ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಕರ್ನಾಟಕದ ಮೈಸೂರಿನಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಪ್ರಗತಿ ಪರಿಶೀಲಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್
ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸಲು ಪಾರದರ್ಶಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಕಾರ್ಯದರ್ಶಿ
ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳನ್ನು ಒಳಗೊಳ್ಳುವಂತೆ ಅಧಿಕಾರಿಗಳಿಗೆ ಶ್ರೀ ಪಂತ್ ಸೂಚನೆ; ವಿವಿಧ ಯೋಜನೆಗಳ ಮಾಹಿತಿಯೊಂದಿಗೆ ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತಲುಪುವಂತೆ ನಿರ್ದೇಶನ
ಪ್ರಕಟಣಾ ದಿನಾಂಕ:
19 OCT 2026 5:34PM by PIB Bengaluru
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯದ ಕೇಂದ್ರ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್ ಅವರು ಇಂದು ಕರ್ನಾಟಕದ ಮೈಸೂರಿನಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಆಡಳಿತದೊಂದಿಗೆ ಸಚಿವಾಲಯದ ಜಾರಿಯಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಸಮಗ್ರ ಪರಿಶೀಲನೆ ನಡೆಸಿದರು.

ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಕಾರ್ಯದರ್ಶಿಯವರು ಸಭೆಯಲ್ಲಿ ಮಾದಕದ್ರವ್ಯ ಬೇಡಿಕೆ ಕಡಿತಕ್ಕಾಗಿ, ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ನಶಾ ಮುಕ್ತ ಭಾರತ್ ಅಭಿಯಾನ; ಪ್ರಧಾನ್ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ; ಯಾಂತ್ರೀಕೃತ ನೈರ್ಮಲ್ಯ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ; ಅಟಲ್ ವಯೋ ಅಭ್ಯುದಯ ಯೋಜನೆ ಮತ್ತು ಇತರ ಹಿರಿಯ ನಾಗರಿಕರ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.

ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ, 1955 ಮತ್ತು ದೌರ್ಜನ್ಯ ತಡೆ ಕಾಯ್ದೆ, 1989ರ ಜಾರಿಗೆ ಯಂತ್ರಾಂಗವನ್ನು ಬಲಪಡಿಸುವ ಪ್ರಗತಿಯ ಜೊತೆಗೆ, ಪರಿಶಿಷ್ಟ ಜಾತಿಗಳು, ಇತರ ಹಿಂದುಳಿದ ವರ್ಗಗಳು, ಇಬಿಸಿ ಮತ್ತು ಡಿಎನ್ಟಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳ ಪ್ರಗತಿಯನ್ನು ಸಹ ಸಭೆಯು ಪರಿಶೀಲಿಸಿತು.
ಇದರ ಜೊತೆಗೆ, ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ, ತೃತೀಯಲಿಂಗಿಗಳ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಸತಿನಿಲಯಗಳ ನಿರ್ಮಾಣ ಸೇರಿದಂತೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿಯನ್ನು ಈ ಉನ್ನತ ಮಟ್ಟದ ಸಭೆಯಲ್ಲಿ ಪರಿಶೀಲಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಯದರ್ಶಿಯವರು, ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳನ್ನು ಒಳಗೊಳ್ಳಲು, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತರಲು ಪಾರದರ್ಶಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು, ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಲು ಅನುಕೂಲವಾಗುವಂತೆ, ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ವೈಶಿಷ್ಟ್ಯಗಳ ಕುರಿತು ಸ್ಪಷ್ಟ ಮಾಹಿತಿಯೊಂದಿಗೆ ಅರ್ಹ ಫಲಾನುಭವಿಗಳನ್ನು ತಲುಪಲು ಅವರು ಎಲ್ಲಾ ಅಧಿಕಾರಿಗಳಿಗೆ ಕರೆ ನೀಡಿದರು.

ಶ್ರೀ ಪಂತ್ ಅವರು ಮೈಸೂರಿನಲ್ಲಿ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಮುನ್ನಡೆಸುವಲ್ಲಿ ಅಧಿಕಾರಿಗಳು ಮತ್ತು ಇತರರ ಪ್ರಾಮಾಣಿಕ ಕೆಲಸ ಮತ್ತು ಕೊಡುಗೆಯನ್ನು ಶ್ಲಾಘಿಸಿದರು.
*****
(ಪ್ರಕಟಣೆ ಐ.ಡಿ.: 2325204)
ವಿಸಿಟರ್ ಕೌಂಟರ್ : 14