ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ದಕ್ಷಿಣ ಹಿಂದೂ ಮಹಾಸಾಗರ ಮೀನುಗಾರಿಕೆ ಒಪ್ಪಂದಕ್ಕೆ (ಎಸ್‌ಐಒಎಫ್‌ಎ) ಭಾರತದ ಸೇರ್ಪಡೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ


ಆಳಸಮುದ್ರದ ಮೀನುಗಾರಿಕೆಯಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಲು, ಹೆಚ್ಚಿನ ಮೌಲ್ಯದ ಸಾಗರ ಸಂಪನ್ಮೂಲಗಳ ಲಭ್ಯತೆಯನ್ನು ವಿಸ್ತರಿಸಲು ಮತ್ತು ಜಾಗತಿಕ ಮೀನುಗಾರಿಕೆ ಆಡಳಿತದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಈ ಸೇರ್ಪಡೆ ನೆರವಾಗಲಿದೆ

ಪ್ರಕಟಣಾ ದಿನಾಂಕ: 14 OCT 2026 5:18PM by PIB Bengaluru

ದಕ್ಷಿಣ ಹಿಂದೂ ಮಹಾಸಾಗರ ಮೀನುಗಾರಿಕೆ ಒಪ್ಪಂದಕ್ಕೆ (ಎಸ್‌ಐಒಎಫ್‌ಎ) ಭಾರತ ಸೇರ್ಪಡೆಗೊಳ್ಳಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಜಾಗತಿಕ ಮೀನುಗಾರಿಕೆ ಆಡಳಿತದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಕಾರ್ಯತಂತ್ರದ ಮೈಲಿಗಲ್ಲಾಗಿದೆ. ಭಾರತ ಸರ್ಕಾರವು ಡಿಸೆಂಬರ್ 2025ರಲ್ಲಿ ಹೊರಡಿಸಿದ ಆಳಸಮುದ್ರ ಮೀನುಗಾರಿಕೆ ಮಾರ್ಗಸೂಚಿಗಳ ಮುಂದುವರಿದ ಭಾಗವಾಗಿ, ಈ ಉಪಕ್ರಮವು ಭಾರತದ ಮೀನುಗಾರಿಕಾ ನೌಕೆಗಳನ್ನು ಅಂತರರಾಷ್ಟ್ರೀಯ ಜಲಪ್ರದೇಶಗಳಿಗೆ ವಿಸ್ತರಿಸಲು ಪ್ರಾದೇಶಿಕ ಚೌಕಟ್ಟನ್ನು ಒದಗಿಸಲಿದೆ. ಇದರಿಂದ ಭಾರತವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ಮತ್ತು ಎಸ್‌ಐಒಎಫ್‌ಎ ಚೌಕಟ್ಟಿನಡಿ ಹೆಚ್ಚಿನ ಮೌಲ್ಯದ ಸಾಗರ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಕೊಯ್ಲು ಮಾಡಲು ಕಾನೂನುಬದ್ಧ ಹಕ್ಕುಗಳನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ, ಆಳಸಮುದ್ರದಲ್ಲಿ ಭಾರತದ ಅಧಿಕೃತ ಉಪಸ್ಥಿತಿಯನ್ನು ಖಚಿತಪಡಿಸುವುದರ ಜೊತೆಗೆ, ರಾಷ್ಟ್ರೀಯ ಆರ್ಥಿಕ, ವೈಜ್ಞಾನಿಕ ಮತ್ತು ಕಾರ್ಯತಂತ್ರದ ಆದ್ಯತೆಗಳಿಗೆ ಅನುಗುಣವಾಗಿ ಭಾರತದ ನೀಲಿ ಆರ್ಥಿಕತೆಯ ಪ್ರಗತಿಗೂ ಇದು ನೆರವಾಗಲಿದೆ.

ಭಾರತವು ಎಸ್‌ಐಒಎಫ್‌ಎಗೆ ಸೇರ್ಪಡೆಗೊಂಡ ಬಳಿಕ, ಭಾರತೀಯ ಧ್ವಜ ಹೊಂದಿರುವ ಮೀನುಗಾರಿಕಾ ಹಡಗುಗಳು ಮತ್ತು ಉದ್ಯಮಗಳು ಈ ಒಪ್ಪಂದದ ವ್ಯಾಪ್ತಿಗೆ ಒಳಪಡುವ ಜಲಪ್ರದೇಶದಲ್ಲಿ ಸ್ಕ್ವಿಡ್, ಟೂತ್‌ಫಿಶ್, ಆಲ್ಫಾನ್ಸಿನೊ ಮತ್ತು ಇತರ ವಲಸೆ ಹೋಗದ ಮೀನು ಪ್ರಭೇದಗಳ ಮೀನುಗಾರಿಕೆಯನ್ನು ಅಧಿಕೃತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

ಎಸ್‌ಐಒಎಫ್‌ಎಗೆ ಸೇರ್ಪಡೆಯಾಗುವುದರಿಂದ, ಒಪ್ಪಂದದ ಉದ್ದೇಶಗಳನ್ನು ಈಡೇರಿಸಲು ಭಾರತವು ಇತರ ಸಹಯೋಗಿ ಪಾಲುದಾರರೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಈ ಉದ್ದೇಶಗಳಲ್ಲಿ ಆಳಸಮುದ್ರದ ಸಂಪನ್ಮೂಲಗಳ ಕುರಿತು ವೈಜ್ಞಾನಿಕ ತಿಳುವಳಿಕೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು, ಒಪ್ಪಂದದ ವ್ಯಾಪ್ತಿಯಲ್ಲಿರುವ ಸಂಪನ್ಮೂಲಗಳ ವೈಜ್ಞಾನಿಕ ಮೌಲ್ಯಮಾಪನದಲ್ಲಿ ಭಾಗವಹಿಸುವುದು ಹಾಗೂ ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ (ಐಯುಯು) ಮೀನುಗಾರಿಕೆಯನ್ನು ತಡೆಗಟ್ಟುವುದು ಸೇರಿವೆ.

ಎಸ್‌ಐಒಎಫ್‌ಎ ಅಡಿಯಲ್ಲಿ ಅಂಗೀಕರಿಸಲಾಗಿರುವ ಮತ್ತು ಅನುಷ್ಠಾನಗೊಳ್ಳಲಿರುವ ಹೈ ಸೀಸ್ ಬೋರ್ಡಿಂಗ್ ಮತ್ತು ತಪಾಸಣೆ ಯೋಜನೆಯಲ್ಲಿ (ಎಚ್‌ಎಸ್‌ಬಿಐ) ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ, ಈ ಸೇರ್ಪಡೆಯು ಭಾರತದ ಕಾರ್ಯತಂತ್ರದ ಪ್ರಾದೇಶಿಕ ಆದ್ಯತೆಗಳನ್ನು ಮುನ್ನಡೆಸುವುದರ ಜೊತೆಗೆ ರಾಷ್ಟ್ರೀಯ ಕರಾವಳಿ ಭದ್ರತೆಯನ್ನು ಬಲಪಡಿಸಲಿದೆ.

ಪ್ರಸ್ತುತ, ಎಸ್‌ಐಒಎಫ್‌ಎನ ಒಪ್ಪಂದಕ್ಕೆ ಸಹಿ ಹಾಕದ ಸಹಯೋಗಿ ಪಕ್ಷವಾಗಿ (ಸಿಎನ್‌ಸಿಪಿ) ಭಾರತವು ಸೀಮಿತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದೆ. ವೈಜ್ಞಾನಿಕ ಸಮಿತಿ ಮತ್ತು ಅನುಸರಣೆ ಸಮಿತಿಯಂತಹ ಪ್ರಮುಖ ಸಂಸ್ಥೆಗಳಲ್ಲಿನ ಪಾಲ್ಗೊಳ್ಳುವಿಕೆಯೂ ಇದರಲ್ಲಿ ಸೇರಿದೆ. ಒಪ್ಪಂದದ ಸದಸ್ಯ ರಾಷ್ಟ್ರವಾಗಿ (Contracting Party) ಸೇರ್ಪಡೆಗೊಂಡರೆ, ಭಾರತವು ಈ ಸಮಿತಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಹಾಗೂ ವೈಜ್ಞಾನಿಕ ದತ್ತಾಂಶ, ಸಂಶೋಧನಾ ಕಾರ್ಯಕ್ರಮಗಳು ಮತ್ತು ಮೌಲ್ಯಮಾಪನಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದರಿಂದ ಭಾರತೀಯ ಮೀನುಗಾರರು ಮತ್ತು ಉದ್ಯಮಿಗಳಿಗೆ ಹೊಸ ಮೀನುಗಾರಿಕೆ ಅವಕಾಶಗಳು ತೆರೆದುಕೊಳ್ಳಲಿವೆ. ಎಸ್‌ಐಒಎಫ್‌ಎ ವ್ಯಾಪ್ತಿಯ ಪ್ರದೇಶದಲ್ಲಿ ಸುಸ್ಥಿರ ಮೀನುಗಾರಿಕೆ ಪದ್ಧತಿಗಳಿಗೆ ಭಾರತವು ಸಕ್ರಿಯವಾಗಿ ಕೊಡುಗೆ ನೀಡುವುದರಿಂದ, ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸಲು, ಅವುಗಳ ದೀರ್ಘಕಾಲೀನ ಲಭ್ಯತೆಯನ್ನು ಖಚಿತಪಡಿಸಲು ಮತ್ತು ಭಾರತೀಯ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕೆ ಬೆಂಬಲ ನೀಡಲು ಮಹತ್ವದ ನೆರವು ದೊರೆಯಲಿದೆ.

ಹಿನ್ನೆಲೆ:

ಜಾಗತಿಕ ಸಾಗರದ ಸುಮಾರು ಶೇ. 65ರಷ್ಟು ಭಾಗವನ್ನು ಆಳಸಮುದ್ರ ಪ್ರದೇಶಗಳು ಒಳಗೊಂಡಿವೆ. ಪ್ರಸ್ತುತ ಈ ಪ್ರದೇಶಗಳಲ್ಲಿ ಚೀನಾ (ಶೇ. 21), ತೈವಾನ್ (ಶೇ. 13), ಜಪಾನ್ (ಶೇ. 11), ದಕ್ಷಿಣ ಕೊರಿಯಾ (ಶೇ. 11) ಮತ್ತು ಸ್ಪೇನ್ (ಶೇ. 8) ಸೇರಿದಂತೆ ಐದು ದೇಶಗಳು/ಪ್ರದೇಶಗಳು ಪ್ರಮುಖ ಸ್ಥಾನ ಹೊಂದಿವೆ. ಹಿಂದೂ ಮಹಾಸಾಗರದಲ್ಲಿ ಎರಡು ಪ್ರಮುಖ ಪ್ರಾದೇಶಿಕ ಮೀನುಗಾರಿಕೆ ನಿರ್ವಹಣಾ ಸಂಸ್ಥೆಗಳು (ಆರ್‌ಎಫ್‌ಎಂಒ) ಇವೆ. ಅವುಗಳೆಂದರೆ ಹಿಂದೂ ಮಹಾಸಾಗರ ಟ್ಯೂನಾ ಕಮಿಷನ್ (ಐಒಟಿಸಿ) ಮತ್ತು ದಕ್ಷಿಣ ಹಿಂದೂ ಮಹಾಸಾಗರ ಮೀನುಗಾರಿಕೆ ಒಪ್ಪಂದ (ಎಸ್‌ಐಒಎಫ್ಎ). ಹೆಚ್ಚು ದೂರ ವಲಸೆ ಹೋಗುವ ಟ್ಯೂನಾ ಮತ್ತು ಟ್ಯೂನಾದಂತಹ ಮೀನು ತಳಿಗಳ ಮೀನುಗಾರಿಕೆಯನ್ನು ನಿಯಂತ್ರಿಸುವ ಐಒಟಿಸಿಗೆ ಭಾರತವು 1996ರಿಂದಲೇ ಒಪ್ಪಂದದ ಸದಸ್ಯ ರಾಷ್ಟ್ರವಾಗಿದೆ.

ಭಾರತವು 2022ರಿಂದ ಎಸ್‌ಐಒಎಫ್‌ಎನ ಒಪ್ಪಂದಕ್ಕೆ ಸಹಿ ಹಾಕದ ಸಹಯೋಗಿ ಪಕ್ಷವಾಗಿದೆ (ಸಿಎನ್‌ಸಿಪಿ). ಈ ಸದಸ್ಯತ್ವದ ಮೂಲಕ, ಭಾರತವು ಕಾನೂನುಬದ್ಧ ಮೀನುಗಾರಿಕೆ ಹಕ್ಕುಗಳನ್ನು ಪಡೆದುಕೊಳ್ಳಲು, ಎಸ್‌ಐಒಎಫ್‌ಎಯ ಕಾರ್ಯವ್ಯಾಪ್ತಿಗೆ ಒಳಪಡುವ ಆಳಸಮುದ್ರ ಪ್ರದೇಶಗಳಲ್ಲಿನ ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ಮೀನುಗಾರಿಕಾ ನೌಕೆಗಳೊಂದಿಗೆ ತನ್ನ ಅಧಿಕೃತ ಉಪಸ್ಥಿತಿಯನ್ನು ಸ್ಥಾಪಿಸಿಕೊಳ್ಳಲು ಅವಕಾಶ ಪಡೆಯುತ್ತದೆ. ಈ ಒಪ್ಪಂದವು ನಿರ್ದಿಷ್ಟ ಪ್ರದೇಶದಲ್ಲಿನ ಮೀನುಗಳು, ಮೃದ್ವಂಗಿಗಳು, ಕಠಿಣಚರ್ಮಿಗಳು ಮತ್ತು ಇತರ ಸಮುದ್ರತಳದಲ್ಲಿರುವ ಅಥವಾ ಅಲ್ಲಿಯೇ ನೆಲೆಸಿರುವ ಪ್ರಭೇದಗಳು ಸೇರಿದಂತೆ ಮೀನುಗಾರಿಕೆ ಸಂಪನ್ಮೂಲಗಳನ್ನು ಒಳಗೊಂಡಿದೆ. ಆದರೆ, ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದದ (ಯುಎನ್‌ಸಿಎಲ್‌ಒಎಸ್‌) ಅನುಬಂಧ Iರಲ್ಲಿ ಉಲ್ಲೇಖಿಸಿರುವ ಹೆಚ್ಚು ದೂರ ವಲಸೆ ಹೋಗುವ ಪ್ರಭೇದಗಳು ಹಾಗೂ ಯುಎನ್‌ಸಿಎಲ್‌ಒಎಸ್‌ನ ಅನುಚ್ಛೇದ 77(4)ರ ಅಡಿಯಲ್ಲಿ ಕರಾವಳಿ ರಾಷ್ಟ್ರಗಳ ಮೀನುಗಾರಿಕೆ ವ್ಯಾಪ್ತಿಗೆ ಒಳಪಡುವ ಸಮುದ್ರತಳದಲ್ಲಿ ನೆಲೆಸಿರುವ ಪ್ರಭೇದಗಳನ್ನು ಈ ಒಪ್ಪಂದವು ಹೊರತುಪಡಿಸುತ್ತದೆ.

ಪ್ರಸ್ತುತ ಭಾರತೀಯ ಮೀನುಗಾರಿಕಾ ದೋಣಿಗಳು ಮುಖ್ಯವಾಗಿ ವಿಶೇಷ ಆರ್ಥಿಕ ವಲಯದ (ಇಇಝಡ್) ಕರಾವಳಿಯಿಂದ 60–80 ನಾಟಿಕಲ್ ಮೈಲುಗಳ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿವೆ. ಇತರ ದೇಶಗಳ ವಿಶೇಷ ಆರ್ಥಿಕ ವಲಯಗಳಲ್ಲಿ ಪ್ರವೇಶ ಒಪ್ಪಂದಗಳನ್ನು ಮಾಡಿಕೊಳ್ಳುವುದು ಸೇರಿದಂತೆ, ಸಾಧ್ಯವಿರುವ ಎಲ್ಲ ಆಳಸಮುದ್ರ ಪ್ರದೇಶಗಳಲ್ಲಿಯೂ ಮೀನುಗಾರಿಕಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ವಿಸ್ತರಿಸುವ ಅಗತ್ಯ ಭಾರತಕ್ಕಿದೆ. ಇದರಿಂದ ದೇಶದ ಬೊಕ್ಕಸಕ್ಕೂ ಆದಾಯದ ಹೆಚ್ಚಲಿದೆ.

 

******

 

 


(ಪ್ರಕಟಣೆ ಐ.ಡಿ.: 2323576) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Tamil , Malayalam