ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೇರಳಂನ ಕೊಲ್ಲಂನಲ್ಲಿ ಮಹಿಳಾ ಸಬಲೀಕರಣ ಮತ್ತು ಸಹಕಾರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು
ಸಹಕಾರದ ಮೂಲಕ ಮಹಿಳೆಯರ ಸಬಲೀಕರಣವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ; ಏಕೆಂದರೆ ಮನೆಯ ಮಹಿಳೆ ಸಮೃದ್ಧಳಾದಾಗ ಇಡೀ ಕುಟುಂಬವೇ ಸಮೃದ್ಧಿಯಾಗುತ್ತದೆ
'ಸಹಕಾರ್ ಸೇ ಸಮೃದ್ಧಿ' ಯೋಜನೆಯು ದೇಶದ ಗ್ರಾಮೀಣ ಮತ್ತು ಬಡ ಮಹಿಳೆಯರನ್ನು ತಲುಪುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ
ಶ್ರೀ ಅಮಿತ್ ಶಾ ಅವರು ‘ವನಿತಂ ಶೀ-ಮಾರ್ಟ್ ಶಾಪ್ಗಳ’ ಉದ್ಘಾಟನೆ ಮತ್ತು ಎನ್ ಸಿಸಿಎಫ್ ನ ‘ಜನಃ’ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು
23,000ಕ್ಕೂ ಹೆಚ್ಚು ಸಕ್ರಿಯ ಸಹಕಾರ ಸಂಘಗಳನ್ನು ಹೊಂದಿರುವ ಹಾಗೂ ಸ್ವಾತಂತ್ರ್ಯಪೂರ್ವದಿಂದಲೂ ಸುಸಂಘಟಿತ ಸಹಕಾರ ಚಳವಳಿಯ ಇತಿಹಾಸವಿರುವ ಕೇರಳದಿಂದಲೇ ‘ಶೀ-ಮಾರ್ಟ್’ ಅನ್ನು ಪ್ರಾರಂಭಿಸುತ್ತಿರುವುದು ಅತ್ಯಂತ ತೃಪ್ತಿಕರ ವಿಷಯವಾಗಿದೆ
ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಮಾರುಕಟ್ಟೆಗಳು ಹಾಗೂ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕಿಸಲು ಶೀ-ಮಾರ್ಟ್ ಒಂದು ಪ್ರಮುಖ ಉಪಕ್ರಮವಾಗಿದೆ: ಶ್ರೀ ಅಮಿತ್ ಶಾ
ಖರೀದಿ ಮತ್ತು ಸಂಸ್ಕರಣೆಯಿಂದ ಹಿಡಿದು ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಚಿಲ್ಲರೆ ಮಾರುಕಟ್ಟೆಗಳಿಗೆ ನೇರ ಪ್ರವೇಶದವರೆಗೆ — ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ರೈತರು ಮತ್ತು ಮಹಿಳಾ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ
ಎನ್‌ಸಿಸಿಎಫ್ ನ 2,500ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳ ಜೊತೆಗೆ, ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ‘ಶೀ-ಮಾರ್ಟ್ ಗಳನ್ನು’ ತೆರೆಯಲಾಗುವುದು; ಇದು ರೈತರು ಮತ್ತು ಮಹಿಳಾ ಉದ್ಯಮಿಗಳಿಗೆ ನೇರ ಮಾರುಕಟ್ಟೆ ಪ್ರವೇಶದ ಸೌಲಭ್ಯವನ್ನು ಒದಗಿಸುತ್ತದೆ
ಮೋದಿ ಅವರ ನೇತೃತ್ವದಲ್ಲಿ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ಸಿಕ್ಕಿದೆ; ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ 2014-15 ರಲ್ಲಿ ಶೇ. 23 ರಷ್ಟಿದ್ದುದು ಇಂದು ಶೇ. 40 ಕ್ಕೆ ಏರಿಕೆಯಾಗಿದೆ
36 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, ತ್ರಿವಳಿ ತಲಾಖ್ ನಿಷೇಧಿಸಲಾಗಿದೆ, 11,000 ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 3 ಕೋಟಿ ಮಹಿಳೆಯರು ಲಖ್ ಪತಿ ದಿದಿಗಳಾಗಿದ್ದಾರೆ — ಈ ಸಂಖ್ಯೆಯನ್ನು 2029 ರ ವೇಳೆಗೆ 6 ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ
ನೀಲಿ ಆರ್ಥಿಕತೆಯಲ್ಲಿ ಕೇರಳಂ ಅಪಾರ ಸಾಮರ್ಥ್ಯವನ್ನು ಹೊಂದಿದೆ; ಮೋದಿ ಸರ್ಕಾರವು ಸಹಕಾರದ ಮೂಲಕ ಇದನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ
ಕೇರಳದಿಂದ 'ಕೇರಳಂ' ಕಡೆಗಿನ ಪಯಣದಲ್ಲಿ ಎಲ್ಲಾ ಮಲೆಯಾಳಿ ಸಹೋದರ ಸಹೋದರಿಯರಿಗೆ ಶುಭಾಶಯಗಳು
ಪ್ರಕಟಣಾ ದಿನಾಂಕ:
26 SEP 2026 7:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರ್ ಸೇ ಸಮೃದ್ಧಿ" (ಸಹಕಾರದಿಂದ ಸಮೃದ್ಧಿ) ಪರಿಕಲ್ಪನೆಗೆ ಅನುಗುಣವಾಗಿ, ಹಾಗೂ ಸಹಕಾರದ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೊಸ ಪ್ರೋತ್ಸಾಹವನ್ನು ನೀಡುವ ಪ್ರಮುಖ ಹೆಜ್ಜೆಯಾಗಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕೇರಳಂನ ಕೊಲ್ಲಂನಲ್ಲಿರುವ ಪವಿತ್ರಂ ಕನ್ವೆನ್ಷನ್ ಸೆಂಟರ್ ನಲ್ಲಿ ಮಹಿಳಾ ಸಬಲೀಕರಣ ಮತ್ತು ಸಹಕಾರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಸೇರಿದಂತೆ ಸಹಕಾರ ಕ್ಷೇತ್ರದ ಹಲವು ಗಣ್ಯರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.
ತಮ್ಮ ಭಾಷಣದ ಆರಂಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೇರಳದಿಂದ 'ಕೇರಳಂ' ಕಡೆಗಿನ ಪಯಣಕ್ಕಾಗಿ ಎಲ್ಲಾ ಮಲೆಯಾಳಿ ಸಹೋದರ ಸಹೋದರಿಯರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಬೇಕೆಂದು ರೈತರು ಮತ್ತು ಸಹಕಾರ ಕ್ಷೇತ್ರದ ಜನರು ದೀರ್ಘಕಾಲದಿಂದ ಆಗ್ರಹಿಸುತ್ತಿದ್ದರು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ದೇಶದ ಗ್ರಾಮೀಣ ಅಭಿವೃದ್ಧಿ, ಕೃಷಿ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದತ್ತ ಪ್ರಮುಖ ಹೆಜ್ಜೆಯನ್ನಿಟ್ಟಿದ್ದಾರೆ, ಇದು ಸಹಕಾರ ಕ್ಷೇತ್ರಕ್ಕೆ ಹೊಸ ಚೈತನ್ಯ ಮತ್ತು ವೇಗವನ್ನು ತುಂಬಿದೆ.
ಕೇರಳಂನ ಶ್ರೀಮಂತ ಸಹಕಾರ ಪರಂಪರೆಯನ್ನು ಹೊಗಳಿದ ಶ್ರೀ ಅಮಿತ್ ಶಾ, ಸ್ವಾತಂತ್ರ್ಯಪೂರ್ವದಿಂದಲೂ ಸಹಕಾರ ಚಳವಳಿಯು ಬಲವಾಗಿ ಮತ್ತು ಸುಸಂಘಟಿತವಾಗಿ ಉಳಿದುಕೊಂಡು ಬಂದಿರುವ ರಾಜ್ಯಗಳಲ್ಲಿ ಕೇರಳಂ ಕೂಡ ಒಂದಾಗಿದೆ ಎಂದರು. ತಿರುವಾಂಕೂರು, ಕೊಚ್ಚಿ ಮತ್ತು ಮಲಬಾರ್ ನಂತಹ ಪ್ರದೇಶಗಳು ಸ್ವಾತಂತ್ರ್ಯಪೂರ್ವದಿಂದಲೂ ಸಹಕಾರದ ಬಲವಾದ ಪರಂಪರೆಯನ್ನು ಹೊಂದಿದ್ದು, ಕೇರಳಂನ ಸಹಕಾರ ಚಳವಳಿಯನ್ನು ಇಡೀ ದೇಶಕ್ಕೆ ಒಂದು ಪ್ರಮುಖ ಉದಾಹರಣೆಯನ್ನಾಗಿ ಮಾಡಿವೆ. ಸಹಕಾರ ಕ್ಷೇತ್ರದಲ್ಲಿ ಇಂದು ಪ್ರಾರಂಭಿಸಲಾಗುತ್ತಿರುವ ‘ಶೀ-ಮಾರ್ಟ್’ ಉಪಕ್ರಮವನ್ನು ಕೇಂದ್ರ ಹಣಕಾಸು ಸಚಿವರು ಬಜೆಟ್ ನಲ್ಲಿ ಘೋಷಿಸಿದ್ದರು ಮತ್ತು ಈ ಉಪಕ್ರಮವನ್ನು ಕೇರಳಂನಿಂದ ಪ್ರಾರಂಭಿಸುತ್ತಿರುವುದು ಅತ್ಯಂತ ತೃಪ್ತಿಕರ ವಿಷಯವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಮತ್ತು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರ ಉತ್ಪನ್ನಗಳನ್ನು ಲಭ್ಯಗೊಳಿಸಲು ಕೈಗೊಳ್ಳಲಾದ ಉಪಕ್ರಮಗಳನ್ನು ವಿವರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ನಾಫೆಡ್ (ಎನ್ ಎ ಎಫ್ ಇ ಡಿ) ನ ಮೊಬೈಲ್ ವ್ಯಾನ್ ಗಳ ಮೂಲಕ ಈರುಳ್ಳಿ, ʻಭಾರತ್ ಆಟ್ಟಾʼ (ಗೋದಿ ಹಿಟ್ಟು) ಮತ್ತು ʻಭಾರತ್ ಅಕ್ಕಿʼಯನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯಗೊಳಿಸುವ ಉಪಕ್ರಮವನ್ನು ಕೇರಳಂನಲ್ಲೂ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ 'ಮಿಷನ್ ಫಾರ್ ಆತ್ಮನಿರ್ಭರತಾ ಇನ್ ಪಲ್ಸಸ್' ಅಡಿಯಲ್ಲಿ ರೈತ ಮಹಿಳೆಯರಿಗೆ ಉದ್ದು ಮತ್ತು ಕಡಲೆ ಬೀಜಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ, 'ನಾಫೆಡ್-ಕಲ್ಯಾಣ್ ಸ್ಕಾಲರ್ಶಿಪ್' ಯೋಜನೆಯಡಿಯಲ್ಲಿ ಸುಮಾರು 2,000 ಕುಟುಂಬಗಳ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ‘ಶೀ-ಮಾರ್ಟ್’ ನ ಮಹತ್ವದ ಬಗ್ಗೆ ಒತ್ತಿ ಹೇಳಿದ ಶ್ರೀ ಅಮಿತ್ ಶಾ, ಇಂದಿನ ಕಾರ್ಯಕ್ರಮದ ಅತ್ಯಂತ ಪ್ರಮುಖ ಅಂಶವೆಂದರೆ ‘ಶೀ-ಮಾರ್ಟ್’ ಗೆ ಚಾಲನೆ ನೀಡಿರುವುದು ಎಂದರು. ಶೀ-ಮಾರ್ಟ್ ಕಲ್ಪನೆಯು ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಮಾರುಕಟ್ಟೆಗಳು ಹಾಗೂ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕಿಸುವ ಪ್ರಮುಖ ಉಪಕ್ರಮವಾಗಿದೆ . ನಾಫೆಡ್, ಕೇಂದ್ರೀಯ ಭಂಡಾರ್ ಮತ್ತು ಅಮುಲ್ ನಂತಹ ಸಂಸ್ಥೆಗಳು ಮಹಿಳಾ ನೇತೃತ್ವದ ಉದ್ಯಮಗಳನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.
‘ಶೀ-ಮಾರ್ಟ್’ ವಿಸ್ತರಣೆ ಮತ್ತು ರೈತರು ಹಾಗೂ ಮಹಿಳಾ ಉದ್ಯಮಿಗಳಿಗೆ ಇದು ಸೃಷ್ಟಿಸುವ ಹೊಸ ಅವಕಾಶಗಳ ಬಗ್ಗೆ ಮಾತನಾಡಿದ ಕೇಂದ್ರ ಸಹಕಾರ ಸಚಿವರು, ಕೇರಳಂ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ 300 ಕ್ಕೂ ಹೆಚ್ಚು ಶೀ-ಮಾರ್ಟ್ ಮಳಿಗೆಗಳನ್ನು ಸ್ಥಾಪಿಸಲು ಯೋಜನೆ ಮಾಡಲಾಗಿದ್ದು, ಅಲ್ಲಿ ಸ್ಥಳೀಯ ಉತ್ಪನ್ನಗಳ ಜೊತೆಗೆ ಭಾರತ್ ಬ್ರ್ಯಾಂಡ್ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿರುತ್ತವೆ ಎಂದು ಹೇಳಿದರು. ಖರೀದಿ, ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ನಿಂದ ಹಿಡಿದು ಚಿಲ್ಲರೆ ಮಾರುಕಟ್ಟೆಗೆ ನೇರ ಪ್ರವೇಶದವರೆಗೆ — ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲೂ ರೈತರು ಮತ್ತು ಮಹಿಳಾ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಕೇರಳದ ಬಲವಾದ ಸಹಕಾರ ವ್ಯವಸ್ಥೆಯನ್ನು ಹೊಗಳಿದ ಶ್ರೀ ಅಮಿತ್ ಶಾ, ರಾಜ್ಯವು 23,000 ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ, ಸುದೀರ್ಘ ಮತ್ತು ಬಲವಾದ ಸಹಕಾರ ಚೌಕಟ್ಟನ್ನು ಹೊಂದಿದೆ ಎಂದರು. ಕೇರಳಂನ ಸಹಕಾರ ಸಚಿವರನ್ನು ದೆಹಲಿಗೆ ಭೇಟಿ ನೀಡುವಂತೆ ಆಹ್ವಾನಿಸಿದ ಅವರು, ಭಾರತ ಸರ್ಕಾರದ ಎಲ್ಲಾ ಯೋಜನೆಗಳಿಂದ ಕೇರಳಂ ರಾಜ್ಯವು ಗರಿಷ್ಠ ಪ್ರಯೋಜನವನ್ನು ಪಡೆಯುವಂತೆ ಮಾಡಲು ಕೇಂದ್ರ ಸರ್ಕಾರವು ಸಂತೋಷದಿಂದ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಸಾವಯವ ಕೃಷಿ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಕೇರಳಂಗೆ ಅಗತ್ಯವಿರುವ ಬೆಂಬಲವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರ್ ಸೇ ಸಮೃದ್ಧಿ' (ಸಹಕಾರದಿಂದ ಸಮೃದ್ಧಿ) ಪರಿಕಲ್ಪನೆಯಲ್ಲಿ ಮಹಿಳಾ ಸಬಲೀಕರಣದ ಮುಖ್ಯ ಪಾತ್ರವನ್ನು ಎತ್ತಿಹಿಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಸಹಕಾರದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಪ್ರಧಾನಮಂತ್ರಿಯವರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಮತ್ತು ಇದು ಅವರ ವಿಶಾಲ ದೃಷ್ಟಿಕೋನ ಹಾಗೂ ಮುಖ್ಯ ಗುರಿಗಳ ಪ್ರಮುಖ ಅಡಿಪಾಯವಾಗಿದೆ ಎಂದರು. ಮನೆಯ ಮಹಿಳೆ ಸಮೃದ್ಧಳಾದಾಗ ಇಡೀ ಕುಟುಂಬವೇ ಸಮೃದ್ಧಿಯಾಗುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಮನೆಯಲ್ಲಿ ಮಹಿಳೆ ಸಬಲಳಾದಾಗ, ಅದರ ಪ್ರಭಾವವು ಇಡೀ ಕುಟುಂಬದ ಸಬಲೀಕರಣದಲ್ಲಿ ಪ್ರತಿಫಲಿಸುತ್ತದೆ. ಆದ್ದರಿಂದ, 'ಸಹಕಾರದಿಂದ ಸಮೃದ್ಧಿ'ಯ ಗರಿಷ್ಠ ಪ್ರಯೋಜನಗಳು ದೇಶದ ಗ್ರಾಮೀಣ ಮತ್ತು ಬಡ ಮಹಿಳೆಯರನ್ನು ತಲುಪುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಸಹಕಾರವನ್ನು ಬಲಪಡಿಸುವಲ್ಲಿ ನಾಫೆಡ್ (ಎನ್ ಎ ಎಫ್ ಇ ಡಿ) ಮತ್ತು ಎನ್ ಸಿ ಸಿ ಎಫ್ ನ ಪಾತ್ರವನ್ನು ಪ್ರಸ್ತಾಪಿಸಿದ ಶ್ರೀ ಅಮಿತ್ ಶಾ, ನಾಫೆಡ್ ಮತ್ತು ಎನ್ ಸಿ ಸಿ ಎಫ್ ಎರಡೂ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸಂಸ್ಥೆಗಳಾಗಿವೆ ಎಂದರು. ಪ್ರಸ್ತುತ, ಸುಮಾರು 8 ಲಕ್ಷ ರೈತರು ನಾಫೆಡ್ ಜೊತೆಗೆ ಮತ್ತು ಸುಮಾರು 6 ಲಕ್ಷ ರೈತ ಮಹಿಳೆಯರು ಎನ್ ಸಿ ಸಿ ಎಫ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಎರಡೂ ಸಂಸ್ಥೆಗಳನ್ನು ಬಲಪಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದತ್ತ ಕೈಗೊಂಡ ಕ್ರಮಗಳು ಮತ್ತು ಸಾಧಿಸಿದ ಫಲಿತಾಂಶಗಳನ್ನು ಉಲ್ಲೇಖಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ನಾರಿ ಶಕ್ತಿ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. 2017-18ರಲ್ಲಿ 23% ರಷ್ಟಿದ್ದ ಮಹಿಳೆಯರ ಉದ್ಯೋಗಿಗಳ ಪ್ರಮಾಣ ಈಗ ಸುಮಾರು 40% ಕ್ಕೆ ಏರಿಕೆಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸುಮಾರು 36 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
ಮಹಿಳೆಯರ ಹಕ್ಕುಗಳು, ಗೌರವ ಮತ್ತು ಅವಕಾಶಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ ಶ್ರೀ ಅಮಿತ್ ಶಾ, ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ತ್ರಿವಳಿ ತಲಾಖ್ ನಿಷೇಧಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು. ಹಿಂದೆ ಮುಸ್ಲಿಂ ಮಹಿಳೆಯರು ಪುರುಷ ಸಂಗಾತಿಯಿಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ನಿರ್ಬಂಧಗಳಿದ್ದವು, ಆದರೆ ಈಗ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಹಜ್ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. ಇಂದು 11,000 ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಅದೇ ಸಮಯದಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ 26 ವಾರಗಳ ಮಾತೃತ್ವ ರಜೆಯ ಸೌಲಭ್ಯವನ್ನು ಸಹ ಕಲ್ಪಿಸಿದೆ ಎಂದು ಅವರು ಹೇಳಿದರು.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಇನ್ನಷ್ಟು ವಿಸ್ತರಿಸುವ ಗುರಿಯ ಬಗ್ಗೆ ಉಲ್ಲೇಖಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, 2024 ಕ್ಕಿಂತ ಮೊದಲೇ ಸುಮಾರು 3 ಕೋಟಿ 'ಲಖ್ ಪತಿ ದಿದಿಗಳನ್ನು' ಸೃಷ್ಟಿಸುವ ಗುರಿಯನ್ನು ಸಾಧಿಸಲಾಗಿದೆ ಮತ್ತು ಈಗ 2029 ರ ವೇಳೆಗೆ 6 ಕೋಟಿ ಮಹಿಳೆಯರನ್ನು ʻಲಖ್ ಪತಿ ದೀದಿʼಗಳನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಕೇರಳದ ನೀಲಿ ಆರ್ಥಿಕತೆಯಲ್ಲಿಅಡಗಿರುವ ಅಪಾರ ಆರ್ಥಿಕ ಸಾಮರ್ಥ್ಯವನ್ನು ಎತ್ತಿಹಿಡಿದ ಶ್ರೀ ಅಮಿತ್ ಶಾ, ರಾಜ್ಯದ ದೀರ್ಘ ಕರಾವಳಿ, ಹಿನ್ನೀರು ಪ್ರದೇಶ, ನದಿಗಳು ಮತ್ತು ಶ್ರೀಮಂತ ಕಡಲ ಪರಂಪರೆಯು ನೀಲಿ ಆರ್ಥಿಕತೆಯಲ್ಲಿ ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದರು. ದೊಡ್ಡ ಟ್ರಾಲರ್ ಗಳನ್ನು ಒದಗಿಸುವುದರಿಂದ ಹಿಡಿದು ಉತ್ಪಾದನೆ, ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ರಫ್ತಿನವರೆಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಹಲವಾರು ಯೋಜನೆಗಳು ಲಭ್ಯವಿವೆ. ಕೇರಳಂನ ಸಹಕಾರ ಸಚಿವರು ಈ ನಿಟ್ಟಿನಲ್ಲಿ ಮುಂದಾಗಿ, ಈ ಯೋಜನೆಗಳ ವಿವರಗಳನ್ನು ಪಡೆದುಕೊಂಡು ಕೇರಳಂ ಅವುಗಳಿಂದ ಗರಿಷ್ಠ ಪ್ರಯೋಜನವನ್ನು ಪಡೆಯುವುದನ್ನು ನಿಶ್ಚಿತ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಮೀನುಗಾರಿಕೆ ಮತ್ತು ಕಡಲ ಕ್ಷೇತ್ರಗಳ ಸಾಮರ್ಥ್ಯವನ್ನು ಪ್ರಮುಖ ಆರ್ಥಿಕ ಅವಕಾಶವನ್ನಾಗಿ ಪರಿವರ್ತಿಸಲು ಕೇಂದ್ರ ಮತ್ತು ರಾಜ್ಯಗಳ ಜಂಟಿ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಕೇರಳಂ ಈ ಕ್ಷೇತ್ರಗಳಲ್ಲಿ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಅವಕಾಶಗಳನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡಿದರೆ, ಮೀನುಗಾರಿಕೆ ಮತ್ತು ಕಡಲ ಕ್ಷೇತ್ರಗಳನ್ನು ಪ್ರಮುಖ ಆರ್ಥಿಕ ಅವಕಾಶವನ್ನಾಗಿ ಪರಿವರ್ತಿಸಬಹುದು ಎಂದರು.
ಕಾರ್ಯಕ್ರಮದ ಸಮಯದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕೆಜಿಗೆ 35 ರೂಪಾಯಿ ಸಬ್ಸಿಡಿ ದರದಲ್ಲಿ ಈರುಳ್ಳಿ ಒದಗಿಸುವ ಎನ್ ಸಿ ಸಿ ಎಫ್ ಮತ್ತು ನಾಫೆಡ್ ಮೊಬೈಲ್ ವ್ಯಾನ್ ಗಳಿಗೆ ಹಸಿರು ನಿಶಾನೆ ತೋರಿದರು ಮತ್ತು ವಿವಿಧ ಮಳಿಗೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ, ಎನ್ ಸಿ ಸಿ ಎಫ್ ಮತ್ತು ದಿ ಸೆಂಟ್ರಲ್ ಫೈನಾನ್ಶಿಯಲ್ ಕ್ರೆಡಿಟ್ ಅಂಡ್ ಇನ್ವೆಸ್ಟ್ಮೆಂಟ್ ಕೋ-ಆಪರೇಟಿವ್ (ಇಂಡಿಯಾ) ಲಿಮಿಟೆಡ್ (ಸಿಎಫ್ ಸಿ ಐ ಸಿ ಐ) ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು. ಭಾರತೀಯ ಮತ್ಸ್ಯ ಪ್ರವರ್ತಕ ಸಂಘಂನ ಮೀನುಗಾರಿಕೆ ಉತ್ಪನ್ನಗಳನ್ನು ಎನ್‌ಸಿಸಿಎಫ್ ನ 'ಜನಾಃ' ಬ್ರ್ಯಾಂಡ್ ಗೆ ಪೂರೈಕೆ-ಸರಪಳಿ ಸಾರಿಗೆ ಸಂಯೋಜನೆಗಾಗಿ ಮತ್ತು ಕೇರಳಂ, ತಮಿಳುನಾಡು ಹಾಗೂ ಕರ್ನಾಟಕದಾದ್ಯಂತ 300 ಶೀ-ಮಾರ್ಟ್ ಅಂಗಡಿಗಳನ್ನು ತೆರೆಯಲು ಎನ್ಸಿಸಿಎಫ್ ಮತ್ತು ಭಾರತ್ ಲಜ್ನಾ ಸಹಕಾರಿ ಸಮಿತಿ ನಡುವೆ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು.
ಶ್ರೀ ಅಮಿತ್ ಶಾ ಅವರು ಎನ್ ಸಿ ಸಿ ಎಫ್ ನ 'ಜನಾಃ' ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು ಮತ್ತು ಎನ್ ಸಿ ಸಿ ಎಫ್ ಹಾಗೂ ಸಿ ಎಫ್ ಸಿ ಐ ಸಿ ಐ ನಡುವಿನ ಸಹಯೋಗದ ಮೂಲಕ ಅಭಿವೃದ್ಧಿಪಡಿಸಲಾದ 'ವನಿತಂ ಶೀ-ಮಾರ್ಟ್ ಮಳಿಗೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ವನಿತಂ ಶೀ-ಮಾರ್ಟ್ ಮಳಿಗೆಗಳ ಮೂಲಕ ಮಹಿಳಾ ಗ್ರಾಹಕರಿಗೆ 'ಭಾರತ್ ಆಟಾ' (ಗೋಧಿ ಹಿಟ್ಟು) ಮತ್ತು 'ಭಾರತ್ ರೈಸ್' (ಅಕ್ಕಿ) ಮಾರಾಟಕ್ಕೂ ಅವರು ಚಾಲನೆ ನೀಡಿದರು. ಜೊತೆಗೆ, 'ಮಿಷನ್ ಫಾರ್ ಆತ್ಮನಿರ್ಭರತಾ ಇನ್ ಪಲ್ಸಸ್' ಅಡಿಯಲ್ಲಿ ರೈತ ಮಹಿಳೆಯರಿಗೆ ಉಚಿತ ಉದ್ದು ಮತ್ತು ಕಡಲೆ ಬೀಜದ ಕಿಟ್ ಗಳನ್ನು ವಿತರಿಸಲಾಯಿತು, ಹಾಗೂ 'ನಾಫೆಡ್-ಕಲ್ಯಾಣ್ ಸ್ಕಾಲರ್ಶಿಪ್' ಯೋಜನೆಯಡಿಯಲ್ಲಿ ನೋಂದಾಯಿತ ರೈತರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನದ ಚೆಕ್ ಗಳನ್ನು ಹಸ್ತಾಂತರಿಸಲಾಯಿತು.
*****
(ಪ್ರಕಟಣೆ ಐ.ಡಿ.: 2315604)
ವಿಸಿಟರ್ ಕೌಂಟರ್ : 13