ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಇಂಡಿಯಾ ಎನರ್ಜಿ ವೀಕ್ 2027 (ಭಾರತ ಇಂಧನ ಸಪ್ತಾಹ 2027) ಜಾಗತಿಕ ಇಂಧನ ಸಂವಾದಕ್ಕೆ ಕೋಲ್ಕತ್ತಾದಲ್ಲಿ ವೇದಿಕೆ ಸಿದ್ಧಗೊಳಿಸಿದೆ


ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರು ಇಂಡಿಯಾ ಎನರ್ಜಿ ವೀಕ್ 2027ರ ಆತಿಥೇಯ ನಗರವಾಗಿ ಕೋಲ್ಕತ್ತಾವನ್ನು ಅಧಿಕೃತವಾಗಿ ಘೋಷಿಸಿದರು

ಇಂಡಿಯಾ ಎನರ್ಜಿ ವೀಕ್ 2027ಕ್ಕೆ ಕೋಲ್ಕತ್ತಾ ಆತಿಥ್ಯ ವಹಿಸಲಿದೆ

ಐಇಡಬ್ಲ್ಯೂ 2027ರ ವಿಷಯ: “ನಾವೀನ್ಯತೆಯನ್ನು ಅನಾವರಣಗೊಳಿಸುವುದು. ಇಂಧನ ಭದ್ರತೆಯನ್ನು ಖಚಿತಪಡಿಸುವುದು. ನಾಳಿನ ಭವಿಷ್ಯವನ್ನು ರೂಪಿಸುವುದು

75,000ಕ್ಕೂ ಹೆಚ್ಚು ಇಂಧನ ವೃತ್ತಿಪರರು ಮತ್ತು 700+  ಅಂತರರಾಷ್ಟ್ರೀಯ ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ

ಐಇಡಬ್ಲ್ಯೂ 2027ರ  ಜನವರಿ 28 ರಿಂದ 31, 2027ರವರೆಗೆ ಭಾರತದ ಕೋಲ್ಕತ್ತಾದ ನ್ಯೂ ಟೌನ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ

ಪ್ರಕಟಣಾ ದಿನಾಂಕ: 28 SEP 2026 8:11PM by PIB Bengaluru

ವೇಗವಾಗಿ ಬದಲಾಗುತ್ತಿರುವ ಜಾಗತಿಕ ಇಂಧನ ಪರಿಸರದ ನಡುವೆ ಭಾರತದ ಇಂಧನ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂಧನದ ಭವಿಷ್ಯವನ್ನು ರೂಪಿಸುವ ತಂತ್ರಜ್ಞಾನಗಳು, ಸಹಭಾಗಿತ್ವಗಳು ಮತ್ತು ಕಾರ್ಯತಂತ್ರದ ಆಯ್ಕೆಗಳು ಇಂಡಿಯಾ ಎನರ್ಜಿ ವೀಕ್ (ಭಾರತ ಇಂಧನ ಸಪ್ತಾಹ - ಐಇ ಐಇಡಬ್ಲ್ಯೂ  2027) 2027 ಕಾರ್ಯಕ್ರಮದ ಪ್ರಮುಖ ಕೇಂದ್ರಬಿಂದುವಾಗಿರಲಿವೆ.

“ನಾವೀನ್ಯತೆಯನ್ನು ಅನಾವರಣಗೊಳಿಸುವುದು. ಇಂಧನ ಭದ್ರತೆಯನ್ನು ಖಚಿತಪಡಿಸುವುದು. ನಾಳಿನ ಭವಿಷ್ಯವನ್ನು ರೂಪಿಸುವುದು” ಎಂಬ ವಿಷಯದೊಂದಿಗೆ  ಜನವರಿ 28 ರಿಂದ 31, 2027ರವರೆಗೆ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಐಇಡಬ್ಲ್ಯೂ ನ ಐದನೇ ಆವೃತ್ತಿಯು ವರ್ಷದ ಮೊದಲ ಪ್ರಮುಖ ಜಾಗತಿಕ ಇಂಧನ ಸಮ್ಮೇಳನವಾಗಿ ಕಾರ್ಯನಿರ್ವಹಿಸಲಿದೆ. ನೀತಿ ನಿರ್ಧಾರಕರು, ಇಂಧನ ಕ್ಷೇತ್ರದ ನಾಯಕರು, ತಂತ್ರಜ್ಞಾನ ನಾವೀನ್ಯಕಾರರು, ಹೂಡಿಕೆದಾರರು ಮತ್ತು ವಿಶ್ವದಾದ್ಯಂತದ ಕೈಗಾರಿಕಾ ಪಾಲುದಾರರನ್ನು ಒಟ್ಟುಗೂಡಿಸಿ, ಜಾಗತಿಕ ಇಂಧನ ಭದ್ರತೆಯನ್ನು ಬಲಪಡಿಸುವ ಹಾಗೂ ಸುಸ್ಥಿರತೆಯನ್ನು ಮುಂದುವರಿಸುವ ಮಾರ್ಗಗಳನ್ನು ಅನ್ವೇಷಿಸಲು ಇದು ವೇದಿಕೆಯಾಗಲಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ನಡೆಯುವ ಇಂಡಿಯಾ ಎನರ್ಜಿ ವೀಕ್, 2023ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಬಳಿಕ ವೇಗವಾಗಿ ಬೆಳವಣಿಗೆ ಕಂಡಿದ್ದು, ತನ್ನ ಪ್ರಮಾಣ, ಅಂತರರಾಷ್ಟ್ರೀಯ ಭಾಗವಹಿಸುವಿಕೆ ಮತ್ತು ಚರ್ಚಿಸಲಾದ ವಿಷಯಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. 2026ರಲ್ಲಿ ಗೋವಾದಲ್ಲಿ ನಡೆದ ನಾಲ್ಕನೇ ಆವೃತ್ತಿಯಲ್ಲಿ, 75,000ಕ್ಕೂ ಹೆಚ್ಚು ಇಂಧನ ವೃತ್ತಿಪರರು, 700ಕ್ಕೂ ಹೆಚ್ಚು ಪ್ರದರ್ಶನ ಸಂಸ್ಥೆಗಳು, 120ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಹಾಗೂ 6,500ಕ್ಕೂ ಹೆಚ್ಚು ಸಮ್ಮೇಳನ ಪ್ರತಿನಿಧಿಗಳು ಭಾಗವಹಿಸಿದ್ದು, ಜಾಗತಿಕ ಇಂಧನ ಸಮ್ಮೇಳನಗಳ ಪೈಕಿ ಇದರ ಪ್ರಮುಖ ಸ್ಥಾನವನ್ನು ಪ್ರದರ್ಶಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರು ಅಧಿಕೃತವಾಗಿ ಕೋಲ್ಕತ್ತಾವನ್ನು ಇಂಡಿಯಾ ಎನರ್ಜಿ ವೀಕ್ 2027ರ ಆತಿಥೇಯ ನಗರ ಎಂದು ಘೋಷಿಸಿದರು. ಶ್ರೀ ಅಧಿಕಾರಿ ಅವರು, ಐಇಡಬ್ಲ್ಯೂ  2027 ಅನ್ನು ಪಶ್ಚಿಮ ಬಂಗಾಳಕ್ಕೆ ತಂದಿರುವುದಕ್ಕಾಗಿ ಶ್ರೀ ಪುರಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಯಶಸ್ವಿ ಐಇಡಬ್ಲ್ಯೂ 2027 ಹೊಸ ಹೂಡಿಕೆಗಳನ್ನು ಆಕರ್ಷಿಸಲು, ಅಸ್ತಿತ್ವದಲ್ಲಿರುವ ಯೋಜನೆಗಳನ್ನು ವಿಸ್ತರಿಸಲು ಮತ್ತು ಪಶ್ಚಿಮ ಬಂಗಾಳದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ಅವರು ಹೇಳಿದರು.

ಇಂಡಿಯಾ ಎನರ್ಜಿ ವೀಕ್ ನ ಬೆಳವಣಿಗೆಯು ಜಾಗತಿಕ ಇಂಧನ ವ್ಯವಸ್ಥೆಯಲ್ಲಿ ಭಾರತದ ಹೆಚ್ಚುತ್ತಿರುವ ಮಹತ್ವದೊಂದಿಗೆ ಸಮಾನಾಂತರವಾಗಿ ಬೆಳೆದಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವ ಭಾರತದಲ್ಲಿ ಇಂಧನ ಬೇಡಿಕೆ ವೇಗವಾಗಿ ಹೆಚ್ಚುತ್ತಿದ್ದು, ದೇಶವು ಇಂಧನ ಭದ್ರತೆ ಮತ್ತು ಕೈಗೆಟುಕುವ ದರವನ್ನು ಕಾಪಾಡಿಕೊಂಡು, ಶುದ್ಧ ಇಂಧನ ವ್ಯವಸ್ಥೆಗಳತ್ತ ಪರಿವರ್ತನೆಯನ್ನೂ ಮುಂದುವರಿಸುತ್ತಿದೆ. ಆದ್ದರಿಂದ ಭಾರತದ ಇಂಧನ ಆಯ್ಕೆಗಳು ಅದರ ಗಡಿಗಳನ್ನು ಮೀರಿ ಪರಿಣಾಮ ಬೀರುತ್ತವೆ ಮತ್ತು ಜಾಗತಿಕ ಇಂಧನ ಸಂವಾದದ ಕೇಂದ್ರವಾಗಿಸುತ್ತದೆ.

ಐಇಡಬ್ಲ್ಯೂ  2027ರ ಇದೇ ಹಿನ್ನೆಲೆಯ ಮೇಲೆ ನಿರ್ಮಾಣವಾಗಲಿದ್ದು, ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗಾಗಿ ಇಂಧನ ಭದ್ರತೆ, ಕೈಗೆಟುಕುವಿಕೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಲು ಅಗತ್ಯವಾದ ತಂತ್ರಜ್ಞಾನಗಳು, ನಾವೀನ್ಯತೆಗಳು ಮತ್ತು ಸಹಭಾಗಿತ್ವಗಳ ಮೇಲೆ ಕೇಂದ್ರೀಕರಿಸಲಿದೆ. ಹೈಡ್ರೋಕಾರ್ಬನ್ ಹಾಗೂ ವ್ಯಾಪಕ ಇಂಧನ ಮೌಲ್ಯ ಸರಪಳಿಯ ವಿವಿಧ ಪಾಲುದಾರರಿಗೆ ನಾವೀನ್ಯತೆಯನ್ನು ವಿಸ್ತರಿಸಲು, ಇಂಧನ ಭದ್ರತೆಯನ್ನು ಬಲಪಡಿಸಲು, ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ತಂತ್ರಜ್ಞಾನ ಆಧಾರಿತ ಪ್ರಗತಿಯನ್ನು ವೇಗಗೊಳಿಸಲು ಅವಕಾಶಗಳನ್ನು ಅನ್ವೇಷಿಸುವ ಅರ್ಥಪೂರ್ಣ ವೇದಿಕೆಯನ್ನು ಇದು ಒದಗಿಸಲಿದೆ.

ಇಂಧನ ಭದ್ರತೆ, ಕೈಗೆಟುಕುವಿಕೆ, ತಂತ್ರಜ್ಞಾನ, ಹೂಡಿಕೆ ಮತ್ತು ಸುಸ್ಥಿರತೆ ಪರಸ್ಪರ ಹೆಚ್ಚುತ್ತಿರುವ ರೀತಿಯಲ್ಲಿ ಸಂಬಂಧಿಸಿದ್ದರಿಂದ,  ಐಇಡಬ್ಲ್ಯೂ  2027 ಈ ಕ್ಷೇತ್ರವನ್ನು ರೂಪಿಸುತ್ತಿರುವ ಸವಾಲುಗಳಿಗೆ ಕಾರ್ಯಸಾಧ್ಯವಾದ  ಪರಿಹಾರಗಳನ್ನು ಕಂಡುಹಿಡಿಯಲು ಜಾಗತಿಕ ಪ್ರಯತ್ನಗಳಿಗೆ ಉತ್ತೇಜನ ನೀಡುವ ಭರವಸೆಯನ್ನು ಹೊಂದಿದೆ. ಪ್ರದರ್ಶನ ಮತ್ತು ಸಮ್ಮೇಳನ ಕಾರ್ಯಕ್ರಮಗಳು ತೈಲ ಮತ್ತು ಅನಿಲ, ಎಲ್ ಎನ್ ಜಿ, ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್, ಜಲಜನಕ , ಜೈವಿಕ ಇಂಧನಗಳು, ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ   ಸೇರಿದಂತೆ ಇಂಧನ ಕ್ಷೇತ್ರದ ಇತರ ಭವಿಷ್ಯದ ಕ್ಷೇತ್ರಗಳ ಬೆಳವಣಿಗೆಗಳನ್ನು ಪ್ರದರ್ಶಿಸಲಿವೆ.

ಕೋಲ್ಕತ್ತಾ: ಇಂಡಿಯಾ ಎನರ್ಜಿ ವೀಕ್ ಗೆ ಹೊಸ ಅಧ್ಯಾಯ

ಇಂಡಿಯಾ ಎನರ್ಜಿ ವೀಕ್ ಅನ್ನು ಮೊದಲ ಬಾರಿಗೆ ಪೂರ್ವ ಭಾರತಕ್ಕೆ ತರುವ ಮೂಲಕ, ಕೋಲ್ಕತ್ತಾಗೆ ಸ್ಥಳಾಂತರಿಸಿರುವುದು ಹೊಸ ಭೌಗೋಳಿಕ ಆಯಾಮವನ್ನು ಸೇರಿಸುತ್ತದೆ. ಇದು ಈ ಪ್ರದೇಶದ ವ್ಯವಹಾರಗಳು, ಸಂಸ್ಥೆಗಳು ಮತ್ತು ಇಂಧನ ಕ್ಷೇತ್ರದ ಪಾಲುದಾರರಿಗೆ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಜಾಗತಿಕ ಇಂಧನ ಸಂವಾದಗಳಲ್ಲಿ ಭಾಗವಹಿಸಲು ವೇದಿಕೆಯನ್ನು ಒದಗಿಸುತ್ತದೆ.

ಐದನೇ ಆವೃತ್ತಿಯು ಇಂಧನ ಕ್ಷೇತ್ರದ ನಿರ್ಧಾರ ಕೈಗೊಳ್ಳುವವರ ಜೊತೆಗೆ 75,000ಕ್ಕೂ ಹೆಚ್ಚು ಇಂಧನ ವೃತ್ತಿಪರರು ಮತ್ತು 700ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರದರ್ಶಕರನ್ನು ಒಟ್ಟುಗೂಡಿಸುವ ನಿರೀಕ್ಷೆಯಿದೆ. ಪ್ರದರ್ಶನ ಮತ್ತು ಸಮ್ಮೇಳನ ಕಾರ್ಯಕ್ರಮಗಳು ತಂತ್ರಜ್ಞಾನಗಳನ್ನು ಪ್ರದರ್ಶಿಸಲು, ಸಹಭಾಗಿತ್ವಗಳನ್ನು ರೂಪಿಸಲು ಹಾಗೂ ಇಂಧನ ಕ್ಷೇತ್ರವನ್ನು ರೂಪಿಸುತ್ತಿರುವ ಕಾರ್ಯತಂತ್ರದ  ಅವಕಾಶಗಳು ಮತ್ತು ಸವಾಲುಗಳನ್ನು ಹುಡುಕಲು ಅವಕಾಶಗಳನ್ನು ಒದಗಿಸಲಿವೆ.

ಇಂಡಿಯಾ ಎನರ್ಜಿ ವೀಕ್ ನ ಅಂತರರಾಷ್ಟ್ರೀಯ ಸ್ವರೂಪವೂ ಅದರ ಪ್ರಮಾಣದೊಂದಿಗೆ ಬೆಳೆಯುತ್ತಿದೆ. ಹಿಂದಿನ ಆವೃತ್ತಿಗಳು ಪ್ರಮುಖ ಇಂಧನ ಉತ್ಪಾದಿಸುವ ಮತ್ತು ಬಳಸುವ  ರಾಷ್ಟ್ರಗಳ ಹಿರಿಯ ಸರ್ಕಾರಿ ನಾಯಕರು ಹಾಗೂ ಇಂಧನ ಕ್ಷೇತ್ರದ ಕಾರ್ಯನಿರ್ವಾಹಕರನ್ನು ಒಟ್ಟುಗೂಡಿಸಿವೆ. ಯುಎಇ, ಕೆನಡಾ, ನೆದರ್ಲ್ಯಾಂಡ್ಸ್, ಓಮನ್, ಬ್ರೂನೈ, ಮ್ಯಾನ್ಮಾರ್ ಮತ್ತು ಟಾಂಜಾನಿಯಾ ಸೇರಿದಂತೆ ವಿವಿಧ ದೇಶಗಳ 17 ಸಚಿವರು ಮತ್ತು ಉಪಸಚಿವರು ಐಇಡಬ್ಲ್ಯೂ  2026ರಲ್ಲಿ ಭಾಗವಹಿಸಿದ್ದರು. ಜೊತೆಗೆ, ಅಂತರರಾಷ್ಟ್ರೀಯ ಇಂಧನ ವೇದಿಕೆ , ಬಿಐಎಂಎಸ್ ಟಿ ಇ ಸಿ  ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟ  ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳೂ ಭಾಗವಹಿಸಿದ್ದವು.

ಇಂಧನ ಭದ್ರತೆ, ಹೂಡಿಕೆ, ತಂತ್ರಜ್ಞಾನ, ಪರಿವರ್ತನೆ ಮತ್ತು ಬದಲಾಗುತ್ತಿರುವ ಜಾಗತಿಕ ಇಂಧನ ಪರಿಸರದ ಕುರಿತು ರಾಷ್ಟ್ರಗಳು ಮತ್ತು ಕಂಪನಿಗಳು ಪ್ರಶ್ನೆಗಳ  ಹಿನ್ನೆಲೆಯಲ್ಲಿ , ಅವರ ಭಾಗವಹಿಸುವಿಕೆ ಇಂಧನ ಸಂವಾದದ ಹೆಚ್ಚುತ್ತಿರುವ ಪರಸ್ಪರ ಸಂಬಂಧಿತ ಸ್ವರೂಪವನ್ನು ಪ್ರತಿಬಿಂಬಿಸಿದೆ.

ಇಂಡಿಯಾ ಎನರ್ಜಿ ವೀಕ್ ಕುರಿತು

ಇಂಡಿಯಾ ಎನರ್ಜಿ ವೀಕ್ ದೇಶದ ಪ್ರಮುಖ ಜಾಗತಿಕ ಇಂಧನ ವೇದಿಕೆಯಾಗಿದ್ದು, ಸುರಕ್ಷಿತ, ಸುಸ್ಥಿರ ಮತ್ತು ಕೈಗೆಟುಕುವ ಇಂಧನ ಭವಿಷ್ಯದತ್ತ ಪ್ರಗತಿಯನ್ನು ವೇಗಗೊಳಿಸಲು ಸರ್ಕಾರಿ ನಾಯಕರು, ಕೈಗಾರಿಕಾ ಕಾರ್ಯನಿರ್ವಾಹಕರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸುತ್ತದೆ. ತಟಸ್ಥ ವೇದಿಕೆಯಾಗಿರುವ ಇಂಡಿಯಾ ಎನರ್ಜಿ ವೀಕ್, ಜಾಗತಿಕ ಇಂಧನ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಹೂಡಿಕೆ, ನೀತಿ ಹೊಂದಾಣಿಕೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಉತ್ತೇಜನ ನೀಡುತ್ತದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ನಡೆಯುವ ಇಂಡಿಯಾ ಎನರ್ಜಿ ವೀಕ್ 2027 ಅನ್ನು ಭಾರತೀಯ ಪೆಟ್ರೋಲಿಯಂ ಉದ್ಯಮದ ಒಕ್ಕೂಟ  (ಎಫ್ ಐ ಪಿ ಐ) ಸಂಸ್ಥೆಯು ಇನ್ಫಾರ್ಮಾ ಮಾರ್ಕೆಟ್ಸ್ ಸಂಸ್ಥೆಯೊಂದಿಗೆ ಸಮ್ಮೇಳನ ಆಯೋಜಕರಾಗಿ ಸಂಘಟಿಸುತ್ತಿದೆ.

ಇಂಡಿಯಾ ಎನರ್ಜಿ ವೀಕ್ 2027 (ಇಂಡಿಯಾ ಇಂಧನ ಸಪ್ತಾಹ 2027) ಜನವರಿ 28 ರಿಂದ 31, 2027ರವರೆಗೆ ಕೋಲ್ಕತ್ತಾದ ನ್ಯೂ ಟೌನ್ ಕನ್ವೆನ್ಷನ್ ಸೆಂಟರ್ನಲ್ಲಿ “ನಾವೀನ್ಯತೆಯನ್ನು ಅನಾವರಣಗೊಳಿಸುವುದು, ಇಂಧನ ಭದ್ರತೆಯನ್ನು ಖಚಿತಪಡಿಸುವುದು, ನಾಳಿನ ಭವಿಷ್ಯವನ್ನು ರೂಪಿಸುವುದು” ಎನ್ನುವ ವಿಷಯದ ಅಡಿಯಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.indiaenergyweek.com/

 

*****


(ಪ್ರಕಟಣೆ ಐ.ಡಿ.: 2316317) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali