ಶಿಕ್ಷಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಆದಾಯ ಮತ್ತು ಪ್ರತಿಭಾ ವಿದ್ಯಾರ್ಥಿವೇತನ ಯೋಜನೆಯ (ಎನ್ ಎಂ ಎಂ ಎಸ್ ಎಸ್) ವಿದ್ಯಾರ್ಥಿ ವೇತನ ಜಾರಿ ಮತ್ತು ಪರಿಶೀಲನಾ ಪ್ರಕ್ರಿಯೆ ಬಲವರ್ಧನೆಗೆ ಶಿಕ್ಷಣ ಸಚಿವಾಲಯದಿಂದ ಪುನರ್ ಮನನ ಮತ್ತು ಅವಲೋಕನ ಕಾರ್ಯಾಗಾರ


2026–27ನೇ ಶೈಕ್ಷಣಿಕ ವರ್ಷದ ಎನ್‌ಎಂಎಂಎಸ್‌ಎಸ್ ಅರ್ಜಿಗಳ ನೋಂದಣಿ ಮತ್ತು ಪರಿಶೀಲನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಚಿವಾಲಯ ಸೂಚನೆ

ಅರ್ಹ ವಿದ್ಯಾರ್ಥಿಗಳಿಗೆ  ಎನ್‌ಎಂಎಂಎಸ್‌ಎಸ್ ಮೂಲಕ ವಾರ್ಷಿಕ 12,000 ಕೋಟಿ ರೂ. ವಿದ್ಯಾರ್ಥಿವೇತನ ವಿತರಣೆ

ಪ್ರಕಟಣಾ ದಿನಾಂಕ: 15 OCT 2026 3:46PM by PIB Bengaluru

ಕೇಂದ್ರ ಶಿಕ್ಷಣ ಸಚಿವಾಲಯದಡಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಒಎಸ್‌ಇಎಲ್‌) ರಾಷ್ಟ್ರೀಯ ಆದಾಯ ಮತ್ತು ಪ್ರತಿಭಾ ವಿದ್ಯಾರ್ಥಿವೇತನ ಯೋಜನೆಯ (ಎನ್‌ಎಂಎಂಎಸ್‌ಎಸ್‌) ಕುರಿತು ಒಂದು ದಿನದ ಪ್ರಾದೇಶಿಕ ಪುನರ್ ಮನನ ಮತ್ತು ಪರಿಶೀಲನಾ ಕಾರ್ಯಾಗಾರವನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ (2026ರ ಅಕ್ಟೋಬರ್‌ 14) ಆಯೋಜಿಸಿತ್ತು.

ಯೋಜನೆಯ ಅನುಷ್ಠಾನ ಪ್ರಗತಿಯ ಪರಿಶೀಲನೆ, ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ (ಎನ್‌ಎಸ್‌ಪಿ) ಮೂಲಕ ಅದರ ಕಾರ್ಯನಿರ್ವಹಣೆಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ವಿದ್ಯಾರ್ಥಿಗಳ ಅರ್ಜಿಗಳನ್ನು ಸಂಸ್ಥೆಯ ನೋಡಲ್‌ ಅಧಿಕಾರಿಗಳು (ಐಎನ್‌ಒ) ಮತ್ತು ಜಿಲ್ಲಾ ನೋಡಲ್‌ ಅಧಿಕಾರಿಗಳ (ಡಿಎನ್‌ಒ) ಹಂತದಲ್ಲಿ ಪರಿಶೀಲಿಸುವಾಗ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

2026–27ನೇ ಶೈಕ್ಷಣಿಕ ವರ್ಷದ ಎನ್‌ಎಂಎಂಎಸ್‌ಎಸ್‌ ಜಾರಿಗೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ವಿವರವಾದ ಪ್ರಾತ್ಯಕ್ಷಿಕೆ ಮತ್ತು ಸಂವಾದಾತ್ಮಕ ತಾಂತ್ರಿಕ ಗೋಷ್ಠಿಗಳನ್ನು ನಡೆಸಲಾಯಿತು. ಅವುಗಳಲ್ಲಿ ಪ್ರಮುಖವಾಗಿ:

  • ಹೊಸ ವಿದ್ಯಾರ್ಥಿಗಳ ನೋಂದಣಿ
  • ಪೋರ್ಟಲ್‌ಗೆ ಸೇರ್ಪಡೆಯ ಸ್ಥಿತಿಗತಿ
  • ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ
  • ಐಎನ್ ಒ ಮತ್ತು ಡಿಎನ್ ಒ ಅಧಿಕಾರಿಗಳಿಗಾಗಿ ಎನ್‌ಎಸ್‌ಪಿ ಪ್ರಕ್ರಿಯೆಗಳ ನೇರ ಪ್ರಾತ್ಯಕ್ಷಿಕೆ
  • ಎನ್‌ಎಂಎಂಎಸ್‌ಎಸ್‌ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪ್ರತಿಕ್ರಿಯೆ ಮತ್ತು ಅನುಭವ ಹಂಚಿಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆರ್ಥಿಕ ಸಲಹೆಗಾರರಾದ ಎ. ಶ್ರೀಜಾ ಅವರು ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ರಾಜ್ಯ, ಜಿಲ್ಲೆ ಮತ್ತು ಶಿಕ್ಷಣ ಸಂಸ್ಥೆಗಳ ಹಂತದಲ್ಲಿ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮಧ್ಯಪ್ರದೇಶದ ರಾಷ್ಟ್ರೀಯ ಶಿಕ್ಷಣ ಕೇಂದ್ರದ ಜಂಟಿ ನಿರ್ದೇಶಕರು ಹಾಗೂ ಎನ್‌ಎಂಎಂಎಸ್‌ಎಸ್‌ ರಾಜ್ಯ ನೋಡಲ್‌ ಅಧಿಕಾರಿ, ಸುಮಾರು 40 ಜಿಲ್ಲಾ ನೋಡಲ್‌ ಅಧಿಕಾರಿಗಳು ಮತ್ತು ಭೋಪಾಲ್‌ ಜಿಲ್ಲೆಯ ಐವರು ಸಂಸ್ಥೆ ನೋಡಲ್‌ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿ ಫಲಾನುಭವಿಗಳು ಮತ್ತು ಅವರ ಪಾಲಕರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2026–27ನೇ ಶೈಕ್ಷಣಿಕ ವರ್ಷಕ್ಕೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ (ಎನ್‌ಎಸ್‌ಪಿ) ಫಲಾನುಭವಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ನಿಖರವಾಗಿ ಮತ್ತು ಸಕಾಲದಲ್ಲಿ ಪರಿಶೀಲಿಸುವಲ್ಲಿ ರಾಜ್ಯ ನೋಡಲ್‌ ಅಧಿಕಾರಿಗಳು (ಎಸ್‌ಎನ್‌ಒ), ಜಿಲ್ಲಾ ನೋಡಲ್‌ ಅಧಿಕಾರಿಗಳು (ಡಿಎನ್‌ಒ) ಹಾಗೂ ಸಂಸ್ಥೆ ನೋಡಲ್‌ ಅಧಿಕಾರಿಗಳ (ಐಎನ್‌ಒ) ಪಾತ್ರ ಮಹತ್ವದ್ದಾಗಿದೆ ಎಂದು ಸಚಿವಾಲಯ ಒತ್ತಿಹೇಳಿತು. 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ಅರ್ಜಿಗಳ ನೋಂದಣಿಗೆ 2026ರ ಅಕ್ಟೋಬರ್‌ 31 ಕೊನೆಯ ದಿನವಾಗಿದೆ. ಸಂಸ್ಥೆ ನೋಡಲ್‌ ಅಧಿಕಾರಿ ಹಂತದಲ್ಲಿ ಅರ್ಜಿಗಳ ಪರಿಶೀಲನೆಗೆ 2026ರ ನವೆಂಬರ್‌ 15 ಹಾಗೂ ಜಿಲ್ಲಾ ನೋಡಲ್‌ ಅಧಿಕಾರಿ ಹಂತದಲ್ಲಿ ಪರಿಶೀಲನೆಗೆ ನವೆಂಬರ್‌ 30 ಕೊನೆಯ ದಿನಗಳಾಗಿವೆ.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಕಾರ್ಯಾಚರಣೆ ಮತ್ತು ತಾಂತ್ರಿಕ ಸವಾಲುಗಳನ್ನು ಗುರುತಿಸಲು ಹಾಗೂ ನೋಂದಣಿ, ಪರಿಶೀಲನೆ ಮತ್ತು ವಿದ್ಯಾರ್ಥಿವೇತನ ವಿತರಣಾ ಪ್ರಕ್ರಿಯೆಗಳನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ಕ್ರಮಗಳ ಕುರಿತು ಚರ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂವಾದವು ಅವಕಾಶ ಕಲ್ಪಿಸಿತು.

ರಾಜ್ಯ, ಜಿಲ್ಲೆ ಮತ್ತು ಶಿಕ್ಷಣ ಸಂಸ್ಥೆಗಳ ಹಂತದಲ್ಲಿ ಅಧಿಕಾರಿಗಳ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸುವುದು ಹಾಗೂ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿರುವ ಎಲ್ಲರ ನಡುವಿನ ಸಮನ್ವಯವನ್ನು ಬಲಪಡಿಸುವುದೂ ಕಾರ್ಯಾಗಾರದ ಉದ್ದೇಶವಾಗಿತ್ತು. ಎನ್‌ಎಂಎಂಎಸ್‌ಎಸ್‌ ಅಡಿಯಲ್ಲಿ ಅರ್ಹ ಫಲಾನುಭವಿಗಳೆಲ್ಲರಿಗೂ ಶೇಕಡ ನೂರಕ್ಕೆ ನೂರರಷ್ಟು ವಿದ್ಯಾರ್ಥಿವೇತನ ತಲುಪಿಸುವುದು ಮತ್ತು ಅವರಲ್ಲಿ ಯಾರೊಬ್ಬರೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಂತೆ ನೋಡಿಕೊಳ್ಳುವ ಬದ್ಧತೆಯನ್ನು ಸಚಿವಾಲಯ ಪುನರುಚ್ಚರಿಸಿತು.

ರಾಷ್ಟ್ರೀಯ ಆದಾಯ ಮತ್ತು ಪ್ರತಿಭಾ ವಿದ್ಯಾರ್ಥಿವೇತನ ಯೋಜನೆಯು (ಎನ್‌ಎಂಎಂಎಸ್‌ಎಸ್‌) ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಒದಗಿಸುವ ಕೇಂದ್ರ ವಲಯದ ಯೋಜನೆಯಾಗಿದೆ. 8ನೇ ತರಗತಿಯ ನಂತರ ವಿದ್ಯಾರ್ಥಿಗಳು ಶಾಲೆ ತೊರೆಯುವುದನ್ನು ಕಡಿಮೆ ಮಾಡುವುದು ಹಾಗೂ 12ನೇ ತರಗತಿವರೆಗೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 12,000 ರೂ. ವಿದ್ಯಾರ್ಥಿವೇತನ ನೀಡಲಾಗುವುದು. ಆಯ್ಕೆ ಪರೀಕ್ಷೆಯನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸುತ್ತವೆ. ವಿದ್ಯಾರ್ಥಿಗಳ ನೋಂದಣಿ, ದೃಢೀಕರಣ ಮತ್ತು ವಿದ್ಯಾರ್ಥಿವೇತನ ವಿತರಣೆಯನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ ಮೂಲಕ ಕೈಗೊಳ್ಳಲಾಗುವುದು.

 

*****


(ಪ್ರಕಟಣೆ ಐ.ಡಿ.: 2323914) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil