ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭೌಗೋಳಿಕ ಸೂಚಕ (ಜಿಐ) ಮಾನ್ಯತೆ ಪಡೆದ ಗುಲ್ಬರ್ಗಾ ತೊಗರಿಬೇಳೆಯನ್ನು ಕರ್ನಾಟಕದಿಂದ ಮಾಲ್ಡೀವ್ಸ್‌ಗೆ ರಫ್ತು ಮಾಡಲು ಎಪಿಇಡಿಎ (ಅಪೆಡಾ) ನೆರವು


ರಫ್ತು-ಆಧಾರಿತ ಮಾರಾಟ ವ್ಯವಸ್ಥೆಯಿಂದ ರೈತರಿಗೆ ಪ್ರತಿ ಕೆ.ಜಿ.ಗೆ ₹82 ಆದಾಯ; ಪ್ರಸ್ತುತ ಮಾರುಕಟ್ಟೆ ದರ ಪ್ರತಿ ಕೆ.ಜಿ.ಗೆ ₹60

ಪ್ರಕಟಣಾ ದಿನಾಂಕ: 25 SEP 2026 3:42PM by PIB Bengaluru

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ದ ನೆರವಿನಿಂದ, ಜಿಐ ಮಾನ್ಯತೆ ಪಡೆದ ಕರ್ನಾಟಕದ ಗುಲ್ಬರ್ಗಾ ತೊಗರಿಬೇಳೆಯ 1 ಮೆಟ್ರಿಕ್ ಟನ್ ಸರಕನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು 2026ರ ಸೆಪ್ಟೆಂಬರ್ 24ರಂದು ಚಾಲನೆ ನೀಡಲಾಯಿತು. ಭಾರತದ ಜಿಐ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವುದು ಹಾಗೂ ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ) ಆಧಾರಿತ ಬ್ರ್ಯಾಂಡ್‌ಗಳ ಕೃಷಿ ಉತ್ಪನ್ನಗಳ ರಫ್ತಿನಲ್ಲಿನ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ಈ ರಫ್ತು ಆಧಾರಿತ ಮೌಲ್ಯ ಸರಪಳಿಯ ಪ್ರಮುಖ ಅಂಶವೆಂದರೆ ರೈತರಿಗೆ ದೊರೆಯುವ ಆದಾಯದಲ್ಲಿ ಹೆಚ್ಚಳವಾಗಿರುವುದು. ಪ್ರಸ್ತುತ ಮಾರುಕಟ್ಟೆ ದರ ಪ್ರತಿ ಕೆ.ಜಿ.ಗೆ ₹60 ಇದ್ದರೆ, ರಫ್ತು ಆಧಾರಿತ ಮಾರಾಟ ವ್ಯವಸ್ಥೆಯ ಮೂಲಕ ರೈತರಿಗೆ ಪ್ರತಿ ಕೆ.ಜಿ.ಗೆ ₹82 ದೊರೆಯುತ್ತಿದೆ. ಇದು ಶೇ.30ಕ್ಕಿಂತ ಹೆಚ್ಚು ಆದಾಯವಾಗಿದೆ. ಈ ಉಪಕ್ರಮವು ಎಫ್‌ಪಿಒಗಳಿಗೆ ರಫ್ತು ಆಧಾರಿತ ಮೌಲ್ಯ ಸರಪಳಿಗಳಲ್ಲಿ ಹೆಚ್ಚು ನಿಕಟವಾಗಿ ಪಾಲ್ಗೊಳ್ಳಲು ಹಾಗೂ ಉತ್ಪಾದಕರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಅವಕಾಶ ಕಲ್ಪಿಸುತ್ತದೆ.

ಮೈಸೂರಿನ ಮೆಸರ್ಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯು ತನ್ನ ಎಫ್‌ಪಿಒ ಆಧಾರಿತ ಬ್ರ್ಯಾಂಡ್ ಮೂಲಕ ಈ ಸರಕನ್ನು ರಫ್ತು ಮಾಡಿದ್ದು, ಇದನ್ನು ಸಮುದ್ರ ಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ಸಾಗಿಸಲಾಗುವುದು.

ಕರ್ನಾಟಕದ ಕಲಬುರಗಿ ಪ್ರದೇಶಕ್ಕೆ ಸಂಬಂಧಿಸಿದ ಗುಲ್ಬರ್ಗಾ ತೊಗರಿಬೇಳೆಗೆ 2019ರಲ್ಲಿ ಭೌಗೋಳಿಕ ಸೂಚಕ (ಜಿಐ) ನೋಂದಣಿ ದೊರೆತಿದೆ. ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಈ ಉತ್ಪನ್ನವು ಈ ಪ್ರದೇಶದ ಕೃಷಿ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಕರ್ನಾಟಕದಲ್ಲಿ ನೋಂದಾಯಿತ ಜಿಐ ಉತ್ಪನ್ನಗಳ ಪೈಕಿ ಗುಲ್ಬರ್ಗಾ ತೊಗರಿಬೇಳೆಯನ್ನೂ ಅಪೆಡಾ ಪಟ್ಟಿಮಾಡಿದೆ.

ಭಾರತದ ಪ್ರಮುಖ ಕೃಷಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಇಲ್ಲಿನ ಮಳೆಯಾಶ್ರಿತ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಬೇಳೆಕಾಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ರಾಜ್ಯದಲ್ಲಿ ತೊಗರಿ ಬೆಳೆಯುವ ಮತ್ತು ಉತ್ಪಾದಿಸುವ ಪ್ರಮುಖ ಕೇಂದ್ರಗಳಲ್ಲಿ ಕಲಬುರಗಿಯೂ ಒಂದಾಗಿದೆ. ಗುಲ್ಬರ್ಗಾ ತೊಗರಿಬೇಳೆಯು ಈ ಪ್ರದೇಶದ ವಿಶಿಷ್ಟ ಕೃಷಿ ಗುರುತನ್ನು ಪ್ರತಿನಿಧಿಸುತ್ತದೆ.

ಭಾರತದ ಜಿಐ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಹಾಗೂ ರೈತರಿಗೆ ಬಲವಾದ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವ ಮಹತ್ವವನ್ನು ಅಪೆಡಾ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ ಅವರು ಒತ್ತಿ ಹೇಳಿದರು. ಗುಲ್ಬರ್ಗಾ ತೊಗರಿಬೇಳೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಿರುವುದು ಈ ಉತ್ಪನ್ನಕ್ಕೆ ಜಾಗತಿಕ ಗುರುತನ್ನು ರೂಪಿಸಲು ಹಾಗೂ ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ಅವರು ಹೇಳಿದರು.

ಈ ರಫ್ತಿನಿಂದ ಮಾಲ್ಡೀವ್ಸ್‌ಗೆ ಗುಲ್ಬರ್ಗಾ ತೊಗರಿಬೇಳೆಯ ನಿಯಮಿತ ರಫ್ತು ಸಾಗಣೆಗಳಿಗೆ ದಾರಿ ಸುಗಮವಾಗುವ ನಿರೀಕ್ಷೆಯಿದ್ದು, ಕರ್ನಾಟಕದ ಉತ್ಪಾದಕರು ಮತ್ತು ರಫ್ತುದಾರರಿಗೆ ನಿರಂತರ ಮಾರುಕಟ್ಟೆ ಅವಕಾಶಗಳು ದೊರೆಯಲಿವೆ. ಇದರಿಂದ ರೈತರಿಗೆ ಹೆಚ್ಚಿನ ಮೌಲ್ಯ ದೊರೆಯಲು ಬೆಂಬಲ ಸಿಗುವುದರ ಜೊತೆಗೆ, ಎಫ್‌ಪಿಒಗಳು ಮತ್ತು ರೈತರು ರಫ್ತು ಆಧಾರಿತ ಮೌಲ್ಯ ಸರಪಳಿಗಳೊಂದಿಗೆ ಇನ್ನಷ್ಟು ನಿಕಟವಾಗಿ ಸಂಯೋಜನೆಗೊಳ್ಳಲು ಸಾಧ್ಯವಾಗಲಿದೆ.

ಅಪೆಡಾ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ ಅವರ ಉಪಸ್ಥಿತಿಯಲ್ಲಿ ಈ ಸರಕಿನ ರಫ್ತಿಗೆ ಚಾಲನೆ ನೀಡಲಾಯಿತು. ಅಪೆಡಾದ ಹಿರಿಯ ಅಧಿಕಾರಿಗಳು ಮತ್ತು ಉದ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರಲ್ಲಿ ಅಪೆಡಾ ಹಿರಿಯ ಸಲಹೆಗಾರ ಡಾ. ತರುಣ್ ಬಜಾಜ್, ಅಪೆಡಾ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ವಿನಿತಾ ಸುಧಾಂಶು, ಕೆಎಸ್‌ಪಿಎಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿ. ಸದಾಶಿವ, ಹಾಗೂ ಮೈಸೂರಿನ ಮೆಸರ್ಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್‌ನ ಶ್ರೀ ಇಮ್ರಾನ್ ಪಾಷಾ ಅವರು ಸೇರಿದ್ದರು.

ಜಿಐ ಮಾನ್ಯತೆ ಪಡೆದ ಹಾಗೂ ಇತರ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ನೆರವು ನೀಡುವ ಅಪೆಡಾ ಪ್ರಯತ್ನಗಳಿಗೆ ಈ ಉಪಕ್ರಮವು ಅನುಗುಣವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರದ ಮೂಲಕ ಪ್ರದೇಶ-ನಿರ್ದಿಷ್ಟ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಇರುವ ಅವಕಾಶಗಳನ್ನೂ ಇದು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2314888) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali