ಸಂವಹನ ಸಚಿವಾಲಯ
azadi ka amrit mahotsav

ಗ್ವಾಲಿಯರ್‌ನಲ್ಲಿ ಸ್ಥಾಪಿಸಲಾಗುತ್ತಿರುವ ದೂರಸಂಪರ್ಕ ಉತ್ಪಾದನಾ ವಲಯಕ್ಕೆ ಹೂಡಿಕೆ ಆಕರ್ಷಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರೊಂದಿಗೆ ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಬೆಂಗಳೂರಿನಲ್ಲಿ ಹೂಡಿಕೆದಾರರ ಸಭೆ ಆಯೋಜಿಸಲಿದ್ದಾರೆ


ಬೆಂಗಳೂರಿನ ಸಭೆಯ ಮೂಲಕ ಗ್ವಾಲಿಯರ್‌ನ ದೂರಸಂಪರ್ಕ ಉತ್ಪಾದನಾ ವಲಯದಲ್ಲಿ ಕೈಗಾರಿಕಾ ವಲಯದ ಭಾಗವಹಿಸುವಿಕೆ ಬಲಪಡಿಸುವ ಗುರಿ

ಏಷ್ಯಾದ ಮೊದಲ ದೂರಸಂಪರ್ಕ ಉತ್ಪಾದನಾ ವಲಯವು ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗಾವಕಾಶಗಳಿಗೆ ವೇಗ ನೀಡುವ ಗುರಿ ಹೊಂದಿದೆ; ಬೆಂಗಳೂರಿನ ಸಭೆಯ ಮೂಲಕ ಕೈಗಾರಿಕಾ ವಲಯದ ಭಾಗವಹಿಸುವಿಕೆ ಮತ್ತಷ್ಟು ವಿಸ್ತರಣೆ

ಪ್ರಕಟಣಾ ದಿನಾಂಕ: 21 SEP 2026 7:02PM by PIB Bengaluru

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸ್ಥಾಪಿಸಲಾಗುತ್ತಿರುವ ಏಷ್ಯಾದ ಮೊದಲ ದೂರಸಂಪರ್ಕ ಉತ್ಪಾದನಾ ವಲಯದಲ್ಲಿ (ಟಿಎಂಝಡ್) ಉದ್ಯಮ ರಂಗದ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು, ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ನೇತೃತ್ವದಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರೊಂದಿಗೆ ಬೆಂಗಳೂರಿನಲ್ಲಿ 'ಹೂಡಿಕೆದಾರರ ಸಭೆ'ಯನ್ನು ಆಯೋಜಿಸುತ್ತಿದೆ. ನವದೆಹಲಿ ಮತ್ತು ಮುಂಬೈನಲ್ಲಿ ನಡೆದ ಹೂಡಿಕೆದಾರರ ಸಭೆಗಳ ಮೂಲಕ ಸೃಷ್ಟಿಯಾಗಿರುವ ಪ್ರಬಲ ಹೂಡಿಕೆ ವೇಗದ ಮುಂದುವರಿದ ಭಾಗವಾಗಿ ಈ ಸಭೆಯನ್ನು ಆಯೋಜಿಸಲಾಗುತ್ತಿದೆ.

ಬೆಂಗಳೂರಿನ ಹೂಡಿಕೆದಾರರ ಸಭೆಯು ದೇಶದ ವಿವಿಧ ಭಾಗಗಳಿಂದ ಪ್ರಮುಖ ದೂರಸಂಪರ್ಕ ಉತ್ಪಾದಕರು, ತಂತ್ರಜ್ಞಾನ ಕಂಪನಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಬಿಡಿಭಾಗಗಳ ತಯಾರಕರು, ಹೂಡಿಕೆದಾರರು, ಮೂಲಸೌಕರ್ಯ ಪೂರೈಕೆದಾರರು ಹಾಗೂ ದೂರಸಂಪರ್ಕ ಪರಿಸರ ವ್ಯವಸ್ಥೆಯ ಇತರ ಪ್ರಮುಖ ಪಾಲುದಾರರನ್ನು ಒಂದೆಡೆ ಸೇರಿಸಲಿದೆ. ಹೂಡಿಕೆ ಅವಕಾಶಗಳನ್ನು ಮುಕ್ತಗೊಳಿಸುವುದು, ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ದೂರಸಂಪರ್ಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಸಭೆಯ ಪ್ರಮುಖ ಉದ್ದೇಶಗಳಾಗಿವೆ. ದೂರಸಂಪರ್ಕ ಉತ್ಪಾದನಾ ವಲಯದ ಅಡಿಯಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ದೂರಸಂಪರ್ಕ ಉತ್ಪಾದನೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಅತ್ಯಂತ ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್ ಘೋಷಿಸಲಾಗಿದೆ. ಕೈಗಾರಿಕಾ ವಲಯದ ಸಲಹೆಗಳನ್ನು ಆಧರಿಸಿ ಈ ಪ್ಯಾಕೇಜ್ ರೂಪಿಸಲಾಗಿದೆ.

ಬೆಂಗಳೂರಿನ ಹೂಡಿಕೆದಾರರ ಸಭೆಯು ನವದೆಹಲಿ ಮತ್ತು ಮುಂಬೈನಲ್ಲಿ ಯಶಸ್ವಿಯಾಗಿ ನಡೆದ ಹೂಡಿಕೆದಾರರ ಸಭೆಗಳ ನಂತರ ನಡೆಯುತ್ತಿದೆ. ನವದೆಹಲಿ ಮತ್ತು ಮುಂಬೈನಲ್ಲಿ ನಡೆದ ಹೂಡಿಕೆದಾರರ ದುಂಡುಮೇಜಿನ ಸಭೆಗಳ ಮೂಲಕ ₹5,500 ಕೋಟಿ ಮೊತ್ತದ ಹೂಡಿಕೆ ಬದ್ಧತೆಗಳು ವ್ಯಕ್ತವಾಗಿದ್ದು, ಇದರಿಂದ ಸುಮಾರು 18,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಸಭೆಯು ನಗರದ ಬಲಿಷ್ಠ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆಯೊಂದಿಗೆ ಟಿಎಂಝಡ್ ಉಪಕ್ರಮವನ್ನು ಸಂಪರ್ಕಿಸುವ ಮೂಲಕ ಈ ಹೂಡಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ದೂರಸಂಪರ್ಕ ಉತ್ಪಾದನಾ ವಲಯದ ಮೂಲಕ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಸಹಭಾಗಿತ್ವ, ಪೂರೈಕೆ ಸರಪಳಿ ಸಂಯೋಜನೆ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಅವಕಾಶಗಳನ್ನು ಅನ್ವೇಷಿಸಲು ಕೈಗಾರಿಕಾ ವಲಯದ ನಾಯಕರು ಮತ್ತು ಹೂಡಿಕೆದಾರರಿಗೆ ಈ ಸಭೆಯು ಅವಕಾಶ ಒದಗಿಸಲಿದೆ.

ದೂರಸಂಪರ್ಕ ಉತ್ಪಾದನಾ ವಲಯದ ಸ್ಥಾಪನೆಯು ದೂರಸಂಪರ್ಕ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸುವುದು, ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಸ್ವದೇಶಿ ವಿನ್ಯಾಸ ಮತ್ತು ಉತ್ಪಾದನೆಯನ್ನು ಉತ್ತೇಜಿಸುವುದು, ರಫ್ತುಗಳನ್ನು ಹೆಚ್ಚಿಸುವುದು ಹಾಗೂ ದೂರಸಂಪರ್ಕ ಉತ್ಪನ್ನಗಳು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳಿಗಾಗಿ ಭಾರತವನ್ನು ವಿಶ್ವಾಸಾರ್ಹ ಜಾಗತಿಕ ಕೇಂದ್ರವಾಗಿ ಸ್ಥಾಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ಭಾರತವನ್ನು ದೂರಸಂಪರ್ಕ ಸೇವೆಗಳನ್ನು ಒದಗಿಸುವ ದೇಶದಿಂದ ಜಾಗತಿಕ ದೂರಸಂಪರ್ಕ ಉತ್ಪನ್ನಗಳ ಉತ್ಪಾದನೆ ಮತ್ತು ನಾವೀನ್ಯತೆಯ ಕೇಂದ್ರವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಸರ್ಕಾರ ಹೊಂದಿದೆ. ಈ ದೃಷ್ಟಿಕೋನವನ್ನು ಸ್ಪಷ್ಟವಾದ ಹೂಡಿಕೆಗಳು, ಉತ್ಪಾದನಾ ಸಾಮರ್ಥ್ಯ, ತಾಂತ್ರಿಕ ನಾವೀನ್ಯತೆ ಮತ್ತು ಉದ್ಯೋಗಾವಕಾಶಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಭೆಯು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಗ್ವಾಲಿಯರ್ ದೂರಸಂಪರ್ಕ ಉತ್ಪಾದನಾ ವಲಯ (ಟಿಎಂಝಡ್) ಕುರಿತು

ಗ್ವಾಲಿಯರ್‌ನಲ್ಲಿ ಪ್ರಸ್ತಾವಿತ ದೂರಸಂಪರ್ಕ ಉತ್ಪಾದನಾ ವಲಯವನ್ನು ದೂರಸಂಪರ್ಕ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆಗಾಗಿ ಸಮಗ್ರ 170 ಎಕರೆ ವಿಸ್ತೀರ್ಣದ ಸಮಗ್ರ ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಕ್ಲಸ್ಟರ್ ಆಗಿ ರೂಪಿಸುವ ಉದ್ದೇಶವಿದೆ. ಇದರಲ್ಲಿ ಮೊಬೈಲ್ ಸಾಧನಗಳು, ಆಪ್ಟಿಕಲ್ ಫೈಬರ್, ದೂರಸಂಪರ್ಕ ಉಪಕರಣಗಳು ಮತ್ತು ಮುಂದಿನ ಪೀಳಿಗೆಯ 5ಜಿ/6ಜಿ ತಂತ್ರಜ್ಞಾನಗಳು ಒಳಗೊಂಡಿರಲಿವೆ.

ಇತ್ತೀಚೆಗೆ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ, ಮೊದಲ ಹಂತದ ಯೋಜನೆಗಾಗಿ ಕೇಂದ್ರ ಸರ್ಕಾರವು ₹₹493 ಕೋಟಿ ಮೊತ್ತದ ಶೇ.100ರಷ್ಟು ಹಣಕಾಸು ನೆರವನ್ನು ಒದಗಿಸುತ್ತಿದೆ. ಮಧ್ಯಪ್ರದೇಶ ಸರ್ಕಾರವು ಸುಮಾರು 170 ಎಕರೆ ಭೂಮಿಯನ್ನು ಉಚಿತವಾಗಿ ಒದಗಿಸುವುದರ ಜೊತೆಗೆ ವಿವಿಧ ಹೂಡಿಕೆದಾರರ ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೊಳಿಸಿದೆ.

ಈ ಉದ್ದೇಶಕ್ಕಾಗಿ ವಿಶೇಷ ಉದ್ದೇಶದ ಸಂಸ್ಥೆಯನ್ನು (ಎಸ್‌ಪಿವಿ) ಸ್ಥಾಪಿಸಲಾಗಿದ್ದು, ಇದರಲ್ಲಿ ಮಧ್ಯಪ್ರದೇಶ ಸರ್ಕಾರವು ಶೇ.51ರಷ್ಟು ಷೇರು ಬಂಡವಾಳ ಮತ್ತು ದೂರಸಂಪರ್ಕ ಇಲಾಖೆಯು ಶೇ.49ರಷ್ಟು ಷೇರು ಬಂಡವಾಳವನ್ನು ಹೊಂದಿವೆ.

ಹೆಚ್ಚಿನ ಮಾಹಿತಿಗಾಗಿ ದೂರಸಂಪರ್ಕ ಇಲಾಖೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಫಾಲೋ ಮಾಡಿ:

ಎಕ್ಸ್ - https://x.com/DoT_India

ಇನ್‌ಸ್ಟಾಗ್ರಾಂ-https://www.instagram.com/department_of_telecom?igsh=MXUxbHFjd3llZTU0YQ

ಫೇಸ್‌ಬುಕ್ - https://www.facebook.com/DoTIndia

ಯೂಟ್ಯೂಬ್: https://youtube.com/@departmentoftelecom?si=DALnhYkt89U5jAaa

*****

 


(ಪ್ರಕಟಣೆ ಐ.ಡಿ.: 2313204) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu