ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಬುಡಕಟ್ಟು ಭಾಷೆಗಳ ಕಾರ್ಯಕಾರಿ ಗುಂಪಿನ ಮೊದಲ ಸಭೆ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಬುಡಕಟ್ಟು ಭಾಷೆಗಳ ದಾಖಲೀಕರಣ, ಡಿಜಿಟಲ್ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಕ್ರಿಯಾ ಯೋಜನೆಯ ಕುರಿತು ತಜ್ಞರ ಚರ್ಚೆ
ರಾಷ್ಟ್ರೀಯ ಬುಡಕಟ್ಟು ಭಾಷಾ ಭಂಡಾರವನ್ನಾಗಿ 'ಆದಿ ವಾಣಿ'ಯನ್ನು ರೂಪಿಸಲಾಗುತ್ತಿದೆ
ಪ್ರಕಟಣಾ ದಿನಾಂಕ:
15 OCT 2026 10:44AM by PIB Bengaluru
ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇಂದು ಹೈಬ್ರಿಡ್ ಕಾರ್ಯಾಗಾರ ಮಾದರಿಯಲ್ಲಿ 'ಬುಡಕಟ್ಟು ಭಾಷೆಗಳ ಕಾರ್ಯಕಾರಿ ಗುಂಪಿನ' ಮೊದಲ ಸಭೆಯನ್ನು ನಡೆಸಿತು. ಸಭೆಯ ಅಧ್ಯಕ್ಷತೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಂಜನಾ ಚೋಪ್ರಾ ವಹಿಸಿದ್ದರು. ಭಾಷಾ ಸಮಿತಿಯ ಅಧ್ಯಕ್ಷರಾದ ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ರಾವ್ ಸೇರಿದಂತೆ ದೇಶಾದ್ಯಂತದ ಖ್ಯಾತ ಭಾಷಾತಜ್ಞರು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಸಮುದಾಯದ ಭಾಷೆಯನ್ನು ಬಳಸುವವರು ಸಭೆಯಲ್ಲಿ ಭಾಗವಹಿಸಿದ್ದರು.

ದೇಶದ ಪ್ರಮುಖ ಸಂಸ್ಥೆಗಳ ಸದಸ್ಯರೊಂದಿಗೆ ಸಚಿವಾಲಯವು ಈ ಕಾರ್ಯಕಾರಿ ಗುಂಪನ್ನು ರಚಿಸಿದೆ. ಇದರಲ್ಲಿ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿಐಐಎಲ್), ದೆಹಲಿ, ಧಾರವಾಡ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು), ತೇಜ್ ಪುರ ವಿಶ್ವವಿದ್ಯಾಲಯ, ಮಣಿಪುರ ವಿಶ್ವವಿದ್ಯಾಲಯ, ಅಸ್ಸಾಂ ವಿಶ್ವವಿದ್ಯಾಲಯ, ಸಿಕ್ಕಿಂ ವಿಶ್ವವಿದ್ಯಾಲಯ, ಲಿವಿಂಗ್ ಟಂಗ್ಸ್ ಇನ್ಸ್ಟಿಟ್ಯೂಟ್ ಫಾರ್ ಎಂಡೇಂಜರ್ಡ್ ಲ್ಯಾಂಗ್ವೇಜಸ್, ಕೌನ್ಸಿಲ್ ಫಾರ್ ಡೈವರ್ಸಿಟಿ ಆಂಡ್ ಇನ್ನೋವೇಶನ್ (ಸಿಒಡಿಐಎನ್) ಮತ್ತು ಭಾಷಾ ಸಮಿತಿ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳಿದ್ದಾರೆ. ಈ ಕಾರ್ಯಕಾರಿ ಗುಂಪು ದೇಶಾದ್ಯಂತ ಬುಡಕಟ್ಟು ಭಾಷೆಗಳ ದಾಖಲೀಕರಣ, ಸಂರಕ್ಷಣೆ, ಸಂಶೋಧನೆ ಮತ್ತು ಪ್ರಚಾರದ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಲಿದೆ.
ಭಾಷಾ ಸಂರಕ್ಷಣೆ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಒತ್ತು: ಸಭೆಯಲ್ಲಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಂಜನಾ ಚೋಪ್ರಾ, ಬುಡಕಟ್ಟು ಸಮುದಾಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಂಪರ್ಕ ಸಾಧಿಸಲು ಭಾಷೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ವೃತ್ತಿಪರರು ಮತ್ತು ಆಡಳಿತಗಾರರಿಗೆ ಅನುವಾದದ ಸಾಧನವಾಗಿ ಪ್ರಾರಂಭವಾದ 'ಆದಿ ವಾಣಿ' ಭಾಷಾ ಪ್ರಯೋಗ ಸಂಗ್ರಹ. ಭಾಷಾ ಸಂಪುಟಗಳು, ಪಠ್ಯಪುಸ್ತಕಗಳು, ನಿಘಂಟುಗಳು ಮತ್ತು ಸಮುದಾಯದ ಕಥೆಗಳನ್ನು ಒಂದೆಡೆ ತರುವ ಸಮಗ್ರ ಭಾಷಾ ಭಂಡಾರವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವ ಅಂಶದ ಬಗ್ಗೆ ಅವರು ಗಮನ ಸೆಳೆದರು. ಆರಂಭಿಕ ಕಲಿಕೆಯ ವರ್ಷಗಳಲ್ಲಿ ಕಲಿಕೆಯ ಅಂತರವನ್ನು ನಿವಾರಿಸುವಲ್ಲಿ ಮಾತೃಭಾಷಾ ಆಧಾರಿತ ಬಹುಭಾಷಾ ಶಿಕ್ಷಣದ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಸಂಸ್ಥೆಗಳು ಮತ್ತು ವಿದ್ವಾಂಸರು ಈಗಾಗಲೇ ಕೈಗೊಂಡಿರುವ ಕೆಲಸಗಳನ್ನು ಪ್ರತ್ಯೇಕವಾಗಿ ಮತ್ತೆ ಮಾಡುವುದನ್ನು ತಪ್ಪಿಸಿ, ಒಂದೇ ವೇದಿಕೆಯಲ್ಲಿ ತರುವಂತೆ ಕರೆ ನೀಡಿದರು.
ಬುಡಕಟ್ಟು ಭಾಷೆಗಳ ದಾಖಲೀಕರಣಕ್ಕಾಗಿ ಕ್ರಿಯಾ ಯೋಜನೆ: ಈ ಉಪಕ್ರಮದ ಹಿನ್ನೆಲೆಯನ್ನು ಪ್ರಸ್ತುತಪಡಿಸಿದ ಜಂಟಿ ಕಾರ್ಯದರ್ಶಿಯವರು, ಬುಡಕಟ್ಟು ಸಮುದಾಯಗಳ ಸಮೃದ್ಧ ಭಾಷಿಕ ವೈವಿಧ್ಯತೆಯನ್ನು ಮತ್ತು ಅವರ ಭಾಷೆಗಳನ್ನು ದಾಖಲಿಸುವ ಹಾಗೂ ಸಂರಕ್ಷಿಸುವ ಅಗತ್ಯವನ್ನು ವಿವರಿಸಿದರು. ಬುಡಕಟ್ಟು ಭಾಷೆಗಳ ರಾಷ್ಟ್ರೀಯ ಮೂಲರೇಖೆ ಸಂಶೋಧನೆ ಮತ್ತು ವಿದ್ಯಾರ್ಥಿವೇತನ, ಡಿಜಿಟಲ್ ದಾಖಲೀಕರಣ ಮತ್ತು ಭಾಷಾ ತಂತ್ರಜ್ಞಾನ, ಮೌಖಿಕ ಪರಂಪರೆಗಳು ಹಾಗೂ ಸಾಂಸ್ಕೃತಿಕ ಸಂಪನ್ಮೂಲಗಳ ಸಮುದಾಯ-ಚಾಲಿತ ದಾಖಲೀಕರಣ, ಬಹುಭಾಷಾ ಶಿಕ್ಷಣ ಮತ್ತು ಕಲಿಕಾ ಸಾಮಗ್ರಿಗಳು, ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳು (ಟಿ ಆರ್ ಐಗಳು), ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಒಳಗೊಂಡ ಕಾರ್ಯಾಚಾರಿ ಗುಂಪಿನ ಪ್ರಸ್ತಾವಿತ ಚೌಕಟ್ಟನ್ನು ಅವರು ಪ್ರಸ್ತುತಪಡಿಸಿದರು.

ಆದಿ ವಾಣಿ: ರಾಷ್ಟ್ರೀಯ ಬುಡಕಟ್ಟು ಭಾಷಾ ಭಂಡಾರದ ನಿರ್ಮಾಣ: ಸಚಿವಾಲಯದ ಸಹಯೋಗದೊಂದಿಗೆ ಐಐಟಿ ದೆಹಲಿ ಅಭಿವೃದ್ಧಿಪಡಿಸಿದ 'ಆದಿ ವಾಣಿ' ವೇದಿಕೆಯ ಪ್ರಗತಿಯನ್ನು ಸಭೆಯು ಪರಿಶೀಲಿಸಿತು. ಈ ವೇದಿಕೆಯು ಒಂಬತ್ತು ಬುಡಕಟ್ಟು ಭಾಷೆಗಳಲ್ಲಿ ಪಠ್ಯದಿಂದ ಪಠ್ಯಕ್ಕೆ ಅನುವಾದವನ್ನು ನೀಡುತ್ತದೆ. ಇದರೊಂದಿಗೆ ಧ್ವನಿ , ಆಪ್ಟಿಕಲ್ ಕ್ಯಾರೇಕ್ಟರ್ ರೆಕಗ್ನಿಷನ್ (ಒಸಿಆರ್) ಮತ್ತು ವೀಡಿಯೊ ಸಬ್ಟೈಟಲಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಟಿಆರ್ ಐಗಳು ಸಿದ್ಧಪಡಿಸಿದ 300ಕ್ಕೂ ಹೆಚ್ಚು ಪ್ರೈಮರ್ ಗಳಿಗೆ ಹುಡುಕಬಹುದಾದ ಸುಲಭಲಭ್ಯತೆಯನ್ನು ಸಹ ಒದಗಿಸುತ್ತದೆ. ರಾಜ್ಯ ಟಿಆರ್ ಐಗಳು ಹತ್ತು ಭಾಷೆಗಳಲ್ಲಿ ಸುಮಾರು 13.9 ಲಕ್ಷ ಪಠ್ಯ ವಾಕ್ಯಗಳನ್ನು ಮತ್ತು ಸುಮಾರು 300 ಗಂಟೆಗಳ ಧ್ವನಿ ದತ್ತಾಂಶವನ್ನು ಕೊಡುಗೆಯಾಗಿ ನೀಡಿವೆ. ಈ ವೇದಿಕೆಯು 48,000ಕ್ಕೂ ಹೆಚ್ಚು ಆಂಡ್ರಾಯ್ಡ್ ಡೌನ್ ಲೋಡ್ ಗಳನ್ನು ಮತ್ತು ತಿಂಗಳಿಗೆ ಸುಮಾರು 6,500 ಬಳಕೆದಾರರನ್ನು ದಾಖಲಿಸಿದೆ. ಯೋಜಿತ ಪ್ರಾಯೋಗಿಕ ಯೋಜನೆಗಳಿಗೆ ಅಗತ್ಯವಿರುವ ದತ್ತಾಂಶಗಳ ಭಾಷಾ ಪರಿಶೀಲನೆ, ಕಾಗುಣಿತ ಮತ್ತು ಅಕ್ಷರ ಸಂಯೋಜನೆಯ ಪ್ರಮಾಣೀಕರಣ ಮತ್ತು ವಿಷಯಕ್ಕೆ ಮೀಸಲಿಟ್ಟ ಶಬ್ದಕೋಶದ ಅಭಿವೃದ್ಧಿಯಲ್ಲಿ ಕಾರ್ಯಕಾರಿ ಗುಂಪಿನ ಬೆಂಬಲವನ್ನು ಐಐಟಿ ದೆಹಲಿ ಕೋರಿತು.
ಭಾರತೀಯ ಭಾಷೆಗಳ ಅಭಿವೃದ್ಧಿಗೆ ಏಳು ಸ್ತಂಭಗಳು: ಭಾಷಾ ಸಮಿತಿಯ ಅಧ್ಯಕ್ಷರಾದ ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರಿ ಅವರು ಯಾವುದೇ ಭಾರತೀಯ ಭಾಷೆಯ ಅಭಿವೃದ್ಧಿಗೆ ಅಗತ್ಯವಾದ ಏಳು ಮುಖ್ಯ ಸ್ತಂಭಗಳ ಬಗ್ಗೆ ವಿವರಿಸಿದರು: ಮಾತನಾಡುವವರಲ್ಲಿ ಮಾತೃಭಾಷೆಯ ನಿರಂತರ ಪ್ರಾವೀಣ್ಯತೆ; ಶಿಕ್ಷಣ, ಆಡಳಿತ, ಸಂವಹನ ಮತ್ತು ಮನರಂಜನೆಯಲ್ಲಿ ಭಾಷೆಯ ಬಳಕೆ; ಸಮಕಾಲೀನ ಸಾಹಿತ್ಯ ಮತ್ತು ಜ್ಞಾನದ ವಿಷಯಗಳು; ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನಿರಂತರ ಹೊಸ ಪದಗಳ ಸೃಷ್ಟಿ; ತಂತ್ರಜ್ಞಾನದ ಅಳವಡಿಕೆ; ಆನ್ ಲೈನ್ ಮತ್ತು ಆಫ್ ಲೈನ್ ಬೋಧನಾ ಕಲಿಕಾ ಸಾಮಗ್ರಿಗಳು ಮತ್ತು ವ್ಯವಸ್ಥೆಗಳು; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಒಟ್ಟಾರೆ ಸಮಾಜದ ಬೆಂಬಲ. ಭಾಷಾ ಅಭಿವೃದ್ಧಿಯ ಎಲ್ಲಾ ಪ್ರಯತ್ನಗಳಲ್ಲಿ ಆ ಭಾಷೆಯನ್ನು ಮಾತನಾಡುವವರೇ ಇರತಕ್ಕದ್ದು ಎಂದು ಅವರು ಒತ್ತಿಹೇಳಿದರು.
ಭಾರತದ ಎಲ್ಲಾ ಮಾತೃಭಾಷೆಗಳು ರಾಷ್ಟ್ರ ಭಾಷೆಗಳೇ ಆಗಿವೆ ಎನ್ನುವ ಗೌರವಾನ್ವಿತ ಪ್ರಧಾನಮಂತ್ರಿಯವರ ಮಾತುಗಳನ್ನು ಸ್ಮರಿಸಿದ ಅವರು, ಯಾವುದೇ ಭಾಷೆಯನ್ನು ಸಣ್ಣದು ಅಥವಾ ದೊಡ್ಡದು ಎಂದು ಪರಿಗಣಿಸಬಾರದು ಎಂದರು. ವೈವಿಧ್ಯತೆಯೇ ಸೌಂದರ್ಯ ಮತ್ತು ಒಗ್ಗಟ್ಟೇ ಶಕ್ತಿ ಎಂಬ 'ಏಕ ಭಾರತ ಶ್ರೇಷ್ಠ ಭಾರತ' ಭಾವನೆಯಲ್ಲಿ ಭಾಷಾ ವೈವಿಧ್ಯತೆಯನ್ನು ಆಚರಿಸಲು ಅವರು ಕರೆ ನೀಡಿದರು, ಜೊತೆಗೆ ವಿವಿಧ ಭಾಷೆಗಳನ್ನು ಮಾತನಾಡುವವರ ನಡುವೆ ಆತ್ಮೀಯತೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸಿದರು. ಭಾಷಾ ಸಮಿತಿ, ಕೇಂದ್ರ ಮತ್ತು ರಾಜ್ಯ ಬುಡಕಟ್ಟು ವಿಶ್ವವಿದ್ಯಾಲಯಗಳು, ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್ ಎಸ್ ಆರ್) ಮತ್ತು 38 ಬುಡಕಟ್ಟು ಅಧ್ಯಯನ ಯೋಜನೆಗಳಿಗೆ ಬೆಂಬಲ ನೀಡಿದ ಶಿಕ್ಷಣ ಸಚಿವಾಲಯದ ಐಕೆಎಸ್ ವಿಭಾಗದ ನಡುವೆ ಸಹಯೋಗವನ್ನು ಅವರು ಸಲಹೆ ಮಾಡಿದರು. ಗಮನಹರಿಸಬೇಕಾದ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುವಂತೆ ಅವರು ಕಾರ್ಯಾಕಾರಿ ಗುಂಪನ್ನು ಒತ್ತಾಯಿಸಿದರು.
ದಾಖಲೀಕರಣ ಮತ್ತು ಪುನರುಜ್ಜೀವನದ ಯೋಜನೆ: ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ರಾವ್ ಅವರು ಬುಡಕಟ್ಟು ಭಾಷಾ ದಾಖಲೀಕರಣ ಮತ್ತು ಪುನರುಜ್ಜೀವನದ ಯೋಜನೆಯನ್ನು ಪ್ರಸ್ತುತಪಡಿಸಿದರು. ಈ ಪ್ರಸ್ತಾಪಗಳಲ್ಲಿ - ಹುಡುಕಬಹುದಾದ ರಾಷ್ಟ್ರೀಯ ದತ್ತಾಂಶಗಳಲ್ಲಿ ಬರಹಗಾರರು, ವಿದ್ವಾಂಸರು ಮತ್ತು ಸಂಪನ್ಮೂಲಗಳ ರಾಜ್ಯವಾರು ಮತ್ತು ಭಾಷಾವಾರು ಡೈರೆಕ್ಟರಿಗಳ ರಚನೆ; ತರಬೇತಿ ಪಡೆದ ಬುಡಕಟ್ಟು ಯುವಕರನ್ನು ಸಂಶೋಧಕರನ್ನಾಗಿ ಹೊಂದಿರುವ ಜಿಲ್ಲಾಮಟ್ಟದ ಸಮುದಾಯ ಸಂಪನ್ಮೂಲ ಗುಂಪುಗಳು; ಅಸ್ತಿತ್ವದಲ್ಲಿರುವ ಬುಡಕಟ್ಟು ಭಾಷಾ ಸಂಸ್ಥೆಗಳ ಪುನರುಜ್ಜೀವನ; ಆದಿ ವಾಣಿ ಮೂಲಕ ಸಮುದಾಯದ ಡಿಜಿಟಲ್ ಆರ್ಕೈವ್ ಗಳ ನಿರ್ವಹಣೆ; ತ್ರೈಮಾಸಿಕ ಪರಾಮರ್ಶೆಗಳೊಂದಿಗೆ ಎರಡು ವರ್ಷಗಳ ಕ್ರಿಯಾ ಯೋಜನೆ ಸೇರಿವೆ.
ವಿಕಸಿತ ಭಾರತದ ದೃಷ್ಟಿಕೋನದ ಭಾಗವಾಗಿ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಭಾಷಾ ಸಂಪನ್ಮೂಲಗಳನ್ನು ಸಕ್ರಿಯವಾಗಿ ಸೃಷ್ಟಿಸಬೇಕು ಮತ್ತು ಕೊಡುಗೆ ನೀಡಬೇಕು ಎಂದು ಅವರು ಒತ್ತಿಹೇಳಿದರು.
ಸಾಂಸ್ಥಿಕ ಸಹಯೋಗ ಮತ್ತು ಭಾಷಾ ತಂತ್ರಜ್ಞಾನ: ಮೈಸೂರಿನ ಸಿಐಐಎಲ್ ಸಂಸ್ಥೆಯ ನಿರ್ದೇಶಕರಾದ ಪ್ರೊ. ಬಸವರಾಜ್ ಕುಡಗಂಟಿ ಅವರು ಭಾಷೆಗಳಿಗೆ ಹಂತ ಹಂತವಾಗಿ ಆದ್ಯತೆ ನೀಡುವುದು, ಸಂಯೋಜಕರೊಂದಿಗೆ ವಲಯವಾರು ತಂಡಗಳನ್ನು ಸ್ಥಾಪಿಸುವುದು ಮತ್ತು ಸಂಸ್ಥೆಗಳು ಹಾಗೂ ವೈಯಕ್ತಿಕ ಸಂಶೋಧಕರು ಕೊಡುಗೆ ನೀಡಬಹುದಾದ ಸಾಮಾನ್ಯ ಭಂಡಾರವನ್ನು ಅಭಿವೃದ್ಧಿಪಡಿಸಲು ಸಲಹೆ ನೀಡಿದರು. ಸಿಐಐಎಲ್ ನ ಮಾಜಿ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಅವರು ಸಮುದಾಯಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ತ್ರಿಪಕ್ಷೀಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಎಲ್ಲಾ ರಾಜ್ಯಗಳಲ್ಲಿ ಬುಡಕಟ್ಟು ಭಾಷೆಗಳು ಹಾಗೂ ಮಾತೃಭಾಷೆಗಳ ನಕ್ಷೆಯನ್ನು ಸಿದ್ಧಪಡಿಸುವ ಪ್ರಸ್ತಾಪವನ್ನು ಮುಂದಿಟ್ಟರು.
ಸಿಒಡಿಐಎನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಕಾರ್ತಿಕ್ ನಾರಾಯಣನ್, ಸಾಮಾನ್ಯ ಮೆಟಾಡೇಟಾ ಮಾನದಂಡಗಳಿಂದ ಬೆಂಬಲಿತವಾದ ಡಿಜಿಟಲ್ ಆರ್ಕೈವ್ ಗಳ ಒಕ್ಕೂಟದ ಜಾಲದ ಬಗ್ಗೆ ಪ್ರಸ್ತಾಪ ಮಾಡಿದರು, ಇದರಲ್ಲಿ 'ಆದಿ ವಾಣಿ' ರಾಷ್ಟ್ರೀಯ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಕ್ರಮವನ್ನು ಬೆಂಬಲಿಸಲು ಸಿಒಡಿಐಎನ್ ನ ಧ್ವನಿ ಡೇಟಾ ಸೆಟ್ ಗಳು ಮತ್ತು ಸಮುದಾಯ ತರಬೇತಿ ಕಾರ್ಯಕ್ರಮಗಳನ್ನು ಸಹ ಅವರು ನೀಡಿದರು.
ತೇಜ್ಪುರ ವಿಶ್ವವಿದ್ಯಾಲಯದ ಡಾ. ಅಮಲೇಶ್ ಗೋಪ್ ಅವರು ಒಂದೇ ಸ್ವರದ ಭಾಷೆಗಳಿಗೆ ಧ್ವನಿ ತಂತ್ರಜ್ಞಾನದ ಪರಿಣತಿಯನ್ನು ಹಾಗೂ ಈಶಾನ್ಯ ಭಾಗದ ಭಾಷೆಗಳಿಗೆ ನಿಘಂಟುಗಳು ಮತ್ತು ಧ್ವನಿ ದತ್ತಾಂಶಗಳನ್ನು(ಡೇಟಾ ಸೆಟ್) ಒದಗಿಸಿದರು. ಐಐಟಿ ಕಾನ್ಪುರದ ಡಾ. ಚೈತ್ರಾ ಪುಟ್ಟಸ್ವಾಮಿ ಅವರು ಭಾಷಾ ದಾಖಲೀಕರಣದಲ್ಲಿ ಸಮುದಾಯದ ಸದಸ್ಯರಿಗೆ ತರಬೇತಿ ನೀಡುವ ಮತ್ತು ಸಮಾಂತರ ಭಾಷಾ ಪ್ರಯೋಗ ಸಂಗ್ರಹಗಳನ್ನು ಅಭಿವೃದ್ಧಿಪಡಿಸಲು ತೊಡಗಿಸಿಕೊಳ್ಳುವ, ಪಠ್ಯೇತರ ಪ್ರೇರಣೆಗಳನ್ನು ಬಳಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಅಸ್ಸಾಂ ವಿಶ್ವವಿದ್ಯಾಲಯದ ಡಾ. ಮೊನಾಲಿ ಲಾಂಗ್ಮೈಲೈ ಅವರು ಸಮುದಾಯ ಆಧಾರಿತ 'ಬೋಡೋ ಮತ್ತು ದಿಮಾಸಾ ಹೆರಿಟೇಜ್ ಡಿಜಿಟಲ್ ಆರ್ಕೈವ್' ಕುರಿತು ತಮ್ಮ ಕೆಲಸವನ್ನು ಹಂಚಿಕೊಂಡರು. ಸಿಕ್ಕಿಂ ವಿಶ್ವವಿದ್ಯಾಲಯದ ಡಾ. ಸಮರ್ ಸಿನ್ಹಾ ಅವರು ಶಾಲಾ ವಿಷಯಗಳಿಗಾಗಿ ಬುಡಕಟ್ಟು ಭಾಷೆಗಳಲ್ಲಿ ತಾಂತ್ರಿಕ ಶಬ್ದಕೋಶವನ್ನು ಅಭಿವೃದ್ಧಿಪಡಿಸುವ ಮತ್ತು ಸಣ್ಣ ಭಾಷೆಗಳಿಗೆ ಸೂಕ್ತವಾದ ಭಾಷಾ-ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಇತರ ಸದಸ್ಯರು ಸಹ ತಮ್ಮ ಕ್ಷೇತ್ರ ಅನುಭವಗಳನ್ನು ಹಂಚಿಕೊಂಡರು ಮತ್ತು ಸಾಂಸ್ಥಿಕ ಹಾಗೂ ತಾಂತ್ರಿಕ ಬೆಂಬಲವನ್ನು ನೀಡಿದರು.
ಶಿಕ್ಷಣದಲ್ಲಿ ಬುಡಕಟ್ಟು ಭಾಷೆಗಳ ಸಂಯೋಜನೆ: ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ (ಎನ್ ಇ ಎಸ್ ಟಿ ಎಸ್) ಪ್ರತಿನಿಧಿಗಳು, 1.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 525ಕ್ಕೂ ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಈ ವೇದಿಕೆಯನ್ನು ತರಗತಿಗಳಲ್ಲಿ ಬಳಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ರಾಷ್ಟ್ರೀಯ ಭಂಡಾರವನ್ನು ಸಮೃದ್ಧಗೊಳಿಸಲು ಕಥೆಗಳು, ಕವಿತೆಗಳು ಮತ್ತು ಇತರ ವಿಷಯಗಳನ್ನು ಕೊಡುಗೆಯಾಗಿ ನೀಡಬಹುದು ಎಂದು ಅವರು ಹೇಳಿದರು
ಸಭೆಯನ್ನು ಮುಕ್ತಾಯಗೊಳಿಸುತ್ತಾ ಶ್ರೀಮತಿ ರಂಜನಾ ಚೋಪ್ರಾ ಅವರು, ಸದಸ್ಯರು ತಾವು ಕೆಲಸ ಮಾಡಿದ ಭಾಷೆಗಳು ಮತ್ತು ತಮ್ಮ ಬಳಿ ಲಭ್ಯವಿರುವ ಸಂಪನ್ಮೂಲಗಳ ವಿವರಗಳನ್ನು ಹಂಚಿಕೊಳ್ಳುವಂತೆ ಕೋರಿದರು, ಐಐಟಿ ದೆಹಲಿಯ ಸಮನ್ವಯದೊಂದಿಗೆ ಇವುಗಳನ್ನು ವೇದಿಕೆಯಲ್ಲಿ ಸಂಯೋಜಿಸಬಹುದು. ಸಚಿವಾಲಯವು ಕಾರ್ಯಸೂಚಿಯನ್ನು ಹಂಚಿಕೊಳ್ಳುತ್ತದೆ ಮತ್ತು ಕೆಲಸವನ್ನು ಮುನ್ನಡೆಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ಅವರು ಹೇಳಿದರು. ಸಮುದಾಯಗಳೊಂದಿಗೆ ಅಭಿವೃದ್ಧಿಪಡಿಸಿದ ಭಾಷಾ ಸಂಪನ್ಮೂಲಗಳು ಸಮುದಾಯಗಳ ಒಡೆತನದಲ್ಲಿಯೇ ಮುಂದುವರಿಯಬೇಕು ಎಂದೂ ಅವರು ಒತ್ತಿಹೇಳಿದರು.
ಈ ಸಭೆಯು ಬುಡಕಟ್ಟು ಭಾಷೆಗಳ ದಾಖಲೀಕರಣ, ಡಿಜಿಟಲ್ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸಂಘಟಿತ ಪ್ರಯತ್ನಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. 'ಆದಿ ವಾಣಿ'ಯನ್ನು ಭಾಷಾ ಸಂಶೋಧನೆ, ತಂತ್ರಜ್ಞಾನ, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಸಮುದಾಯ ಚಾಲಿತ ಉಪಕ್ರಮಗಳನ್ನು ಸಂಪರ್ಕಿಸುವ ರಾಷ್ಟ್ರೀಯ ವೇದಿಕೆಯಾಗಿ ಕಲ್ಪಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2323760)
ವಿಸಿಟರ್ ಕೌಂಟರ್ : 10