ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ರಧಾನಮಂತ್ರಿ ಸಂಭಾಷಣೆ

ಪ್ರಕಟಣಾ ದಿನಾಂಕ: 02 OCT 2026 3:24PM by PIB Bengaluru

ಪ್ರಧಾನಮಂತ್ರಿ – ಸ್ಮಿತ್, ನಮಸ್ತೆ.

ಕ್ಯಾಪ್ಟನ್ ಸ್ಮಿತ್ – ಜೈ ಹಿಂದ್, ಸರ್. ನಮಸ್ತೆ, ಸರ್.

ಪ್ರಧಾನಮಂತ್ರಿ – ಈಗ ಹೇಗಿದ್ದೀರಿ, ನಿಮ್ಮ ಆರೋಗ್ಯ ಹೇಗಿದೆ?

ಕ್ಯಾಪ್ಟನ್ ಸ್ಮಿತ್ – ಸರ್, ಎಲ್ಲವೂ ಚೆನ್ನಾಗಿದೆ ಸರ್, ಎಲ್ಲವೂ ಉತ್ತಮವಾಗಿದೆ.

ಪ್ರಧಾನಮಂತ್ರಿ – ನೋಡಿ, ಇಡೀ ದೇಶವೇ ನಿಮಗಾಗಿ ಪ್ರಾರ್ಥಿಸುತ್ತಿದೆ. ಎಲ್ಲೆಡೆ ಮಹಾಮೃತ್ಯುಂಜಯ ಮಂತ್ರ ಪಠಣ ನಡೆಯುತ್ತಿದೆ.

ಕ್ಯಾಪ್ಟನ್ ಸ್ಮಿತ್ – ಹೌದು ಸರ್.

ಪ್ರಧಾನಮಂತ್ರಿ – ನಿಮ್ಮ ಧೈರ್ಯ, ನಿಮ್ಮ ತಾಳ್ಮೆ ಮತ್ತು ನಿಮ್ಮ ಸಮಯಪ್ರಜ್ಞೆ - ಕೇವಲ ಕ್ಷಣ ಮಾತ್ರದಲ್ಲಿ ನೀವು ಅದೆಷ್ಟೋ ನಿರ್ಣಾಯವಾದ ನಿರ್ಧಾರಗಳನ್ನು ತೆಗೆದುಕೊಂಡಿರಿ...

ಕ್ಯಾಪ್ಟನ್ ಸ್ಮಿತ್ – ಹೌದು ಸರ್.

ಪ್ರಧಾನಮಂತ್ರಿ – ಅನೇಕ ಜೀವಗಳನ್ನು ಉಳಿಸಿದಿರಿ. ಇಂದು ಇಡೀ ದೇಶವೇ ಹೆಮ್ಮೆಯಿಂದ ಹೇಳಬಲ್ಲದು - ನಾವು ಭಾರತೀಯರು ಜೀವಗಳನ್ನು ಕಸಿದುಕೊಳ್ಳುವವರಲ್ಲ, ಬದಲಾಗಿ ಜೀವಗಳನ್ನು ಉಳಿಸುವವರು.

ಕ್ಯಾಪ್ಟನ್ ಸ್ಮಿತ್ – ಖಂಡಿತವಾಗಿಯೂ ಸರ್.

ಪ್ರಧಾನಮಂತ್ರಿ – ನಿಮ್ಮ ದೇಹದಲ್ಲಿ ಅಂತಹ ಗಂಭೀರವಾದ ಗಾಯವಿದ್ದಾಗ, ನೀವೇ ಸ್ವತಃ ಜೀವನ ಮತ್ತು ಸಾವಿನ ನಡುವೆ ಹೋರಾಡುತ್ತಿದ್ದಾಗಲೂ, ಆ ಸಮಯದಲ್ಲಿ ನೀವು ನಿಮ್ಮ ಸ್ವಂತ ಪ್ರಾಣದ ಬಗ್ಗೆ ಯೋಚಿಸದೆ ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು 140 ಕೋಟಿ ದೇಶವಾಸಿಗಳ ಗೌರವ ಹೆಚ್ಚಿಸಿದಿರಿ.

ಕ್ಯಾಪ್ಟನ್ ಸ್ಮಿತ್ – ಧನ್ಯವಾದಗಳು ಸರ್.

ಪ್ರಧಾನಮಂತ್ರಿ – ಅದಕ್ಕಾಗಿಯೇ ನನ್ನ ಹೃದಯಂತರಾಳದಿಂದ ನನಗೆ ಹೆಮ್ಮೆ ಎನಿಸುತ್ತಿದೆ.

ಕ್ಯಾಪ್ಟನ್ ಸ್ಮಿತ್ – ಸರ್, ನಾನು... ಕ್ಷಮಿಸಿ.

ಪ್ರಧಾನಮಂತ್ರಿ – ನಿನ್ನೆ ನನಗೆ ಭೂಪೇಂದ್ರ ಭಾಯಿ, ಗೀತಾ ಬೆಹನ್ ಮತ್ತು ಸೋನಲ್ ಬೆಹನ್ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಜಾವಾ ಮತ್ತು ಬಾಬಿ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಗೀತಾ ಬೆಹನ್ ಅವರಿಗೆ ಹೇಳಿದೆ - ಅವರ ಹೆಸರು 'ಗೀತಾ' ಆಗಿದ್ದರೂ, ಅವರು ನಿಜವಾಗಿಯೂ ಕೃಷ್ಣನ 'ಗೀತೆ'ಯ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಗೀತೆಯ ಆ ಮೌಲ್ಯಗಳನ್ನೇ ಇಟ್ಟುಕೊಂಡು ಅವರು ಸ್ಮಿತ್‌ನ ಜೀವನ ರೂಪಿಸಿದ್ದಾರೆ.

ಕ್ಯಾಪ್ಟನ್ ಸ್ಮಿತ್ – ಖಂಡಿತವಾಗಿಯೂ, ಸರ್.

ಪ್ರಧಾನಮಂತ್ರಿ – ಸ್ಮಿತ್, ಈಗ ನಾನು ನಿಮ್ಮ ಮಾತುಗಳನ್ನು ಕೇಳಲು ಬಯಸುತ್ತೇನೆ.

ಕ್ಯಾಪ್ಟನ್ ಸ್ಮಿತ್ – ಸರ್, ನನಗೆ... ನಾನು ಬೇರೆಯವರಿಗೂ ಸಹ ಹೇಳುತ್ತಿದ್ದೆ... ನೀವು ನನ್ನ ಅತ್ಯಂತ ದೊಡ್ಡ ಆದರ್ಶ ವ್ಯಕ್ತಿ, ಸರ್. ಅಂತಹ ನೀವು ನನಗೆ ಕರೆ ಮಾಡಿ, ನನ್ನನ್ನು ಹುರಿದುಂಬಿಸುತ್ತಿದ್ದೀರಿ. ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಆ ಕ್ಷಣದಲ್ಲಿ ಸರ್, ಹೌದು, ನಾನು ನನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದೆ. ಆದರೆ ಒಂದು ಹಂತದಲ್ಲಿ ನನಗೆ ಅರಿವಾಯಿತು - ನಾನು ಏನಾದರೂ ಮಾಡಲೇಬೇಕಿತ್ತು... ಏಕೆಂದರೆ ನಾನು ಬಿದ್ದಿದ್ದೆ, ನನಗೆ ಅನೇಕ ಗಾಯಗಳಾಗಿದ್ದವು. ನಾನು ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದೆ. ಆಗ ನಾನು ನನಗೆ ನಾನೇ ಹೇಳಿಕೊಂಡೆ, ನಾನು ಎದ್ದು ನಿಲ್ಲದಿದ್ದರೆ... ಸರ್, ನಾನು ಕಳೆದ 17 ವರ್ಷಗಳಿಂದ ವಿಮಾನಗಳನ್ನು ಹಾರಿಸುತ್ತಿದ್ದೇನೆ. ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿದ್ದೇನೆ. ಕಣ್ಣು ಮುಚ್ಚಿಕೊಂಡಿದ್ದರೂ ವಿಮಾನದೊಳಗೆ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿರುತ್ತದೆ. ನಾನು ಕೆಳಗೆ ಬಿದ್ದಿದ್ದಾಗ, ವಿಮಾನವು ಕೆಳಮುಖವಾಗಿ ಚಲಿಸುತ್ತಿರುವುದನ್ನು ಅನುಭವಿಸಲು ನನಗೆ ಸಾಧ್ಯವಾಯಿತು. ಇದುವೇ ಕೊನೆಯ ಪ್ರಯತ್ನದ ಕ್ಷಣ ಎಂದು ನನಗೆ ಸ್ಪಷ್ಟವಾಗಿ ತಿಳಿದಿತ್ತು - ಇದನ್ನು ಮಾಡಲೇಬೇಕು ಎಂದುಕೊಂಡೆ - ಬಾಗಿಲು ಅಲ್ಲೇ ಹತ್ತಿರದಲ್ಲಿತ್ತು. ಆಗಲೂ ನನಗೆ ಪೆಟ್ಟು ಬೀಳುತ್ತಿತ್ತು, ಆದರೂ ನಾನು ಅದನ್ನು ತೆರೆದೆ, ಸರ್. ನಂತರ ಎಲ್ಲರೂ ಹೊರಬಂದರು, ಆ ಪ್ರಯತ್ನದಲ್ಲಿ ಇತರರ ಪಾತ್ರವೂ ಇತ್ತು. ಆದರೆ ನಾನು ಪ್ರಜ್ಞಾಪೂರ್ವಕವಾಗಿ ನನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಅದೇ ಸಮಯದಲ್ಲಿ ಪ್ರಯಾಣಿಕರೆಲ್ಲರೂ ಸಾಯಲು ಬಿಡಬಾರದು ಎಂಬ ಅರಿವೂ ನನಗಿತ್ತು. ಅದರ ನಂತರ, ಇಲ್ಲಿ ಸೌದಿಯಲ್ಲಿ ನನಗೆ ಸಿಕ್ಕ ಆರೈಕೆ ಅಥವಾ ವೈದ್ಯಕೀಯ ಚಿಕಿತ್ಸೆಗಿಂತ ಉತ್ತಮವಾದದ್ದು ಬೇರೆ ಸಿಗಲು ಸಾಧ್ಯವೇ ಇರಲಿಲ್ಲ. ಸರ್, ನಾನು ಈಗ ಕೇವಲ ಸಕಾರಾತ್ಮಕ ಆಲೋಚನೆಗಳಲ್ಲಿದ್ದೇನೆ. ನನಗೆ ನೋವು ಆದಾಗಲೆಲ್ಲಾ, ನನ್ನ ಮನಸ್ಸಿಗೆ ಬರುವ ಏಕೈಕ ವಿಷಯವೆಂದರೆ ಹನುಮಾನ್ ಚಾಲೀಸಾ ಪಠಿಸುವುದು. ಆ ಸಮಯದಲ್ಲೂ ನಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ. ದೇವರು ನನ್ನನ್ನು ರಕ್ಷಿಸಿದನೆಂದು ನನಗೆ ತಿಳಿದಿದೆ. ಈಗ ಸರ್, ನಿಮ್ಮ ಕರೆ ಬಂದಿದೆ - ನನಗೆ ಅಪಾರ ಹೆಮ್ಮೆ ಎನಿಸುತ್ತಿದೆ. ಇಲ್ಲಿಯವರೆಗೆ ನನಗೆ ಆ ಭಾವನೆ ಬಂದಿರಲಿಲ್ಲ. ಆದರೆ ಈಗ ಅದು ನನಗಾಗುತ್ತಿದೆ, ಸರ್. ಕ್ಷಮಿಸಿ, ನಾನು ನಿಮ್ಮ ಮುಂದೆ ಕಣ್ಣೀರು ಹಾಕುತ್ತಿದ್ದೇನೆ, ಸರ್.

ಪ್ರಧಾನಮಂತ್ರಿ – ಸ್ಮಿತ್, ನನ್ನ ಮುಂದೆ ನೀವು ಭಾವನಾತ್ಮಕವಾಗದಿದ್ದರೆ, ಇನ್ನೆಲ್ಲಿ ಅದನ್ನು ಹೊರಹಾಕಲು ಸಾಧ್ಯ?

ಕ್ಯಾಪ್ಟನ್ ಸ್ಮಿತ್ – ಸರ್, ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ, ಕನಸಲ್ಲೂ ಭಾವಿಸಿರಲಿಲ್ಲ.

ಪ್ರಧಾನಮಂತ್ರಿ – ನೀವು ಅಂತಹ ಮಹಾನ್ ಕಾರ್ಯ ಮಾಡಿದ್ದೀರಿ ಸಹೋದರ, ಇಂದು ಪ್ರತಿಯೊಬ್ಬ ದೇಶವಾಸಿ - ಅಷ್ಟೇ ಏಕೆ, ವಿಶ್ವಾದ್ಯಂತದ ಜನರು ನಿಮ್ಮನ್ನು ನೋಡಲು ಮತ್ತು ನಿಮ್ಮೊಂದಿಗೆ ಮಾತನಾಡಲು ಉತ್ಸುಕರಾಗಿದ್ದಾರೆ. ಹನುಮಾನ್ ಚಾಲೀಸಾದ ಬಗ್ಗೆ ನೀವು ನನಗೆ ಹೇಳಿದ ವಿಷಯಕ್ಕಾಗಿ - ನಾನು ಗೀತಾ ಬೆಹನ್ ಅವರಿಗೆ ನಮಸ್ಕರಿಸುತ್ತೇನೆ, ಅವರು ನಿಮಗೆ ಅಂತಹ ಮೌಲ್ಯಗಳನ್ನು ನೀಡಿದ್ದಾರೆ. ಹಾಗೆಯೇ ಭೂಪೇಂದ್ರ ಭಾಯ್ ಅವರಿಗೂ ನಮಸ್ಕರಿಸುತ್ತೇನೆ. ಸ್ಮಿತ್, ಒಂದು ವಿಷಯ ಹೇಳುತ್ತೇನೆ, ನಿನ್ನೆ ನಾನು ಸೋನಲ್ ಬೆಹನ್ ಅವರೊಂದಿಗೆ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು - ಅವರು ಅಷ್ಟು ಸಂಯಮದಿಂದ ಮಾತನಾಡಿದರು.

ಕ್ಯಾಪ್ಟನ್ ಸ್ಮಿತ್ – ಹೌದು, ಸರ್.

ಪ್ರಧಾನಮಂತ್ರಿ – ಅವರು ಅದೆಷ್ಟು ಧೈರ್ಯದಿಂದ ಮಾತನಾಡುತ್ತಿದ್ದರು! ಇಂತಹ ಸಂದರ್ಭದಲ್ಲಿ ಸೋನಲ್ ಬೆಹನ್ ಅವರು ಅಷ್ಟು ಸಂಯಮದಿಂದ ಮಾತನಾಡಬಲ್ಲರು ಎಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ಹಾಗಾಗಿ, ಒಂದು ಕುಟುಂಬವಾಗಿ ನೀವು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ನಾನು ನಂಬುತ್ತೇನೆ.

ಕ್ಯಾಪ್ಟನ್ ಸ್ಮಿತ್ – ಸರ್, ಪ್ರತಿದಿನ ಬೆಳಗ್ಗೆ ನಾನು ಪ್ರಾರ್ಥನೆ ಮಾಡುವಾಗ, ನನ್ನ 2 ವರ್ಷದ ಮಗ ನನ್ನ ಮಡಿಲಲ್ಲಿ ಕುಳಿತುಕೊಳ್ಳುತ್ತಾನೆ, ನಾನು ಅವನಿಗೆ ಹನುಮಾನ್ ಚಾಲೀಸಾ ಪಠಿಸಿ ಕೇಳಿಸುತ್ತೇನೆ. ನನಗೆ ಕಲಿಸಲಾದ ವಿಷಯಗಳನ್ನು ನಾನು ಅವನಿಗೆ ಹೇಳಿಕೊಡುತ್ತೇನೆ; ಏಕೆಂದರೆ ಇಂದು ನಾವು ನಮ್ಮ ದೇಶದಿಂದ ದೂರವಿರಬಹುದು, ಆದರೆ ನಮ್ಮ ಸಂಸ್ಕೃತಿಯಿಂದ ಎಂದಿಗೂ ದೂರವಿರಬಾರದು.

ಪ್ರಧಾನಮಂತ್ರಿ – ಅದು ನಿಜಕ್ಕೂ ಸರಿ.

ಕ್ಯಾಪ್ಟನ್ ಸ್ಮಿತ್ – ಈಗ, ಇಲ್ಲಿ ನಮಗೆ ದೇಶದಿಂದ ದೂರವಿರುವ ಭಾವನೆಯೇ ಬರುತ್ತಿಲ್ಲ. ಇಲ್ಲಿನ ಜನರು ನಮ್ಮನ್ನು ಅಪಾರ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿ – ನಿಮಗೆ ಇದು ತಿಳಿದಿಲ್ಲದಿರಬಹುದು, ಆದರೆ ಸಾವರ್ಕುಂಡ್ಲ ಮತ್ತು ವಾಧ್ವಾನ್‌ನಲ್ಲಿ ಜನರು ಎಂತಹ ಭಾವನಾತ್ಮಕ ವಾತಾವರಣ ಸೃಷ್ಟಿಸಿದ್ದಾರೆ ಗೊತ್ತೇ? ಇದು ಇಡೀ ಭಾರತದಾದ್ಯಂತ ಕಂಡುಬರುತ್ತಿದೆ. ನಿನ್ನೆ ಎಲ್ಲೆಡೆ ದೇವಾಲಯಗಳಲ್ಲಿ ಪ್ರಾರ್ಥನೆ, ಪೂಜೆ ಮತ್ತು ಆರತಿಗಳನ್ನು ನಡೆಸಲಾಯಿತು. ದೇಶಾದ್ಯಂತದ ಯಾತ್ರಾಸ್ಥಳಗಳಲ್ಲಿ ಆರತಿ ನೆರವೇರಿಸಲಾಯಿತು. ಪ್ರತಿಯೊಬ್ಬರೂ ನಿಮ್ಮ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಆದ್ದರಿಂದ, ನೀವು ಖಂಡಿತವಾಗಿಯೂ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೀರಿ. ಭಾರತವು ನಿಮ್ಮನ್ನು ಸ್ವಾಗತಿಸಲು ಉತ್ಸುಕತೆಯಿಂದ ಕಾಯುತ್ತಿದೆ. ಈಗ ನೀವು ಅನುಭವಿಸುತ್ತಿರುವ ದೈಹಿಕ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನೀವು ಧೈರ್ಯಶಾಲಿ ವ್ಯಕ್ತಿ, ಹಾಗಾಗಿ ಬಹುಶಃ ನಿಮ್ಮ ಗಾಯಗಳ ನೋವನ್ನು ಸಹಿಸಿಕೊಳ್ಳುವುದು ನಿಮಗೆ ಸುಲಭವಾಗಿರಬಹುದು.

ಕ್ಯಾಪ್ಟನ್ ಸ್ಮಿತ್ – ಇಲ್ಲ ಸರ್. ನಾನು ಇದನ್ನು ಕೇವಲ ಒಂದು 'ಗಾಯ' ಎಂದು ನೋಡುತ್ತಿಲ್ಲ; ಏಕೆಂದರೆ ನಾನು ಅದನ್ನು ಗಾಯವೆಂದು ಭಾವಿಸಿದರೆ, ನನ್ನ ಚೇತರಿಕೆ ಇನ್ನಷ್ಟು ಕಷ್ಟಕರವಾಗುತ್ತದೆ. ನಾನು ಇದನ್ನು ಒಂದು 'ಪ್ರಯಾಣ'ದಂತೆ ನೋಡುತ್ತಿದ್ದೇನೆ - ಇದು ನಿಧಾನವಾಗಿ, ಹಂತ ಹಂತವಾಗಿ ನಡೆಯುವ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಆದರೆ ನಾನು ಚೇತರಿಸಿಕೊಳ್ಳುತ್ತೇನೆ ಮತ್ತು ಮತ್ತೆ ಸಂಪೂರ್ಣವಾಗಿ ಆರೋಗ್ಯವಂತನಾಗುತ್ತೇನೆ ಎಂಬ ಸದೃಢವಾದ ವಿಶ್ವಾಸ ನನಗಿದೆ.

ಪ್ರಧಾನಮಂತ್ರಿ – ನಿಮ್ಮನ್ನು ಅಷ್ಟೊಂದು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಸೌದಿ ಸರ್ಕಾರ ಮತ್ತು ಯುಎಇ ಸರ್ಕಾರಕ್ಕೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ಅವರಿಗೂ ಆಭಾರಿಯಾಗಿದ್ದೇನೆ. ಸ್ಮಿತ್, ನೀವು ನನ್ನೊಂದಿಗೆ ಮಾತನಾಡಬೇಕು ಅನಿಸಿದರೆ ಯಾವಾಗ ಬೇಕಾದರೂ ಕರೆ ಮಾಡಿ, ನಾನು ಕೇವಲ ಒಂದು ದೂರವಾಣಿ ಕರೆಯ ಅಂತರದಲ್ಲಿರುತ್ತೇನೆ.

ಕ್ಯಾಪ್ಟನ್ ಸ್ಮಿತ್ – ಧನ್ಯವಾದಗಳು ಸರ್.

ಪ್ರಧಾನಮಂತ್ರಿ – ಆದರೆ ನಾನು ನಿಮಗೆ ಹೇಳಲೇಬೇಕು, ನೀವು ಮಾಡಿದ್ದು ನಿಜಕ್ಕೂ ಅಸಾಧಾರಣವಾದದ್ದು. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಗಮನಿಸುತ್ತಿದ್ದೆ. ಒಂದು ವೇಳೆ ಇದು ಈ ರೀತಿ ನಡೆಯದಿದ್ದಿದ್ದರೆ, ಭಾರತವು ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು, ಭಾರತದ ಪೈಲಟ್‌ಗಳು ಎಂತಹ ಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು, ಅವರನ್ನು ಹೇಗೆ ನೋಡಲಾಗುತ್ತಿತ್ತು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಜನರು ಹೇಳುತ್ತಿದ್ದರು. ನೀವು ಅದೆಲ್ಲವನ್ನೂ ಉಳಿಸಿದ್ದೀರಿ. ನೀವು ನಿಜಕ್ಕೂ ಗಮನಾರ್ಹವಾದ ಕೆಲಸ ಮಾಡಿದ್ದೀರಿ.

ಕ್ಯಾಪ್ಟನ್ ಸ್ಮಿತ್ – ಹೌದು ಸರ್.

ಪ್ರಧಾನಮಂತ್ರಿ – ನಾವು ಭೇಟಿಯಾದಾಗ ನಾನು ಎಲ್ಲಾ ಆಂತರಿಕ ವಿವರಗಳನ್ನು ಕೇಳಿ ತಿಳಿದುಕೊಳ್ಳುತ್ತೇನೆ, ಏಕೆಂದರೆ ಮೊಬೈಲ್ ಫೋನ್ ಮೂಲಕ ನಿಮ್ಮೊಂದಿಗೆ ಅಂತಹ ವಿಷಯಗಳನ್ನು ಚರ್ಚಿಸಲು ನಾನು ಬಯಸುವುದಿಲ್ಲ.

ಕ್ಯಾಪ್ಟನ್ ಸ್ಮಿತ್ – ಸರಿ ಸರ್.

ಪ್ರಧಾನಮಂತ್ರಿ – ನೀವು ಸಂಪೂರ್ಣವಾಗಿ ಚೇತರಿಸಿಕೊಳ್ಳುವತ್ತ ಗಮನ ಹರಿಸಿ. ಇಡೀ ದೇಶವೇ ನಿಮ್ಮೊಂದಿಗಿದೆ.

ಕ್ಯಾಪ್ಟನ್ ಸ್ಮಿತ್ – ಧನ್ಯವಾದಗಳು ಸರ್.

ಪ್ರಧಾನಮಂತ್ರಿ – ನಾನು ನಿಮ್ಮನ್ನು ಇನ್ನಷ್ಟು ಆಯಾಸಗೊಳಿಸಲು ಬಯಸುವುದಿಲ್ಲ. ನನ್ನ ಶುಭಾಶಯಗಳು ನಿಮ್ಮೊಂದಿಗಿವೆ. ಇಂದು ಗಾಂಧಿ ಜಯಂತಿ. ಅಹಿಂಸೆಯ ನಿಜವಾದ ಅರ್ಥವೇನು ಎಂಬುದನ್ನು ನಿಮ್ಮ ಕಾರ್ಯಗಳ ಮೂಲಕ ನೀವು ತೋರಿಸಿಕೊಟ್ಟಿದ್ದೀರಿ.

ಕ್ಯಾಪ್ಟನ್ ಸ್ಮಿತ್ – ಧನ್ಯವಾದಗಳು ಸರ್.

ಪ್ರಧಾನಮಂತ್ರಿ – ಸರಿ ಹಾಗಾದರೆ, ಜೈ ಶ್ರೀ ಕೃಷ್ಣ. ಜೈ ಶ್ರೀ ಕೃಷ್ಣ, ನಾವು ಸ್ವಲ್ಪ ಗುಜರಾತಿಯಲ್ಲೂ ಮಾತನಾಡೋಣ.

ಕ್ಯಾಪ್ಟನ್ ಸ್ಮಿತ್ – ಜೈ ಶ್ರೀ ಕೃಷ್ಣ ಸರ್.

ಪ್ರಧಾನಮಂತ್ರಿ – ಬಾಬಿ ಮತ್ತು ಜೀವಾ ಗುಜರಾತಿ ಮಾತನಾಡುತ್ತಾರೆಯೇ?

ಕ್ಯಾಪ್ಟನ್ ಸ್ಮಿತ್ – ಹೌದು ಸರ್, ಅವರಿಬ್ಬರೂ ಮಾತನಾಡುತ್ತಾರೆ. ಅವರಿಬ್ಬರಿಗೂ ಗುಜರಾತಿ ಬರುತ್ತದೆ.

ಪ್ರಧಾನಮಂತ್ರಿ – ಅವರು ಚೆನ್ನಾಗಿ ಗುಜರಾತಿ ಮಾತನಾಡುತ್ತಾರಲ್ಲವೇ?

ಕ್ಯಾಪ್ಟನ್ ಸ್ಮಿತ್ – ಅವರಿಬ್ಬರೂ ಮೊದಲು ಗುಜರಾತಿ ಕಲಿತರು, ಆ ನಂತರವಷ್ಟೇ ಇಂಗ್ಲಿಷ್ ಕಲಿತರು.

ಪ್ರಧಾನಮಂತ್ರಿ – ಹೌದೇ? ನೀವು ಮಕ್ಕಳನ್ನು ಭೇಟಿಯಾಗಿದ್ದೀರಾ? ಆ ಮಕ್ಕಳನ್ನು? ಮಕ್ಕಳನ್ನು ಭೇಟಿಯಾಗಲು ವೈದ್ಯರು ಅನುಮತಿ ನೀಡಿದರಾ?

ಕ್ಯಾಪ್ಟನ್ ಸ್ಮಿತ್ – ನನ್ನ ಹಿರಿಯ ಮಗಳು ನನ್ನನ್ನು ಭೇಟಿಯಾಗಲು ಬಂದಿದ್ದಳು, ಆದರೆ ಇದೆಲ್ಲವನ್ನೂ ನೋಡಿ ಅವಳಿಗೆ ಭಯವಾಯಿತು.

ಪ್ರಧಾನಮಂತ್ರಿ– ಹೌದಾ...

ಕ್ಯಾಪ್ಟನ್ ಸ್ಮಿತ್ – ಅವಳಿಗೆ ಸ್ವಲ್ಪ ಹುಷಾರಿರಲಿಲ್ಲ, ಅವಳೆಂದರೆ ನನಗೆ ತುಂಬಾ ಪ್ರೀತಿ. ಇನ್ನು ನನ್ನ ಕಿರಿಯ ಮಗನಿಗೆ ಕೇವಲ 2 ವರ್ಷ, ಹಾಗಾಗಿ ಅವನನ್ನು ಕರೆತರಲು ಅನುಮತಿ ನೀಡಲಿಲ್ಲ.

ಪ್ರಧಾನಮಂತ್ರಿ – ಅದು ಅರ್ಥವಾಗುವಂತಹ ವಿಷಯವೇ. ಈ ಸಮಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಆದರೆ ಸೋನಲ್ ಬೆಹನ್ ಬಹಳ ಧೈರ್ಯಶಾಲಿ ಮಹಿಳೆ.

ಕ್ಯಾಪ್ಟನ್ ಸ್ಮಿತ್ – ಹೌದು ಸರ್.

ಪ್ರಧಾನಮಂತ್ರಿ – ನಿನ್ನೆ ಅವರು ನನ್ನೊಂದಿಗೆ ಎಷ್ಟು ಸಂಯಮದಿಂದ ಮಾತನಾಡಿದರು. ಇಲ್ಲದಿದ್ದರೆ, ನನ್ನ ಅನುಭವದ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಜನರು ಸಾಮಾನ್ಯವಾಗಿ ಮಾತನಾಡಲು ಕೂಡ ಸಾಧ್ಯವಾಗುವುದಿಲ್ಲ. ಅವರ ಮಾತಿನಲ್ಲಿ ದೂರಿನ ಲವಲೇಶವೂ ಇರಲಿಲ್ಲ. ನಿನ್ನೆ ನಾನು ಮುಂಬೈ ವಿಮಾನ ನಿಲ್ದಾಣದಲ್ಲಿ ಭೂಪೇಂದ್ರ ಭಾಯಿ ಮತ್ತು ಗೀತಾ ಬೆಹನ್ ಅವರೊಂದಿಗೆ ಮಾತನಾಡಿದೆ. ಆಗಲೂ ಅವರಲ್ಲಿ ದೂರಿನ ಯಾವುದೇ ಸುಳಿವು ಇರಲಿಲ್ಲ. ದೇವರು ಯಾವುದು ಉತ್ತಮವೋ ಅದನ್ನೇ ಮಾಡುತ್ತಾನೆ ಎಂದು ಅವರು ಸರಳವಾಗಿ ಹೇಳಿದರು.

ಕ್ಯಾಪ್ಟನ್ ಸ್ಮಿತ್ – ಹೌದು ಸರ್.

ಪ್ರಧಾನಮಂತ್ರಿ – ಸರಿ ಹಾಗಾದರೆ, ಜೈ ಶ್ರೀ ಕೃಷ್ಣ. ಶೀಘ್ರವಾಗಿ ಚೇತರಿಸಿಕೊಳ್ಳಿ, ಆಮೇಲೆ ನಾವು ಭೇಟಿಯಾಗೋಣ.

ಕ್ಯಾಪ್ಟನ್ ಸ್ಮಿತ್ – ಒಕೆ, ಸರ್.

ಪ್ರಧಾನಮಂತ್ರಿ – ದೇವರು ನಿಮ್ಮನ್ನು ಆಶೀರ್ವದಿಸಲಿ!

ಕ್ಯಾಪ್ಟನ್ ಸ್ಮಿತ್ – ಜೈ ಹಿಂದ್.

ಪ್ರಧಾನಮಂತ್ರಿ – ಜೈ ಹಿಂದ್.

ಹಕ್ಕು ನಿರಾಕರಣೆ: ಕ್ಯಾಪ್ಟನ್ ಸ್ಮಿತ್ ಅವರೊಂದಿಗೆ ಪ್ರಧಾನಮಂತ್ರಿ ನಡೆಸಿದ ಸಂಭಾಷಣೆಯ ಕೆಲವು ತುಣುಕುಗಳು ಗುಜರಾತಿ ಭಾಷೆಯಲ್ಲಿದ್ದವು; ಅವುಗಳನ್ನು ಹಿಂದಿ ಭಾಷೆಗೆ ಅನುವಾದಿಸಲಾಗಿದೆ. ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದವನ್ನು ಇಲ್ಲಿ ಕನ್ನಡಕ್ಕೆ ರೂಪಾಂತರಿಸಲಾಗಿದೆ.

 

*****

 


(ಪ್ರಕಟಣೆ ಐ.ಡಿ.: 2319008) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Assamese , Manipuri , Punjabi , Gujarati , Odia , Telugu , Malayalam