ಪ್ರಕಟಣಾ ದಿನಾಂಕ:
22 OCT 2026 4:40PM by PIB Bengaluru
ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು, 2026 ರ ಸೆಪ್ಟೆಂಬರ್ 1-2 ರಂದು ನಡೆದ 'ನೀರಿನ ಕುರಿತಾದ ಇಲಾಖಾ ಶೃಂಗಸಭೆ 2026'ರ ಮುಂದುವರಿದ ಭಾಗವಾಗಿ ಆಯೋಜಿಸಲಾಗುತ್ತಿರುವ ವಿಷಯಾಧಾರಿತ ಸಮಾಲೋಚನೆಗಳ ಸರಣಿಯ ಭಾಗವಾಗಿ ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಾಲ್ಕನೇ ವರ್ಚುವಲ್ ಸಮಾವೇಶವನ್ನು ಆಯೋಜಿಸಿತು. ಈ ಸಮಾವೇಶವು ಜಲ ಮೂಲಗಳ ಸುಸ್ಥಿರತೆ, ಜಲ ಭದ್ರತೆ ಮತ್ತು ಗ್ರಾಮೀಣ ಕುಡಿಯುವ ನೀರಿನ ಸುಸ್ಥಿರ ಸೇವಾ ವಿತರಣೆಗಾಗಿ ಗ್ರಾಮ ಪಂಚಾಯತ್ ನೇತೃತ್ವದ ಯೋಜನೆಯನ್ನು ಮುನ್ನಡೆಸಲು 'ಜಲ ಜೀವನ್ ಮಿಷನ್ 2.0' ಮತ್ತು 16ನೇ ಹಣಕಾಸು ಆಯೋಗದ ನಡುವಿನ ಸಂಯೋಜನೆಯನ್ನು ಬಲಪಡಿಸುವುದರ ಮೇಲೆ ಗಮನ ಹರಿಸಿತು.
ಈ ವರ್ಚುವಲ್ ಸಮಾವೇಶದಲ್ಲಿ ರಾಜ್ಯ ಪಿಎಚ್ಇಡಿ/ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗಳು, ಪಂಚಾಯತ್ ರಾಜ್ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಭಾರತ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರದ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ, ಒಡಿಶಾ ಮತ್ತು ಮಧ್ಯಪ್ರದೇಶ ಸೇರಿದಂತೆ ರಾಜ್ಯಗಳ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗಳು ಗ್ರಾಮೀಣ ನೀರು ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸಲು, ಕಾರ್ಯಚಟುವಟಿಕೆ ಮತ್ತು ನಿರ್ವಹಣೆ ವ್ಯವಸ್ಥೆಗಳನ್ನು ಸುಧಾರಿಸಲು, ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳನ್ನು ಬಲಪಡಿಸಲು ಹಣಕಾಸು ಆಯೋಗದ ಅನುದಾನವನ್ನು ಸದುಪಯೋಗಪಡಿಸಿಕೊಳ್ಳುವ ಅತ್ಯುತ್ತಮ ಅಭ್ಯಾಸಗಳು ಹಾಗೂ ಕ್ಷೇತ್ರ ಅನುಭವಗಳನ್ನು ಹಂಚಿಕೊಂಡವು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, ಜೆಜೆಎಮ್ 2.0 ರ ವಿಸ್ತರಣೆಯೊಂದಿಗೆ, ಗಮನವು ಈಗ ಮೂಲಸೌಕರ್ಯ ನಿರ್ಮಾಣದಿಂದ ಕಾರ್ಯಾಚರಣೆ, ಸುಸ್ಥಿರತೆ ಮತ್ತು ಗುಣಮಟ್ಟದ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳುವತ್ತ ಸಾಗಿದೆ ಎಂದು ಹೇಳಿದರು. ಯಶಸ್ಸನ್ನು ಕೇವಲ ಆಸ್ತಿ ಸೃಷ್ಟಿಯಿಂದ ಅಳೆಯಲು ಸಾಧ್ಯವಿಲ್ಲ, ಬದಲಾಗಿ ಚೆನ್ನಾಗಿ ನಿರ್ವಹಿಸಲ್ಪಟ್ಟ ಮತ್ತು ಆರ್ಥಿಕವಾಗಿ ಸುಸ್ಥಿರ ವ್ಯವಸ್ಥೆಗಳ ಮೂಲಕ ಗ್ರಾಮೀಣ ಮನೆಗಳು, ವಿಶ್ವಾಸಾರ್ಹ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಪಡೆಯುವುದನ್ನು ಖಚಿತಪಡಿಸುವುದರಿಂದ ಮಾತ್ರ ಅಳೆಯಬಹುದು ಎಂದು ಅವರು ಒತ್ತಿಹೇಳಿದರು.

ಗ್ರಾಮೀಣ ನೀರು ಸರಬರಾಜು ನಿರ್ವಹಣೆಯಲ್ಲಿ, ಗ್ರಾಮ ಪಂಚಾಯತ್ಗಳ ಪ್ರಮುಖ ಪಾತ್ರವನ್ನು ಶ್ರೀ ಮೀನಾ ಉಲ್ಲೇಖಿಸಿದರು ಮತ್ತು 73 ನೇ ಸಾಂವಿಧಾನಿಕ ತಿದ್ದುಪಡಿಯು, ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಸ್ಥಳೀಯ ಸ್ವಯಂ ಸರ್ಕಾರಗಳ ಪ್ರಮುಖ ಜವಾಬ್ದಾರಿಗಳಲ್ಲಿ ಒಂದನ್ನಾಗಿ ಮಾಡಿದೆ ಎಂದು ಉಲ್ಲೇಖಿಸಿದರು. ಸಮಗ್ರ ವಾರ್ಷಿಕ ಕಾರ್ಯಚಟುವಟಿಕೆ ಮತ್ತು ನಿರ್ವಹಣೆ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸುವಲ್ಲಿ, ಸೇವಾ ವಿತರಣೆಯನ್ನು ನಿರ್ವಹಿಸುವಲ್ಲಿ ಮತ್ತು ಜೆಜೆಎಮ್ ಹಾಗೂ ಇತರ ಕಾರ್ಯಕ್ರಮಗಳ ಅಡಿಯಲ್ಲಿ ಸೃಷ್ಟಿಸಲಾದ ನೀರು ಪೂರೈಕೆ ಮೂಲಸೌಕರ್ಯಗಳ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್ಗಳು ನಾಯಕತ್ವ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
16ನೇ ಹಣಕಾಸು ಆಯೋಗದ ಚೌಕಟ್ಟನ್ನು ಉಲ್ಲೇಖಿಸಿದ ಅವರು, ಬದ್ಧ ಅನುದಾನಗಳು ತಳಮಟ್ಟದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳ ಸುಸ್ಥಿರತೆಯನ್ನು ಬಲಪಡಿಸಲು ಪ್ರಮುಖ ಅವಕಾಶವನ್ನು ಒದಗಿಸುತ್ತವೆ ಎಂದು ಒತ್ತಿ ಹೇಳಿದರು. 16 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಒಟ್ಟು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ, ಗಮನಾರ್ಹ ಪಾಲನ್ನು ನೀರು ಮತ್ತು ನೈರ್ಮಲ್ಯ ಸಂಬಂಧಿತ ಚಟುವಟಿಕೆಗಳಿಗೆ ಕಾಯ್ದಿರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಅಸ್ತಿತ್ವದಲ್ಲಿರುವ ಆಸ್ತಿಗಳಿಗೆ ನಿರ್ವಹಣೆ ಮತ್ತು ಬೆಂಬಲ ಅಗತ್ಯವಿರುವಾಗ ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಈ ಅನುದಾನಗಳನ್ನು ಪ್ರಥಮವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ, ಜಲ ಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟ ನಿರ್ವಹಣೆ, ಸೇವಾ ವಿತರಣೆ ಸುಧಾರಣೆಗಳು ಮತ್ತು ಸ್ಥಳೀಯ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸಲು ಬಳಸಬೇಕು ಎಂದು ಅವರು ಒತ್ತಿಹೇಳಿದರು.
ಗ್ರಾಮೀಣ ನೀರು ಪೂರೈಕೆ ವ್ಯವಸ್ಥೆಗಳ ಸುಸ್ಥಿರ ಹಣಕಾಸಿನ ಮೂರು ಪ್ರಮುಖ ಆಧಾರ ಸ್ತಂಭಗಳ ಮೇಲೆ, ಕಾರ್ಯದರ್ಶಿಯವರು ಗಮನ ಹರಿಸಿದರು. ಅವುಗಳೆಂದರೆ i. ಹಣಕಾಸು ಆಯೋಗದ ಅನುದಾನದ ಪರಿಣಾಮಕಾರಿ ಬಳಕೆ, ii. ಲಭ್ಯವಿರುವ ಇತರ ಕಾರ್ಯಕ್ರಮಗಳು ಮತ್ತು ಯೋಜನೆಗಳೊಂದಿಗೆ ಸಂಯೋಜನೆ, ಮತ್ತು iii. ಬಳಕೆದಾರರ ಶುಲ್ಕ ಸಂಗ್ರಹಣೆ ವ್ಯವಸ್ಥೆಯನ್ನು ಹಂತ ಹಂತವಾಗಿ ಬಲಪಡಿಸುವುದು.
ಹಲವಾರು ರಾಜ್ಯಗಳ ಯಶಸ್ವಿ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಪುನರಾವರ್ತಿತ O&M ವೆಚ್ಚಗಳನ್ನು ಬೆಂಬಲಿಸುವ ಮತ್ತು ಒಂದೇ ನಿಧಿ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸುಸ್ಥಿರ ಆದಾಯ ಮಾದರಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳು ಮತ್ತು ಗ್ರಾಮ ಪಂಚಾಯತ್ಗಳನ್ನು ಪ್ರೋತ್ಸಾಹಿಸಿದರು. ನೈರ್ಮಲ್ಯ ಮತ್ತು ಘನತ್ಯಾಜ್ಯ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ಗಳ ಹೆಚ್ಚುತ್ತಿರುವ ಪಾತ್ರವನ್ನು ಅವರು ಒತ್ತಿಹೇಳಿದರು ಮತ್ತು ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಹಾಗೂ ನೈರ್ಮಲ್ಯ ಸೇವೆಗಳೆರಡಕ್ಕೂ ಸಮಗ್ರವಾಗಿ ಯೋಜಿಸುವ ಅಗತ್ಯಡಾ ಬಗ್ಗೆ ಅವರು ಒತ್ತಿ ಹೇಳಿದರು. ರಿಪೇರಿ, ಸೋರಿಕೆ ನಿರ್ವಹಣೆ, ಪಂಪ್ ನಿರ್ವಹಣೆ, ಕ್ಲೋರಿನೇಷನ್, ನೀರಿನ ಗುಣಮಟ್ಟದ ಕಾವಲು, ವಿದ್ಯುತ್ ವೆಚ್ಚ ಮತ್ತು ತಡೆರಹಿತ ಸೇವಾ ವಿತರಣೆಗೆ ಅಗತ್ಯವಿರುವ ಸಿಬ್ಬಂದಿ ವ್ಯವಸ್ಥೆಗೆ ಸೂಕ್ತ ನಿಬಂಧನೆಗಳನ್ನು ಮಾಡಬೇಕು ಎಂದು ಅವರು ಉಲ್ಲೇಖಿಸಿದರು.
ಸಾಮರ್ಥ್ಯ ವೃದ್ಧಿಯನ್ನು ನಿರ್ಣಾಯಕ ಅಗತ್ಯವೆಂದು ಒತ್ತಿಹೇಳಿದ ಶ್ರೀ ಮೀನಾ ಅವರು, ಪಂಚಾಯತ್ ಪ್ರತಿನಿಧಿಗಳು ಮತ್ತು ಸ್ಥಳೀಯ ಸಿಬ್ಬಂದಿಗೆ ತರಬೇತಿ ನೀಡಲು ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ ಮತ್ತು ಇತರ ಕಾರ್ಯಕ್ರಮಗಳ ಅಡಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ಕರೆ ನೀಡಿದರು. ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಪಿಡಿಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸಲು ಮತ್ತು ಪ್ರಸಾರ ಮಾಡಲು ಹಾಗೂ ಪಂಚಾಯತ್ಗಳು ಹಣಕಾಸು ಆಯೋಗದ ಚೌಕಟ್ಟಿನಡಿಯಲ್ಲಿ ಅನುಮತಿಸಲಾದ ಚಟುವಟಿಕೆಗಳು, ನಿಧಿ ವ್ಯವಸ್ಥೆಗಳು ಮತ್ತು ವರದಿ ಅಗತ್ಯತೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅವರು ರಾಜ್ಯಗಳನ್ನು ಆಗ್ರಹಿಸಿದರು.
ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯವನ್ನು ಬಲಪಡಿಸಲು ಅವರು ಕರೆ ನೀಡಿದರು. ಜೆಜೆಎಮ್ 2.0, ವಿಬಿ-ಜಿ ರಾಮ್ ಜಿ (VB-G RAM G), ಮತ್ತು 16ನೇ ಹಣಕಾಸು ಆಯೋಗದ ಚಕ್ರದ ಏಕಕಾಲಿಕ ಅನುಷ್ಠಾನವು ಸಂಯೋಜಿತ ಯೋಜನೆ ಮತ್ತು ಸಂಘಟಿತ ಅನುಷ್ಠಾನದ ಮೂಲಕ ಸುಸ್ಥಿರ ಜಲ ಆಡಳಿತವನ್ನು ಸಾಂಸ್ಥಿಕಗೊಳಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಎನ್ಜೆಜೆಎಮ್ ಉಪ ಕಾರ್ಯದರ್ಶಿ ಶ್ರೀಮತಿ ಕೃತಿಕಾ ಕುಲ್ಹಾರಿ ಅವರು 16ನೇ ಹಣಕಾಸು ಆಯೋಗದ ಅನುದಾನಗಳು ಮತ್ತು ನೀರು ಹಾಗೂ ನೈರ್ಮಲ್ಯಕ್ಕಾಗಿ ಬದ್ಧ ಅನುದಾನಗಳ ಬಳಕೆ ಕುರಿತು ಸವಿಸ್ತಾರವಾದ ಪ್ರಸ್ತುತಿಯನ್ನು ನೀಡಿದರು, ಇದರಲ್ಲಿ ಅನುದಾನದ ರಚನೆ, ಬಿಡುಗಡೆಯ ಷರತ್ತುಗಳು, ವರದಿ ಮಾಡುವ ಅಗತ್ಯತೆಗಳು, ಅನುಮತಿಸಲಾದ ಚಟುವಟಿಕೆಗಳು ಮತ್ತು ಯೋಜನಾ ಚೌಕಟ್ಟನ್ನು ವಿವರಿಸಲಾಯಿತು. 16ನೇ ಹಣಕಾಸು ಆಯೋಗದ ಅಡಿಯಲ್ಲಿ ಒಟ್ಟು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹಂಚಿಕೆಯು ₹4.35 ಲಕ್ಷ ಕೋಟಿಗೂ ಮೀರಿದ್ದು, ಈ ಅವಧಿಯಲ್ಲಿ ನೀರು ನಿರ್ವಹಣೆ ಮತ್ತು ನೈರ್ಮಲ್ಯಕ್ಕಾಗಿ ಸುಮಾರು ₹1.74 ಲಕ್ಷ ಕೋಟಿ ಕಾಯ್ದಿರಿಸಲಾಗಿದೆ ಎಂದು ಭಾಗವಹಿಸಿದವರಿಗೆ ತಿಳಿಸಲಾಯಿತು. ಅಸ್ತಿತ್ವದಲ್ಲಿರುವ ಆಸ್ತಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ಜೀವಿತಾವಧಿ ಆಧಾರಿತ ಯೋಜನೆ, ತಡೆಗಟ್ಟುವ ನಿರ್ವಹಣೆ, ಸಮುದಾಯದ ಮಾಲೀಕತ್ವ ಮತ್ತು ನಿಗದಿಪಡಿಸಿದ ವೇದಿಕೆಗಳ ಮೂಲಕ ಡಿಜಿಟಲ್ ಹೊಣೆಗಾರಿಕೆಗೆ ಆದ್ಯತೆ ನೀಡಬೇಕು ಎಂದು ಪ್ರಸ್ತುತಿಯಲ್ಲಿ ಎತ್ತಿಹಿಡಿಯಲಾಯಿತು.

ಪಂಚಾಯತ್ ರಾಜ್ ಸಚಿವಾಲಯದ ನಿರ್ದೇಶಕ ಶ್ರೀ ವಿಪುಲ್ ಉಜ್ವಲ್ ಅವರು ಗ್ರಾಮೀಣ ನೀರು ಪೂರೈಕೆ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಜಿಪಿಡಿಪಿ ಯೋಜನೆ, ಬಿಡುಗಡೆ ವಿಧಾನಗಳು ಮತ್ತು ಹಣಕಾಸು ಆಯೋಗದ ಅನುದಾನಗಳ ಬಳಕೆ ಕುರಿತು ಸವಿಸ್ತಾರವಾದ ಪ್ರಸ್ತುತಿಯನ್ನು ನೀಡಿದರು. ಸುಸ್ಥಿರ ಸೇವಾ ವಿತರಣೆಗೆ ಮೂರು ನಿರ್ಣಾಯಕ ಅಂಶಗಳಾದ ಅಗತ್ಯತೆಗಳು, ಸಂಪನ್ಮೂಲಗಳು ಮತ್ತು ಜವಾಬ್ದಾರಿಗಳ ಸಂಯೋಜನೆಯು ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಗ್ರಾಮ ಪಂಚಾಯತ್ಗಳು ಸೇವಾ ಅಂತರವನ್ನು ಹೇಗೆ ಗುರುತಿಸಬೇಕು, ವಾರ್ಷಿಕ O&M ಅಗತ್ಯತೆಗಳನ್ನು ಅಂದಾಜಿಸಬೇಕು, ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡಬೇಕು ಮತ್ತು ಈ ಆದ್ಯತೆಗಳನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಯಲ್ಲಿ ಹೇಗೆ ಸಂಯೋಜಿಸಬೇಕು ಎಂಬುದನ್ನು ಅವರು ವಿವರಿಸಿದರು. ಪಂಚಾಯತ್ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಸುಸ್ಥಿರ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸ್ವಂತ ಮೂಲದ ಆದಾಯ, ಬಳಕೆದಾರರ ಶುಲ್ಕ ಸಂಗ್ರಹಣೆ ಮತ್ತು ಕಾರ್ಯಕ್ಷಮತೆ ಆಧಾರಿತ ಅನುದಾನಗಳ ಹೆಚ್ಚುತ್ತಿರುವ ಮಹತ್ವವನ್ನು ಅವರು ಎತ್ತಿಹಿಡಿದರು.
ಈ ಸಮಾವೇಶವು ಇ-ಗ್ರಾಮ್ ಸ್ವರಾಜ್ ಪೋರ್ಟಲ್ ಮತ್ತು ಅದರ ವರದಿ ಮಾಡ್ಯೂಲ್ಗಳ ಕುರಿತು ಪಂಚಾಯತ್ ರಾಜ್ ಸಚಿವಾಲಯದ ಎನ್ಐಸಿ ನೀಡಿದ ತಾಂತ್ರಿಕ ಪ್ರಸ್ತುತಿಯನ್ನು ಸಹ ಒಳಗೊಂಡಿತ್ತು. ಗ್ರಾಮ ಪಂಚಾಯತ್ಗಳು ಡಿಜಿಟಲ್ ವೇದಿಕೆಯ ಮೂಲಕ ಯೋಜನೆ, ಅನುಷ್ಠಾನ, ಜಿಯೋ-ಟ್ಯಾಗಿಂಗ್, ವೆಚ್ಚದ ವರದಿ, ಆಸ್ತಿ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಹೇಗೆ ಸಂಯೋಜಿಸಬಹುದು ಎಂಬುದನ್ನು ಈ ಗೋಷ್ಠಿಯು ವಿವರಿಸಿತು. ಇ-ಗ್ರಾಮ್ ಸ್ವರಾಜ್ ಅನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಮತ್ತು ವಿವಿಧ ಇಲಾಖಾ ದತ್ತಸಂಚಯಗಳೊಂದಿಗೆ ಸಂಯೋಜಿಸುವುದನ್ನು ಪ್ರಸ್ತುತಿಯು ಎತ್ತಿಹಿಡಿಯಿತು, ಇದು ಸುಧಾರಿತ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಹಣಕಾಸು ಆಯೋಗ ಅನುದಾನಿತ ಚಟುವಟಿಕೆಗಳ ರಿಯಲ್-ಟೈಮ್ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ.
ರಾಜ್ಯಗಳ ಅನುಭವ ಹಂಚಿಕೆ ಗೋಷ್ಠಿಯಲ್ಲಿ, ಜಿಐಎಸ್ ಆಧಾರಿತ ಆಸ್ತಿ ನಿರ್ವಹಣೆ, ರಿಯಲ್-ಟೈಮ್ ಮೇಲ್ವಿಚಾರಣೆ, ಸಮುದಾಯದ ಭಾಗವಹಿಸುವಿಕೆ ಮತ್ತು ಸಾಕ್ಷ್ಯ ಆಧಾರಿತ O&M ಯೋಜನೆಯನ್ನು ಸಂಯೋಜಿಸುವ ಜಲ ಸಂಕಲನ, ಜಲ ಆಸ್ತಿ ಮತ್ತು ಜೀವಜಲದಂತಹ ನಾವೀನ್ಯತೆಗಳ ಮೂಲಕ ಗ್ರಾಮೀಣ ನೀರು ಪೂರೈಕೆ ನಿರ್ವಹಣೆಗೆ ತನ್ನ ಸಂಯೋಜಿತ ವಿಧಾನವನ್ನು ಕರ್ನಾಟಕ ಪ್ರಸ್ತುತಪಡಿಸಿತು. ಜಲ ಬಜೆಟಿಂಗ್, ಪರಿಮಾಣಾತ್ಮಕ ದರ ಸಂಗ್ರಹಣೆ, ತಡೆಗಟ್ಟುವ ನಿರ್ವಹಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳ ಸಮುದಾಯ ಮಾಲೀಕತ್ವವನ್ನು ಬಲಪಡಿಸುವಲ್ಲಿ ತನ್ನ ಅನುಭವವನ್ನು ರಾಜ್ಯವು ಎತ್ತಿಹಿಡಿಯಿತು. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಚೌಕಟ್ಟಿನಡಿಯಲ್ಲಿ ಸಾಂಸ್ಥಿಕ ಸಂಯೋಜನೆಯ ಅನುಭವವನ್ನು ರಾಜ್ಯವು ಹಂಚಿಕೊಂಡಿದೆ, ಅಲ್ಲಿ ಗ್ರಾಮೀಣ ನೀರು ಪೂರೈಕೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಗಳು ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತವೆ ಹಾಗೂ ಈ ಸಂಯೋಜಿತ ಆಡಳಿತಾತ್ಮಕ ರಚನೆಯು ಹಣಕಾಸು ಆಯೋಗದ ಅನುದಾನದ ಉತ್ತಮ ಯೋಜನೆ ಮತ್ತು ಬಳಕೆಯನ್ನು ಹೇಗೆ ಸಕ್ರಿಯಗೊಳಿಸಿದೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಯೋಜನೆ, ಜಲ ಬಜೆಟಿಂಗ್ ಮತ್ತು ದರ ಸಂಗ್ರಹಣೆಯಲ್ಲಿ ಗ್ರಾಮ ಪಂಚಾಯತ್ ಭಾಗವಹಿಸುವಿಕೆಯನ್ನು ಬಲಪಡಿಸಿದೆ ಹಾಗೂ ತಾಂತ್ರಿಕ ಇಲಾಖೆಗಳು ಮತ್ತು ಸ್ಥಳೀಯ ಸ್ವಯಂ ಸರ್ಕಾರಗಳ ನಡುವಿನ ಸಮನ್ವಯವನ್ನು ಹೇಗೆ ಸುಧಾರಿಸಿದೆ ಎಂಬುದನ್ನು ಎತ್ತಿಹಿಡಿಯಿತು. ಸುಸ್ಥಿರ ಸಮುದಾಯ ತೊಡಗಿಸಿಕೊಳ್ಳುವಿಕೆ, ಜವಾಬ್ದಾರಿಗಳ ಸ್ಪಷ್ಟ ವಿಂಗಡಣೆ ಮತ್ತು ಆರ್ಥಿಕ ಸಂಪನ್ಮೂಲಗಳ ಸಂಯೋಜನೆಯು ಗ್ರಾಮೀಣ ಕುಡಿಯುವ ನೀರು ಸೇವೆಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಬಲಪಡಿಸುವಲ್ಲಿ ಪ್ರಮುಖವಾಗಿವೆ ಎಂದು ಕರ್ನಾಟಕ ಒತ್ತಿಹೇಳಿತು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಇಲಾಖೆಗಳ ನಡುವಿನ ನಿಕಟ ಸಂಯೋಜನೆಯ ಸುತ್ತ ನಿರ್ಮಿಸಲಾದ ತನ್ನ ಸಾಂಸ್ಥಿಕ ಮಾದರಿಯನ್ನು ಒಡಿಶಾ ಹಂಚಿಕೊಂಡಿದೆ. ರಾಜ್ಯವು ತನ್ನ ಸಂಯೋಜಿತ O&M ಚೌಕಟ್ಟು, ಕೆಳಗಿನಿಂದ ಮೇಲ್ಮಟ್ಟದವರೆಗಿನ ಬಜೆಟ್ ಪ್ರಕ್ರಿಯೆ, ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆಗಳು, ಸ್ಥಳೀಯ ಮೆಕ್ಯಾನಿಕ್ ತರಬೇತಿ ಕಾರ್ಯಕ್ರಮಗಳು ಹಾಗೂ ಕುಡಿಯುವ ನೀರು ಸೇವೆಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಸೋಲಾರೈಸೇಶನ್, ಆಟೊಮೇಷನ್ ಮತ್ತು ಐಒಟಿ (IoT) ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಗಳಂತಹ ತಂತ್ರಜ್ಞಾನ ಆಧಾರಿತ ಉಪಕ್ರಮಗಳನ್ನು ಪ್ರಸ್ತುತಪಡಿಸಿತು. ಸಂಘಟಿತ ಯೋಜನೆ, ಕೆಳಗಿನಿಂದ ಮೇಲ್ಮಟ್ಟದವರೆಗಿನ ಬಜೆಟಿಂಗ್ ಮತ್ತು ಹಣಕಾಸು ಆಯೋಗದ ಅನುದಾನಗಳು, ರಾಜ್ಯದ ಸಂಪನ್ಮೂಲಗಳು ಹಾಗೂ ಸಮುದಾಯದ ವಂತಿಕೆಗಳ ಸಂಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ರಾಜ್ಯವು ಎತ್ತಿಹಿಡಿಯಿತು. ವಿಶ್ವಾಸಾರ್ಹ ಸೇವಾ ವಿತರಣೆ ಮತ್ತು ಗ್ರಾಮೀಣ ನೀರು ಪೂರೈಕೆ ಮೂಲಸೌಕರ್ಯಗಳ ಸುಸ್ಥಿರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್ ಭಾಗವಹಿಸುವಿಕೆ, ಸ್ಥಳೀಯ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಮೇಲ್ವಿಚಾರಣೆ ಮತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಹೊಣೆಗಾರಿಕೆ ವ್ಯವಸ್ಥೆಗಳ ಮಹತ್ವವನ್ನು ಒಡಿಶಾ ಉಲ್ಲೇಖಿಸಿದರು.
ಮಧ್ಯಪ್ರದೇಶವು ಇತ್ತೀಚೆಗೆ ಅಧಿಸೂಚಿಸಲಾದ ತನ್ನ 'O&M ನಿಯಮಗಳು, 2026' ಅನ್ನು ಉಲ್ಲೇಖಿಸಿದರು, ಇದು ನೀರು ಪೂರೈಕೆ ಮತ್ತು ನೈರ್ಮಲ್ಯ ಚಟುವಟಿಕೆಗಳಿಗಾಗಿ ಬಹು ನಿಧಿ ಮೂಲಗಳನ್ನು ಬಳಸಿಕೊಳ್ಳಲು ಗ್ರಾಮ ಪಂಚಾಯತ್ಗಳಿಗೆ ಅನುವು ಮಾಡಿಕೊಡುತ್ತದೆ. ಸರಳೀಕೃತ ಸಂಗ್ರಹಣೆ ಪ್ರಕ್ರಿಯೆಗಳು, ಜಿಲ್ಲಾ ಮಟ್ಟದ ವಾಶ್ ತಾಂತ್ರಿಕ ಸಮಿತಿಗಳು, ರಚನಾತ್ಮಕ ತರಬೇತಿ ಕಾರ್ಯಕ್ರಮಗಳು, ಬಳಕೆದಾರರ ಶುಲ್ಕ ಸಂಗ್ರಹಣೆಗಾಗಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಪಂಚಾಯತ್ ಪ್ರತಿನಿಧಿಗಳು ಹಾಗೂ ಎಂಜಿನಿಯರ್ಗಳಲ್ಲಿ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸುವ ವ್ಯಾಪಕ ಪ್ರಯತ್ನಗಳನ್ನು ರಾಜ್ಯವು ಪ್ರದರ್ಶಿಸಿತು. ಹಣಕಾಸು ಆಯೋಗದ ಅನುದಾನಗಳು, ರಾಜ್ಯ ಅನುದಾನಗಳು, ಬಳಕೆದಾರರ ಶುಲ್ಕಗಳು ಮತ್ತು ಇತರ ಸ್ಥಳೀಯ ಸಂಪನ್ಮೂಲಗಳು ಸೇರಿದಂತೆ ಬಹು ನಿಧಿ ಮೂಲಗಳನ್ನು ಸುಸ್ಥಿರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಬೆಂಬಲಿಸಲು ಹೇಗೆ ಒಂದೆಡೆ ತರಲಾಗುತ್ತಿದೆ ಎಂಬುದರ ಬಗ್ಗೆ ರಾಜ್ಯವು ಒತ್ತಿ ಹೇಳಿತು.

ತಮ್ಮ ಸಮಾರೋಪ ಭಾಷಣದಲ್ಲಿ, ಎನ್ಜೆಜೆಎಮ್ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಅವರು, ಹಣಕಾಸು ಆಯೋಗದ ಅನುದಾನಗಳನ್ನು ಸುಸ್ಥಿರ ಗ್ರಾಮೀಣ ನೀರು ಆಡಳಿತವನ್ನು ಸಾಂಸ್ಥಿಕಗೊಳಿಸಲು ಮತ್ತು ನೀರು ಪೂರೈಕೆ ವ್ಯವಸ್ಥೆಗಳ ಪಂಚಾಯತ್ ಮಾಲೀಕತ್ವವನ್ನು ಬಲಪಡಿಸಲು ಒಂದು ಅವಕಾಶವಾಗಿ ನೋಡಬೇಕು ಎಂದು ಪುನರುಚ್ಚರಿಸಿದರು. ಬಾಕಿ ಇರುವ ಅನುಸರಣೆ ಅಗತ್ಯತೆಗಳನ್ನು ಪೂರ್ಣಗೊಳಿಸಲು, ಜಿಪಿಡಿಪಿ (GPDP) ಆಧಾರಿತ ಯೋಜನೆಯನ್ನು ಬಲಪಡಿಸಲು, ಬಳಕೆದಾರರ ಶುಲ್ಕ ಸಂಗ್ರಹಣೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ನೀರು ಪೂರೈಕೆ ಮೂಲಸೌಕರ್ಯಗಳನ್ನು ಕಾಯ್ದುಕೊಳ್ಳಲು 15 ನೇ ಮತ್ತು 16ನೇ ಹಣಕಾಸು ಆಯೋಗಗಳೆರಡರ ಅನುದಾನದ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅವರು ರಾಜ್ಯಗಳನ್ನು ಆಗ್ರಹಿಸಿದರು.
ಮುಂಬರುವ ತಿಂಗಳುಗಳಲ್ಲಿ ಪಂಚಾಯತ್ ಪ್ರತಿನಿಧಿಗಳು, ಪಂಚಾಯತ್ ಕಾರ್ಯದರ್ಶಿಗಳು, ಸರಪಂಚರು ಮತ್ತು ತಾಂತ್ರಿಕ ಸಿಬ್ಬಂದಿಗೆ ತೀವ್ರ ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಇ-ಗ್ರಾಮ್ ಸ್ವರಾಜ್ ಲಾಗಿನ್ ಹಾಗೂ ವರದಿ ಮಾಡುವ ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸಲು ಶ್ರೀ ಸೋನ್ ರಾಜ್ಯಗಳಿಗೆ ಕರೆ ನೀಡಿದರು. ಸಿದ್ಧತೆಯನ್ನು ಪರಿಶೀಲಿಸಲು, ಅನುಷ್ಠಾನದ ಸವಾಲುಗಳನ್ನು ಪರಿಹರಿಸಲು ಮತ್ತು ಕುಡಿಯುವ ನೀರು, ನೈರ್ಮಲ್ಯ, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿಗೆ ಜವಾಬ್ದಾರರಾಗಿರುವ ಇಲಾಖೆಗಳ ನಡುವಿನ ಸಂಯೋಜನೆಯನ್ನು ಬಲಪಡಿಸಲು 2026ರ ನವೆಂಬರ್ನಲ್ಲಿ ಎರಡು ಪ್ರಾದೇಶಿಕ ಸಮಾವೇಶಗಳನ್ನು ಯೋಜಿಸಲಾಗಿದೆ ಎಂದು ಅವರು ಭಾಗವಹಿಸಿದವರಿಗೆ ತಿಳಿಸಿದರು.
ಪಂಚಾಯತ್ ನೇತೃತ್ವದ ಯೋಜನೆಗೆ ಪುಷ್ಟಿ ನೀಡಲು, ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸಲು, ಅಂತರ-ಇಲಾಖೆಯ ಸಂಯೋಜನೆಯನ್ನು ಹೆಚ್ಚಿಸಲು ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಮಾಡಿದ ಬೃಹತ್ ಹೂಡಿಕೆಗಳು ದೇಶಾದ್ಯಂತದ ಗ್ರಾಮೀಣ ಮನೆಗಳಿಗೆ ವಿಶ್ವಾಸಾರ್ಹ, ನಿರಂತರ ಮತ್ತು ಸುಸ್ಥಿರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸೇವೆಗಳಾಗಿ ಪರಿವರ್ತನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಂಚಿಕೆಯ ಬದ್ಧತೆಯೊಂದಿಗೆ ಸಮಾವೇಶವು ಮುಕ್ತಾಯಗೊಂಡಿತು.
*****