ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ‘ಪರಿಸರ ಮತ್ತು ಹವಾಮಾನ ವಿದ್ಯಮಾನಗಳ ಭವಿಷ್ಯ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು; ಎನ್‌ಜಿಟಿ (NGT) ಮೊಬೈಲ್ ಅಪ್ಲಿಕೇಶನ್ ಬಿಡುಗಡೆ



ಸಮಾನತೆ, ಅನುಷ್ಠಾನ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ನೆಲೆಗೊಂಡಿರುವ ಹವಾಮಾನ ಉಪಕ್ರಮಕ್ಕೆ ಭಾರತದ ಬದ್ಧತೆಯನ್ನು ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಒತ್ತಿಹೇಳಿದರು

ಎರಡು ದಿನಗಳ ಸಮ್ಮೇಳನವು ಜಾಗತಿಕ ಪರಿಸರ ಮತ್ತು ಹವಾಮಾನ ಸವಾಲುಗಳ ಕುರಿತು ಸಹಯೋಗದ ಕ್ರಮದ ಬಗ್ಗೆ ಚರ್ಚಿಸಲು ಜಾಗತಿಕ ಪಾಲುದಾರರನ್ನು ಒಟ್ಟುಗೂಡಿಸಿದೆ

ಪ್ರಕಟಣಾ ದಿನಾಂಕ: 19 SEP 2026 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ 'ಪರಿಸರ ಮತ್ತು ಹವಾಮಾನ ವಿದ್ಯಮಾನಗಳ ಭವಿಷ್ಯ' ಕುರಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  (ಎನ್‌ಜಿಟಿ) ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಉದ್ಘಾಟನಾ ಅಧಿವೇಶನದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಭಾರತದ ಅಟಾರ್ನಿ ಜನರಲ್ ಶ್ರೀ ಆರ್. ವೆಂಕಟರಮಣಿ; ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಕೃತಿಯೊಂದಿಗೆ ರಾಷ್ಟ್ರದ ಆಳವಾದ ಐತಿಹಾಸಿಕ ಸಂಪರ್ಕವನ್ನು ಉಲ್ಲೇಖಿಸಿದರು. ಪ್ರಾಚೀನ ಸಾಂಸ್ಕೃತಿಕ ಜ್ಞಾನವು ಆಧುನಿಕ ಹವಾಮಾನ ಪರಿಹಾರಗಳನ್ನು ಹೇಗೆ ಸಕ್ರಿಯವಾಗಿ ರೂಪಿಸುತ್ತಿದೆ ಮತ್ತು ಜಾಗತಿಕ ಸಾಮೂಹಿಕ ಕ್ರಿಯೆಯನ್ನು ಹೇಗೆ ಪ್ರೇರೇಪಿಸುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ಈ ನಿರ್ಣಾಯಕ ಧ್ಯೇಯವನ್ನು ದೃಢವಾಗಿ ಮುನ್ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಅವರು ಶ್ಲಾಘಿಸಿದರು ಮತ್ತು ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. (ಲಿಂಕ್: https://www.pib.gov.in/PressReleaseDetail.aspx?PRID=2312353&reg=48&lang=1)

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಾರತದ ದೀರ್ಘಕಾಲೀನ ಪರಿಸರ ನ್ಯಾಯಶಾಸ್ತ್ರವನ್ನು ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್ ದಶಕಗಳಿಂದಲೂ ಮಾಲಿನ್ಯ ಮುಕ್ತ ಪರಿಸರದ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದೆ. ಸುಪ್ರೀಂ ಕೋರ್ಟ್ ದಶಕಗಳಿಂದ ಮಾಲಿನ್ಯ ಮುಕ್ತ ಪರಿಸರದ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದೆ ಮತ್ತು 'ಮುನ್ನೆಚ್ಚರಿಕೆ ತತ್ವ', 'ಮಾಲಿನ್ಯಕಾರಕ ಪಾವತಿಸುವ ತತ್ವ', 'ಸಂಪೂರ್ಣ ಹೊಣೆಗಾರಿಕೆ' ಮತ್ತು 'ಸಾರ್ವಜನಿಕ ನಂಬಿಕೆ ಸಿದ್ಧಾಂತ'ಗಳನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು ಸಮಾನತೆ, ಜೀವನೋಪಾಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕುಗಳ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ಗುರುತಿಸಿ, ಭಾರತೀಯ ಹವಾಮಾನ ನ್ಯಾಯಶಾಸ್ತ್ರವು ಹವಾಮಾನ ಸಂಬಂಧಿತ ಹಕ್ಕುಗಳನ್ನು ಸಾಂವಿಧಾನಿಕ ದೃಷ್ಟಿಕೋನಕ್ಕೆ ತಂದಿದೆ ಎಂದು ಅವರು ಹೇಳಿದರು. ಜಾಗತಿಕ ಪರಿಸರ ನಿರ್ವಹಣೆಯನ್ನು ಬಲಪಡಿಸಲು ಸಾಮೂಹಿಕ ನ್ಯಾಯಾಂಗ ವಿವೇಚನೆ, ವೈಜ್ಞಾನಿಕ ಜ್ಞಾನ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಅವರು ಕರೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಭೂಪೇಂದರ್ ಯಾದವ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಹವಾಮಾನ ಬದ್ಧತೆಗಳನ್ನು ಉಲ್ಲೇಖಿಸಿದರು. ಪಳೆಯುಳಿಕೆಯೇತರ ಮೂಲಗಳು ಈಗ ನಮ್ಮ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇಕಡಾ 54.18 ರಷ್ಟಿದ್ದು, 2030ರ 50 ಪ್ರತಿಶತದ ಗುರಿಯನ್ನು ಒಂಬತ್ತು ವರ್ಷಗಳ ಮುಂಚಿತವಾಗಿಯೇ ಸಾಧಿಸಲಾಗಿದೆ ಎಂದು ಅವರು ತಿಳಿಸಿದರುನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಕ್ರಿಯೆ ಎರಡೂ ಒಟ್ಟಿಗೆ ಸಾಗಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ ಎಂದರು.

ಶ್ರೀ ಯಾದವ್ ಅವರು ವನ್ಯಜೀವಿ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆಯಲ್ಲಿ ಭಾರತದ ಸಾಧನೆಗಳನ್ನು ಸಹ ಒತ್ತಿ ಹೇಳಿದರು. ಯಶಸ್ವಿ ಚಿರತೆ ಮರುಪರಿಚಯ ಕಾರ್ಯಕ್ರಮ, ಗ್ರೇಟ್ ಇಂಡಿಯನ್ ಬಸ್ಟರ್ಡ್‌ನ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮ, ಮತ್ತು ಕಾಡುಗಳು, ಹುಲ್ಲುಗಾವಲುಗಳು ಹಾಗೂ ಜೌಗು ಪ್ರದೇಶಗಳ ಮರುಸ್ಥಾಪನೆಯ ಬಗ್ಗೆ ತಿಳಿಸಿದರು. ಭಾರತದ ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 8.27 ಲಕ್ಷ ಚದರ ಕಿಲೋಮೀಟರ್‌ಗಳನ್ನು ತಲುಪಿದೆ. ‘ಯುಎನ್ ಎಫ್‌ಎಒ’ ‘ಗ್ಲೋಬಲ್ ಫಾರೆಸ್ಟ್ ರಿಸೋರ್ಸಸ್ ಅಸೆಸ್‌ಮೆಂಟ್-2025’ ವರದಿ ಪ್ರಕಾರ, ವಾರ್ಷಿಕ ನಿವ್ವಳ ಅರಣ್ಯ ಪ್ರದೇಶದ ಹೆಚ್ಚಳದಲ್ಲಿ ಭಾರತ ಜಾಗತಿಕವಾಗಿ ತನ್ನ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂದರು. ಅಂಟಲ್ಯದಲ್ಲಿ ನಡೆಯಲಿರುವ ‘ಯುಎನ್‌ಎಫ್‌ಸಿಸಿಸಿ ಸಿಒಪಿ31’ ಕುರಿತು ಮಾತನಾಡಿದ ಅವರು, ಸಮಾನತೆ, ಅನುಷ್ಠಾನ ಮತ್ತು ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಕೇಂದ್ರೀಕರಿಸಿದ ಹವಾಮಾನ ಉಪಕ್ರಮವನ್ನು ಭಾರತ ಪ್ರತಿಪಾದಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಪರಿಸರದ ಸವಾಲುಗಳು ರಾಷ್ಟ್ರೀಯ ಗಡಿಗಳನ್ನು ಮೀರಿರುವ ಇಂದಿನ ಸಮಯದಲ್ಲಿ, ಜಗತ್ತಿನಾದ್ಯಂತದ ನ್ಯಾಯಾಧೀಶರು, ನೀತಿ ನಿರೂಪಕರು, ವಿಜ್ಞಾನಿಗಳು, ಅಭ್ಯಾಸಿಗಳು ಮತ್ತು ತಜ್ಞರನ್ನು ಒಟ್ಟುಗೂಡಿಸುವ ವೇದಿಕೆಗಳು ಅತ್ಯಗತ್ಯ ಎಂದು ಕೇಂದ್ರ ಸಚಿವರು ಹೇಳಿದರು. ಜಗತ್ತಿನ ಮುಂದಿರುವ ಆಯ್ಕೆಯು 'ಅಭಿವೃದ್ಧಿ' ಮತ್ತು 'ಪರಿಸರ'ದ ನಡುವೆ ಅಲ್ಲ, ಬದಲಾಗಿ 'ಸುಸ್ಥಿರ ಅಭಿವೃದ್ಧಿ' ಮತ್ತು 'ಉಳಿಸಿಕೊಳ್ಳಲಾಗದ ಅಭಿವೃದ್ಧಿ'ಯ ನಡುವೆ ಇದೆ ಎಂದು ಅವರು ಒತ್ತಿ ಹೇಳಿದರು. ಪರಿಸರ ಜವಾಬ್ದಾರಿಗೆ ಭಾರತ ಅನುಸರಿಸುವ ವಿಧಾನವು ಅದರ ನಾಗರಿಕತೆಯ ನೀತಿಯಲ್ಲಿ ಬೇರೂರಿದೆ, ಅದು ಭೂಮಿಯನ್ನು ಎಲ್ಲರಿಗೂ ಸೇರಿದ ಆನುವಂಶಿಕ ಮತ್ತು ಪವಿತ್ರ ನಂಬಿಕೆಯಾಗಿ ನೋಡುತ್ತದೆ ಎಂದ ಸಚಿವರು, ಸುಸ್ಥಿರ, ಸ್ಥಿತಿಸ್ಥಾಪಕ ಮತ್ತು ನ್ಯಾಯಯುತ ಭವಿಷ್ಯದ ಕಡೆಗೆ ಸಾಮೂಹಿಕ ಕ್ರಮಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಭಾರತದ ಅಟಾರ್ನಿ ಜನರಲ್ ಶ್ರೀ ಆರ್. ವೆಂಕಟರಮಣಿ ಅವರು ಮಾತನಾಡಿ, ಯಾವುದೇ ದೇಶವು ಪರಿಸರ ಸವಾಲನ್ನು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ; ಜಾಗತಿಕ ಕ್ರಮಗಳು ಕೇವಲ ಘೋಷಣೆಗಳನ್ನು ಮೀರಿ ಪ್ರಾಯೋಗಿಕ ಮತ್ತು ಜಾರಿಗೊಳಿಸಬಹುದಾದ ಕಾರ್ಯವಿಧಾನಗಳತ್ತ ಸಾಗಬೇಕು ಎಂದರು.

"ಜಾಗತಿಕ ಕ್ರಮವು ಜಾಗತಿಕ ಮಹತ್ವಾಕಾಂಕ್ಷೆಗಳಿಗೆ ಹೊಂದಿಕೆಯಾಗಬೇಕು" ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಯನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಅನುಸರಿಸುವಾಗ ಭಾರತವು ಆಯ್ಕೆ ಮಾಡಿದ ಸಮತೋಲನ ಮಾರ್ಗದ ಮೂಲಕ ಉದಾಹರಣೆಗಳನ್ನು ನೀಡಬಹುದು ಎಂದು ಹೇಳಿದರು. ಇಂಧನ ಮತ್ತು ಆಹಾರ ಭದ್ರತೆ, ವಸತಿ, ಆರೋಗ್ಯ, ನೀರು, ಪರಿಸರ ವ್ಯವಸ್ಥೆ ಮತ್ತು ಆರ್ಥಿಕ ಅವಕಾಶಗಳಿಗೆ ಸಂಬಂಧಿಸಿದ ಕಾಳಜಿಗಳನ್ನು ಸಂಯೋಜಿಸುವುದರ ಜೊತೆಗೆ ಪರಿಸರ ನ್ಯಾಯದ ಬಗ್ಗೆ ವ್ಯವಹರಿಸಲು ಹೊಸ ಜಾಗತಿಕ ಪರಿಸರ ನಿಯಂತ್ರಕ ಚೌಕಟ್ಟು ಮತ್ತು ಬಲವಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಅಗತ್ಯವಿದೆ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ, ಪ್ರತಿನಿಧಿಗಳನ್ನು ಸ್ವಾಗತಿಸಿದ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪರಿಸರ ಆಡಳಿತಕ್ಕೆ ಭಾರತದ ಸಮಗ್ರ ಕಾರ್ಯವಿಧಾನವನ್ನು ಉಲ್ಲೇಖಿಸಿದರು. ಭಾರತದ ಅಭಿಯಾನಗಳು ರಾಷ್ಟ್ರೀಯ ಉಪಕ್ರಮಕ್ಕೆ ಮಾತ್ರವಲ್ಲದೆ ಜಾಗತಿಕ ಪರಿಸರ ಸಹಕಾರಕ್ಕೂ ದೇಶದ ಬದ್ಧತೆಯನ್ನು ಸೂಚಿಸುತ್ತವೆ ಎಂದು ಅವರು ಹೇಳಿದರು. ಈ ಉಪಕ್ರಮಗಳು ಸ್ವಚ್ಛ, ಹಸಿರು, ಹೆಚ್ಚು ಸದೃಢ ಮತ್ತು ಸುಸ್ಥಿರ ಭಾರತದ ದೊಡ್ಡ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ನ್ಯಾಯಮೂರ್ತಿ ಶ್ರೀವಾಸ್ತವ ಹೇಳಿದರು. ಪರಿಸರ ಸಂರಕ್ಷಣೆಯು ಯಾವುದೇ ಒಂದು ಸಂಸ್ಥೆ ಅಥವಾ ವಲಯದ ಜವಾಬ್ದಾರಿಯಲ್ಲ. ಬದಲಿಗೆ, ಸಾಮೂಹಿಕ ರಾಷ್ಟ್ರೀಯ ಮತ್ತು ಜಾಗತಿಕ ಜವಾಬ್ದಾರಿಯಾಗಿದೆ. ಪರಿಸರ ಅವನತಿಯ ಪರಿಣಾಮಗಳು ಅವುಗಳಿಗೆ ಕನಿಷ್ಠ ಮಟ್ಟದಲ್ಲಿ ಕಾರಣಕರ್ತರಾದವರ ಮೇಲೆ ಹೆಚ್ಚು ತೀವ್ರವಾಗಿ ಉಂಟಾಗುತ್ತವೆ ಎಂದು ಅವರು ಒತ್ತಿ ಹೇಳಿದರು.

ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮೊಬೈಲ್ ತಂತ್ರಾಂಶಕ್ಕೆ ಚಾಲನೆ ನೀಡಿದರು.

ಎರಡು ದಿನಗಳ ಸಮ್ಮೇಳನವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಜೊತೆಗೆ ವಿಶ್ವದಾದ್ಯಂತದ 17 ದೇಶಗಳ ನ್ಯಾಯಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಇತರ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತಿದೆ. ಈ ಕಾರ್ಯಕ್ರಮವು ನ್ಯಾಯಾಂಗ, ವೈಜ್ಞಾನಿಕ, ನೀತಿ ಮತ್ತು ಸಾಂಸ್ಥಿಕ ಉತ್ತಮ ಅಭ್ಯಾಸಗಳ ಬಗ್ಗೆ ಸಂವಾದ, ಜ್ಞಾನ ವಿನಿಮಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಜೊತೆಗೆ,  ಪರಿಸರ ಮತ್ತು ಹವಾಮಾನ ಸವಾಲುಗಳ ಮೇಲೆ ಸಹಯೋಗದ ಕ್ರಮವನ್ನು ಉತ್ತೇಜಿಸುತ್ತದೆ.

ಸಮ್ಮೇಳನವು ಪರಿಸರ ಮತ್ತು ಹವಾಮಾನ ಆಡಳಿತದ ಪ್ರಮುಖ ಅಂಶಗಳನ್ನು ಒಳಗೊಂಡ ನಾಲ್ಕು ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿದೆ, ಅವುಗಳಲ್ಲಿ ಎರಡು ಇಂದು ನಡೆದವು.

ತಾಂತ್ರಿಕ ಅಧಿವೇಶನ-I - 'ಹವಾಮಾನ ನ್ಯಾಯ, ಸಮಾನತೆ ಮತ್ತು ಒಳಗೊಳ್ಳುವಿಕೆ: ತತ್ವಗಳಿಂದ ಕ್ರಿಯೆಯವರೆಗೆ' – ಇದು ಹವಾಮಾನ ಉಪಕ್ರಮದಲ್ಲಿ ಸಮಾನತೆ ಮತ್ತು ಸೇರ್ಪಡೆ, ಪರಿಸರ ಮತ್ತು ಸಾಮಾಜಿಕ ಸುರಕ್ಷತೆಗಳು ಮತ್ತು ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿಯ ಪರಸ್ಪರ ಸಂಬಂಧಿತ ಪರಿಣಾಮಗಳ ಮೇಲೆ ಗಮನ ಕೇಂದ್ರೀಕರಿಸಿದೆ.

ತಾಂತ್ರಿಕ ಅಧಿವೇಶನ -II - 'ಪರಿಸರ ಕಾನೂನು ಮತ್ತು ಆಡಳಿತದ ಭವಿಷ್ಯ' – ಇದರಲ್ಲಿ ಸಂಸ್ಥೆಗಳು ಮತ್ತು ಜಾರಿ ಕಾರ್ಯವಿಧಾನಗಳು, ಸುಸ್ಥಿರ ಮತ್ತು ವಾಸಯೋಗ್ಯ ನಗರಗಳು, ಇಂಧನ ಪರಿವರ್ತನೆ, ಹಸಿರು ಮೂಲಸೌಕರ್ಯ ಮತ್ತು ಹಸಿರು ಹಣಕಾಸು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು.

ಸಮ್ಮೇಳನವು ಪರಿಸರ ಕಾನೂನು ಮತ್ತು ಸಂಸ್ಥೆಗಳನ್ನು ಬಲಪಡಿಸಲು, ಹವಾಮಾನ ನ್ಯಾಯ ಮತ್ತು ಅಂತರ-ಪೀಳಿಗೆಯ ಸಮಾನತೆಯನ್ನು ಮುನ್ನಡೆಸಲು, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನಗರಗಳನ್ನು ಉತ್ತೇಜಿಸಲು, ನ್ಯಾಯಯುತ ಇಂಧನ ಪರಿವರ್ತನೆಯನ್ನು ಸುಗಮಗೊಳಿಸಲು ಮತ್ತು ಗಡಿಯಾಚೆಗಿನ ಪರಿಸರ ಸವಾಲುಗಳ ಮೇಲೆ ಸಹಯೋಗದ ಕ್ರಮವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದು ಸಂಶೋಧನೆ, ಉತ್ತಮ ಅಭ್ಯಾಸಗಳು ಮತ್ತು ನವೀನ ಪರಿಹಾರಗಳನ್ನು ಹಂಚಿಕೊಳ್ಳುವುದು, ಪಾಲುದಾರಿಕೆಗಳನ್ನು ನಿರ್ಮಿಸುವುದು ಮತ್ತು ಕ್ರಿಯಾತ್ಮಕ ಶಿಫಾರಸುಗಳು ಹಾಗೂ ಭವಿಷ್ಯದ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ.

 

 

*****


(ಪ್ರಕಟಣೆ ಐ.ಡಿ.: 2312418) ವಿಸಿಟರ್ ಕೌಂಟರ್ : 36
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati