ಲೋಕಸಭಾ ಸಚಿವಾಲಯ
azadi ka amrit mahotsav

ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್


ಕೇಂದ್ರ ಸಚಿವರು, ಸಂಸದರು ಮತ್ತು ಇತರ ಗಣ್ಯರಿಂದ ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೌರವ ನಮನ

‘ನಿಮ್ಮ ನಾಯಕರನ್ನು ಅರಿಯಿರಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್

ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಆದರ್ಶಗಳಿಂದ ಪ್ರೇರಣೆ ಪಡೆಯಲು ಯುವಜನತೆಗೆ ಲೋಕಸಭಾ ಸ್ಪೀಕರ್ ಕರೆ

ವಿಕಸಿತ ಭಾರತವನ್ನು ನಿರ್ಮಿಸಲು ಯುವಕರು ಸತ್ಯ, ಅಹಿಂಸೆ, ಸರಳತೆ, ಶಿಸ್ತು ಮತ್ತು ಬಲವಾದ ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು: ಲೋಕಸಭಾ ಸ್ಪೀಕರ್

ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಭಾರತದಾದ್ಯಂತದ 500ಕ್ಕೂ ಹೆಚ್ಚು ಯುವ ಸ್ಪರ್ಧಿಗಳು

ಪ್ರಕಟಣಾ ದಿನಾಂಕ: 02 OCT 2026 5:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ; ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ; ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್; ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ; ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ; ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ; ಶ್ರೀ ನಿತಿನ್ ನವೀನ್, ಸಂಸದರು; ಸಂಸದರು, ಮಾಜಿ ಸದಸ್ಯರು ಮತ್ತು ಇತರ ಗಣ್ಯರು ಇಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಅವರೂ ಈ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ, 'ನಿಮ್ಮ ನಾಯಕರನ್ನು ಅರಿಯಿರಿ' ಕಾರ್ಯಕ್ರಮದ ಭಾಗವಾಗಿ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ, ಆದರ್ಶಗಳು ಮತ್ತು ಸಾರ್ವಜನಿಕ ಸೇವೆಯಿಂದ ಪ್ರೇರಣೆ ಪಡೆಯಲು ಹಾಗೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ದೃಢಸಂಕಲ್ಪ, ಶಿಸ್ತು ಮತ್ತು ಬಲವಾದ ಜವಾಬ್ದಾರಿಯೊಂದಿಗೆ ಕೊಡುಗೆ ನೀಡಲು ಯುವಜನತೆಗೆ ಕರೆ ನೀಡಿದರು.

ಯುವ ಸ್ಪರ್ಧಿಗಳನ್ನು ಸ್ವಾಗತಿಸಿದ ಸ್ಪೀಕರ್, ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಅವರ ಉಪಸ್ಥಿತಿಯು, ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ದೊರೆತ ಅವಕಾಶವಾಗಿದೆ ಎಂದು ಹೇಳಿದರು. ಮಹಾತ್ಮ ಗಾಂಧಿಯವರನ್ನು ಸ್ಮರಿಸಿದ ಅವರು, ಗಾಂಧೀಜಿಯವರ ಜೀವನವು ಸತ್ಯ, ನೈತಿಕತೆ, ಅಹಿಂಸೆ ಮತ್ತು ಸತ್ಯಾಗ್ರಹದ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಉಲ್ಲೇಖಿಸಿದರು. ಪ್ರಪಂಚದ ಬಹುಪಾಲು ಭಾಗಗಳು ವಸಾಹತುಶಾಹಿ ಆಡಳಿತದಲ್ಲಿದ್ದ ಸಮಯದಲ್ಲಿ, ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ಚಳವಳಿಯು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೇಗೆ ದಾರಿ ತೋರಿಸಬಲ್ಲದು ಎಂಬುದನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟರು. ಅವರ ಆಲೋಚನೆಗಳು ಮತ್ತು ತತ್ವಶಾಸ್ತ್ರವು ತರುವಾಯ ಪ್ರಪಂಚದಾದ್ಯಂತದ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ನಡೆದ ಚಳವಳಿಗಳಿಗೆ ಪ್ರೇರಣೆಯಾಯಿತು. ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಸ್ಮರಿಸಿದ ಅವರು, ಗಾಂಧೀಜಿಯವರ ಜೀವನ ಮತ್ತು ಆಲೋಚನೆಗಳನ್ನು ಅಧ್ಯಯನ ಮಾಡುವಂತೆ ಯುವಜನತೆಯನ್ನು ಆಗ್ರಹಿಸಿದರು. ಒಬ್ಬರು ಅವರ ಜೀವನ ಮತ್ತು ತತ್ವಶಾಸ್ತ್ರವನ್ನು ಎಷ್ಟು ಹೆಚ್ಚು ಅರ್ಥಮಾಡಿಕೊಳ್ಳುತ್ತಾರೋ, ಅಷ್ಟು ಹೆಚ್ಚಿನ ಒಳನೋಟ, ಧೈರ್ಯ ಮತ್ತು ಸಂಕಷ್ಟಗಳನ್ನು ಹಾಗೂ ಸವಾಲುಗಳನ್ನು ಎದುರಿಸಲು ಹೊಸ ದೃಷ್ಟಿಕೋನವನ್ನು ಪಡೆಯುತ್ತಾರೆ ಎಂದು ಹೇಳಿದರು. ಸರಳ ಮಾರ್ಗಗಳ ಮೂಲಕವೂ ಜನರ ಜೀವನ ಮತ್ತು ಮನಸ್ಸಿನಲ್ಲಿ ಶಾಶ್ವತ ಬದಲಾವಣೆಯನ್ನು ತರಬಹುದು ಎಂಬುದನ್ನು ಮಹಾತ್ಮ ಗಾಂಧಿಯವರ ಜೀವನ ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು. ಆತ್ಮಾವಲೋಕನ, ಶಿಸ್ತು, ಪರಿಶ್ರಮ ಮತ್ತು ಉದ್ದೇಶದ ದೃಢತೆಯು ಅವರ ಜೀವನದ ಅವಿಭಾಜ್ಯ ಅಂಗವಾಗಿದ್ದವು ಮತ್ತು ಇಂದಿನ ಯುವಜನತೆಗೆ ಪ್ರಸ್ತುತವಾಗಿವೆ.

ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಿದ ಶ್ರೀ ಬಿರ್ಲಾ ಅವರು, ಅವರ ಸರಳತೆ, ಪ್ರಾಮಾಣಿಕತೆ, ಉನ್ನತ ಆದರ್ಶಗಳು, ಕರ್ತವ್ಯ ಪ್ರಜ್ಞೆ ಮತ್ತು ದೃಢ ನಿರ್ಧಾರ ಕೈಗೊಳ್ಳುವ ಬಗ್ಗೆ ಒತ್ತಿ ಹೇಳಿದರು. ಸಂಕಷ್ಟದ ಸಮತದಲ್ಲಿ, ದೇಶಕ್ಕೆ ದಾರಿ ತೋರಿಸಿದ ಮತ್ತು ರಾಷ್ಟ್ರೀಯ ಹಾಗೂ ಆಹಾರ ಭದ್ರತೆಯ ಮಹತ್ವವನ್ನು ಎತ್ತಿಹಿಡಿದ ಶಾಸ್ತ್ರೀಜಿಯವರ ಪ್ರೇರಣಾದಾಯಿಕ "ಜೈ ಜವಾನ್, ಜೈ ಕಿಸಾನ್" ಕರೆಯನ್ನು ಅವರು ಸ್ಮರಿಸಿದರು. ಇಂದಿನ ಯುವಜನತೆಗೆ ತಂತ್ರಜ್ಞಾನ, ಜ್ಞಾನ ಮತ್ತು ಅಪಾರ ಸಂಪನ್ಮೂಲಗಳ ಲಭ್ಯತೆಯಿದ್ದರೂ, ಇವು ಮಾತ್ರವೇ ಒಬ್ಬರ ಗುರಿಗಳ ಸಾಧನೆಯನ್ನು ಖಚಿತಪಡಿಸಲಾರವು ಎಂದು ಅವರು ಹೇಳಿದರು. ತಾಳ್ಮೆ, ನೈತಿಕ ನಡವಳಿಕೆ, ಶಿಸ್ತು, ದೃಢಸಂಕಲ್ಪ ಮತ್ತು ಶ್ರಮದ ನಿರಂತರತೆ ಅಷ್ಟೇ ಅತ್ಯಗತ್ಯ. ಯುವಜನರು ತಮ್ಮ ಗುರಿಗಳಲ್ಲಿ ದೃಢವಾಗಿರಬೇಕು ಮತ್ತು ನಿರಾಶೆ, ಆಯಾಸ ಅಥವಾ ಹಿನ್ನಡೆಗಳು ತಮ್ಮ ಸಂಕಲ್ಪವನ್ನು ಕುಗ್ಗಿಸಲು ಬಿಡಬಾರದು ಎಂದು ಅವರು ಕರೆ ನೀಡಿದರು. ಸಾಮಾಜಿಕ ಜವಾಬ್ದಾರಿಯು ಯುವಕರ ಪಯಣದ ಪ್ರಮುಖ ಅಂಗವಾಗಿರಬೇಕು ಮತ್ತು ಅವರ ಉದ್ದೇಶವು ಕೇವಲ ವೈಯಕ್ತಿಕ ಸಾಧನೆಯಾಗಿರದೆ, ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡುವುದಾಗಿರಬೇಕು ಎಂದು ಅವರು ಹೇಳಿದರು. ನವ ಮತ್ತು ವಿಕಸಿತ ಭಾರತದ ನಿರ್ಮಾಣ ಹಾಗೂ ನಾಯಕತ್ವಕ್ಕೆ ತಮ್ಮ ಜ್ಞಾನ, ಶಕ್ತಿ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಶ್ರೀ ಬಿರ್ಲಾ ಅವರು ಈ ಕಾರ್ಯಕ್ರಮದ ಸಂದೇಶ ಮತ್ತು ಪ್ರೇರಣೆಯನ್ನು ತಮ್ಮ ಶಾಲೆಗಳು, ಸಮುದಾಯಗಳು ಮತ್ತು ತಾವು ಹೋಗುವಲ್ಲೆಲ್ಲಾ ಕೊಂಡೊಯ್ಯುವಂತೆ ಭಾಗವಹಿಸಿದವರಿಗೆ ಕರೆ ನೀಡಿದರು. ಯುವಕರು ಹೊಸ ಪ್ರೇರಣೆ, ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಹಾಗೂ ತಮ್ಮ ಕರ್ತವ್ಯಗಳನ್ನು ಪೂರೈಸುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಹೊಸ ಬದ್ಧತೆಯೊಂದಿಗೆ ಐತಿಹಾಸಿಕ ಸಂವಿಧಾನ ಸಭೆಯ ಸಭಾಂಗಣದಿಂದ ಹೊರಡಬೇಕು ಎಂದು ಅವರು ಹೇಳಿದರು.

ದೇಶದ ವಿವಿಧ ಭಾಗಗಳ 500 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಐತಿಹಾಸಿಕ ಸಂವಿಧಾನ ಸಭೆಯ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಿಸಿದ ಪುಷ್ಪನಮನಕ್ಕೆ ಸಾಕ್ಷಿಯಾದರು. ಆಯ್ಕೆಯಾದ 36 ಯುವ ಸ್ಪರ್ಧಿಗಳು ಈ ಇಬ್ಬರು ರಾಷ್ಟ್ರೀಯ ನಾಯಕರ ಜೀವನ, ಆದರ್ಶಗಳು, ಆಲೋಚನೆಗಳು ಮತ್ತು ಕೊಡುಗೆಗಳ ಕುರಿತು ಮಾತನಾಡಿದರು, ಜೊತೆಗೆ ಅವರ ಜೀವನವು ಭಾರತ ಮತ್ತು ಪ್ರಪಂಚದಾದ್ಯಂತ ತಲೆಮಾರುಗಳಿಗೆ ಹೇಗೆ ಪ್ರೇರಣೆ ನೀಡುತ್ತಲೇ ಇದೆ ಎಂಬ ತಮ್ಮ ಗ್ರಹಿಕೆಯನ್ನು ಹಂಚಿಕೊಂಡರು.

ಇದಕ್ಕೂ ಮುನ್ನ, ಲೋಕಸಭಾ ಸ್ಪೀಕರ್ ಅವರು ರಾಜ್‌ಘಾಟ್ ಮತ್ತು ವಿಜಯ್ ಘಾಟ್‌ಗೆ ಭೇಟಿ ನೀಡಿ ಕ್ರಮವಾಗಿ ಮಹಾತ್ಮ ಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿಗಳಿಗೆ ಗೌರವ ಸಲ್ಲಿಸಿದರು.

 

*****


(ಪ್ರಕಟಣೆ ಐ.ಡಿ.: 2318464) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil