ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯಲ್ಲಿ ನಡೆದ ವಿಜಯದಶಮಿ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
20 OCT 2026 7:53PM by PIB Bengaluru
ಶ್ರೀರಾಮಚಂದ್ರನಿಗೆ ಜಯವಾಗಲಿ!
ಶ್ರೀರಾಮಚಂದ್ರನಿಗೆ ಜಯವಾಗಲಿ!
ಶ್ರೀರಾಮಚಂದ್ರನಿಗೆ ಜಯವಾಗಲಿ!
ವಿಜಯದಶಮಿಯ ಈ ಪವಿತ್ರ ಸಂದರ್ಭದಲ್ಲಿ ನಾನು ಭಗವಾನ್ ಶ್ರೀರಾಮ, ಮಾತೆ ಜಾನಕಿ ಮತ್ತು ಬಜರಂಗ ಬಲಿಯ ಚರಣಗಳಿಗೆ ನಮಸ್ಕರಿಸುತ್ತೇನೆ. ಈ ಪವಿತ್ರ ವಾತಾವರಣದಲ್ಲಿ ವಿಜಯದಶಮಿಯ ಶುಭಾಶಯಗಳನ್ನು ದೇಶವಾಸಿಗಳೆಲ್ಲರಿಗೂ ಹೃದಯಪೂರ್ವಕವಾಗಿ ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ಭಾರತದ ಪ್ರತಿಯೊಂದು ಮೂಲೆಯೂ ಭಗವಾನ್ ಶ್ರೀರಾಮನ ಭಕ್ತಿಯಲ್ಲಿ ಮಿಂದೇಳುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ, ನಗರ ನಗರಗಳಲ್ಲಿ, ಇಡೀ ರಾಷ್ಟ್ರವೇ 'ರಾಮಲೀಲೆ'ಯ ಭಾವದಲ್ಲಿ ಮಗ್ನವಾಗಿದೆ. ದೇಶಾದ್ಯಂತ ನಡೆಯುವ ರಾಮಲೀಲೆಗಳು, ಭಗವಾನ್ ಶ್ರೀರಾಮನ ಆದರ್ಶಗಳನ್ನು ಜೀವಂತವಾಗಿರಿಸುವ ಪರಂಪರೆ, ದಬ್ಬಾಳಿಕೆ ಮತ್ತು ಭಯೋತ್ಪಾದನೆ ಅಂತ್ಯದ ಘೋಷಣೆ, ಅಸತ್ಯದ ವಿರುದ್ಧ ಸತ್ಯದ ಶಾಶ್ವತ ವಿಜಯದ ಮೇಲಿನ ನಂಬಿಕೆ—ಇವೆಲ್ಲವೂ ನಮಗೆ ಕೇವಲ ಒಂದು ಹಬ್ಬವಲ್ಲ, ಇದು ಭಾರತದ ಜೀವಶಕ್ತಿಯಾಗಿದೆ. ಆದ್ದರಿಂದ, ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುತ್ತಿರುವ ಈ ಹೊತ್ತಿನಲ್ಲಿ ಬನ್ನಿ, ಮತ್ತೊಮ್ಮೆ ನನ್ನೊಂದಿಗೆ ಸೇರಿ ಹೀಗೆ ಹೇಳಿ:
ಭಗವಾನ್ ಶ್ರೀರಾಮನಿಗೆ ಜಯವಾಗಲಿ!
ಭಗವಾನ್ ಶ್ರೀರಾಮನಿಗೆ ಜಯವಾಗಲಿ!
ಭಗವಾನ್ ಶ್ರೀರಾಮನಿಗೆ ಜಯವಾಗಲಿ!
ಸ್ನೇಹಿತರೆ,
ಈ ರಾಷ್ಟ್ರ, ಅದರ ಸಂಸ್ಕೃತಿ ಮತ್ತು ಅದರ ಪೂರ್ವಜರು ಸಾವಿರಾರು ವರ್ಷಗಳಿಂದ ಭಗವಾನ್ ಶ್ರೀರಾಮನನ್ನು ಆರಾಧಿಸುತ್ತಾ ಬಂದಿದ್ದಾರೆ. ಈ ಶ್ರದ್ಧೆ ಕೇವಲ ಶ್ರೀರಾಮನು ರಾಕ್ಷಸ ರಾಜ ರಾವಣನನ್ನು ಸಂಹರಿಸಿದ ಕಾರಣಕ್ಕೆ ಮಾತ್ರವಲ್ಲ; ಬದಲಾಗಿ, ಮಾನವ ಇತಿಹಾಸದಲ್ಲೇ ಸರಿಸಾಟಿಯಿಲ್ಲದ ಆದರ್ಶಗಳನ್ನು ಭಗವಾನ್ ರಾಮ ನಮಗೆ ನೀಡಿದ್ದಾರೆ ಎಂಬ ಕಾರಣಕ್ಕೂ ಈ ಶ್ರದ್ಧೆ ನೆಲೆಗೊಂಡಿದೆ.
ಸ್ನೇಹಿತರೆ,
ಭಗವಾನ್ ಶ್ರೀರಾಮ ತನ್ನ ಜೀವನದಲ್ಲಿ ಅಸಂಖ್ಯಾತ ಕಷ್ಟಗಳನ್ನು ಎದುರಿಸಿದರೂ, ಸತ್ಯ ಮತ್ತು ಧರ್ಮದ ಮಾರ್ಗವನ್ನು ಎಂದಿಗೂ ಕೈಬಿಡಲಿಲ್ಲ. ಅವರ ವ್ಯಕ್ತಿತ್ವದ ಬಗ್ಗೆ ಹೀಗೆ ಹೇಳಲಾಗಿದೆ: "ಪ್ರಸನ್ನತಾಮ್ ಯಾ ನ ಗತಾ ಅಭಿಷೇಕತಃ ತಥಾ, ನ ಮಮ್ಲೇ ವನವಾಸ ದುಃಖತಃ" - ಅಂದರೆ, ರಾಜ್ಯಭಾರ ಸಿಕ್ಕಾಗ ಶ್ರೀರಾಮ ಅತಿಯಾದ ಉಲ್ಲಾಸ ಹೊಂದಲಿಲ್ಲ, ಹಾಗೆಯೇ ವನವಾಸದ ದುಃಖದಿಂದ ಕುಗ್ಗಿ ಹೋಗಲೂ ಇಲ್ಲ. ಎಲ್ಲಾ ವಿಪತ್ತುಗಳನ್ನು ಸಹಿಸಿಕೊಂಡರೂ, ಅವರು ಧರ್ಮವನ್ನು ಎತ್ತಿಹಿಡಿದು, ಸತ್ಯವನ್ನು ಸ್ಥಾಪಿಸಿದರು. ವನವಾಸಕ್ಕೆ ತೆರಳಿದಾಗ, ಅವರು ನಿಷಾದ ರಾಜನನ್ನು ಅಪ್ಪಿಕೊಂಡರು, ಮಾತೆ ಶಬರಿಯನ್ನು ಗೌರವಿಸಿದರು. ಕರುಣೆ, ದಯೆ, ಪ್ರೀತಿ ಮತ್ತು ಸಾಮರಸ್ಯದ ಅತ್ಯುನ್ನತ ಮಾನದಂಡಗಳನ್ನು ಅವರು ಸ್ಥಾಪಿಸಿದರು. ಅಯೋಧ್ಯೆಗೆ ಮರಳಿ ರಾಜನಾದಾಗ, ಅವರು ಅಂತಹ 'ರಾಮರಾಜ್ಯ' ನಿರ್ಮಿಸಿದರು, ಅದು ಇಂದಿಗೂ ಉತ್ತಮ ಆಡಳಿತದ ಮಾನದಂಡಡವೆಂದು ಪರಿಗಣಿಸಲ್ಪಡುತ್ತದೆ. ರಾಮರಾಜ್ಯವೆಂದರೆ - ಎಲ್ಲರಿಗೂ ಸಮಾನ ಅವಕಾಶಗಳು ಸಿಗುವ, ಯಾರಿಗೂ ತಾರತಮ್ಯವಿಲ್ಲದ, ಎಲ್ಲರಿಗೂ ನ್ಯಾಯ ದೊರೆಯುವ ಮತ್ತು ಅಧಿಕಾರದ ಉದ್ದೇಶವು ಆಳ್ವಿಕೆ ನಡೆಸುವುದಲ್ಲದೆ, ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ವ್ಯವಸ್ಥೆಯಾಗಿದೆ. ಅದಕ್ಕಾಗಿಯೇ ಗೋಸ್ವಾಮಿ ತುಳಸಿದಾಸರು ಹೀಗೆ ಬರೆದಿದ್ದಾರೆ: "ದೈಹಿಕ ದೈವಿಕ ಭೌತಿಕ ತಾಪ, ರಾಮರಾಜ ನಹಿಂ ಕಾಹುಹಿ ವ್ಯಾಪ"(ಅಂದರೆ ರಾಮರಾಜ್ಯದಲ್ಲಿ ದೈಹಿಕ, ದೈವಿಕ ಅಥವಾ ಭೌತಿಕ ಯಾವುದೇ ರೀತಿಯ ದುಃಖಗಳು ಜನರನ್ನು ಬಾಧಿಸುವುದಿಲ್ಲ). ಇದೇ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಆದರ್ಶವಾಗಿದೆ. ಆದ್ದರಿಂದ, ನಾವು ಜನರನ್ನು ದೈವಸ್ವರೂಪರೆಂದು ಭಾವಿಸಿ, 'ನಾಗರಿಕನೇ ಮೊದಲು' ಎಂಬ ಮಂತ್ರದೊಂದಿಗೆ ಮುನ್ನಡೆಯಬೇಕು. ಬಡವರು ಮತ್ತು ಸೌಲಭ್ಯವಂಚಿತರ ಸೇವೆಯನ್ನು ಎಲ್ಲಕ್ಕಿಂತ ಮಿಗಿಲಾದ ಆದ್ಯತೆಯನ್ನಾಗಿ ಪರಿಗಣಿಸಬೇಕು.
ಸ್ನೇಹಿತರೆ,
ಭಗವಾನ್ ಶ್ರೀರಾಮನ ಜೀವನದಿಂದ ನಮಗೆ ಅತ್ಯಂತ ಮಹತ್ವದ ಪಾಠ ಸಿಗುತ್ತದೆ. ಬಿಕ್ಕಟ್ಟು ಎಷ್ಟೇ ದೊಡ್ಡದಾಗಿರಲಿ, ಸವಾಲು ಎಷ್ಟೇ ಕಠಿಣವಾಗಿರಲಿ, ನಾವು ಇತರರಿಗಾಗಿ ಕಾಯುತ್ತಾ ಕೂರಬಾರದು. ನಾವು ನಮ್ಮ ಸ್ವಂತ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ನಮ್ಮಲ್ಲಿರುವ ಸಂಪನ್ಮೂಲಗಳ ಮೇಲೆ ನಂಬಿಕೆ ಇಡಬೇಕು. ನಮ್ಮ ದೃಢಸಂಕಲ್ಪವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ನಮ್ಮ ಕಠಿಣ ಪರಿಶ್ರಮದ ಮೂಲಕವೇ ಪರಿಹಾರಗಳನ್ನು ಕಂಡುಕೊಳ್ಳಬೇಕು. ಹಾದಿಯಲ್ಲಿ ಎದುರಾಗುವ ಕಷ್ಟಗಳು ನಮ್ಮ ಪಯಣವನ್ನು ತಡೆಯಲಾರವು ಎಂಬುದನ್ನು ಶ್ರೀರಾಮ ನಮಗೆ ಕಲಿಸಿಕೊಟ್ಟರು. ಅವರ ಮುಂದೆ ಸಾಗರವಿತ್ತು, ಲಂಕೆ ಬಹಳ ದೂರವಿತ್ತು, ಆದರೆ ಅವರ ಸಂಕಲ್ಪ ಮಾತ್ರ ಅಚಲವಾಗಿತ್ತು. ಹೀಗಾಗಿ, ಶ್ರೀರಾಮ ಜನರ ಸಾಮೂಹಿಕ ಶಕ್ತಿಯನ್ನು ಜಾಗೃತಗೊಳಿಸಿದರು. ಸಾರ್ವಜನಿಕರ ಸಹಭಾಗಿತ್ವವನ್ನೇ ತಮ್ಮ ಆಧಾರವನ್ನಾಗಿಸಿಕೊಂಡರು. ಲಭ್ಯವಿದ್ದ ಸಂಪನ್ಮೂಲಗಳನ್ನೆಲ್ಲ ಒಗ್ಗೂಡಿಸಿದರು, ಅಸಾಧ್ಯವೆಂದು ತೋರುತ್ತಿದ್ದ ಗುರಿಯನ್ನು ಸಾಧಿಸಿ ತೋರಿಸಿದರು. ಇದೇ ಯಶಸ್ಸಿನ ಮೂಲ ಮಂತ್ರವಾಗಿದೆ. ನಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ, ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ, ನಮ್ಮ ಸಂಪನ್ಮೂಲಗಳ ಸೂಕ್ತ ಬಳಕೆ ಮತ್ತು ನಮ್ಮ ಗುರಿಯ ಕಡೆಗೆ ಅಚಲವಾದ ಬದ್ಧತೆ. ಇಂದು ನಾವು ಸಹ ಇದೇ ಮಂತ್ರದೊಂದಿಗೆ ಮುನ್ನಡೆಯಬೇಕಿದೆ. ನಮ್ಮ ಮುಂದೆ 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ಗುರಿಯಿದೆ, 'ಸ್ವಾವಲಂಬಿ ಭಾರತ'ದ ಗುರಿಯಿದೆ. ಜನರ ಶಕ್ತಿಯ ಮೂಲಕ ಮತ್ತು ಜನರ ಕಲ್ಯಾಣಕ್ಕಾಗಿ, ನಾವು ನಮ್ಮ ನಾಗರಿಕರ ಪ್ರತಿಯೊಂದು ಆಶಯವನ್ನೂ ಈಡೇರಿಸಬೇಕು. ಇದಕ್ಕಾಗಿ ನಾವು ಭಗವಾನ್ ಶ್ರೀರಾಮನಿಂದ ಸ್ಫೂರ್ತಿ ಪಡೆಯಬೇಕು.
ಸ್ನೇಹಿತರೆ,
ಒಂದು ರಾಷ್ಟ್ರವು ಆತ್ಮಗೌರವ ಹೊಂದಿದ್ದಾಗ ಮಾತ್ರ ಪ್ರಗತಿ ಸಾಧಿಸುತ್ತದೆ. ಈ ಆತ್ಮಗೌರವದಲ್ಲಿ ಪರಂಪರೆಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಇಂದು ದೇಶವು ತನ್ನ ಪರಂಪರೆ ಮತ್ತು ಅಸ್ತಿತ್ವವನ್ನು ಸಂರಕ್ಷಿಸಲು ಬದ್ಧವಾಗಿದೆ. ಶತಮಾನಗಳ ಕಾಲ ನಮ್ಮ ಸಂಪತ್ತುಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಕೊಂಡೊಯ್ಯಲಾಗಿತ್ತು. ಆದರೆ ಇಂದು, ನಾವು ಆ ಸಂಪತ್ತುಗಳನ್ನು ಮರಳಿ ತರುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ, 650ಕ್ಕೂ ಹೆಚ್ಚು ಪ್ರಾಚೀನ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ. ಅದೇ ರೀತಿ, ಭಾರತವು ತನ್ನ ಸಾಂಸ್ಕೃತಿಕ ಕೇಂದ್ರಗಳಿಗೆ ಜಾಗತಿಕ ಮಟ್ಟದಲ್ಲಿ ಹೊಸ ಮನ್ನಣೆ ತಂದುಕೊಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ನಮ್ಮ ಅನೇಕ ತಾಣಗಳು ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಕಳೆದ ವರ್ಷ ಯುನೆಸ್ಕೊ, ದೀಪಾವಳಿಯನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ. ಇದು ಕೋಟ್ಯಂತರ ಭಾರತೀಯರ ಸಾಮೂಹಿಕ ಸಂಕಲ್ಪ ಶಕ್ತಿಯ ಫಲವಾಗಿದೆ. ನಾವು ಇದೇ ಬದ್ಧತೆಯೊಂದಿಗೆ ನಮ್ಮ ಕೆಲಸ ಮುಂದುವರಿಸಬೇಕು.
ಸ್ನೇಹಿತರೆ,
ವಿಜಯದಶಮಿ ವಿಜಯದ ಹಬ್ಬವಾಗಿದೆ. ಇದು ಗೆಲುವಿನ ಹಬ್ಬ. ಶತ್ರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ನಾವು ಸತ್ಯ ಮತ್ತು ಮಾನವತೆಯ ಪರವಾಗಿ ನಿಂತಾಗ ಅಂತಿಮವಾಗಿ ಗೆಲುವು ನಮ್ಮದೇ ಆಗುತ್ತದೆ ಎಂಬ ನಂಬಿಕೆಯನ್ನು ಈ ಹಬ್ಬ ನಮಗೆ ನೀಡುತ್ತದೆ. ವಿಜಯದಶಮಿಯ ಈ ಸ್ಫೂರ್ತಿಯು ಸದಾ ಭಾರತದ ಮಾರ್ಗದರ್ಶಕ ತತ್ವವಾಗಿ ಉಳಿದುಬಂದಿದೆ. ನಮ್ಮ ಋಷಿಮುನಿಗಳು ನಮಗೆ ಹೀಗೆ ಸ್ಫೂರ್ತಿ ನೀಡಿದ್ದಾರೆ: "ಸಮಾನೋ ಮಂತ್ರಃ ಸಮಿತಿಃ ಸಮಾನೀ, ಸಮಾನಂ ಮನಃ ಸಹ ಚಿತ್ತಮೇಷಾಮ್." ಇದರರ್ಥ ನಮ್ಮ ಆಲೋಚನೆಗಳು ಒಂದಾಗಿರಬೇಕು, ನಮ್ಮ ಸಮಾಲೋಚನೆಗಳು(ಸಭೆಗಳು) ಒಂದಾಗಿರಬೇಕು, ರಾಷ್ಟ್ರದ ಎಲ್ಲಾ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಒಗ್ಗಟ್ಟಾಗಿ ನಿಲ್ಲಬೇಕು. ನಾವು ಇದೇ ಸ್ಫೂರ್ತಿಯೊಂದಿಗೆ ಮುನ್ನಡೆಯಬೇಕು. ರಾಷ್ಟ್ರದ ಶತ್ರುಗಳ ವಿರುದ್ಧ ನಾವೆಲ್ಲರೂ ಒಂದಾಗಬೇಕು. ದೇಶದ ಗೌರವ ಮತ್ತು ಘನತೆಯ ಮೇಲೆ ದಾಳಿ ಮಾಡುವ ಶಕ್ತಿಗಳು, ಸಮಾಜ ವಿಭಜಿಸುವವರು ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ದ್ವೇಷ ಹೊಂದುವವರು ರಾಷ್ಟ್ರದ ಶತ್ರುಗಳಾಗಿದ್ದಾರೆ. ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ನಾವು ಮತ್ತೊಮ್ಮೆ ನಮ್ಮ ಸಂಕಲ್ಪವನ್ನು ನವೀಕರಿಸಿಕೊಳ್ಳಬೇಕು. ಭಾರತ ಮಾತೆಯ ಶತ್ರುಗಳನ್ನು ಗುರುತಿಸಬೇಕು. ಅವರನ್ನು ಸೋಲಿಸಬೇಕು. 'ರಾಷ್ಟ್ರವೇ ಮೊದಲು' ಎಂಬ ಸಂಕಲ್ಪ ಕೈಗೊಂಡು, ನಾವೆಲ್ಲರೂ ಒಗ್ಗೂಡಬೇಕು. ಅಯೋಧ್ಯೆ ದೇವಾಲಯದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಸಂದರ್ಭದಲ್ಲಿ ನಾವು ವ್ಯಕ್ತಪಡಿಸಿದ, "ರಾಮನಿಂದ ರಾಷ್ಟ್ರದ ಕಡೆಗೆ" ಮತ್ತು "ದೈವತ್ವದಿಂದ ರಾಷ್ಟ್ರೀಯ ಕರ್ತವ್ಯದ ಕಡೆಗೆ" ಎಂಬ ದೃಷ್ಟಿಕೋನವು ಖಂಡಿತವಾಗಿಯೂ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ದಸರಾದ ಈ ಸಂದರ್ಭದಲ್ಲಿ ದೇಶವಾಸಿಗಳೆಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ಜೈ ಸಿಯಾ ರಾಮ್!
ಜೈ ಸಿಯಾ ರಾಮ್!
ಜೈ ಸಿಯಾ ರಾಮ್!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2325725)
ವಿಸಿಟರ್ ಕೌಂಟರ್ : 4