ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕಾನೂನು ಮಾಪನಶಾಸ್ತ್ರದ ಅಂತಾರಾಷ್ಟ್ರೀಯ ಸಮಿತಿಯ (ಸಿಐಎಂಎಲ್) 61ನೇ ಸಭೆ ಅಕ್ಟೋಬರ್ 26–28, 2026ರಂದು ಮೊದಲ ಬಾರಿಗೆ ನವದೆಹಲಿಯಲ್ಲಿ ನಡೆಯಲಿದೆ
100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಕಾನೂನು ಮಾಪನಶಾಸ್ತ್ರ ತಜ್ಞರು ಸಭೆಯಲ್ಲಿ ಭಾಗವಹಿಸಲಿದ್ದಾರೆ
ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲೀಕರಣ ಮತ್ತು ಜಾಗತಿಕ ಕಾನೂನು ಮಾಪನಶಾಸ್ತ್ರದ ಭವಿಷ್ಯದ ಕುರಿತು ಚರ್ಚಿಸಲು ಒಐಎಂಎಲ್ ಕಾರ್ಯತಂತ್ರ ಕಾರ್ಯಾಗಾರ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿವೆ
ಪ್ರಕಟಣಾ ದಿನಾಂಕ:
19 OCT 2026 11:26AM by PIB Bengaluru
ಕಾನೂನು ಮಾಪನಶಾಸ್ತ್ರದ ಅಂತಾರಾಷ್ಟ್ರೀಯ ಸಮಿತಿಯ (ಸಿಐಎಂಎಲ್) 61ನೇ ಸಭೆಯನ್ನು ಭಾರತವು 2026ರ ಅಕ್ಟೋಬರ್ 26ರಿಂದ 28ರವರೆಗೆ ಮೊದಲ ಬಾರಿಗೆ ನವದೆಹಲಿಯಲ್ಲಿ ಆಯೋಜಿಸಲಿದೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಕಾನೂನು ಮಾಪನಶಾಸ್ತ್ರದ ಅಂತಾರಾಷ್ಟ್ರೀಯ ಸಂಸ್ಥೆಯ (ಒಐಎಂಎಲ್) ಸಹಯೋಗದೊಂದಿಗೆ ಈ ಸಭೆಯನ್ನು ಆಯೋಜಿಸುತ್ತಿದೆ.
ಈ ಸಭೆಯಲ್ಲಿ ಒಐಎಂಎಲ್ ಸದಸ್ಯ ರಾಷ್ಟ್ರಗಳು, ಸಹವರ್ತಿ ಸದಸ್ಯ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಜಗತ್ತಿನಾದ್ಯಂತದ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಕಾನೂನು ಮಾಪನಶಾಸ್ತ್ರ ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ. ಭಾರತವು ಮೊದಲ ಬಾರಿಗೆ ಈ ಸಭೆಯನ್ನು ಆಯೋಜಿಸುತ್ತಿರುವುದು ಅಂತಾರಾಷ್ಟ್ರೀಯ ಸಹಕಾರ, ಮಾಪನ ಮಾನದಂಡಗಳ ಸಮನ್ವಯ, ನ್ಯಾಯಸಮ್ಮತ ವ್ಯಾಪಾರದ ಉತ್ತೇಜನ ಮತ್ತು ಗ್ರಾಹಕರ ರಕ್ಷಣೆಯ ಕ್ಷೇತ್ರಗಳಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರದ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ.
ಒಐಎಂಎಲ್ ಕಾರ್ಯತಂತ್ರ ಕಾರ್ಯಾಗಾರ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ
“ಕಾನೂನು ಮಾಪನಶಾಸ್ತ್ರದಲ್ಲಿನ ವಿಕಸನಗಳು” ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು 2026ರ ಅಕ್ಟೋಬರ್ 26ರಂದು ಆಯೋಜಿಸಲಾಗುತ್ತದೆ. ಕಾನೂನು ಮಾಪನಶಾಸ್ತ್ರ ವ್ಯವಸ್ಥೆಗಳ ಆಧುನೀಕರಣಕ್ಕೆ ಸಂಬಂಧಿಸಿದ ಅನುಭವಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಈ ವಿಚಾರ ಸಂಕಿರಣವು ವಿವಿಧ ದೇಶಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದೆ. ನಿಯಂತ್ರಣ ಸೇವೆಗಳ ಡಿಜಿಟಲೀಕರಣ, ಮಾಪನ ಸಾಧನಗಳ ಅಂತಾರಾಷ್ಟ್ರೀಯ ಸಮನ್ವಯ ಮತ್ತು ಮಾನ್ಯತೆ, ಇ-ಕಲಿಕಾ ಸಾಧನಗಳು ಹಾಗೂ ಕಾನೂನು ಮಾಪನಶಾಸ್ತ್ರದ ಆಡಳಿತಕ್ಕೆ ಸಂಬಂಧಿಸಿದ ನವೀನ ವಿಧಾನಗಳ ಕುರಿತು ಚರ್ಚೆಗಳು ನಡೆಯಲಿವೆ.
ಒಐಎಂಎಲ್ ಕಾರ್ಯತಂತ್ರ ಕಾರ್ಯಾಗಾರವನ್ನು ಸಹ 2026ರ ಅಕ್ಟೋಬರ್ 27ರಂದು ಆಯೋಜಿಸಲಾಗುತ್ತದೆ. ಇದು ಸಂಸ್ಥೆಯ ಭವಿಷ್ಯದ ಕಾರ್ಯತಂತ್ರದ ದಿಕ್ಕು ಮತ್ತು ಆದ್ಯತೆಗಳ ಕುರಿತು ಚರ್ಚಿಸಲು ಭಾಗವಹಿಸುವ ದೇಶಗಳು ಹಾಗೂ ಅಂತಾರಾಷ್ಟ್ರೀಯ ತಜ್ಞರಿಗೆ ವೇದಿಕೆಯನ್ನು ಒದಗಿಸಲಿದೆ. ಉದಯೋನ್ಮುಖ ಸವಾಲುಗಳು, ತಾಂತ್ರಿಕ ಪ್ರಗತಿಗಳು, ಡಿಜಿಟಲ್ ಪರಿವರ್ತನೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ವಿಶ್ವಾದ್ಯಂತದ ಕಾನೂನು ಮಾಪನಶಾಸ್ತ್ರ ವ್ಯವಸ್ಥೆಗಳ ಬದಲಾಗುತ್ತಿರುವ ಅಗತ್ಯತೆಗಳ ಕುರಿತು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಚರ್ಚೆಯ ಪ್ರಮುಖ ಕ್ಷೇತ್ರಗಳು
ಮೂರು ದಿನಗಳ ಕಾರ್ಯಕ್ರಮದಲ್ಲಿ, ಸಿಐಎಂಎಲ್ ಸದಸ್ಯರು ಅಂತಾರಾಷ್ಟ್ರೀಯ ಶಿಫಾರಸುಗಳ ಅಭಿವೃದ್ಧಿ ಮತ್ತು ಪರಿಷ್ಕರಣೆ, ಒಐಎಂಎಲ್ನ ತಾಂತ್ರಿಕ ಚಟುವಟಿಕೆಗಳು, ಒಐಎಂಎಲ್ ಪ್ರಮಾಣೀಕರಣ ವ್ಯವಸ್ಥೆ (ಒಐಎಂಎಲ್-ಸಿಎಸ್), ಡಿಜಿಟಲ್ ಪರಿವರ್ತನೆ, ಸಾಮರ್ಥ್ಯವರ್ಧನೆ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ಈ ಸಭೆಯು ಭಾಗವಹಿಸುವ ದೇಶಗಳ ನಡುವೆ ತಾಂತ್ರಿಕ ಜ್ಞಾನ ಮತ್ತು ಅನುಭವಗಳ ವಿನಿಮಯಕ್ಕೆ ಅನುಕೂಲ ಕಲ್ಪಿಸಲಿದ್ದು, ಮಾಪನ ವ್ಯವಸ್ಥೆಗಳನ್ನು ಬಲಪಡಿಸುವ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಮಾನದಂಡಗಳನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ.
ಸಿಐಎಂಎಲ್ನ 60ನೇ ಸಭೆಯು 2025ರ ಅಕ್ಟೋಬರ್ 13 ಮತ್ತು 15ರಂದು ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯಿತು. ಆ ಸಭೆಯಲ್ಲಿ 55 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರೊಂದಿಗೆ 12 ಸಹವರ್ತಿ ಸದಸ್ಯರು ಮತ್ತು ಸಂಪರ್ಕದಲ್ಲಿರುವ ಐದು ಸಂಸ್ಥೆಗಳ ಪ್ರತಿನಿಧಿಗಳೂ ಹಾಜರಿದ್ದರು. ಸ್ವಯಂಚಾಲಿತ ವಕ್ರೀಭವನ ಮಾಪಕಗಳು (automated refractometers), ತೂಕಗಳು ಮತ್ತು ವಾಹನಗಳ ವೇಗ ಮಾಪಕಗಳಿಗೆ ಸಂಬಂಧಿಸಿದ ತಾಂತ್ರಿಕ ಪ್ರಕಟಣೆಗಳಿಗೆ ಅನುಮೋದನೆ ನೀಡಿದ್ದು, ಒಐಎಂಎಲ್ ಪ್ರಮಾಣೀಕರಣ ವ್ಯವಸ್ಥೆಯ ಚೌಕಟ್ಟು, ಡಿಜಿಟಲೀಕರಣ ಮತ್ತು ಅಂತಾರಾಷ್ಟ್ರೀಯ ಸಹಕಾರದ ಕುರಿತು ಚರ್ಚಿಸಿದ್ದು ಆ ಸಭೆಯ ಪ್ರಮುಖ ಫಲಿತಾಂಶಗಳಾಗಿದ್ದವು.
ಜಾಗತಿಕ ಕಾನೂನು ಮಾಪನಶಾಸ್ತ್ರದಲ್ಲಿ ಭಾರತದ ಪಾತ್ರವನ್ನು ಬಲಪಡಿಸುವುದು
ಸಿಐಎಂಎಲ್ನ 61ನೇ ಸಭೆಯನ್ನು ಆಯೋಜಿಸುವುದರಿಂದ ಕಾನೂನು ಮಾಪನಶಾಸ್ತ್ರ ಕ್ಷೇತ್ರದಲ್ಲಿ ಭಾರತ ಕೈಗೊಂಡಿರುವ ಸುಧಾರಣೆಗಳು ಮತ್ತು ಸಾಧನೆಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶ ದೊರೆಯಲಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ನಿಯಂತ್ರಣ ಚೌಕಟ್ಟನ್ನು ಆಧುನೀಕರಿಸಲು, ಅನುಸರಣೆ ಪ್ರಕ್ರಿಯೆಗಳನ್ನು ಸರಳಗೊಳಿಸಲು, ವಿಶ್ವಾಸಾಧಾರಿತ ನಿಯಂತ್ರಣವನ್ನು ಉತ್ತೇಜಿಸಲು ಮತ್ತು ಗ್ರಾಹಕರಿಗೆ ದೃಢವಾದ ರಕ್ಷಣೆಯನ್ನು ಖಾತ್ರಿಪಡಿಸುವುದರೊಂದಿಗೆ ವ್ಯವಹಾರವನ್ನು ಸುಲಭಗೊಳಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಈ ಸಭೆಯಲ್ಲಿ ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್ಡಮ್, ಜಪಾನ್, ಚೀನಾ, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್, ಅಮೆರಿಕ ಸಂಯುಕ್ತ ಸಂಸ್ಥಾನ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಸೇರಿದಂತೆ ಒಐಎಂಎಲ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಹವರ್ತಿ ಸದಸ್ಯರು ಮತ್ತು ಸಂಬಂಧಿತ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.
ಈ ವೈವಿಧ್ಯಮಯ ಭಾಗವಹಿಸುವಿಕೆಯು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು, ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಹಂಚಿಕೊಳ್ಳಲು ಮತ್ತು ಕಾನೂನು ಮಾಪನಶಾಸ್ತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಅವಕಾಶಗಳನ್ನು ಒದಗಿಸಲಿದೆ. ಒಐಎಂಎಲ್ ಕಾರ್ಯತಂತ್ರ ಕಾರ್ಯಾಗಾರ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣದೊಂದಿಗೆ ನಡೆಯುವ ಈ ಸಭೆಯು ವಿಶ್ವಾಸಾರ್ಹ ಮಾಪನಗಳು, ನ್ಯಾಯಸಮ್ಮತ ವ್ಯಾಪಾರ, ತಾಂತ್ರಿಕ ನಾವೀನ್ಯತೆ ಮತ್ತು ಗ್ರಾಹಕರ ವಿಶ್ವಾಸಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ಕೊಡುಗೆ ನೀಡಲಿದೆ. ಜೊತೆಗೆ, ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿಯೂ ಸಹಕಾರಿಯಾಗಲಿದೆ.
ಉದ್ಯಮ ಮತ್ತು ಗ್ರಾಹಕರಿಗೆ ಪ್ರಯೋಜನಗಳು
ಈ ಸಭೆಯು ಅಂತಾರಾಷ್ಟ್ರೀಯ ಮಾಪನ ಮಾನದಂಡಗಳು, ಅನುಸರಣೆ ಮೌಲ್ಯಮಾಪನದ ಅಗತ್ಯತೆಗಳು ಮತ್ತು ಒಐಎಂಎಲ್ ಪ್ರಮಾಣೀಕರಣ ವ್ಯವಸ್ಥೆಯ ಕುರಿತು ಅರಿವನ್ನು ಹೆಚ್ಚಿಸುವ ಮೂಲಕ ಭಾರತೀಯ ತಯಾರಕರಿಗೆ ಪ್ರಯೋಜನಗಳನ್ನು ನೀಡುವ ನಿರೀಕ್ಷೆಯಿದೆ. ಇದು ಗುಣಮಟ್ಟದ ಉತ್ಪನ್ನಗಳ ಅಭಿವೃದ್ಧಿಗೆ ಬೆಂಬಲ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ.
ಮಾಪನದ ಅಗತ್ಯತೆಗಳಲ್ಲಿ ಹೆಚ್ಚಿನ ಸಮನ್ವಯವು ತಾಂತ್ರಿಕ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಹಾಗೂ ಅನ್ವಯವಾಗುವ ಸಂದರ್ಭಗಳಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆಗಳ ಪುನರಾವರ್ತನೆಯನ್ನು ತಪ್ಪಿಸಲು ಸಹಾಯ ಮಾಡಬಹುದು. ಗ್ರಾಹಕರ ದೃಷ್ಟಿಯಿಂದ, ವಹಿವಾಟುಗಳಲ್ಲಿ ನ್ಯಾಯಸಮ್ಮತತೆಯನ್ನು ಖಾತ್ರಿಪಡಿಸಲು, ಪ್ರಮಾಣದ ಸರಿಯಾದ ಘೋಷಣೆಯನ್ನು ಖಚಿತಪಡಿಸಲು ಮತ್ತು ಸರಕು ಹಾಗೂ ಸೇವೆಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸಲು ನಂಬಿಕಸ್ಥ ಮತ್ತು ನಿಖರವಾದ ಮಾಪನಗಳು ಅತ್ಯಗತ್ಯವಾಗಿವೆ.
ನಿಯಂತ್ರಣ ಸುಧಾರಣೆಗಳು, ಡಿಜಿಟಲೀಕರಣ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ತಾನು ಹೊಂದಿರುವ ಅನುಭವವನ್ನು ಹಂಚಿಕೊಳ್ಳಲು ಹಾಗೂ ಆಧುನಿಕ ಮತ್ತು ಪರಿಣಾಮಕಾರಿ ಕಾನೂನು ಮಾಪನಶಾಸ್ತ್ರ ವ್ಯವಸ್ಥೆಗಳ ಕುರಿತ ಅಂತಾರಾಷ್ಟ್ರೀಯ ಚರ್ಚೆಗಳಿಗೆ ಕೊಡುಗೆ ನೀಡಲು ಈ ಕಾರ್ಯಕ್ರಮವು ಭಾರತಕ್ಕೆ ಅವಕಾಶ ಕಲ್ಪಿಸಲಿದೆ.
ಕಾನೂನು ಮಾಪನಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರ
ಕಾನೂನು ಮಾಪನಶಾಸ್ತ್ರದ ಅಂತಾರಾಷ್ಟ್ರೀಯ ಸಂಸ್ಥೆ (ಒಐಎಂಎಲ್)ಯು ಕಾನೂನು ಮಾಪನಶಾಸ್ತ್ರದ ಕಾರ್ಯವಿಧಾನಗಳ ಜಾಗತಿಕ ಸಮನ್ವಯವನ್ನು ಉತ್ತೇಜಿಸುವ ಉದ್ದೇಶದಿಂದ 1955ರಲ್ಲಿ ಸ್ಥಾಪಿಸಲಾದ ಅಂತರ್ಸರ್ಕಾರಿ ಸಂಸ್ಥೆಯಾಗಿದೆ. ವ್ಯಾಪಾರ, ಉದ್ಯಮ, ಆರೋಗ್ಯ ಸೇವೆ, ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಬಳಸುವ ಮಾಪನ ಸಾಧನಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಶಿಫಾರಸುಗಳು, ಮಾನದಂಡಗಳು ಮತ್ತು ಸಂಬಂಧಿತ ದಾಖಲೆಗಳನ್ನು ಇದು ರೂಪಿಸುತ್ತದೆ.
ಕಾನೂನು ಮಾಪನಶಾಸ್ತ್ರದ ಅಂತಾರಾಷ್ಟ್ರೀಯ ಸಮಿತಿಯು (ಸಿಐಎಂಎಲ್) ಒಐಎಂಎಲ್ನ ತಾಂತ್ರಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾಗಿದೆ. ಇದರ ವಾರ್ಷಿಕ ಸಭೆಯು ನೀತಿ ವಿಷಯಗಳು, ತಾಂತ್ರಿಕ ಬೆಳವಣಿಗೆಗಳು ಮತ್ತು ಕಾನೂನು ಮಾಪನಶಾಸ್ತ್ರ ಕ್ಷೇತ್ರದ ಅಂತಾರಾಷ್ಟ್ರೀಯ ಸಹಕಾರದ ಕುರಿತು ಚರ್ಚಿಸಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.
ಸಿಐಎಂಎಲ್ನ 61ನೇ ಸಭೆಯನ್ನು ಆಯೋಜಿಸುವ ಮೂಲಕ, ಅಂತಾರಾಷ್ಟ್ರೀಯ ಸಹಯೋಗ ಮತ್ತು ಸಮನ್ವಯದ ಮಾಪನ ಮಾನದಂಡಗಳ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಇದು ನ್ಯಾಯಸಮ್ಮತ ವ್ಯಾಪಾರ, ಗ್ರಾಹಕರ ರಕ್ಷಣೆ ಮತ್ತು ವಿಶ್ವಾದ್ಯಂತದ ಮಾಪನ ವ್ಯವಸ್ಥೆಗಳ ಮೇಲಿನ ವಿಶ್ವಾಸವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.
*****
(ಪ್ರಕಟಣೆ ಐ.ಡಿ.: 2325029)
ವಿಸಿಟರ್ ಕೌಂಟರ್ : 11