕ್ಟೋಬರ್ 27, 2026ರಂದು ಗಾಯಗಳ ತೀವ್ರತೆಯಿಂದಾಗಿ ಸಾವನ್ನಪ್ಪಿತು. ಅನೇಕ ಆಂತರಿಕ ಗಾಯಗಳಿಗೆ ಈ ಪೆಲೆಟ್ ಗಳೇ ಕಾರಣ ಎಂದು ವೈದ್ಯಕೀಯ ಪರೀಕ್ಷೆಗಳಲ್ಲಿ,ದೃಢಪಟ್ಟಿದೆ.

ಈ ಘಟನೆಯ ತನಿಖೆಗಾಗಿ ರಾಜ್ಯ ಸರ್ಕಾರವು ಈಗಾಗಲೇ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆಯನ್ನು  ರಚಿಸಿದೆ. ಸಚಿವಾಲಯವು ನಿಯೋಜಿಸಿರುವ ಕೇಂದ್ರ ತಂಡವು ರಾಜ್ಯದ ಆಡಳಿತ ಯಂತ್ರದೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ನಿಯಮಾವಳಿಗಳ  ಜಾರಿ, ಹಾಗೂ ಉಸ್ತುವಾರಿ ಮತ್ತು ರಕ್ಷಣಾ ಕ್ರಮಗಳನ್ನು ಸಹ ಇದು ಪರಿಶೀಲಿಸುತ್ತದೆ. ಕೇಂದ್ರ ತಂಡವು ತನ್ನ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಸಚಿವಾಲಯಕ್ಕೆ ಸಲ್ಲಿಸಲಿದ್ದು, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮುಂದಿನ ನಿರ್ದೇಶನಗಳನ್ನು ನೀಡಲಾಗುವುದು.

 

*****


(ಪ್ರಕಟಣೆ ಐ.ಡಿ.: 2329352) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Gujarati , Telugu