ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ವಿಶ್ವ ಗುಣಮಟ್ಟ ದಿನ 2026ರ ರಾಷ್ಟ್ರೀಯ ಆಚರಣೆಯಲ್ಲಿ ಗುಣಮಟ್ಟದ ಮೂಲಸೌಕರ್ಯ, ಸ್ವಚ್ಛ ಇಂಧನ ಮತ್ತು ಗ್ರಾಹಕರ ಸುರಕ್ಷತೆಗೆ ಪ್ರಮುಖ ಆದ್ಯತೆ


ಭಾರತದ ಸ್ವಚ್ಛ ಇಂಧನ ಪರಿವರ್ತನೆಯಲ್ಲಿ ಗುಣಮಟ್ಟಗಳ ಪಾತ್ರವನ್ನು ಎತ್ತಿಹಿಡಿದ ಕೇಂದ್ರ ಸಂಪುಟ ಸಚಿವರಾದ​​​​​​​ ಶ್ರೀ ಪ್ರಲ್ಹಾದ್ ಜೋಶಿ

ದೆಹಲಿಯಲ್ಲಿ ನಡೆದ ಬಿಐಎಸ್ (BIS) ವಿಶ್ವ ಗುಣಮಟ್ಟ ದಿನದ ಕಾರ್ಯಕ್ರಮದಲ್ಲಿ ಸಚಿವರುಗಳಾದ ಶ್ರೀ ಬಿ. ಎಲ್. ವರ್ಮಾ ಮತ್ತು ಶ್ರೀಮತಿ ನಿಮುಬೆನ್ ಜೆ ಬಂಭಾನಿಯಾ ಭಾಷಣ

ಸಿಲ್ವರ್ ರಿಫೈನರಿ ಯೋಜನೆ ಹಾಗೂ ಸುಸ್ಥಿರ ಕೃಷಿ ಮತ್ತು ಸುಸ್ಥಿರ ಉತ್ಪಾದನೆಯ ಮಾರ್ಗಸೂಚಿಗೆ ಚಾಲನೆ ನೀಡಿದ ಬಿಐಎಸ್ (BIS)

ಉದಯೋನ್ಮುಖ ತಂತ್ರಜ್ಞಾನ, ಸ್ವಚ್ಛ ಇಂಧನ, ಸಾಂಪ್ರದಾಯಿಕ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆಗಾಗಿ ಹೊಸ ಭಾರತೀಯ ಪ್ರಮಾಣಗಳ ಬಿಡುಗಡೆ

ಪ್ರಕಟಣಾ ದಿನಾಂಕ: 14 OCT 2026 6:26PM by PIB Bengaluru

ರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಭಾರತದ ಸ್ವಚ್ಛ ಇಂಧನ ಪರಿವರ್ತನೆಯನ್ನು ವೇಗಗೊಳಿಸುವ ಪ್ರಮುಖ ಪ್ರಯತ್ನವಾಗಿ, ಭಾರತೀಯ ಮಾನಕ ಬ್ಯೂರೋ (BIS) ನವದೆಹಲಿಯಲ್ಲಿ ಆಯೋಜಿಸಲಾದ ವಿಶ್ವ ಪ್ರಮಾಣಗಳ ದಿನ 2026ರ ರಾಷ್ಟ್ರೀಯ ಕಾರ್ಯಕ್ರಮದ ಸಂದರ್ಭದಲ್ಲಿ 'ಬಿಐಎಸ್ ಸಿಲ್ವರ್ ರಿಫೈನರಿ ಯೋಜನೆ', ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸ್ವಚ್ಛ ಇಂಧನ ಚಲನಶೀಲತೆಯ ಕುರಿತ ಹೊಸ ಭಾರತೀಯ ಪ್ರಮಾಣಗಳು ಹಾಗೂ ಸುಸ್ಥಿರ ಕೃಷಿ ಮತ್ತು ಉತ್ಪಾದನೆಯ ಗುಣಮಟ್ಟ ನೀಲನಕ್ಷೆಯನ್ನು ಅನಾವರಣಗೊಳಿಸಿತು.

ಗುಣಮಟ್ಟ ಮಾಪನ ವೃತ್ತಿಪರರು, ಶಿಕ್ಷಣ ತಜ್ಞರು, ಉದ್ಯಮ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸಬಹುದಾದ ಇಂಧನ ಹಾಗೂ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗುಣಮಟ್ಟಕ್ಕೆ ಭಾರತ ನೀಡಿರುವ ಬದ್ಧತೆಯನ್ನು ಒತ್ತಿಹೇಳಿದರು: "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದಡಿಯಲ್ಲಿ, ವಿಕಸಿತ ಭಾರತದತ್ತ ನಮ್ಮ ಪಯಣವು ಒಂದೇ ಮಂತ್ರದಿಂದ ನಡೆಸಲ್ಪಡುತ್ತಿದೆ: ಗುಣಮಟ್ಟ, ಗುಣಮಟ್ಟ ಮತ್ತು ಕೇವಲ ಗುಣಮಟ್ಟ." ಈ ವರ್ಷದ ಥೀಮ್ ಆದ 'ಉತ್ತಮ ಜಗತ್ತಿಗಾಗಿ ಹಂಚಿಕೆಯ ದೃಷ್ಟಿಕೋನ: SDG 7 (ಸ್ವಚ್ಛ ಮತ್ತು ಕೈಗೆಟುಕುವ ಇಂಧನ)' ಕುರಿತು ಮಾತನಾಡಿದ ಶ್ರೀ ಜೋಶಿ ಅವರು, ಭಾರತದ ಇಂಧನ ರೂಪಾಂತರವನ್ನು ರೂಪಿಸುವಲ್ಲಿ ಬಿಐಎಸ್ ಅಭಿವೃದ್ಧಿಪಡಿಸಿದ ಭಾರತೀಯ ಪ್ರಮಾಣಗಳ ಪಾತ್ರವನ್ನು ಎತ್ತಿಹಿಡಿದರು.

ದೇಶದಲ್ಲಿ ಗುಣಮಟ್ಟದ ವ್ಯವಸ್ಥೆಯನ್ನು ವಿಸ್ತರಿಸಲು ಬಿಐಎಸ್ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಅಭಿನಂದಿಸಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ರಾಜ್ಯ ಸಚಿವ ಶ್ರೀ ಬಿ. ಎಲ್. ವರ್ಮಾ ಅವರು, ಪ್ರತಿಯೊಬ್ಬ ನಾಗರಿಕನ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮಾಣಗಳ ಮೂಲಭೂತ ಪ್ರಭಾವವನ್ನು ಒತ್ತಿಹೇಳಿದರು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರು ಪ್ರಮಾಣೀಕರಣದ ಗ್ರಾಹಕ-ಕೇಂದ್ರೀಕೃತ ಆಯಾಮವನ್ನು ಎತ್ತಿಹಿಡಿದರು. ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಅದೇ ಸಮಯದಲ್ಲಿ ಗ್ರಾಹಕರ ಕಲ್ಯಾಣವನ್ನು ರಕ್ಷಿಸುವ ಸಮತೋಲಿತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಗಳ ಅಭಿವೃದ್ಧಿಯನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಬಿಐಎಸ್‌ನ ಮಹತ್ವದ ಸಾಧನೆಗಳನ್ನು ಶ್ಲಾಘಿಸಿದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖೇರೆ (ಐಎಎಸ್) ಅವರು, ಸಾರ್ವಜನಿಕ ಸಂಗ್ರಹಣೆ ಮತ್ತು ನಿಯಂತ್ರಣದಾದ್ಯಂತ ಏಕರೂಪತೆ, ಸ್ಥಿರತೆ ಮತ್ತು ಪ್ರಕ್ರಿಯೆಗಳ ಸಾಂಸ್ಥಿಕೀಕರಣವನ್ನು ಸ್ಥಾಪಿಸುವಲ್ಲಿ ಪ್ರಮಾಣೀಕರಣದ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಪರಿಣಾಮಕಾರಿ ಗ್ರಾಹಕ ರಕ್ಷಣೆಯು ದೃಢವಾದ ಪರೀಕ್ಷೆ, ಡಿಜಿಟಲ್ ಜಾರಿ ಮತ್ತು ಅನುಸರಣೆ ಮೌಲ್ಯಮಾಪನಗಳಿಂದ ನಡೆಸಲ್ಪಡುವ ತಡೆಗಟ್ಟುವ ಕ್ರಮವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.

ಪ್ರತಿನಿಧಿಗಳನ್ನು ಸ್ವಾಗತಿಸಿದ ಬಿಐಎಸ್ ಮಹಾನಿರ್ದೇಶಕ ಶ್ರೀ ಸಂಜಯ್ ಗರ್ಗ್, "ಪ್ರಮಾಣಗಳು ಆವಿಷ್ಕಾರ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗಾರಿಕಾ ಶಕ್ತಿಯ ಪ್ರಮುಖ ಪ್ರೇರಕಗಳಾಗಿವೆ" ಎಂದು ಹೇಳಿದರು. ಮಾನದಂಡಗಳ ಅಭಿವೃದ್ಧಿ ಮತ್ತು ಅದರ ಲಭ್ಯತೆಯನ್ನು ಎಲ್ಲಾ ಪಾಲುದಾರರಿಗೆ ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಒದಗಿಸುವ ವಿಶ್ವದ ಮೊದಲ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳಲ್ಲಿ ಬಿಐಎಸ್ ಒಂದಾಗಿದೆ ಎಂದು ಅವರು ಘೋಷಿಸಿದರು. ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಸುಲಭ ವಹಿವಾಟು) ಅನ್ನು ಬೆಂಬಲಿಸುವ ಬಿಐಎಸ್‌ನ ಪ್ರಮುಖ ಸುಧಾರಣೆಗಳನ್ನು ಬಗ್ಗೆಯೂ ಅವರು ಒತ್ತಿ ಹೇಳಿದರು.

ಬಿಐಎಸ್ (BIS) ಸಿಲ್ವರ್ ರಿಫೈನರಿ ಯೋಜನೆಯ ಚಾಲನೆ

ಬೆಳ್ಳಿ ಸಂಸ್ಕರಣಾಗಾರಗಳು ಮತ್ತು ಮಿಂಟ್‌ಗಳಿಗೆ ಬಿಐಎಸ್ ಪ್ರಮಾಣೀಕರಣ ಯೋಜನೆಯು ಭಾರತದಾದ್ಯಂತ ಬೆಳ್ಳಿ ಗಟ್ಟಿಗಳು (silver bullion) ಮತ್ತು ನಾಣ್ಯಗಳಿಗೆ ರಚನಾತ್ಮಕ ಶುದ್ಧತೆಯ ಭರವಸೆ ಹಾಗೂ ಹಾಲ್‌ಮಾರ್ಕಿಂಗ್ ಅನ್ನು ವಿಸ್ತರಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಗೋಲ್ಡ್ ರಿಫೈನರಿ ಯೋಜನೆಯ ಮಾದರಿಯಲ್ಲಿ ಬೆಳ್ಳಿ ಶುದ್ಧತೆಗೆ ರಾಷ್ಟ್ರೀಯ ಚೌಕಟ್ಟನ್ನು ಸ್ಥಾಪಿಸುತ್ತದೆ.

ಭಾರತೀಯ ಪ್ರಮಾಣೀಕರಣ IS 2112:2025 (ಬೆಳ್ಳಿ ಮತ್ತು ಬೆಳ್ಳಿ ಮಿಶ್ರಲೋಹಗಳು, ಆಭರಣಗಳು/ಕಲಾಕೃತಿಗಳು — ಶುದ್ಧತೆ ಮತ್ತು ಗುರುತು) ರ ತಿದ್ದುಪಡಿ ಸಂಖ್ಯೆ 1ರ ಗಝೆಟ್ ಅಧಿಸೂಚನೆಯನ್ನು ಅನುಸರಿಸಿ, ಮೂರು ಶುದ್ಧತೆಯ ಶ್ರೇಣಿಗಳ ದಂಡಿತ ಬೆಳ್ಳಿ ಗಟ್ಟಿಗಳು ಮತ್ತು ನಾಣ್ಯಗಳು: 999.9, 999.5, ಮತ್ತು 999.0 ಪ್ರತಿ ಸಾವಿರದ ಭಾಗಗಳನ್ನು (ppt) ಪ್ರಮಾಣೀಕರಣದ ವ್ಯಾಪ್ತಿಗೆ ಸೇರಿಸಲಾಗಿದೆ, ಜೊತೆಗೆ ಬಿಐಎಸ್ ಪರವಾನಗಿ ಪಡೆದ ಸಂಸ್ಕರಣಾಗಾರಗಳು ಮತ್ತು ಮಿಂಟ್‌ಗಳಿಂದ ಹಾಲ್‌ಮಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯಡಿಯಲ್ಲಿ, ಅರ್ಹ ಬೆಳ್ಳಿ ಸಂಸ್ಕರಣಾಗಾರಗಳು ಮತ್ತು ಮಿಂಟ್‌ಗಳ ತಾಂತ್ರಿಕ ಸಾಮರ್ಥ್ಯ, ಸಂಸ್ಕರಣಾ ಪ್ರಕ್ರಿಯೆಗಳು ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಮೌಲ್ಯಮಾಪನ ಮಾಡಿದ ನಂತರ ಬಿಐಎಸ್ ಪರವಾನಗಿಯನ್ನು ನೀಡುತ್ತದೆ. ಪರವಾನಗಿ ಪಡೆದ ಸೌಲಭ್ಯಗಳು ನಿಗದಿತ ಅಗತ್ಯತೆಗಳಿಗೆ ಅನುಗುಣವಾಗಿ ಬೆಳ್ಳಿ ಗಟ್ಟಿಗಳು ಮತ್ತು ನಾಣ್ಯಗಳಿಗೆ ಅಧಿಕೃತ ಬಿಐಎಸ್ ಹಾಲ್‌ಮಾರ್ಕ್ ಅನ್ನು ಅನ್ವಯಿಸಲು ಅಧಿಕಾರವನ್ನು ಹೊಂದಿರುತ್ತವೆ.

ಅಮೂಲ್ಯ ಲೋಹಗಳ ಪೂರೈಕೆ ಸರಪಳಿಯಾದ್ಯಂತ ಖಚಿತವಾದ ಸಾಚಾತನ ಮತ್ತು ಟ್ರೇಸಬಿಲಿಟಿಗಾಗಿ, ಹಾಲ್‌ಮಾರ್ಕ್ ಮಾಡಿದ ಬೆಳ್ಳಿ ಗಟ್ಟಿಗಳು ಮತ್ತು ನಾಣ್ಯಗಳು 'SILVER' ಪದದೊಂದಿಗೆ ಬಿಐಎಸ್ ಸ್ಟ್ಯಾಂಡರ್ಡ್ ಮಾರ್ಕ್, ಶುದ್ಧತೆಯ ಶ್ರೇಣಿ (999.9, 999.5, ಅಥವಾ 999.0), ತಯಾರಕರ ಗುರುತಿನ ಗುರುತು ಮತ್ತು ಬ್ಯಾಚ್ ಟ್ರೇಸಬಿಲಿಟಿಗಾಗಿ ವಿಶಿಷ್ಟ ಸರಣಿ ಸಂಖ್ಯೆಯನ್ನು ಒಳಗೊಂಡಿರುವ ಪ್ರಮಾಣೀಕೃತ ಬಿಐಎಸ್ ಮಾರ್ಕ್ ಅನ್ನು ಹೊಂದಿರುತ್ತವೆ.

ಈ ಮಾನದಂಡವು, ಗಟ್ಟಿಗಳು ಮತ್ತು ನಾಣ್ಯಗಳಲ್ಲಿನ ಬೆಳ್ಳಿಯ ಅಂಶವನ್ನು ನಿರ್ಧರಿಸಲು ಸಂಸ್ಕರಣಾಗಾರಗಳು ಮತ್ತು ಮಿಂಟ್‌ಗಳಿಗೆ ಕಟ್ಟುನಿಟ್ಟಾದ ಮಾದರಿ ಮತ್ತು ಪರೀಕ್ಷಾ ಪ್ರೋಟೋಕಾಲ್‌ಗಳನ್ನು ನಿಗದಿಪಡಿಸುತ್ತದೆ. ಇವುಗಳಲ್ಲಿ ಗ್ರಾವಿಮೆಟ್ರಿಕ್ ಪರೀಕ್ಷೆ (IS 2113), ICP-OES ವ್ಯತ್ಯಾಸ ವಿಧಾನ (IS 16900 / ISO 15096) ಮತ್ತು Spark-OES ವ್ಯತ್ಯಾಸ ವಿಧಾನದಂತಹ (IS 19563 / ISO 18214) ಸುಧಾರಿತ ವಿಶ್ಲೇಷಣಾತ್ಮಕ ವಿಧಾನಗಳು ಸೇರಿವೆ.

https://youtu.be/SrF8K82bTow

ಬಿಐಎಸ್ ಡಿಜಿಟಲ್ ಸ್ಟ್ಯಾಂಡರ್ಡ್ ರೀಡರ್ ಗೆ ಚಾಲನೆ – ಬಿಐಎಸ್ ಡಿಜಿಟಲ್ ಸ್ಟ್ಯಾಂಡರ್ಡ್ ರೀಡರ್ ಎಂಬುದು ಎಕ್ಸ್‌ಎಮ್‌ಎಲ್ (XML) ರೂಪದಲ್ಲಿರುವ ಭಾರತೀಯ ಪ್ರಮಾಣಗಳನ್ನು ಸಂವಾದಾತ್ಮಕ ಸ್ಮಾರ್ಟ್ (SMART) ಪ್ರಮಾಣಗಳಾಗಿ ಪರಿವರ್ತಿಸುವ ವೆಬ್-ಆಧಾರಿತ ವೇದಿಕೆಯಾಗಿದೆ. ಪ್ರವೇಶಿಸುವಿಕೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಈ ಉಪಕರಣವು ತಾಂತ್ರಿಕ ವಿಷಯಗಳನ್ನು ಹುಡುಕಲು, ಹೈಪರ್‌ಲಿಂಕ್ ಮಾಡಲಾದ ಕ್ರಾಸ್-ರೆಫರೆನ್ಸ್‌ಗಳನ್ನು ವೀಕ್ಷಿಸಲು, ಬಿಲ್ಟ್-ಇನ್ ಶಬ್ದಕೋಶವನ್ನು ಬಳಸಲು ಮತ್ತು ಪಠ್ಯವನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಮೊಬೈಲ್ ಸಾಧನಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಾದ್ಯಂತ ಲಭ್ಯವಿರುವ ಈ ವೇದಿಕೆಯು, ಬಳಕೆಯ ಪ್ರವೃತ್ತಿಯನ್ನು ಟ್ರ್ಯಾಕ್ ಮಾಡಲು ವಿಶ್ಲೇಷಣಾತ್ಮಕ ಡ್ಯಾಶ್‌ಬೋರ್ಡ್ ಅನ್ನು ಸಹ ಹೊಂದಿದೆ ಹಾಗೂ ಭವಿಷ್ಯದ ಡಿಜಿಟಲ್ ಸೇವೆಗಳಿಗಾಗಿ ಎಐ-ಸಿದ್ಧ (AI-ready) ರೆಪೊಸಿಟರಿಯನ್ನು ಸ್ಥಾಪಿಸುತ್ತದೆ. ಇದು ಭಾರತೀಯ ಪ್ರಮಾಣಗಳನ್ನು ಹೆಚ್ಚು ಬಳಕೆದಾರ ಸ್ನೇಹಿ ಮತ್ತು ಅಳವಡಿಕೆಗೆ ಸುಲಭಗೊಳಿಸುತ್ತದೆ.

ಹೊಸ ಭಾರತೀಯ ಮಾನದಂಡಗಳ ಬಿಡುಗಡೆ - ಈ ಸಂದರ್ಭದಲ್ಲಿ ಜವಳಿ, ಸ್ವಚ್ಛ ಚಲನಶೀಲತೆ, ಚಿಕಿತ್ಸಕ ಆರೋಗ್ಯ ರಕ್ಷಣೆ, ರೊಬೊಟಿಕ್ಸ್ ಮತ್ತು ಕಟ್ಟಡ ಸಾಮಗ್ರಿಗಳು ಸೇರಿದಂತೆ ವಿವಿಧ ವಲಯಗಳಾದ್ಯಂತ 7 ಹೊಸ ಭಾರತೀಯ ಮಾನದಂಡಗಳ ಜಾರಿಯನ್ನು ಬಿಐಎಸ್ ಘೋಷಿಸಿತು.

ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸ್ವಚ್ಛ ಇಂಧನ ಚಲನಶೀಲತೆ –

  1. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ವ್ಯವಸ್ಥೆಗಳಿಗಾಗಿ ಕೇಬಲ್‌ಗಳು (IS 19967:2026): ಎಸಿ ಮೋಡ್ಸ್ 1–3 ಮತ್ತು ಡಿಸಿ ಮೋಡ್ 4 ವ್ಯವಸ್ಥೆಗಳಾದ್ಯಂತ ಸವಾಲಿನ ಹೊರಾಂಗಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಫ್ಲೆಕ್ಸಿಬಲ್ ಚಾರ್ಜಿಂಗ್ ಕೇಬಲ್‌ಗಳಿಗೆ (1,100 V AC / 1,500 V DC ವರೆಗೆ) ರಚನೆ, ಇನ್ಸುಲೇಶನ್, ಥರ್ಮಲ್ ಮ್ಯಾನೇಜ್‌ಮೆಂಟ್ ಮತ್ತು ಪರೀಕ್ಷಾ ಪ್ರೋಟೋಕಾಲ್‌ಗಳನ್ನು ವ್ಯಾಖ್ಯಾನಿಸುತ್ತದೆ.
  2. ಪೆಡಲ್ ಸಹಾಯಿತ ಬೈಸಿಕಲ್‌ಗಳು / ಇಪಿಎಸಿಗಳು (IS 19891:2026): 0.25 kW ವರೆಗಿನ ಕಂಟಿನ್ಯೂಯಸ್ ರೇಟೆಡ್ ಪವರ್ ಮತ್ತು 25 km/h ವೇಗದ ಕಟ್‌-ಆಫ್ ಹೊಂದಿರುವ ಎಲೆಕ್ಟ್ರಿಕಲ್ ಪವರ್ ಅಸಿಸ್ಟೆಡ್ ಸೈಕಲ್‌ಗಳಿಗಾಗಿ ವಿನ್ಯಾಸ, ಎಲೆಕ್ಟ್ರಿಕಲ್ ಸರ್ಕ್ಯೂಟ್ ಸುರಕ್ಷತೆ, ಶಾರ್ಟ್-ಸರ್ಕ್ಯೂಟ್/ಅತಿಯಾದ ಶಾಖದ ರಕ್ಷಣೆ ಮತ್ತು ಟ್ಯಾಂಪರಿಂಗ್ ತಡೆ ನಿಯಮಗಳಿಗೆ ಪ್ರಮಾಣಗಳನ್ನು ಒದಗಿಸುತ್ತದೆ.
  3. ವೇರಬಲ್ ಸರ್ವಿಸ್ ರೋಬೋಟ್‌ಗಳು – ಲೋವರ್ ಲಿಂಬ್ (IS 17192 ಭಾಗ-6:2026): ಕೆಳ-ಅಂಗಗಳ ಸಹಾಯಕ ಮತ್ತು ಪುನರ್ವಸತಿ ರೊಬೊಟಿಕ್ಸ್‌ನ ಚಲನೆ, ಸ್ಥಿರತೆ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಆಂಥ್ರೋಪೋಮಾರ್ಫಿಕ್ ಪರೀಕ್ಷಾ ಡಮ್ಮಿಗಳನ್ನು ಬಳಸಿ ಅಂತರರಾಷ್ಟ್ರೀಯ ಪರೀಕ್ಷಾ ಮಾನದಂಡಗಳನ್ನು (ISO FDIS 18646-6:2025 ಗೆ ಸಮಾನವಾದ) ಅಳವಡಿಸಿಕೊಳ್ಳುತ್ತದೆ.

ಆರೋಗ್ಯ ರಕ್ಷಣೆ –

  1. ಪೀಡಿಯಾಟ್ರಿಕ್ ಪಂಚಕರ್ಮ ದ್ರೋಣಿ (IS 19960:2026): ಶಿಶು (ಜನನದಿಂದ 2 ವರ್ಷಗಳು) ಮತ್ತು ಮಗು (2 ರಿಂದ 10 ವರ್ಷಗಳು)ಗಳ ಪೀಡಿಯಾಟ್ರಿಕ್ ಪಂಚಕರ್ಮ ಚಿಕಿತ್ಸಾ ಟೇಬಲ್‌ಗಳಿಗೆ (ದ್ರೋಣಿ) ಸುರಕ್ಷತೆ, ರಚನಾತ್ಮಕ ಸ್ಥಿರತೆ, ವಿಷಕಾರಿಯಲ್ಲದ ಲೇಪನಗಳು ಮತ್ತು ತೈಲ-ನಿರೋಧಕ ವಿಶೇಷಣಗಳನ್ನು ಖಚಿತಪಡಿಸುತ್ತದೆ.
  2. ಚಿಕಿತ್ಸಕ ಪಾದರಕ್ಷೆಗಳ ವಿವರಣೆ (IS 19956:2026): ಮಧುಮೇಹ ಮತ್ತು ನರರೋಗ (ನ್ಯೂರೋಪೇಥಿಕ್) ರೋಗಿಗಳಿಗಾಗಿ ವಿನ್ಯಾಸಗೊಳಿಸಲಾದ ಪಾದರಕ್ಷೆಗಳಿಗೆ ಕ್ಲಿನಿಕಲ್ ಮತ್ತು ಮೆಕಾನಿಕಲ್ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸುತ್ತದೆ. ಇದು ಪಾದದ ಹುಣ್ಣುಗಳ ಅಪಾಯವನ್ನು ತಗ್ಗಿಸಲು ಒತ್ತಡ ಪರಿಹಾರ, ಆಂತರಿಕ ಆಳ, ರಾಕರ್ ಜ್ಯಾಮಿತಿ, ತೇವಾಂಶ ನಿರ್ವಹಣೆ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಒಳಗೊಂಡಿದೆ.

ಕೈಗಾರಿಕಾ ಸಾಮಗ್ರಿಗಳು ಮತ್ತು ಕಟ್ಟಡ ಉತ್ಪನ್ನಗಳು –

  1. ಫ್ಲೆಕ್ಸಿಬಲ್ ಪ್ಲೈವುಡ್ ವಿವರಣೆ (IS 19952:2026): ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪದಲ್ಲಿ ಬಳಸಲಾಗುವ ಬಾಗಿದ ಮರದ ಆಧಾರಿತ ಪ್ಯಾನಲ್‌ಗಳಿಗೆ ಪ್ರಮಾಣಿತ ವರ್ಗೀಕರಣಗಳು, ಗ್ಲೂ ಬಾಂಡ್ ಸಾಮರ್ಥ್ಯದ ಶ್ರೇಣಿಗಳು (ತೇವಾಂಶ-ನಿರೋಧಕ, BWR, ಮತ್ತು BWP) ಮತ್ತು ಫಾರ್ಮಾಲ್ಡಿಹೈಡ್ ಹೊರಸೂಸುವಿಕೆಯ ಮಿತಿಗಳನ್ನು ಒದಗಿಸುತ್ತದೆ.
  2. ಪಿಸಿವಿ ಕೋಟೆಡ್ ಫೈಬರ್‌ಗ್ಲಾಸ್ ಕೀಟ ನಿರೋಧಕ ಪರದೆ (IS 19825:2026): ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಳಸಲಾಗುವ ಫೈಬರ್‌ಗ್ಲಾಸ್ ಕೀಟ ನಿರೋಧಕ ಪರದೆಗಾಗಿ ಮೆಶ್ ಸಾಮರ್ಥ್ಯ, ಯುವಿ ಹಾನಿ ನಿರೋಧಕತೆ, ಜ್ವಾಲೆಯ ಹರಡುವಿಕೆ ನಿರೋಧಕತೆ ಮತ್ತು ರಚನಾತ್ಮಕ ಬಾಳಿಕೆಗಾಗಿ ಅಗತ್ಯತೆಗಳನ್ನು ವಿವರಿಸುತ್ತದೆ.

ಸುಸ್ಥಿರ ಕೃಷಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಮಾನದಂಡಕ್ಕಾಗಿ ರಾಷ್ಟ್ರೀಯ ಮಾರ್ಗಸೂಚಿಗಳ ಬಿಡುಗಡೆ

ಈ ಸಂದರ್ಭದಲ್ಲಿ, ಸುಸ್ಥಿರ ಕೃಷಿ ಕ್ಷೇತ್ರಕ್ಕಾಗಿ ಭಾರತೀಯ ಪ್ರಮಾಣಗಳನ್ನು ಸ್ಥಾಪಿಸಲು ಬಿಐಎಸ್‌ನ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗದ ಕೌನ್ಸಿಲ್ ಅಭಿವೃದ್ಧಿಪಡಿಸಿದ ಕಾರ್ಯತಂತ್ರದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಯಿತು. ಈ ದಾಖಲೆಯು ಹವಾಮಾನ ಬದಲಾವಣೆ, ಸಂಪನ್ಮೂಲ ಸವಕಳಿ, ಭೂಮಿ ಸವಕಳಿ, ಕೊಯ್ಲಿನ ನಂತರದ ನಷ್ಟಗಳು ಮತ್ತು ಅಸಮರ್ಥ ಪೋಷಕಾಂಶಗಳ ಬಳಕೆ ಸೇರಿದಂತೆ ಸವಾಲುಗಳನ್ನು ಪರಿಹರಿಸುತ್ತದೆ. ಇದು ಮಣ್ಣು ನಿರ್ವಹಣೆ, ನೀರಿನ ಬಳಕೆ, ಕೃಷಿ ಪರಿಕರಗಳು, ಉದಯೋನ್ಮುಖ ತಂತ್ರಜ್ಞಾನಗಳು, ಹವಾಮಾನ ಸೇವೆಗಳು ಮತ್ತು ಸಾಮಾಜಿಕ-ಆರ್ಥಿಕ ಬೆಂಬಲವನ್ನು ಒಳಗೊಂಡಂತೆ 15 ವರ್ಗಗಳಲ್ಲಿ ವಿಸ್ತರಿಸಿದೆ. ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಗೆ (NAPCC) ಅನುಗುಣವಾಗಿ, ಈ ನೀಲನಕ್ಷೆಯು ಮೂರು ಕಾಲಮಿತಿಗಳಲ್ಲಿ ಪ್ರಮಾಣೀಕರಣದ ರೂಪರೇಖೆಯನ್ನು ವಿವರಿಸುತ್ತದೆ: ಅಲ್ಪಾವಧಿ (1 ವರ್ಷ), ಮಧ್ಯಮ ಅವಧಿ (2–3 ವರ್ಷಗಳು) ಮತ್ತು ದೀರ್ಘಾವಧಿ (4–5 ವರ್ಷಗಳು).

ಇಂದು ಬಿಡುಗಡೆಯಾದ ಸುಸ್ಥಿರ ಉತ್ಪಾದನೆಗಾಗಿ ಮತ್ತೊಂದು ಮಾರ್ಗಸೂಚಿಯಲ್ಲಿ , ಕಡಿಮೆ-ಕಾರ್ಬನ್ ತಂತ್ರಜ್ಞಾನಗಳು, ಸಂಪನ್ಮೂಲ ದಕ್ಷತೆ, ವೃತ್ತಾಕಾರದ ಆರ್ಥಿಕತೆಯ ಅಭ್ಯಾಸಗಳು, ಸುಸ್ಥಿರ ಉತ್ಪನ್ನ ವಿನ್ಯಾಸ, ಡಿಜಿಟಲೀಕರಣ, ಸುಸ್ಥಿರತೆಯ ವರದಿ ಮಾಡುವಿಕೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯನ್ನು ಪ್ರಮಾಣೀಕರಣಕ್ಕಾಗಿ ಪ್ರಮುಖ ಕ್ಷೇತ್ರಗಳಾಗಿ ಗುರುತಿಸಲಾಗಿದೆ.

ಮಾನದಂಡಗಳ ಅಭಿವೃದ್ಧಿಗಾಗಿ ಅತ್ಯುತ್ತಮ ತಾಂತ್ರಿಕ ಸಮಿತಿಗಳಿಗೆ ಪ್ರಶಸ್ತಿ ಪ್ರದಾನ

ವಿಶ್ವ ಮಾನದಂಡಗಳ ದಿನದ ಸಂದರ್ಭದಲ್ಲಿ, ಬಿಐಎಸ್ (BIS) ಆಯಾ ವಲಯಗಳಲ್ಲಿ ಭಾರತೀಯ ಮಾನದಂಡಗಳ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ತಜ್ಞರ ಅತ್ಯುತ್ತಮ ಕೊಡುಗೆಗಳು, ತಾಂತ್ರಿಕ ಪರಿಣತಿ ಮತ್ತು ಸಹಯೋಗದ ಪ್ರಯತ್ನಗಳನ್ನು ಗುರುತಿಸಲು 'ಅತ್ಯುತ್ತಮ ತಾಂತ್ರಿಕ ಸಮಿತಿ ಪ್ರಶಸ್ತಿ'ಯನ್ನು ಪ್ರಸ್ತುತಪಡಿಸುತ್ತದೆ. ಈ ವರ್ಷ 16 ವಿಶಿಷ್ಟ ತಾಂತ್ರಿಕ ಸಮಿತಿಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮಾನದಂಡಗಳ ಚೌಕಟ್ಟಿಗೆ 6 ಹೊಸ ಶೈಕ್ಷಣಿಕ ಸಂಸ್ಥೆಗಳ ಸೇರ್ಪಡೆ –

ಕೇಂದ್ರ ಸಹಾಯಕ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಮತ್ತು ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರ ಸಮ್ಮುಖದಲ್ಲಿ, ಬಿಐಎಸ್ ಸಂಸ್ಥೆಯು ಶೈಕ್ಷಣಿಕ ಪಠ್ಯಕ್ರಮದಲ್ಲಿ ಭಾರತೀಯ ಮಾನದಂಡಗಳನ್ನು ಸಂಯೋಜಿಸುವ ಮತ್ತು ವಿದ್ಯಾರ್ಥಿಗಳನ್ನು ಗುಣಮಟ್ಟ ಮಾಪನ-ಸಿದ್ಧ ವೃತ್ತಿಪರರನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಐಐಟಿ ರೋಪಾರ್, ಎನ್‌ಐಟಿ ಮಣಿಪುರ, ಎನ್‌ಐಟಿ ಮೇಘಾಲಯ, ಅಸ್ಸಾಂ ಟೆಕ್ಸ್‌ಟೈಲ್ಸ್ ಇನ್‌ಸ್ಟಿಟ್ಯೂಟ್, ಐಐಟಿ ಧಾರವಾಡ  ಮತ್ತು ಆರ್‌ಜಿಐಪಿಟಿ (RGIPT - ರಾಜೀವ್ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ) ಗಳೊಂದಿಗೆ ತಿಳುವಳಿಕಾಪತ್ರದ (MoU) ಸಹಭಾಗಿತ್ವದ ಸಂಸ್ಥೆಗಳಾಗಿ ಒಪ್ಪಂದ ಮಾಡಿಕೊಂಡಿತು. ಪ್ರಸ್ತುತ ದಿನಾಂಕದವರೆಗೆ, ಬಿಐಎಸ್ ಶೈಕ್ಷಣಿಕ ಪಠ್ಯಕ್ರಮದಲ್ಲಿ ಪ್ರಮಾಣಗಳ ಸಂಯೋಜನೆ, ಪ್ರಮಾಣೀಕರಣಕ್ಕಾಗಿ ಸಹಯೋಗದ ಆರ್‌ಆಂಡ್ ಡಿ (R&D) ಯೋಜನೆಗಳು ಹಾಗೂ ಬಿಐಎಸ್‌ನಲ್ಲಿ ಇಂಟರ್ನ್‌ಶಿಪ್ ಒದಗಿಸುವುದು ಮತ್ತು ವಿದ್ಯಾರ್ಥಿಗಳಿಗೆ ಕೈಗಾರಿಕಾ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ 98 ತಿಳುವಳಿಕಾಪತ್ರ (MoU) ಸಹಭಾಗಿತ್ವದ ಸಂಸ್ಥೆಗಳನ್ನು ಹೊಂದಿದೆ.

ಪ್ರಯೋಗಾಲಯದಲ್ಲಿ ಸುರಕ್ಷತೆಗಾಗಿ ಉತ್ತಮ ಅಭ್ಯಾಸಗಳ ಕೈಪಿಡಿ

ಬಿಐಎಸ್ ಪ್ರಮುಖ ಪ್ರಮಾಣಗಳನ್ನು (IS 4209, IS 4906, ಮತ್ತು IS 9457 ಸೇರಿದಂತೆ) ಆಧರಿಸಿ 'ಪ್ರಯೋಗಾಲಯದಲ್ಲಿ ಸುರಕ್ಷತೆಗಾಗಿ ಉತ್ತಮ ಅಭ್ಯಾಸಗಳು' ಎಂಬ ಸಮಗ್ರ ಕಿರುಪುಸ್ತಕವನ್ನು ಪ್ರಕಟಿಸಿದೆ. ಈ ಉಲ್ಲೇಖಿತ ಕೈಪಿಡಿಯು ರಾಸಾಯನಿಕ, ವಿಕಿರಣಶೀಲ ರಾಸಾಯನಿಕ (radiochemical) ಮತ್ತು ಮೈಕ್ರೋಬಯೋಲಾಜಿಕಲ್ ಸೌಲಭ್ಯಗಳಿಗಾಗಿ ಅಪಾಯ ಗುರುತಿಸುವಿಕೆ, ರಕ್ಷಣಾತ್ಮಕ ಉಪಕರಣಗಳು, ಮಾಲಿನ್ಯ ನಿಯಂತ್ರಣ ಮತ್ತು ಸುರಕ್ಷಿತ ತ್ಯಾಜ್ಯ ವಿಲೇವಾರಿಯನ್ನು ಒಳಗೊಂಡಿದೆ.

ಶೈಕ್ಷಣಿಕ ಕಾಮಿಕ್ ಪುಸ್ತಕಗಳ ಬಿಡುಗಡೆ –

ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಪ್ರಮಾಣಗಳು, ಗುಣಮಟ್ಟ ಮತ್ತು ಗ್ರಾಹಕರ ರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಬಿಐಎಸ್ ಈ ಸಂದರ್ಭದಲ್ಲಿ ಆಟಿಕೆಗಳು ಮತ್ತು ಹಾಲ್‌ಮಾರ್ಕಿಂಗ್ ಕುರಿತ ಭಾರತೀಯ ಪ್ರಮಾಣಗಳ ಮೇಲಿನ ಎರಡು ಹೊಸ ಕಾಮಿಕ್ ಪುಸ್ತಕಗಳನ್ನು ಬಿಡುಗಡೆ ಮಾಡಿತು. ಈ ಶೀರ್ಷಿಕೆಗಳ ಸೇರ್ಪಡೆಯೊಂದಿಗೆ, ಬಿಐಎಸ್ ತನ್ನ ಸಂಗ್ರಹವನ್ನು 13 ಕಾಮಿಕ್ ಪುಸ್ತಕಗಳಿಗೆ ವಿಸ್ತರಿಸಿದ್ದು, ಮುದ್ರಣ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಗ್ರಾಹಕರ ಜಾಗೃತಿಯನ್ನು ಉತ್ತೇಜಿಸುವ ತನ್ನ ಪ್ರಯತ್ನಗಳನ್ನು ಬಲಪಡಿಸಿದೆ.

ವಿಶ್ವ ಗುಣಮಟ್ಟ ದಿನ 2026 ರ ಸಂದರ್ಭದಲ್ಲಿ, ಜಾಗತಿಕ ಪ್ರಮಾಣೀಕರಣ ಸಂಸ್ಥೆಗಳಾದ ISO, IEC ಮತ್ತು ITU ಜಂಟಿಯಾಗಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಹಂಚಿಕೆಯ ಪ್ರಮಾಣಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೇಗೆ ನಿರ್ಮಿಸುತ್ತವೆ, ಆವಿಷ್ಕಾರವನ್ನು ವೇಗಗೊಳಿಸುತ್ತವೆ ಮತ್ತು ಸುಸ್ಥಿರ ವ್ಯಾಪಾರವನ್ನು ಬೆಂಬಲಿಸುತ್ತವೆ ಎಂಬುದನ್ನು ಹಂಚಿಕೊಂಡಿವೆ. ಭಾರತದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯಾಗಿ, ಅಂತಾರಾಷ್ಟ್ರೀಯ ಮಾನದಂಡಗಳ ಅಭಿವೃದ್ಧಿಯನ್ನು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳೊಂದಿಗೆ ಜೋಡಿಸಲು ಬಿಐಎಸ್ ಸಂಸ್ಥೆಯು ISO ಮತ್ತು IEC ಯಾದ್ಯಂತ 600 ಕ್ಕೂ ಹೆಚ್ಚು ತಾಂತ್ರಿಕ ಸಮಿತಿಗಳಲ್ಲಿ ಭಾಗವಹಿಸುತ್ತದೆ.

ಮೂಲ: ಭಾರತೀಯ ಮಾನಕ ಬ್ಯೂರೋ (BIS)

 

*****


(ಪ್ರಕಟಣೆ ಐ.ಡಿ.: 2323632) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati