ಪ್ರಕಟಣಾ ದಿನಾಂಕ:
25 OCT 2026 6:31PM by PIB Bengaluru
ಜೈ ಜಗನ್ನಾಥ್.
ಒಡಿಶಾ ರಾಜ್ಯಪಾಲರಾದ ಶ್ರೀ ಬ್ರಜ್ ಮೋಹನ್ ರಾಮ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಜಿ; ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ಶ್ರೀ ಜುವಾಲ್ ಓರಾಮ್ ಜಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ಸಂಜಯ್ ಮಲ್ಹೋತ್ರಾ ಜಿ, ಒಡಿಶಾದ ಉಪಮುಖ್ಯಮಂತ್ರಿಗಳಾದ ಶ್ರೀಮತಿ ಪ್ರವತಿ ಪರಿಡಾ ಜಿ, ಶ್ರೀ ಕನಕ್ ವರ್ಧನ್ ಸಿಂಗ್ ದೇವ್ ಜಿ; ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಗಣ್ಯ ಅತಿಥಿಗಳೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ನಮಸ್ಕಾರ.
ವಾತಾವರಣವೇಕೆ ಇಷ್ಟೊಂದು ಗಂಭೀರವಾಗಿದೆ? ಬ್ಯಾಂಕಿಂಗ್ ವಲಯದಲ್ಲಿ ಅಷ್ಟೊಂದು ಒತ್ತಡವಿದೆಯೇ, ಅಥವಾ ತಂತ್ರಜ್ಞಾನದಲ್ಲಿ ಅಷ್ಟೊಂದು ಒತ್ತಡವಿದೆಯೇ? ದಯವಿಟ್ಟು ಆರಾಮವಾಗಿ ಕುಳಿತುಕೊಳ್ಳಿ.
ಮಹಾಪ್ರಭುವಿನ ಆಶೀರ್ವಾದದೊಂದಿಗೆ ಇಂದು ಭುವನೇಶ್ವರವು 'ನವ ಭಾರತ' ಕಟ್ಟಲು ಒಂದು ಹೊಸ ಸಂಸ್ಥೆಯನ್ನು ಸಮರ್ಪಿಸುತ್ತಿದೆ. ಭುವನೇಶ್ವರದಲ್ಲಿ ಆರ್ಬಿಐ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಗಳ ಉದ್ಘಾಟನೆಯು ಒಂದು ಮಹತ್ವದ ಸಂದರ್ಭವಾಗಿದೆ. ಇದು ಒಡಿಶಾದ ಜನರಿಗೆ ಮತ್ತು ಇಡೀ ದೇಶಕ್ಕೆ ಅಪಾರ ಪ್ರಯೋಜನಗಳನ್ನು ನೀಡಲಿದೆ. ಆರ್ಬಿಐಗೆ ಮತ್ತು ಈ ಯೋಜನೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರಿಗೂ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದಿನ ಈ ಕಾರ್ಯಕ್ರಮವು ಭಾರತದಲ್ಲಿ ಆಡಳಿತ ವಿಧಾನವು ಹೇಗೆ ಬದಲಾಗುತ್ತಿದೆ ಮತ್ತು ಎಷ್ಟು ವೇಗವಾಗಿ ವಿಕಸನಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ನಮ್ಮ ಗಮನವು ಮುಖ್ಯವಾಗಿ ಇವುಗಳ ಮೇಲಿದೆ: ಅಭಿವೃದ್ಧಿಗೆ ಆದ್ಯತೆ, ಅಭಿವೃದ್ಧಿಯ ವಿಸ್ತರಣೆ ಮತ್ತು ಅಭಿವೃದ್ಧಿಯ ಫಲವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದಾಗಿದೆ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರ, ದೇಶದಲ್ಲಿ ದೊಡ್ಡ ನಗರಗಳನ್ನು ಅಭಿವೃದ್ಧಿಪಡಿಸಲಾಯಿತು, ಭವ್ಯ ಸಂಸ್ಥೆಗಳನ್ನು ಸ್ಥಾಪಿಸಲಾಯಿತು, ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಲಾಯಿತು, ಬೃಹತ್ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಯಿತು. ಆದರೂ, ದೇಶದ ಒಂದು ದೊಡ್ಡ ವರ್ಗವು ಮೂಲಭೂತ ಸೌಕರ್ಯಗಳಿಗಾಗಿ ಕಾಯುತ್ತಲೇ ಇತ್ತು. ದೆಹಲಿಯಲ್ಲಿ ದೊಡ್ಡ ಆಸ್ಪತ್ರೆಗಳಿದ್ದವು, ಆದರೆ ಸಣ್ಣ ನಗರಗಳು ಮತ್ತು ದೂರದ ಪ್ರದೇಶಗಳ ಜನರು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಪ್ರಯಾಣಿಸಬೇಕಾದ ಗಂಭೀರ ಪರಿಸ್ಥಿತಿ ಇತ್ತು. ದೊಡ್ಡ ನಗರಗಳಲ್ಲಿ ವಿಮಾನ ಪ್ರಯಾಣದ ಸೌಲಭ್ಯಗಳಿದ್ದವು, ಆದರೆ ಸಣ್ಣ ಪಟ್ಟಣಗಳನ್ನು ವಿಮಾನ ಸಂಪರ್ಕ ನೀಡಲು ಸಾಕಷ್ಟು ಗಮನ ಹರಿಸಲಾಗಿರಲಿಲ್ಲ. ದೊಡ್ಡ ನಗರಗಳಲ್ಲಿ ಕೆಲವು ಸೌಲಭ್ಯಗಳಿದ್ದವು, ಆದರೆ ಅನೇಕ ಹಳ್ಳಿಗಳಲ್ಲಿ ರಸ್ತೆ, ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಅಗತ್ಯಗಳನ್ನು ಪೂರೈಸುವುದು ದೊಡ್ಡ ಸವಾಲಾಗಿತ್ತು. ಸಾಮಾನ್ಯ ನಾಗರಿಕರ ಪ್ರಯಾಣದಲ್ಲಿ ರೈಲು ನಿಲ್ದಾಣಗಳು ಅತ್ಯಂತ ಪ್ರಮುಖ ಕೊಂಡಿಯಾಗಿದ್ದವು, ಆದರೂ ಅಲ್ಲಿ ಆಧುನಿಕ ಸೌಲಭ್ಯಗಳ ಕೊರತೆಯಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಂದು ಪ್ರದೇಶಕ್ಕೂ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾಗಿ ತಲುಪುವಂತೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ನಾವು ಈ ಮನಸ್ಥಿತಿಯನ್ನೇ ಬದಲಾಯಿಸಲು ಪ್ರಯತ್ನಿಸಿದೆವು. ನಾವು 'ಜನಪರ, ಕ್ರಿಯಾಶೀಲ ಮತ್ತು ಉತ್ತಮ ಆಡಳಿತ' ಮಾದರಿಯೊಂದಿಗೆ ಮುಂದುವರಿದೆವು. ನಮ್ಮ ಪಾಲಿಗೆ, ಅಭಿವೃದ್ಧಿ ಎಂದರೆ ಇಡೀ ಭಾರತದಲ್ಲಿ ಸಮತೋಲಿತ ಪ್ರಗತಿ, ಅಂದರೆ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು. ದೂರದ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸುವುದು, ಹಿಂದುಳಿದ ಕುಟುಂಬಗಳು ಘನತೆಯಿಂದ ಬದುಕಲು ಸೌಲಭ್ಯಗಳನ್ನು ಕಲ್ಪಿಸುವುದು. ಅಭಿವೃದ್ಧಿಯ ಪಯಣದಲ್ಲಿ ಯಾರೂ ಹಿಂದೆ ಉಳಿಯುವುದಿಲ್ಲ ಎಂಬ ವಿಶ್ವಾಸವನ್ನು ಪ್ರತಿಯೊಬ್ಬ ನಾಗರಿಕನಲ್ಲೂ ಮೂಡಿಸುವುದು ನಮ್ಮ ಗುರಿಯಾಗಿದೆ. ಆದರೆ ಇಂದು, ದೇಶದ ಎಕ್ಸ್ಪ್ರೆಸ್ವೇಗಳು ಸಣ್ಣ ನಗರಗಳನ್ನು ಪರಸ್ಪರ ಜೋಡಿಸುತ್ತಿವೆ. ಏಮ್ಸ್ ನಂತಹ ಪ್ರಮುಖ ಸಂಸ್ಥೆಗಳು ಅನೇಕ ರಾಜ್ಯಗಳಿಗೆ ವಿಸ್ತರಿಸಿವೆ. ಸಣ್ಣ ಪಟ್ಟಣಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ಹಳ್ಳಿಗಳಲ್ಲಿ ಸುಮಾರು 1.75 ಲಕ್ಷ 'ಆಯುಷ್ಮಾನ್ ಆರೋಗ್ಯ ಮಂದಿರ'ಗಳನ್ನು ಸ್ಥಾಪಿಸಲಾಗಿದೆ. ಡಿಜಿಟಲ್ ಸಂಪರ್ಕವು ದೂರದ ಪ್ರದೇಶಗಳಿಗೂ ವಿಸ್ತರಿಸುತ್ತಿದೆ. ಇದೇ ಈಗ ಆಡಳಿತದ ನಿಜವಾದ ಉದ್ದೇಶವಾಗಿದೆ. ನಾಗರಿಕರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಆಕಾಂಕ್ಷೆಗಳಿಗೆ ಹೊಸ ದಾರಿಗಳನ್ನು ತೆರೆದುಕೊಡುವುದು ನಮ್ಮ ಗುರಿಯಾಗಿದೆ.
ಸ್ನೇಹಿತರೆ,
ಸಾಮಾನ್ಯ ಕುಟುಂಬಗಳು, ಬಡವರು ಮತ್ತು ಮಧ್ಯಮ ವರ್ಗದವರು ದಶಕಗಳ ಕಾಲ ಹೇಗೆ ವಂಚಿತರಾಗಿದ್ದರು ಎಂಬುದಕ್ಕೆ ನಮ್ಮ ಬ್ಯಾಂಕಿಂಗ್ ವಲಯವೇ ಒಂದು ಪ್ರಮುಖ ಉದಾಹರಣೆಯಾಗಿದೆ. 1960 ಮತ್ತು 70ರ ದಶಕಗಳಲ್ಲಿ, ಬಡವರ ಹೆಸರಿನಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೂ, 2014ರ ವರೆಗೂ ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿತ್ತು. ಮಧ್ಯಮ ವರ್ಗದವರಿಗೂ ಬ್ಯಾಂಕ್ ಸಾಲದಂತಹ ಆರ್ಥಿಕ ಸೌಲಭ್ಯಗಳು ಮರೀಚಿಕೆಯಾಗಿದ್ದವು. ಇನ್ನು ಬಡವರು, ಸಣ್ಣ ರೈತರು, ಭೂಮಿಯಿಲ್ಲದವರು, ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಂತೂ ಇಂತಹ ಸೌಲಭ್ಯಗಳನ್ನು ಪಡೆಯುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಇಂದು, ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಎಲ್ಲರನ್ನೂ ದಿನದ 24 ಗಂಟೆಯೂ ಲಭ್ಯವಿರುವ ಆರ್ಥಿಕ ಸೇವೆಗಳೊಂದಿಗೆ ಸಂಪರ್ಕಿಸಿದೆ. ಆದರೆ 2014ಕ್ಕೂ ಮೊದಲು, 'ಫೋನ್ ಬ್ಯಾಂಕಿಂಗ್' ಎಂಬ ಸಂಪೂರ್ಣ ಭಿನ್ನವಾದ ಯುಗವಿತ್ತು. ದೆಹಲಿಯ ಕೆಲವೇ ಕೆಲವು ಆಯ್ದ ವ್ಯಕ್ತಿಗಳಿಗೆ ಮತ್ತು ಪ್ರಭಾವಿ ವಲಯಗಳೊಂದಿಗೆ ನಂಟು ಹೊಂದಿದ್ದವರಿಗೆ, ಕೇವಲ ಫೋನ್ ಕರೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಲಾಗುತ್ತಿತ್ತು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಒಂದು ಬ್ಯಾಂಕ್ ಖಾತೆ ತೆರೆಯಲು ಕೂಡ ಒಬ್ಬ ಜಾಮೀನುದಾರನ ಅಗತ್ಯವಿರುತ್ತಿತ್ತು. ಆದರೆ ಕಾಂಗ್ರೆಸ್ನ ಈ 'ಫೋನ್ ಬ್ಯಾಂಕಿಂಗ್' ವ್ಯವಸ್ಥೆಯಲ್ಲಿ, ಶ್ರೀಮಂತರಿಗೆ ಸಾವಿರಾರು ಕೋಟಿ ರೂಪಾಯಿ ಯಾವಾಗ ಬೇಕಾದರೂ ಲಭ್ಯವಿರುತ್ತಿತ್ತು. ಇಂತಹ ದುರಾಡಳಿತದ ಪರಿಣಾಮವಾಗಿಯೇ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಎನ್ಪಿಎ(ಅನುತ್ಪಾದಕ ಆಸ್ತಿ)ಗಳ ಸುಳಿಗೆ ಸಿಲುಕಿ, ಸಂಪೂರ್ಣ ನಾಶದ ಅಂಚಿಗೆ ತಲುಪಿತ್ತು.
ಸ್ನೇಹಿತರೆ,
ಯಾವುದೇ ಮಹತ್ತರ ಬದಲಾವಣೆಗೆ ವಿಶಾಲವಾದ ದೃಷ್ಟಿಕೋನ ಅತ್ಯಗತ್ಯ. ಉದ್ದೇಶಗಳು ಪರಿಶುದ್ಧವಾಗಿದ್ದಾಗ, ಗುರಿಗಳು ಉದಾತ್ತವಾಗಿದ್ದಾಗ, ಅಸಾಧ್ಯವೆಂದು ತೋರುವ ಕೆಲಸಗಳೂ ನನಸಾಗುತ್ತವೆ. ದೃಷ್ಟಿಕೋನ ಸಂಕುಚಿತವಾಗಿದ್ದರೆ, ಅವಕಾಶಗಳೂ ಸೀಮಿತಗೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ದೇಶವು ರೂಪಿಸಿರುವ ವ್ಯವಸ್ಥೆಗಳು ಮತ್ತು 'ಡಿಜಿಟಲ್ ಇಂಡಿಯಾ'ದ ಅಡಿ ಅಭಿವೃದ್ಧಿಪಡಿಸಲಾದ ಹೊಸ ಪರಿಸರ ವ್ಯವಸ್ಥೆಯು, ಬ್ಯಾಂಕಿಂಗ್ ಸೇವೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸಿದೆ. ಇಂದು ಭಾರತದ ಬ್ಯಾಂಕಿಂಗ್ ವಲಯವು ವಿಶ್ವದ ಅತ್ಯಂತ ಬಲಶಾಲಿ ವ್ಯವಸ್ಥೆಗಳಲ್ಲಿ ಒಂದಾಗಿ ನಿಂತಿದೆ. ಹಿಂದೆ, 'ಫೋನ್ ಬ್ಯಾಂಕಿಂಗ್' ಮೂಲಕ ದೆಹಲಿಯ ಪ್ರಭಾವಿ ಕುಟುಂಬಗಳೊಂದಿಗೆ ನಂಟು ಹೊಂದಿದ್ದವರು ಮಾತ್ರ ಲಾಭ ಪಡೆಯುತ್ತಿದ್ದರು. ಆದರೆ ಇಂದು, ಡಿಜಿಟಲ್ ಬ್ಯಾಂಕಿಂಗ್ ಮೂಲಕ ದೇಶದ ಪ್ರತಿಯೊಂದು ಮನೆಯೂ ಇದರ ಫಲಾನುಭವಿಯಾಗಿದೆ.
ಸ್ನೇಹಿತರೆ,
ಒಡಿಶಾದ ಇದೇ ನೆಲದಿಂದ, ದೇಶದ ಮಾಜಿ ಪ್ರಧಾನಿಯೊಬ್ಬರು ಒಮ್ಮೆ ಹೀಗೆ ಹೇಳಿದ್ದರು: "ದೆಹಲಿಯಿಂದ ಒಂದು ರೂಪಾಯಿ ಕಳುಹಿಸಿದರೆ, ಜನರಿಗೆ ತಲುಪುವಾಗ ಕೇವಲ 15 ಪೈಸೆ ಮಾತ್ರ ಸೇರುತ್ತದೆ." ಇದು ಸ್ವತಃ ಒಬ್ಬ ಪ್ರಧಾನಿಯವರೇ ನೀಡಿದ ಹೇಳಿಕೆಯಾಗಿತ್ತು. ಅದು ಒಂದು ಕಾಲಘಟ್ಟವಾಗಿತ್ತು, ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಇಂದು ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ, ಆ ಪೂರ್ಣ ಒಂದು ರೂಪಾಯಿ ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆ ತಲುಪುತ್ತದೆ. ನಿರ್ಮಲಾ ಜಿ ಅವರು ಈಗಷ್ಟೇ ಹೇಳಿದಂತೆ, ದೇಶದಲ್ಲಿ ತೆರೆಯಲಾದ ಸುಮಾರು 59ರಿಂದ 60 ಕೋಟಿ 'ಜನ್ ಧನ್' ಖಾತೆಗಳಿಂದಾಗಿ ಮಾತ್ರ ಇದು ಸಾಧ್ಯವಾಗಿದೆ.
ಸ್ನೇಹಿತರೆ,
ಇಂದು ಬ್ಯಾಂಕಿಗೆ ನೀಡಲು ಯಾವುದೇ ಭದ್ರತೆ ಇಲ್ಲದ ವ್ಯಕ್ತಿಯೂ ಕೂಡ, ತನ್ನ ಸ್ವಂತ ಉದ್ಯಮ ಪ್ರಾರಂಭಿಸಲು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಸಾಲ ಪಡೆಯಲು ಸಾಧ್ಯವಾಗಿದೆ. ಸಣ್ಣ ಉದ್ಯಮಿಗಳಿಂದ ಹಿಡಿದು ಸಾಂಪ್ರದಾಯಿಕ ಕುಶಲಕರ್ಮಿಗಳವರೆಗೆ, ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಅಸಂಘಟಿತ ವಲಯದ ಕಾರ್ಮಿಕರವರೆಗೆ - ಇವರೆಲ್ಲರೂ ಮೊದಲ ಬಾರಿಗೆ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆದಿದ್ದಾರೆ. 'ಮುದ್ರಾ ಯೋಜನೆ'ಯ ಮೂಲಕ 13 ಕೋಟಿ ಜನರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ. 'ಪಿಎಂ ಸ್ವನಿಧಿ' ಯೋಜನೆಯು ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಬಾರಿಗೆ ಸಾಲ ಸೌಲಭ್ಯ ಒದಗಿಸಿದೆ. 'ಪಿಎಂ ವಿಶ್ವಕರ್ಮ' ಯೋಜನೆಯು ಲಕ್ಷಾಂತರ ನುರಿತ ಕುಶಲಕರ್ಮಿಗಳನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ 10 ಕೋಟಿ ಮಹಿಳೆಯರನ್ನು ಒಳಗೊಂಡ ಸ್ವಸಹಾಯ ಗುಂಪುಗಳಿಗೆ ಬ್ಯಾಂಕುಗಳು ಸಾವಿರಾರು ಕೋಟಿ ರೂಪಾಯಿ ನೆರವು ನೀಡಿವೆ.
ಸ್ನೇಹಿತರೆ,
ಇದು ಅದೇ ದೇಶ, ಇಲ್ಲಿ ಒಂದು ಕಾಲದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು, ಇವು ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಿವೆ. ದೇಶದಲ್ಲಿ ಕೋಟ್ಯಂತರ 'ರೂಪೇ' ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಇವು ಇಂದು ಆತ್ಮಗೌರವ ಮತ್ತು ಸ್ವಾವಲಂಬನೆಯ ಸಂಕೇತಗಳಾಗಿವೆ. ಇವೆಲ್ಲವೂ ನಿಮ್ಮೆಲ್ಲರ ಸಾಮೂಹಿಕ ಸಹಕಾರದಿಂದ ಸಾಧ್ಯವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಗಿರಲಿ, ದೇಶದ ಪ್ರತಿಯೊಂದು ಬ್ಯಾಂಕ್ ಆಗಿರಲಿ ಅಥವಾ ಅಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಬ್ಯಾಂಕ್ ಉದ್ಯೋಗಿಯಾಗಿರಲಿ - ನೀವೆಲ್ಲರೂ ಮಾಡಿರುವ ಕೆಲಸವೇ ಈ ಯಶಸ್ಸಿಗೆ ನೀವು ನಿಜವಾಗಿಯೂ ಅರ್ಹರು ಎಂಬುದನ್ನು ಸಾಬೀತುಪಡಿಸುತ್ತದೆ.
ಸ್ನೇಹಿತರೆ,
ಕಳೆದ ಒಂದು ದಶಕದಲ್ಲಿ, ಆರ್ಥಿಕ ಸಬಲೀಕರಣದ ಜತೆಗೆ, ಸಾಮಾಜಿಕ ಭದ್ರತಾ ವ್ಯವಸ್ಥೆಯೂ ಹಿಂದೆಂದೂ ಕಾಣದಷ್ಟು ವಿಸ್ತರಣೆಗೊಂಡಿದೆ. 'ಅಟಲ್ ಪಿಂಚಣಿ ಯೋಜನೆ' ಮೂಲಕ 9 ಕೋಟಿ ಜನರು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಬಂದಿದ್ದಾರೆ. ಇದರಲ್ಲಿ ಕೇವಲ ಒಡಿಶಾದಲ್ಲೇ 38 ಲಕ್ಷ ಜನರು ಸೇರಿದ್ದಾರೆ. ಸುಮಾರು 10ರಿಂದ 12 ವರ್ಷಗಳ ಹಿಂದೆ, ವಿಮೆ ಎನ್ನುವುದು ಒಂದು ಐಷಾರಾಮಿ ವಿಷಯವೆಂದು ಪರಿಗಣಿಸಲ್ಪಡುತ್ತಿತ್ತು. ಬಡವರು ಮತ್ತು ಮಧ್ಯಮ ವರ್ಗದವರು ಇದರ ಬಗ್ಗೆ ಯೋಚಿಸುವುದು ಕೂಡ ಕಷ್ಟಕರವಾಗಿತ್ತು. ನಮಗೆ, 'ನಾಗರಿಕ್ ದೇವೋ ಭವ' ಎಂಬುದು ಮೂಲ ಮಂತ್ರವಾಗಿದೆ. ಅಪಘಾತಗಳ ಸಂದರ್ಭದಲ್ಲಿ ರಕ್ಷಣೆ ಒದಗಿಸಲು ನಾವು 'ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ' ಜಾರಿಗೆ ತಂದೆವು. ವರ್ಷಕ್ಕೆ ಕೇವಲ 20 ರೂ. ಅತ್ಯಲ್ಪ ಕಂತು ಪಾವತಿಸುವ ಮೂಲಕ 2 ಲಕ್ಷ ರೂ.ವರೆಗೆ ವಿಮಾ ರಕ್ಷಣೆ ಒದಗಿಸಲಾಗುತ್ತಿದೆ. ಅದೇ ರೀತಿ, ಜೀವ ವಿಮೆಗಾಗಿ ನಾವು 'ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ' ಪರಿಚಯಿಸಿದೆವು. ಇದಕ್ಕೆ ವಾರ್ಷಿಕ ಕಂತು 450 ರೂ.ಗಿಂತಲೂ ಕಡಿಮೆ ಇದೆ. ಕೋಟ್ಯಂತರ ಭಾರತೀಯರು ಈ ಎರಡೂ ಯೋಜನೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ 25,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕ್ಲೈಮ್ಗಳ ರೂಪದಲ್ಲಿ ವಿತರಿಸಲಾಗಿದೆ. ಒಂದು ವೇಳೆ ಬೇರೆ ಯಾವುದೇ ಸರ್ಕಾರವು 25,000 ಕೋಟಿ ರೂ. ವಿತರಿಸುವುದಾಗಿ ಘೋಷಿಸಿದ್ದರೆ, ಅದು ದೊಡ್ಡ ಸುದ್ದಿಯಾಗುತ್ತಿತ್ತು, ತಿಂಗಳುಗಟ್ಟಲೆ ಸಂಭ್ರಮಾಚರಣೆಗಳು ಹಾಗೂ ಪ್ರಚಾರಗಳು ನಡೆಯುತ್ತಿದ್ದವು. ಆದರೆ, ನಮ್ಮ ಆಡಳಿತದಲ್ಲಿ, ಕಷ್ಟದ ಸಮಯದಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಈ ನೆರವು ಯಾವುದೇ ಆಡಂಬರವಿಲ್ಲದೆ, ಮೌನವಾಗಿ ತಲುಪುತ್ತಿದೆ. ಇದನ್ನೇ 'ಸುಶಾಸನ' ಎಂದು ಕರೆಯಲಾಗುತ್ತದೆ.
ಸ್ನೇಹಿತರೆ,
ಕಳೆದ ದಶಕವು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿದ್ದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವತ್ತ ಗಮನ ಹರಿಸಿತ್ತು. ಮುಂಬರುವ ದಶಕವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ದಕ್ಷ ಮತ್ತು ವಿಶ್ವಾಸಾರ್ಹವಾಗಿಸುವತ್ತ ಸಾಗಲಿದೆ. ಈ ಪ್ರಯತ್ನದಲ್ಲಿ, ಒಡಿಶಾದಲ್ಲಿ ಸ್ಥಾಪಿಸಲಾದ ಈ ಹೊಸ 'ಡೇಟಾ ಸೆಂಟರ್' ಪ್ರಮುಖ ಪಾತ್ರ ವಹಿಸಲಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಬೇಕಾದರೆ, ಅದರ ಡಿಜಿಟಲ್ ಮೂಲಸೌಕರ್ಯವೂ ಸುರಕ್ಷಿತವಾಗಿರುವುದು ಅತ್ಯಗತ್ಯ. ಈ ಕಾರಣಕ್ಕಾಗಿ, ನಮಗೆ ಬಲಿಷ್ಠ ದತ್ತಾಂಶ ಕೇಂದ್ರಗಳು ಮತ್ತು ಸಬಲೀಕೃತ ಕಂಪ್ಯೂಟಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ.
ಮತ್ತು ಸ್ನೇಹಿತರೆ,
ಆಧುನಿಕ ಯುದ್ಧವು ಕೇವಲ ಶಸ್ತ್ರಾಸ್ತ್ರಗಳಿಂದಲೇ ನಡೆಯುವುದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಒಂದು ದೇಶದ ಆರ್ಥಿಕತೆಯ ಮೇಲೆ ದಾಳಿ ಮಾಡುವ ಮೂಲಕವೂ ಅದನ್ನು ದುರ್ಬಲಗೊಳಿಸಲು ಪ್ರಯತ್ನಿಸಬಹುದು. ಭಾರತವು ಆರ್ಥಿಕವಾಗಿ ಬಲಗೊಳ್ಳುತ್ತಿರುವಾಗ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ಅಪರಾಧಿಗಳು ಮತ್ತು ಸೈಬರ್ ಭಯೋತ್ಪಾದಕರಿಂದ ರಕ್ಷಿಸುವುದು ಅಷ್ಟೇ ಅತ್ಯಗತ್ಯವಾಗಿದೆ. ಇಂದಿನ ದಿನಗಳಲ್ಲಿ ಸೈಬರ್ ಬೆದರಿಕೆಗಳ ಸ್ವರೂಪ ಬದಲಾಗುತ್ತಿದೆ. ಹಳೆಯ ವ್ಯವಸ್ಥೆಗಳು, ಹಳತಾದ ತರಬೇತಿ ವಿಧಾನಗಳು ಅಥವಾ ಪುರಾತನ ಉಪಕರಣಗಳನ್ನು ಬಳಸಿಕೊಂಡು ಇಂತಹ ಹೊಸ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಇದಕ್ಕೆ ಆಧುನಿಕ ಮೂಲಸೌಕರ್ಯದ ಜೊತೆಗೆ ನುರಿತ ಮಾನವ ಸಂಪನ್ಮೂಲದ ಅಗತ್ಯವಿದೆ. ಈ ನಿಟ್ಟಿನಲ್ಲಿ, ಈ ಹೊಸ 'ಸೈಬರ್ ಭದ್ರತಾ ತರಬೇತಿ ಸಂಸ್ಥೆ'ಯ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ.
ಸ್ನೇಹಿತರೆ,
ಭಾರತೀಯ ರಿಸರ್ವ್ ಬ್ಯಾಂಕ್ನ ಈ ಹೊಸ ಸೌಲಭ್ಯಗಳು ಭಾರತದ ಹೊಸ ಆದ್ಯತೆಯನ್ನು ಪ್ರತಿಬಿಂಬಿಸುತ್ತವೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ, ಪೂರ್ವ ಭಾರತವು ಒಂದು ಪ್ರಬಲ 'ಬೆಳವಣಿಗೆಯ ಎಂಜಿನ್' ಆಗಿ ಹೊರಹೊಮ್ಮುತ್ತಿದೆ. ಒಡಿಶಾದಲ್ಲಿ 'ಡಬಲ್-ಇಂಜಿನ್' ಸರ್ಕಾರ ರಚನೆಯಾದ ನಂತರ, ಅಲ್ಲಿನ ಪ್ರಗತಿಯು ಹೊಸ ವೇಗ ಪಡೆದುಕೊಂಡಿದೆ. ನೈಸರ್ಗಿಕ ಸಂಪನ್ಮೂಲಗಳ ಜತೆಗೆ, ಈಗ ತಂತ್ರಜ್ಞಾನದ ಮೂಲಕವೂ ಒಡಿಶಾದ ಆರ್ಥಿಕತೆಯನ್ನು ಬಲಪಡಿಸಲಾಗುತ್ತಿದೆ. ಒಂದು ಕಡೆ ಖನಿಜ ಆಧಾರಿತ ಕೈಗಾರಿಕೆಗಳು ವಿಸ್ತರಿಸುತ್ತಿದ್ದರೆ, ಇನ್ನೊಂದು ಕಡೆ ಸೆಮಿಕಂಡಕ್ಟರ್ಗಳು ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕಾಗಿ ಹೊಸ ಪರಿಸರ ವ್ಯವಸ್ಥೆ ರೂಪಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಗಣಿಗಳಿಂದ ಹಿಡಿದು ಮೈಕ್ರೋಚಿಪ್ಗಳವರೆಗೆ, ಒಡಿಶಾ ಒಂದು ಹೊಸ ಭವಿಷ್ಯ ರೂಪಿಸಲು ಸಜ್ಜಾಗಿದೆ ಎಂಬುದನ್ನು ನೀವು ಕಾಣಬಹುದು. ಡೇಟಾ ಸೆಂಟರ್ಗಳು ಮತ್ತು ಸುಧಾರಿತ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಒಡಿಶಾದಲ್ಲಿ ಹೊಸ ಹೂಡಿಕೆಯ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಇದು ಅಲ್ಲಿನ ಯುವ ಜನರಿಗೆ ಅನೇಕ ದಾರಿಗಳನ್ನು ತೆರೆದುಕೊಡುತ್ತಿದೆ. ಒಡಿಶಾದ ಯುವಜನರಿಗೆ ನಾನು ಭರವಸೆ ನೀಡುತ್ತೇನೆ - ನೀವು ಕಂಡ ದೊಡ್ಡ ಕನಸುಗಳು ಖಂಡಿತವಾಗಿಯೂ ನನಸಾಗುತ್ತವೆ. ನಾವು ಇದನ್ನು ಸಾಧಿಸುತ್ತೇವೆ, ಇದನ್ನು ಸಾಧಿಸಲು ನಾವು ದೃಢಸಂಕಲ್ಪ ಹೊಂದಿದ್ದೇವೆ. ಇದೇ ಉತ್ಸಾಹದೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಎಲ್ಲರಿಗೂ ಶುಭವಾಗಲಿ.
ಜೈ ಜಗನ್ನಾಥ್!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಮೂಲತಃ ಅವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****