ಲೋಕಸಭಾ ಸಚಿವಾಲಯ
azadi ka amrit mahotsav

12ನೇ ಬ್ರಿಕ್ಸ್‌ ಸಂಸದೀಯ ವೇದಿಕೆ 2026 ಉದ್ಘಾಟಿಸಿದ ಲೋಕ ಸಭಾ ಸ್ಪೀಕರ್; ಜನಕೇಂದ್ರಿತ ಅಭಿವೃದ್ಧಿಯನ್ನು ಮುನ್ನಡೆಸಲು ಸಂಸತ್ತುಗಳನ್ನು ಸಶಕ್ತಗೊಳಿಸಲು ಕರೆ


ಬ್ರಿಕ್ಸ್‌ ದೇಶಗಳ ಸಂಸದೀಯ ನಿಯೋಗಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಜಂಟಿ ಹೇಳಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು ಒಂದು ಐತಿಹಾಸಿಕ ಸಾಧನೆ: ಲೋಕ ಸಭಾ ಸ್ಪೀಕರ್

ಬ್ರಿಕ್ಸ್‌ ಯಶಸ್ಸಿನ ನಿಜವಾದ ಮಾಪನ,  ಸಂವಾದವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದರಲ್ಲಿದೆ: ಲೋಕಸಭೆ ಸ್ಪೀಕರ್

ಸಂಸತ್ತುಗಳು ಪರಸ್ಪರ ವಿಶ್ವಾಸವನ್ನು ಬೆಳೆಸಬಲ್ಲವು, ಭಿನ್ನಾಭಿಪ್ರಾಯಗಳನ್ನು ನಿವಾರಿಸಬಲ್ಲವು ಮತ್ತು ಜಾಗತಿಕ ಸವಾಲುಗಳ ಶಾಂತಿಯುತ ಪರಿಹಾರವನ್ನು ಮುನ್ನಡೆಸಬಲ್ಲವು: ಲೋಕ ಸಭಾ ಸ್ಪೀಕರ್

ದಕ್ಷಿಣದ ಜಾಗತಿಕ ರಾಷ್ಟ್ರಗಳ ಧ್ವನಿಯು, ಕಾಂಕ್ರೀಟ್ ನೀತಿಗಳು ಮತ್ತು ಅರ್ಥಪೂರ್ಣ ಸಹಕಾರದಲ್ಲಿ ಅಭಿವ್ಯಕ್ತಿ ಕಾಣಬೇಕು: ಲೋಕ ಸಭಾ ಸ್ಪೀಕರ್

ಯುವಜನರ ಆಕಾಂಕ್ಷೆಗಳನ್ನು ಬಳಸಿಕೊಳ್ಳಿ ಮತ್ತು ಅವರ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಜೋಡಿಸಿ: ಬ್ರಿಕ್ಸ್‌ ಸಂಸತ್ತುಗಳಿಗೆ ಲೋಕ ಸಭಾ ಸ್ಪೀಕರ್ ಆಗ್ರಹ

ಅಭಿವೃದ್ಧಿ ಮತ್ತು ಪರಿಸರ ಉಸ್ತುವಾರಿ ಬೇರ್ಪಡಿಸಲಾಗದವು; ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಜಗತ್ತಿಗಾಗಿ ಸಾಮೂಹಿಕ ಕ್ರಿಯೆ ಅತ್ಯಗತ್ಯ: ಲೋಕ ಸಭಾ ಸ್ಪೀಕರ್

ಪ್ರಕಟಣಾ ದಿನಾಂಕ: 26 OCT 2026 3:24PM by PIB Bengaluru

ಲೋಕ ಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ನವದೆಹಲಿಯ ಸಂಸತ್ ಭವನದ ಐತಿಹಾಸಿಕ ಸಂವಿಧಾನ ಸದನದಲ್ಲಿ 12ನೇ ಬ್ರಿಕ್ಸ್‌ ಸಂಸದೀಯ ವೇದಿಕೆ 2026 ಅನ್ನು ಉದ್ಘಾಟಿಸಿದರು. ಈ ವೇಳೆ ಬ್ರಿಕ್ಸ್‌ ಸದಸ್ಯ ಮತ್ತು ಪಾಲುದಾರ ದೇಶಗಳ ಸಂಸತ್ತುಗಳಿಗೆ ಜನಕೇಂದ್ರಿತ ಅಭಿವೃದ್ಧಿ, ಜಾಗತಿಕ ಶಾಂತಿ, ಸುಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಸಹಕಾರದತ್ತ ತಮ್ಮ ಸಾಮೂಹಿಕ ಸಂಕಲ್ಪವನ್ನು ಬಲಪಡಿಸಲು ಕರೆ ನೀಡಿದರು. ಸಂಸದೀಯ ತೊಡಗಿಸಿಕೊಳ್ಳುವಿಕೆಯ ಪರಿವರ್ತಕ ಸಾಮರ್ಥ್ಯವನ್ನು ಒತ್ತಿಹೇಳಿದ ಅವರು, ಹಂಚಿಕೆಯ ಸವಾಲುಗಳನ್ನು ಪರಿಹರಿಸಲು, ಪರಸ್ಪರ ತಿಳುವಳಿಕೆಯನ್ನು ವಿಸ್ತರಿಸಲು ಮತ್ತು ನಾಗರಿಕರ ಜೀವನದಲ್ಲಿ ಅರ್ಥಪೂರ್ಣ, ಸಕಾರಾತ್ಮಕ ಬದಲಾವಣೆಯನ್ನು ತರಲು ರಾಷ್ಟ್ರಗಳ ಸಾಮೂಹಿಕ ಜ್ಞಾನವನ್ನು ಬಳಸಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿದರು.

ಬ್ರಿಕ್ಸ್‌ ಸದಸ್ಯ ಮತ್ತು ಪಾಲುದಾರ ದೇಶಗಳ ಸಂಸದೀಯ ನಿಯೋಗಗಳನ್ನು ಭಾರತಕ್ಕೆ ಸ್ವಾಗತಿಸಿದ ಶ್ರೀ ಬಿರ್ಲಾ, ಅವರ ಉಪಸ್ಥಿತಿಯು ಸಂವಾದ, ಸಂಸದೀಯ ಸಹಕಾರ, ಪರಸ್ಪರ ಗೌರವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ಹಂಚಿಕೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದು ಗಮನಿಸಿದರು. ತಮ್ಮ ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ವೈವಿಧ್ಯತೆಯ ಹೊರತಾಗಿಯೂ, ಈ ದೇಶಗಳು ಪ್ರಜಾಸತ್ತಾತ್ಮಕ ಆದರ್ಶಗಳ ಮೇಲಿನ ನಂಬಿಕೆ ಮತ್ತು ಮಾನವೀಯತೆಯ ಕಡೆಗೆ ಸಾಮೂಹಿಕ ಜವಾಬ್ದಾರಿಯ ಭಾವನೆಯಿಂದ ಒಂದಾಗಿವೆ ಎಂದು ಅವರು ಉಲ್ಲೇಖಿಸಿದರು. ವೈವಿಧ್ಯತೆಯನ್ನು ಶಕ್ತಿಯ ಮೂಲವಾಗಿ, ಹಂಚಿಕೆಯ ಉದ್ದೇಶವಾಗಿ ಮತ್ತು ಸಾಮೂಹಿಕ ಪ್ರಗತಿಯಾಗಿ ಪರಿವರ್ತಿಸುವ ಸಾಮರ್ಥ್ಯದಲ್ಲಿ ಬ್ರಿಕ್‌ನ ನಿಜವಾದ ಶಕ್ತಿ ಅಡಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ಈ ಶೃಂಗಸಭೆಯಲ್ಲಿ ಜಂಟಿ ಹೇಳಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದನ್ನು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ ಶ್ರೀ ಬಿರ್ಲಾ, ಸದಸ್ಯ ದೇಶಗಳಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜಂಟಿ ಹೇಳಿಕೆಯಲ್ಲಿ ಒಳಗೊಂಡಿರುವ ಬದ್ಧತೆಗಳನ್ನು ಸ್ಪಷ್ಟ ಮತ್ತು ದೀರ್ಘಕಾಲೀನ ಫಲಿತಾಂಶಗಳಾಗಿ ಪರಿವರ್ತಿಸುವುದರಲ್ಲೇ ಈಗ ನಿಜವಾದ ಸವಾಲು ಅಡಗಿದೆ ಎಂದು ಅವರು ಒತ್ತಿಹೇಳಿದರು. ಸಂಸತ್ತುಗಳು ತಮ್ಮ ಶಾಸಕಾಂಗ ಕಾರ್ಯಗಳು, ಆಯವ್ಯಯ ಪ್ರಕ್ರಿಯೆಗಳು, ಚರ್ಚೆಗಳು ಮತ್ತು ಮೇಲ್ವಿಚಾರಣೆಯ ಮೂಲಕ ಈ ಬದ್ಧತೆಗಳು ಅರ್ಥಪೂರ್ಣ ಕ್ರಿಯೆಯಾಗಿ ಪರಿವರ್ತನೆಗೊಳ್ಳುವುದನ್ನು ಮತ್ತು ನಾಗರಿಕರಿಗೆ ಸ್ಪಷ್ಟ ಪ್ರಯೋಜನಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಜಗತ್ತು, ತೀವ್ರ ಅನಿಶ್ಚಿತತೆಯ ಅವಧಿಯಿಂದ ಮುಂದೆ ಸಾಗುತ್ತಿದೆ ಎಂದು ಗಮನಿಸಿದ ಶ್ರೀ ಬಿರ್ಲಾ, ಪ್ರಾದೇಶಿಕ ಸಂಘರ್ಷಗಳು, ಯುದ್ಧಗಳು, ಆರ್ಥಿಕ ಅಸ್ಥಿರತೆ, ವ್ಯಾಪಾರ ಉದ್ವಿಗ್ನತೆಗಳು, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಒತ್ತಿ ಹೇಳಿದರು. ಅವುಗಳ ಪರಿಣಾಮಗಳು ರಾಷ್ಟ್ರೀಯ ಗಡಿಗಳನ್ನು ಮೀರಿದ್ದು, ಸಾಮೂಹಿಕ ಜವಾಬ್ದಾರಿಯ ಭಾವನೆಗೆ ಕರೆ ನೀಡುತ್ತವೆ ಎಂದು ಅವರು ಉಲ್ಲೇಖಿಸಿದರು. ಇಂತಹ ಸವಾಲಿನ ಜಾಗತಿಕ ಸನ್ನಿವೇಶದಲ್ಲಿ, ಸಂವಾದ, ರಾಜತಾಂತ್ರಿಕತೆ ಮತ್ತು ಸಹಕಾರವು ಇನ್ನಷ್ಟು ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ. ಜನರ ಇಚ್ಛೆಯ ರೋಮಾಂಚಕ ಅಭಿವ್ಯಕ್ತಿಗಳಾಗಿ ಸಂಸತ್ತುಗಳು ತಿಳುವಳಿಕೆಯ ಸೇತುವೆಗಳಾಗಿ ಕಾರ್ಯನಿರ್ವಹಿಸಬಹುದು, ಪರಸ್ಪರ ವಿಶ್ವಾಸವನ್ನು ಬಲಪಡಿಸಬಹುದು, ಅಂತಾರಾಷ್ಟ್ರೀಯ ಉದ್ವಿಗ್ನತೆಗಳನ್ನು ಕಡಿಮೆ ಮಾಡಬಹುದು ಮತ್ತು ಜಾಗತಿಕ ಸವಾಲುಗಳಿಗೆ ಶಾಂತಿಯುತ ಹಾಗೂ ರಚನಾತ್ಮಕ ಪ್ರತಿಕ್ರಿಯೆಗಳನ್ನು ಮುನ್ನಡೆಸಲು ಸಹಾಯ ಮಾಡಬಹುದು. ಸಂಸದೀಯ ರಾಜತಾಂತ್ರಿಕತೆಯ ಮೂಲಕ, ಚುನಾಯಿತ ಪ್ರತಿನಿಧಿಗಳು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಹಂಚಿಕೊಂಡ ಅನುಭವಗಳನ್ನು ಬಳಸಿಕೊಳ್ಳಬಹುದು, ಸಾಮಾನ್ಯ ಹಿತಾಸಕ್ತಿಗಳನ್ನು ಗುರುತಿಸಬಹುದು ಮತ್ತು ಅರ್ಥಪೂರ್ಣ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ತೆರೆಯಬಹುದು.

ಬ್ರಿಕ್ಸ್‌ ಗ್ಲೋಬಲ್ ಸೌತ್‌ನ (ದಕ್ಷಿಣದ ಜಾಗತಿಕ ರಾಷ್ಟ್ರಗಳು) ಧ್ವನಿಯನ್ನು ವರ್ಧಿಸುವ ಮತ್ತು ವಿಶ್ವ ವೇದಿಕೆಯಲ್ಲಿ ಅದರ ಆಕಾಂಕ್ಷೆಗಳನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ ಎಂದು ಶ್ರೀ ಬಿರ್ಲಾ ಗಮನಿಸಿದರು. ಈ ಆಕಾಂಕ್ಷೆಯು ಕೇವಲ ಸಂವಾದ ಮತ್ತು ಘೋಷಣೆಗಳ ಕ್ಷೇತ್ರವನ್ನು ಮೀರಿ ಸ್ಪಂದಿಸುವ ನೀತಿಗಳು, ಪ್ರಾಯೋಗಿಕ ಸಹಕಾರ ಮತ್ತು ಜನರ ಜೀವನವನ್ನು ಸುಧಾರಿಸುವ ಸಾಮೂಹಿಕ ಉಪಕ್ರಮಗಳಲ್ಲಿ ಕಾಂಕ್ರೀಟ್ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು. ಹಂಚಿಕೆಯ ಆಕಾಂಕ್ಷೆಗಳನ್ನು ಉದ್ದೇಶಪೂರ್ವಕ ಕ್ರಿಯೆಯಾಗಿ ಪರಿವರ್ತಿಸುವ ಮತ್ತು ಜಾಗತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳಗಳು ಮತ್ತು ಆದ್ಯತೆಗಳು ಸೂಕ್ತ ಪರಿಗಣನೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯದಲ್ಲಿ ಈ ಗುಂಪಿನ ಶಕ್ತಿಯು ಪ್ರತಿಫಲಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

'ಜನಕೇಂದ್ರಿತ ಅಭಿವೃದ್ಧಿಗಾಗಿ ಸಂಸತ್ತುಗಳನ್ನು ಬಲಪಡಿಸುವುದು' ಎಂಬ 12 ನೇ ಬ್ರಿಕ್ಸ್‌ ಸಂಸದೀಯ ವೇದಿಕೆ 2026 ರ ಥೀಮ್ ಕುರಿತು ಒತ್ತಿ ಹೇಳಿದ ಶ್ರೀ ಬಿರ್ಲಾ, ಸಮಕಾಲೀನ ಜಾಗತಿಕ ಸನ್ನಿವೇಶದಲ್ಲಿ ಇದು ವಿಶೇಷ ಪ್ರಸ್ತುತತೆಯನ್ನು ಹೊಂದಿದೆ ಎಂದು ಹೇಳಿದರು. ಈ ಎರಡು ದಿನಗಳ ವೇದಿಕೆಯು ಸ್ಥಿತಿಸ್ಥಾಪಕತ್ವ, ಆವಿಷ್ಕಾರ, ಸಹಕಾರ ಮತ್ತು ಸುಸ್ಥಿರತೆ ಎಂಬ ನಾಲ್ಕು ಪರಸ್ಪರ ಸಂಪರ್ಕಿತ ಕಂಬಗಳ ಮೇಲೆ ಸಮಗ್ರ ಚರ್ಚೆಗಳಿಗೆ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ—ಇವುಗಳಲ್ಲಿ ಪ್ರತಿಯೊಂದೂ ಶೀಘ್ರವಾಗಿ ಸಂಪರ್ಕಗೊಳ್ಳುತ್ತಿರುವ ಜಗತ್ತಿನಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಒಳಗೊಳ್ಳುವ ಅಭಿವೃದ್ಧಿಯನ್ನು ಮುನ್ನಡೆಸಲು ಅತ್ಯಗತ್ಯ ಎಂದು ಅವರು ತಿಳಿಸಿದರು.

ಸ್ಥಿತಿಸ್ಥಾಪಕತ್ವ ಹೊಂದಿರುವ ಸಂಸದೀಯ ಸಂಸ್ಥೆಗಳ ಅಗತ್ಯವನ್ನು ಒತ್ತಿಹೇಳಿದ ಶ್ರೀ ಬಿರ್ಲಾ, ಬ್ರಿಕ್ಸ್‌ ದೇಶಗಳು ನಿರಂತರತೆ, ಹೊಣೆಗಾರಿಕೆ ಮತ್ತು ಪರಿಣಾಮಕಾರಿ ಪ್ರಜಾಸತ್ತಾತ್ಮಕ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಶಾಸಕಾಂಗ ಚೌಕಟ್ಟುಗಳು ಮತ್ತು ಸಾಂಸ್ಥಿಕ ಸಾಮರ್ಥ್ಯಗಳನ್ನು ನಿರಂತರವಾಗಿ ಬಲಪಡಿಸಬೇಕು ಎಂದು ಹೇಳಿದರು, ವಿಶೇಷವಾಗಿ ಅನಿಶ್ಚಿತತೆ ಮತ್ತು ಅಡಚಣೆಗಳ ಸಮಯದಲ್ಲಿ. ಸಂಸತ್ತುಗಳು ಜನರ ವಿಕಸಿತಗೊಳ್ಳುತ್ತಿರುವ ಆಕಾಂಕ್ಷೆಗಳಿಗೆ ಅನುಗುಣವಾಗಿ ವಿಕಸನಗೊಳ್ಳಬೇಕಾದ ಜೀವಂತ ಸಂಸ್ಥೆಗಳಾಗಿವೆ ಎಂದು ಅವರು ಗಮನಿಸಿದರು. ಅವುಗಳ ಶಕ್ತಿಯು ಕೇವಲ ಸಾಂವಿಧಾನಿಕ ಅಧಿಕಾರದಲ್ಲಿ ಮಾತ್ರವಲ್ಲದೆ ರಚನಾತ್ಮಕ ಸಂವಾದವನ್ನು ಬೆಳೆಸುವ, ಸಮ್ಮತಿಯನ್ನು ನಿರ್ಮಿಸುವ, ಪಾರದರ್ಶಕತೆಯನ್ನು ಎತ್ತಿಹಿಡಿಯುವ ಮತ್ತು ತಾವು ಪ್ರತಿನಿಧಿಸುವ ನಾಗರಿಕರಿಗೆ ದೃಢವಾಗಿ ಹೊಣೆಗಾರರಾಗಿ ಉಳಿಯುವ ಸಾಮರ್ಥ್ಯದಲ್ಲಿದೆ.

ಸಂಸದೀಯ ಕಾರ್ಯನಿರ್ವಹಣೆಯಲ್ಲಿ ಆವಿಷ್ಕಾರದ ಪರಿವರ್ತಕ ಪಾತ್ರಡಾ ಬಗ್ಗೆ ಒತ್ತಿ ಹೇಳಿದ ಲೋಕಸಭೆ ಸ್ಪೀಕರ್, ಆವಿಷ್ಕಾರ ಎಂಬುದು ಕೇವಲ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರದೆ ಹೊಸ ವಿಚಾರಗಳು, ಪ್ರಗತಿಪರ ಪದ್ಧತಿಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ, ಸಹಭಾಗಿತ್ವದ ಮತ್ತು ಸ್ಪಂದಿಸುವಂತೆ ಮಾಡುವ ಸಾಂಸ್ಥಿಕ ಸುಧಾರಣೆಗಳನ್ನು ಒಳಗೊಂಡಿದೆ ಎಂದು ಹೇಳಿದರು. ರಚನಾತ್ಮಕ ಬದಲಾವಣೆಯನ್ನು ಸ್ವೀಕರಿಸುವ ಮೂಲಕ ಮತ್ತು ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ, ಸಂಸತ್ತುಗಳು ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಬಹುದು, ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸಬಹುದು ಮತ್ತು ನಾಗರಿಕರ ವಿಕಸಿತಗೊಳ್ಳುತ್ತಿರುವ ನಿರೀಕ್ಷೆಗಳಿಗೆ ಹೆಚ್ಚು ಅರ್ಥಪೂರ್ಣವಾಗಿ ಸ್ಪಂದಿಸಬಹುದು.

ಸಂಸದೀಯ ಸಹಕಾರದಲ್ಲಿ ಅಡಗಿರುವ ಅಪಾರ ಸಾಮರ್ಥ್ಯವನ್ನು ಗಮನಿಸಿದ ಶ್ರೀ ಬಿರ್ಲಾ ಅವರು, ಬ್ರಿಕ್ಸ್‌ ದೇಶಗಳ ವೈವಿಧ್ಯತೆಯು ಒಂದು ಮಿತಿಯಲ್ಲ, ಬದಲಾಗಿ ಸಾಮಾನ್ಯ ಒಳಿತಿಗಾಗಿ ಬಳಸಿಕೊಳ್ಳಬಹುದಾದ ಮೌಲ್ಯಯುತ ಆಸ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಅನುಭವಗಳನ್ನು ಹಂಚಿಕೊಳ್ಳುವ ಮೂಲಕ, ಅತ್ಯುತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು ಪರಸ್ಪರರ ಸಾಂಸ್ಥಿಕ ಶಕ್ತಿಗಳಿಂದ ಕಲಿಯುವ ಮೂಲಕ, ಅವರ ಸಂಸತ್ತುಗಳು ಜಂಟಿಯಾಗಿ ಹಂಚಿಕೆಯ ಸವಾಲುಗಳಿಗೆ ನವೀನ ಪ್ರತಿಕ್ರಿಯೆಗಳನ್ನು ರೂಪಿಸಬಹುದು. ಇಂತಹ ನಿರಂತರ ತೊಡಗಿಸಿಕೊಳ್ಳುವಿಕೆಯು ಹೆಚ್ಚು ಸಮಾನ, ಒಳಗೊಳ್ಳುವ ಮತ್ತು ಶಾಂತಿಯುತ ಪ್ರಪಂಚದ ಅಡಿಪಾಯವನ್ನು ಹಾಕಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತೆಯನ್ನು ಹಾಗೂ ಅದರ ವಿಶಿಷ್ಟ ದೃಷ್ಟಿಕೋನಗಳನ್ನು ಸಂಪೂರ್ಣವಾಗಿ ಗೌರವಿಸುತ್ತಲೇ, ಸಹಕಾರದ ಸಂಸ್ಕೃತಿಯನ್ನು ಬೆಳೆಸುವುದರಲ್ಲಿ, ಸಂಸದೀಯ ರಾಜತಾಂತ್ರಿಕತೆಯ ಸಾರ ಅಡಗಿದೆ ಎಂದು ಅವರು ಒತ್ತಿಹೇಳಿದರು. ರಾಷ್ಟ್ರೀಯ ಸನ್ನಿವೇಶಗಳಲ್ಲಿನ ವ್ಯತ್ಯಾಸಗಳು ಸಾಮಾನ್ಯ ಉದ್ದೇಶಗಳ ಅನ್ವೇಷಣೆಗೆ ಅಡ್ಡಿಯಾಗುವ ಅಗತ್ಯವಿಲ್ಲ; ಬದಲಾಗಿ, ರಚನಾತ್ಮಕ ತೊಡಗಿಸಿಕೊಳ್ಳುವಿಕೆಯು ವೈವಿಧ್ಯಮಯ ದೃಷ್ಟಿಕೋನಗಳನ್ನು ಪರಸ್ಪರ ಕಲಿಕೆ ಮತ್ತು ಸಾಮೂಹಿಕ ಪ್ರಗತಿಯ ಅವಕಾಶಗಳನ್ನಾಗಿ ಪರಿವರ್ತಿಸಬಹುದು. ಬ್ರಿಕ್ಸ್‌ ಸದಸ್ಯ ದೇಶಗಳ ನಡುವೆ ನವೀಕರಿಸಿದ ಬದ್ಧತೆಗೆ ಕರೆ ನೀಡಿದ ಶ್ರೀ ಬಿರ್ಲಾ, ಅನುಭವವನ್ನು ಜಂಟಿ ಕ್ರಿಯೆಯಾಗಿ, ತಿಳುವಳಿಕೆಯನ್ನು ದೀರ್ಘಕಾಲೀನ ವಿಶ್ವಾಸವಾಗಿ ಮತ್ತು ಸಂವಾದವನ್ನು ಕಾಂಕ್ರೀಟ್ ಹಾಗೂ ಅರ್ಥಪೂರ್ಣ ಸಹಕಾರವಾಗಿ ಪರಿವರ್ತಿಸಲು ಅವರು ಆಗ್ರಹಿಸಿದರು.

ಸುಸ್ಥಿರ ಅಭಿವೃದ್ಧಿಯ ಅಗತ್ಯತೆಯತ್ತ ಗಮನ ಹರಿಸಿದ ಶ್ರೀ ಬಿರ್ಲಾ, ಭಾರತೀಯ ದಾರ್ಶನಿಕ ಚಿಂತನೆಯು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಪೂರಕ, ಪರಸ್ಪರ ಬಲಪಡಿಸುವ ಅನ್ವೇಷಣೆಗಳೆಂದು ಪರಿಗಣಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಮಗ್ರ ದೃಷ್ಟಿಕೋನವು ಬ್ರಿಕ್ಸ್‌ ದೇಶಗಳ ಸಂಸತ್ತುಗಳಿಗೆ ಪ್ರಮುಖ ಮಾರ್ಗದರ್ಶಿ ತತ್ವವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಪರಿಸರ ಸಮತೋಲನದ ವೆಚ್ಚದಲ್ಲಿ ಅಭಿವೃದ್ಧಿ ಬರಬಾರದು; ಬದಲಾಗಿ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ನೀತಿಗಳು ಪರಿಸರ ಜವಾಬ್ದಾರಿ, ದೀರ್ಘಕಾಲೀನ ಸುಸ್ಥಿರತೆ ಮತ್ತು ಭವಿಷ್ಯದ ಪೀಳಿಗೆಯ ಹಿತಾಸಕ್ತಿಗಳನ್ನು ರಕ್ಷಿಸುವ ಬಲವಾದ ಬದ್ಧತೆಯಿಂದ ರೂಪುಗೊಳ್ಳಬೇಕು. ಸಮೃದ್ಧ, ಒಳಗೊಳ್ಳುವ ಮತ್ತು ಪರಿಸರ ಸುರಕ್ಷಿತ ಜಗತ್ತನ್ನು ನಿರ್ಮಿಸಲು ಈ ದಿಸೆಯಲ್ಲಿ ಸಾಮೂಹಿಕ ಕ್ರಿಯೆಯು ಅತ್ಯಗತ್ಯ.

ಯುವ ಪೀಳಿಗೆಯ ಭರವಸೆಗಳು ಮತ್ತು ಆಕಾಂಕ್ಷೆಗಳತ್ತ ಗಮನ ಸೆಳೆದ ಶ್ರೀ ಬಿರ್ಲಾ, ಇಂದಿನ ಯುವಕರು ಗುಣಮಟ್ಟದ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನದ ಹೆಚ್ಚುತ್ತಿರುವ ಪ್ರವೇಶವನ್ನು ಹೊಂದಿದ್ದಾರೆ, ಜೊತೆಗೆ ಆವಿಷ್ಕರಿಸಲು, ಶ್ರೇಷ್ಠತೆ ಸಾಧಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಅಪಾರ ಆಸೆಯನ್ನು ಹೊಂದಿದ್ದಾರೆ ಎಂದು ಗಮನಿಸಿದರು. ಅವರ ಆಕಾಂಕ್ಷೆಗಳನ್ನು ಅರ್ಥಪೂರ್ಣ ಅವಕಾಶಗಳು, ಘನತೆ ಮತ್ತು ಅವರ ಪ್ರತಿಭೆಯು ಅರಳುವಂತಹ ಅನುಕೂಲಕರ ವಾತಾವರಣದೊಂದಿಗೆ ಪೂರೈಸಬೇಕು. ಯುವ ಧ್ವನಿಗಳನ್ನು ಆಲಿಸುವುದು, ಅವರ ಭರವಸೆಗಳು ಮತ್ತು ಕಳವಳಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅವರ ಶಕ್ತಿ, ಸೃಜನಶೀಲತೆ ಮತ್ತು ಸಾಮರ್ಥ್ಯಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಜೋಡಿಸಬಹುದಾದ ಮಾರ್ಗಗಳನ್ನು ಸೃಷ್ಟಿಸುವುದು ಸಂಸತ್ತುಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿಹೇಳಿದರು. ಯುವಜನರನ್ನು ಸಶಕ್ತಗೊಳಿಸುವುದು ಕೇವಲ ಅವರ ವೈಯಕ್ತಿಕ ಭವಿಷ್ಯದಲ್ಲಿ ಮಾಡುವ ಹೂಡಿಕೆಯಲ್ಲ, ಬದಲಾಗಿ ರಾಷ್ಟ್ರಗಳ ಸಾಮೂಹಿಕ ಭವಿಷ್ಯದ ಬದ್ಧತೆಯಾಗಿದೆ ಎಂದು ಅವರು ಹೇಳಿದರು.

ಬ್ರಿಕ್ಸ್‌ ಅನ್ನು 'ಪರಿಹಾರಗಳ ವ್ಯವಸ್ಥೆ'ಯಾಗಿ ಪರಿವರ್ತಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಲೋಕಸಭೆ ಸ್ಪೀಕರ್, ಬ್ರಿಕ್ಸ್‌ ವೇದಿಕೆಯ ಯಶಸ್ಸಿನ ನಿಜವಾದ ಮಾಪನ ಕೇವಲ ಅದರ ಚರ್ಚೆಗಳ ವಿಸ್ತಾರದಲ್ಲಿ ಮಾತ್ರವಲ್ಲ, ಅದರ ಸಂವಾದಗಳು  ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದರಲ್ಲಿದೆ ಮತ್ತು ಅವು ಜನರ ಜೀವನದಲ್ಲಿ ಮಾಡುವ ವ್ಯತ್ಯಾಸದಲ್ಲಿದೆ ಎಂದು ಒತ್ತಿಹೇಳಿದರು. ಹಂಚಿಕೆಯ ಭವಿಷ್ಯಕ್ಕಾಗಿ ಭವಿಷ್ಯದ ಕಾರ್ಯಸೂಚಿಯತ್ತ ಶ್ರಮಿಸಲು ಸದಸ್ಯ ದೇಶಗಳ ಸಂಸತ್ತುಗಳಿಗೆ ಅವರು ಕರೆ ನೀಡಿದರು, ಸಂವಾದವು ಕ್ರಿಯೆಯಲ್ಲಿ ಕೊನೆಗೊಳ್ಳುವುದನ್ನು ಮತ್ತು ಸಹಕಾರವು ಅಳೆಯಬಹುದಾದ ಫಲಿತಾಂಶಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಆಗ್ರಹಿಸಿದರು.

ಬ್ರಿಕ್ಸ್‌ ದೇಶಗಳು ತಮ್ಮ ರಾಷ್ಟ್ರೀಯ ಸನ್ನಿವೇಶಗಳು, ಅಭಿವೃದ್ಧಿಯ ಆದ್ಯತೆಗಳು ಮತ್ತು ದೃಷ್ಟಿಕೋನಗಳಲ್ಲಿ ಭಿನ್ನವಾಗಿದ್ದರೂ, ಅವು ಮೂಲಭೂತ ಆಕಾಂಕ್ಷೆಗಳಿಂದ ಒಂದಾಗಿವೆ: ಶಾಂತಿ, ಭದ್ರತೆ, ಪರಸ್ಪರ ಗೌರವ, ಸಮಾನ ಅವಕಾಶಗಳು ಮತ್ತು ತಮ್ಮ ನಾಗರಿಕರಿಗೆ ಉತ್ತಮ ಜೀವನ ಮಟ್ಟ ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ಈ ಹಂಚಿಕೆಯ ಆಕಾಂಕ್ಷೆಗಳು ಆಳವಾದ ತೊಡಗಿಸಿಕೊಳ್ಳುವಿಕೆ ಮತ್ತು ಉದ್ದೇಶಪೂರ್ವಕ ಸಹಕಾರಕ್ಕೆ ಬಲವಾದ ಅಡಿಪಾಯವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಆದ್ದರಿಂದ ಬ್ರಿಕ್ಸ್‌ ಸಂಸದೀಯ ವೇದಿಕೆಯು ಈ ಸಾಮಾನ್ಯ ಗುರಿಗಳ ಅನ್ವೇಷಣೆಯಲ್ಲಿ ವಿಶ್ವಾಸವನ್ನು ನಿರ್ಮಿಸಲು, ತಿಳುವಳಿಕೆಯನ್ನು ಬೆಳೆಸಲು ಮತ್ತು ಸಾಮೂಹಿಕ ಕ್ರಿಯೆಯನ್ನು ಮುನ್ನಡೆಸಲು ಕ್ರಿಯಾತ್ಮಕ ವೇದಿಕೆಯಾಗಿ ಹೊರಹೊಮ್ಮಬೇಕು.

ಚರ್ಚೆಯ ಫಲಿತಾಂಶಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶ್ರೀ ಬಿರ್ಲಾ ಅವರು, 12ನೇ ಬ್ರಿಕ್ಸ್‌ ಸಂಸದೀಯ ವೇದಿಕೆಯು ಸದಸ್ಯ ದೇಶಗಳ ನಡುವಿನ ಸಹಭಾಗಿತ್ವದ ಬಂಧಗಳನ್ನು ಮತ್ತಷ್ಟು ಗಾಢವಾಗಿಸುತ್ತದೆ ಮತ್ತು ಹೆಚ್ಚು ಒಳಗೊಳ್ಳುವ, ಶಾಂತಿಯುತ ಹಾಗೂ ಸುಸ್ಥಿರ ಜಗತ್ತಿನ ಪ್ರಾರಂಭಕ್ಕೆ, ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದರು. ಈ ಚರ್ಚೆಗಳು ಪರಸ್ಪರ ವಿಶ್ವಾಸ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಹೊಸ ವೇಗವನ್ನು ನೀಡುತ್ತವೆ, ಜನಕೇಂದ್ರಿತ ಅಭಿವೃದ್ಧಿಯ ಸಾಮೂಹಿಕ ಬದ್ಧತೆಯನ್ನು ಬಲಪಡಿಸುತ್ತವೆ ಮತ್ತು ಸಾಮಾನ್ಯ ಆಕಾಂಕ್ಷೆಗಳನ್ನು ದೀರ್ಘಕಾಲೀನ ಸಾಧನೆಗಳಾಗಿ ಪರಿವರ್ತಿಸಲು ಬ್ರಿಕ್ಸ್‌ ದೇಶಗಳ ಹಂಚಿಕೆಯ ಸಂಕಲ್ಪವನ್ನು ಬಲಪಡಿಸುತ್ತವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್ ಅವರೂ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭೆಯ ಮಹಾಪ ಕಾರ್ಯದರ್ಶಿಯವರು ಸ್ವಾಗತ ಭಾಷಣ ಮಾಡಿದರು.

 

*****


(ಪ್ರಕಟಣೆ ಐ.ಡಿ.: 2328538) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Tamil